ಆಹಾರ, ನೀರು, ವಸತಿ, ಬಟ್ಟೆಗಳು ಮನುಷ್ಯನ ಅತ್ಯಾವಶ್ಯಕಗಳು. ಇವೆಲ್ಲವುಗಳನ್ನು ಸರಿಯಾದ ಕ್ರಮದಲ್ಲಿ ಪಡೆದು ವಿನಿಯೋಗಿಸುವುದು ಮನುಜನ ಲಕ್ಷಣ. ಈ ವಿಚಾರದಲ್ಲಿ ಹವ್ಯಕರು ಮೊದಲಿನಿಂದಲೂ ತಮ್ಮದೇ ಆದ ಸಂಸ್ಕೃತಿಯಿಂದ ವಿಶಿಷ್ಟವಾಗಿ ಗೋಚರಿಸುತ್ತಾರೆ. ಆಹಾರಾರ್ಥಂ ಕರ್ಮ ಕುರ್ಯಾತ್ ಎಂಬ ಶ್ರುತಿವಾಕ್ಯದಂತೆ ಆಹಾರಕ್ಕಾಗಿ ಜೀವನದಲ್ಲಿ ನಿಂದ್ಯವಲ್ಲದ ಕೆಲಸವನ್ನು ಮಾಡಬೇಕು, ಪ್ರಾಣರಕ್ಷಣೆಗಾಗಿ ಆಹಾರವನ್ನು ಸೇವಿಸಬೇಕು, ತತ್ವಗಳ ತಿಳುವಳಿಕೆಗಾಗಿ ಪ್ರಾಣವನ್ನು ರಕ್ಷಿಸಬೇಕು, ಪುನಃ ದುಃಖಿಯಾಗದಿರಲು ತತ್ತ್ವಜಿಜ್ಞಾಸೆ ಬೇಕು. ಎಂಬ ತಾತ್ವಿಕ ಹಿನ್ನೆಲೆಯಲ್ಲಿ ಅಗಣಿತ ತಲೆಮಾರುಗಳಿಂದ “ಊಟಬಲ್ಲವನಿಗೆ ರೋಗವಿಲ್ಲ” ಎಂಬುದನ್ನರಿತು, ಶಾಸ್ತ್ರೀಯವಾದ ಸಾತ್ವಿಕ ಬೋಜನವನ್ನು ಹೊಂದಿ ಶ್ರೇಯಸ್ಕರ ಜೀವನವನ್ನು ನಡೆಸುತ್ತಿದ್ದಾರೆ. ಹವ್ಯಕರ ಆಹಾರದಲ್ಲಿ ಮತ್ತು ಕ್ರಮದಲ್ಲಿ ಆಯುರ್ವೇದೀಯ ಪದ್ಧತಿಯಿದೆ. ಇದು ಯಾವ ಶಾಸ್ತ್ರಾಧ್ಯಯನವಿಲ್ಲದೆ ಮನೆಯ ಪಾಕಾಧ್ಯಕ್ಷರಾದ ಹಿರಿಯರಿಂದ ಕಿರಿಯರಿಗೆ ತಲೆತಲಾಂತರಗಳಿಂದ ಹರಿದುಬರುತ್ತಿದೆ. ಜೀವನೋಪಾಯಕ್ಕಾಗಿ ನಗರವನ್ನು ಸೇರಿದರೂ ಇಲ್ಲಿಯೂ ತಮ್ಮ ಆಹಾರ ಸೇವನೆಯ ಕ್ರಮ ಸಮಯ ಪರಿಮಾಣಗಳನ್ನು ಉಳಿಸಿಕೊಂಡು ಬಂದಿರುತ್ತಾರೆ. ಇಂತಹ ಒಂದು ವಿಶಿಷ್ಟವಾದ ಭಕ್ಷ್ಯ ಭೋಜ್ಯಗಳನ್ನು ಬೆಂಗಳೂರಿನ ಸಸ್ಯಾಹಾರೀ ಜನತೆಗೆ ನೀಡುವ ಉದ್ದೇಶದಿಂದ ದಿನಾಂಕ ಡಿಸೆಂಬರ್ ೨೯, ೩೦ ಮತ್ತು ೩೧, ೨೦೦೬, ಗಿರಿನಗರದಲ್ಲಿ ಹಾಸ್ಯ – ಹವ್ಯಕ ಪಾಕೋತ್ಸವವು ಆಯೋಜಿತವಾಗಿದೆ. ಇದೊಂದು ಸಂಪೂರ್ಣ ಸಸ್ಯಾಹಾರದ, ಮಲೆನಾಡು, ಕರಾವಳಿಯ ಹವ್ಯಕರ ಆಹಾರ ಮತ್ತು ಸದಭಿರುಚಿಯ ಹಾಸ್ಯಗಳ ಹಬ್ಬವಾಗಿದೆ. ಆಹಾರ ಪ್ರದರ್ಶನ, ಸ್ಪರ್ಧೆ, ಊಟ, ಅಂಗಡಿಮುಂಗಟ್ಟು, ಮನರಂಜನೆಗಳನ್ನು ಒಳಗೊಂಡಿರುತ್ತದೆ.