ಗ್ಯಾಜೆಟ್ ಲೋಕ ೩೫೬ (ನವಂಬರ್ ೨೪, ೨೦೧೮) ರಿಯಲ್‌ಮಿ ಸಿ1

ರಿಯಲ್‌ಮಿ ಸಿ1

ಕಡಿಮೆ ಬೆಲೆಗೆ ಉತ್ತಮ ಫೋನ್

ಒಪ್ಪೊ ಕಂಪೆನಿಯ ಸಬ್-ಬ್ರ್ಯಾಂಡ್ ಆಗಿ ಬಂದ ರಿಯಲ್‌ಮಿ ಈಗ ಸ್ವಂತ ಕಂಪೆನಿಯಾಗಿದೆ. ರಿಯಲ್‌ಮಿಯವರು ಅತಿ ಕಡಿಮೆ ಹಣಕ್ಕೆ ಉತ್ತಮ ಗುಣವೈಶಿಷ್ಟ್ಯಗಳ ಫೋನ್ ತಯಾರಿಸಿ ಶಿಯೋಮಿಯವರ ಜೊತೆ ನೇರ ಸ್ಪರ್ಧೆಗೆ ಇಳಿದಿದ್ದಾರೆ. ರಿಯಲ್‌ಮಿ1 ಮತ್ತು ರಿಯಲ್‌ಮಿ 2 ಪ್ರೊ ಎಂಬ ಎರಡು ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ಈ ಹಿಂದೆ ನೀಡಲಾಗಿತ್ತು. ನೀಡುವ ಹಣಕ್ಕೆ ನಿಜಕ್ಕೂ ಉತ್ತಮ ಉತ್ಪನ್ನಗಳು ಎಂದು ಅವುಗಳ ಬಗ್ಗೆ ಬರೆಯಲಾಗಿತ್ತು. ಈ ಸಲ ವಿಮರ್ಶೆ ಮಾಡುತ್ತಿರುವುದು ರಿಯಲ್‌ಮಿ ಸಿ1 (RealMe 1) ಎಂಬ ಕಡಿಮೆ ಬೆಲೆಯ ಫೋನನ್ನು.

ಗುಣವೈಶಿಷ್ಟ್ಯಗಳು

ಪ್ರೋಸೆಸರ್ 8 x 1.8 ಗಿಗಾಹರ್ಟ್ಸ್ ಪ್ರೋಸೆಸರ್ (Snapdragon 450)
ಗ್ರಾಫಿಕ್ಸ್ ಪ್ರೋಸೆಸರ್ Adreno 506
ಮೆಮೊರಿ 2 + 16 ಗಿಗಾಬೈಟ್
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ (ಪ್ರತ್ಯೇಕ ಜಾಗ, ಹೈಬ್ರಿಡ್ ಅಲ್ಲ)
ಪರದೆ 6.2 ಇಂಚು ಗಾತ್ರದ 1520 x 720 ಪಿಕ್ಸೆಲ್ ಐಪಿಎಸ್
ಕ್ಯಾಮರ 13 + 2 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್

5 ಮೆಗಾಪಿಕ್ಸೆಲ್ ಸ್ವಂತೀ

ಸಿಮ್ 2 ನ್ಯಾನೊ
ಬ್ಯಾಟರಿ 4230 mAh
ಗಾತ್ರ 156.2 x 75.6 x 8.2 ಮಿ.ಮೀ.
ತೂಕ 168 ಗ್ರಾಂ
ಬೆರಳಚ್ಚು ಸ್ಕ್ಯಾನರ್ ಇಲ್ಲ
ಅವಕೆಂಪು ದೂರನಿಯಂತ್ರಕ (Infrared remote) ಇಲ್ಲ
ಎಫ್.ಎಂ. ರೇಡಿಯೋ ಇದೆ
ಎನ್‌ಎಫ್‌ಸಿ ಇಲ್ಲ
4 ಜಿ ವಿಓಎಲ್‌ಟಿಇ (4G VoLTE) ಇದೆ
ಇಯರ್‌ಫೋನ್ ‌ಇಲ್ಲ
ಯುಎಸ್‌ಬಿ ಓಟಿಜಿ ಬೆಂಬಲ ಇದೆ
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 8.1 + ಕಲರ್ ಓಎಸ್ 5.1
ಬೆಲೆ  ₹8,990 (₹7,999 ಫ್ಲಿಪ್‌ಕಾರ್ಟ್)

ರಚನೆ ಮತ್ತು ವಿನ್ಯಾಸ

ಈ ಫೋನಿನ ರಚನೆ ಮತ್ತು ವಿನ್ಯಾಸವೂ ಇತರೆ ರಿಯಲ್‌ಮಿ ಫೋನ್‌ಗಳಂತೆ ಅತ್ಯುತ್ತಮವಾಗಿದೆ. ಕಡಿಮೆ ಬೆಲೆಗೆ ಇಷ್ಟು ಉತ್ತಮ ರಚನೆ ಮತ್ತು ವಿನ್ಯಾಸದ ಫೋನ್ ಸದ್ಯಕ್ಕೆ ಬೇರೆ ಯಾವುದೂ ಮಾರುಕಟ್ಟೆಯಲ್ಲಿ ಇಲ್ಲ ಎಂದೇ ಹೇಳಬಹುದು. ರಿಯಲ್‌ಮಿ ಪ್ರತ್ಯೇಕ ಕಂಪೆನಿಯಾದರೂ ಇನ್ನೂ ಒಪ್ಪೋದ ಫ್ಯಾಕ್ಟರಿಯಲ್ಲೇ ಅವರ ಫೋನ್‌ಗಳ ತಯಾರಾಗುತ್ತಿವೆ. ಈ ಫೋನಿನ ಜೊತೆ ಅವರು ನೀಡುತ್ತಿರುವ ಚಾರ್ಜರ್‌ನಲ್ಲಿ ಒಪ್ಪೊ ಎಂದೇ ಬರೆದಿದೆ. ಮೊದಲ ನೋಟಕ್ಕೇ ನೀವು ಇದಕ್ಕೆ ಮಾರುಹೋಗುತ್ತೀರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಬಲ ಭಾಗದಲ್ಲಿ ಆನ್/ಆಫ್ ಸ್ವಿಚ್ ಇದೆ. ಎಡ ಭಾಗದಲ್ಲಿ ವಾಲ್ಯೂಮ್ ಬಟನ್ ಮತ್ತು ಸಿಮ್ ಹಾಗೂ ಮೆಮೊರಿ ಕಾರ್ಡ್ ಹಾಕುವ ಟ್ರೇ ಇವೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿ ಮತ್ತು 3.5 ಮಿ. ಮೀ. ಇಯರ್‌ಫೋನ್ ಕಿಂಡಿಗಳಿವೆ.  ಹಿಂದುಗಡೆ ಬಲಮೂಲೆಯಲ್ಲಿ ಕ್ಯಾಮರಗಳು ಮತ್ತು ಪಕ್ಕದಲ್ಲಿ ಫ್ಲಾಶ್ ಇವೆ. ಇದರ ಒಂದು ಪ್ರಮುಖ ಕೊರತೆಯೆಂದರೆ ಇದರಲ್ಲಿ ಬೆರಳಚ್ಚು ಸ್ಕ್ಯಾನರ್ ಇಲ್ಲ ಎಂಬುದು. ಹಿಂಭಾಗದ ಕವಚದ ವಿನ್ಯಾಸ ಸುಂದರವಾಗಿದೆ. ಕವಚ ತುಂಬ ನಯವಾಗಿದೆ. ಕೈಯಿಂದ ಜಾರಿ ಬೀಳಬಾರದು ಎಂದಿದ್ದರೆ ಅಧಿಕ ಕವಚ ಹಾಕಿಕೊಳ್ಳಬೇಕು. ಒಂದು ಪ್ಲಾಸ್ಟಿಕ್ ಕವಚವನ್ನು ಅವರೇ ನೀಡಿದ್ದಾರೆ. ಮುಂಭಾಗದ ಪರದೆಯ ಮೇಲೂ ಅವರೇ ಒಂದು ಸ್ಕ್ರೀನ್ ಪ್ರೊಟೆಕ್ಟರ್ ಅಂಟಿಸಿದ್ದಾರೆ. ಎರಡು ಬಣ್ಣಗಳಲ್ಲಿ ಲಭ್ಯ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸದಲ್ಲಿ ಇದು ಅತ್ಯುತ್ತಮ ಎಂದು ನಿರ್ದಾಕ್ಷಿಣ್ಯವಾಗಿ ಹೇಳಬಹುದು.

RealMeC1 Phone (1) RealMeC1 Phone (2) RealMeC1 Phone (3)
RealMeC1 Phone (4) RealMeC1 Phone (5) RealMeC1 Phone (6)

ಕೆಲಸದ ವೇಗ

ರಿಯಲ್‌ಮಿ ಸಿ1 ಫೋನಿನಲ್ಲಿ ಬಳಸಿರುವುದು ಸ್ನಾಪ್‌ಡ್ರಾಗನ್ 450 ಪ್ರೋಸೆಸರ್. ಅಂದರೆ ಇದು ಕಡಿಮೆ ಶಕ್ತಿಯ ಪ್ರೋಸೆಸರ್. ಕಡಿಮೆ ಬೆಲೆಯ ಫೋನ್ ಅಂದ ಮೇಲೆ ಕಡಿಮೆ ಬೆಲೆಯ ಪ್ರೋಸೆಸರ್ ಇರುವುದರಲ್ಲಿ ಆಶ್ಚರ್ಯವಿಲ್ಲ. ಅದು ಸಹಜ ತಾನೆ? ಹಾಗೆಂದು ಹೇಳಿ ಇದರ ಕೆಲಸದ ವೇಗ ತುಂಬ ಕಡಿಮೆಯೇನಿಲ್ಲ. ಇದರ ಅಂಟುಟು ಬೆಂಚ್‌ಮಾರ್ಕ್ 73,888 ಇದೆ. ಅಂದರೆ ಇದು ಮಧ್ಯಮ ಕಡಿಮೆ ವೇಗದ್ದು ಎನ್ನಬಹುದು. ಬಳಸುವಾಗ ಇದು ವೇದ್ಯವಾಗುತ್ತದೆ. ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಆಡಬಹುದು. ಆದರೆ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಇದರಲ್ಲಿ ತೃಪ್ತಿದಾಯಕವಾಗಿ ಆಡವುದು ಸ್ವಲ್ಪ ಕಷ್ಟ. ಅತಿ ವೇಗದ ಫೋನ್ ಬೇಕು ಎನ್ನುವವರಿಗೆ ಇದು ಹೇಳಿದ್ದಲ್ಲ. ಆದರೂ ಇದರಲ್ಲಿರುವುದು ಕೇವಲ 2 ಗಿಗಾಬೈಟ್ ಮೆಮೊರಿ ಎಂಬುದನ್ನು ಗಮನಿಸಿದರೆ ಇದು ನಿಜಕ್ಕೂ ನೀಡುವ ಹಣಕ್ಕೆ ಉತ್ತಮ ಫೋನ್ ಎಂದೇ ಹೇಳಬಹುದು.

 

ಈ ಫೋನಿನಲ್ಲಿ ಬೆರಳಚ್ಚು ಸ್ಕ್ಯಾನರ್ ಇಲ್ಲ. ಆದರೆ ಮುಖವನ್ನು ಗುರುತಿಸುವ ಹಾಗೂ ಅದನ್ನೇ ಪ್ರವೇಶಕ್ಕೆ ಅಂಗೀಕಾರವಾಗಿ (face recognition & unlock) ಮಾಡಿಟ್ಟುಕೊಳ್ಳುವ ಸವಲತ್ತಿದೆ. ಈ ಸವಲತ್ತು ಮಾತ್ರ ಅಷ್ಟೇನೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತಿಲ್ಲ.

 

ಪರದೆ ಹಾಗೂ ಆಡಿಯೋ

ಈ ಫೋನಿನ ಪರದೆಯಲ್ಲಿ ಹೇಳಿಕೊಳ್ಳುವಂಥದ್ದೇನೂ ಇಲ್ಲ. ರೆಸೊಲೂಶನ್ ತುಂಬ ಏನಿಲ್ಲ. ಹೈಡೆಫಿನಿಶನ್ ವಿಡಿಯೋ ಪ್ಲೇ ಆಗುತ್ತದೆ. ವಿಡಿಯೋ ವೀಕ್ಷಣೆಯ ಅನುಭವ ತೃಪ್ತಿದಾಯಕವಾಗಿದೆ. ಆದರೆ 4k ವಿಡಿಯೋ ಪ್ಲೇ ಆಗುವುದಿಲ್ಲ. ಈ ಫೋನಿನ ಆಡಿಯೋ ಇಂಜಿನ್ ಚೆನ್ನಾಗಿದೆ. ಫೋನಿನ ಬೆಲೆಗೆ ಹೋಲಿಸಿದರೆ ಆಡಿಯೋ ಚೆನ್ನಾಗಿದೆ ಎಂದೇ ಹೇಳಬಹುದು. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು. ಇದರಲ್ಲಿರುವ ಎಫ್‌ಎಂ ರೇಡಿಯೋದ ಗ್ರಾಹಕ ಶಕ್ತಿ ಚೆನ್ನಾಗಿದೆ. ಉತ್ತಮ ರೇಡಿಯೋ ಬೇಕು ಎನ್ನುವವರು ಈ ಫೋನನ್ನು ಖಂಡಿತ ಕೊಳ್ಳಬಹುದು.

 

ಕ್ಯಾಮರ

ಈ ಫೋನಿನಲ್ಲಿ ಹೆಸರಿಗೆ ಎರಡು ಪ್ರಾಥಮಿಕ ಕ್ಯಾಮರಗಳಿವೆ. ಅವುಗಳ ರೆಸೊಲೂಶನ್ 13 ಮತ್ತು 2 ಮೆಗಾಪಿಕ್ಸೆಲ್. ಕ್ಯಾಮರದ ಫಲಿತಾಂಶ ಅಂತಹ ಹೇಳಿಕೊಳ್ಳವ ಹಾಗೇನೂ ಇಲ್ಲ. ಸಂಪೂರ್ಣ ಕಳಪೆಯೂ ಅಲ್ಲ. ಉತ್ತಮ ಬೆಳಕಿನ ಸಂದರ್ಭಗಳಲ್ಲಿ ಉತ್ತಮ ಫೋಟೋ ಮೂಡಿಬರುತ್ತದೆ. ಹತ್ತಿರದ ವಸ್ತುಗಳ ಫೋಟೋ ಚೆನ್ನಾಗಿ ಬರುತ್ತದೆ. ಪ್ರಕೃತಿ ದೃಶ್ಯಗಳ ಮತ್ತು ಎಚ್‌ಡಿಆರ್ ಫೋಟೋಗಳು ಅಷ್ಟಕ್ಕಷ್ಟೆ. ಅತಿ ಕಡಿಮೆ ಬೆಳಕಿನಲ್ಲಂತೂ ಫೋಟೋ ನಿರಾಶಾದಾಯಕವಾಗಿದೆ. ವಿಡಿಯೋ ಚಿತ್ರೀಕರಣವೂ ಅಷ್ಟಕ್ಕಷ್ಟೆ. ನೀವು ಉತ್ತಮ ಛಾಯಾಗ್ರಾಹಕರಾಗಿದ್ದಲ್ಲಿ ಹಾಗೂ ಉತ್ತಮ ಕ್ಯಾಮರ ಫೋನ್ ಬೇಕು ಎಂಬುದು ನಿಮ್ಮ ಇರಾದೆಯಾಗಿದ್ದಲ್ಲಿ ಈ ಫೋನ್ ನಿಮಗಲ್ಲ. ಹಾಗೆಂದು ಹೇಳಿ ತುಂಬ ಕಳಪೆ ಕ್ಯಾಮರದ ಫೋನೇನೂ ಇದಲ್ಲ. ನೀಡುವ ಹಣಕ್ಕೆ ಹೋಲಿಸಿದರೆ ಕ್ಯಾಮರಕ್ಕೆ ಅಲ್ಲಿಂದಲ್ಲಿಗೆ ಪಾಸ್ ಮಾರ್ಕು ನೀಡಬಹುದು.

ಬ್ಯಾಟರಿ

ತುಂಬ ಶಕ್ತಿಯ ಬ್ಯಾಟರಿ ಇರುವುದು ಈ ಫೋನಿನ ಒಂದು ಪ್ರಮುಖ ಹೆಗ್ಗಳಿಕೆ ಎನ್ನಬಹುದು. 4230 mAh ಎಂಬುದು ಒಂದೂವರೆ – ಎರಡು ದಿನಗಳಿಗೆ ಧಾರಾಳ ಸಾಕು. ಆದರೆ ರಿಯಲ್‌ಮಿಯವರು ವೇಗವಾಗಿ ಚಾರ್ಜ್ ಮಾಡುವ ಸವಲತ್ತನ್ನು ನೀಡಿಲ್ಲ.

 

ತೀರ್ಮಾನ

ಯಾವುದೇ ಉತ್ಪನ್ನ ಚೆನ್ನಾಗಿದೆಯೋ ಇಲ್ಲವೋ ಎನ್ನುವುದಕ್ಕಿಂತಲೂ ನಾವು ನೀಡುವ ಹಣಕ್ಕೆ ಅದು ತಕ್ಕುದಾಗಿದೆಯೇ ಎಂಬುದೇ ಪ್ರಾಮುಖ್ಯವಾಗಿದೆ. ಈ ಫೋನ್ ನೀಡುವ ಹಣಕ್ಕೆ ತಕ್ಕುದಾಗಿದೆ ಎಂದು ಹೇಳಬಹುದು.

ಡಾ| ಯು.ಬಿ. ಪವನಜ

gadgetloka @ gmail . com

Leave a Reply