ಗ್ಯಾಜೆಟ್ ಲೋಕ ೩೫೪ (ನವಂಬರ್ ೧೪, ೨೦೧೮) – ರಿಯಲ್‌ಮಿ 2 ಪ್ರೊ

ರಿಯಲ್‌ಮಿ 2 ಪ್ರೊ

ಮಧ್ಯಮ ಬೆಲೆಗೆ ಅತ್ಯುತ್ತಮ ಫೋನ್

 

ರಿಯಲ್‌ಮಿ ಎಂಬುದು ಒಪ್ಪೊ ಕಂಪೆನಿಯದೇ ಸಬ್‌ಬ್ರ್ಯಾಂಡ್. ಸ್ವಲ್ಪ ಜಾಸ್ತಿ ಬೆಲೆಯ ಫೋನ್‌ಗಳನ್ನು ಒಪ್ಪೊ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ₹ 20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳನ್ನು ರಿಯಲ್‌ಮಿ ಹೆಸರಿನಲ್ಲಿ ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಹಲವು ಕಂಪೆನಿಗಳು ಇದೇ ರೀತಿ ಎರಡು ಹೆಸರಿನಲ್ಲಿ ಫೋನ್‌ಗಳನ್ನು ಮಾರಾಟ ಮಾಡುತ್ತಿವೆ. ಉದಾಹರಣೆಗೆ ಹುವಾವೇ ಮತ್ತು ಹೋನರ್. ಒಪ್ಪೊ ಮತ್ತು ರಿಯಲ್‌ಮಿ ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿವೆ. ರಿಯಲ್‌ಮಿ 1 ಫೊನಿನ ವಿಮರ್ಶೆಯನ್ನು ಇದೇ ಅಂಕಣದಲ್ಲಿ ಮಾಡಲಾಗಿತ್ತು. ಈ ಸಲ ರಿಯಲ್‌ಮಿ 2 ಪ್ರೊ (Realme 2 Pro) ಫೋನಿನ ವಿಮರ್ಶೆ.

 

ಗುಣವೈಶಿಷ್ಟ್ಯಗಳು

 

ಪ್ರೋಸೆಸರ್ 8 x 1.95 ಗಿಗಾಹರ್ಟ್ಸ್ ಪ್ರೋಸೆಸರ್ (Snapdragon 660)
ಗ್ರಾಫಿಕ್ಸ್ ಪ್ರೋಸೆಸರ್ Adreno 512
ಮೆಮೊರಿ 8 + 128 ಗಿಗಾಬೈಟ್
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ ಇದೆ (ಪ್ರತ್ಯೇಕ, ಹೈಬ್ರಿಡ್ ಅಲ್ಲ)
ಪರದೆ 6.3 ಇಂಚು ಗಾತ್ರದ 1080 x 2340 ಪಿಕ್ಸೆಲ್, 408 PPI
ಕ್ಯಾಮರ 16 + 2  ಮೆಗಾಪಿಕ್ಸೆಲ್ ಎರಡು ಪ್ರಾಥಮಿಕ + ಫ್ಲಾಶ್

16 ಮೆಗಾಪಿಕ್ಸೆಲ್ ಸ್ವಂತೀ

ಸಿಮ್ 2 ನ್ಯಾನೊ
ಬ್ಯಾಟರಿ 3500 mAh
ಗಾತ್ರ 156.7 x 74 x 8.5 ಮಿ.ಮೀ.
ತೂಕ 174 ಗ್ರಾಂ
ಬೆರಳಚ್ಚು ಸ್ಕ್ಯಾನರ್ ಇದೆ
ಅವಕೆಂಪು ದೂರನಿಯಂತ್ರಕ (Infrared remote) ಇಲ್ಲ
ಎಫ್.ಎಂ. ರೇಡಿಯೋ ಇಲ್ಲ
ಎನ್‌ಎಫ್‌ಸಿ ಇಲ್ಲ
4 ಜಿ ವಿಓಎಲ್‌ಟಿಇ (4G VoLTE) ಇದೆ
ಇಯರ್‌ಫೋನ್ ‌ಇಲ್ಲ
ಯುಎಸ್‌ಬಿ ಓಟಿಜಿ ಬೆಂಬಲ ಇದೆ
ಕಾರ್ಯಾಚರಣ ವ್ಯವಸ್ಥೆ ಆಂಡ್ರೋಯಿಡ್ 8.1.0 + ಕಲರ್ ಓಎಸ್ 5.2
ಬೆಲೆ ₹17,990 (ಅಮೆಝಾನ್), 3 ಬಣ್ಣಗಳಲ್ಲಿ ಲಭ್ಯ

 

ರಚನೆ ಮತ್ತು ವಿನ್ಯಾಸ

ಈ ಫೋನ್ 4+64, 6+64 ಮತ್ತು 8+128 ಗಿಗಾಬೈಟ್ ಮಾದರಿಗಳಲ್ಲಿ ಲಭ್ಯ. ಬ್ಲೂ ಓಶಿಯನ್, ಬ್ಲ್ಯಾಕ್ ಸೀ ಮತ್ತು ಐಸ್ ಲೇಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯ. ರಿಯಲ್‌ಮಿ 1 ಫೋನಿನಂತೆ ಇದರ ರಚನೆ ಮತ್ತು ವಿನ್ಯಾಸ ಕೂಡ ಅತ್ಯುತ್ತಮವಾಗಿದೆ. ಅದರಲ್ಲೂ ನೀಲಿ ಬಣ್ಣದ ಫೋನ್‌ ಅನ್ನು ನೀವು ನೋಡಿದರೆ ನೀವು ಇದಕ್ಕೆ ಮರುಳಾಗುತ್ತೀರಿ ಎಂಬುದರಲ್ಲಿ ಅನುಮಾನವೇ ಇಲ್ಲ. ಬಲ ಭಾಗದಲ್ಲಿ ಆನ್/ಆಫ್ ಸ್ವಿಚ್ ಇದೆ. ಎಡಭಾಗದಲ್ಲಿ ವಾಲ್ಯೂಮ್ ಸ್ವಿಚ್ ಮತ್ತು ಸಿಮ್ ಹಾಗೂ ಮೆಮೊರಿ ಕಾರ್ಡ್ ಹಾಕುವ ಟ್ರೇ ಇವೆ. ಇದರಲ್ಲಿ ಎರಡು ನ್ಯಾನೋ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಯುಎಸ್‌ಬಿ ಕಿಂಡಿ ಮತ್ತು 3.5 ಮಿ. ಮೀ. ಇಯರ್‌ಫೋನ್ ಕಿಂಡಿಗಳಿವೆ.  ಹಿಂದುಗಡೆ ಬಲಮೂಲೆಯಲ್ಲಿ ಕ್ಯಾಮರ ಮತ್ತು ಪಕ್ಕದಲ್ಲಿ ಫ್ಲಾಶ್ ಇವೆ. ಹಿಂಭಾಗದ ಮಧ್ಯಭಾಗದಲ್ಲಿ ಸ್ವಲ್ಪ ಮೇಲುಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಹಿಂಭಾಗದ ಕವಚದ ವಿನ್ಯಾಸ ನೋಡಲು ಸುಂದರವಾಗಿದೆ. ಕವಚ ತುಂಬ ನಯವಾಗಿದೆ. ಕೈಯಿಂದ ಜಾರಿ ಬೀಳಬಾರದು ಎಂದಿದ್ದರೆ ಅಧಿಕ ಕವಚ ಹಾಕಿಕೊಳ್ಳಬೇಕು. ಒಂದು ಪ್ಲಾಸ್ಟಿಕ್ ಕವಚವನ್ನು ಅವರೇ ನೀಡಿದ್ದಾರೆ.

20180926_113031 20180926_113102 20180926_113129

 

ಕೆಲಸದ ವೇಗ

ಇದರಲ್ಲಿ ಬಳಸಿರುವುದು ಸ್ನ್ಯಾಪ್‌ಡ್ರಾಗನ್ 660 ಪ್ರೋಸೆಸರ್. ಇದನ್ನು ಸಾಮನ್ಯವಾಗಿ ಮಧ್ಯಮ ದರ್ಜೆಯ ಫೋನ್‌ಗಳಲ್ಲಿ ಬಳಸುತ್ತಾರೆ. ಈ ಫೋನಿನ ಅಂಟುಟು ಬೆಂಚ್‌ಮಾರ್ಕ್ 1,32,635 ಇದೆ. ಅಂದರೆ ಇದು ಒಂದು ಮಟ್ಟಿಗೆ ವೇಗದ ಫೋನ್ ಎನ್ನಬಹುದು. ಬಳಸುವಾಗ ಇದು ವೇದ್ಯವಾಗುತ್ತದೆ. ಮೂರು ಆಯಾಮದ ಆಟಗಳನ್ನು ಕೂಡ ತೃಪ್ತಿದಾಯಕವಾಗಿ ಆಡಬಹುದು. ಹಲವು ತಂತ್ರಾಂಶಗಳನ್ನು ಏಕಕಾಲಕ್ಕೆ ತೆರೆದರೂ ಇದು  ತಡೆತಡೆದು ಕೆಲಸ ಮಾಡುವುದಿಲ್ಲ. ವಿಮಾನ ಹಾರಾಟದಂತಹ ಪ್ರತ್ಯನುಕರಣೆಯ (simulation) ಆಟಗಳನ್ನು ಆಡುವ ಅನುಭವ ಉತ್ತಮವಾಗಿದೆ.

 

ಈ ಫೋನಿನ ಪರದೆ ಚೆನ್ನಾಗಿದೆ. ಇದು 1080 x 2340 ಪಿಕ್ಸೆಲ್ ರೆಸೊಲೂಶನ್‌ನ ಪರದೆ. ಅಂದರೆ ಹೈಡೆಫಿನಿಶನ್‌ಗಿಂತ ಹೆಚ್ಚು. ಅಂತೆಯೇ ವಿಡಿಯೋ ವೀಕ್ಷಣೆಯ ಅನುಭವ ಉತ್ತಮವಾಗಿದೆ. ಹೈಡೆಫಿನಿಶನ್ ಮತ್ತು ಅಲ್ಟ್ರಾಹೈಡೆಫಿನಿಶನ್ (4k) ವಿಡಿಯೋ ವೀಕ್ಷಣೆ ಮಾಡಬಹುದು. ಇವರು ಡ್ಯೂಡ್ರಾಪ್ ವಿನ್ಯಾಸವನ್ನು ಬಳಸಿದ್ದಾರೆ. ಅಂದರೆ ಅಂಚುರಹಿತ (bezelless) ಪರದೆಯಲ್ಲಿ ಪರದೆಯ ಕಚ್ಚು (notch) ಕೂಡ ಇದೆ ಮಾತ್ರವಲ್ಲ ಈ ಕಚ್ಚು ಅತಿ ಚಿಕ್ಕದಾಗಿದ್ದು ನೀರಿನ ಹನಿಯಂತೆ ಇದೆ. ಈ ಫೋನಿನ ಆಡಿಯೋ ಇಂಜಿನ್ ನಿಜಕ್ಕೂ ಚೆನ್ನಾಗಿದೆ. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಇದ್ದರೆ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು.

ಕ್ಯಾಮರ

ಈ ರಿಯಲ್‌ಮಿ 2 ಪ್ರೊ ಫೋನಿನಲ್ಲಿರುವುದು  16 ಮೆಗಾಪಿಕ್ಸೆಲ್‌ ಮತ್ತು 2 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮರಗಳು. ನೀಡುವ ಹಣಕ್ಕೆ ಹೋಲಿಸಿದರೆ ಕ್ಯಾಮರದ ಗುಣಮಟ್ಟ ನಿಜಕ್ಕೂ ಚೆನ್ನಾಗಿದೆ ಎನ್ನಬಹುದು. ಕ್ಯಾಮರದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಆಯ್ಕೆ ಕೂಡ ಇದೆ. ಬಹುತೇಕ ಸಂದರ್ಭಗಳಲ್ಲಿ ಉತ್ತಮ ಫೋಟೋ ತೆಗೆಯುತ್ತದೆ. ಕಡಿಮೆ ಬೆಳಕಿನಲ್ಲೂ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಫೋಟೋ ತೆಗೆಯುತ್ತದೆ. ನನಗಂತೂ ಇದರ ಮ್ಯಾಣ್ಯುವಲ್ ಮೋಡ್ ತುಂಬ ಇಷ್ಟವಾಯಿತು. ನಿಮ್ಮಲ್ಲಿ ಒಬ್ಬ ಪರಿಣತ ಫೋಟೋಗ್ರಾಫರ್ ಇದ್ದಲ್ಲಿ ಈ ಫೋನ್ ತೆಗೆದುಕೊಂಡು ನೀವು ಒಂದು ಮಟ್ಟಿಗೆ ಉತ್ತಮ ಫೋಟೋ ತೆಗೆಯಬಹುದು. ಬಣ್ಣಗಳೂ ಸರಿಯಾಗಿಯೇ ಮೂಡಿ ಬರುತ್ತವೆ. ನೀಡುವ ಹಣಕ್ಕೆ ಉತ್ತಮ ಕ್ಯಾಮರ ಫೋನ್‌ಬೇಕು ಎನ್ನುವವರಿಗೆ ಇದು ಆಗಬಹುದು.

ಬ್ಯಾಟರಿಯ ಶಕ್ತಿ 3500 mAh ಎಂದರೆ ಸಾಕಷ್ಟಾಯಿತು. ಒಂದು ಒಂದೂವರೆ ದಿನಕ್ಕೆ ಧಾರಾಳ ಸಾಕು. ಪೂರ್ತಿ ಚಾರ್ಜ್ ಆಗಲು ಸುಮಾರು ಎರಡೂವರೆ ಗಂಟೆ ಬೇಕು.

ಅಂತಿಮ ತೀರ್ಮಾನ

ಈ ಫೋನಿನ ಹೆಚ್ಚುಗಾರಿಕೆಯಿರುವುದು ಕಡಿಮೆ ಬೆಲೆಗೆ 8+128 ಗಿಗಾಬೈಟ್ ಮೆಮೊರಿ, ಉತ್ತಮ ವೇಗ, ತೃಪ್ತಿ ನೀಡುವ ಕ್ಯಾಮರ ಮತ್ತು ಉತ್ತಮ ವಿನ್ಯಾಸ. ಒಟ್ಟಿನಲ್ಲಿ ಹೇಳುವುದಾದರೆ ನಿಜಕ್ಕೂ ನೀಡುವ ಹಣಕ್ಕೆ ಅತ್ಯುತ್ತಮ ಖರೀದಿ ಎನ್ನಬಹುದು.

 

-ಡಾ| ಯು.ಬಿ. ಪವನಜ

 

Leave a Reply