- ಪ್ರಕಾಶ ಹೆಬ್ಬಾರ
ನಾಗೇಶ ಹೆಗಡೆ ಎಂದೊಡನೆ ಯಾವುದರಿಂದ ಅವರನ್ನು ಗುರುತಿಸಬೇಕು? ಅವರನ್ನು ನಿಕಟವಾಗಿ ಬಲ್ಲ ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಈ ತಬ್ಬಿಬ್ಬು ಆಗುತ್ತದೆ. ಮನುಷ್ಯನ ಎಲ್ಲ ಅಂಗಾಂಗಗಳೂ ಪ್ರಮಾಣಬದ್ಧವಾಗಿದ್ದು ಒಂದಕ್ಕೊಂದು ಪೂರಕವಾಗಿ ಕ್ರಿಯಾಶೀಲವಾಗಿರುವಂತೆ ಹೆಗಡೆಯವರ ಸಾಧನೆಯ ನೆಲೆ ಕೂಡ. ಅವರನ್ನು ಅವರವರ ಅಳವಿಗೆ ತಕ್ಕಂತೆ ಭೂವಿಜ್ಞಾನಿ, ಪತ್ರಕರ್ತ, ನುಡಿಚಿತ್ರಕಾರ, ಪರಿಸರವಾದಿ, ಪತ್ರಕರ್ತರ ವೃತ್ತಿಬದುಕನ್ನು ರೂಪಿಸುವಾತ, ಸಂಪಾದಕ, ವಿಜ್ಞಾನ ಸಂವಹನಕಾರ- ಏನೆಲ್ಲಾ ಅನ್ನಬಹುದು. ರೈತರನ್ನು ಪ್ರಗತಿಪರರನ್ನಾಗಿ ಮಾಡಲು ಹೊರಟ, ಸದ್ದಿಲ್ಲದ ಕೃಷಿಕ ಎಂದರೂ ಒಪ್ಪೀತು. ವಾಮನ ತ್ರಿವಿಕ್ರಮನಾಗಿ ಬೆಳೆದು, ಎಷ್ಟು ತಿಣುಕಿದರೂ ಸಮಕಾಲೀನರ ವಿಮರ್ಶೆಗೆ ಸಿಕ್ಕದ ಗಟ್ಟಿ ವ್ಯಕ್ತಿತ್ವ. ನೀವು ಅವರನ್ನು ವೃತ್ತಿಪರ ಛಾಯಾಗ್ರಾಹಕ ಎಂದು ಕರೆದರೆ ಅದಕ್ಕೂ ನ್ಯಾಯ ಒದಗೀತು. ಅವರು ತೆಗೆದ ಕಪ್ಪುಬಿಳುಪಿನ ಚಿತ್ರಗಳನ್ನು ದಿನವಿಡೀ ನೋಡುತ್ತಾ ಹೋದರೂ ಅದೊಂದು ಹೊಸ ಅನುಭವವೇ.