ಗ್ಯಾಜೆಟ್ ಲೋಕ – ೦೨೩ (ಜೂನ್ ೦೭, ೨೦೧೨)
ಮನೆಯಲ್ಲೇ ಮಾಡಿ -ಸಿಗ್ನಲ್ ಬೂಸ್ಟರ್
ಬೆಂಗಳೂರಿನಿಂದ ಕೇವಲ ೫ ಕಿ.ಮೀ. ಹೊರಗಡೆ ಹೋದರೆ ಸಾಕು ಮೊಬೈಲ್, ಅಂತರಜಾಲ, ೩ಜಿ, ಎಲ್ಲ ಸಿಗ್ನಲ್‌ಗಳೂ ಅಂಬೆಗಾಲಿಡುತ್ತವೆ. ಇಂತಹ ಸಂದರ್ಭಗಳಲ್ಲಿ ೩ಜಿ ಡಾಟಾಕಾರ್ಡ್ ಜೊತೆ ಗುದ್ದಾಡಿ ಅದಕ್ಕೊಂದು ಸಿಗ್ನಲ್ ಬೂಸ್ಟರ್ ಅನ್ನು ಮನೆಯಲ್ಲೆ ತಯಾರಿಸಿ ಬಳಸಿದರೆ ಹೇಗೆ?
ಅಂತರಜಾಲಕ್ಕೆ ಮಾಹಿತಿಹೆದ್ದಾರಿ (information superhighway) ಎಂಬ ಹೆಸರಿದೆ. ಈ ಹೆಸರು ಬೆಂಗಳೂರಿನಂತಹ ಮಾಹಾನಗರಕ್ಕೆ ಮಾತ್ರ ಅನ್ವಯ. ಬೆಂಗಳೂರಿನಿಂದ ಹೊರಗೆ ಕಾಲಿಟ್ಟೊಡನೆ ಅದು ಮಾಹಿತಿಯ ಕಾಲುದಾರಿ ಆಗುತ್ತದೆ. ಬೆಂಗಳೂರಿನ ಹೊರವರ್ತುಲ ರಸ್ತೆಯಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿರುವ ಶ್ರೀಗಂಧದ ಕಾವಲು ಎನ್ನುವ ಬಡಾವಣೆಗೆ ಮೂರು ವಾರಗಳ ಹಿಂದೆ ಮನೆ ಬದಲಾಯಿಸಿದೆ. ಇಲ್ಲಿ ಬಿಎಸ್‌ಎನ್‌ಎಲ್‌ನವರ ಸ್ಥಿರವಾಣಿ ಸಂಪರ್ಕ ಇಲ್ಲ. ಮೊಬೈಲ್ ಸಿಗ್ನಲ್ ಬೇಕಿದ್ದರೆ ಮನೆಯಿಂದ ಹೊರಗೆ ಹೋಗಬೇಕು. ೩ಜಿ ಡಾಟಾಕಾರ್ಡ್‌ಗೂ ಅದೇ ಗತಿ. ಮನೆಯೊಳಗೆ ಅದು ಕೇವಲ ೧ಜಿ ಅರ್ಥಾತ್ ಜಿಪಿಆರ್‌ಎಸ್ ವೇಗದಲ್ಲಿ ಕೆಲಸ (?) ಮಾಡುತ್ತದೆ. ಈ ವೇಗದಲ್ಲಿ ಸರಿಯಾಗಿ ಇಮೈಲ್ ಕೂಡ ಬರುವುದಿಲ್ಲ. ಬಿಎಸ್‌ಎನ್‌ಎಲ್ ಕಚೇರಿಗೆ ಹೋಗಿ ಇಂಜಿನಿಯರ್ ಅವರನ್ನು ಕಂಡು ಬಂದೆ. ನಿಮ್ಮ ಊರಿಗೆ ಸಂಪರ್ಕ ನಿಡಲು ಕೇಬಲ್ ಇಲ್ಲ. ಮೇಲಿನವರು ಕೇಬಲ್ ನೀಡಿದರೆ ಸಂಪರ್ಕ ನೀಡುತ್ತೇವೆ ಎಂಬ ವಾಗ್ದಾನ ಮಾತ್ರ ನೀಡಿ ಕಳುಹಿಸಿದರು (ದಾನಗಳಲ್ಲಿ ಅತಿ ಸುಲಭ ದಾನ -ವಾಗ್ದಾನ!). ಈಗ ಸದ್ಯಕ್ಕಂತೂ ಸ್ಥಿರವಾಣಿ ಇಲ್ಲ, ಆದುದರಿಂದ ಬ್ರಾಡ್‌ಬ್ಯಾಂಡೂ ಇಲ್ಲ. ಬಿಎಸ್‌ಎನ್‌ಎಲ್‌ನವರ ೩ಜಿ ಡಾಟಾಕಾರ್ಡ್ ಮೂಲಕ ಅಂತರಜಾಲ ಸಂಪರ್ಕ ಮಾಡೋಣವೆಂದರೆ ಅದು ಮನೆಯೊಳಗೆ ಕೇವಲ ೧ಜಿ, ಕಿಟಿಕಿಯಲ್ಲಿ ಇಟ್ಟಾಗ ಮಾತ್ರ ೩ಜಿ. ಬಿಎಸ್‌ಎನ್‌ಎಲ್‌ನ ಮೇಲಧಿಕಾರಿಗಳು ಬಹುಶಃ ಬಿಎಸ್‌ಎನ್‌ಎಲ್‌ನ ಹೆಸರು ಕೆಡಿಸಿ ಕೊನೆಗೆ ವಿಎಸ್‌ಎನ್‌ಎಲ್ ಅನ್ನು ಟಾಟಾದವರಿಗೆ ಮಾರಿದಂತೆ ಇದನ್ನೂ ಖಾಸಗಿಯವರಿಗೆ ಮಾರಿ ಕೈತೊಳೆದುಕೊಳ್ಳಲು ಕಿತಾಪತಿ ನಡೆಸುತ್ತಿರುವಂತೆ ನನಗೇನೋ ಅನುಮಾನ ಬರುತ್ತಿದೆ.
ರಿಲಯನ್ಸ್ ನೆಟ್‌ಕನೆಕ್ಟ್ ಮತ್ತು ಟಾಟಾ ಫೋಟೋನ್ ಮ್ಯಾಕ್ಸ್‌ಗಳನ್ನು ಕೂಡ ಬಳಸಿ ನೋಡಿದೆ. ಅವೆರಡರಲ್ಲಿ ಟಾಟಾ ಫೋಟೋನ್ ಮ್ಯಾಕ್ಸ್ ಮಾತ್ರ ಮನೆಯ ಯಾವ ಮೂಲೆಗೆ ಹೋದರೂ ಒಂದೇ ವೇಗವನ್ನು ನೀಡಿತು. ಟಾಟಾ ಫೋಟೋನ್ ಮ್ಯಾಕ್ಸ್ ಬಗ್ಗೆ ಎರಡು ವಾರ ಹಿಂದೆ ಗ್ಯಾಜೆಟ್ ಲೋಕ ಅಂಕಣದಲ್ಲಿ ಬರೆಯಲಾಗಿತ್ತು.
ಅಂತರಜಾಲ ಸಂಪರ್ಕ ಇಲ್ಲದಿದ್ದರೆ ನನ್ನಂತಹ ಜಾಲಿಗ ಬದುಕುವುದು ಹೇಗೆ? ನಾಗೇಶ ಹೆಗಡೆಯವರು ಒಂದು ಕಡೆ ಬರೆದುಕೊಂಡಂತೆ ಅಂತರಜಾಲ ಬಟ್ಟು ಜೀವಜಾಲದ ಕಡೆ ಗಮನ ಹರಿಸಲೇ? ಆದರೆ ನನಗೂ ಜೀವಶಾಸ್ತ್ರಕ್ಕೂ ಮೊದಲಿನಿಂದಲೇ ಎಣ್ಣೆ-ಸೀಗೆ ಸಂಬಂಧ. ಈ ಮಾಹಿತಿಯ ಕಾಲುದಾರಿಯನ್ನೇ ಹೆದ್ದಾರಿಯನ್ನಾಗಿ ಪರಿವರ್ತಿಸಿದರೆ ಹೇಗೆ? ಅದು ಸಾಧ್ಯವೇ? ಒಂದಾನೊಂದು ಕಾಲದಲ್ಲಿ ನಾನು ವೃತ್ತಿನಿರತ ವಿಜ್ಞಾನಿಯಾಗಿದ್ದೆ. ಈಗಲೂ ಪ್ರವೃತ್ತಿಯಿಂದ ವಿಜ್ಞಾನಿಯೇ. ನನ್ನೊಳಗೆ ಕುಳಿತಿದ್ದ ಭೌತಶಾಸ್ತ್ರ, ಇಂಜಿನಿಯಿರಿಂಗ್, ಆಂಟೆನಾಶಾಸ್ತ್ರಗಳೆಲ್ಲ ಹೊರಗೆ ಬಂದವು. ಸಿಗ್ನಲಿಗೆ ಒಂದು ಸಿಗ್ನಲ್ ಬೂಸ್ಟರ್ ಅಂದರೆ ಸಿಗ್ನಲನ್ನು ಹೆಚ್ಚು ಮಾಡುವಂತಹದು ತಯಾರಿಸಿದರೆ ಹೇಗೆ ಎಂದು ಆಲೋಚನೆ ಮಾಡಿದೆ. ಮನೆಯಲ್ಲಿ ಹುಡುಕಿದಾಗ ಹಳೆಯ ಡಬ್ಬ ಒಂದು ದೊರೆಯಿತು. ಅದನ್ನೇ ಕತ್ತರಿಸಿ ಪ್ರತಿಫಲನಾತ್ಮಕ ಸಿಗ್ನಲ್ ಬೂಸ್ಟರ್ ಮಾಡಿದೆ. ವಿವರಗಳು ಮಂದಿನ ಪ್ಯಾರಾಗಳಲ್ಲಿ.
ಸಿಗ್ನಲ್ ಬೂಸ್ಟರ್ ಮಾಡುವ ವಿಧಾನ
ಒಂದು ಹಳೆಯ ಡಬ್ಬ ತೆಗೆದುಕೊಳ್ಳಿ. ಅದು ಸಿಲಿಂಡರಿನಾಕೃತಿಯಲ್ಲಿರಬೇಕು ಹಾಗೂ ಅದು ಲೋಹದಿಂದ ಮಾಡಿರಬೇಕು. ಅಮುಲ್ ಅಥವಾ ಬೋರ್ನ್‌ವಿಟಾ ಡಬ್ಬ ಈ ಕೆಲಸಕ್ಕೆ ಹೇಳಿ ಮಾಡಿಸಿದಂತಿದೆ. ಅದರ ಮುಚ್ಚಳ ನಮ್ಮ ಕೆಲಸಕ್ಕೆ ನಿರುಪಯುಕ್ತ. ಉಳಿದ ಡಬ್ಬವನ್ನು ಉದ್ದಕ್ಕೆ ಕತ್ತರಿಸಿ. ಡಬ್ಬ ಕತ್ತರಿಸಲೆಂದೇ ಮಾರುಕಟ್ಟೆಯಲ್ಲಿ ವಿಶೇಷ ಕತ್ತರಿ ಸಿಗುತ್ತದೆ. ಅದನ್ನು ಬಳಸಿದರೆ ಕೆಲಸ ಸುಗಮ. ಚಿಕ್ಕ ಗರಗಸವನ್ನು ಕೂಡ ಬಳಸಬಹುದು. ಕತ್ತರಿಸಿದ ನಂತರ ನಿಮಗೆ ಅರ್ಧ ಸಿಲಿಂಡರಾಕೃತಿಯ ಡಬ್ಬ ದೊರೆಯುತ್ತದೆ. ಅದರ ತಳವನ್ನೂ ಅರಿಯಾಗಿ ಅರ್ಧಕ್ಕೆ ಕತ್ತರಿಸಬೇಕು. ಈಗ ಅದರ ತಳದ ಮಧ್ಯಭಾಗದಲ್ಲಿ ಸುಮಾರು ಒಂದು ಸೆ.ಮೀ. ಉದ್ದ ಮತ್ತು ಸುಮಾರು ಅರ್ಧ ಸೆ.ಮೀ. ಅಗಲಕ್ಕೆ ಕತ್ತರಿಸಬೇಕು. ಇದು ಮುಂದಕ್ಕೆ ಉಪಯೋಗಕ್ಕೆ ಬರುತ್ತದೆ.
೩ಜಿ ಡಾಟಾಕಾರ್ಡ್ ಜೊತೆ ಯುಎಸ್‌ಬಿ ಕೇಬಲ್ ಒಂದು ದೊರೆಯುತ್ತದೆ. ಅದು ಈಗ ಕೆಲಸಕ್ಕೆ ಬರುತ್ತದೆ. ಅದನ್ನು ಬಳಸಿ ಡಾಟಾಕಾರ್ಡ್ ಅನ್ನು ಗಣಕಕ್ಕೆ ಸಂಪರ್ಕಿಸಿ. ಈಗ ನೀವು ತಯಾರಿಸಿದ ಅರ್ಧಡಬ್ಬವನ್ನು ತಲೆಕೆಳಗಾಗಿ ನೇತು ಹಾಕಬೇಕು. ಅದರ ಮಧ್ಯಭಾಗದಲ್ಲಿ ಮಾಡಿದ ಚಿಕ್ಕ (ಒಂದು ಸೆ.ಮೀ ಉದ್ದ ಅರ್ಧ ಸೆ.ಮೀ. ಅಗಲ) ಸೀಳು ಈಗ ಕೆಲಸಕ್ಕೆ ಬರುತ್ತದೆ. ಡಾಟಾಕಾರ್ಡನ್ನು ಸರಿಯಾಗಿ ಅದರಲ್ಲಿ ಕೂರಿಸಿ. ಈಗ ನಿಮ್ಮ ಸಿಗ್ನಲ್ ಬೂಸ್ಟರ್ ತಯಾರು ಎಂದು ತಿಳಿದುಕೊಳ್ಳಬಹುದು (ಚಿತ್ರಗಳನ್ನು ನೋಡಿ).
ಇದು ನಿಜವಾಗಿಯೂ ಕೆಲಸ ಮಾಡುತ್ತದೆಯೇ ಎಂದು ವೈಜ್ಞಾನಿಕವಾಗಿ ಪರೀಕ್ಷೆ ಮಾಡಬೇಕಲ್ಲ? ಅದಕ್ಕಂದೇ ಹಲವು ತಂತ್ರಾಂಶಗಳೂ ಜಾಲತಾಣಗಳೂ ಲಭ್ಯವಿವೆ. ಅಂತಹ ಒಂದು ಜಾಲತಾಣ www.broadbandspeedchecker.co.uk. ಈ ಜಾಲತಾಣವನ್ನು ಬಳಸಿ ಪರೀಕ್ಷಿಸಿದೆ. ಸಿಗ್ನಲ್ ಬೂಸ್ಟರ್ ಬಳಸದೆ ಮೊದಲ ಪರೀಕ್ಷೆ. ಡೌನ್‌ಲೋಡ್ ವೇಗ ೧.೩ ಎಂಬಿಪಿಎಸ್ ಬಂತು. ಸಿಗ್ನಲ್ ಬೂಸ್ಟರ್ ಬಳಸಿ ಇನ್ನೊಮ್ಮೆ ಪರೀಕ್ಷೆ ಮಾಡಿದೆ. ಆಗ ವೇಗ ೩.೫ ಎಂಬಿಪಿಎಸ್ ಬಂತು. ಅಂದರೆ ಸಿಗ್ನಲ್ ಬೂಸ್ಟರ್ ಬಳಸಿದರೆ ಸುಮಾರು ಮೂರು ಪಟ್ಟು ಹೆಚ್ಚು ವೇಗದಲ್ಲಿ ಡೌನ್‌ಲೋಡ್ ಮಾಡಬಹುದು. ಇಲ್ಲಿ ಏನಾಗುತ್ತಿದೆಯಂದರೆ ಅರ್ಧ ಸಿಲಿಂಡರಿನಾಕೃತಿಯ ಲೋಹದ ಡಬ್ಬವು ತನ್ನ ಮೈಮೇಲೆ ಬಿದ್ದ ಕಿರಣಗಳನ್ನು ತನ್ನ ಕೇಂದ್ರ ಭಾಗಕ್ಕೆ ಪ್ರತಿಫಲಿಸಿ ಅಲ್ಲಿ ಕೇಂದ್ರೀಕರಣಗೊಳ್ಳುವಂತೆ ಮಾಡುತ್ತದೆ. ಈ ಎಲ್ಲ ಪರೀಕ್ಷೆಗಳನ್ನು ಡಾಟಾಕಾರ್ಡನ್ನು ಕಿಟಿಕಿಗೆ ನೇತುಹಾಕಿ ಮಾಡಲಾಗಿತ್ತು.
ಡಬ್ಬದಿಂದ ಬಾಣಲೆಗೆ
ಏನಿದು ಡಬ್ಬದಿಂದ ಬಾಣಲೆಗೆ? ಹಳೆಯ ಗಾದೆ ಬೆಂಕಿಯಿಂದ ಬಾಣಲೆಗೆ ಇಲ್ಲೇಕೆ ಬಂತು ಅಂದುಕೊಳ್ಳುತ್ತಿದ್ದೀರಾ? ಆ ಗಾದೆಗೂ ನಾನು ಈಗ ಬರೆಯಹೊರಟಿರುವುದಕ್ಕೂ ಏನೇನೂ ಸಂಬಂಧವಿಲ್ಲ. ಬಾಣಲೆಯ ಆಕಾರ ನೆನಪು ಮಾಡಿಕೊಳ್ಳಿ. ಅದು ಅರ್ಧಗೋಲಾಕಾರ, ಆರ್ಧ ಪ್ಯಾರಾಬೋಲ ಅಥವಾ ಅರ್ಧ ಹೈಪರ್‌ಬೋಲ. ಇವುಗಳೆಲ್ಲದರ ಗುಣ ಬಹುಮಟ್ಟಿಗೆ ಒಂದೆ. ಇವು ತಮ್ಮ ಮೇಲೆ ಬಿದ್ದ ಕಿರಣಗಳನ್ನು ತಮ್ಮ ಕೇಂದ್ರ ಬಿಂದುವಿನಲ್ಲಿ ಕೇಂದ್ರೀಕರಿಸುತ್ತವೆ. ಹಾಗಿದ್ದರೆ ಇದನ್ನು ಅಂತರಜಾಲ ಸಿಗ್ನಲ್ ಕೇಂದ್ರೀಕರಿಸಲೂ ಬಳಸಬಹುದಲ್ಲ ಎಂದು ಚಿಂತಿಸಿದೆ. ನೋಡಿಯೋ ಬಿಡೋಣ ಎಂದುಕೊಂಡು ಒಂದು ಅಲ್ಯೂಮಿನಿಯಂ ಬಾಣಲೆಯ ಮಧ್ಯದಲ್ಲಿ ಬಿಎಸ್‌ಎನ್‌ಎಲ್‌ನವರ ೩ಜಿ ಡಾಟಾಕಾರ್ಡ್ ಇಟ್ಟು ವೇಗದ ಪರೀಕ್ಷೆ ಮಾಡಿದೆ. ಬಾಣಲೆ ಇಲ್ಲದಿದ್ದಾಗ (ಮನೆಯೊಳಗೆ) ೦.೩೭೫ ಎಂಬಿಪಿಎಸ್ ವೇಗ ಬಂತು. ಬಾಣಲೆಯೊಳಗೆ ಇಟ್ಟಾಗ ೦.೭೨೭ ಎಂಬಿಪಿಎಸ್ ವೇಗ ಬಂತು. ಅರ್ಥಾತ್ ಬಾಣಲೆಯೊಳಗೆ ಇಟ್ಟಾಗ ವೇಗ ದುಪ್ಪಟ್ಟು ಆಯಿತು.
ಗ್ಯಾಜೆಟ್ ಸಲಹೆ
ಕೆ.ಜೆ. ಕುಮಾರ್ ಅವರ ಪ್ರಶ್ನೆ: ನಾನು ಡೆಲ್ ಸ್ಟ್ರೀಕ್ ಫೋನ್ ತೆಗೆದುಕೊಂಡಿದ್ದೇನೆ. ಇದರಲ್ಲಿ ಶ್ರೀಲಿಪಿಯವರ ಕನ್ನಡ ತಂತ್ರಾಂಶವನ್ನು ಬಳಸುವುದು ಹೇಗೆ?
ಉ: ನೀವು ಹೇಳುವ ತಂತ್ರಾಂಶ ಗಣಕದಲ್ಲಿ ಬಳಸುವಂತದ್ದು. ಅದನ್ನು ಫೋನಿನಲ್ಲಿ ಬಳಸಲು ಸಾಧ್ಯವಿಲ್ಲ. ಇದೇ ಮಾತು ಬರಹ ಮತ್ತು ನುಡಿ ತಂತ್ರಾಂಶಗಳಿಗೂ ಅನ್ವಯಿಸುತ್ತದೆ.
-ಡಾ| ಯು. ಬಿ. ಪವನಜ
— *** —
October 2nd, 2013 at 11:58 pm
Hi sir,
Is it possible for you to provide solar vehicle details like manufacture, use, cost, durability,etc. AND
People who got success in this experiment in Bangalore and also in the world in this co lam.
thanking you
October 3rd, 2013 at 12:01 am
hi sit,
thanks for providing very useful information regarding signals and please keep go on like the same in future also
thanking you
November 4th, 2014 at 1:32 pm
ಉಪಯುಕ್ತ ಮಾಹಿತಿಗಾಗಿ ವಂದನೆಗಳು 🙂
November 20th, 2014 at 1:52 pm
Good concept !!!!
May 21st, 2015 at 11:20 am
ನೀವು ಭಯಂಕರ ಮಾರ್ರೆ. ನಿಮಗೆ ಧನ್ಯವಾಧ. ಇದು ನಿಜವಾಗಿಯೂ ಕೆಲಸ ಮಾಡುತ್ತದೆ.
May 21st, 2015 at 8:59 pm
Dear sir, I am your every episode which are publishing in prajavani and Vishva Kannada, I want to know something about windows OS based devises, Sir first of all I am using Nokia Lumia 630 Dual Sim. I bought it by reading your episode which was written about that in prajavani. Already I have told you that I want to know, am not arguing with you Sir my questions are 1) Windows OS based Phones are good or bad? 2) If good why they are not adding Indian Languages? 3) Does denim update contains Kannada? 4) when I put to charging it asks for Update and requires Wi-Fi connection, I tried to connect Wi-Fi by tethering but didn’t work. If people don’t have WiFi connection means how to get update to a latest version? Please don’t get upset. Please reply…
January 29th, 2017 at 2:54 pm
ನಮ್ಮ ಮನೆ ಹತ್ರ ನೆಟ್ವರ್ಕ್ ಸರಿ ಸಿಗೋದಿಲ್ಲ. ನನಗೆ ಮೊಬೈಲ್ ಗೆ ಸರಿಯಾಗಿ ನೆಟ್ವರ್ಕ್ ಸಿಗುವಾಗೆ ಏನಾದರು ಐಡಿಯಾ ಕೊಟ್ಟು ಸಹಾಯ ಮಾಡಿ ದಯವಿಟ್ಟು.
BSNL & Airtel , ನೆಟ್ವರ್ಕ್ ಮಾತ್ರ ಸಿಗೋದು.ಅದೂ ಕೂದ 2G.
January 26th, 2018 at 2:20 pm
Sir near our home,there is a less signal strength..so how can i boost d signal strength..?please tell about it
February 23rd, 2018 at 4:46 pm
ಸಹೋದರ ನಿಮ್ಮ ಗ್ಯಾಜೆಟ್ ಹೊಸ ಅಪ್ಟೆಟ್ಸ್ ನೋಟಿಫಿಕೇಶನ್ ಗಳಿಗಾಗಿ ಏನು ಮಾಡಬೇಕು
ಸಹೋದರ ನಮ್ಮ ಮನೆ ಮೇಲೆ ಜಿಯೋದು ಅಂತರ್ಜಲ ಸಂಪೂರ್ಣವಾಗಿ ಬರತ್ತೆ ಮನೆಯಲ್ಲಿ ಬರಲ್ಲ ಬಹಳ ನಿದಾನ ಜಿಯೋದವರಿಗೆ ದೂರು ನೀಡಿ ಸಾಕಾಇತು ನೀವೇ ಒಂದು ಸಲಹೆ ಕೊಡಿ
ನೀವು ಬಳಸೋ ಎಷ್ಟೊಂದು ಕನ್ನಡ ಪದಗಳನ್ನು ನಾವು ಕೇಳಿಯೇ ಇರಲಿಲ್ಲ ಅದ್ಬುಯುತ ನಿಮ್ಮ ಕನ್ನಡ ಬರವಣಿಗೆ