ಆಹಾರ, ನೀರು, ವಸತಿ, ಬಟ್ಟೆಗಳು ಮನುಷ್ಯನ ಅತ್ಯಾವಶ್ಯಕಗಳು. ಇವೆಲ್ಲವುಗಳನ್ನು ಸರಿಯಾದ ಕ್ರಮದಲ್ಲಿ ಪಡೆದು ವಿನಿಯೋಗಿಸುವುದು ಮನುಜನ ಲಕ್ಷಣ. ಈ ವಿಚಾರದಲ್ಲಿ ಹವ್ಯಕರು ಮೊದಲಿನಿಂದಲೂ ತಮ್ಮದೇ ಆದ ಸಂಸ್ಕೃತಿಯಿಂದ ವಿಶಿಷ್ಟವಾಗಿ ಗೋಚರಿಸುತ್ತಾರೆ. ಆಹಾರಾರ್ಥಂ ಕರ್ಮ ಕುರ್ಯಾತ್ ಎಂಬ ಶ್ರುತಿವಾಕ್ಯದಂತೆ ಆಹಾರಕ್ಕಾಗಿ ಜೀವನದಲ್ಲಿ ನಿಂದ್ಯವಲ್ಲದ ಕೆಲಸವನ್ನು ಮಾಡಬೇಕು, ಪ್ರಾಣರಕ್ಷಣೆಗಾಗಿ ಆಹಾರವನ್ನು ಸೇವಿಸಬೇಕು, ತತ್ವಗಳ ತಿಳುವಳಿಕೆಗಾಗಿ ಪ್ರಾಣವನ್ನು ರಕ್ಷಿಸಬೇಕು, ಪುನಃ ದುಃಖಿಯಾಗದಿರಲು ತತ್ತ್ವಜಿಜ್ಞಾಸೆ ಬೇಕು. ಎಂಬ ತಾತ್ವಿಕ ಹಿನ್ನೆಲೆಯಲ್ಲಿ ಅಗಣಿತ ತಲೆಮಾರುಗಳಿಂದ "ಊಟಬಲ್ಲವನಿಗೆ ರೋಗವಿಲ್ಲ" ಎಂಬುದನ್ನರಿತು, ಶಾಸ್ತ್ರೀಯವಾದ ಸಾತ್ವಿಕ ಬೋಜನವನ್ನು ಹೊಂದಿ ಶ್ರೇಯಸ್ಕರ ಜೀವನವನ್ನು ನಡೆಸುತ್ತಿದ್ದಾರೆ. ಹವ್ಯಕರ ಆಹಾರದಲ್ಲಿ ಮತ್ತು ಕ್ರಮದಲ್ಲಿ ಆಯುರ್ವೇದೀಯ ಪದ್ಧತಿಯಿದೆ. ಇದು ಯಾವ ಶಾಸ್ತ್ರಾಧ್ಯಯನವಿಲ್ಲದೆ ಮನೆಯ ಪಾಕಾಧ್ಯಕ್ಷರಾದ ಹಿರಿಯರಿಂದ ಕಿರಿಯರಿಗೆ ತಲೆತಲಾಂತರಗಳಿಂದ ಹರಿದುಬರುತ್ತಿದೆ. ಜೀವನೋಪಾಯಕ್ಕಾಗಿ ನಗರವನ್ನು ಸೇರಿದರೂ ಇಲ್ಲಿಯೂ ತಮ್ಮ ಆಹಾರ ಸೇವನೆಯ ಕ್ರಮ ಸಮಯ ಪರಿಮಾಣಗಳನ್ನು ಉಳಿಸಿಕೊಂಡು ಬಂದಿರುತ್ತಾರೆ. ಇಂತಹ ಒಂದು ವಿಶಿಷ್ಟವಾದ ಭಕ್ಷ್ಯ ಭೋಜ್ಯಗಳನ್ನು ಬೆಂಗಳೂರಿನ ಸಸ್ಯಾಹಾರೀ ಜನತೆಗೆ ನೀಡುವ ಉದ್ದೇಶದಿಂದ ದಿನಾಂಕ ಡಿಸೆಂಬರ್ ೨೯, ೩೦ ಮತ್ತು ೩೧, ೨೦೦೬, ಗಿರಿನಗರದಲ್ಲಿ ಹಾಸ್ಯ - ಹವ್ಯಕ ಪಾಕೋತ್ಸವವು ಆಯೋಜಿತವಾಗಿದೆ. ಇದೊಂದು ಸಂಪೂರ್ಣ ಸಸ್ಯಾಹಾರದ, ಮಲೆನಾಡು, ಕರಾವಳಿಯ ಹವ್ಯಕರ ಆಹಾರ ಮತ್ತು ಸದಭಿರುಚಿಯ ಹಾಸ್ಯಗಳ ಹಬ್ಬವಾಗಿದೆ. ಆಹಾರ ಪ್ರದರ್ಶನ, ಸ್ಪರ್ಧೆ, ಊಟ, ಅಂಗಡಿಮುಂಗಟ್ಟು, ಮನರಂಜನೆಗಳನ್ನು ಒಳಗೊಂಡಿರುತ್ತದೆ.
Posts published in “ಸುದ್ದಿ ಸಮಾಚಾರ”
ಎಲ್ಲೆಲ್ಲಿ ಏನೇನು
ಬೆಂಗಳೂರು, ೧೭, ೨೦೦೬: ಕವಿ, ಕಥೆಗಾರ ಹಾಗೂ ಪತ್ರಕರ್ತರೂ ಆಗಿರುವ ರಘುನಾಥ ಚ.ಹ. ಅವರ ಹೊಸ ಪುಸ್ತಕ "ಹೊರಗೂ ಮಳೆ ಒಳಗೂ ಮಳೆ" ಬಿಡುಗಡೆ ಕಾರ್ಯಕ್ರಮ ಇಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನೆರವೇರಿತು. ತಮ್ಮ "ತೇರು" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ರಾಘವೇಂದ್ರ ಪಾಟೀಲರು ಪುಸ್ತಕದ ಬಿಡಗಡೆ ಮಾಡಿದರು. ಅವರು ಮಾತನಾಡುತ್ತ "ರಘುನಾಥರ ಕಥೆಗಳಲ್ಲಿ ಆದರ್ಶದ ಹುಡಕಾಟ ಇರುವಂತೆ ಕಾಣುತ್ತದೆ. ಕೆಲವೊಮ್ಮ ಈ ಆದರ್ಶದ ಹುಡುಕಾಟದಲ್ಲಿ ಕಥೆಗಾರ ಸೋಲುತ್ತಾನೆ. ಹೆಚ್ಚಿನ ಕಥೆಗಳು ಭಾವಗೀತೆಗಳಂತಿವೆ" ಎಂದರು. ಮಂಜುನಾಥರು ಕಥೆಗಳ ಬಗ್ಗೆ ಮಾತನಾಡಿದರು. ಕಥಾಸಂಕಲನವನ್ನು ಪ್ರಕಟಿಸಿರುವ "ಸಂಚಯ"ದ ಡಿ.ವಿ. ಪ್ರಹ್ಲಾದ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಜಯಪ್ರಕಾಶ ನಾರಾಯಣ ಸ್ವಾಗತ ಭಾಷಣ ಮಾಡಿದರು. ಕೊನೆಯಲ್ಲಿ ಎಸ್. ದಿವಾಕರ ನಡೆಸಿಕೊಟ್ಟ "ಕಥೆಗಳ ಕಥೆಗಳು" ಸಂವಾದ ಕಾರ್ಯಕ್ರಮದಲ್ಲಿ ಅಶೋಕ ಹೆಗಡೆ, ಆನಂದ ಋಗ್ವೇದಿ, ಹಾಗೂ ಇತರರು ಪಾಲ್ಗೊಂಡರು.
ಬೆಂಗಳೂರು, ಆಗಸ್ಟ್ ೨೦, ೨೦೦೬: ವಸುಧೇಂದ್ರ ಅವರು ನಡೆಸಿಕೊಂಡು ಬರುತ್ತಿರುವ ಛಂದ ಪುಸ್ತಕ ಮಾಲಿಕೆಯ ನಾಲ್ಕು ಪುಸ್ತಕಗಳ ಲೋಕಾರ್ಪಣೆ ಇಂದು ಬೆಂಗಳೂರಿನಲ್ಲಿ ಜರುಗಿತು. ಬ್ರೈಲ್ ಲಿಪಿಯಲ್ಲಿ ಮುದ್ರಿಸಿರುವ ಅದೃಶ್ಯ ಕಾವ್ಯ ಪುಸ್ತಕವನ್ನು ಮಧು ಸಿಂಘಾಲ್ ಅವರು ಬಿಡುಗಡೆ ಮಾಡಿದರು. ಸ್ವತಃ ದೃಷ್ಟಿಸೌಲಭ್ಯ ವಂಚಿತರಾದ ಮಧು ಸಿಂಘಾಲ್ ಅವರು ವಸುಧೇಂದ್ರರ ಈ ವಿನೂತನ ಪ್ರಯತ್ನವನ್ನು ಕೊಂಡಾಡಿದರು. ಅಂಧರ ಶಾಲೆಗಳಿಗೆ ಕನ್ನಡದ ಪುಸ್ತಕಗಳು ಬ್ರೈಲ್ ಲಿಪಿಯಲ್ಲಿ ಸಿಗುತ್ತಿಲ್ಲ. ಕೇವಲ ಸರಕಾರವು ಪ್ರಕಟಿಸಿರುವ ಪಠ್ಯ ಪುಸ್ತಗಳು ಮಾತ್ರವೇ ಲಭ್ಯವಿವೆ. ಕನ್ನಡ ಸಾಹಿತ್ಯ ಅತಿ ಶ್ರೀಮಂತವಾಗಿದೆ. ಆದರೆ ಅವು ಯಾವವೂ ದೃಷ್ಟಿಸೌಲಭ್ಯ ವಂಚಿತರಾದವರಿಗೆ ಸಿಗುತ್ತಿಲ್ಲ. ಈ ಕೊರತೆಯನ್ನು ನೀಗುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.
ಬೆಂಗಳೂರು, ಜೂನ್ ೨೩, ೨೦೦೬: ಚೆನ್ನೈನ ಖಜಾನ ಜುವೆಲ್ಲರಿ ಸಂಸ್ಥೆ ಬೆಂಗಳೂರಿನ ಕಮರ್ಶಿಯಲ್ ರಸ್ತೆ ಮತ್ತು ಜಯನಗರಗಳಲ್ಲಿ ಎರಡು ಹೊಸ ಮಳಿಗೆಗಳನ್ನು ಆರಂಭಿಸಲಿದೆ.
ಬೆಂಗಳೂರು, ಮೇ ೧೩, ೨೦೦೬: ಬೆಂಗಳೂರಿನ ರಾಜಾಜಿನಗರದ ರಂಗೋತ್ರಿ ಮಕ್ಕಳ ರಂಗಶಾಲೆಯವರು ವಿಶ್ವ ಕನ್ನಡದ ಸಹಾಯಕ ಸಂಪಾದಕರಾದ ಆರ್. ಜಿ. ಹಳ್ಳಿ ನಾಗರಾಜ್ ಅವರಿಗೆ ೨೦೦೬ನೆ ಇಸವಿಯ ಗೌತಮ ಪ್ರಶಸ್ತಿ ನೀಡಿ ಗೌರವಿಸಿದರು. ಬೆಂಗಳೂರಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಸಾರಿಗೆ ಸಚಿವರಾದ ಶ್ರೀ ಚೆಲುವರಾಯ ಸ್ವಾಮಿಯವರು ಉಪಸ್ಥಿತರಿದ್ದರು. ರಂಗೋತ್ರಿ ಮಕ್ಕಳ ರಂಗಶಾಲೆಯವರು ಬುದ್ಧ ಪೂರ್ಣಿಮೆಯ ಅಂಗವಾಗಿ ಸಮಾಜದ ಗಣ್ಯರಿಗೆ ಗೌತಮ ಪ್ರಶಸ್ತಿ ಪ್ರದಾನ ಮತ್ತು ಬೆಳದಿಂಗಳ ಕಾವ್ಯ ಸಂಗೀತೋತ್ಸವ ಆಯೋಜಿಸಿದ್ದರು. ೨೦೦೬ನೆ ಸಾಲಿನ ಗೌತಮ ಪ್ರಶಸ್ತಿಗೆ ಪಾತ್ರರಾದವರು - ಡಾ| ಸುಭಾಷ್ ಭರಣಿ, ನಾಗತಿಹಳ್ಳಿ ಚಂದ್ರಶೇಖರ್, ಆರ್. ಜಿ. ಹಳ್ಳಿ ನಾಗರಾಜ್, ಎಂ. ಎಸ್. ಮೂರ್ತಿ, ಡಾ| ಎಚ್. ಎಂ. ವೆಂಕಟಪ್ಪ, ಬಿ. ಟಿ. ರಾಮಚಂದ್ರ, ಸೂತ್ರಂ ನಾಗರಾಜ ಶಾಸ್ತ್ರಿ, ಶರಣಪ್ಪ ಗೋನಾಳ, ಶಿವಶಂಕರ್, ಎಂ. ಆರ್. ಮಾಳಿ, ಡಾ| ಕೃಷ್ಣರಾಜ ಭಟ್, ಮಂಜುನಾಥ ಆಚಾರ್ಯ, ಜಿ. ರಾಮಕೃಷ್ಣ ಮತ್ತು ಶ್ರೀದೇವಿ ಮೇಳಗಟ್ಟಿ.
ಬೆಂಗಳೂರು, ಮೇ ೧೦, ೨೦೦೬: ಸೌಂದರ್ಯ ಆರ್ಟ್ಸ್ ಲಾಂಛನದಲ್ಲಿ ಶ್ರೀಮತಿ ಜಯಮಾಲ ರಾಮಚಂದ್ರ ನಿರ್ಮಿಸಿದ ಪಿ. ಶೇಷಾದ್ರಿಯವರ ನಿರ್ದೇಶನದ ಕನ್ನಡ ಚಲಚಚಿತ್ರ "ತುತ್ತೂರಿ"ಯ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಿನ್ನೆ ಜರುಗಿತು. ತುತ್ತೂರಿ ಚಿತ್ರದ ವೈಶಿಷ್ಟ್ಯವೆಂದರೆ ಅದು ಮಕ್ಕಳ ಚಿತ್ರ. ಅದರಲ್ಲಿ ಮಕ್ಕಳೇ ಪ್ರಮುಖ ಪಾತ್ರಧಾರಿಗಳು. ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಮತ್ತು ರಾಮಚಂದ್ರ ಅವರ ಛಾಯಾಗ್ರಹಣವಿದೆ. ಧ್ವನಿಸುರುಳಿ ಬಿಡುಗಡೆಯ ಕಾರ್ಯಕ್ರಮದಲ್ಲಿ ನಿರ್ದೇಶಕ ಶೇಷಾದ್ರಿ, ರಾಮಚಂದ್ರ, ಜಯಮಾಲ ಎಲ್ಲ ಭಾಗವಹಿಸಿದ್ದರು. ಧ್ವನಿಸುರುಳಿಯನ್ನು ಆಕಾಶ್ ಆಡಿಯೋದವರು ತಯಾರಿಸಿದ್ದಾರೆ. ಧ್ವನಿಸುರುಳಿಯ ಬಿಡುಗಡೆ ಕಾರ್ಯಕ್ರಮ ವಿನೂತನ ರೀತಿಯಲ್ಲಿ ನೆರವೇರಿತು. ಅನಾಥಾಶ್ರಮದಿಂದ ಬಂದಿದ್ದ ಸುಮಾರು ಮುವತ್ತು ಮಕ್ಕಳು ಧ್ವನಿಸುರುಳಿಯನ್ನು ಬಿಡುಗಡೆ ಮಾಡಿ ವೇದಿಕೆಯಲ್ಲಿದ್ದವರಿಗೆ ಹಂಚಿದರು. ಜಯಮಾಲ, ಶೇಷಾದ್ರಿ, ಆಕಾಶ್ ಆಡಿಯೋ ಪರವಾಗಿ ವೆಂಕಟೇಶ್ ಮತ್ತು ದತ್ತಣ್ಣ ಮಾತನಾಡಿದರು. ಎ. ಎಸ್. ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.
ಸಹಕಾರ ರಂಗದ ರಚನಾತ್ಮಕ ಕಾರ್ಯಗಳ ದಾಖಲೀಕರಣ ಹಾಗೂ ಸಾಮಾಜಿಕ ಅಭಿಪ್ರಾಯ ರೂಪಿಸಲು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ಸೌಹಾರ್ದ ಸಹಕಾರ ಅಧ್ಯಯನ ಫೆಲೋಶಿಪ್ ಆರಂಭಿಸಿದೆ. ಈ ವಿಷಯವನ್ನು ಸಂಯುಕ್ತ ಸಹಕಾರಿ ಪುನರಾಯ್ಕೆಗೊಂಡ ಅಧ್ಯಕ್ಷ ಶ್ರೀ ಮನೋಹರ ಮಸ್ಕಿಯವರು ಪ್ರಕಟಿಸಿದ್ದಾರೆ.
ಬೆಂಗಳೂರು, ಮಾರ್ಚ್ ೩೧, ೨೦೦೬: ಏರ್‌ಟೆಲ್ ಕಂಪೆನಿ ಸಪ್ಪೋರ್ಟ್‌ಸಾಫ್ಟ್ ಕಂಪೆನಿಯೊಂದಿಗೆ ಸಹಯೋಗದಲ್ಲಿ ನೆಟ್ ಎಕ್ಸ್‌ಪರ್ಟ್ ಎಂಬ ತಂತ್ರಾಂಶವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತು. ಈ ತಂತ್ರಾಂಶವು ಏರ್‍ಟೆಲ್‌ನವರ ಬ್ರಾಡ್‌ಬಾಂಡ್ ಅಂತರಜಾಲ ಸಂಪರ್ಕ ಹೊಂದಿದವರಿಗೆ ಉಪಯುಕ್ತವಾಗಿದೆ. ಏರ್‍ಟೆಲ್ ಗ್ರಾಹಕರಿಗೆ ಈ ತಂತ್ರಾಂಶವನ್ನು ಉಚಿತವಾಗಿ ನೀಡಲಾಗುವುದು ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. ಏರ್‍ಟೆಲ್‌ನ ಬ್ರಾಡ್‌ಬಾಂಡ್ ಸಂಪರ್ಕದಲ್ಲಿ ಏನಾದರೂ ಅಡಚಣೆಯಾದರೆ ಈ ತಂತ್ರಾಂಶದ ಮೂಲಕ ಅದನ್ನು ಪತ್ತೆಹಚ್ಚಿ ದುರಸ್ತಿ ಮಾಡಬಹುದು. ಗ್ರಾಹಕ ಸೇವಾ ಅಧಿಕಾರಿ ಜೊತೆ ಆನ್‌ಲೈನ್‌ನಲ್ಲಿ ಚಾಟ್ ಮಾಡುವ ಮೂಲಕವೂ ದೋಷ ಪರಿಹಾರ ಮಾಡಿಕೊಳ್ಳಬಹುದು.
ಬೆಂಗಳೂರು, ಜನವರಿ ೨೯, ೨೦೦೬: ವಸುಧೇಂದ್ರ ಅವರು ನಡೆಸಿಕೊಂಡು ಬರುತ್ತಿರುವ ಛಂದ ಪುಸ್ತಕ ಮಾಲಿಕೆಯ ಮೂರು ಪುಸ್ತಕಗಳನ್ನು ಜಯಂತ ಕಾಯ್ಕಿಣಿಯವರು ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪುಸ್ತಕ ಬಿಡುಗಡೆ ಎನ್ನವ ಪ್ರಯೋಗವೇ ಸರಿಯಿಲ್ಲ. ಪುಸ್ತಕಗಳನ್ನು ಓದುಗರಿಗೆ ಅರ್ಪಿಸುವ ಕಾರ್ಯಕ್ರಮ ಎನ್ನುವ ಪ್ರಯೋಗವೇ ಸೂಕ್ತ ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದರು. ಬಿಡುಗಡೆಯಾದ ಪುಸ್ತಕಗಳು -ಅಲಕ ತೀರ್ಥಹಳ್ಳಿಯವರ "ಈ ಕತೆಗಳ ಸಹವಾಸವೇ ಸಾಕು", ಎಂ ಆರ್ ದತ್ತಾತ್ರಿಯವರ "ಪೂರ್ವ ಪಶ್ಚಿಮ", ಜಾನಕಿಯವರ "ಜಾನಕಿ ಕಾಲಂ". ಪುಸ್ತಗಳ ಬಗ್ಗೆ ವಿಕ್ರಮ ವಿಸಾಜಿ, ಅಶೋಕ ಹೆಗಡೆ ಮತ್ತು ಜಿ ಬಿ ಹರೀಶ ಮಾತನಾಡಿದರು. ವಸುಧೇಂದ್ರ ವಂದನಾರ್ಪಣೆ ಸಲ್ಲಿಸಿದರು. ಸುಮಂಗಲ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು.
ಬೆಂಗಳೂರು, ಜನವರಿ ೨೬, ೨೦೦೬: ಪರಿಸರ ಮತ್ತು ಬೆಂಗಳೂರು ಜಲಮಂಡಳಿ ಸಂಯುಕ್ತವಾಗಿ ನಡೆಸುತ್ತಿರುವ "ಸ್ಫೂರ್ತಿವನ" ಯೋಜನೆಯ ಜಾಲತಾಣವನ್ನು ಶ್ರೀ ಚಿರಂಜೀವಿ ಸಿಂಗ್ ಅವರು ಬೆಂಗಳೂರಿನಲ್ಲಿ ಇಂದು ಉದ್ಘಾಟಿಸಿದರು. ಅವರು ಮಾತನಾಡುತ್ತ "ಇಂದು ಅಂದರೆ ಗಣರಾಜ್ಯೋತ್ಸವದ ದಿನ ಎಲ್ಲರಿಗೂ ಸ್ಫೂರ್ತಿಯ ದಿನ. ಇಂದೇ ಸ್ಫೂರ್ತಿವನದ ಜಾಲತಾಣದ ಉದ್ಘಾಟನೆಯಾಗುತ್ತಿರುವುದು ಸಂತಸದ ವಿಷಯ" ಎಂದರು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಶ್ರೀ ಅಶೋಕ ಕುಮಾರ ಮನೋಲಿಯವರು ಅಧ್ಯಕ್ಷ ಭಾಷಣ ಮಾಡಿ "ಸ್ಫೂರ್ತಿವನ ಒಂದು ಒಳ್ಳೆಯ ಕೆಲಸ. ನಮ್ಮ ಉದ್ಯೋಗಿಗಳು ಕೂಡ ತಮ್ಮ ನಿವೃತ್ತಿ, ಮಕ್ಕಳಿಂದ ಪರೀಕ್ಷೆಯಲ್ಲಿ ಉತ್ತಮ ಸಾಧನೆ, ಹೀಗೆ ಯಾವುದೇ ಕಾರಣಕ್ಕೂ ಸ್ಫೂರ್ತಿವನದಲ್ಲಿ ಮರಗಳನ್ನು ಪ್ರಾಯೋಜಿಸಬಹುದು" ಎಂದರು. ಪರಿಸರದ ಮತ್ತು ಸ್ಫೂರ್ತಿವನದ ಸಂಚಾಲಕ ಶ್ರೀ ಈಶ್ವರ ಪ್ರಸಾದ ಅವರು ಸ್ಫೂರ್ತಿವನ ಯೋಜನೆಯ ಬಗ್ಗೆ ವಿವರ ನೀಡಿದರು.
