ಸಂ: ಗೊ. ರು. ಚನ್ನಬಸಪ್ಪ
ವೀರಗಾಸೆ:
‘ವೀರಗಾಸೆ’ ಕುಣಿತದ ಹಿನ್ನಲೆ ಬಗ್ಗೆ ಪ್ರಚಲಿತವಿರುವ ಒಂದು ಪೌರಾಣಿಕ ಪ್ರಸಂಗ ಹೀಗಿದೆ: “ಹಿಂದೆ ದಕ್ಷಬ್ರಹ್ಮನಿಗೂ ಅವನ ಅಳಿಯನಾದ ಈಶ್ವರನಿಗೂ ವೈರತ್ವ ಬಂದು ದಕ್ಷಬ್ರಹ್ಮನು ತಾನು ಮಾಡುವ ಯಾಗಕ್ಕೆ ಈಶ್ವರನನ್ನು ಬಿಟ್ಟು ಉಳಿದ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ಯಜ್ಞದಲ್ಲಿ ಈಶ್ವರನಿಗೆ ನ್ಯಾಯವಾಗಿ ಸಲ್ಲಬೇಕಾದ ಆವಿರ್ಭಾಗವನ್ನು ಕೊಡದೆ ತಿರಸ್ಕರಿಸುತ್ತಾನೆ. ಈಶ್ವರನು ಬೇಡವೆಂದರೂ ತಂದೆ ಮಾಡುವ ಯಾಗದಲ್ಲಿ ಭಾಗವಹಿಸಲು ಪಾರ್ವತಿ ಬರುತ್ತಾಳೆ. ದಕ್ಷಬ್ರಹ್ಮ ಅಳಿಯನ ಮೇಲಿನ ಕೋಪದಿಂದ, ಮಗಳೆಂಬ ಮಮತೆಯನ್ನೂ ತೊರೆದು, ಕಂಡೂ ಕಾಣದಂತೆ ತಿರಸ್ಕಾರವಾಗಿ ಕಾಣುತ್ತಾನೆ. ಅವಳೆದುರಿಗೆ ಈಶ್ವರನನ್ನು ನಿಂದಿಸುತ್ತಾನೆ. ಇದನ್ನು ಕೇಳಿದ ಪಾರ್ವತಿ ಸಹಿಸಲಾಗದೆ, ಪತಿನಿಂದೆಯನ್ನು ಹೊತ್ತು ಕೈಲಾಸಕ್ಕೆ ಹಿಂದಿರುಗಲಾಗದೆ “ಅಗ್ನಿಕೊಂಡ ಹಾಳಾಗಿ ಹೋಗಲಿ, ನಿನ್ನ ಹೆಣ್ಣು ಮಕ್ಕಳು ಮುಂಡೆಯರಾಗಲಿ, ಆಗಸ ತೂಕದ ಚಿನ್ನವಿಲ್ಲದಂತಾಗಲಿ, ಭೂಮಿ ತೂಕದ ಬೆಳ್ಳಿಯಿಲ್ಲದಂತಾಗಲಿ” ಎಂದು ತಂದೆಗೆ ಶಾಪವನ್ನು ಕೊಟ್ಟು ಅಗ್ನಿಕುಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಗ ಇದೆಲ್ಲವನ್ನೂ ಏಕದೃಷ್ಟಿಯಿಂದ ಗಮನಿಸಿದ ಈಶ್ವರನು ಉಗ್ರವಾಗಿ ತಾಂಡವ ನೃತ್ಯವನ್ನು ಮಾಡುವಾಗ ಹಣೆಯ ಮೇಲೆ ಬಂದ ಬೆವರಿನ ಹನಿಗಳನ್ನು ಸೆಳೆದು ತೆಗೆದು ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದಂತಹ ವೀರಭದ್ರನ ಜನನವಾಗುತ್ತದೆ. ಆಗ ಸಪ್ತ ಸಮುದ್ರಗಳು ಬತ್ತಿಹೋದವು. ಹುಟ್ಟಿದ ಮರುಕ್ಷಣದಲ್ಲಿಯೇ ವೀರಭದ್ರನು ಲೋಕವನ್ನೇ ಬಿಲ್ಲು ಮಾಡಿಕೊಂಡು, ಭೂಮಿಯನ್ನೇ ಬಾಣವನ್ನಾಗಿ ಮಾಡಿಕೊಂಡು, ‘ತಂದೆಯೇ ನಮಗೆ ವೈರಿ ಯಾರು?’ ಎಂದು ಕೇಳುತ್ತಾನೆ. ಅದಕ್ಕೆ ಶಿವನು ದಕ್ಷಬ್ರಹ್ಮನೆಂದು ಹೇಳಿ “ಅವನದು ಮುನ್ನೂರ ಅರವತ್ತು ಗಾವುದ ಪಟ್ಟಣ, ಅದಕ್ಕೆ ಮುನ್ನೂರ ಅರವತ್ತು ಬಾಗಿಲು, ಒಂದೊಂದು ಬಾಗಿಲಿಗೂ ಒಬ್ಬೊಬ್ಬ ರಾಕ್ಷಸರು ಕಾವಲಿರುತ್ತಾರೆ. ಆ ರಾಕ್ಷಸರ ಒಂದೊಂದು ತೊಟ್ಟು ರಕ್ತ ಬಿದ್ದರೆ ಒಂದು ಕೋಟಿ ರಾಕ್ಷಸರು ಜನಿಸುತ್ತಾರೆ” ಎಂದು ಹೇಳಿ ಅವನ ಹಿಂದೆಯೇ ಜನಿಸಿದ ಚೌಡೇಶ್ವರಿಯನ್ನು ಸಹಾಯಕ್ಕಾಗಿ ಕಳುಹಿಸಿ ಕೊಡುತ್ತಾನೆ.