ಕರ್ನಾಟಕ ಜನಪದ ಕಲೆಗಳು – ಭಾಗ ೨
Friday, November 11th, 2005ಸಂ: ಗೊ. ರು. ಚನ್ನಬಸಪ್ಪ
ಡೊಳ್ಳು ಕುಣಿತ:
ಜನಪದ ಕಲೆಗಳಲ್ಲಿ `ಗಂಡು ಕಲೆ’ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮೀಸಲಾದ ಕಲೆ. ಒಳ್ಳೆಯ ಮೈ ಕಟ್ಟು ಮತ್ತು ಶಕ್ತಿ ಉಳ್ಳ ಕಲಾವಿದರು ಮಾತ್ರ ಈ ಕಲೆ ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳು ಕುಣಿತ ತನ್ನ ವಿಶಿಷ್ಟವಾದ ಸತ್ವ ಶೈಲಿಗಳಿಂದ ಉಳಿದುಕೊಂಡು ಬಂದಿದೆ.