- ಡಾ| ಎಂ ಚಿದಾನಂದ ಮೂರ್ತಿ
ಸ್ವಾಭಿಮಾನ
ಕನ್ನಡ ಸಂಸ್ಕೃತಿಯ ತಿರುಳನ್ನು ಒಂದೆರಡು ಮಾತುಗಳಲ್ಲಿ ವಿವರಿಸಿ ಎಂದು ಯಾರಾದರೂ ಕೇಳಿದರೆ ಅವರಿಗೆ ನಾನು ಕೊಡುವ ಉತ್ತರ: ``ಸ್ವಾಭಿಮಾನ ಮತ್ತು ಸಮನ್ವಯ". ಸ್ವಾಭಿಮಾನವೆಂದರೆ ತನ್ನ ಬಗ್ಗೆ ಮತ್ತು ತನ್ನತನದ ಬಗ್ಗೆ ಇರುವ ಪೂರ್ಣ ಅರಿವು ಮತ್ತು ವಿಶ್ವಾಸ. ಸ್ವಾಭಿಮಾನವೆಂದರೆ ಅಹಂಕಾರವಲ್ಲ. ಅಹಂಕಾರವು ಬಹುತೇಕ ಸ್ವಾರ್ಥಪರವೂ ಇತರ ಯಾರನ್ನೇ ಗುರುತಿಸದೆ ತನ್ನನ್ನು ಮಾತ್ರ ಎತ್ತಿ ಹಿಡಿದುಕೊಳ್ಳುವ ಸ್ವಪ್ರೇಮವೂ ಆಗಿದ್ದು ಟೊಳ್ಳುತನವನ್ನು ಬೆಳೆಸಿಕೊಂಡಿರುವ ಸ್ವಪ್ರತಿಷ್ಠೆಯ ಪ್ರತೀಕ. ಸ್ವಾಭಿಮಾನಿಯು ಬೆಳೆದ ಮತ್ತು ಬೆಳೆಯುವ ವ್ಯಕ್ತಿಯಾದುದರಿಂದ ಅವನು ಇತರ ವ್ಯಕ್ತಿ ಅಥವಾ ವ್ಯಕ್ತಿಗಳ ದೊಡ್ಡತನವನ್ನು ಗುರುತಿಸಲು ಸಿದ್ಧನಿರುತ್ತಾನೆ. ಸ್ವಾಭಿಮಾನವೆನ್ನುವುದು ಎರಡು ಮುಖಗಳ ನಾಣ್ಯವಿದ್ದಂತೆ - ನಾನು ಇನ್ನೊಬ್ಬನಿಗಿಂತ ಕಡಿಮೆ ಅಲ್ಲವೆಂಬ ನಂಬಿಕೆ ಇರುವಂತೆಯೇ ಇತರರೂ ತನಗಿಂತ ಕಡಮೆ ಇರಲಾರರು ಎಂಬ ನಂಬಿಕೆಯು ಅವನಿಗಿರುತ್ತದೆ. ಅವನು ಎಂದೂ ಇನ್ನೊಬ್ಬರ ನೆರಳಾಗಿರಲು ಬಯಸದೆ ತನ್ನ ವಿಶಿಷ್ಟ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಯತ್ನಿಸುತ್ತಾನೆ. ಯಾವುದೇ ಕ್ಷೇತ್ರದಲ್ಲಾಗಲಿ ಅಂತಹ ಸ್ವಾಭಿಮಾನಿಗಳಿಂದ ಮಾತ್ರವೇ ಮೌಲಿಕ ಕಾರ್ಯಗಳು ನಡೆಯುತ್ತವೆ.

ಕೆಂಪು ಹಾಗೂ ಬಿಳಿ ಬಣ್ಣಗಳೇ ಹೆಚ್ಚು ಬಳಸಲ್ಪಟ್ಟಿರುವ ನಮ್ಮ ದೇಶದ ಬಂಡೆ-ಗುಹಾಶ್ರಯ ಚಿತ್ರಗಳಂತೆ, ಕರ್ನಾಟಕದ ಚಿತ್ರಗಳೂ ಮೂಡಿಬಂದಿವೆ. ಸಾಂಕೇತಿಕ ರೂಪಗಳನ್ನು ಗುಲ್ಬರ್ಗದ ಯಾದಗೀರ್ ಬಳಿಯ ಬಿಳಿಚಕ್ರದ ಎತ್ತರದ ಬೆಟ್ಟದ ತುದಿಯ ಬಂಡೆಯಾಶ್ರಯ, ಆನೆಗೊಂದಿಯ ಚಿತ್ರ ಸಮೂಹಗಳಲ್ಲಿ ಕಾಣಬಹುದು. ಈ ಚಿತ್ರಭಾಷೆಯ ಬಗೆಗೆ ಇಂದಿಗೂ ಆ ಹಳ್ಳಿಗಳ ಜನರಿಗೆ ಕುತೂಹಲವಿದೆ. ಈಗಾಗಲೇ ಹೇಳಿರುವ ಬಹುತೇಕ ಶಿಲಾಶ್ರಯಗಳಲ್ಲಿ ಆದಿಯ ಜನರು (ಕಲಾವಿದರು) ಕಂದು ಅಥವಾ ಕಪ್ಪುಬಣ್ಣದ ಕಬ್ಬಿಣದ ಅದಿರನ್ನು ಬಳಸಿದ್ದಾರೆ. ಮಣ್ಣಿನ ಮೂಲದ ಬಣ್ಣಗಳನ್ನು ದುಡಿಸಿಕೊಂಡಿದ್ದಾರೆ. ನೂತನ ಶಿಲಾಯುಗಕ್ಕಿಂತಲೂ ಸ್ವಲ್ಪ ಹಿಂದಿನ, ಬಾದಾಮಿಯ ಬಳಿಯ ಕುಟಕನ ಕೇರಿ ಹತ್ತಿರದ ಅರೆಗುಡ್ಡ ಮತ್ತು ಹಿರೇಗುಡ್ಡಗಳ ಶಿಲಾಶ್ರಯಗಳಲ್ಲಿನ ಕೆಮ್ಮಣ್ಣು ಬಣ್ಣದ ಚಿತ್ರಗಳಲ್ಲಿ ಮಾನವ ರೂಪಗಳೇ ಹೆಚ್ಚು. ಸಾಮಾನ್ಯ ಕಣ್ಣಿಗೆ ತಟಕ್ಕನೆ ಕಾಣದ, ತರಬೇತಾದ ಕಣ್ಣಿಗೆ ಕಾಣುವ ಈ ಚಿತ್ರಗಳು ಉದ್ದನೆಯ ಮುಂಡ, ಉರುಟಾದ ಕೈಕಾಲುಗಳನ್ನು ಹೊಂದಿವೆ.