– ಡಾ| ಎಂ. ಚಿದಾನಂದ ಮೂರ್ತಿ
ಧರ್ಮ ಸಮನ್ವಯ
ಕರ್ನಾಟಕ ಸಂಸ್ಕೃತಿಯು ತನ್ನ ಬದುಕು, ಸಾಹಿತ್ಯ, ಕಲೆ ಇವುಗಳಲ್ಲಿ ಸಮನ್ವಯವನ್ನು ಸಾಧಿಸಿರುವುದನ್ನು ಹಿಂದಿನ ಪುಟಗಳಲ್ಲಿ ನೋಡಿದ್ದೇವೆ. ಈ ಸಮನ್ವಯವು ಸಂಸ್ಕೃತಿಯ ಇತರ ಶಾಖೆಗಳಲ್ಲಿ ಹೇಗೋ ಅಂತೆಯೇ ಇನ್ನೊಂದು ಪ್ರಮುಖ ಶಾಖೆಯಾದ ಧರ್ಮದಲ್ಲಿಯೂ ಕಾಣಿಸಿಕೊಂಡ ಪರಿಯೂ ಗಮನಾರ್ಹವಾಗಿದೆ. ಕರ್ನಾಟಕ ಹಲವು ವಿಭಿನ್ನ ಧರ್ಮಗಳ, ವಿಭಿನ್ನ ಆಲೋಚನೆಗಳ ನಾಡು; ಸಂತರ ನಾಡು. ಒಂದು ಶಾಸನವು ಕರ್ನಾಟಕವನ್ನು “ಸರ್ವಧರ್ಮಧೇನುನಿವಹಕ್ಕಾಡುಂಬೊಲಂ” ಎಂದು ವರ್ಣಿಸಿದೆ. ಅದು ಎಲ್ಲ ಧರ್ಮಗಳೆಂಬ ಹಸುಗಳು ಆಡುವ ಬಯಲು ಪ್ರದೇಶ ಎಂದು ಕರ್ನಾಟಕವನ್ನು ವರ್ಣಿಸಿರುವುದು ಉಚಿತವಾಗಿದೆ. ಕ್ರಿ. ಪೂ. ಮೂರನೇ ಶತಮಾನದಲ್ಲಿ ಬಂದ ಬೌದ್ಧ ಧರ್ಮದಿಂದ ಏನಿಲ್ಲವೆಂದರೂ ಪರೋಕ್ಷವಾಗಿಯಾದರೂ ಹನ್ನೆರಡನೆಯ ಶತಮಾನದ ಬೆಡಗಿನ ವಚನಗಳು ರೂಪುಗೊಂಡವು. ಕ್ರಿ. ಪೂ. ಎರಡನೇ ಶತಮಾನದಲ್ಲಿ ಕರ್ನಾಟಕಕ್ಕೆ ಬಂದ ಜೈನಧರ್ಮವಂತೂ ಕರ್ನಾಟಕ ಸಂಸ್ಕೃತಿಗೆ ತನ್ನ ಸಾಹಿತ್ಯ, ಬೌದ್ಧಿಕಶಾಸ್ತ್ರಸಾಹಿತ್ಯ, ಶಿಲ್ಪ ವಾಸ್ತುಗಳ ಮೂಲಕ ಅಪೂರ್ವ ಕೊಡುಗೆಗಳನ್ನು ಕೊಟ್ಟಿತು. ವೀರಶೈವ ಧರ್ಮವು ವಚನ ಸಾಹಿತ್ಯದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕರ್ನಾಟಕಕ್ಕೆ ಬಂದ ಶ್ರೀವೈಷ್ಣವ ಧರ್ಮವು ಹಲವು ಸುಂದರ ದೇವಾಲಯಗಳಿಗೆ ಸ್ಫೂರ್ತಿಯನ್ನು ನೀಡಿತು. ಬೌದ್ಧ, ಜೈನ, ಶೈವ, ವೈಷ್ಣವ ಮತಗಳಲ್ಲದೆ ಇನ್ನೂ ಹಲವಾರು ಪಂಥಗಳು ಜಾತಿಗಳು ಕರ್ನಾಟಕದಲ್ಲಿ ಶಾಂತಿ ಸೌಹಾರ್ದಗಳಿಂದ ಬಾಳಿದವು.