ಇ-ಕನ್ನಡವೇ ಸತ್ಯ, ಇ-ಕನ್ನಡವೇ ನಿತ್ಯ
Sunday, November 4th, 2007ಆಡಳಿತದ ಕ್ಷಮತೆಯನ್ನು ಹೆಚ್ಚಿಸುವುದಕ್ಕೆ, ಅಧಿಕಾರಿಗಳಲ್ಲಿ ಉತ್ತರದಾಯಿತ್ವವನ್ನು ಖಾತರಿ ಪಡಿಸುವುದಕ್ಕೆ, ಕೆಂಪು ಪಟ್ಟಿಯನ್ನು ತಪ್ಪಿಸುವುದಕ್ಕೆ…ಹೀಗೆ ಆಡಳಿತದಲ್ಲಿ ಕಾಣಿಸಿಕೊಳ್ಳಬಹುದಾದ ಎಲ್ಲಾ ಸಮಸ್ಯೆಗಳಿಗೂ ಸದ್ಯಕ್ಕೆ ಕಂಡುಕೊಂಡಿರುವ ಪರಿಹಾರ ಇ-ಆಡಳಿತ. ಅಥವಾ ವಿದ್ಯುನ್ಮಾನ ಆಡಳಿತ. ವಿದ್ಯುನ್ಮಾನ ಆಡಳಿತಕ್ಕೆ ಒತ್ತುಕೊಟ್ಟು ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುತ್ತಿರುವ ಭಾರತದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ. ರೈತನ ಭೂಮಿ ದಾಖಲೆಗಳನ್ನೆಲ್ಲಾ ಕಂಪ್ಯೂಟರೀಕರಿಸಲಾಗಿದೆ. ನಕ್ಷೆಗಳನ್ನು ಕಂಪ್ಯೂಟರೀಕರಿಸುವ ಕ್ರಿಯೆ ನಡೆಯುತ್ತಿದೆ. ಬ್ಯಾಂಕುಗಳಂತೂ ಹೆಚ್ಚು ಕಡಿಮೆ ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಂಡಿವೆ. ಈಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಅದರ ಸಹೋದರ ಸಂಸ್ಥೆಗಳೆಲ್ಲವೂ ಕಂಪ್ಯೂಟರೀಕರಣಗೊಂಡಿವೆ. ನಿರ್ವಾಹಕರು ಅಂಗೈಯಲ್ಲೇ ಇರುವ ಯಂತ್ರವನ್ನು ಬಳಸಿ ಟಿಕೇಟು ಕೊಡುತ್ತಾರೆ. ಮನೆ ಮನೆಗೆ ಬಂದು ವಿದ್ಯುತ್ ಬಳಕೆಯ ಮೀಟರ್ ಓದುವವರೂ ಈಗ ತಮ್ಮಲ್ಲಿರುವ ಅಂಗೈಯಗಲದ ಯಂತ್ರದಿಂದಲೇ ಬಿಲ್ ಮುದ್ರಿಸಿ ಕೊಡುತ್ತಾರೆ. ಹಾದಿ-ಬೀದಿಗೆ ಒಂದರಂತೆ ವಿವಿಧ ಬ್ಯಾಂಕ್‌ಗಳ ಎಟಿಎಂಗಳಿವೆ. ಮಧ್ಯಮ ವರ್ಗದ ಮನೆಯ ಪ್ರತೀ ಸದಸ್ಯರ ಬಳಿಯೂ ಒಂದು ಮೊಬೈಲ್ ಇದೆ. ಒಂದು ಕಾಲದಲ್ಲಿ ಟಿ.ವಿ. ಖರೀದಿಸಿದಂತೆ ಈಗ ಜನರು ಕಂಪ್ಯೂಟರ್ ಖರೀದಿಸುತ್ತಿ್ದಾರೆ. ಇದರ ಪರಿಣಾಮವಾಗಿ ಸಂವಹನ, ಸಂಪರ್ಕ, ಆಡಳಿತದ ಕ್ಷಮತೆ ಎಲ್ಲವೂ ಹೆಚ್ಚಿವೆ. ಆದರೆ ಕಡಿಮೆಯಾಗಿರುವುದು ಕನ್ನಡ ಮಾತ್ರ. ಹಿಂದಿನ ಪೂರ್ವ ಮುದ್ರಿತ ಬಸ್ ಟಿಕೇಟುಗಳಲ್ಲಿ ಕನ್ನಡ ಕಾಣಿಸುತ್ತಿತ್ತು. ಈಗಿನ ತಂತ್ರಜ್ಞಾನ ಸ್ಥಳದಲ್ಲೇ ಮುದ್ರಿಸುವ ಟಿಕೇಟಿನಲ್ಲಿ ಕನ್ನಡ ಸುಳಿವೇ ಇಲ್ಲ. ವಿದ್ಯುತ್ ಬಿಲ್‌ನಲ್ಲೂ ಅಷ್ಟೇ. ಬರೇ ರೋಮನ್ ಅಕ್ಷರಗಳು, ಇಂಗ್ಲಿಷ್ ಭಾಷೆ. ಹೆಚ್ಚಿನ ಎಟಿಎಂಗಳಲ್ಲಿ ಇಂಗ್ಲಿಷ್‌ಗಷ್ಟೇ ಮಣೆ. ಎಸ್‌ಎಂಎಸ್ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಯಾರಿಗಾದರೂ ತಿಳಿಸಬೇಕೆಂದರೆ ಅದನ್ನೂ ರೋಮನ್ ಅಕ್ಷರಗಳಲ್ಲಿ ಟೈಪಿಸಿದರಷ್ಟೇ ಎಲ್ಲರಿಗೂ ಓದಲು ಸಾಧ್ಯ ಎಂಬ ಸ್ಥಿತಿ ನಮ್ಮದು.