Press "Enter" to skip to content

ಸಾಲ ನೀಡುವ ಆಪ್‌ಗಳ ಜಾಲಕ್ಕೆ ಬೀಳದಿರಿ

ಯಾವುದೇ ಕಿರುತಂತ್ರಾಂಶ (ಆಪ್) ತೆರೆದರೂ ಇದ್ದಕ್ಕಿದ್ದಂತೆ ಯಾವುದೋ ಸಾಲ ನೀಡುವ ಕಿರುತಂತ್ರಾಂಶದ ಜಾಹೀರಾತು ಕಂಡುಬರುವುದನ್ನು ನೀವು ಗಮನಿಸಿದ್ದೀರಾ? ಬಹಳ ಆಕರ್ಷಕ ಭಾಷೆಯಲ್ಲಿ ಅವು ಸೆಳೆಯುತ್ತವೆ. ಒಂದು ಜಾಹೀರಾತು ನಾನು ಗಮನಿಸಿದ್ದು ಹೀಗಿತ್ತು – ಈ ಜಾಹೀರಾತನ್ನು ಸ್ಕಿಪ್ ಮಾಡಲು ಪ್ರಯತ್ನಿಸುತ್ತಿದ್ದೀರಾ? ಅದು ಸಾಧ್ಯವಿಲ್ಲ. ಆದರೆ ಸಾಲಕ್ಕಾಗಿ ಓಡಾಡುವುದನ್ನು ಸ್ಕಿಪ್ ಮಾಡಬಹುದು. ಅದಕ್ಕಾಗಿ ಈ ಆಪ್ ಅನ್ನು ಇನ್‌ಸ್ಟಾಲ್ ಮಾಡಿ – ಎಂದು ಅದು ಹೇಳುತ್ತಿತ್ತು. ನಿಮ್ಮ ಆಸ್ತಿ, ಸಂಪಾದನೆ ಬಗ್ಗೆ ಹೆಚ್ಚಿಗೆ ದಾಖಲೆಗಳನ್ನು ಕೇಳದೆ ಸಾಲ ನೀಡುವ ಹಲವು ಕಿರುತಂತ್ರಾಂಶಗಳು (app) ಹುಟ್ಟಿಕೊಂಡಿವೆ. ಇವುಗಳ ಬಗ್ಗೆ ಸ್ವಲ್ಪ ತಿಳಿಯೋಣ.

ಕೋವಿಡ್-19 ನಿಂದಾಗಿ ಹಲವು ಮಂದಿ ಹಲವು ತಿಂಗಳುಗಳ ಕಾಲ ಸಂಪಾದನೆ ಇಲ್ಲದೆ ತೊಂದರೆಗೀಡಾದರು. ಇಂತಹವರು ಈ ರೀತಿಯ ಕಿರುತಂತ್ರಾಂಶಗಳಿಗೆ ಸುಲಭದಲ್ಲಿ ಬಲಿಯಾಗುವವರು. ಬಲಿಯಾಗುವವರು ಎಂಬ ಪದ ಯಾಕೆ ಬಳಸಿದೆ?

ಬಂಗಾರದ ಮನುಷ್ಯ ಸಿನಿಮಾದ “ಹನಿ ಹನಿಗೂಡಿದ್ರೆ ಹಳ್ಳ” ಎಂಬ ಹಾಡಿನಲ್ಲಿ “ಸಾಲ ಕೊಟ್ಟು ಶೂಲ ಹಾಕುತಾರೆ” ಎಂಬ ಸಾಲಿದೆ. ಹಿಂದಿನ ಕಾಲದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಇಂತಹ ಸಾಹುಕಾರರು ಇರುತ್ತಿದ್ದರು. ಹಣದ ಅಗತ್ಯವಿರುವವರಿಗೆ ಅಧಿಕ ಬಡ್ಡಿಯಲ್ಲಿ ಸಾಲ ನೀಡಿ ನಂತರ ಅವರ ಆಸ್ತಿಯನ್ನೇ ಬರೆಸಿಕೊಳ್ಳುತ್ತಿದ್ದರು. ಈಗಿನ ಡಿಜಿಟಲ್ ಯುಗದಲ್ಲಿ ಈ ಸುಲಭದಲ್ಲಿ ಸಾಲ ನೀಡುವ ಕಿರುತಂತ್ರಾಂಶಗಳೂ ಸ್ವಲ್ಪ ಆ ರೀತಿಯವೇ. ಅವು ಎಲ್ಲಿಂದ ಬಂದವು ಮತ್ತು ಹೇಗೆ ಕೆಲಸ ಮಾಡುತ್ತವೆ ಎಂದು ನೋಡೋಣ.

ಎಲ್ಲ ಪೋಕರಿ ತಂತ್ರಜ್ಞಾನದಂತೆ ಇವು ಕೂಡ ಚೈನಾ ದೇಶದಿಂದ ಬಂದವು. ಈ ಸಾಲ ನೀಡುವ ಕಿರುತಂತ್ರಾಂಶಗಳು ನೂರಾರಿದ್ದರೂ ಬಹುತೇಕ ಎಲ್ಲ ಕಿರುತಂತ್ರಾಂಶಗಳ ಮೂಲ ವಿನ್ಯಾಸ ಮತ್ತು ಅವು ಕೆಲಸ ಮಾಡುವ ವಿಧಾನ ಒಂದೇ ಆಗಿವೆ. ಚೈನಾ ದೇಶದ ಯಾವುದೋ ಕಂಪೆನಿ ಭಾರತದಲ್ಲಿ ಯಾವುದೋ ಏಜೆನ್ಸಿ ಮೂಲಕ ತನ್ನ ಶಾಖೆ ತೆರೆಯುತ್ತದೆ. ಅದಕ್ಕಾಗಿ 2-3 ಮಂದಿಯನ್ನು ನೇಮಿಸಿಕೊಳ್ಳುತ್ತದೆ. ಅವರು ಒಂದು ಕಂಪೆನಿ ನೋಂದಾಯಿಸುತ್ತಾರೆ. ಚೈನಾದವರು ನೀಡಿದ ಕಿರುತಂತ್ರಾಂಶದ ಆಕರವನ್ನು ಬಳಸಿ ಸ್ವಲ್ಪ ಬದಲಾವಣೆ ಮಾಡಿ ತಮ್ಮದೇ ಕಿರುತಂತ್ರಾಂಶ ತಯಾರಿಸಿ ಗೂಗ್ಲ್ ಪ್ಲೇ ಸ್ಟೋರಿನಲ್ಲಿ ಸೇರಿಸುತ್ತಾರೆ. ನಂತರ ಹಲವು ಕಡೆ ಈ ಕಿರುತಂತ್ರಾಂಶದ ಜಾಹೀರಾತುಗಳನ್ನು ಹಾಕುತ್ತಾರೆ. ಅಲ್ಲಿಂದ ದಂಧೆ ಪ್ರಾರಂಭ.

ಈ ಕಿರುತಂತ್ರಾಂಶಗಳು ಇತರೆ ಬ್ಯಾಂಕುಗಳಂತೆ  ಹಲವು ದಾಖಲೆಗಳನ್ನು ಕೇಳುವುದಿಲ್ಲ. ನಿಮ್ಮ ಆಧಾರ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮಾತ್ರ. ಇವು ನೀಡುವ ಸಾಲದ ಮೊತ್ತವೂ ಕಡಿಮೆ. ಕೇವಲ ಸಾವಿರದಿಂದ ಹಿಡಿದು 20-30 ಸಾವಿರ,  ಕೆಲವು 5 ಲಕ್ಷದ ವರೆಗೂ ನೀಡುತ್ತವೆ. ಈ ಕಿರುತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವಾಗ ಅವು ನಿಮ್ಮ ಫೋನ್‌ಬುಕ್‌, ಫೋಟೋ, ಎಸ್‌ಎಂಎಸ್, ಇತ್ಯಾದಿಗಳನ್ನು ಬಳಸಲು ಅನುಮತಿ ಕೇಳುತ್ತವೆ. ಅನುಮತಿ ನೀಡದಿದ್ದಲ್ಲಿ ಅವು ಮುಂದೆಯೇ ಹೋಗುವುದಿಲ್ಲ. ಇವು ನೀಡುವ ಸಾಲಕ್ಕೆ ಅತ್ಯಧಿಕ ಬಡ್ಡಿ ಇರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಸಾಲದ ಮೊತ್ತ 3000 ಎಂದಿದ್ದರೂ ಆರಂಭದ ಫೀಸ್, ಅರ್ಜಿಯ ಪ್ರೋಸೆಸಿಂಗ್ ಫೀ ಎಂದೆಲ್ಲ ಹೇಳಿ ಸುಮಾರು 1000-1200 ರ ತನಕವೂ ಕಡಿತ ಮಾಡುತ್ತಾರೆ. ಅಂದರೆ ನಿಮಗೆ ಕೇವಲ 1800-2000 ನೀಡಿ 3000 ನೀಡಿದ್ದೇವೆ ಎಂದು ದಾಖಲಿಸುತ್ತಾರೆ. ಸಾಲದ ಅಸಲು ಮತ್ತು ಬಡ್ಡಿ ವಾಪಾಸು ಕೊಡುವ ಸಮಯ ಬಂದಾಗ ಅವರು ಹೇಳಿದಷ್ಟು ಹಣ ವಾಪಾಸು ನೀಡದಿದ್ದಲ್ಲಿ ಪೀಡಿಸಲು ಪ್ರಾರಂಭಿಸುತ್ತಾರೆ.

ಮೊದಲಿಗೆ ಫೋನ್ ಕರೆಗಳು ಬರುತ್ತವೆ. ಫೋನಿನಲ್ಲಿ ಕೆಟ್ಟ ಭಾಷೆಯಲ್ಲಿ ಬೈಯುತ್ತಾರೆ. ಬೆಂಗಳೂರಿನಲ್ಲಿ ಈ ರೀತಿ ಕೆಟ್ಟದಾಗಿ ಬೈಯಲೆಂದೇ ಕೆಲವು ಕಾಲ್‌ಸೆಂಟರುಗಳು ಹುಟ್ಟಿಕೊಂಡಿವೆ ಎಂದರೆ ನಂಬುತ್ತೀರಾ? ನಿಮ್ಮ ಫೋನಿನಲ್ಲಿರುವ ಸ್ನೇಹಿತರ ವಿಳಾಸವನ್ನು ಪಡೆದುಕೊಂಡಿರುತ್ತಾರೆ ತಾನೆ? ಅವರುಗಳಿಗೆಲ್ಲ ಎಸ್‌ಎಂಎಸ್ ಸಂದೇಶ ಹೋಗಲು ಪ್ರಾರಂಭವಾಗುತ್ತದೆ. ನಿಮ್ಮ ಸ್ನೇಹಿತ ಹಣ ತೆಗೆದುಕೊಂಡು ವಾಪಾಸು ನೀಡಿಲ್ಲ, ಅವನು ಕೆಟ್ಟವನು, ಅವನಿಂದ ದೂರವಿರಿ ಎಂಬೆಲ್ಲ ಸಂದೇಶಗಳು ಹೋಗುತ್ತವೆ. ಕೆಲವೊಮ್ಮೆ ನಿಮ್ಮ ಫೋಟೋವನ್ನು ಎಡಿಟ್ ಮಾಡಿ ನಿಮ್ಮ ಮುಖಕ್ಕೆ ಯಾವುದೋ ನಗ್ನ ದೇಹ ಅಥವಾ ಲೈಂಗಿಕ ಕ್ರಿಯೆಯ ಫೋಟೋ ಸೇರಿಸಿ ನಿಮ್ಮ ಸ್ನೇಹಿತರುಗಳಿಗೆ ಕಳುಹಿಸುತ್ತಾರೆ. ಮಾನಕ್ಕೆ ಅಂಜಿ ನೀವು ಅವರು ಹೇಳಿದಷ್ಟು ಹಣ ನೀಡಿ ಹೊರಬರುತ್ತೀರಿ. ಹೀಗೆ ಹಲವರಿಂದ ಹಣ ಸಂಪಾದಿಸಿದರೆ ಒಟ್ಟು ಮೊತ್ತ ತುಂಬ ದೊಡ್ಡದಾಗಿರುತ್ತೆ ತಾನೆ? ಈ ಹಣ ಎಲ್ಲ ಇಂಡೋನೀಶಿಯಾ ಮೂಲಕ ಚೈನಾ ದೇಶಕ್ಕೆ ಹೋಗುತ್ತದೆ.

ಈ ಕಂಪೆನಿಗಳು ಕಾನೂನು ಪ್ರಕಾರ ಕೆಲಸ ಮಾಡುತ್ತಿವೆಯೇ? ಇಲ್ಲ. ಹಾಗಿದ್ದರೆ ರಿಸರ್ವ್ ಬ್ಯಾಂಕ್ ಏನು ಮಾಡುತ್ತಿದೆ? ಮೊದಲಿಗೆ ಎಂದಿನಂತೆ ನಿದ್ರೆ ಮಾಡುತ್ತಿತ್ತು. ಕೊನೆಗೂ ಎಚ್ಚೆತ್ತುಕೊಂಡು ಇವುಗಳ ಮೇಲೆ ಕ್ರಮ ಕೈಗೊಳ್ಳಲು ಪ್ರಾರಂಭಿಸಿತು. ಪೋಲೀಸರ ಕೇಂದ್ರ ಅಪರಾಧ ವಿಭಾಗದವರು ಇಂತಹ ಕಂಪೆನಿಗಳ ಹಿಂದೆ ಬಿದ್ದು ಹಲವರನ್ನು ಬಂಧಿಸಿದ್ದಾರೆ. ಜಾರಿ ನಿರ್ದೇಶನಾಲಯವೂ ಇವುಗಳ ಜನ್ಮ ಜಾಲಾಡತೊಡಗಿದವು. ಕಳೆದ ವರ್ಷದ ಮೇ ತಿಂಗಳಿನಲ್ಲಿ ಬೇರೆ ಬೇರೆ ಬ್ಯಾಂಕುಗಳಲ್ಲಿದ್ದ ಇಂತಹ ಕೆಲವು ಕಂಪೆನಿಗಳ ಒಟ್ಟು 76.67 ಕೋಟಿ ರೂ.ಗಳನ್ನು ಜಫ್ತಿ ಮಾಡಿತು. ಈ ಚೈನಾ ಮೂಲದ ಕಂಪೆನಿಗಳು ಭಾರತದಿಂದ ಒಟ್ಟು ಸುಮಾರು 21,000 ಕೋಟಿ ರೂ.ಗಳನ್ನು ನುಂಗಿಹಾಕಿವೆ ಎಂದು ಅಂದಾಜು ಮಾಡಲಾಗಿದೆ.

ಈ ರೀತಿಯ ದುರ್ವ್ಯವಹಾರ ಮಾತ್ರವಲ್ಲ. ಇತರೆ ಯಾವುದೇ ರೀತಿಯಲ್ಲಿ ಹಣಕಾಸಿನ ಮೋಸ, ವಂಚನೆಗಳು ನಿಮಗೆ ಕಂಡುಬಂದಲ್ಲಿ ಅಥವಾ ಇಲ್ಲಿ ಇಂತಹ ಏನೋ ಮೋಸ ನಡೆಯುತ್ತಿದೆ ಎಂಬ ಅನುಮಾನ ಬಂದಲ್ಲಿ ರಿಸರ್ವ್ ಬ್ಯಾಂಕಿನವರು ಇಂತಹವುಗಳನ್ನು ವರದಿ ಮಾಡಲೆಂದೇ ತಯಾರಿಸಿದ sachet.rbi.org.in ಜಾಲತಾಣದಲ್ಲಿ ನಿಮ್ಮ ದೂರನ್ನು ದಾಖಲಿಸಬಹುದು.

ಡಾ| ಯು.ಬಿ. ಪವನಜ

gadgetloka @ gmail . com

Be First to Comment

Leave a Reply

Your email address will not be published. Required fields are marked *