ಅಂತರಜಾಲದಲ್ಲಿ ಸೈಬರ್ ಯುದ್ಧ
ದೇಶ ದೇಶಗಳ ನಡುವೆ ಯುದ್ಧ ನಡೆಯುವಾಗ ಅವುಗಳ ನಡುವಿನ ಯುದ್ಧ ಕೇವಲ ಮಿಲಿಟರಿಗೆ ಮಾತ್ರ ಸೀಮಿತವಾಗಿರಬೇಕಾಗಿಲ್ಲ. ಈಗಿನ ಕಾಲದಲ್ಲಿ ಯುದ್ಧ ಹಲವು ಮಜಲುಗಳಲ್ಲಿ ನಡೆಯುತ್ತದೆ. ಅವುಗಳಲ್ಲಿ ಆರ್ಥಿಕ, ನೀರು, ಜೈವಿಕ ಇತ್ಯಾದಿಗಳ ಜೊತೆ ಅಂತರಜಾಲವೂ ಸೇರಿದೆ. ರಷ್ಯಾದ ಸೈನ್ಯವು ಹೇಗೆ ಯು(ಉ)ಕ್ರೇನ್‌ನ ಪೂರ್ವಭಾಗದಲ್ಲಿ ಅಂತರಜಾಲ ಸಂಪರ್ಕವನ್ನು ಹೇಗೆ ಹಾಳುಗೆಡವಿತು ಎಂಬುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೆವು. ಈಗ ನಾವು ಜೀವಿಸುತ್ತಿರುವುದು ಡಿಜಿಟಲ್ ಅರ್ಥಾತ್ ತಂತ್ರಜ್ಞಾನ ಯುಗದಲ್ಲಿ. ಅಂದ ಮೇಲೆ ಯುದ್ಧವು ಈ ಕ್ಷೇತ್ರದಲ್ಲೂ ನಡೆಯಬೇಕಲ್ಲವೇ? ಹೌದು. ಅದು ನಡೆಯುತ್ತಿದೆ. ಈ ಸಂಚಿಕೆಯಲ್ಲಿ ಅದರ ಬಗ್ಗೆ ಸ್ವಲ್ಪ ತಿಳಿಯೋಣ.
ಡಿಜಿಟಲ್ ಪ್ರಪಂಚದಲ್ಲಿ ನಡೆಯುವ ಯುದ್ಧಕ್ಕೆ ಸೈಬರ್‌ವಾರ್ ಎಂಬ ಹೆಸರಿದೆ. ಇದರಲ್ಲಿ ಮುಖ್ಯವಾಗಿ ಜಾಲಗಳಿಗೆ ಜೋಡಿಸಲ್ಪಟ್ಟ ಗಣಕಗಳಿಗೆ ದಾಳಿ ಮಾಡಿ ಅವುಗಳನ್ನು ಕೆಡಿಸಲಾಗುತ್ತದೆ. ಗಣಕಗಳಿಗೆ ಮತ್ತು ಗಣಕಜಾಲಗಳಿಗೆ ದಾಳಿ ಮಾಡಿ ಅವುಗಳನ್ನು ಕೆಡಿಸುವದಕ್ಕೆ ಹಲವು ಹೆಸರುಗಳಿವೆ. ಸರಳವಾಗಿ ಇದಕ್ಕೆ ಹ್ಯಾಕಿಂಗ್ ಎಂದೂ ಹೇಳುತ್ತಾರೆ. ಹಾಗಿದ್ದರೆ ಹ್ಯಾಕಿಂಗ್‌ಗೂ ಸೈಬರ್ ಯುದ್ಧಕ್ಕೂ ಏನು ವ್ಯತ್ಯಾಸ? ಈ ಬಗ್ಗೆ ತಜ್ಞರಲ್ಲಿ ಒಮ್ಮತವಿಲ್ಲ. ಆದರೂ ಬಹುತೇಕ ಜನರು ಒಪ್ಪಿಕೊಂಡುದು ಏನೆಂದರೆ ಯಾವುದಾದರೂ ಓರ್ವ ವ್ಯಕ್ತಿ ಅಥವಾ ಕಿಡಿಗೇಡಿಗಳ ತಂಡ ಗಣಕದೊಳಗೆ ನುಗ್ಗಿದರೆ ಅದು ಹ್ಯಾಕಿಂಗ್. ಇದರಲ್ಲಿ ಎಲ್ಲ ಸಲ ದಾಳಿಯಾದ ಗಣಕಕ್ಕೆ ಹಾನಿಯಾಗಲೇ ಬೇಕಿಲ್ಲ. ಕೆಲವೊಮ್ಮೆ ಮಾಹಿತಿಯ ಕಳ್ಳತನ ಮಾತ್ರ ಆಗುತ್ತದೆ. ಆದರೆ ಒಂದು ದೇಶವೇ ತನ್ನ ತಜ್ಞರನ್ನು ಬಳಸಿ ಇನ್ನೊಂದು ದೇಶದ ಗಣಕಜಾಲಕ್ಕೆ ದಾಳಿ ಇಟ್ಟು ಅದನ್ನು ಕೆಡಿಸಿದರೆ ಅದನ್ನು ಸೈಬರ್‌ಯುದ್ಧ ಎನ್ನಬಹುದು. ಕೆಲವು ಸಲ ದೇಶವು ಅಧಿಕೃತವಾಗಿ ಈ ಯುದ್ಧ ಮಾಡುವುದಿಲ್ಲ. ಬದಲಿಗೆ ತನ್ನ ದೇಶದ ಕೆಲವು ಸಂಘಟಣೆಗಳ ಮೂಲಕ ಮಾಡಿಸಬಹುದು. ಅಮೆರಿಕ, ರಷ್ಯ, ಕೊರಿಯ, ಚೈನಾ ಸೇರಿ ಬಹುತೇಕ ದೇಶಗಳು ಈ ರೀತಿಯ ದಾಳಿ ನಡೆಸಲು ಹಾಗೂ ಇಂತಹ ದಾಳಿಗಳನ್ನು ಎದುರಿಸಲು ಬೇಕಾದ ಪರಿಣತಿಯನ್ನು ಬೆಳೆಸಿಕೊಂಡಿವೆ. ಆದರೂ ಈ ರೀತಿಯ ಯುದ್ಧಗಳು ಹಾಗೂ ಅದರ ದುಷ್ಪರಿಣಾಮಗಳು ನಡೆಯುತ್ತಲೇ ಇವೆ.
ಫೆಬ್ರವರಿ 24, 2022 ರಂದು ರಷ್ಯಾ ದೇಶವು ಯುಕ್ರೇನ್ ದೇಶದ ಮೇಲೆ ದಾಳಿ ಪ್ರಾರಂಭಿಸಿತು. ಫೆಬ್ರವರಿ ಕೊನೆಯ ವಾರದಲ್ಲಿ ರಷ್ಯಾ ದೇಶದ ಹಲವು ಜಾಲತಾಣಗಳನ್ನು ಹ್ಯಾಕರ್‌ಗಳು ಧಾಳಿ ಮಾಡಿ ಕೆಡಿಸಿದರು. ಈ ಧಾಳಿಯು ರಷ್ಯಾ ದೇಶದ ಸರಕಾರಿ ಜಾಲತಾಣಗಳ ಮೇಲೆ ನಡೆದಿತ್ತು. ರಷ್ಯಾದ ಸರಕಾರಿ ಟೆಲಿವಿಶನ್ ಜಾಲ, ಸರಕಾರದ ಅಧಿಕೃತ ಜಾಲತಾಣ, ಸರಕಾರದ ಒಡೆತನದಲ್ಲಿರುವ ಎಣ್ಣೆ ಕಂಪೆನಿಯ ಜಾಲತಾಣಗಳೆಲ್ಲ ಈ ಧಾಳಿಯಿಂದ ಹಾನಿಗೊಳಗಾದವು.
ಇದಕ್ಕೂ ಮೊದಲು ಇದೇ ನಮೂನೆಯ ಧಾಳಿಗಳು ಯುಕ್ರೇನ್ ದೇಶದ ಜಾಲತಾಣಗಳ ಮೇಲೆ ನಡೆದಿದ್ದವು. ಸರಕಾರದ ಜಾಲತಾಣಗಳು, ಸರಕಾರದ ಒಡೆತನದಲ್ಲಿರುವ ಕಂಪೆನಿಗಳ ಜಾಲತಾಣಗಳು ಈ ಧಾಳಿಗಳ ಗುರಿಯಾಗಿದ್ದವು. ರಷ್ಯಾದ ಜಾಲತಾಣಗಳ ಮೇಲೆ ನಡೆದ ಧಾಳಿಯನ್ನು ತಾನು ನಡೆಸಿದ್ದು ಎಂದು ಯುಕ್ರೇನ್ ಹೇಳಿಕೊಂಡಿಲ್ಲ. ಅಂತೆಯೇ ಯುಕ್ರೇನ್‌ನ ಜಾಲತಾಣಗಳ ಮೇಲೆ ನಡೆದ ಧಾಳಿಯನ್ನು ನಾನು ನಡೆಸಿದ್ದು ಎಂದು ರಷ್ಯಾ ಹೇಳಿಕೊಂಡಿಲ್ಲ.
ರಷ್ಯಾ ದೇಶವು ಯುಕ್ರೇನ್ ಮೇಲೆ ಧಾಳಿ ನಡೆಸಿದ್ದಕ್ಕೆ ಪ್ರತಿಭಟನೆಯಾಗಿ ಹಲವು ಬಹುರಾಷ್ಟ್ರೀಯ ಕಂಪೆನಿಗಳು ರಷ್ಯಾದ ದೇಶದಿಂದ ಹೊರಗೆ ಬರುತ್ತಿವೆ. ಇದರಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳೂ ಇವೆ. ಈ ಕ್ಷೇತ್ರದ ಕೆಲವು ದಿಗ್ಗಜಗಳಾದ ಆಪಲ್, ಅಡೋಬಿ, ಇಂಟೆಲ್, ಇತ್ಯಾದಿಗಳೆಲ್ಲ ಈ ಪಟ್ಟಿಯಲ್ಲಿವೆ. ಇದು ಇನ್ನೊಂದು ನಮೂನೆಯ ಡಿಜಿಟಲ್ ಯುದ್ಧವೆನ್ನಬಹುದು.
ಅಮೆರಿಕ ದೇಶವು ವಿಯೆಟ್ನಾಂ, ಕುವೈತ್, ಇರಾಕ್, ಅಫಘಾನಿಸ್ತಾನಗಳಲ್ಲಿ ಯುದ್ಧ ನಡೆಸಿದ್ದು ಎಲ್ಲರಿಗೂ ಗೊತ್ತಿದೆ. ಅವುಗಳನ್ನು ಅನ್ಯಾಯದ ಆಕ್ರಮಣ ಎಂದು ಬಹುತೇಕ ಪಾಶ್ಚಿಮಾತ್ಯ ಮಾಧ್ಯಮಗಳು ಬಿಂಬಿಸಲಿಲ್ಲ. ಆದರೆ ಯುಕ್ರೇನ್ ಮೇಲೆ ರಷ್ಯಾ ಮಾಡಿದ ಧಾಳಿಯಲ್ಲಿ ರಷ್ಯಾವನ್ನು ಕೆಟ್ಟದಾಗಿ ವಿಲನ್ ಆಗಿ ಇದೇ ಮಾಧ್ಯಮಗಳು ರೂಪಿಸಿವೆ. ಇವುಗಳು ರಷ್ಯಾವನ್ನು ತುಂಬ ಕೆಟ್ಟದಾಗಿ ತಮ್ಮ ಮಾಧ್ಯಮಗಳಲ್ಲಿ ಬಿಂಬಿಸಿವೆ. ಇವುಗಳು ತಯಾರಿಸಿದ ಈ ರೂಪಕಗಳನ್ನು ಅವು ತಮ್ಮ ತಮ್ಮ ಮಾಧ್ಯಮಗಳಲ್ಲಿ ಪ್ರಕಾಶಪಡಿಸಿವೆ. ಈ ಹೇಳಿಕೆಗಳು ವಿಕಿಪೀಡಿಯಕ್ಕೂ ಕಾಲಿಟ್ಟಿವೆ. ವಿಕಿಪೀಡಿಯ ಎಂದರೆ ಜನರಿಂದ ಜನರಿಗಾಗಿ ಜನರೇ ನಡೆಸುವ ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶ. ಇದಕ್ಕೆ ಯಾರೂ ಲೇಖನ ಸೇರಿಸಬಹುದು ಹಾಗೂ ಇರುವ ಲೇಖನಗಳನ್ನು ತಿದ್ದಬಹುದು. ಆದರೆ ಇದನ್ನು ನಿಯಂತ್ರಿಸಲು ಕೆಲವು ನಿರ್ವಾಹಕರು ಇದ್ದಾರೆ. ಇವರೂ ಸ್ವಯಂಸೇವಕರೇ. ಇವರು ಇಂತಹ ಸಂದರ್ಭಗಳಲ್ಲಿ ರಷ್ಯಾ ಪರ-ವಿರೋಧದ ಲೇಖನಗಳನ್ನು ನಿಯಂತ್ರಿಸುತ್ತಾರೆ. ವಿಕಿಪೀಡಿಯದಲ್ಲಿ ಈ ರಷ್ಯಾ-ಯುಕ್ರೇನ್ ತಿಕ್ಕಾಟದ ವಿಷಯದಲ್ಲಿ ತಟಸ್ಥವಾಗಿರಬೇಕಾಗಿದ್ದ ವಿಕಿಪೀಡಿಯದ ಲೇಖನಗಳು ಕೆಲಮಟ್ಟಿಗೆ ರಷ್ಯಾ ವಿರೋಧಿಯಾಗಿವೆ ಎನ್ನಬಹುದು. ಈ ಲೇಖನಗಳನ್ನು ಎಲ್ಲರೂ ಸಂಪಾದಿಸಿ ಬದಲಿಸದಂತೆ ಸಂರಕ್ಷಿಸಲಾಗಿದೆ. ಕೆಲವೇ ನಿರ್ವಾಹಕರು ಮಾತ್ರ ಈ ಲೇಖನಗಳನ್ನು ಸಂಪಾದಿಸಬಹದಾಗಿದೆ.
ವಿಕಿಪೀಡಿಯವು ಪ್ರಪಂಚದ 300ಕ್ಕೂ ಹೆಚ್ಚಿನ ಭಾಷೆಗಳಲ್ಲಿವೆ. ರಷ್ಯಾ ಭಾಷೆಯಲ್ಲೂ ಇದೆ. ಇಂಗ್ಲಿಷ್ ವಿಕಿಪೀಡಿಯದಲ್ಲಿ ರಷ್ಯಾ-ಯುಕ್ರೇನ್ ಬಿಕ್ಕಟ್ಟಿನ ಬಗೆಗಿನ ಲೇಖನವನ್ನು ಜಗತ್ತಿನ ಹಲವು ಭಾಷೆಗಳ ವಿಕಿಪೀಡಿಯಗಳಲ್ಲಿ ಅನುವಾದಿಸಿ ಹಾಕಲಾಗಿದೆ. ಹಾಗೆಯೇ ರಷ್ಯನ್ ಭಾಷೆಯ ವಿಕಿಪೀಡಿಯದಲ್ಲೂ ಸೇರಿಸಲಾಗಿದೆ. ತನ್ನ ವಿರೋಧಿಯಾದ ಈ ಲೇಖನವನ್ನು ತೆಗೆಯಬೇಕು ಎಂದು ಸ್ವಾಭಾವಿಕವಾಗಿಯೇ ರಷ್ಯಾ ದೇಶವು ವಿಕಿಪೀಡಿಯವನ್ನು ಕೇಳಿಕೊಂಡಿತು. ಆದರೆ ತಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕ ಎಂದು ಹೇಳಿಕೊಂಡ ವಿಕಿಪೀಡಿಯವು ಅದನ್ನು ತೆಗೆಯಲು ಒಪ್ಪಲಿಲ್ಲ. ರಷ್ಯಾವು ಸದ್ಯ ತನ್ನ ದೇಶದಲ್ಲಿ ವಿಕಿಪೀಡಿಯವನ್ನು ನಿರ್ಬಂಧಿಸಿದೆ. ಹಿಂದೊಮ್ಮೆ ಇದೇ ಮಾದರಿಯಲ್ಲಿ ಟರ್ಕಿ ದೇಶವು ವಿಕಿಪೀಡಿಯವನ್ನು ಸರಿಸುಮಾರು ಒಂದು ವರ್ಷಗಳ ಕಾಲ ನಿರ್ಬಂಧಿಸಿತ್ತು.
ಪ್ರಪಂಚದ ಎಲ್ಲ ಜಾಲತಾಣಗಳ ಉಸ್ತುವಾರಿಯನ್ನು ನೋಡಿಕೊಳ್ಳುವುದು ಐಕಾನ್ (ICANN) ಎಂಬ ಸಂಸ್ಥೆ. ಈ ಬಗ್ಗೆ ಇದೇ ಅಂಕಣದಲ್ಲಿ ಹಿಂದೊಮ್ಮೆ ಬರೆಯಲಾಗಿತ್ತು. ಐಕಾನ್‌ಗೆ ಒಂದು ವಿಚಿತ್ರ ಬೇಡಿಕೆ ಬಂದಿತ್ತು. ಬೇರೆ ಬೇರೆ ದೇಶಗಳ ಜಾಲತಾಣಗಳಿಗೆಂದೇ ಬೇರೆ ಬೇರೆ ಡೊಮೈನ್ ಹೆಸರುಗಳು ಚಾಲ್ತಿಯಲ್ಲಿವೆ. ಉದಾಹರಣೆಗೆ – .in – ಭಾರತ, .uk – ಇಂಗ್ಲೆಂಡ್, .fr – ಫ್ರಾನ್ಸ್, .ru – ರಷ್ಯಾ, ಇತ್ಯಾದಿ. karnataka.gov.in ಎನ್ನುವುದು ಕರ್ನಾಟಕ ಸರಕಾರದ ಅಧಿಕೃತ ಜಾಲತಾಣದ ವಿಳಾಸ. ಹಾಗೆಯೇ .ru ಎಂಬುದು ರಷ್ಯಾದ್ದು. ರಷ್ಯಾ ದೇಶದ ಸರಕಾರದ ಎಲ್ಲ ಅಧಿಕೃತ ಜಾಲತಾಣಗಳ ವಿಳಾಸದ ಕೊನೆಯಲ್ಲಿ .ru ಎಂದಿರುತ್ತದೆ. ಐಕಾನ್‌ಗೆ ಬಂದ ವಿಚಿತ್ರ ಬೇಡಿಕೆಯಲ್ಲಿ .ru ಡೊಮೈನ್ ಅನ್ನು ನಿರ್ಬಂಧಿಸಬೇಕು ಎಂದಿತ್ತು. ಆದರೆ ಐಕಾನ್ ಈ ಬೇಡಿಕೆಗೆ ಬೆಲೆ ಕೊಡಲಿಲ್ಲ.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment