ಟಿಮ್ ಬರ್ನರ್ಸ್-ಲೀ
ನೆಟ್‌ವರ್ಕ್ ಮಾರ್ಕೆಟಿಂಗ್ ಬಗ್ಗೆ ತಿಳಿಯೋಣ ಎಂದು ಅಂತರಜಾಲಕ್ಕೆ (ಇಂಟರ್‌ನೆಟ್‌ಗೆ) ಲಗ್ಗೆ ಇಡಿ. ಜಗತ್ಪ್ರಸಿದ್ಧ ತಾಣ-ಶೋಧಕ ಗೂಗ್ಲ್‌ನಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಬೆರಳಚ್ಚಿಸಿ ಮೌಸ್ ಗುಂಡಿಯನ್ನು ಕ್ಲಿಕ್ ಮಾಡಿ. ಈಗ ನೋಡಿ. ನೆಟ್‌ವರ್ಕ್ ಮಾರ್ಕೆಟಿಂಗ್, ನೆಟ್‌ವರ್ಕ್, ಮಾರ್ಕೆಟಿಂಗ್, ಹೀಗೆ ಹಲವು ವಿಷಯಗಳ ತಾಣಗಳ ಸೂಚಿ ದೊರೆಯುತ್ತದೆ. ನೆಟ್‌ವರ್ಕ್ ಬಗ್ಗೆ ನೀಡಿರುವ ತಾಣದ ತಂತು (ಲಿಂಕ್) ಮೇಲೆ ಕ್ಲಿಕ್ ಮಾಡಿ ನೋಡಿ. ಅದು ನಿಮ್ಮನ್ನು ಗಣಕಗಳ ಜಾಲ (ನೆಟ್‌ವರ್ಕ್) ಬಗ್ಗೆ ವಿವರ ನೀಡುವ ತಾಣವಾಗಿರುತ್ತದೆ. ಅಲ್ಲಿರುವ ಇನ್ಯಾವುದಾದರೂ ಕೊಂಡಿಯ ಮೇಲೆ ಕ್ಲಿಕ್ ಮಾಡಿ ನೋಡಿ. ನೀವು ಮೂಲ ವಿಷಯ ಬಿಟ್ಟು ಇನ್ನೆಲ್ಲೋ ತಲುಪಿರುತ್ತೀರಾ. ಇಲ್ಲಿ ನೀವು ಗಮನಿಸಬೇಕಾದ ಒಂದು ವಿಷಯ ಎಂದರೆ ಕೊಂಡಿ, ತಂತು ಅಥವಾ ಲಿಂಕ್. ಈ ತಂತು ಮೇಲೆ ಕ್ಲಿಕ್ ಮಾಡಿದಂತೆಲ್ಲಾ ಇನ್ನೊಂದು ಜಾಲತಾಣ (ವೆಬ್‌ಸೈಟ್) ಅಥವಾ ಜಾಲಪುಟ (ವೆಬ್‌ಪೇಜ್) ತೆರೆದುಕೊಳ್ಳುತ್ತದೆ. ಹೀಗೆ ಮಾಹಿತಿಗಳನ್ನು ಕುಣಿಕಾಬಂಧನಗೊಳಿಸುವುದಕ್ಕೆ ಹೈಪರ್‌ಟೆಕ್ಸ್ಟ್ ಎಂಬ ಹೆಸರಿದೆ.
ಅಂತರಜಾಲ ಒಂದು ರೀತಿಯಲ್ಲಿ ಸರ್ವಾಂತರ್ಯಾಮಿಯಾಗಿದೆ. ಅದರ ಬಗ್ಗೆ ಕೇಳದವರು ಇಲ್ಲವೇ ಇಲ್ಲವೆಂದರೂ ನಡೆಯುತ್ತದೆ. ಹೆಚ್ಚು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಬಳಸುತ್ತಿದ್ದಾರೆ. ಅಂತರಜಾಲ ಎಂದರೆ ಏನು ಎಂದು ಹಲವು ಮಂದಿಯನ್ನು ಕೇಳಿ ನೋಡಿ. ಹೆಚ್ಚಿನವರು ಹೇಳುವ ಉತ್ತರ – www. ಈ www ಎಂದರೆ ಅಂತರಜಾಲ ಅಲ್ಲ ಎಂದು ಎಷ್ಟು ಮಂದಿಗೆ ಗೊತ್ತಿದೆ? ಆಶ್ಚರ್ಯವಾಯಿತೇ? www ಎಂದರೆ ವರ್ಲ್ಡ್ ವೈಡ್ ವೆಬ್ ಎಂಬುದರ ಸಂಕ್ಷಿಪ್ತ ರೂಪ. ಇದು ಅಂತರಜಾಲದ ಒಂದು ಅಂಗವೇ ವಿನಾ ಅದುವೇ ಅಂತರಜಾಲವಲ್ಲ! ಅಂತರಜಾಲದಲ್ಲಿ ವಿಶ್ವವ್ಯಾಪಿ ಜಾಲ (www), ವಿ-ಅಂಚೆ (ಇ-ಮೈಲ್), ಟೆಲ್‌ನೆಟ್, ಎಫ್‌ಟಿಪಿ, ವಿಓಐಪಿ, ಪಿ-ಟು-ಪಿ ನೆಟ್‌ವರ್ಕ್, ಇತ್ಯಾದಿ ಹಲವು ವಿಭಾಗಗಳಿವೆ. ಇವಗಳಲ್ಲಿ ಪ್ರತಿಯೊಂದರ ಬಗೆಗೂ ಹಲವು ಪ್ರತ್ಯೇಕ ಲೇಖನ ಬರೆಯುವಷ್ಟು ವಿಷಯಗಳಿವೆ.
ನಾನೀಗ ಹೇಳಹೊರಟಿರುವುದು ವಿಶ್ವವ್ಯಾಪಿ ಜಾಲದ ಬಗ್ಗೆ. ಅಂತರಜಾಲದಲ್ಲಿ ಕೋಟಿಗಟ್ಟಲೆ ತಾಣಗಳಿವೆ. ಈ ತಾಣಗಳೆಲ್ಲ ಒಟ್ಟು ಸೇರಿ ವಿಶ್ವವ್ಯಾಪಿ ಜಾಲವಾಗಿದೆ. ತಾಣದಿಂದ ತಾಣಕ್ಕೆ ತಂತುಗಳ ಮೂಲಕ ಲಂಘನ ಮಾಡಬಹುದು. ಈ ರೀತಿಯ ಸಂಪರ್ಕಕ್ಕೆ ಹೈಪರ್‌ಲಿಂಕಿಂಗ್ ಎನ್ನುತ್ತಾರೆ. ಈ ವಿಶ್ವವ್ಯಾಪಿ ಜಾಲದಲ್ಲಿ ಇರುವ ತಾಣಗಳ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಒಂದು ಗುಂಡುಪಿನ್ನಿನಿಂದ ಹಿಡಿದು ರಾಕೆಟ್ ತನಕದ ಮಾಹಿತಿಗಳನ್ನು ನೀಡುವ ತಾಣಗಳು ಅಲ್ಲಿವೆ.
ವಿಜ್ಞಾನದ ಬಹುಪಾಲು ಸಂಶೋಧನೆಗಳಂತೆ ಈ ವಿಶ್ವವ್ಯಾಪಿ ಜಾಲದ ಸಂಶೋಧನೆಯೂ ಆಕಸ್ಮಿಕವಾಗಿಯೇ ಆದುದು.
ಟಿಮ್ ಬರ್ನರ್ಸ್-ಲೀ (Tim Berners-Lee) ಎಂಬವರು ೧೯೮೦ರಲ್ಲಿ ಜಿನೇವಾದಲ್ಲಿರುವ ಯುರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಸಂಶೋಧನಾಲಯದಲ್ಲಿ (CERN, ಸರ್ನ್) ಕೆಲಸದಲ್ಲಿದ್ದರು. ಅಲ್ಲಿ ನಡೆಯುತ್ತಿದ್ದ ಹಲವು ಸಂಶೋಧನೆ, ಅವುಗಳಿಗೆ ಸಂಬಂಧಪಟ್ಟ ಆಕರ ಮಾಹಿತಿ ಮತ್ತು ವ್ಯಕ್ತಿಗಳ ಬಗ್ಗೆ ಮಾಹಿತಿಗಳನ್ನು ಗಣಕದಲ್ಲಿ ವ್ಯವಸ್ಥಿತವಾಗಿ ತನಗೆ ಸುಲಭವಾಗಿ ಸಿಗುವಂತೆ ಸಂಗ್ರಹಿಸಿಡಲು ಅವರು ಹೈಪರ್‌ಟೆಕ್ಸ್ಟ್ ವಿಧಾನವನ್ನು ಪ್ರಥಮ ಬಾರಿ ಬಳಸಿದರು. ಅವರು ಈ ಕೆಲಸಕ್ಕಾಗಿಯೇ ಎನ್‌ಕೈರ್ ಹೆಸರಿನ ಒಂದು ಗಣಕ ಕ್ರಮವಿಧಿ (ಕಂಪ್ಯೂಟರ್ ಪ್ರೋಗ್ರಾಮ್) ರಚನೆ ಮಾಡಿದರು. ಅದೇನೂ ಪರಿಪೂರ್ಣ ತಂತ್ರಾಂಶವಾಗಿರಲಿಲ್ಲ. ಆದರೆ ಅವರ ಕೆಲಸದ ಅವಧಿ ಮುಗಿದುದರಿಂದ ಅವರು ಹಿಂದಕ್ಕೆ ತೆರಳಿದರು.
ಆದರೆ ಅವರು ಪುನಃ 1984ರಲ್ಲಿ ಪೂರ್ಣಪ್ರಮಾಣದ ಉದ್ಯೋಗಿಯಾಗಿ ಅಲ್ಲಿಗೇ ಬಂದರು. ತಾವು ಹಿಂದೆ ಬಳಸಿದ ಎನ್‌ಕೈರ್ ಅವರ ತಲೆಯಲ್ಲಿ ಕೊರೆಯುತ್ತಿತ್ತು. ಹೈಪರ್‌ಟೆಕ್ಸ್ಟ್ ಮತ್ತು ಅಂತರಜಾಲಗಳು ಈಗಾಗಲೇ ಅಸ್ತಿತ್ವದಲ್ಲಿದ್ದವು. ಸರ್ನ್‌ನವರ ಸಂಶೋಧನೆಗಳು ಪ್ರಪಂಚಾದ್ಯಂತ ನಡೆಯುತ್ತಿದ್ದವು. ಎಲ್ಲ ಕಡೆಗಳಿಂದ ಸರ್ನ್‌ಗೆ ಸಂಶೋಧನೆಯ ವರದಿಗಳನ್ನು ವಿದ್ಯುನ್ಮಾನ (ಇಲೆಕ್ಟ್ರಾನಿಕ್) ವಿಧಾನದಿಂದ ಕಳುಹಿಸಲು ಒಂದು ನಿಶ್ಚಿತ ಪದ್ಧತಿಯನ್ನು ಪಾಲಿಸಬೇಕಿತ್ತು. ಇದು ಬಹುಮಂದಿ ವಿಜ್ಞಾನಿಗಳಿಗೆ ತಲೆನೋವು ತರುತ್ತಿತ್ತು. ಲೀ ಇದರ ಬಗ್ಗೆ ತಲೆಕೆಡಿಸಿಕೊಂಡರು. ತಾವು ಈಗಾಗಲೇ ಬಳಸುತ್ತಿದ್ದ ಎನ್‌ಕ್ವೈರ್ ಅನ್ನು ತಮಗೆ ಮಾತ್ರವಲ್ಲದೆ ಇತರರಿಗೂ ಬಳಸಲು ಅನುಕೂಲವಾಗುವಂತೆ ಪರಿರ್ತಿಸಿದರು.
1989ರಲ್ಲಿ ಲೀ ಅವರು ಮಾಹಿತಿಜಾಲವೊಂದರ ವಿನ್ಯಾಸದ ಬಗ್ಗೆ ಸರ್ನ್‌ಗೆ ಒಂದು ಕ್ರಿಯಾಯೋಜನೆ ಒಪ್ಪಿಸಿದರು. ಇದರ ಬಗ್ಗೆ ಅವರಿಗೆ ಯಾವುದೇ ಉತ್ತರ ಬರಲಿಲ್ಲ. ಆದರೆ ಅವರು ಅದರ ಬಗ್ಗೆ ಚಿಂತಿಸದೆ ಪ್ರಪಂಚದ ಎಲ್ಲ ಮಾಹಿತಿಗಳನ್ನು ಅಂತರಜಾಲದ ಮೂಲಕ ತಂತುಗಳಲ್ಲಿ ಬೆಸೆಯುವ ತಮ್ಮ ಆಲೋಚನೆಯನ್ನು ಕಾರ್ಯಗತಗೊಳಿಸತೊಡಗಿದರು. ಈ ಜಾಲದಲ್ಲಿರುವ ಪ್ರತಿಯೊಂದು ಮಾಹಿತಿ ಕೇಂದ್ರಕ್ಕೂ ಒಂದು ಪ್ರತ್ಯೇಕ ವಿಳಾಸವನ್ನು ಅಭಿವೃದ್ಧಿ ಮಾಡಿದರು. ಇದುವೇ ಇಂದು ನಾವೆಲ್ಲರೂ ಬಳಸುವ ಯುನಿಫಾರ್ಮ್ ರಿಸೋರ್ಸ್ ಲೊಕೇಟರ್ (URL) ಅರ್ಥಾತ್ ತಾಣಸೂಚಿ. ಈ ತಾಣಸೂಚಿಗಳಿಗೆ ಉದಾಹರಣೆ ಬೇಕಿದ್ದರೆ www.vishvakannada.com, www.microsoft.com, www.google.com, ಇತ್ಯಾದಿ. ಲೀ ಅವರು ಬಳಸಿದ ಪ್ರಥಮ ತಾಣಸೂಚಿ – info.cern.ch. ಈ ಜಾಲದಲ್ಲಿ ತಾಣಗಳ ರಚನೆಗೂ ಅವರು ಒಂದು ಸರಳ ಭಾಷೆಯನ್ನು ಹುಟ್ಟುಹಾಕಿದರು. ಅದುವೇ ಹೈಪರ್‌ಟೆಕ್ಸ್ಟ್ ಮಾರ್ಕಪ್ ಲಾಂಗ್ವೇಜ್ (HTML). ಇಷ್ಟೆಲ್ಲಾ ಆದರೂ ಸರ್ನ್‌ನ ನೌಕರಶಾಹಿ ಮಂದಿಗೆ ಇದರ ಮಹತ್ವ ಅರಿವಾಗಲಿಲ್ಲ. ಅವರ ಕ್ರಿಯಾಯೋಜನೆಗೆ ಹಣಕಾಸಿನ ಸಹಾಯವೂ ಬರಲಿಲ್ಲ. ಆದರೆ ಲೀ ತಮ್ಮ ಕೆಲಸ ನಿಲ್ಲಿಸಲಿಲ್ಲ. ಜಗತ್ತಿನಾದ್ಯಂತ ಎಲ್ಲ ಸಂಶೋಧಕರಿಗೆ ವಿ-ಅಂಚೆ (ಇಮೈಲ್) ಕಳುಹಿಸಿ ತಮ್ಮ ಈ ಸಂಶೋಧನೆಯನ್ನು ಬಳಸಲು ಕೇಳಿಕೊಂಡರು. ಇದರ ಮಹತ್ವ ಬಹು ಬೇಗನೆ ಹಲವಾರು ತಂತ್ರಜ್ಞರುಗಳಿಗೆ ಅರಿವಾಗಿ ಅವರೆಲ್ಲ ಅದನ್ನು ಬಳಸತೊಡಗಿದರು. ಇದರ ಫಲವೇ ಇಂದು ಜಗತ್ತಿನಾದ್ಯಂತ ಕೋಟಿಗಟ್ಟಲೆ ಮಂದಿ ಬಳಸುತ್ತಿರುವ ವಿಶ್ವವ್ಯಾಪಿ ಜಾಲ. ಆದರೆ ಸರ್ನ್‌ನ ನೌಕರಶಾಹಿ ಇನ್ನೂ ಗೊರಕೆ ಹೊಡೆಯುತ್ತಿತ್ತು. ಕೊನೆಗೂ ವಿಶ್ವವ್ಯಾಪಿ ಜಾಲವನ್ನು ಮುಂದುವರೆಸಲು 1994ರಲ್ಲಿ ಅಮೇರಿಕಾದ ಎಮ್.ಐ.ಟಿ.ಯಿಂದ ಅವರಿಗೆ ಕರೆಬಂತು. ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬಂತು.
ವೆಬ್‌ನ ಜನಕ ಎಂದೇ ಖ್ಯಾತರಾಗಿರುವ ಲೀ ಅವರನ್ನು ಹಡುಕಿಕೊಂಡು ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಬ್ರಿಟಿಶ್ ಸರಕಾರ ಅವರಿಗೆ “ಸರ್” ಬಿರುದಿತ್ತು ಸನ್ಮಾನಿಸಿದೆ. ಅವರು ಮಾಡಿದ ಸಂಶೋಧನೆಗೆ ಸಮಾನವಾದ ಮೂಲಭೂತ ಸಂಶೋಧನೆಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ – ಈ ಯಾವುದೇ ಕ್ಷೇತ್ರದಲ್ಲಿ ಮಾಡಿದ್ದರೆ ಅವರಿಗೆ ನೋಬೆಲ್ ಪುರಸ್ಕಾರ ದೊರೆಯುತ್ತಿತ್ತು. ಟೈಮ್ ಮ್ಯಾಗಝಿನ್ ಅವರನ್ನು ಜಗತ್ತಿನ ಮೇಲೆ ಪ್ರಭಾವ ಬೀರಿದ 20ನೇ ಶತಮಾನದ 100 ಖ್ಯಾತ ವಿಜ್ಞಾನಿ ತಂತ್ರಜ್ಞಾನಿಗಳ ಪಟ್ಟಿಯಲ್ಲಿ ಸೇರಿಸಿದೆ. ಐನ್‌ಸ್ಟೈನ್ ಅವರ ಹೆಸರೂ ಈ ಪಟ್ಟಿಯಲ್ಲಿದೆ ಎಂದರೆ ಲೀ ಅವರ ಸಂಶೋಧನೆಯ ಮಹತ್ವ ಅರಿವಾಗುವುದು. ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ವರ್ಲ್ಡ್ ವೈಡ್ ವೆಬ್ ಕನ್‌ಸೋರ್ಟಿಯಂನ ಅಧ್ಯಕ್ಷರಾಗಿ ಅವರು ಈಗಲೂ ಹೊಸ ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment