ಸೋಲಾರ್ ಕುಕ್ಕರ್
ಮಾನವ ಕಲಿತ ಮೊಟ್ಟಮೊದಲ ವಿದ್ಯೆ ಅಡುಗೆ ಇರಬೇಕು. ಅಡುಗೆ ಮಾಡುವ ವಿಧಾನ ಕಟ್ಟಿಗೆಯಿಂದ ಪ್ರಾರಂಭವಾಗಿ ಹಲವು ಹಂತಗಳನ್ನು ದಾಟಿ ಬಂದಿದೆ. ಎಲ್ಲ ವಿಧಾನಗಳ ಮೂಲಭೂತ ತತ್ವ ಒಂದೇ. ಯಾವುದನ್ನು ಬೇಯಿಸಬೇಕೋ ಅದಕ್ಕೆ ತಾಪವನ್ನು ವರ್ಗಾಯಿಸಬೇಕು. ಸರಳವಾಗಿ ಹೇಳುವುದಾದರೆ ಆಹಾರವನ್ನು ಬಿಸಿ ಮಾಡಬೇಕು. ಈ ಬಿಸಿ ಮಾಡುವ ವಿಧಾನ ಕಟ್ಟಿಗೆಯನ್ನು ಸುಡುವುದು, ಸೀಮೆ ಎಣ್ಣೆ ಸ್ಟೌ, ಗ್ಯಾಸ್ ಒಲೆ, ಬಿಸಿಯಾದ ವಿದ್ಯುತ್ ಕಾಯಿಲ್, ಇಂಡಕ್ಷನ್ ಸ್ಟೌ, ಇತ್ಯಾದಿ ಯಾವುದೂ ಇರಬಹುದು. ಇವುಗಳಲ್ಲಿ ಇಂಡಕ್ಷನ್ ಸ್ಟೌ ಬಗ್ಗೆ ಇದೇ ಅಂಕಣದಲ್ಲಿ ಹಿಂದೊಮ್ಮೆ ಬರೆಯಲಾಗಿತ್ತು. ಈ ಸಾಲಿನಲ್ಲಿ ಇನ್ನೊಂದು ಹೆಸರು ಸೌರ ಅಡುಗೆ ಪಾತ್ರೆ ಅಥವಾ ಸೋಲಾರ್ ಕುಕ್ಕರ್. ಈ ಸಂಚಿಕೆಯಲ್ಲಿ ಅದರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಸೌರಶಕ್ತಿಯನ್ನು ಬಳಸಿ ಅಡುಗೆ ಮಾಡುವ ವಿಧಾನಗಳು ಹಲವು. ಸೌರ ಶಕ್ತಿಯಿಂದ ವಿದ್ಯುತ್ ತಯಾರಿಸಿ ಆ ವಿದ್ಯುತ್ ಬಳಸಿ ಅಡುಗೆ ಮಾಡಬಹುದು. ಇದು ತುಂಬ ದುಬಾರಿ ವಿಧಾನ. ಇಂತಹ ವ್ಯವಸ್ಥೆಯಲ್ಲಿ ಸೌರವಿದ್ಯುತ್ ಪ್ಯಾನೆಲ್‌ಗಳು, ಆ ಪ್ಯಾನೆಲ್‌ನಿಂದ ಬರುವ ಡಿ.ಸಿ. ವಿದ್ಯುತ್ ಅನ್ನು ಎ.ಸಿ. ವಿದ್ಯುತ್ ಆಗಿ ಪರಿವರ್ತಿಸಲು ಇನ್ವರ್ಟರ್, ನಂತರ ವಿದ್ಯುತ್‌ನಿಂದ ಕೆಲಸ ಮಾಡುವ ಸ್ಟೌ ಎಲ್ಲ ಬೇಕು. ಅಷ್ಟು ಮಾತ್ರವಲ್ಲ ಸೌರಶಕ್ತಿಯಿಂದ ವಿದ್ಯುತ್‌ಶಕ್ತಿಗೆ, ವಿದ್ಯುತ್ ಶಕ್ತಿಯಿಂದ ತಾಪಶಕ್ತಿಗೆ ಎರಡು ಸಲ ಪರಿವರ್ತನೆ ಆಗಬೇಕು. ಪ್ರತಿ ಪರಿವರ್ತನೆಯಲ್ಲೂ ಅಪಾರ ಶಕ್ತಿ ಸೋರಿಕೆಯಾಗುತ್ತದೆ. ಸೌರಶಕ್ತಿಯಿಂದ ದೊರೆಯುವ ತಾಪದಿಂದಲೇ ನೇರವಾಗಿ ಅಡುಗೆ ಮಾಡುವುದು ಉತ್ತಮ ವಿಧಾನ. ಅದರಲ್ಲೂ ಹಲವು ವಿಧಾನಗಳಿವೆ. ಅವುಗಳ ಬಗ್ಗೆ ತಿಳಿಯೋಣ.
ಭೂತಕನ್ನಡಿಯನ್ನು ಬಳಸಿ ಸೂರ್ಯನ ಕಿರಣಗಳನ್ನು ಒಂದು ಬಿಂದುವಿಗೆ ಕೇಂದ್ರೀಕರಿಸಿ ಆ ಬಿಂದುವಿನ ಜಾಗದಲ್ಲಿ ಒಣಗಿದ ಎಲೆ ಅಥವಾ ಕಾಗದ ಇಟ್ಟು ಅದನ್ನು ಸುಡುವುದನ್ನು ಎಲ್ಲರೂ ಮಾಡಿರುತ್ತಾರೆ. ಇದರ ಹಿಂದಿನ ತತ್ವ ಏನೆಂದರೆ ಸೂರ್ಯನ ಬೆಳಕನ್ನು ಕೇಂದ್ರೀಕರಿಸಿದರೆ ಆ ಜಾಗದಲ್ಲಿ ಇತರೆ ಜಾಗಗಳಿಗಿಂತ ಹೆಚ್ಚು ತಾಪ ಉಂಟಾಗುತ್ತದೆ. ಇದೇ ತತ್ವವನ್ನು ಬಳಸಿ ಕೆಲವು ಸೌರ ಒಲೆಗಳು ಕೆಲಸ ಮಾಡುತ್ತವೆ. ಹೀಗೆ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಲು ಬಳಸುವ ವಿಧಾನದಲ್ಲಿ ಹಲವು ನಮೂನೆಗಳಿವೆ. ಸೌರ ಪ್ಯಾನೆಲ್ ಕುಕರ್‌ನಲ್ಲಿ ಸಪಾಟಾದ ಪ್ಯಾನೆಲ್‌ಗಳನ್ನು ಅಂದರೆ ಹಾಳೆಗಳನ್ನು ಬಳಸಿ ಸೂರ್ಯನ ಕಿರಣಗಳನ್ನು ಒಂದು ಜಾಗಕ್ಕೆ ಪ್ರತಿಫಲಿಸಲಾಗುತ್ತದೆ. ಆ ಜಾಗದಲ್ಲಿ ಒಂದು ಕಪ್ಪು ಬಣ್ಣದ ಪಾತ್ರೆಯನ್ನು ಇಡಲಾಗುತ್ತದೆ. ಅದರಲ್ಲಿ ನೀರು ಇಟ್ಟರೆ ಅದು ಕುದಿಯುತ್ತದೆ. ಈ ರೀತಿಯಲ್ಲಿ ಸೌರಶಕ್ತಿಯನ್ನು ಬಳಸಿ ಅಡುಗೆ ಮಾಡಲಾಗುತ್ತದೆ. ಇನ್ನೊಂದು ನಮೂನೆಯಲ್ಲಿ ಸೂರ್ಯನ ಕಿರಣಗಳನ್ನು ಪ್ರತಿಫಲಿಸಿ ಒಂದು ಜಾಗದಲ್ಲಿ ಕೇಂದ್ರೀಕರಿಸಲು ಪ್ಯಾರಾಬೋಲಾ ಅಂದರೆ ಡಿಶ್ ಅನ್ನು ಬಳಸಲಾಗುತ್ತದೆ. ಉಪಗ್ರಹದಿಂದ ಸಿಗ್ನಲ್ ಪಡೆದು ಡಿಟಿಎಚ್ ಮೂಲಕ ಟಿವಿ ಸಿಗ್ನಲ್ ಪಡೆಯುವ ಡಿಶ್ ಮಾದರಿಯಲ್ಲೇ ಈ ಡಿಶ್ ಇರುತ್ತದೆ. ಅದರ ಕೇಂದ್ರ ಭಾಗದಲ್ಲಿ ಸೌರ ಕುಕ್ಕರ್ ಇಡಲಾಗುತ್ತದೆ. ಉಳಿದಂತೆ ಪ್ಯಾನೆಲ್ ಬಳಸುವ ಕುಕ್ಕರ್‌ಗೂ ಇದಕ್ಕೂ ವ್ಯತ್ಯಾಸವೇನಿಲ್ಲ. ಇನ್ನೊಂದು ನಮೂನೆಯ ಸೌರಶಕ್ತಿ ಬಳಸಿ ಮಾಡುವ ಅಡುಗೆಯಲ್ಲಿ ಪೆಟ್ಟಿಗೆಯನ್ನು ಬಳಸಲಾಗುತ್ತದೆ. ಪೆಟ್ಟಿಗೆಯ ಮುಚ್ಚಳದ ಒಳ ಭಾಗವನ್ನು ಸೂರ್ಯನ ಕಿರಣಗಳನ್ನು ಪ್ರತಿಫಲಿಸಲು ಬಳಸಲಾಗುತ್ತದೆ. ಪೆಟ್ಟಿಗೆಯ ಒಳಗಡೆ ಅಡುಗೆಪಾತ್ರೆ ಇರುತ್ತದೆ. ಈ ಮೂರೂ ನಮೂನೆಯ ಸೌರಕುಕ್ಕರ್‌ಗಳನ್ನು ಬಳಕೆ ಮಾಡಿ ಅಡುಗೆ ಮಾಡಲು ಬಿಸಿಲಿನಲ್ಲಿ ಇಟ್ಟು ಅಡುಗೆ ಮಾಡಬೇಕು. ಅಡುಗೆ ಮಾಡುವಾಗ ಬಿಸಿನಲ್ಲೇ ಇರಬೇಕು. ಸಾಮಾನ್ಯವಾಗಿ ಒಂದು ಪಾತ್ರೆಯಲ್ಲಿ ನೀರು, ಧಾನ್ಯ ಅಥವಾ ತರಕಾರಿ ಇಟ್ಟು ಬಿಸಿಲಿನಲ್ಲಿ ಸೌರಕುಕ್ಕರ್ ಇಟ್ಟು ಅದರಲ್ಲಿ ಅಡುಗೆ ಮಾಡುತ್ತಾರೆ. ಬೆಂದಿದೆಯೇ ಎಂದು ನೋಡಬೇಕಿದ್ದರೆ ಅಂಗಳಕ್ಕೆ ಬಿಸಿಲಿಗೆ ಹೋಗಬೇಕು.
ಮನೆಗಳ ತಾರಸಿಗಳಲ್ಲಿ ಇಟ್ಟು ಮನೆಯೊಳಗೆ ಬಿಸಿ ನೀರನ್ನು ಸರಬರಾಜು ಮಾಡುವ ಸೌರಶಕ್ತಿಯಿಂದ ಕೆಲಸ ಮಾಡುವ ಬಿಸಿ ನೀರಿನ ಸರಬರಾಜು ವ್ಯವಸ್ಥೆ ಬಹುತೇಕ ಮನೆಗಳಲ್ಲಿ ಇರುವುದು ಗೊತ್ತಿದೆ. ಈ ವ್ಯವಸ್ಥೆಗೂ ಮೇಲೆ ತಿಳಿಸಿದ ಸೌರಕುಕ್ಕರ್‌ಗಳಿಗೂ ಇರುವ ಪ್ರಮುಖ ವ್ಯತ್ಯಾಸವೆಂದರೆ ಪ್ಯಾನೆಲ್ ತಾರಸಿಯಲ್ಲಿರುತ್ತದೆ, ಮನೆಯೊಳಗೆ ಬಿಸಿ ನೀರು ಬರುತ್ತದೆ. ಸೌರಕುಕ್ಕರ್‌ನಲ್ಲಿ ಅಡುಗೆ ಮಾಡಲು ನಾವು ಬಿಸಿಲಿಗೆ ಹೋಗಬೇಕಾಗುತ್ತದೆ. ಸೌರಶಕ್ತಿಯಿಂದ ಬಿಸಿನೀರು ಪಡೆಯುವ ವಿಧಾನವನ್ನೇ ಅಡುಗೆ ಮಾಡಲು ಬಳಸಿದರೆ ಹೇಗೆ? ಹೌದು, ಈ ವಿಧಾನವೂ ಸಿದ್ಧವಾಗಿದೆ.
ನಮ್ಮ ಕನ್ನಡಿಗರೇ ಆದ ಮೈಸೂರಿನಲ್ಲಿರುವ ಪ್ರವೀಣಕುಮಾರ ಮಾವಿನಕಾಡು ಅವರ ಅನ್ವೇಷಣೆ ಇದು. ಇದರಲ್ಲಿ ಅಂಗಳದಲ್ಲಿ ಸೌರ ಪ್ಯಾನೆಲ್‌ಗಳನ್ನು ಇಡಲಾಗುತ್ತದೆ. ಸೌರಶಕ್ತಿಯಿಂದ ಬಿಸಿನೀರನ್ನು ಪಡೆಯುವ ಸೌರಪ್ಯಾನೆಲ್‌ನಂತೆಯೇ ಇದು ಕೆಲಸ ಮಾಡುತ್ತದೆ. ಈ ಪ್ಯಾನೆಲ್‌ಗಳ ಒಳಗೆ ಪೈಪ್ ಇರುತ್ತದೆ. ಅವುಗಳೊಳಗೆ ನೀರು ಇರುತ್ತದೆ. ಸೂರ್ಯನ ಬಿಸಿಲಿನಿಂದ ನೀರು ಬಿಸಿಯಾಗಿ ಪೈಪ್ ಮೂಲಕ ಹರಿಯುತ್ತದೆ. ಪಕ್ಕದಲ್ಲಿ ಇನ್ನೊಂದು ಶಾಖ ವರ್ಗಾವಣೆಯ ಅಂಗ ಇರುತ್ತದೆ. ಅಲ್ಲಿ ಬಿಸಿನೀರು ತಣ್ಣೀರಿನೊಂದಿಗೆ ಶಾಖ ವರ್ಗಾವಣೆ ಮಾಡಿಕೊಳ್ಳುತ್ತದೆ. ಹೀಗೆ ಬಿಸಿಯಾದ ಈ ನೀರು ಪೈಪ್ ಮೂಲಕ ಮನೆಯೊಳಗೆ ಅಡುಗೆ ಮನೆಗೆ ಬಂದು ಅಲ್ಲಿ ಸೌರಕುಕ್ಕರ್ ಬಳಸಿ ಅಡುಗೆ ಮಾಡಬಹುದಾಗಿದೆ. ಅಡುಗೆ ಮಾಡಲು ಬಿಸಿಲಿನಲ್ಲಿ ನಿಲ್ಲಬೇಕಾಗಿಲ್ಲ. ಇದರಲ್ಲಿ ಎಲ್‌ಪಿಜಿ ಗ್ಯಾಸ್‌ಗೂ ಸೌಲಭ್ಯವನ್ನು ಪ್ರವೀಣಕುಮಾರ ಅವರು ಅಳವಸಿಡಿಸಿದ್ದಾರೆ. ಬಿಸಿಲು ಕಡಿಮೆಯಿದ್ದಾಗ, ತಾಪ ಕಡಿಮೆ ಆದರೆ ಗ್ಯಾಸ್ ತನ್ನಿಂದ ತಾನಾಗಿಯೇ ಹೊತ್ತಿಕೊಂಡು ಅಡುಗೆ ಮುಂದುವರೆಯುತ್ತದೆ. ಇವರ ಈ ಅನ್ವೇಷಣೆಯು ಗ್ರಾಮಾಂತರ ಪ್ರದೇಶಗಳಿಗೆ ಹೆಚ್ಚು ಉಪಯುಕ್ತ. ಯಾಕೆಂದರೆ ನಗರಗಳಲ್ಲಿ ಇದನ್ನು ಇಡಲು, ಬಿಸಿಲು ಚೆನ್ನಾಗಿ ಬೀಳುವ ಅಂಗಳ ಇಲ್ಲ. ಇದನ್ನು ತಾರಸಿಯಲ್ಲಿ ಇಟ್ಟು ಮನೆಯೊಳಗೆ ಅಡುಗೆ ಮಾಡುವ ಹಂತಕ್ಕೆ ಇದು ಇನ್ನೂ ತಲುಪಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆ, ಚಿಕ್ಕ ಹೋಟೆಲು, ಸಮುದಾಯ ಅಡುಗೆಮನೆ, ಇತ್ಯಾದಿ ಸ್ಥಳಗಳಲ್ಲಿ ಇದರ ಬಳಕೆ ಮಾಡಬಹುದು. ಇದು ಇನ್ನೂ ದೊಡ್ಡ ಪ್ರಮಾಣದಲ್ಲಿ ತಯಾರಾಗಿ ಹಳ್ಳಿ ಹಳ್ಳಿಗಳಿಗೆ ತಲುಪಬೇಕಾಗಿದೆ. ಆಸಕ್ತರು ಪ್ರವೀಣಕುಮಾರ ಮಾವಿನಕಾಡು ಅವರನ್ನು ಸಂಪರ್ಕಿಸಬಹುದು (ಫೋ.:9343588544, ಇಮೈಲ್: mkpraveen79@gmail.com).
–ಡಾ| ಯು.ಬಿ. ಪವನಜ
gadgetloka @ gmail . com
Be First to Comment