ಮನೆಯೊಳಗೆ ಮನೆಯೊಡೆಯನಿಲ್ಲ ಎಂಬ ಸಾಲು ಕೇಳಿರಬಹುದು. ಮನೆಯ ಯಜಮಾನ ಎಲ್ಲಿಗೋ ಹೋಗಿ ಕಸ ಗುಡಿಸದೆ ಮನೆಯೆಲ್ಲ ಗಲೀಜಾದಾಗ ಈ ಸಾಲಿನ ಬಳಕೆಯಾಗುತ್ತದೆ. ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮನೆಯೊಳಗಡೆ ಮನೆಯೊಡೆಯನಿಲ್ಲದಿದ್ದರೂ ಮನೆಯನ್ನು ಸದಾ ಸ್ವಚ್ಛವಾಗಿಟ್ಟು, ರಾತ್ರಿ ದೀಪ ಹಚ್ಚಿ, ಹಗಲು ದೀಪ ಆರಿಸಿ, ಮನೆಯೊಳಗೆ ಮನೆಯೊಡೆಯನಿದ್ದಾನೆ ಎಂಬ ಭಾವನೆ ಮೂಡುವಂತೆ ಮಾಡಬಲ್ಲ ಚತುರ ಮನೆಗಳಿವೆ. ಇವುಗಳನ್ನು ಇಂಗ್ಲಿಷಿನಲ್ಲಿ smart home ಎನ್ನುತ್ತಾರೆ. ಚತುರ ಮನೆ ಅಂದರೆ ಏನು? ಬನ್ನಿ ಈ ಸಂಚಿಕೆಯಲ್ಲಿ ಅದನ್ನು ತಿಳಿದುಕೊಳ್ಳೋಣ.
ಚತುರ ಮನೆ ಅಂದರೆ ಮೊಬೈಲ್ ಫೋನ್ ಅಥವಾ ಅಂತಹುದೇ ಅಂತರಜಾಲ ಸಂಪರ್ಕದಲ್ಲಿರುವ ಸಾಧನಗಳನ್ನು ಬಳಸಿ ಅಂತರಜಾಲದ ಮೂಲಕ ಎಲ್ಲಿಂದ ಬೇಕಾದರೂ ನಿಯಂತ್ರಿಸಬಹುದಾದ ಸಾಧನಗಳನ್ನು ಒಳಗೊಂಡ ಮನೆ. ಈ ರೀತಿ ನಿಯಂತ್ರಿಸಬಹುದಾದ ವಸ್ತುಗಳನ್ನೊಳಗೊಂಡ ಜಾಲಕ್ಕೆ ವಸ್ತುಗಳ ಅಂತರಜಾಲ (Internet of Things, IoT) ಎಂಬ ಹೆಸರೂ ಇದೆ. ಮನೆಯಲ್ಲಿ ಬಳಕೆಯಾಗುವ ವಸ್ತುಗಳ ಅಂತರಜಾಲದಲ್ಲಿ ಮನೆಯಲ್ಲಿ ಬಳಸುವ ಸುರಕ್ಷಾ ಸಾಧನಗಳು, ದಿನ ನಿತ್ಯ ಬಳಕೆಯ ಗೃಹೋಪಕರಣಗಳು, ಕ್ಯಾಮೆರಾ ಇತ್ಯಾದಿಗಳೆಲ್ಲ ಸೇರಿವೆ.
ಚತುರ ಮನೆಯಲ್ಲಿ ತಾಪಮಾನವನ್ನು ಮೊಬೈಲ್ ಸಾಧನದಿಂದ ಅಂತರಜಾಲದ ಮೂಲಕ ನಿಯಂತ್ರಿಸಬಹುದು. ಕಚೇರಿಯಲ್ಲಿರುವ ವ್ಯಕ್ತಿ ಅಲ್ಲಿಂದ ಹೊರಡುವ ಅರ್ಧ ಗಂಟೆ ಮೊದಲು ಮನೆಯ ಹವಾನಿಯಂತ್ರಕವನ್ನು ಆನ್ ಮಾಡಿ ಆತ ಮನೆಗೆ ತಲುಪುವ ಹೊತ್ತಿಗೆ ತನಗೆ ಬೇಕಾದ ತಾಪಮಾನದಲ್ಲಿರುವಂತೆ ಮಾಡಬಹುದು. ಮನೆಯಲ್ಲಿರುವ ಕಸ ಗುಡಿಸುವ ಹಾಗೂ ನೆಲ ಒರಸುವ ಯಂತ್ರವನ್ನು ಕೂಡ ಇದೇ ರೀತಿ ಅಂತರಜಾಲದ ಮೂಲಕ ನಿಯಂತ್ರಿಸಬಹುದು. ಅದನ್ನು ಪ್ರಾರಂಭಿಸುವುದು, ನಿಲ್ಲಿಸುವುದು ಇತ್ಯಾದಿಗಳನ್ನು ಮಾಡಬಹುದು. ಮನೆಯಲ್ಲಿರುವ ಶೈತ್ಯಕದಲ್ಲಿ ಹಾಲು ಮುಗಿದಿದೆ ಎಂದು ಕಚೇರಿಯಲ್ಲಿರುವ ಮನೆಯೊಡೆಯನಿಗೆ ಅದು ಸಂದೇಶ ಕಳುಹಿಸುವ ಸೌಲಭ್ಯ ಇಂತಹ ಚತುರ ಮನೆಯಲ್ಲಿ ಅಡಕವಾಗಿದೆ.
ಒಂದು ನಿಜವಾದ ಉದಾಹರಣೆ ನೋಡಿ. ಬೆಂಗಳೂರಿನಲ್ಲಿ ವೃದ್ಧ ಮಾತಾಪಿತರಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮಗ ಅಮೇರಿಕದಲ್ಲಿದ್ದಾನೆ. ಮನೆಯಲ್ಲಿ ಬೇರೆ ಯಾರೂ ಇಲ್ಲ. ಆತ ಮನೆಯೊಳಗೆ ಕ್ಯಾಮೆರ ಅಳವಡಿಸಿದ್ದಾನೆ. ಈ ಕ್ಯಾಮೆರಗಳು ಅಂತರಜಾಲಕ್ಕೆ ಸಂಪರ್ಕ ಹೊಂದಿವೆ. ಮಗ ಅಮೆರಿಕದಲ್ಲಿ ಕುಳಿತೇ ತಂದೆ ತಾಯಿ ಏನು ಮಾಡುತ್ತಿದ್ದಾರೆ ಎಂದು ವೀಕ್ಷಿಸುತ್ತಿರುತ್ತಾನೆ. ಒಂದು ದಿನ ಆತನ ತಂದೆ ತಲೆಸುತ್ತು ಬಂದು ಬಿದ್ದಿದ್ದಾರೆ. ಮಗ ಅಮೆರಿಕದಿಂದ ಅದನ್ನು ಕ್ಯಾಮೆರ ಮೂಲಕ ನೋಡಿದ್ದಾನೆ. ತಕ್ಷಣ ಪಕ್ಕದ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿ ಅವರು ಆತನ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು. ಇದು ನಿಜವಾಗಿ ನಡೆದ ಕಥೆ.
ಅಂತರಜಾಲದ ಮೂಲಕ ಸಂಪರ್ಕಗೊಂಡ ಕ್ಯಾಮೆರದ ಉಪಯೋಗದ ಇನ್ನೊಂದು ಕಥೆ ಕೇಳಿ. ಇದೂ ಸ್ವಲ್ಪ ಮೇಲಿನ ಕಥೆಯ ನಮೂನೆಯೇ. ಆದರೆ ವ್ಯತ್ಯಾಸ ಎಂದರೆ ಮನೆಯಲ್ಲಿ ಯಾರೂ ಇಲ್ಲ. ಮನೆಯಲ್ಲಿ ಕ್ಯಾಮೆರ ಅಳವಡಿಸಿ ಆತ ಅಮೆರಿಕದಲ್ಲಿ ಇದ್ದಾನೆ. ಈ ಕ್ಯಾಮೆರ ಅಂತರಜಾಲಕ್ಕೆ ಸಂಪರ್ಕಗೊಂಡಿದೆ. ಅದು ಚಲನೆಯನ್ನು ಗುರುತಿಸಿ ಕಾರ್ಯಮುಖವಾಗಿ ಎಚ್ಚರಿಸುವ ಕ್ಯಾಮೆರ (motion sensitive camera). ಒಂದು ದಿನ ರಾತ್ರಿ ಮನೆಯೊಳಗೆ ಕಳ್ಳ ನುಸುಳಿದ್ದಾನೆ. ಕ್ಯಾಮೆರ ಅದನ್ನು ಪತ್ತೆ ಹಚ್ಚಿ ಅಮೆರಿಕದಲ್ಲಿರುವ ಮನೆಯೊಡೆಯನಿಗೆ ಎಚ್ಚರಿಸುತ್ತದೆ. ಆತ ಪಕ್ಕದ ಮನೆಯವರಿಗೂ ಆತನ ಮನೆಯ ವ್ಯಾಪ್ತಿಯ ಪೋಲೀಸ್ ಠಾಣೆಗೂ ತಿಳಿಸುತ್ತಾನೆ. ಪೋಲಿಸರು ಬಂದು ಕಳ್ಳನನ್ನು ಬಂಧಿಸುತ್ತಾರೆ. ಇದು ಕೂಡ ನಿಜ ಘಟನೆಯೇ.
ಚತುರಮನೆಯ ಕೇಂದ್ರ ಸ್ಥಾನದಲ್ಲಿ ಅಂತರಜಾಲಕ್ಕೆ ಸಂಪರ್ಕಗೊಂಡ ಒಂದು ಚತುರವಾಣಿ (smartphone) ಇರುತ್ತದೆ. ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಅಥವಾ ಗಣಕವೂ ಆಗಬಹುದು. ಸ್ಮಾರ್ಟ್‌ಫೋನ್ ಆದರೆ ಕೈಯಲ್ಲೆ ಇರುತ್ತದೆ. ನೀವು ರಸ್ತೆಯಲ್ಲಿದ್ದರೂ ಬಳಸಬಹುದು. ಮನೆಯಲ್ಲಿರುವ ಎಲ್ಲ ವಸ್ತುಗಳು ಅದರ ನಿಯಂತ್ರಣದಲ್ಲಿರುತ್ತವೆ. ಗೂಗ್ಲ್ ಹೋಂ, ಅಮೆಝಾನ್ ಅಲೆಕ್ಸಾ ಮಾದರಿಯ ತಂತ್ರಾಂಶಗಳ ಬಳಕೆ ಮಾಡಲಾಗುತ್ತದೆ. ನೀವು ಒಂದು ಕೋಣೆಯೊಳಗೆ ಪ್ರವೇಶ ಮಾಡಿದಾಗ ಅಲ್ಲಿಯ ದೀಪ ಉರಿಯುವುದು, ಹೊರಗೆ ಬಂದಾಗ ಅದು ಆರಿ ಹೋಗುವುದು, ಮಾಳಿಗೆಗೆ ಹೋಗುವ ಮೆಟ್ಟಿಲುಗಳಿಗೂ ಹೀಗೆಯೇ, ದೀಪಗಳನ್ನು ಆರಿಸುವುದು, ಉರಿಸುವುದು, ಸಂಗೀತ ನುಡಿಸುವುದು, ಇತ್ಯಾದಿಗಳನ್ನೆಲ್ಲ ಧ್ವನಿಯಲ್ಲೇ ಅಪ್ಪಣೆ ನೀಡಿ ಮಾಡಿಸಿಕೊಳ್ಳಬಹುದು. ಉದಾಹರಣೆಗೆ “ಅಲೆಕ್ಸಾ, ಪ್ಲೇ ಧರಣಿ ಮಂಡಲ ಮಧ್ಯದೊಳಗೆ” ಎಂದು ಹೇಳಿದರೆ ತಬ್ಬಲಿಯು ನೀನಾದೆ ಮಗನೆ ಸಿನಿಮಾಕ್ಕಾಗಿ ಪಿ.ಬಿ. ಶ್ರೀನಿವಾಸ್, ಬಿ.ಕೆ. ಸುಮಿತ್ರ ಮತ್ತು ವಿದ್ಯಾರಾಣಿ ಹಾಡಿದ ಹಾಡನ್ನು ಅದು ಪ್ಲೇ ಮಾಡುತ್ತದೆ. ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ಎಂ.ಎಸ್. ಸುಬ್ಬುಲಕ್ಷ್ಮಿ ಹಾಡಿದ ವೆಂಕಟೇಶ ಸುಪ್ರಭಾತ ಬೇಕಿದ್ದರೆ ಹಾಗೆಂದು ಆಯ್ಕೆ ಮಾಡಿಟ್ಟುಕೊಳ್ಳಬಹುದು. ಪ್ರತಿದಿನ ಸಾಯಂಕಾಲ 5:00 ಗಂಟೆಗೆ ದೀಪ ಹಚ್ಚಬೇಕು ಎಂದು ಆಯ್ಕೆ ಮಾಡಿಟ್ಟುಕೊಳ್ಳಬಹುದು.
ಈ ಎಲ್ಲ ಆಯ್ಕೆಗಳನ್ನು ಬಳಸಲು ನೀವು ಗೂಗ್ಲ್ ಹೋಂ ಅಥವಾ ಅಮೆಜಾನ್ ಅಲೆಕ್ಸ ಬಳಸಬೇಕು. ಸಂಗೀತಕ್ಕಾಗಿ ಸ್ಪಾಟಿಫೈಗೆ ಚಂದಾದಾರರಾದರೆ ಉತ್ತಮ. ಅಂತರಜಾಲದಲ್ಲಿ ಇರುವ ಹಲವಾರು ಸೇವೆ, ಸಂಗೀತ, ಪುಸ್ತಕ ಮಳಿಗೆಗಳಿಗೆ ಚಂದಾದಾರರಾದರೆ ಉತ್ತಮ. ಆಗ ಎಲ್ಲವನ್ನು ಧ್ವನಿಯ ಮೂಲಕವೇ ಪಡೆದುಕೊಳ್ಳಬಹುದು. ಅದಕ್ಕಾಗಿ ನಿಮ್ಮ ಮನೆಯ ಟಿವಿ ಕೂಡ ಸ್ಮಾರ್ಟ್‌ಟಿವಿ ಆಗಿರಬೇಕು. ಅದೂ ಅಂತರಜಾಲಕ್ಕೆ ಸಂಪರ್ಕ ಹೊಂದಿರಬೇಕು.
ಮನೆಯ ಕಿಟಿಕಿ, ಮುಖ್ಯ ಬಾಗಿಲು, ಕಾಂಪೌಂಡ್ ಗೇಟುಗಳನ್ನೂ ವಸ್ತುಗಳ ಅಂತರಜಾಲಕ್ಕೆ ಸೇರಿಸಬಹುದು. ಕಾರಿನಲ್ಲಿ ಮನೆಗೆ ಬರುವಾಗ, ಮನೆ ಹತ್ತಿರ ಬರುತ್ತಿದ್ದಂತೆ ಸ್ಮಾರ್ಟ್‌ಫೋನ್ ಮೂಲಕ ಕಾಂಪೌಂಡ್ ಗೇಟು ತೆರೆಯಬಹುದು. ಕಾರು ಒಳ ಹೋಗುತ್ತಿದ್ದಂತೆ ಅದನ್ನು ಮುಚ್ಚಬಹುದು. ನಾಯಿಯ ಗೂಡಿನ ಗೇಟನ್ನು ಬೇಕಿದ್ದರೆ ನಿಯಮಿತ ಸಮಯಕ್ಕೆ ತೆರೆಯುವುದು ಮಾಡಬಹುದು.
ಒಟ್ಟಿನಲ್ಲಿ ಎಲ್ಲವೂ ಬುದ್ಧಿವಂತ ಸಾಧನಗಳಾದರೆ ಮನೆಯೇ ಬುದ್ಧಿವಂತ ಆಗುತ್ತದೆ!
–ಡಾ| ಯು.ಬಿ. ಪವನಜ
gadgetloka @ gmail . com
Be First to Comment