Press "Enter" to skip to content

ರೋಬೋಟ್   ಜೇನುನೊಣಗಳು

ಪ್ರಕೃತಿ ಎಲ್ಲವನ್ನೂ ಮಾಡಿದೆ. ನಮಗೆ ಬೇಕಾದ ಆಹಾರವನ್ನೂ ಆಹಾರ ಸರಪಳಿಯನ್ನೂ ಮಾಡಿಟ್ಟಿದೆ. ಸಸ್ಯಗಳು ಹೂ ಬಿಡುತ್ತವೆ. ದುಂಬಿ, ಜೇನು ನೊಣಗಳು ಈ ಹೂವುಗಳ ಮೇಲೆ ಕುಳಿತು ಒಂದರಿಂದ ಇನ್ನೊಂದಕ್ಕೆ ಪರಾಗಸ್ಪರ್ಶ ಮಾಡುತ್ತವೆ. ಇದರಿಂದಾಗಿ ಹೂ ಕಾಯಿಯಾಗಿ ಹಣ್ಣಾಗಿ ಅಥವಾ ಧಾನ್ಯವಾಗಿ ನಮಗೆ ಆಹಾರವಾಗುತ್ತದೆ. ಜಗತ್ತಿನ ಸುಮಾರು 35% ಆಹಾರೋತ್ಪತ್ತಿ ಜೇನುನೊಣಗಳನ್ನು ಅವಲಂಬಿಸಿದೆ. ಕೃಷಿಕರು ತಮ್ಮ ಗದ್ದೆ, ತೋಟಗಳಲ್ಲಿ ಜೇನು ಕುಟುಂಬ ಸಾಕಿ ಬೆಳೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಒಂದು ದೊಡ್ಡ ಸಮಸ್ಯೆ ಇಡಿಯ ಜಗತ್ತನ್ನೇ ಕಾಡುತ್ತಿದೆ. ಅದು ಜೇನು ನೊಣಗಳ ನಾಶ. ಹಲವು ಕಾರಣಗಳಿಂದ ಜೇನು ಸಂತತಿ ಕಡಿಮೆಯಾಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿವೆ -ಪರಾವಲಂಬಿ ಸೂಕ್ಷ್ಮ ಜೀವಿಗಳು, ಕಾಯಿಲೆಗಳು, ಜೇನು ಸಂತತಿಗೆ ಅಗತ್ಯ ಪರಿಸರದ ನಾಶ, ಸಸ್ಯಗಳಿಗೆ ಜನರು ಬಳಸುವ ರಾಸಾಯನಿಕಗಳು -ಇತ್ಯಾದಿ. ಇದರಿಂದಾಗಿ ಆಹಾರದ ಸಮಸ್ಯೆ ತೋರತೊಡಗಿದೆ. ಈ ಸಮಸ್ಯೆಗೆ ಒಂದು ಹೊಸ ಪರಿಹಾರದ ಸಾಧ್ಯತೆಯನ್ನು ವಿಜ್ಞಾನಿಗಳು ಪ್ರಯೋಗಗಳ ಮೂಲಕ ಮಾಡುತ್ತಿದ್ದಾರೆ. ಅದುವೇ ರೋಬೋಟಿಕ್ ಜೇನು ನೊಣಗಳು. ಹಾಗಂದರೇನು? ಈ ಸಂಚಿಕೆಯಲ್ಲಿ ಅದನ್ನು ಮತ್ತು ಹೇಗೆ ತಂತ್ರಜ್ಞಾನವು ಈ ವಿಷಯದಲ್ಲಿ ಸಹಾಯ ಮಾಡಬಲ್ಲುದು ಎಂಬುದನ್ನು ನೋಡೋಣ.

ವಿಜ್ಞಾನಿಗಳು ಹಲವು ದಶಕಗಳಿಂದ ಜೇನು ನೊಣಗಳನ್ನು ಗಮನಿಸುತ್ತಿದ್ದಾರೆ. ಅವುಗಳ ನಡವಳಿಕೆಗಳ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಜೇನು ನೊಣಗಳು ತಮಗೆ ಆಹಾರ ಕಂಡುಬಂದಾಗ ವಿಶಿಷ್ಟ ರೀತಿಯಲ್ಲಿ ಹಾರುತ್ತವೆ. ಒಂದು ರೀತಿಯಲ್ಲಿ ನರ್ತನ ಮಾಡುತ್ತವೆ. ಈ ನರ್ತನ ನೋಡಿದ ಉಳಿದ ಜೇನು ನೊಣಗಳು ಪರಾಗವಿರುವ ಹೂವನ್ನು ಆ ನೊಣ ಕಂಡುಹಿಡಿದಿದೆ ಎಂದು ಅರ್ಥ ಮಾಡಿಕೊಳ್ಳುತ್ತವೆ. ಅಷ್ಟು ಮಾತ್ರವಲ್ಲ ಆ ಹೂವುಗಳು ಎಲ್ಲಿವೆ ಎಂಬುದನ್ನೂ ಅರ್ಥ ಮಾಡಿಕೊಂಡು ಅಲ್ಲಿಗೆ ಹಾರುತ್ತವೆ. ವಿಜ್ಞಾನಿಗಳು ಈ ಮಾಹಿತಿಯನ್ನು ಈಗ ಹೊಸ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ವಿಜ್ಞಾನಿಗಳು ಜೇನು ಕುಟುಂಬವನ್ನು ಹತ್ತಿರದಿಂದ ಗಮನಿಸಲು ಕ್ಯಾಮೆರ, ಮೈಕ್ರೋಫೋನ್ ಎಲ್ಲ ಬಳಸಿಕೊಂಡಿದ್ದಾರೆ. ಜೇನು ನೊಣಗಳು ಮಾಡುವ ಸದ್ದಿನಿಂದ ಹಲವು ಮಾಹಿತಿಗಳನ್ನು ವಿಶ್ಲೇಷಣೆ ಮೂಲಕ ಕಂಡುಕೊಂಡಿದ್ದಾರೆ. ಜೇನು ನೊಣ ಹೊರಗಿನಿಂದ ವಾಪಸು ಬಂದಾಗ ಕ್ಯಾಮೆರ ಎಚ್ಚರಿಕೆಯಿಂದ ಗಮನಿಸುತ್ತದೆ. ಈ ಕ್ಯಾಮೆರಗಳು ಅಂತರಜಾಲದ ಮೂಲಕ ವಿಜ್ಞಾನಿಗಳ ಗಣಕಕ್ಕೆ ಸಂಪರ್ಕ ಹೊಂದಿರುತ್ತವೆ. ಆ ಗಣಕಗಳು ಎಚ್ಚರಿಕೆಯಿಂದ ನೊಣಗಳನ್ನು ಗಮನಿಸುತ್ತವೆ. ನೊಣ ಯಾವುದೋ ಒಂದು ಹೂವಿನ ಮೇಲೆ ಕುಳಿತಾಗ ಆ ಹೂವಿನಿಂದ ಅತಿ ಸೂಕ್ಷ್ಮ ಪರಾವಲಂಬಿ ಜೀವಿಗಳು ಜೇನು ನೊಣದ ಕಾಲು ಮೈಗಳ ಮೇಲೆ ಬಂದಿರುತ್ತವೆ. ನೊಣ ತನ್ನ ಪೆಟ್ಟಿಗೆಗೆ ಬಂದಾಗ ಇತರೆ ನೊಣಗಳಿಗೆ ಇವು ವರ್ಗಾವಣೆಯಾಗುತ್ತವೆ. ಬುದ್ಧಿವಂತ ಕ್ಯಾಮೆರ ಇದನ್ನು ಗಮನಿಸಿ ವರದಿ ಮಾಡುತ್ತದೆ. ಈಗ ವಿಜ್ಞಾನಿಗಳ ಕೆಲಸ ಏನೆಂದರೆ ಆ ಹೂವಿನ ಹತ್ತಿರ ನೊಣಗಳು ಹಾರದಂತೆ ನೋಡಿಕೊಳ್ಳುವುದು. ಇದನ್ನು ಹೇಗೆ ಸಾಧಿಸುವುದು?

ಜೇನು ನೊಣಗಳು ಹಾರುವ, ನರ್ತಿಸುವ ವಿಧಾನದಲ್ಲಿ ಹಲವು ಮಾಹಿತಿಗಳು, ಇತರೆ ನೊಣಗಳಿಗೆ ಸಂದೇಶಗಳು ಅಡಕವಾಗಿರುತ್ತವೆ. ಒಂದು ರೀತಿಯಲ್ಲಿ ನರ್ತಿಸಿದರೆ ಆಹಾರ ಕಂಡುಬಂದಿದೆ ಎಂದು ಅರ್ಥ. ವಿಜ್ಞಾನಿಗಳು ಈ ಮಾಹಿತಿಯನ್ನು ಬಳಸಿಕೊಂಡಿದ್ದಾರೆ. ಅವರು ನೊಣದ ಗಾತ್ರದ ರೋಬೋಟ್ ನೊಣಗಳನ್ನು ಸೃಷ್ಟಿಸಿದ್ದಾರೆ. ಇ ಋಓಬೋಟ್ ನೊಣಗಳು ನಿಜವಾದ ಜೇನು ನೊಣಗಳ ಗಾತ್ರದ್ದಾಗಿವೆ. ಜೇನು ನೊಣಗಳಂತೆಯೇ ಇವಕ್ಕೂ ರೆಕ್ಕೆಗಳಿವೆ. ಇವು ಜೇನು ನೊಣದಂತೆ ಹಾರಬಲ್ಲವು. ಇವು ತಮಗೆ ಬೇಕಾದ ವಿದ್ಯುತ್ತನ್ನು ಸೂರ್ಯನಿಂದ ತಮ್ಮಲ್ಲಿರುವ ಸೌರಬ್ಯಾಟರಿಗಳ ಮೂಲಕ ಪಡೆಯುತ್ತವೆ. ಇವು ನಿಜವಾದ ನೊಣಗಳಂತೆಯೇ ನರ್ತಿಸಬಲ್ಲವು. ಒಂದು ಹೂವಿನಲ್ಲಿ ಪರಾವಲಂಬಿ ಸೂಕ್ಷ್ಮ ಜೀವಿಗಳಿವೆ, ಇನ್ನೊಂದು ಕಡೆ ರಾಸಾಯನಿಕ ಬಳಸಿದ್ದಾರೆ, ಮತ್ತೊಂದು ಕಡೆ ಜೇನು ನೊಣಗಳನ್ನೇ ತಿನ್ನುವ ಕೀಟಗಳಿವೆ, ಇತ್ಯಾದಿ ಮಾಹಿತಿಗಳನ್ನು ಇತರೆ ಜೇನು ನೊಣಗಳಿಗೆ ತಲುಪಿಸುವ ಕೆಲಸವನ್ನು ಈ ರೋಬೋಟ್ ನೊಣಗಳು ಮಾಡುತ್ತವೆ. ಅವು ಅದನ್ನು ತಮ್ಮ ವಿಶಿಷ್ಟ ನರ್ತನದ ಮೂಲಕ ಮಾಡುತ್ತವೆ.  

ರೋಬೋಟ್ ಜೇನು ನೊಣ ತಯಾರಿಸಿ ಮಾರುವ ಕಂಪೆನಿಗಳು ಅಮೆರಿಕದಲ್ಲಿ ಅಸ್ತಿತ್ವಕ್ಕೆ ಬಂದಿವೆ. ಒಂದು ಕಂಪೆನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಅದು ತಯಾರಿಸಿ ಮಾರುತ್ತಿರುವ ರೋಬೋಟ್ ಜೇನು ನೊಣಗಳು ಹೂವಿಂದ ಹೂವಿಗೆ ಹಾರಿ ಪರಾಗಸ್ಪರ್ಶವನ್ನೇ ಮಾಡಬಲ್ಲವು. ಇದರಿಂದ ಕೃಷಿಕರಿಗೆ ಹೆಚ್ಚಿನ ಬೆಳೆ ತೆಗೆಯಲು ಅನುಕೂಲ. ಇಂತಹ ರೋಬೋಟ್ ಜೇನು ನೊಣಗಳು ಭಾರತಕ್ಕೆ ಇನ್ನೂ ಬಂದಿಲ್ಲ.

ರೋಬೋಟ್ ಜೇನು ನೊಣಕ್ಕೆ ಇಂಗ್ಲಿಷಿನಲ್ಲಿ ರೋಬೋಬೀ (robobee) ಎನ್ನುತ್ತಾರೆ. ಇವು ಒಂದು ಪೇಪರ್ ಕ್ಲಿಪ್ಪಿನ ಅರ್ಧದಷ್ಟು ಗಾತ್ರದ್ದಾಗಿವೆ. ಇವಕ್ಕೆ ಕೃತಕ ರೆಕ್ಕೆಗಳಿವೆ. ಒಂದು ಗ್ರಾಮಿನ ಹತ್ತನೇ ಒಂದರಷ್ಟು ತೂಗುತ್ತವೆ. ಕೃತಕ ಸ್ನಾಯುಗಳ ಸಹಾಯದಿಂದ ಇವು ಹಾರುತ್ತವೆ. ಈ ಸ್ನಾಯುಗಳು ವಿದ್ಯುತ್ತಿನಿಂದ ಕೆಲಸ ಮಾಡುತ್ತವೆ. ಇವುಗಳ ರೆಕ್ಕೆಗಳು ಸೆಕೆಂಡಿನ 120ರಷ್ಟು ಸಲ ಬಡಿದುಕೊಳ್ಳಬಲ್ಲವು. ಇವು ನೇರವಾಗಿ ಮೇಲಕ್ಕೆ, ಕೆಳಕ್ಕೆ, ಮುಂದಕ್ಕೆ ಹಾರಬಲ್ಲವು. ಈಗಾಗಲೇ ತಿಳಿಸಿದಂತೆ ಇವು ಸೌರವಿದ್ಯುತ್ ಬ್ಯಾಟರಿಯನ್ನು ಬಳಸುತ್ತವೆ.

ಜೇನು ಸಾಕಣೆಯಲ್ಲಿ ಇನ್ನೂ ಬೇರೆ ಬೇರೆ ವಿಧಾನಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಜೇನು ಕುಟುಂಬಗಳಿಗೆ ಒಂದು ದೊಡ್ಡ ಬಾಧೆ ಎಂದರೆ ಗೆದ್ದಲು ಮತ್ತು ಅದೇ ಜಾತಿಯ ಕೀಟಗಳು. ಇವು ಬಂದರೆ ಜೇನು ಕುಟುಂಬ ನಾಶವಾಗುತ್ತದೆ. ಇವು ಬಾರದಂತೆ ಮಾಡಲು ತುಂಬ ಕಷ್ಟ ಪಡಬೇಕು. ಜೇನುಪೆಟ್ಟಿಗೆಯನ್ನು ಒಂದು ಕಂಬದ ಮೇಲಿಟ್ಟು ಆ ಕಂಬಕ್ಕೆ ಕೆಳಗೆ ಸುತ್ತಕ್ಕೆ ನೀರು ತುಂಬಿಸುವ ವಿಧಾನವನ್ನು ಬಹುತೇಕ ಜೇನು ಸಾಕಣೆ ಮಾಡುವವರು ಬಳಸುತ್ತಾರೆ. ಈ ವಿಧಾನದಲ್ಲಿ ನೀರು ಖಾಲಿಯಾಗದ ಹಾಗೆ ನೋಡಿಕೊಳ್ಳುತ್ತಿರುವುದು ಅತೀ ಮುಖ್ಯವಾಗುತ್ತದೆ. ಜೇನು ಪೆಟ್ಟಿಗೆ ಸ್ವಲ್ಪ ಬಿಸಿಯಾದರೆ ಗೆದ್ದಲು ಬರುವುದಿಲ್ಲ ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಜೇನು ಪೆಟ್ಟಿಗೆಯನ್ನು ಎಚ್ಚರಿಕೆಯಿಂದ ತಾಪಮಾನ ನಿಯಂತ್ರಕ ಬಳಸಿ ಬಿಸಿ ಮಾಡಿ ಗೆದ್ದಲು ಬರದಂತೆ ಮಾಡುತ್ತಾರೆ. ತಾಪಮಾನ ಅತಿಯಾಗದಂತೆ ನೋಡಿಕೊಳ್ಳುವುದು ಮುಖ್ಯ. ತಂತ್ರಜ್ಞಾನವು ಇಲ್ಲಿ ನೆರವಿಗೆ ಬರುತ್ತದೆ.

ಹೀಗೆ ಹಲವು ರೀತಿಯಲ್ಲಿ ತಂತ್ರಜ್ಞಾನವು ಜೇನುಸಾಕಣೆಯಲ್ಲಿ ಸಹಾಯಕ್ಕೆ ಬರುತ್ತಿದೆ.

ಡಾಯು.ಬಿಪವನಜ

gadgetloka @ gmail . com

Be First to Comment

Leave a Reply

Your email address will not be published. Required fields are marked *