Press "Enter" to skip to content

ಲೆನ್ಸ್ ಬದಲಿಸಬಹುದಾದ ಕನ್ನಡಿರಹಿತ ಕ್ಯಾಮೆರ

ಎಪ್ರಿಲ್ ೨೦೨೦ ರಿಂದ ತುಷಾರ ಮಾಸಪತ್ರಿಕೆಯಲ್ಲಿ ಟೆಕ್ಕಿರಣ ಎಂಬ ಹೆಸರಿನ ಅಂಕಣ ಪ್ರಾರಂಭವಾಗಿದೆ. ಇದು ಅದರ ಮೂರನೆಯ ಕಂತು

ಕ್ಯಾಮೆರ ಯಾರಿಗೆ ಗೊತ್ತಿಲ್ಲ? ಈಗ ಹಳೆಯ ಫಿಲ್ಮ್ ಕ್ಯಾಮೆರಗಳು ಕಾಣಿಸುತ್ತಿಲ್ಲ. ಎಲ್ಲವೂ ಡಿಜಿಟಲ್‌ಮಯ. ಕ್ಯಾಮೆರಗಳಲ್ಲಿ ಹಲವು ನಮೂನೆಗಳು. ಮುಖ್ಯವಾಗಿ ಎರಡು ನಮೂನೆ -ಸುಮ್ಮನೆ ನೋಡಿ ಕ್ಲಿಕ್ ಮಾಡುವಂತಹದ್ದು (aim and shoot) ಮತ್ತು ಏಕಮಸೂರ ಪ್ರತಿಫಲನ (single lens reflex –SLR). ಏಮ್ ಅಂಡ್ ಶೂಟ್ ಕ್ಯಾಮೆರಗಳು ಈಗ ಮಾರುಕಟ್ಟೆಯಿಂದ ಬಹುತೇಕ ಮಾಯವಾಗಿವೆ. ಇದಕ್ಕೆ ಕಾರಣ ಶಕ್ತಿಶಾಲಿಯಾದ ಕ್ಯಾಮೆರಗಳನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ತುಂಬಿರುವುದು. ಈಗ ಮೂರನೆ ನಮೂನೆಯ ಕ್ಯಾಮೆರಗಳು ಬಂದಿವೆ. ಅದುವೇ ಲೆನ್ಸ್ ಬದಲಿಸಬಹುದಾದ ಕನ್ನಡಿಯಿಲ್ಲದ ಕ್ಯಾಮೆರ (Mirrorless interchangeable-lens camera). ಈ ಮೂರನೆಯ ನಮೂನೆಯ ಕ್ಯಾಮೆರಗಳು ಈ ಸಂಚಿಕೆಯ ವಸ್ತು.

 

ಮೊದಲನೆಯದಾಗಿ ಏಕಮಸೂರ ಪ್ರತಿಫಲನ ಕ್ಯಾಮೆರ ಅರ್ಥಾತ್ ಎಸ್‌ಎಲ್‌ಆರ್ ಕ್ಯಾಮೆರಗಳ ಬಗ್ಗೆ ತಿಳಿಯೋಣ. ಈಗ ಎಲ್ಲವೂ ಡಿಜಿಟಲ್ ಆಗಿರುವ ಕಾರಣ ನಾವು ತಿಳಿಯಬೇಕಾಗಿರುವುದು ಡಿಜಿಟಲ್ ಎಸ್‌ಎಲ್‌ಆರ್ ಅಥವಾ ಡಿಎಸ್‌ಎಲ್‌ಆರ್ ಕ್ಯಾಮೆರಗಳ ಬಗ್ಗೆ. ಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿ ಹೆಸರೇ ಸೂಚಿಸುವಂತೆ ವಸ್ತುವನ್ನು ನೋಡಲು ಮತ್ತು ಚಿತ್ರೀಕರಿಸಲು ಒಂದೇ ಮಸೂರವನ್ನು (ಲೆನ್ಸ್) ಬಳಸಲಾಗುತ್ತದೆ. ಮಸೂರ ಮತ್ತು ಚಿತ್ರೀಕರಣದ ಪರದೆ ಮಧ್ಯೆ ಒಂದು ಕನ್ನಡಿ ಬೆಳಕಿಗೆ 45 ಡಿಗ್ರಿ ಕೋನದಲ್ಲಿ ಇರುತ್ತದೆ. ಚಿತ್ರೀಕರಣದ ಸಮಯ ಬಿಟ್ಟು ಉಳಿದ ಸಮಯಗಳಲ್ಲಿ ಈ ಕನ್ನಡಿ ಮಸೂರದಿಂದ ಬರುವ ಬೆಳಕನ್ನು ಮೇಲ್ಮುಖವಾಗಿ ಪ್ರತಿಫಲಿಸುತ್ತದೆ. ಅಲ್ಲಿರುವ ಇನ್ನೊಂದು ಪೆಂಟಾಪ್ರಿಸಮ್ ಈ ಬೆಳಕನ್ನು ವ್ಯೂಫೈಂಡರ್‌ಗೆ ಕಳುಹಿಸುತ್ತದೆ. ಚಿತ್ರೀಕರಣದ ಸಮಯದಲ್ಲಿ ಈ ಕನ್ನಡಿ ಮೇಲಕ್ಕೆ ಹೋಗುತ್ತದೆ ಮತ್ತು ಅದರಿಂದಾಗಿ ಮಸೂರದಿಂದ ಬರುವ ಬೆಳಕು ನೇರವಾಗಿ ಚಿತ್ರೀಕರಣದ ಪರದೆ ಮೇಲೆ ಬೀಳುತ್ತದೆ. ಈ ನಮೂನೆಯ ಕ್ಯಾಮೆರಾಗಳಲ್ಲಿ ಚಿತ್ರೀಕರಣಕ್ಕೆ ಮತ್ತು ವಸ್ತುವನ್ನು ನೋಡಲು ಒಂದೇ ಮಸೂರ ಬಳಸುವುದರಿಂದಾಗಿ ನೋಡುವ ಮತ್ತು ಪಡೆಯುವ ಚಿತ್ರಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಈ ಕ್ಯಾಮೆರಾಗಳ ಇನ್ನೊಂದು ಸವಲತ್ತೆಂದರೆ ಹಲವು ನಮೂನೆಯ ಲೆನ್ಸ್ ಬದಲಿಸುವ ವ್ಯವಸ್ಥೆ. ವೃತ್ತಿನಿರತ ಛಾಯಾಗ್ರಾಹಕರು ಸಾಮಾನ್ಯವಾಗಿ ಇಂತಹ ಕ್ಯಾಮೆರಾಗಳನ್ನೇ ಬಳಸುತ್ತಾರೆ. ಈ ಕ್ಯಾಮೆರಾಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಅದರ ಜೊತೆ ಒಂದಕ್ಕಿಂತ ಹೆಚ್ಚು ಲೆನ್ಸ್‌ಗಳು ಜೊತೆಗಿರುವುದರಿಂದ ಇವುಗಳಿಗೆಂದೇ ದೊಡ್ಡ ಬ್ಯಾಗ್ ಬೇಕಾಗುತ್ತದೆ. ಬಹುತೇಕ ಡಿಎಸ್‌ಎಲ್‌ಆರ್‌ಗಳಲ್ಲಿ ವಿಡಿಯೋ ಶೂಟಿಂಗ್ ಮಾಡುವ ಸವಲತ್ತನ್ನೂ ನೀಡುತ್ತಿದ್ದಾರೆ. ದುಬಾರಿ ಡಿಎಸ್‌ಎಲ್‌ಆರ್ ಬಳಸಿ ಪೂರ್ತಿ ಪ್ರಮಾಣದ ಸಿನಿಮಾಗಳನ್ನೇ ತಯಾರಿಸುತ್ತಿದ್ದಾರೆ.

ಈಗ ಮೂರನೆಯ ನಮೂನೆಯ ಕ್ಯಾಮೆರಾಗಳು ಅಂದರೆ ಲೆನ್ಸ್ ಬದಲಿಸಬಹುದಾದ ಕನ್ನಡಿಯಿಲ್ಲದ ಕ್ಯಾಮೆರಗಳ ಬಗ್ಗೆ ತಿಳಿಯೋಣ. ಈ ನಮೂನೆಯ ಕ್ಯಾಮೆರಗಳು ಡಿಎಸ್‌ಎಲ್‌ಆರ್‌ನ ಹೊಸ ಅವತಾರಗಳೆನ್ನಬಹುದು. ಇವುಗಳ ಹೆಸರೇ ಸೂಚಿಸುವಂತೆ ಇವುಗಳಲ್ಲಿ ಡಿಎಸ್‌ಎಲ್‌ಆರ್‌ ಕ್ಯಾಮೆರಗಳಲ್ಲಿರುವಂತೆ ಕನ್ನಡಿಯಿರುವುದಿಲ್ಲ. ಎಸ್‌ಎಲ್‌ಆರ್ ಕ್ಯಾಮೆರಾದಂತೆ ಇದರಲ್ಲೂ ವಸ್ತುವನ್ನು ನೋಡಲು ಮತ್ತು ಚಿತ್ರೀಕರಿಸಲು ಒಂದೇ ಮಸೂರವನ್ನು ಬಳಸಲಾಗುತ್ತದೆ. ಮಸೂರ ಮತ್ತು ಚಿತ್ರೀಕರಣದ ಪರದೆ ಮಧ್ಯೆ ಕನ್ನಡಿ ಮಾತ್ರ ಇರುವುದಿಲ್ಲ. ಚಿತ್ರೀಕರಣವಾಗುವ ದೃಶ್ಯವನ್ನು ಪರದೆಯಲ್ಲೇ ನೋಡಿ ಕ್ಲಿಕ್ ಮಾಡಬೇಕು. ಇದು ಡಿಎಸ್‌ಎಲ್‌ಆರ್‌ನಲ್ಲಿ ಬಳಸುವ ಲೈವ್ ವ್ಯೂ ವಿಧಾನವನ್ನು ಹೋಲುತ್ತದೆ. ಹೀಗೆ ಮಾಡುವಾಗ ಕ್ಯಾಮೆರವನ್ನು ಕಣ್ಣಿಗೆ ಒತ್ತಿ ಹಿಡಿಯಲಾಗುವುದಿಲ್ಲ. ಬದಲಿಗೆ ಸ್ವಲ್ಪ ದೂರ ಹಿಡಿದು, ಪರದೆ ನೋಡಿಕೊಂಡು ಫೋಟೋ ಅಥವಾ ವಿಡಿಯೋ ಶೂಟಿಂಗ್ ಮಾಡಬೇಕು. ಆದರೆ ಕೆಲವರಿಗೆ ವ್ಯೂಫೈಂಡರ್ ಮೂಲಕ ನೋಡಿ ಕ್ಲಿಕ್ ಮಾಡಿಯೇ ಅಭ್ಯಾಸವಾಗಿರುತ್ತದೆ ಮತ್ತು ಅವರು ಅದನ್ನೇ ಇಷ್ಟಪಡುತ್ತಾರೆ. ಅಂತಹವರಿಗಾಗಿ ಕೆಲವು ಕನ್ನಡಿರಹಿತ ಕ್ಯಾಮೆರಗಳಲ್ಲಿ ಪ್ರತ್ಯೇಕ ವ್ಯೂಫೈಂಡರ್ ಇರುತ್ತದೆ. ಇದು ಪರದೆಯಲ್ಲಿ ಮೂಡಿದ ಚಿತ್ರವನ್ನೇ ಮತ್ತೊಮ್ಮೆ ವ್ಯೂಫೈಂಡರ್‌ನಲ್ಲಿ ಮೂಡಿಸುತ್ತದೆ. ಅಂದರೆ ಈ ವ್ಯೂಫೈಂಡರ್ ಇಲೆಕ್ಟ್ರಾನಿಕ್ ಆಗಿರುತ್ತದೆ. ಡಿಎಸ್‌ಎಲ್‌ಆರ್‌ಗಳಲ್ಲಿಯಂತೆ ನೇರವಾಗಿ ಮಸೂರದ ಮೂಲಕ ಕಾಣಿಸುವುದು ಅಲ್ಲ. ಇಲೆಕ್ಟ್ರಾನಿಕ್ ವ್ಯೂಫೈಂಡರ್ ಇರುವ ಈ ಕನ್ನಡಿರಹಿತ ಕ್ಯಾಮೆರಗಳು ಸ್ವಲ್ಪ ದುಬಾರಿಯಾಗಿವೆ. ಇಲೆಕ್ಟ್ರಾನಿಕ್ ವ್ಯೂಫೈಂಡರ್‌ನಲ್ಲಿ ಹಲವು ಹೆಚ್ಚಿನ ಮಾಹಿತಿಗಳನ್ನು ತೋರಿಸಬಹುದು. ಉದಾಹರಣೆಗೆ ಬೆಳಕು ಎಷ್ಟು ಇದೆ, ಆಯ್ಕೆ ಮಾಡಿಕೊಂಡ ಕವಾಟ ವೇಗ ಸಾಕೇ ಸಾಲದೇ, ಬಣ್ಣಗಳು ಯಾವು ಯಾವುವು ಎಷ್ಟೆಷ್ಟಿವೆ, ಇತ್ಯಾದಿ. ಆದರೆ ಇಲೆಕ್ಟ್ರಾನಿಕ್ ವ್ಯೂಫೈಂಡರ್‌ಗಳ ಒಂದು ಪ್ರಮುಖ ಭಾದಕವೆಂದರೆ ಅವು ಅತಿ ಕಡಿಮೆ ಬೆಳಕಿನಲ್ಲಿ ಚೆನ್ನಾಗಿ ಕೆಲಸ ಮಾಡುವುದಿಲ್ಲ ಎಂಬುದು.

ಈಗಾಗಲೇ ತಿಳಿಸಿದಂತೆ ಈ ನಮೂನೆಯ ಕ್ಯಾಮೆರಗಳಲ್ಲೂ ಮಸೂರ ಅಂದರೆ ಲೆನ್ಸ್‌ ಬದಲಿಸಬಹುದು. ಇವುಗಳಿಗೆ ಬಳಸುವ ಲೆನ್ಸ್‌ಗಳು ಬೇರೆ ನಮೂನೆಯವು. ನಿಮ್ಮಲ್ಲಿ ಈಗಾಗಲೇ ಡಿಎಸ್‌ಎಲ್‌ಆರ್ ಕ್ಯಾಮೆರ ಲೆನ್ಸ್‌ಗಳು ಇದ್ದಲ್ಲಿ ಅವುಗಳನ್ನು ಬಳಸಲು ಅಡಾಪ್ಟರ್ ದೊರೆಯುತ್ತದೆ. ಈ ನಮೂನೆಯ ಕ್ಯಾಮೆರಗಳು ಈಗಷ್ಟೆ ಮಾರುಕಟ್ಟೆಯನ್ನು ಪೂರ್ಣಪ್ರಮಾಣದಲ್ಲಿ ಪ್ರವೇಶಿಸಿವೆ. ಆದುದರಿಂದ ಇವುಗಳಿಗೆ ಡಿಎಸ್‌ಎಲ್‌ಆರ್ ಕ್ಯಾಮೆರಗಳಿಗೆ ದೊರೆಯುವಷ್ಟು ವಿಧದ ಲೆನ್ಸ್‌ಗಳು ದೊರೆಯುತ್ತಿಲ್ಲ. ಒಂದೆರಡು ವರ್ಷಗಳಲ್ಲಿ ಈ ಪರಿಸ್ಥಿತಿ ಬದಲಾಗಬಹುದು. ಹೇಗಿದ್ದರೂ ಡಿಎಸ್‌ಎಲ್‌ಆರ್‌ಕ್ಯಾಮೆರಗಳ ಲೆನ್ಸ್‌ಗಳನ್ನು ಬಳಸಲು ಅಡಾಪ್ಟರ್‌ಗಳು ದೊರೆಯುತ್ತಿವೆಯಲ್ಲ. ಆದುದರಿಂದ ಇದು ಅಷ್ಟು ದೊಡ್ಡ ಸಮಸ್ಯೆಯಲ್ಲ.

 

ಈ ನಮೂನೆಯ ಕ್ಯಾಮೆರಗಳಲ್ಲಿ ಡಿಎಸ್‌ಎಲ್‌ಆರ್ ಕ್ಯಾಮೆರಗಳಂತೆ ಮೇಲ್ಗಡೆ ಒಂದು ಪೆಂಟಾಪ್ರಿಸಮ್ ಇರುವುದಿಲ್ಲ. ಕನ್ನಡಿಯೂ ಇರುವುದಿಲ್ಲ. ಆದುದರಿಂದ ಇವುಗಳ ಗಾತ್ರ ಕಡಿಮೆಯಿರುತ್ತದೆ. ಫೋಕಸ್ ಪರದೆಯಲ್ಲಿಯಿರುವ ಸಂವೇದಕದಲ್ಲೇ ಆಗುತ್ತದೆ. ಆದುದರಿಂದ ಫೋಕಸ್ ವೇಗವಾಗಿ ಆಗುತ್ತದೆ. ಡಿಎಸ್‌ಎಲ್‌ಆರ್ ಕ್ಯಾಮೆರಗಳು ಕನ್ನಡಿರಹಿತ ಕ್ಯಾಮೆರಗಳಿಗಿಂತ ಚೆನ್ನಾಗಿ ಫೋಕಸ್ ಮಾಡಬಲ್ಲವು. ಈ ತಂತ್ರಜ್ಞಾನ ಸುಧಾರಣೆಯಾದಾಗ ಈ ಕ್ಷೇತ್ರದಲ್ಲೂ ಅವು ಮುಂದೆ ಬರಬಹುದು. ಕನ್ನಡಿ ಇಲ್ಲದ ಕಾರಣ ಇವು ಅತಿ ವೇಗವಾಗಿ ಫೋಟೋ ತೆಗೆಯಬಲ್ಲವು. ಅಂದರೆ ಅತಿ ವೇಗವಾಗಿ ಒಂದಾದ ನಂತರ ಇನ್ನೊಂದರಂತೆ ಕ್ಲಿಕ್ ಮಾಡಬೇಕಾದರೆ (ಬರ್ಸ್ಟ್) ಕನ್ನಡಿರಹಿತ ಕ್ಯಾಮೆರಗಳು ಡಿಎಸ್‌ಎಲ್‌ಆರ್‌ಗಳಿಗಿಂತ ವೇಗವಾಗಿ ಫೋಟೋ ತೆಗೆಯಬಲ್ಲವು.

ವಿಡಿಯೋ ಶೂಟಿಂಗ್ ಕ್ಷೇತ್ರಕ್ಕೆ ಬಂದರೆ ಕನ್ನಡಿರಹಿತ ಕ್ಯಾಮೆರಗಳು ಕಂಡಿತವಾಗಿಯೂ ಡಿಎಸ್‌ಎಲ್‌ಆರ್ ಕ್ಯಾಮೆರಗಳಿಂತ ಮುಂದೆ ಇವೆ. ಫೋಕಸ್ ಪರದೆಯಲ್ಲೇ ಆಗುವುದರಿಂದ ಇವು ಅತಿ ವೇಗವಾಗಿ ಫೋಕಸ್ ಮಾಡಬಲ್ಲವು. ಇವು ವಿಡಿಯೋ ಶೂಟಿಂಗ್‌ನಲ್ಲಿ ತುಂಬ ಸಹಾಯಕಾರಿ. ಎಲ್ಲ ಕನ್ನಡಿರಹಿತ ಕ್ಯಾಮೆರಗಳೂ 4k ರೆಸೊಲೂಶನ್‌ನ ವಿಡಿಯೋ ಮಾಡಬಲ್ಲವು. ಅತಿ ಮೇಲ್ದರ್ಜೆಯ ಡಿಎಸ್‌ಎಲ್‌ಆರ್‌ಗಳಲ್ಲಿ ಮಾತ್ರ ಈ ಸವಲತ್ತು ಇದೆ.

ಕನ್ನಡಿರಹಿತ ಕ್ಯಾಮೆರಗಳು ಸದಾ ಪರದೆಯನ್ನು ಆನ್ ಇಟ್ಟುಕೊಂಡು ಕೆಲಸ ಮಾಡುತ್ತವೆ. ಆದುದರಿಂದ ಇವು ಡಿಎಸ್‌ಎಲ್‌ಆರ್‌ಗಳಿಗಿಂತ ಅಧಿಕ ಬ್ಯಾಟರಿ ತಿನ್ನುತ್ತವೆ. ಈ ಒಂದು ಕ್ಷೇತ್ರದಲ್ಲಿ ಇವು ಡಿಎಸ್‌ಎಲ್‌ಆರ್‌ಗಳಿಗಿಂತ ತುಂಬ ಹಿಂದಿವೆ. ಬೆಲೆಯ ವಿಷಯಕ್ಕೆ ಬಂದರೆ ಉತ್ತಮ ಮೇಲ್ದರ್ಜೆಯ ಕನ್ನಡಿರಹಿತ ಕ್ಯಾಮೆರಗಳು ಸದ್ಯಕ್ಕೆ ದುಬಾರಿ ಎನ್ನಬಹುದು. ಆದರೂ ಇವು ಮುಂದಿನ ತಲೆಮಾರಿನ ಕ್ಯಾಮೆರಗಳು ಎನ್ನಬಹುದು. ಬಹುಶಃ ಇನ್ನು ಐದು ವರ್ಷಗಳ ನಂತರ ಡಿಎಸ್‌ಎಆರ್ ಕ್ಯಾಮೆರಗಳು ಮಾರುಕಟ್ಟೆಯಿಂದ ಮಾಯವಾಗಬಹುದು. ಅವುಗಳ ಜಾಗದಲ್ಲಿ ಕನ್ನಡಿರಹಿತ ಕ್ಯಾಮೆರಗಳು ಇರಬಹುದು.

 

-ಡಾ| ಯು.ಬಿ. ಪವನಜ

gadgetloka @ gmail . com

Be First to Comment

Leave a Reply

Your email address will not be published. Required fields are marked *