Press "Enter" to skip to content

ಗರ್ಭಕ್ಕೂ ಗ್ಯಾಜೆಟ್

ಮಹಾಭಾರತದಲ್ಲಿ ಒಂದು ಆಖ್ಯಾನ ಇದೆ. ಕೃಷ್ಣ ತನ್ನ ತಂಗಿ ಸುಭದ್ರೆಗೆ ಚಕ್ರವ್ಯೂಹವನ್ನು ಭೇದಿಸುವ ಉಪಾಯವನ್ನು ಹೇಳುತ್ತಿರುತ್ತಾನೆ. ಆಗ ಆಕೆ ಗರ್ಭಿಣಯಾಗಿರುತ್ತಾಳೆ. ಆಕೆಯ ಗರ್ಭದಲ್ಲಿ ಅಭಿಮನ್ಯು ಇರುತ್ತಾನೆ. ಆತ ಅದನ್ನು ಗರ್ಭದಲ್ಲಿದ್ದಾಗಲೇ ಕೇಳಿಸಿಕೊಳ್ಳುತ್ತಾನೆ. ಸುಭದ್ರೆ ನಿದ್ರೆಗೆ ಜಾರಿದಳು ಎಂದು ಕೃಷ್ಣ ಹೇಳುವುದನ್ನು ನಿಲ್ಲಿಸುತ್ತಾನೆ. ಆದುದರಿಂದ ಅಭಿಮನ್ಯುವಿಗೆ ಚಕ್ರವ್ಯೂಹವನ್ನು ಭೇದಿಸಿ ಒಳಕ್ಕೆ ಹೋಗುವುದು ಮಾತ್ರ ಗೊತ್ತಿರುತ್ತದೆ. ವಾಪಾಸು ಹಿಂದಕ್ಕೆ ಬರುವುದು ತಿಳಿದಿರುವುದಿಲ್ಲ. ಮುಂದಕ್ಕೆ ಕುರುಕ್ಷೇತ್ರ ಯುದ್ಧದಲ್ಲಿ ಆತ ಚಕ್ರವ್ಯೂಹದೊಳಕ್ಕೆ ನುಗ್ಗಿ ಸಾಯುತ್ತಾನೆ. ಇದು ಬಹುತೇಕ ಭಾರತೀಯರಿಗೆ ತಿಳಿದಿರುವ ಕಥೆ.  

ಈ ಕಥೆಯನ್ನು ನೆನಪಿಸಿಕೊಳ್ಳಲು ಕಾರಣವಿದೆ. ವಿಜ್ಞಾನಿಗಳು ಗರ್ಭದಲ್ಲಿರುವ ಮಗುವಿನ ಆಲಿಸುವ ಶಕ್ತಿ ಮತ್ತು ಅದರಿಂದಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ. ತಾಯಿಯ ಹೊಟ್ಟೆಯಲ್ಲಿದ್ದಾಗ 18 ವಾರಗಳ ನಂತರ ಮಗುವಿಗೆ ಧ್ವನಿಗಳನ್ನು ಆಲಿಸುವ ಶಕ್ತಿ ಹುಟ್ಟುತ್ತದೆ. ಮಗು ಎಷ್ಟೆಲ್ಲ ಧ್ವನಿಗಳನ್ನು ಕೇಳಿಸಿಕೊಳ್ಳಬಹುದು, ಹಲವು ವಿಧದ ಧ್ವನಿಗಳಿಗೆ ಮಗುವಿನ ಸ್ಪಂದನೆ ಹೇಗಿರುತ್ತದೆ, ಇದರಿಂದ ಮಗುವಿನ ಮೇಲೆ ಏನೆಲ್ಲ ಪರಿಣಾಮಗಳಾಗುತ್ತವೆ ಎಂದೆಲ್ಲ ಅವರು ಸಂಶೋಧನೆ ಮಾಡಿದ್ದಾರೆ.  ಗರ್ಭಧಾರಣೆಯ ಕೊನೆಯ ಮೂರು ತಿಂಗಳುಗಳಲ್ಲಿ ಅವರು ಕೆಲವು ಮಹಿಳೆಯರ ಗರ್ಭದಲ್ಲಿರುವ ಮಕ್ಕಳ ಮೇಲೆ ಸಂಶೋಧನೆ ಮಾಡಿದರು. ಆ ಮಕ್ಕಳಿಗೆ ಹಲವು ನಮೂನೆಯ ಧ್ವನಿಗಳನ್ನು ಕೇಳಿಸಿದರು. ಅಂದರೆ ಹೊರಗಡೆಯಿಂದ ಸ್ಪೀಕರ್ ಮೂಲಕ ಕೇಳಿಸಿದ್ದು. ಯಾವುದೇ ವಿಶೇಷ ಸಾಧನ ಮೂಲಕ ನೇರವಾಗಿ ಕೇಳಿಸಿದ್ದಲ್ಲ. ಗರ್ಭದಲ್ಲಿರುವ ಮಗು ಹಲವು ಬಗೆಯ ಧ್ವನಿಗಳನ್ನು ಆಲಿಸುತ್ತಿರುತ್ತದೆ. ಅವುಗಳಲ್ಲಿ ಮುಖ್ಯವಾದುದು ತಾಯಿಯ ಚಲನೆ, ಅದರಿಂದಾಗಿ ಆಗುವ ಧ್ವನಿಗಳು, ತಾಯಿಯ ಹೊಟ್ಟೆಯ ಒಳಗಿನ ಕೆಲವು ಧ್ವನಿಗಳು, ತಾಯಿ ಮಾತನಾಡುವ, ಹಾಡುವ ಧ್ವನಿ ಮತ್ತು ಹೊರಗಿನ ಧ್ವನಿ. ಮಗು ತಾಯಿಯ ಧ್ವನಿಗೆ ಮೊದಲು ಹೊಂದಿಕೊಳ್ಳುತ್ತದೆ. ನಂತರ ಹೊರಗಿನ ಧ್ವನಿಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ವಿಜ್ಞಾನಿಗಳು 12 ಗರ್ಭಿಣಿ ಮಹಿಳೆಯರನ್ನು ಪ್ರಯೋಗಕ್ಕೆ ಆರಿಸಿಕೊಂಡರು. ಅವರ ಗರ್ಭದಲ್ಲಿರುವ ಮಗುವಿಗೆ ಹೊರಗಿನಿಂದ ಸ್ಪೀಕರ್ ಮೂಲಕ ತಾಯಿಯ ಧ್ವನಿ, ಹಲವು ಬಗೆಯ ಧ್ವನಿ ಮತ್ತು ಹಲವು ಬಗೆಯ ಸಂಗೀತಗಳನ್ನು ಮಗು ಜನಿಸುವ ತನಕ ಕೇಳಿಸಿದರು. ಮಗುವಿನ ಜನನದ ನಂತರ ಸುಮಾರು 4 ತಿಂಗಳುಗಳ ವರೆಗೆ ಅದೇ ಧ್ವನಿಗಳನ್ನು ಮತ್ತೆ ಕೇಳಿಸಿ ಮಗುವಿನ ಸ್ಪಂದನೆಯನ್ನು ಪರಿಶೀಲಿಸಿದರು. ಸಂಶೋಧನೆ ಹೆಚ್ಚು ವೈಜ್ಞಾನಿಕವಾಗಿರಲು ಗರ್ಭದಲ್ಲಿದ್ದಾಗ ಯಾವುದೇ ಧ್ವನಿಯನ್ನು ಕೇಳಿಸದಿದ್ದ 12 ಮಕ್ಕಳನ್ನೂ ತೆಗೆದುಕೊಂಡು ಅದೇ ಧ್ವನಿಗಳಿಗೆ ಆ ಮಕ್ಕಳ ಸ್ಪಂದನೆಯನ್ನು ಪರಿಶೀಲಿಸಿದರು. ಅವರಿಗೆ ಕಂಡುಬಂದುದೇನೆಂದರೆ ಗರ್ಭದಲ್ಲಿದ್ದಾಗ ಆ ಧ್ವನಿಯನ್ನು ಕೇಳಿದ್ದ ಮಕ್ಕಳು ಜನನದ ನಂತರ ಅದೇ ಧ್ವನಿಗೆ ಬೇಗನೆ ಸ್ಪಂದಿಸಿದರು. ಅಂದರೆ ಅವರು ಆ ಧ್ವನಿಗಳನ್ನು ಗುರುತು ಹಿಡಿದರು. ಗರ್ಭದಲ್ಲಿದ್ದಾಗ ಮಗುವಿಗೆ ಉತ್ತಮ ಸಂಗೀತ ಕೇಳಿಸುವುದು, ಉತ್ತಮ ನೀತಿ ಇರುವ ಕಥೆ, ಹಾಡುಗಳನ್ನು ಹೇಳುವುದು, ಶ್ಲೋಕಗಳನ್ನು ಹೇಳುವುದು ಇವೆಲ್ಲವನ್ನು ಮಾಡುವುದು ಉತ್ತಮ ಎಂದು ಶತಮಾನಗಳಿಂದ ನಮ್ಮ ಹಿರಿಯರು ಹೇಳುತ್ತಿದ್ದುದು ನೆನಪಿದೆ ತಾನೆ? ಈಗ ವಿಜ್ಞಾನಿಗಳೂ ಅದನ್ನೇ ಪ್ರಯೋಗದ ಮೂಲಕ ತೋರಿಸಿ ಹೇಳುತ್ತಿದ್ದಾರೆ.

ಎಲ್ಲ ನಮೂನೆಯ ಸಂಶೋಧನೆಗಳೂ ಅಂತಿಮವಾಗಿ ಮಾನವನ ಉಪಯೋಗಕ್ಕೆ ಬರಬೇಕು ಎಂಬುದು ವಿಜ್ಞಾನದ ಆಶಯ. ಈ ಸಂಶೋಧನೆಯೂ ಹಾಗೆಯೇ. ಈಗಾಗಲೆ ಕೆಲವು ಕಂಪೆನಿಗಳು ಗರ್ಭದಲ್ಲಿರುವ ಮಗುವಿಗೆ ಉತ್ತಮ ಧ್ವನಿ ಮತ್ತು ಸಂಗೀತಗಳನ್ನು ಕೇಳಿಸಲು ವಿಶೇಷ ಸಾಧನಗಳನ್ನು ತಯಾರಿಸಿದ್ದಾರೆ. ಅವು ಮಾರುಕಟ್ಟೆಯಲ್ಲಿ ಲಭ್ಯ. ಅವುಗಳಲ್ಲಿ ಪ್ರಮುಖವಾಗಿ ಎರಡು ನಮೂನೆಗಳಿವೆ. ಅವುಗಳ ಬಗ್ಗೆ ಸ್ಥೂಲವಾಗಿ ತಿಳಿಯೋಣ.

ಮೊದಲನೆಯ ನಮೂನೆಯವುಗಳನ್ನು ಬೆಲ್ಲಿಬಡ್ ಎನ್ನುತ್ತಾರೆ. ಇವು ಗರ್ಭಿಣಿ ಮಹಿಳೆಯ ಹೊಟ್ಟೆಗೆ ಅಂಟಿಸುವ ಸ್ಪೀಕರ್ ಮಾದರಿಯಲ್ಲಿರುತ್ತವೆ. ಇವು ಒಂದು ಪ್ಲೇಯರ್‌ಗೆ ಸಂಪರ್ಕ ಹೊಂದಿರುತ್ತವೆ. ಆ ಪ್ಲೇಯರ್‌ನಲ್ಲಿ ಸಂಗೀತ ಅಥವಾ ಯಾವುದೇ ಧ್ವನಿ ಸಂಗ್ರಹಿಸಿ ಅದನ್ನು ಪ್ಲೇ ಮಾಡಬಹುದು. ಈ ಬೆಲ್ಲಿಬಡ್‌ನಲ್ಲಿ ಸ್ಪೀಕರ್‌ಗಳಲ್ಲಿ ಇರುವಂತೆಯೇ ಕಂಪಿಸುವ ಪರದೆ ಇರುತ್ತದೆ. ಆದರೆ ಅದು ಇಲ್ಲಿ ಗರ್ಭಿಣಿ ಮಹಿಳೆಯ ಹೊಟ್ಟೆಗೆ ಅಂಟಿಕೊಂಡಿರುತ್ತದೆ. ಆ ಬಡ್‌ನಿಂದ ಹೊರಡುವ ಧ್ವನಿ ನಮಗೆ ಕೇಳಿಸುವುದಿಲ್ಲ. ಆದರೆ ಅದು ಅಮ್ಮನ ದೇಹದ ಮೂಲಕ ಗರ್ಭದಲ್ಲಿರುವ ಮಗುವಿಗೆ ಕೇಳಿಸುತ್ತದೆ. ಮಗುವಿನ ಜೊತೆ ಮುಂದಕ್ಕೆ ಸಂವಹನಕ್ಕೆ ಸಹಾಯಕಾರಿಯಾಗಲು ಬಹುತೇಕ ಮಹಿಳೆಯರು ಈ ಸಾಧನದಲ್ಲಿ ತಮ್ಮದೇ ಧ್ವನಿಯನ್ನು ರೆಕಾರ್ಡ್ ಮಾಡಿ ಪ್ಲೇ ಮಾಡುತ್ತಾರೆ. ಅಥವಾ ನೇರವಾಗಿ ಮಾತನಾಡುತ್ತಾರೆ. ಇದೊಂದು ರೀತಿಯಲ್ಲಿ ಮುಗುವಿನ ಜೊತೆ ಟೆಲಿಪೋನ್ ಮೂಲಕ ಮಾತನಾಡಿದಂತೆ. ಆದರೆ ಇಲ್ಲಿ ಮಗು ಮಾತನಾಡುವುದಿಲ್ಲ. ಬೆಲ್ಲಿಬಡ್ ಅನ್ನು ಸುಲಭವಾಗಿ ಹೊಟ್ಟೆಯಿಂದ ಕೀಳಬಹುದು. ಮತ್ತೆ ಮತ್ತೆ ಬಳಸಬಹುದು. ಇದು ಹಾಗೂ ಇದೇ ನಮೂನೆಯ ಹಲವು ಸಾಧನಗಳು ಅಮೆಝಾನ್‌ನಲ್ಲಿ ಲಭ್ಯವಿವೆ.

ಎರಡನೆಯ ನಮೂನೆಯ ಸಾಧನದಲ್ಲಿ ಚಿಕ್ಕ ಇಯರ್‌ಬಡ್ ಮಾದರಿಯ ಸ್ಪೀಕರ್ ಅನ್ನು ನೇರವಾಗಿ ಗರ್ಭಿಣಿ ಮಹಿಳೆಯ ಯೋನಿಯೊಳಗೆ ತಳ್ಳಲಾಗುತ್ತದೆ. ಉಳಿದಂತೆ ಬೆಲ್ಲಿಬಡ್‌ಗೂ ಇದಕ್ಕೂ ವ್ಯತ್ಯಾಸ ಇಲ್ಲ. ಇದರಲ್ಲಿ ಇನ್ನೊಂದು ಮಾಮೂಲಿ ಹೆಡ್‌ಫೋನ್ ಕಿಂಡಿಯೂ ಇದೆ. ಅದಕ್ಕೆ ಹೆಡ್‌ಫೋನ್ ಹಾಕಿಕೊಂಡು ಮಹಿಳೆ ಮಗುವಿನ ಜೊತೆ ತಾನೂ ಆಲಿಸಬಹುದು. ಮಗು ಏನನ್ನು ಆಲಿಸುತ್ತಿದೆ ಎಂದು ತಿಳಿಯಲು ಈ ಸೌಲಭ್ಯ ಸಹಾಯಕಾರಿ. ಯೋನಿಯ ಒಳಗೆ ತಳ್ಳುವ ಸಾಧನವಾದುದರಿಂದ ಇದನ್ನು ವಿಶೇಷ ವಸ್ತುವಿಂದ ತಯಾರಿಸಲಾಗಿದೆ. ಅದು ದೇಹಕ್ಕೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ.  ಹಾಗೆಯೇ ದೇಹದ ಒಳಗಿನ ದ್ರವಗಳು ಈ ಬಡ್‌ಗೆ ಯಾವುದೇ ಹಾನಿ ಮಾಡುವುದಿಲ್ಲ. ಈ ಬಡ್‌ಗಳನ್ನು ಹೊರಗೆ ತೆಗೆದ ನಂತರ ನೀರಿನಲ್ಲಿ ತೊಳೆಯಬೇಕು. ಹಾಗೆ ತೊಳೆದು ಸಂಗ್ರಹಿಸಿಡಬಹುದು ಅಥವಾ ಬೇರೆಯವರಿಗೆ ಬಳಕೆಗೆ ನೀಡಬಹುದು.

ಈ ಎರಡೂ ನಮೂನೆಯ ಸಾಧನಗಳಿಂದ ನಿಜವಾಗಿಯೂ ಪ್ರಯೋಜನವಾಗುತ್ತದೆಯೇ ಎಂದು ಯಾವುದಾದರೂ ವಿಜ್ಞಾನಿ ಪ್ರಯೋಗ ಮಾಡಿ ನೋಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಈ ಲೇಖನದ ಪ್ರಾರಂಭದಲ್ಲಿ ತಿಳಿಸಿದ ಸಂಶೋಧನೆಯ ಫಲಿತಾಂಶವನ್ನು ಮಾನದಂಡವಾಗಿ ಇಟ್ಟುಕೊಳ್ಳುವುದಾದರೆ ಈ ಸಾಧನಗಳು ಪ್ರಯೋಜನಕಾರಿಯಾಗಬಲ್ಲವು ಎಂದು ಹೇಳಬಹುದು.

ಡಾಯು.ಬಿಪವನಜ

gadgetloka @ gmail . com

Be First to Comment

Leave a Reply

Your email address will not be published. Required fields are marked *