Press "Enter" to skip to content

ಹೈಪರ್‌ಲೂಪ್

ಭವಿಷ್ಯದ ಸಾರಿಗೆ

ಆದಿಮಾನವನಿಗೆ ಸಾಗುವುದು ಒಂದು ಗುರಿಯಾಗಿತ್ತು. ಕಾಲ ಕಳೆದಂತೆ ವೇಗವಾಗಿ ಸಾಗುವುದು ಗುರಿಯಾಯಿತು. ಈಗಂತೂ ಎಲ್ಲವೂ ವೇಗವಾಗಿ ಆಗಬೇಕು. ವೇಗ ವೇಗ ಅತಿ ವೇಗ ಎಂಬುದೇ ಜೀವನದ ಮಂತ್ರವಾಗುತ್ತಿದೆ. ಮಾನವ ಒಂದಾನೊಂದು ಕಾಲದಲ್ಲಿ ಎತ್ತಿನ ಗಾಡಿಗಳಲ್ಲಿ ಪ್ರಯಾಣ ಮಾಡುತ್ತಿದ್ದ. ಒಂದೊಂದೇ ಸುಧಾರಣೆಗಳು ಆಗುತ್ತಿದ್ದಂತೆ ಸಾರಿಗೆಯಲ್ಲೂ ಸುಧಾರಣೆಗಳು ಆದವು. ಮಾನವನ ಶಕ್ತಿಯಿಂದ ಚಲಿಸುವ ಸೈಕಲು, ಯಂತ್ರಗಳಿಂದ ಸಾಗುವ ಕಾರು, ಬಸ್ಸು, ರೈಲು, ಹಡಗು, ವಿಮಾನ, ಇತ್ಯಾದಿಗಳು ಬಂದವು. ಇವುಗಳಲ್ಲಿ ಪ್ರಮುಖವಾಗಿ ಗಮನಿಸಬೇಕಾದುದು ವಿಮಾನ. ಇದು ಉಳಿದವುಗಳಿಂದ ತುಂಬ ಭಿನ್ನ. ಇದು ಗಾಳಿಯಲ್ಲಿ ಹಾರುತ್ತದೆ ಮಾತ್ರವಲ್ಲ ಇದು ಅತಿ ವೇಗವಾಗಿ ಸಾಗುತ್ತದೆ. ಮಂಗಳೂರಿನಿಂದ ಬೆಂಗಳೂರಿಗೆ ಕಾರು, ಬಸ್ಸು, ರೈಲುಗಳು ಸುಮಾರು 8 ಗಂಟೆಯಲ್ಲಿ ಸಾಗುತ್ತವೆ. ವಿಮಾನವಾದರೋ ಕೇವಲ 45 ನಿಮಿಷದಲ್ಲಿ ತಲುಪುತ್ತದೆ. ಜನಸಾರಿಗೆಯ ವಿಮಾನ ಸರಿಸುಮಾರು ಗಂಟೆಗೆ 1000 ಕಿ.ಮೀ. ವೇಗದಲ್ಲಿ ಸಾಗುತ್ತದೆ. ರೈಲುಗಳಲ್ಲೂ ಅತಿ ವೇಗವಾಗಿ ಸಾಗುವ ಬುಲ್ಲೆಟ್ ರೈಲುಗಳು ಕೆಲವು ದೇಶಗಳಲ್ಲಿ ಬಳಕೆಯಲ್ಲಿವೆ. ಇವು ಗಂಟೆಗೆ ಸುಮಾರು 300-350 ಕಿಮೀ. ವೇಗದಲ್ಲಿ ಚಲಿಸುತ್ತವೆ. ಈಗ ಇನ್ನೊಂದು ನಮೂನೆಯ ಸಾರಿಗೆಯ ಕಡೆಗೆ ಗಮನ ಹರಿಸೋಣ. ಅದುವೇ ಹೈಪರ್‌ಲೂಪ್.

ಮೊದಲು ಹೈಪರ್‌ಲೂಪ್ ಎಂದರೇನು ಎಂದು ತಿಳಿಯೋಣ. ಹೈಪರ್‌ಲೂಪ್ ಎಂದರೆ ಜನರನ್ನು ಮತ್ತು ಸರಕುಗಳನ್ನು ಅತಿವೇಗವಾಗಿ ಸಾಗಣೆ ಮಾಡಲು ಅನುವು ಮಾಡಿಕೊಡುವ ಒಂದು ಉದ್ದೇಶಿತ ಸಾರಿಗೆ ವ್ಯವಸ್ಥೆಯಾಗಿದೆ. ಇದು ಜಗತ್ತಿನ ಅತಿ ಶ್ರೀಮಂತ ಎಲೋನ್ ಮಸ್ಕ್ ಅವರ ಹಲವು ಯೋಜನೆ ಕನಸುಗಳಲ್ಲಿ ಒಂದಾಗಿದೆ. ಇದರ ಕಲ್ಪನೆಯ ಮೂಲ ನಿರ್ವಾತ ರೈಲಿನ ಕಲ್ಪನೆಯಲ್ಲಿದೆ. ಹೈಪರ್‌ಲೂಪ್‌ನಲ್ಲಿ ಒಂದು ಪೈಪ್‌ ಮೂಲಕ ಒಂದು ಮಾತ್ರೆಯಾಕಾರದ ಸಾರಿಗೆ ಕೊಠಡಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ. ಈ ಕೊಠಡಿಗೆ ಅವರು ಪೋಡ್  ಎಂಬ ಹೆಸರಿಟ್ಟಿದ್ದಾರೆ. ಸ್ಲೀಪಿಂಗ್ ಪೋಡ್ ಅಂದರೆ ಮಲಗುವ ಚಿಕ್ಕ ಸ್ಥಳ ಎಂಬ ವ್ಯವಸ್ಥೆ ಹಲವು ಕಡೆ ಈಗಾಗಲೇ ಜಾರಿಯಲ್ಲಿದೆ. ಇದರಲ್ಲಿ ಒಬ್ಬ ವ್ಯಕ್ತಿ ಮಲಗುವಷ್ಟೇ ಸ್ಥಳ ಇರುತ್ತದೆ. ಹೈಪರ್‌ಲೂಪ್‌ನಲ್ಲಿ ಬಳಸುವ ಪೋಡ್ ಕೂಡ ಅಂತೆಯೇ ಇರುತ್ತದೆ. ಆದರೆ ಅದರಲ್ಲಿ ಸುಮಾರು 24 ಜನ ಕುಳಿತುಕೊಳ್ಳುವ ವ್ಯವಸ್ಥೆ ಇರುತ್ತದೆ. ಅದರ ಒಟ್ಟು ಆಕಾರ ಔಷಧಿಯ ಕ್ಯಾಪ್ಸೂಲ್ ಮಾದರಿಯಲ್ಲಿರುತ್ತದೆ. ಈ ಪೋಡ್ ಅನ್ನು ಒಂದು ಪೈಪ್‌ನ ಮೂಲಕ ಸಾಗಿಸಲಾಗುತ್ತದೆ. ಈ ಹೈಪರ್‌ಲೂಪ್‌ನ ವೇಗ ಸುಮಾರು ಗಂಟೆಗೆ ಸುಮಾರು 650 ರಿಂದ 750 ಕಿ.ಮೀ. ಇರುತ್ತದೆ. ಅಂದರೆ ಸಾಮಾನ್ಯ ಬುಲ್ಲೆಟ್ ರೈಲಿಗಿಂತಲೂ ಅಧಿಕ. ಕೆಲವು ಸಂದರ್ಭಗಳಲ್ಲಿ ವಿಮಾನಗಳೂ ಇದೇ ವೇಗದಲ್ಲಿ ಸಾಗುತ್ತವೆ. ಹೈಪರ್‌ಲೂಪ್ ಅಳವಡಿಸಿದರೆ ಬೆಂಗಳೂರಿನಿಂದ ಮುಂಬಯಿಗೆ 60 ರಿಂದ 75 ನಿಮಿಷಗಳಲ್ಲಿ ಪ್ರಯಾಣಿಸಬಹುದು.

ಹೈಪರ್‌ಲೂಪ್‌ನಲ್ಲಿ ಬಳಸುವ ಪೋಡ್ (ಚಿತ್ರ : RichMacf)

ಈ ಹೈಪರ್‌ಲೂಪ್ ಹೇಗೆ ಕೆಲಸ ಮಾಡುತ್ತದೆ? ಇದು ಅಯಸ್ಕಾಂತ ಶಕ್ತಿಯಿಂದ ಗಾಳಿಯಲ್ಲಿ ಸ್ವಲ್ಪ ಮೇಲೇರಿ ತೇಲಿ ಚಲಿಸುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ magnetic levitation ಎನ್ನುತ್ತಾರೆ. ಅಯಸ್ಕಾಂತದ ಸಜಾತೀಯ ಧ್ರುವಗಳು ಒಂದನ್ನೊಂದು ಪರಸ್ಪರ ವಿರುದ್ಧ ದಿಕ್ಕಿಗೆ ತಳ್ಳುತ್ತವೆ ಮತ್ತು ವಿಜಾತೀಯ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ. ಈ ನಿಯಮವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಶಾಶ್ವತ ಅಯಸ್ಕಾಂತ ಮತ್ತು ವಿದ್ಯುತ್ಕಾಂತೀಯ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗಿದೆ. ಪೋಡ್ ಅನ್ನು ಎತ್ತುವುದು ಮತ್ತು ಮುಂದಕ್ಕೆ ತಳ್ಳುವುದು ಅಥವಾ ಎಳೆಯುವುದನ್ನು ಕಾಂತೀಯ ಶಕ್ತಿಯ ಮೂಲಕ ಮಾಡಲಾಗುತ್ತದೆ. ಪೋಡ್ ಒಂದು ಪೈಪ್ ಮೂಲಕ ಸಾಗುತ್ತದೆ. ಈ ಪೈಪ್ ಅನ್ನು ಸ್ವಲ್ಪ ನಿರ್ವಾತ ಮಾಡಿ ಒಂದು ಬದಿಯಿಂದ ಗಾಳಿಯನ್ನು ಎಳೆಯುವ ಮೂಲಕವೂ ಚಲಿಸುವ ಪೋಡ್‌ಗೆ ಇನ್ನಷ್ಟು ವೇಗವನ್ನು ನೀಡಲಾಗುತ್ತದೆ.

ಹೈಪರ್‌ಲೂಪ್ (ಚಿತ್ರ : Neuhausengroup)

ಬೆಂಗಳೂರಿನಿಂದ ಮುಂಬಯಿಗೆ ಹೈಪರ್‌ಲೂಪ್ ಪೋಡ್ ಮೂಲಕ ಚಲಿಸಲು ಇಲ್ಲಿಂದ ಅಲ್ಲಿ ತನಕ ಪೈಪ್ ಹಾಕಬೇಕು. ಅದು ಸುರಕ್ಷಿತವಾಗಿರಬೇಕು. ಅದರಲ್ಲಿ ಬಿರುಕು ಇರಬಾರದು. ಪೋಡ್ ‌ಅನ್ನು ಹವಾನಿಯಂತ್ರಿತ ಮಾಡಬೇಕು. ಅದರಲ್ಲಿ ಕುಳಿತುಕೊಳ್ಳುವವರು ಅತಿವೇಗದ ಸಾರಿಗೆಗೆ ಹೊಂದಿಕೊಳ್ಳಬೇಕು. ಹೈಪರ್‌ಲೂಪ್ ವ್ಯವಸ್ಥೆಯನ್ನು ಸರಕು ಸಾಗಾಣಿಕೆಗೂ ಬಳಸಬಹುದು. ರೈಲುಹಳಿಗಳಲ್ಲಿ ಮಾಡಿದಂತೆ ಹಲವು ಪೈಪ್ ಸಾಲುಗಳು, ಕವಲುಗಳು ಎಲ್ಲ ಸಾಧ್ಯವಿವೆ. ಬೆಂಗಳೂರಿನಿಂದ ಮುಂಬಯಿಗೆ ಒಂದು, ಬೆಂಗಳೂರಿನಿಂದ ದೆಹಲಿಗೆ ಇನ್ನೊಂದು ಹೈಪರ್‌ಲೂಪ್ ಇದ್ದಲ್ಲಿ ಸುಮಾರು ಅರ್ಧ ದಾರಿಯವರೆಗೆ ಅವೆರಡೂ ಒಂದೇ ಆಗಿರುತ್ತವೆ. ಅರ್ಧ ದಾರಿಯಲ್ಲಿ ಹೈಪರ್‌ಲೂಪ್ ಎರಡಾಗಿ ಕವಲೊಡೆದು ಒಂದು ಮುಂಬಯಿಗೆ ಇನ್ನೊಂದು ದೆಹಲಿಗೆ ಹೋಗುತ್ತದೆ.

ಹೈಪರ್‌ಲೂಪ್ ಸಾರಿಗೆ ವ್ಯವಸ್ಥೆ ಅತಿ ದುಬಾರಿಯದು. ಇದನ್ನು ಕಾರ್ಯರೂಪಕ್ಕೆ ತರಲು ಬಿಲಿಯನ್‌ಗಟ್ಟಲೆ ಡಾಲರ್ ಹಣ ಬೇಕು. ಆದರೂ ಕೆಲವು ಕಂಪೆನಿಗಳು ಹೈಪರ್‌ಲೂಪ್ ಅನ್ನು ಕಾರ್ಯಗತ ಮಾಡಲು ಹುಟ್ಟಿಕೊಂಡಿವೆ. ಹಲವಾರು ಬಿಲಿಯನೈರ್‌ಗಳು ಈ ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸದ್ಯಕ್ಕೆ ಒಂದು ಹೈಪರ್‌ಲೂಪ್ ಕಂಪೆನಿ ಇದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದೆ. ಅದು 250 ಮೀ.ಗಳಷ್ಟು ದೂರವನ್ನು ಹೈಪರ್‌ಲೂಪ್ ಮೂಲಕ ಕ್ರಮಿಸಿ ತೋರಿಸಿದೆ. ಅದರಲ್ಲಿ ಬಳಸಿದ್ದು ಎರಡೇ ಜನರು ಹಿಡಿಸುವ ಚಿಕ್ಕ ಪೋಡ್. ಅದು ಗಂಟೆಗೆ ಸುಮಾರು 107 ಕಿ.ಮೀ. ವೇಗದಲ್ಲಿ ಸಾಗಿತ್ತು. ಹೈಪರ್‌ಲೂಪ್ ಸರಿಯಾಗಿ ಕಾರ್ಯನಿರ್ವಹಿಸಿ ಜನರು ಅದರಲ್ಲಿ ಓಡಾಡುವಂತಾಗಲು ಬಹುಶಃ ಇಸವಿ 2030 ಆಗಬಹುದು ಎಂಬುದು ಸದ್ಯದ ಅಂದಾಜು. ಭಾರತದಲ್ಲೂ ಕೆಲವು ನಗರಗಳ ನಡುವೆ ಇದನ್ನು ಕಾರ್ಯಗತ ಮಾಡಲು ಆಲೋಚನೆಗಳಿವೆ.

ಡಾಯು.ಬಿಪವನಜ

gadgetloka @ gmail . com

Be First to Comment

Leave a Reply

Your email address will not be published. Required fields are marked *