ಕ್ರಿಪ್ಟೊಕರೆನ್ಸಿಗಳ ಕಿರು ಪರಿಚಯ
“ಬಿಟ್ ಕಾಯಿನ್ ಹಗರಣದ ಆರೋಪಿ 5000 ಬಿಟ್ ಕಾಯಿನ್ ದೋಚಿದ್ದನೆಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ.
ಕದ್ದ ಆ ಬಿಟ್ ಕಾಯಿನ್ ಎಲ್ಲಿದೆ?
ಅದನ್ನು ಜಪ್ತಿ ಮಾಡಲಾಗಿದೆಯೇ?
ಇಲ್ಲವೇ ಅವು ಇನ್ನೂ ಪತ್ತೆಯಾಗಿಲ್ಲವೇ?”
-ಇವು ಕರ್ನಾಟಕದ ಖ್ಯಾತ ರಾಜಕಾರಣಿಯೊಬ್ಬರ ಹೇಳಿಕೆ. ಇದನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣವಿದೆ. ಈ ಹೇಳಿಕೆಯನ್ನು ಓದಿದರೆ ಈ ಬಿಟ್‌ಕಾಯಿನ್ ಎಂಬುದು ಯಾವುದೋ ಒಂದು ಹೊಸ ನಮೂನೆಯ ನಾಣ್ಯ, ಅದನ್ನು ಯಾರೋ ಕದ್ದಿದ್ದಾರೆ, ಕದ್ದ ನಾಣ್ಯಗಳನ್ನು ಹುಡುಕಬೇಕಾಗಿದೆ ಎಂಬ ಅರ್ಥಗಳು ಹೊಳೆಯುತ್ತವೆ. ಆದರೆ ಈ ಬಿಟ್‌ಕಾಯಿನ್ ಎಂಬುದು ಕದ್ದು ಅಡಗಿಸಿಡಬಹುದಾದ ಭೌತಿಕ ನಾಣ್ಯಗಳಲ್ಲ. ಅವು ಡಿಜಿಟಲ್ ಜಗತ್ತಿನಲ್ಲಿ ವ್ಯವಹರಿಸುವ ಕಣ್ಣಿಗೆ ಕಾಣಿಸದ ಹಣ ಎನ್ನಬಹುದು. ಹಾಗೆಂದರೇನು ಎಂದು ತಿಳಿಯೋಣ.
ಕಾಯಿನ್ ಎಂದರೆ ನಾಣ್ಯ. ಅದು ಹಣಕಾಸಿನ ಒಂದು ಭಾಗ. ಇದನ್ನು ಇಂಗ್ಲಿಷಿನಲ್ಲಿ ಕರೆನ್ಸಿ ಎನ್ನುತ್ತಾರೆ. ಈ ಹಣಕಾಸು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮೊದಲು ಗಮನಿಸೋಣ. ಹಣವನ್ನು ನೀಡಿ ನೀವು ವಸ್ತು ಅಥವಾ ಸೇವೆಗಳನ್ನು ಪಡೆದುಕೊಳ್ಳುತ್ತೀರಿ. ನಿಮ್ಮ ದುಡಿಮೆಗೆ ಪ್ರತಿಫಲವಾಗಿ ನೀವು ನಾಣ್ಯ ಅಥವಾ ನೋಟುಗಳನ್ನು ಪಡೆಯುತ್ತೀರಿ. ಈ ನಾಣ್ಯಗಳನ್ನು ಠಂಕಿಸುವುದು ಮತ್ತು ನೋಟುಗಳನ್ನು ಮುದ್ರಿಸುವವರು ಯಾರು? ಆಯಾ ದೇಶದ ಸರಕಾರ ಅಥವಾ ಸರಕಾರದ ಮುಖ್ಯ ಬ್ಯಾಂಕ್ ಇದನ್ನು ಮಾಡುತ್ತದೆ. ಭಾರತದ ಮಟ್ಟಿಗೆ ಇದು ರಿಸರ್ವ್ ಬ್ಯಾಂಕ್. ದೇಶದಲ್ಲಿ ಹಣದ ಮುಗ್ಗಟ್ಟು ಬಂದಾಗ ಅವರು ಎಷ್ಟು ಬೇಕಾದರೂ ನೋಟು ಮುದ್ರಿಸಬಹುದೇ? ಇಲ್ಲ. ಸಾಮಾನ್ಯವಾಗಿ ಇಲ್ಲಿ ದೇಶದಲ್ಲಿರುವ ಒಟ್ಟು ಐಶ್ವರ್ಯಕ್ಕೆ ಸಮಾನವಾದ ಮೊತ್ತದ ನೋಟುಗಳನ್ನು ಮಾತ್ರವೇ ಮುದ್ರಿಸಲಾಗುತ್ತದೆ. ಈ ನೋಟು ವ್ಯವಹಾರವನ್ನು ಯಾರು ನಿಯಂತ್ರಿಸುತ್ತಾರೆ? ಉತ್ತರವನ್ನು ಈಗಾಗಲೇ ನೀಡಿ ಆಗಿದೆ -ಅದು ರಿಸರ್ವ್ ಬ್ಯಾಂಕ್. ಅಂದರೆ ಇಡಿಯ ವ್ಯವಹಾರ ಒಂದು ಕೇಂದ್ರೀಕೃತ ವ್ಯವಸ್ಥೆಯ ನಿಯಂತ್ರಣದಲ್ಲಿದೆ.
ಈಗ ಬಹುತೇಕ ಹಣಕಾಸು ವ್ಯವಹಾರ ಕಾಗದದ ನೋಟುಗಳಿಂದ ಡಿಜಿಟಲ್‌ಗೆ ಬದಲಾಗಿವೆ. ನಮ್ಮ ಸರಕಾರವು ಸಾಧ್ಯವಿದ್ದಷ್ಟು ಡಿಜಿಟಲ್ ಹಣ ಪಾವತಿಗೆ ಉತ್ತೇಜನ ನೀಡುತ್ತಿದೆ. ನಮ್ಮಲ್ಲಿ ಸದ್ಯ ಬಳಕೆಯಲ್ಲಿರುವ ಡಿಜಿಟಲ್ ಹಣ ಎಂದರೆ ಯು.ಪಿ.ಐ., ಬ್ಯಾಂಕ್ ಖಾತೆ, ಇತ್ಯಾದಿ. ಇವೆಲ್ಲವುಗಳಲ್ಲೂ ಸಾಮಾನ್ಯ ಅಂಶವೆಂದರೆ ಯಾರಲ್ಲಿ ಎಷ್ಟು ಹಣ ಇದೆ ಎಂಬುದನ್ನು ಒಂದು ಡಿಜಿಟಲ್ ಲೆಡ್ಜರ್‌ನಲ್ಲಿ ಇಟ್ಟುಕೊಳ್ಳಲಾಗುತ್ತದೆ. ಈ ಲೆಡ್ಜರ್ ಬ್ಯಾಂಕಿನ ನಿಯಂತ್ರಣದಲ್ಲಿರುತ್ತದೆ. ಅಂದರೆ ಇದು ಕೇಂದ್ರೀಕೃತ ವ್ಯವಸ್ಥೆ. ಕೇಂದ್ರೀಕೃತ ಲೆಡ್ಜರ್ ವ್ಯವಸ್ಥೆಯಿಂದಾಗಿ ಹಣವನ್ನು ಎರಡು ಕಡೆ ಬಳಕೆ ಮಾಡದಂತೆ ತಡೆಯಲಾಗುತ್ತದೆ.
ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಈ ವ್ಯವಹಾರ ನಡೆದರೆ ಹೇಗೆ? ಅಂದರೆ ಯಾವುದೇ ಒಂದು ಸಂಸ್ಥೆ ಅಥವಾ ವ್ಯಕ್ತಿ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅಂತಹ ವ್ಯವಸ್ಥೆಯೇ ಬ್ಲಾಕ್‌ಚೈನ್ ಮತ್ತು ಆ ವ್ಯವಸ್ಥೆಯನ್ನು ಬಳಸುವ ಹಣಕಾಸು ವ್ಯವಸ್ಥೆಯೇ ಬಿಟ್‌ಕಾಯಿನ್. ಇಲ್ಲಿಯ ಪ್ರಮುಖ ತತ್ತ್ವ ಎಂದರೆ ಮಾಹಿತಿಯ ವಿಕೇಂದ್ರೀಕರಣ.
ಈ ಬಿಟ್‌ಕಾಯಿನ್ ವ್ಯವಸ್ಥೆಯನ್ನು ಮೊದಲ ಬಾರಿಗೆ ಸೂಚಿಸಿದ್ದು ಸತೋಷಿ ನಾಕಮೊಟೊ. ಇದು ಒಂದು ವ್ಯಕ್ತಿಯೋ ಅಥವಾ ಕೆಲವು ವ್ಯಕ್ತಿಗಳ ಗುಂಪೋ ಎಂದು ಯಾರಿಗೂ ಇದು ತನಕ ತಿಳಿದುಬಂದಿಲ್ಲ. ಇದು ನಡೆದುದು 2008ರಲ್ಲಿ. ಅವರು ಒಂದು ಶ್ವೇತಪತ್ರ ಅಥವಾ ಸಂಶೋಧನಾ ಪ್ರಬಂಧ ಮಂಡಿಸಿ ಅದರಲ್ಲಿ ವಿಕೇಂದ್ರೀಕೃತ ಹಣಕಾಸು ವ್ಯವಸ್ಥೆಯನ್ನು ಪ್ರತಿಪಾದಿಸಿದರು. ಅದಕ್ಕೆ ಅವರು ಸೂಚಿಸಿದ ಹೆಸರು ಬಿಟ್‌ಕಾಯಿನ್ ಎಂದು. ಈ ವ್ಯವಸ್ಥೆಯ ಪ್ರಮುಖ ಗುಣವೈಶಿಷ್ಟ್ಯವೆಂದರೆ ಬಿಟ್‌ಕಾಯಿನ್ ಮಾಹಿತಿಯನ್ನು ಒಳಗೊಂಡ ಲೆಡ್ಜರ್ ಯಾವುದೋ ಒಂದು ಬ್ಯಾಂಕಿನ ಒಂದು ಗಣಕದಲ್ಲಿ ಇರುವುದಿಲ್ಲ. ಬದಲಿಗೆ ಜಗತ್ತಿನಾದ್ಯಂತ ಹಬ್ಬಿರುವ ಗಣಕಜಾಲದಲ್ಲಿರುವ ಹಲವು ಗಣಕಗಳಲ್ಲಿ ಪ್ರತಿಯಾಗಿರುತ್ತದೆ. ಎಲ್ಲ ಗಣಕದಲ್ಲೂ ಒಂದೇ ಮಾಹಿತಿ ಪ್ರತಿಯಾಗಿರುತ್ತದೆ. ಒಂದು ಗಣಕ ಜಾಲದಿಂದ ಕಳಚಿಕೊಂಡರೂ ಮಾಹಿತಿಗೆ ನಷ್ಟವಾಗುವುದಿಲ್ಲ. ಅದು ಇನ್ನೊಂದೆಡೆ ಸುರಕ್ಷಿತವಾಗಿರುತ್ತದೆ. ಈ ಲೆಡ್ಜರ್ ಜಾಲದ ಹೆಸರೇ ಬ್ಲಾಕ್‌ಚೈನ್. ಬಿಟ್‌ಕಾಯಿನ್ ಬಳಸಿ ಜಗತ್ತಿನ ಮೊತ್ತಮೊದಲ ವ್ಯಾಪಾರ 2010ರಲ್ಲಿ ಆಯಿತು.
ಬಿಟ್‌ಕಾಯಿನ್ ಸಂಪೂರ್ಣ ಡಿಜಿಟಲ್ ಹಣ. ಇದು ಯಾವುದೇ ಮುದ್ರಿತ ನೋಟು ಅಲ್ಲ. ಇದನ್ನು ಯಾವುದೇ ಒಂದು ದೇಶ ಅಥವಾ ಬ್ಯಾಂಕ್ ನಿಯಂತ್ರಿಸುತ್ತಿಲ್ಲ. ಇದರ ಮೂಲಕ ಮಾಡುವ ವ್ಯವಹಾರಗಳು ಸರಕಾರಗಳ ಸುಪರ್ದಿಗೆ ಬರುವುದಿಲ್ಲ. ಆದುದರಿಂದಲೇ ಹಲವು ಅವ್ಯವಹಾರಗಳಿಗೆ ಬಿಟ್‌ಕಾಯಿನ್ ಬಳಕೆಯಾಗುತ್ತಿದೆ. ಭಾರತ ಸರಕಾರವು ಬಿಟ್‌ಕಾಯಿನ್‌ಬಳಕೆಯನ್ನು 2018ರಲ್ಲಿ ನಿಷೇಧಿಸಿತ್ತು. 2019ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಈ ನಿಷೇಧವನ್ನು ತೆರವುಗೊಳಿಸಿ ಬಿಟ್‌ಕಾಯಿನ್ ಬಳಕೆ ಬಗ್ಗೆ ನೀತಿ ನಿಯಮಗಳನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು. ಆದರೆ ಸರಕಾರವು ಇದು ತನಕ ಯಾವುದೇ ನಿಯಮಾವಳಿಗಳನ್ನು ರೂಪಿಸಿಲ್ಲ. ಈಗ ಒಂದು ಬಿಟ್‌ಕಾಯಿನ್ ಬೆಲೆ ಸುಮಾರು ರೂ.49 ಲಕ್ಷ ಇದೆ. ಬಿಟ್‌ಕಾಯಿನ್ ಬೆಲೆ ಷೇರು ಮಾರುಕಟ್ಟೆಯಲ್ಲಿ ಕಂಪೆನಿಗಳ ಷೇರು ಬೆಲೆಯಂತೆ ಮೇಲೆ ಕೆಳಗೆ ಹೋಗುತ್ತಿರುತ್ತದೆ.
ಬಿಟ್‌ಕಾಯಿನ್ ಒಂದು ಗೂಢನಾಣ್ಯ ಎನ್ನಬಹುದು. ಇದನ್ನು ಇಂಗ್ಲಿಷಿನಲ್ಲಿ cryptocurrency ಎನ್ನುತ್ತಾರೆ. ಈ ಡಿಜಿಟಲ್ ಹಣವನ್ನು ಇಟ್ಟುಕೊಳ್ಳಲು ನಿಮ್ಮಲ್ಲಿ ಒಂದು ಡಿಜಿಟಲ್ ಪರ್ಸ್ ಅಥವಾ ವ್ಯಾಲೆಟ್ ಇರಬೇಕು. ಇದೊಂದು ಅಕ್ಷರ ಮತ್ತು ಸಂಖ್ಯೆಗಳ ಸಮೂಹ. ಉದಾ- 932xxMFyFLfuDCs84Bf1DTU3Ua6nUMfEn7. ಇದು ಗೂಢಲಿಪೀಕರಿಸಲ್ಪಟ್ಟ (encrypted) ವಿಳಾಸ. ಈ ವಿಳಾಸಕ್ಕೆ ಬಿಟ್‌ಕಾಯಿನ್ ಕಳುಹಿಸಿದರೆ ಅದರ ಯಜಮಾನರಿಗೆ ಅದು ತಲುಪುತ್ತದೆ. ಈ ನಮೂನೆಯ ಗೂಢನಾಣ್ಯ ಬಿಟ್‌ಕಾಯಿನ್ ಮಾತ್ರವಲ್ಲ. ಹಲವಾರು ಗೂಢನಾಣ್ಯಗಳು (cryptocurrency) ಈಗ ಚಾಲನೆಯಲ್ಲಿವೆ. ಬಿಟ್‌ಕಾಯಿನ್ ಇವುಗಳಲ್ಲಿ ಮೊದಲನೆಯದು ಮತ್ತು ಸದ್ಯಕ್ಕೆ ಅತಿ ಜನಪ್ರಿಯವಾಗಿರುವುದು. ಈ ವ್ಯವಸ್ಥೆ ಹೇಗಿದೆ ಎಂದರೆ ಬಿಟ್‌ಕಾಯಿನ್ ಎಲ್ಲಿಂದ ಎಲ್ಲಿಗೆ ಹೋಗಿದೆ ಎಂದು ಕಂಡುಹಿಡಿಯುವುದು ಸುಲಭವಲ್ಲ. ಇದರಿಂದಾಗಿಯೇ ಹಲವು ನಮೂನೆಯ ಅವ್ಯವಹಾರಗಳಿಗೂ ಇವು ಬಳಕೆಯಾಗುತ್ತಿವೆ.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment