“ನನ್ನ ಮಗನಿಗೆ 85% ಅಂಕಗಳಿದ್ದವು. ಅವನ ಸಹಪಾಠಿಗೆ ಕೇವಲ 65% ಅಂಕಗಳಿದ್ದವು. ಆದರೆ ಸಾಫ್ಟ್‌ವೇರ್ ಕಂಪೆನಿಯಲ್ಲಿ ಅವನಿಗೆ ಕೆಲಸ ಸಿಕ್ಕಿತು. ನನ್ನ ಮಗನಿಗೆ ಸಿಗಲಿಲ್ಲ” -ಈ ರೀತಿಯ ಮಾತುಗಳನ್ನು ಆಗಾಗ ಕೇಳುತ್ತೇವೆ. ಇಲ್ಲಿ ಏನಾಗಿರುತ್ತದೆ ಎಂದರೆ 85% ಅಂಕ ತೆಗೆದವನು ಪರೀಕ್ಷೆಗೋಸ್ಕರ ಓದಿರುತ್ತಾನೆ. ನಮ್ಮ ಪರೀಕ್ಷೆ ಪದ್ಧತಿಗಳೂ ಅಷ್ಟೆ. ಆಲೋಚನಾಶಕ್ತಿಯನ್ನು ಪರೀಕ್ಷಿಸುವುದಿಲ್ಲ. ಪಾಠಗಳನ್ನು ಎಷ್ಟು ಬಾಯಿಪಾಠ ಮಾಡಿದ್ದಾನೆ ಎಂದಷ್ಟೆ ಪರೀಕ್ಷಿಸುತ್ತವೆ. ಆದರೆ ಕಂಪೆನಿಗಳಿಗೆ ನಡೆದಾಡುವ ವಿಶ್ವಕೋಶಗಳು ಬೇಡ. ಅವರಿಗೆ ತರ್ಕಬದ್ಧವಾಗಿ ಆಲೋಚಿಸಿ ಸಮಸ್ಯೆಗಳನ್ನು ಪರಿಹರಿಸುವವರು ಬೇಕು. ಇದಕ್ಕೆ ಅರಿವಿನ ಕೌಶಲ್ಯ ಎನ್ನುತ್ತಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೂ ಉತ್ತಮ ಅರಿವಿನ ಕೌಶಲ್ಯವಿದ್ದ ಎರಡನೆಯವನು ಕಂಪೆನಿಗೆ ಆಯ್ಕೆಯಾಗಿರುತ್ತಾನೆ. ನಮ್ಮ ಶಿಕ್ಷಣ ಪದ್ಧತಿಯು ಅರಿವಿನ ಕೌಶಲ್ಯವನ್ನು ಹೆಚ್ಚಿಸುವುದಿಲ್ಲ. ಬದಲಿಗೆ ನಡೆದಾಡುವ ವಿಶ್ವಕೋಶಗಳನ್ನು ತಯಾರಿಸುತ್ತಿದೆ.
ಅರಿವಿನ ಕೌಶಲ್ಯ ಎಂದರೆ ಜ್ಞಾನವನ್ನು ಸಂಪಾದಿಸಲು, ಮಾಹಿತಿ ಹಾಗೂ ತರ್ಕಶಕ್ತಿಯ ಬಳಕೆಯ ಕುಶಲತೆ. ಜನರು ಹೇಗೆ ಕಲಿಯುತ್ತಾರೆ, ನೆನಪಿಟ್ಟುಕೊಳ್ಳುತ್ತಾರೆ ಹಾಗೂ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ ಎಂಬುದು ಇದನ್ನು ಅವಲಂಬಿಸಿದೆ. ಅರಿವಿನ ಕೌಶಲ್ಯವು ಗ್ರಹಿಕೆ, ಗಮನ, ಸ್ಮರಣೆ, ಕಲಿಕೆ, ನಿರ್ಧಾರ ತೆಗೆದುಕೊಳ್ಳುವುದು ಮತ್ತು ಭಾಷಾ ಸಾಮರ್ಥ್ಯಗಳನ್ನು ಒಳಗೊಳ್ಳುತ್ತದೆ. ಅರಿವಿನ ಕೌಶಲ್ಯ ಕಡಿಮೆ ಇರುವ ಹಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದರೂ ಕೆಲಸದ ಸಂದರ್ಶನದಲ್ಲಿ ಸೋಲುತ್ತಾರೆ. ಅರಿವಿನ ಕೌಶಲ್ಯದ ವೃದ್ಧಿ ವಿದ್ಯಾರ್ಥಿಗಳಿಗೆ ಸಹಾಯಕಾರಿ. ಅರಿವಿನ ಕೌಶಲ್ಯವನ್ನು ಕೆಲವು ಪರೀಕ್ಷೆಗಳ ಮೂಲಕ ಅಳೆಯಲಾಗುತ್ತದೆ. ಇವುಗಳೆಂದರೆ ತಾರ್ಕಿಕತೆ, ಗ್ರಹಿಕೆ, ಸ್ಮರಣೆ, ಮೌಖಿಕ ಹಾಗೂ ಗಣಿತದ ಸಾಮರ್ಥ್ಯ ಮತ್ತು ಸಮಸ್ಯೆ ಪರಿಹಾರಗಳ ಪರೀಕ್ಷೆ. ಹೆಚ್ಚಿನ ಕಂಪನಿಗಳು ಉದ್ಯೋಗಿಗಳನ್ನು ನೇಮಕಾತಿ ಮಾಡುವ ಮೊದಲು ಅರಿವಿನ ಕೌಶಲ್ಯದ ಪರೀಕ್ಷೆಗಳನ್ನು ನಡೆಸುತ್ತವೆ.
ಅರಿವಿನ ಕೌಶಲ್ಯ ವೃದ್ಧಿಸಲು ಹಲವು ಉಪಾಯಗಳಿವೆ. ಅವುಗಳೆಂದರೆ -ನಾವು ಚಿಕ್ಕವರಾಗಿದ್ದಾಗ ಕೇಳುತ್ತಿದ್ದ ಹುಲಿ, ದನ, ಹುಲ್ಲು, ದೋಣಿ ದಾಟಿಸುವ ಸಮಸ್ಯೆಯಂತಹ ಸಮಸ್ಯೆಗಳ ಪರಿಹಾರ; ಮಹಾಭಾರತದ ಓದು; ಚದುರಂಗದ ಆಟ ಆಡುವುದು, ಇತ್ಯಾದಿ. ಇವುಗಳಲ್ಲದೆ ಇನ್ನೂ ಒಂದು ವಿಧಾನವಿದೆ. ಅದು ವಿಕಿಪೀಡಿಯಕ್ಕೆ ಲೇಖನ ಸೇರಿಸುವುದು. ವಿಕಿಪೀಡಿಯಕ್ಕೆ ಲೇಖನ ಸೇರಿಸುವುದರಿಂದ ಅರಿವಿನ ಕೌಶಲ್ಯ ಹೆಚ್ಚಾಗುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ಸಾಧಿಸಿ ತೋರಿಸಲಾಗಿದೆ. ಈ ಲೇಖನದಲ್ಲಿ ಅದರ ಬಗ್ಗೆ ವಿವರಣೆ ನೀಡಲಾಗುತ್ತಿದೆ.
ಕನ್ನಡ ವಿಕಿಪೀಡಿಯ (kn.wikipedia.org) – ಅಂತರಜಾಲದಲ್ಲಿರುವ ಒಂದು ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶವಾಗಿದ್ದು, ಸ್ವಯಂಸೇವಕರ ಸಮುದಾಯವೊಂದು ಒಟ್ಟಿಗೆ ಸೇರಿ ಸಹಕಾರ ಮನೋಭಾವದಿಂದ ಸಂಪಾದಿಸಿದ್ದಾಗಿದೆ. ಅಂತರಜಾಲ ಸಂಪರ್ಕವಿರುವ ಯಾರು ಬೇಕಾದರೂ ವಿಶ್ವದ ಯಾವುದೇ ಮೂಲೆಯಿಂದ ಯಾವುದೇ ವಿಷಯದ ಲೇಖನಗಳ ಸಂಪಾದನೆಗೆ ತೊಡಗಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ವಿಕಿಪೀಡಿಯ ಎಲ್ಲರಿಗೂ ಚಿರಪರಿಚಿತ ಹಾಗೂ ಅತಿ ಹೆಚ್ಚು ಓದುಗರನ್ನು ಪಡೆದಿರುವ ವಿಶ್ವದ 5ನೇ ಪ್ರಮುಖ ಜಾಲತಾಣ. ಕನ್ನಡ ಭಾಷೆ ಉಳಿದು ಬೆಳೆಯಬೇಕಾದರೆ ಕನ್ನಡದಲ್ಲಿ ಜನರಿಗೆ ಅಗತ್ಯವಾದ ಮಾಹಿತಿ ಲಭ್ಯವಿರಬೇಕು. ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನವನ್ನು ಸುಲಭವಾಗಿ ತರಲು ಸಹಾಯ ಮಾಡುವುದು ಸ್ವತಂತ್ರ ವಿಶ್ವಕೋಶ ಕನ್ನಡ ವಿಕಿಪೀಡಿಯ. ಕನ್ನಡ ವಿಕಿಪೀಡಿಯ ಸಂಪಾದನೆ ಮಾಡುವುದರಿಂದ ವಿಸ್ಯಾರ್ಥಿಗಳಿಗೆ ಈ ಎಲ್ಲ ಲಾಭಗಳಿವೆ- ಭಾಷೆಯ ಸುಧಾರಣೆ, ಸಂವಹನ ಕಲೆಯ ಸುಧಾರಣೆ, ಸಂಶೋಧನಾ ಕೌಶಲ್ಯ, ಸಹಯೋಗದಲ್ಲಿ ಕೆಲಸ ಮಾಡುವುದು, ಬರೆದ ಲೇಖನವನ್ನು ವಿಶ್ವದ ಜೊತೆ ಹಂಚಿಕೊಳ್ಳುವುದು, ಸಮಾಜಕ್ಕೆ ಕೊಡುಗೆ, ವೈಯಕ್ತಿಕ ಮಾಹಿತಿಯಲ್ಲಿ (resume) ಬರೆದುಕೊಳ್ಳುವುದು. ಇನ್ನೊಂದು ಪ್ರಮುಖ ಲಾಭವೆಂದರೆ ಅರಿವಿನ ಕೌಶಲ್ಯದ ವೃದ್ಧಿ.
ಉಡುಪಿಯಲ್ಲಿ ಮಹಿಳೆಯರಿಗಾಗಿರುವ ಡಾ. ಜಿ. ಶಂಕರ್ ಸರಕಾರಿ ಕಾಲೇಜಿನಲ್ಲಿ ಒಂದು ಸಂಶೋಧನಾತ್ಮಕ ಅಧ್ಯಯನ ಮಾಡಲಾಗಿತ್ತು. 24 ಆಯ್ದ ವಿದ್ಯಾರ್ಥಿನಿಯರಿಗೆ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ ಒಂದನ್ನು ವಿನ್ಯಾಸ ಮಾಡಲಾಗಿತ್ತು. ಅದರಲ್ಲಿ ವಿದ್ಯಾರ್ಥಿನಿಯರು ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸಿದ್ದರು. ಕೋರ್ಸಿನ ಪ್ರಾರಂಭದಲ್ಲಿ ಅವರ ಅರಿವಿನ ಕೌಶಲ್ಯದ ಪರೀಕ್ಷೆ ನಡೆಸಲಾಯಿತು. ಒಂದು ವರ್ಷದ ನಂತರ ಅದೇ ಪರೀಕ್ಷೆಯನ್ನು (ಬೇರೆ ಪ್ರಶ್ನೆಗಳ ಮೂಲಕ) ಇನ್ನೊಮ್ಮೆ ನೀಡಲಾಯಿತು. ಒಂದು ವರ್ಷದಲ್ಲಿ ವಿಕಿಪೀಡಿಯ ಸಂಪಾದನೆ ಮಾಡುವುದರಿಂದ ವಿದ್ಯಾರ್ಥಿನಿಯರಲ್ಲಿ ಅರಿವಿನ ಕೌಶಲ್ಯದಲ್ಲಿ ವೃದ್ಧಿಯಾಗಿತ್ತು. ಇದು ನಮ್ಮ ದೇಶದಲ್ಲಿ ಈ ಮಾದರಿಯಲ್ಲಿ ಮಾಡಿದ ಮೊದಲ ಮತ್ತು ಇದು ತನಕದ ಏಕೈಕ ಸಂಶೋಧನಾತ್ಮಕ ಅಧ್ಯಯನವಾಗಿದೆ. ಈ ಅಧ್ಯಯನವನ್ನು ಡಾ. ಯು. ಬಿ. ಪವನಜ ಅವರ ನೇತೃತ್ವದಲ್ಲಿ ನಡೆಸಲಾಗಿತ್ತು. ಈ ಕೋರ್ಸಿನಲ್ಲಿ ವಿದ್ಯಾರ್ಥಿನಿಯರು ಕನ್ನಡ ವಿಕಿಪೀಡಿಯ ಮಾತ್ರವಲ್ಲದೆ ಕನ್ನಡ ವಿಕ್ಷನರಿ, ವಿಕಿಸೋರ್ಸ್ ಮತ್ತು ವಿಕಿಕೋಟ್‌ಗಳ ಸಂಪಾದನೆ ಮಾಡಿದ್ದರು. ಜೊತೆಗೆ ಹಲವು ಫೋಟೋಗಳನ್ನು ಸೇರಿಸಿದ್ದರು ಕೂಡ. ಈ ಕೋರ್ಸಿನ ಮೂಲಕ ವಿದ್ಯಾರ್ಥಿನಿಯರ ಕೊಡುಗೆಯ ಅಂಕಿಅಂಶಗಳು ಕೋಷ್ಟಕದಲ್ಲಿವೆ.
ಭಾಗವಹಿಸಿದ ವಿದ್ಯಾರ್ಥಿನಿಯರ ಸಂಖ್ಯೆ | 24 |
ಸೃಷ್ಟಿ ಮಾಡಿದ ಲೇಖನಗಳ ಸಂಖ್ಯೆ | 1003 |
ಸಂಪಾದನೆ ಮಾಡಿದ ಲೇಖನಗಳು | 1490 |
ಒಟ್ಟು ಸೇರಿಸಿದ ಮಾಹಿತಿ | 2.8 ಕೋಟಿ ಬೈಟ್ |
ಲೇಖನಗಳ ಪುಟ ವೀಕ್ಷಣೆ | 91 ಲಕ್ಷ |
ಸೇರಿಸಿದ ಫೋಟೋಗಳು | 298 |
ಎಲ್ಲ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ವಿಕಿಪೀಡಿಯದ ಸಂಪಾದನೆಯನ್ನು ಮಾಡಿಸುವ ಮೂಲಕ ಅರಿವಿನ ಕೌಶಲ್ಯವನ್ನು ವಿದ್ಯಾರ್ಥಿಗಳಲ್ಲಿ ಹೆಚ್ಚಿಸಬಹುದು. ಇದು ಮುಂದಕ್ಕೆ ಅವರ ಭವಿಷ್ಯಕ್ಕೆ ಸಹಾಯಕಾರಿಯಾಗುತ್ತದೆ. ಅವರಿಗೆ ಉದ್ಯೋಗದ ಬೇಟೆಯ ಸಂದರ್ಶನದಲ್ಲಿ ತೇರ್ಗಡೆಯಾಗಲು ಸಹಾಯಕಾರಿಯಾಗುತ್ತದೆ.
Be First to Comment