Archive for November, 2005

ಕರ್ನಾಟಕ ಜನಪದ ಕಲೆಗಳು – ಭಾಗ ೫

Friday, November 11th, 2005

ಸಂ: ಗೊ. ರು. ಚನ್ನಬಸಪ್ಪ

ಸೂತ್ರದ ಗೊಂಬೆಯಾಟ:

ಜನಪದ ಕಲಾಕ್ಷೇತ್ರದ ಅದರಲ್ಲೂ ಜನಪದ ರಂಗಭೂಮಿಯ ಒಂದು ಚಮತ್ಕಾರಯುತ ಆಕರ್ಷಕ ಕಲೆ ಸೂತ್ರದ ಗೊಂಬೆ. ಹೆಸರೇ ಹೇಳುವಂತೆ ಇಲ್ಲಿ ಸೂತ್ರ, ಗೊಂಬೆ ಮತ್ತು ಸೂತ್ರಧಾರ ಪ್ರಮುಖ. ಜೀವಂತ ವ್ಯಕ್ತಿಗಳಿಗೆ ಬದಲಾಗಿ ಗೊಂಬೆಗಳನ್ನು ಸೂತ್ರದ ಹಿಡಿತದಲ್ಲಿ ತನ್ನ ಕೈಚಳಕದಿಂದ ಆಡಿಸಿ ತೋರಿಸುವ ಸೂತ್ರಧಾರನ ಕಲಾಕುಶಲತೆ ಮೆಚ್ಚತಕ್ಕದ್ದು. ವಿಶೇಷವೆಂದರೆ ಸೂತ್ರಧಾರ ತೆರೆಯ ಮರೆಯಲ್ಲೇ ಇದ್ದು ಕೇವಲ ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡಿಸುವುದು. ದೂರದಿಂದ ನೋಡುವ ಪ್ರೇಕ್ಷಕರಿಗೆ ರಂಗ ಸಜ್ಜಿಕೆಯ ಮೇಲೆ ಪಾತ್ರದ ಸಂದರ್ಭಕ್ಕನುಗುಣವಾಗಿ ಗೊಂಬೆಗಳು ಬಂದು ಪ್ರದರ್ಶನ ನೀಡಿ ಹೋಗುವುದು ಮಾತ್ರ ಕಾಣುತ್ತದೆ. ಸೂತ್ರದ ಹಿಡಿತದಲ್ಲಿ ಆಡುತ್ತಿರುವುದು ಕಾಣಿಸುವುದಿಲ್ಲ. ಆಧುನಿಕ ರೀತಿಯ ಚಲನಚಿತ್ರಗಳ ಪ್ರವೇಶವಾಗುವ ಮೊದಲು ಕಾಲಿರಿಸಿದ ಮೂಕಿ ಚಿತ್ರಗಳನ್ನು ನೆನಪಿಗೆ ತರುವ ಈ ಕಲೆ ಆ ಚಿತ್ರಗಳಿಗಿಂತ ಅನೇಕ ಪಾಲು ಆಕರ್ಷಕ ರೀತಿಯಲ್ಲಿ ಕಂಡು ಬರುತ್ತದೆ. ಈ ಕಲೆಯನ್ನು `ಪುತ್ಥಳಿ ಗೊಂಬೆಯಾಟ’ವೆಂದೂ ಕರೆಯುತ್ತಾರೆ.

ಕರ್ನಾಟಕ ಜನಪದ ಕಲೆಗಳು – ಭಾಗ ೪

Friday, November 11th, 2005

ಸಂ: ಗೊ. ರು. ಚನ್ನಬಸಪ್ಪ

ಲಂಬಾಣಿ ಕುಣಿತ:


ಕರ್ನಾಟಕದಲ್ಲಿ `ಲಂಬಾಣಿ’ ಒಂದು ವಿಶಿಷ್ಟ ಜನಾಂಗ. ರಾಜಾಸ್ಥಾನದ ಪರಂಪರೆಯವರೆಂದು ಹೇಳಲಾಗುವ ಈ ಜನ ಕರ್ನಾಟಕದ ನಾನಾ ಭಾಗಗಳಲ್ಲಿ ಹರಡಿಕೊಂಡಿದ್ದಾರೆ. ಇವರಿಗೆ `ಬಂಜಾರ’, `ಬಜಾಲಿಂಗ’,’ಸುಕಾಲಿಗ’,`ಲಮಾಣಿ’ ಎಂಬ ಹೆಸರುಗಳೂ ಇವೆ.

ಕರ್ನಾಟಕ ಜನಪದ ಕಲೆಗಳು – ಭಾಗ ೩

Friday, November 11th, 2005

ಸಂ: ಗೊ. ರು. ಚನ್ನಬಸಪ್ಪ

ವೀರಗಾಸೆ:

‘ವೀರಗಾಸೆ’ ಕುಣಿತದ ಹಿನ್ನಲೆ ಬಗ್ಗೆ ಪ್ರಚಲಿತವಿರುವ ಒಂದು ಪೌರಾಣಿಕ ಪ್ರಸಂಗ ಹೀಗಿದೆ: “ಹಿಂದೆ ದಕ್ಷಬ್ರಹ್ಮನಿಗೂ ಅವನ ಅಳಿಯನಾದ ಈಶ್ವರನಿಗೂ ವೈರತ್ವ ಬಂದು ದಕ್ಷಬ್ರಹ್ಮನು ತಾನು ಮಾಡುವ ಯಾಗಕ್ಕೆ ಈಶ್ವರನನ್ನು ಬಿಟ್ಟು ಉಳಿದ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ಯಜ್ಞದಲ್ಲಿ ಈಶ್ವರನಿಗೆ ನ್ಯಾಯವಾಗಿ ಸಲ್ಲಬೇಕಾದ ಆವಿರ್ಭಾಗವನ್ನು ಕೊಡದೆ ತಿರಸ್ಕರಿಸುತ್ತಾನೆ. ಈಶ್ವರನು ಬೇಡವೆಂದರೂ ತಂದೆ ಮಾಡುವ ಯಾಗದಲ್ಲಿ ಭಾಗವಹಿಸಲು ಪಾರ್ವತಿ ಬರುತ್ತಾಳೆ. ದಕ್ಷಬ್ರಹ್ಮ ಅಳಿಯನ ಮೇಲಿನ ಕೋಪದಿಂದ, ಮಗಳೆಂಬ ಮಮತೆಯನ್ನೂ ತೊರೆದು, ಕಂಡೂ ಕಾಣದಂತೆ ತಿರಸ್ಕಾರವಾಗಿ ಕಾಣುತ್ತಾನೆ. ಅವಳೆದುರಿಗೆ ಈಶ್ವರನನ್ನು ನಿಂದಿಸುತ್ತಾನೆ. ಇದನ್ನು ಕೇಳಿದ ಪಾರ್ವತಿ ಸಹಿಸಲಾಗದೆ, ಪತಿನಿಂದೆಯನ್ನು ಹೊತ್ತು ಕೈಲಾಸಕ್ಕೆ ಹಿಂದಿರುಗಲಾಗದೆ “ಅಗ್ನಿಕೊಂಡ ಹಾಳಾಗಿ ಹೋಗಲಿ, ನಿನ್ನ ಹೆಣ್ಣು ಮಕ್ಕಳು ಮುಂಡೆಯರಾಗಲಿ, ಆಗಸ ತೂಕದ ಚಿನ್ನವಿಲ್ಲದಂತಾಗಲಿ, ಭೂಮಿ ತೂಕದ ಬೆಳ್ಳಿಯಿಲ್ಲದಂತಾಗಲಿ” ಎಂದು ತಂದೆಗೆ ಶಾಪವನ್ನು ಕೊಟ್ಟು ಅಗ್ನಿಕುಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಗ ಇದೆಲ್ಲವನ್ನೂ ಏಕದೃಷ್ಟಿಯಿಂದ ಗಮನಿಸಿದ ಈಶ್ವರನು ಉಗ್ರವಾಗಿ ತಾಂಡವ ನೃತ್ಯವನ್ನು ಮಾಡುವಾಗ ಹಣೆಯ ಮೇಲೆ ಬಂದ ಬೆವರಿನ ಹನಿಗಳನ್ನು ಸೆಳೆದು ತೆಗೆದು ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದಂತಹ ವೀರಭದ್ರನ ಜನನವಾಗುತ್ತದೆ. ಆಗ ಸಪ್ತ ಸಮುದ್ರಗಳು ಬತ್ತಿಹೋದವು. ಹುಟ್ಟಿದ ಮರುಕ್ಷಣದಲ್ಲಿಯೇ ವೀರಭದ್ರನು ಲೋಕವನ್ನೇ ಬಿಲ್ಲು ಮಾಡಿಕೊಂಡು, ಭೂಮಿಯನ್ನೇ ಬಾಣವನ್ನಾಗಿ ಮಾಡಿಕೊಂಡು, ‘ತಂದೆಯೇ ನಮಗೆ ವೈರಿ ಯಾರು?’ ಎಂದು ಕೇಳುತ್ತಾನೆ. ಅದಕ್ಕೆ ಶಿವನು ದಕ್ಷಬ್ರಹ್ಮನೆಂದು ಹೇಳಿ “ಅವನದು ಮುನ್ನೂರ ಅರವತ್ತು ಗಾವುದ ಪಟ್ಟಣ, ಅದಕ್ಕೆ ಮುನ್ನೂರ ಅರವತ್ತು ಬಾಗಿಲು, ಒಂದೊಂದು ಬಾಗಿಲಿಗೂ ಒಬ್ಬೊಬ್ಬ ರಾಕ್ಷಸರು ಕಾವಲಿರುತ್ತಾರೆ. ಆ ರಾಕ್ಷಸರ ಒಂದೊಂದು ತೊಟ್ಟು ರಕ್ತ ಬಿದ್ದರೆ ಒಂದು ಕೋಟಿ ರಾಕ್ಷಸರು ಜನಿಸುತ್ತಾರೆ” ಎಂದು ಹೇಳಿ ಅವನ ಹಿಂದೆಯೇ ಜನಿಸಿದ ಚೌಡೇಶ್ವರಿಯನ್ನು ಸಹಾಯಕ್ಕಾಗಿ ಕಳುಹಿಸಿ ಕೊಡುತ್ತಾನೆ.

ಕರ್ನಾಟಕ ಜನಪದ ಕಲೆಗಳು – ಭಾಗ ೨

Friday, November 11th, 2005

ಸಂ: ಗೊ. ರು. ಚನ್ನಬಸಪ್ಪ

ಡೊಳ್ಳು ಕುಣಿತ:

ಜನಪದ ಕಲೆಗಳಲ್ಲಿ `ಗಂಡು ಕಲೆ’ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮೀಸಲಾದ ಕಲೆ. ಒಳ್ಳೆಯ ಮೈ ಕಟ್ಟು ಮತ್ತು ಶಕ್ತಿ ಉಳ್ಳ ಕಲಾವಿದರು ಮಾತ್ರ ಈ ಕಲೆ ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳು ಕುಣಿತ ತನ್ನ ವಿಶಿಷ್ಟವಾದ ಸತ್ವ ಶೈಲಿಗಳಿಂದ ಉಳಿದುಕೊಂಡು ಬಂದಿದೆ.

ಕರ್ನಾಟಕ ಜನಪದ ಕಲೆಗಳು – ಭಾಗ ೧

Friday, November 11th, 2005

ಸಂ: ಗೊ. ರು. ಚನ್ನಬಸಪ್ಪ

[ಪೀಠಿಕೆ:- ಗ್ರಾಮೀಣ ಬದುಕಿನ ಅನಕ್ಷರಸ್ತರಲ್ಲಿನ ಜಾನಪದ ಕಲೆಗಳು, ಹಾಡು, ಗಾದೆ ನಗರ ಬದುಕಿನ ಜನಕ್ಕೆ ವಿಶಿಷ್ಟ ಸಂವೇದನೆಯನ್ನುಂಟು ಮಾಡಿವೆ. ಗ್ರಾಮಗಳ ದೈನಿಕ ಬದುಕು ಆರಂಭವಾಗುವುದೇ ಇಂಥ ಜನಪದ ಹಾಡು-ಹಬ್ಬ ಆಚರಣೆಗಳಿಂದ. ಇವೊತ್ತಿನ ವಿಜ್ಞಾನಯುಗ ಪರಂಪರಾಗತ ಕಲೆಗಳನ್ನು ಮರೆಸುವಂತೆ ನಾಗಾಲೋಟಕ್ಕೆ ಓಡುತ್ತಿದೆ. ಹೀಗಿದ್ದೂ ನಗರ ಬದುಕಿನ ಈ ಜನಕ್ಕೆ `ಜನಪದ’ ಮನರಂಜನೆಯನ್ನೀಯುವ ಮಟ್ಟಕ್ಕೆ ಸೀಮಿತವಾಗಿದೆಯೇನೋ ಅನ್ನುವ ಸಂಶಯ ಮೂಡಿದೆ. ಇದು ವಾಸ್ತವವೂ ಕೂಡ.

ಅನರ್ಥಕೋಶ

Thursday, November 10th, 2005

ಬಿಲ್ವಿದ್ಯೆ = ಸ್ನೇಹಿತರ ಜೊತೆ ಹೋಟೆಲಿಗೆ ಹೋಗಿ ಚೆನ್ನಾಗಿ ತಿಂದು ಬಿಲ್ಲನ್ನು ಸ್ನೇಹಿತರ ಕೈಲಿ ಕೊಡಿಸುವ ವಿದ್ಯೆ.

ಬೀchi ಅವರ ಬೆಳ್ಳಿ ತಿಂಮನ ಆಯ್ದ ನಗೆಹನಿಗಳು

Thursday, November 10th, 2005

ಹಳೆಯ ಕೋಟು

ದೊಡ್ಡ ಪರೀಕ್ಷೆ ಬಂದಿತು. ಜಾಣ ವಿದ್ಯಾರ್ಥಿ ಎನಿಸಿಕೊಂಡಿದ್ದ ತಿಂಮ ಸಕಲ ಸಿದ್ಧತೆ ಮಾಡಿಕೊಂಡ.

ಅಪರಾಧಿಗೆ ಖುಲಾಸೆ ಸಾಕ್ಷಿಗೆ ಸಜಾ

Thursday, November 10th, 2005

ಗೊರೂರು ರಾಮಸ್ವಾಮಿ ಅಯ್ಯಂಗಾರ್

 

 

ನಾನು ಕೆಲವು ವರುಷಗಳ ಹಿಂದೆ, ಇಂಗ್ಲೆಂಡಿನ ನ್ಯಾಯಾಲಯವೊಂದರಲ್ಲಿ ಒಂದು ಘಟನೆ ನಡೆದುದನ್ನು ಓದಿದ್ದೆ. ಯಾವುದೋ ಮೊಖದ್ದಮೆಯ ವಿಚಾರಣೆಯಾಗಿ, ಅಪರಾಧಿಗೆ ಮರಣದಂಡನೆಯಾಗಿತ್ತು. ವಿಚಾರಣೆ ನಿಷ್ಪಕ್ಷವಾಗಿ ನ್ಯಾಯಬದ್ಧವಾಗಿ ನಡೆದಿರಲಿಲ್ಲವೆಂದು ತೋರುತ್ತದೆ. ಅಪರಾಧಿಯನ್ನು ದಂಡಾಧಿಕಾರಿಗಳು ಎಳೆದುಕೊಂಡು ಹೋಗುತ್ತಿರುವಾಗ, ವಿಚಾರಣೆಯನ್ನು ನಿರೀಕ್ಷಸಲು ಬಂದಿದ್ದ ಒಬ್ಬ ಸಭ್ಯ ಗೃಹಸ್ಥ “ದೇವರ ದಯವಿಲ್ಲದಿದ್ದಲ್ಲಿ; ಅಲ್ಲಿ ಮರಣದಂಡನೆಗೆ ಹೋಗುತ್ತಿರುವವವನು ನಾನೇ ಆಗಿರಬಹುದಾಗಿತ್ತು" ಎಂದು ಉದ್ಗರಿಸಿದ.
ಈಗ ಕೆಲವು ವರುಷಗಳ ಹಿಂದೆ -ಸ್ವರಾಜ್ಯವನ್ನು ಗಳಿಸಿದ ಮೇಲೆ ನಮ್ಮೂರಿನಿಂದ ನಾಲ್ಕು ಮೈಲಿ ದೂರವಿರುವ ಹಳ್ಳಿಯೊಂದರಲ್ಲಿ, ಜಮೀನು ಒತ್ತುವರಿಯ ವಿಷಯದಲ್ಲಿ ನೆರೆಹೊರೆಯ ರೈತರಿಗೆ ಘರ್ಷಣೆಯುಂಟಾಗಿ ಇಬ್ಬರೂ ಒಬ್ಬರನ್ನೊಬ್ಬರು ಬಡಿದರು. ಒಬ್ಬ ರೈತ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮೊಖದ್ದಮೆ ದಾಖಲುಮಾಡಿದ (ಪೋಲೀಸ್ ಕೇಸು). ನನಗೆ ಇಬ್ಬರು ರೈತರು ಆಪ್ತರು. ಇಬ್ಬರು ರೈತರಿಗೂ ರಾಜಿಮಾಡಿಸಲು ನಾನು ಬಹಳ ಪ್ರಯತ್ಮಪಟ್ಟೆ. ರಾಜಿಯಾಗುವ ಘಟ್ಟಕ್ಕೆ ಬಂದಿತ್ತು. ಆದರೆ ಒಬ್ಬ ರೈತನ ಭಾವಮೈದುನ ಪೋಲೀಸ್ ಇಲಾಖೆಯಲ್ಲಿದ್ದ. ಅವನು “ಎದುರಾಳಿ ರೈತನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆಂದು" ಮೊಖದ್ದಮೆ ನಡೆಸಲು ತನ್ನ ಭಾವನನ್ನು ಪ್ರೋತ್ಸಾಹಿಸಿದ.
ಒಂದು ದಿನ, ನಮ್ಮ ತಾಲ್ಲೂಕಿನ ಒಬ್ಬ ಇನಸ್ಪೆಕ್ಟರು, ನನ್ನ ಮನೆಗೆ ಬಂದು, ನನ್ನ ಸಾಹಿತ್ಯವನ್ನು ಕುರಿತು ತುಂಬ ಪ್ರಶಂಸೆ ಮಾಡಿದರು. ಸಾಹಿತಿಗಳಿರುವ ದೌರ್ಬಲ್ಯಗಳಲ್ಲಿ ಪ್ರಶಂಸೆಯ ಆಶೆ ಹೆಚ್ಚಿನದು. ಎಲ್ಲ ಕಲೆಗಾರರಿಗೂ ಹಾಗೆಯೇ. ನನಗೆ ಪೋಲೀಸಿನವರಾದರೂ ಎಷ್ಟು ಸಾಹಿತ್ಯಾಭಿಮಾನಿಗಳು ಸುಸಂಸ್ಕೃತರು ಎಂದು ಅಭಿಮಾನವುಂಟಾಯಿತು. ಅವರು ಹೀಗೆ ಎರಡು ಮೂರು ಸಲ, ಒಂದೇ ವಾರದಲ್ಲಿ ನನ್ನನ್ನು ಸಂದರ್ಶಿಸಿ, ತುಂಬ ಸ್ನೇಹವನ್ನೇ ಬೆಳೆಸಿದರು. ನಂತರ ಒಂದು ದಿನ “ನಿಮ್ಮಂಥವರ ಸಹವಾಸ ದೊರೆತಿದ್ದು ನನ್ನ ಪುಣ್ಯ. ನಿಮ್ಮದು ಏನು ಜ್ಞಾನ, ಎಂಥ ಸಾಧನೆ, ಎಂಥ ಸೇವೆ, ಛೆ ಛೆ ಅದ್ಭುತ. ನಾನು ಒಂದೆರೆಡು ದಿನ ನಿಮ್ಮ ಜೊತೆಯಲ್ಲಿಯೇ ನಿಮ್ಮ ಸಹವಾಸದಲ್ಲಿಯೇ ಇದ್ದು ನಿಮ್ಮ ನಡವಳಿಕೆ, ಜೀವನಕ್ರಮ, ಪುಸ್ತಕ ಭಂಡಾರ ಎಲ್ಲವನ್ನೂ ನೋಡಬೇಕು. ಇದು ಎಲ್ಲರಿಗೂ ದೊರೆಯುವ ಭಾಗ್ಯವಲ್ಲ" ಎಂದರು. ನನಗೆ ಹಿಗ್ಗೊ ಹಿಗ್ಗು! ಜಾನ್ಸನ್‌ಗೆ ಬಾಸ್ವೆಲ್ ಸಿಕ್ಕಿದಂತೆ ನನಗೊಬ್ಬ ಚರಿತ್ರೆಕಾರನೇ ಸಿಕ್ಕಿದ ಎಂದು ಉಬ್ಬಿದೆ. ನಾನು “ಹಾಗೇ ಆಗಲಿ, ಬನ್ನಿ. ನಿಮಗೆ ಬೇಕಾದಾಗ ಬನ್ನಿ. ನಮ್ಮ ಮನೆಯಲ್ಲಿಯೇ ಇರಿ" ಎಂದೆ. ಎರಡು ದಿನಗಳ ನಂತರ ಸವಾರಿ, ಪೋಲೀಸ್ ಪೇದೆಯ ಕೈಯಲ್ಲಿ “ಹೋಲ್ಡಾಲ್" ಹೊರಿಸಿಕೊಂಡು ನನ್ನ ಮನೆಯಲ್ಲಿ ಬಂದು ಇಳಿಯಿತು. ಹಳ್ಳಿಯಲ್ಲಿ ಒಬ್ಬ ಸಾಮಾನ್ಯನ ಮನೆಯಲ್ಲಿ ಸಬ್‌ಇನಸ್ಪೆಕ್ಟರರು ಬಂದು ಉಳಿದುಕೊಳ್ಳುವುದೆಂದರೆ ಆ ಮನುಷ್ಯ ಘನತೆ ತುಂಬ ಮೇಲೆ ಏರಿದಂತೆಯೆ. ಸರಿ, ಒಂದಿಲ್ಲೊಂದು ನೆಪದಲ್ಲಿ ಊರವರೆಲ್ಲ ಬಂದು, ಸಬ್‌ಇನಸ್ಪೆಕ್ಟರೊಡನೆ ಪೆದ್ದ ನಗೆಯನ್ನು ನಕ್ಕು ಒಂದು ಎರಡು ಮಾತನಾಡಿ ಕೈ ಮುಗಿದು ಹೋದರು. ನಾನಂತು ಬಹುಮಟ್ಟಿಗೆ ನನ್ನ ಮಹಿಮೆಯ ವಿಷಯಕ್ಕೆ ಎಚ್ಚೆತ್ತು, ಜಗತ್ತೆಲ್ಲ ನನ್ನ ಚಲನವಲನಗಳನ್ನು ಈಕ್ಷಿಸುತ್ತಿದೆಯೋ ಎಂಬಂತೆ -ಒಬ್ಬ ನಾಟಕ ಪಾತ್ರಧಾರಿಯಂತೆ -ನನ್ನ ನಡವಳಿಕೆ ಮಾತು ಭಾವ ಎಲ್ಲವನ್ನೂ ಸಬ್‌ಇನಸ್ಟೆಕ್ಟರರ ಮನಸ್ಸಿನಲ್ಲಿ ಅಚ್ಚು ಒತ್ತುವುದಕ್ಕಾಗಿ ಹೇಗೆ ಹೇಗೋ ಆಡಿ ಬಿಟ್ಟೆ. ಸಬ್‌ಇನಸ್ಪೆಕ್ಟರು ನನ್ನ ಮನೆಯಿಂದ ಹೋದ ಕೆಲವು ದಿನಗಳ ನಂತರ, ನನಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಹಿಂದೆ ಹೇಳಿದ, ನಮ್ಮ ನೆರೆ ಹಳ್ಳಿಯ ರೈತರ ವ್ಯಾಜ್ಯದಲ್ಲಿ ನಾನು ಫಿರ್‍ಯಾದಿಯ ಪರ-ಅಂದರೆ ಪೋಲೀಸರ ಪರ-ಸಾಕ್ಷಿಯಾಗಿ ಬರಬೇಕೆಂದು ಆಜ್ಞಾಪತ್ರ ಬಂದಿತು. ಸರ್ಕಾರದ ಪರ ನಾನು ಯಾಕೆ ಸಾಕ್ಷಿ ಎಂದು ನನಗೆ ದಿಗ್ಭ ಮೆಯೇ ಆಯಿತು. ನನ್ನನ್ನು ಯಾರು ಕೇಳಲೂ ಇಲ್ಲ. ನಾನು ಒಪ್ಪಿಯೂ ಇರಲಿಲ್ಲ. ಹಾಗಾದರೆ “ನನ್ನನ್ನು ಕೇಳದೆಯೇ ನನ್ನನ್ನು ಸಾಕ್ಷಿಯಾಗಿ ಮಾಡಬಹುದೇ?" ಎಂದು ಒಬ್ಬ ವಕೀಲರನ್ನು ನಾನು ಕೇಳಿದೆ. ಅವರು “ಮಾಡಬಹುದು. ಪೋಲೀಸಿನವರು ಸಾಕ್ಷ್ಯಗಳನ್ನು ಸಂಗ್ರಹಿಸುವುದೇ ಹಾಗೆ. ಲೋಕಾಭಿರಾಮವಾಗಿ ನೀವು ಅವರಿಗೆ ಏನನ್ನೋ ಹೇಳಿದ್ದರೂ ಅವೆಲ್ಲ ಅಧಿಕೃತ ಸಾಕ್ಷಗಳಾಗುತ್ತವೆ" ಎಂದರು. ನಾನು ನನ್ನ ಉತ್ಸಾಹದಲ್ಲಿ ನನ್ನ ಅತಿಥಿ ಸಬ್‌ಇನಸ್ಪಕ್ಟರನ ಹತ್ತಿರ ಏನೇನು ಹೇಳಿದೆನೊ ಎಂದು ಚಿಂತಾಕ್ರಾಂತನಾದೆ. ಆ ಮೊದಲನೆಯ ವಿಚಾರಣೆಗೆ ನಾನು ಹೋಗಲಿಲ್ಲ. ಮುಂದಲ ವಿಚಾರಣಾದಿನ ಬರುವನೆಂದು ಬರೆದು ಹಾಕಿದೆ.

 

ವಾಹನಗಳಿಗೆ ಕನ್ನಡದಲ್ಲಿ ನೋಂದಣಿ ಫಲಕ

Thursday, November 10th, 2005

– ಡಾ| ಯು. ಬಿ. ಪವನಜ

ಇತ್ತೀಚಿಗೆ ಕನ್ನಡ ಭಾಷೆ ಮಾತನಾಡುವ ಜನರ ನಾಡಾದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಸಂಗತಿ ನಡೆಯಿತು. ರಾಜ್ಯದ ಬಾಷೆಯಾದ ಕನ್ನಡದಲ್ಲಿ ನೋಂದಣಿ ಫಲಕ ಬರೆಸಿದ ರಿಕ್ಷಾ ಚಾಲಕರ ವಿರುದ್ಧ ಪೋಲೀಸರು ಕ್ರಮ ಕೈಗೊಂಡರು. ನಾಡಿನ ಜನರ ಭಾಷೆಯಲ್ಲಿ ನೋಂದಣಿ ಫಲಕ ಬರೆಸಿದ್ದು ಅವರ ತಪ್ಪು. ಭಾರತದ ಮೋಟಾರು ವಾಹನ ಕಾಯಿದೆ ಪ್ರಕಾರ ವಾಹನಗಳ ನೋಂದಣಿ ಫಲಕ ನಮ್ಮ ಭಾಷೆಯ ಬದಲು ಸಹಸ್ರಾರು ಮೈಲು ದೂರವಿರುವ ಬ್ರಿಟಿಷರ ಭಾಷೆಯಲ್ಲಿರಬೇಕು! ಈ ಕಾಯಿದೆ ಮಾಡಿದವರು ಕೇಂದ್ರ ಸರಕಾರದವರು. ವಾಹನಗಳ ನೋಂದಣಿ ಫಲಕ ಇಂಗ್ಲೀಷ್ ಭಾಷೆಯಲ್ಲಿರಬೇಕು ಎಂದು ಅಧಿಕಾರಿಗಳು, ಮುಖ್ಯವಾಗಿ ಪೋಲೀಸರು ಹೇಳುವುದಕ್ಕೆ ಅವರು ಕೊಡುವ ಕಾರಣ `ಯಾವುದಾದರೂ ವಾಹನ ಅಪಘಾತ ಮಾಡಿ ತಪ್ಪಿಸಿಕೊಂಡು ಹೋದರೆ ಅದರ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಲು ಇತರ ಭಾಷಿಕರಿಗೆ ಇದು ಸಹಾಯಕಾರಿಯಾಗುತ್ತದೆ’. ಮೇಲ್ನೋಟಕ್ಕೆ ಇದು ತರ್ಕಬದ್ಧವಾಗಿದೆ.

ದಿನಕ್ಕೊಂದು ಕಥೆ

Thursday, November 10th, 2005

– ಡಾ| ಅನುಪಮ ನಿರಂಜನ

ಮೂರ್ಖ ಮೊಸಳೆ

ಒಂದು ನದಿಯಲ್ಲಿ ಒಂದು ಮೊಸಳೆಯಿತ್ತು. ಅದು ಮುದಿಯಾಗಿತ್ತು. ಪ್ರಾಣಿಗಳನ್ನು ಬೇಟೆ ಆಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಅದು ನರಿಯನ್ನು ಕರೆದು, “ನರಿರಾಯ, ನೀನು ಇನ್ನು ಮೇಲೆ ನನ್ನ ಮಂತ್ರಿ. ನಿನ್ನ ಕೆಲಸವೇನೆಂದರೆ ನಂಗೆ ದಿನಕ್ಕೊಂದು ಪ್ರಾಣೀನ ಆಹಾರವಾಗಿ ತಂದುಕೊಡೋದು” ಎಂದಿತು. ಅಳಿದುಳಿದ ಮಾಂಸ ತನಗೆ ಸಿಗುವುದೆಂಬ ಆಶೆಯಿಂದ ನರಿ “ಆಗಲಿ” ಎಂದಿತು.