ಕಡಿಮೆ ವೆಚ್ಚದಲ್ಲಿ ವಿದೇಶ ಪ್ರಯಾಣಕ್ಕೊಂದು ಕೈಪಿಡಿ
ಶ್ರೀನಿಧಿ ಹಂದೆಯವರ “ವಿಶ್ವ ದರ್ಶನ, ಬಜೆಟ್‌ನಲ್ಲಿ” ಪುಸ್ತಕ
ಕನ್ನಡದಲ್ಲಿ ಪ್ರವಾಸ ಸಾಹಿತ್ಯ ವಿಪುಲವಾಗಿದೆ. ೧೯ನೆಯ ಶತಮಾನದಲ್ಲೇ ಪ್ರವಾಸಗಳ ಬಗ್ಗೆ ಪುಸ್ತಕಗಳು ಕನ್ನಡದಲ್ಲಿ ಬಂದಿವೆ. ಪುಸ್ತಕಗಳಿಗೆ ಪ್ರಶಸ್ತಿ ನೀಡುವಾಗಲೂ ಪ್ರವಾಸ ಸಾಹಿತ್ಯ ಎಂಬ ಪ್ರತ್ಯೇಕ ವಿಭಾಗವನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತಿದೆ. ಅವೆಲ್ಲಾ ಸರಿ. ಅದರೆ ಪ್ರವಾಸ ಮಾಡುವುದು ಹೇಗೆ, ಅದರಲ್ಲೂ ಅತಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡುವುದು ಹೇಗೆ, ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಅತಿ ಕಡಿಮೆ ಖರ್ಚಿನಲ್ಲಿ ವಿದೇಶ ಪ್ರವಾಸ ಮಾಡುವುದು ಹೇಗೆ ಎಂದು ಯಾರಾದರೂ ಪುಸ್ತಕ ಬರೆದುದು ನನಗೆ ತಿಳಿದಿಲ್ಲ. ಈ ಕೊರತೆಯನ್ನು ಈಗ ಶ್ರೀನಿಧಿ ಹಂದೆ ತುಂಬಿಸಿದ್ದಾರೆ.
ಶ್ರೀನಿಧಿ ಹಂದೆ ಹೊಸ ತಲೆಮಾರಿನ ಲೇಖಕರು. ಲೇಖಕರು ಅಂದ ತಕ್ಷಣ ಪತ್ರಿಕೆಗಳಲ್ಲಿ ಲೇಖನ ಬರೆಯುವವರು, ಪುಸ್ತಕ ಬರೆಯುವವರು ಎಂದೆಲ್ಲಾ ಆಲೋಚನೆ ಬರುತ್ತದೆ ತಾನೆ? ಆದರೆ ಇವರು ಹಾಗಲ್ಲ. ಇವರ ಲೇಖನಗಳೇನಿದ್ದರೂ ಅಂತರಜಾಲದಲ್ಲಿ ಪ್ರಕಟವಾದವು. ಇ-ಲೋಕದಲ್ಲಿ ಇವರ ಹೆಸರು ಸುಪರಿಚಿತ. ಪ್ರವಾಸದ ಬಗ್ಗೆ ಹಲವು ವರ್ಷಗಳಿಂದ ಬ್ಲಾಗ್ ನಡೆಸಿಕೊಂಡು ಬರುತ್ತಿದ್ದಾರೆ. ಯಾವುದಾದರೊಂದು ದೇಶ ಅಥವಾ ಅಲ್ಲಿಯ ನಗರಕ್ಕೆ ಪ್ರವಾಸ ಹೋಗುವ ಮೊದಲು ಅಂತರಜಾಲದಲ್ಲಿ ಆ ನಗರದ ಬಗ್ಗೆ ಮಾಹಿತಿ ಹುಡುಕಿದರೆ ದೊರೆಯುವ ಜಾಲತಾಣಗಳಲ್ಲಿ ಶ್ರೀನಿಧಿ ಹಂದೆಯವರ ಜಾಲತಾಣವೂ ಇರುತ್ತದೆ. ಇವರ ಬಹುತೇಕ ಬ್ಲಾಗ್‌ಗಳು ಒಂದು ರೀತಿಯಲ್ಲಿ ಓದುಗ ಸ್ನೇಹಿ. ಓದುಗ ಏನನ್ನು ಹುಡುಕುತ್ತಿದ್ದಾನೋ ಅದುವೇ ಇವರ ಬ್ಲಾಗಿನಲ್ಲಿ ಕಂಡು ಬರುತ್ತದೆ. ಹೋಗಬೇಕಾದ ನಗರದಲ್ಲಿ ಕಡಿಮೆ ಖರ್ಚಿನಲ್ಲಿ ವಸತಿ ಹೇಗೆ, ವೀಸಾ ಪಡೆಯುವುದು ಹೇಗೆ, ಅದಕ್ಕೆ ಎಷ್ಟು ಖರ್ಚಾಗುತ್ತದೆ, ಹೀಗೆ ಹಲವು ಹಲವು ಹತ್ತು ಮಾಹಿತಿಗಳು ಇವರ ಬ್ಲಾಗಿನಲ್ಲಿ ದೊರೆಯುತ್ತವೆ. ನಾನೂ ಕೆಲವೊಮ್ಮೆ ಇವರ ಬ್ಲಾಗಿನಿಂದ ಮಾಹಿತಿ ಪಡೆದಿದ್ದೇನೆ. ಉದಾಹರಣೆಗೆ ಶ್ರೀಲಂಕ ಪ್ರವಾಸ ಮಾಡಬೇಕಾದಾಗ.
ಈ ಎಲ್ಲ ಮಾಹಿತಿಗಳು ಇವರ ಬ್ಲಾಗಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿವೆ. ಮೂಲತಃ ಉಡುಪಿ ಪಕ್ಕದವರಾದ ಶ್ರೀನಿಧಿ ಹಂದೆ ತಮ್ಮ ಮಾತೃಭಾಷೆಯಾದ ಕನ್ನಡದಲ್ಲೂ ಅಷ್ಟೇ ಚೆನ್ನಾಗಿ ಬರೆಯಬಲ್ಲವರು. ಕಂಗ್ಲಿಷಿನಲ್ಲಿ ಬರೆದರೆ ನನಗೆ ನಖಶಿಖಾಂತ ಸಿಟ್ಟು ಬರುತ್ತದೆ ಎಂದು ಗೊತ್ತಿರುವ ಶ್ರೀನಿಧಿ ಹಂದೆ ನನ್ನ ಫೇಸ್‌ಬುಕ್ ಪೋಸ್ಟಿಗೆ ಅಥವಾ ನನ್ನ ಬ್ಲಾಗಿಗೆ ಶುದ್ಧ ಕನ್ನಡದಲ್ಲೇ ಪ್ರತಿಕ್ರಿಯಿಸುತ್ತಾರೆ. ಕೆಲವೊಮ್ಮೆ ಕನ್ನಡದಲ್ಲೇ ಸ್ವಾರಸ್ಯಕರವಾದ ಪೋಸ್ಟ್ ಹಾಕುತ್ತಿರುತ್ತಾರೆ. ಅಂತರಜಾಲದಲ್ಲಿ, ಫೇಸ್‌ಬುಕ್‌ನಲ್ಲಿ, ಬ್ಲಾಗ್ಗ್ ಲೋಕದಲ್ಲಿ ಸಕ್ರಿಯರಾಗಿರುವವರಿಗೆ ಶ್ರೀನಿಧಿ ಹಂದೆ ಚಿರಪರಿಚಿತರು. ಚೆನ್ನಾಗಿ ಕನ್ನಡ ಭಾಷೆಯಲ್ಲಿ ಬರೆಯಬಲ್ಲ ಇವರು ತಮ್ಮ ಬ್ಲಾಗಿನಲ್ಲೇನೋ ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ನೀಡುತ್ತಿರುತ್ತಾರೆ. ಕನ್ನಡಿಗರಿಗೆ ಈ ಎಲ್ಲ ಮಾಹಿತಿ ಪಡೆಯುವ ಭಾಗ್ಯ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರ ರೂಪವಾಗಿ ಈಗ ಈ ಪುಸ್ತಕ ಹೊರಬರುತ್ತಿದೆ.
ಕನ್ನಡದ ಇತರೆ ಪ್ರವಾಸ ಸಾಹಿತ್ಯಕ್ಕೂ ಈ ಪುಸ್ತಕಕ್ಕೂ ಒಂದು ಪ್ರಮುಖ ವ್ಯತ್ಯಾಸವಿದೆ. ಇದು ಪ್ರವಾಸಕಥನವಲ್ಲ. ಪ್ರವಾಸ ಮಾಡುವುದು ಹೇಗೆ ಎಂದು ವಿವರಿಸುವ ಒಂದು ಪುಸ್ತಕ. ಕೈಪಿಡಿ ಎಂದೂ ಕರೆಯಬಹುದು. ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುವ do it yourself ಮಾದರಿಯ ಪುಸ್ತಕ ಎನ್ನಬಹುದು. ನನಗೆ ತಿಳಿದಂತೆ ಕನ್ನಡದಲ್ಲಿ ಯಾರೂ ಇದು ತನಕ ಇಂತಹ ಪುಸ್ತಕ ಬರೆದಿಲ್ಲ. ಪ್ರವಾಸ ಮಾಡುವುದು ಹೇಗೆ ಎಂಬುದನ್ನು ಮಾತ್ರವಲ್ಲ, ಅತಿ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡುವುದು ಹೇಗೆ ಎಂಬುದನ್ನು ಶ್ರೀನಿಧಿ ಹಂದೆಯವರು ೩೯ ದೇಶ ಪ್ರವಾಸ ಮಾಡಿದ ತಮ್ಮದೇ ಅನುಭವದ ಆಧಾರದಲ್ಲಿ ವಿವರಿಸುತ್ತಾರೆ. ವೀಸಾ, ವಿಮಾನ ಟಿಕೆಟ್, ವಿದೇಶೀ ವಿನಿಮಯ, ವಸತಿ, ಆಹಾರ, ಇತ್ಯಾದಿ ಎಲ್ಲ ಅಗತ್ಯ ವಿಭಾಗಗಳನ್ನು ಸರಳವಾದ ಮಾತಿನಲ್ಲಿ ಬಿಚ್ಚಿಡುತ್ತಾರೆ. ಪ್ರಕಾಂಡ ಪಂಡಿತರು ಮಾಡುವಂತೆ ತಮ್ಮ ಪಾಂಡಿತ್ಯ ಪ್ರದರ್ಶನ ಇಲ್ಲಿಲ್ಲ. ಹೇಳಬೇಕಾದ ವಿಷಯವನ್ನು ಸರಳವಾಗಿ ಸುಲಭವಾಗಿ ಮನದಟ್ಟು ಮಾಡುವಂತೆ ಬರೆಯಲಾಗಿದೆ.
ಪುಸ್ತಕದ ಸಾಫ್ಟ್‌ಕಾಪಿ ದೊರೆತ ತಕ್ಷಣ ನಾನು ಮೊದಲು ಲಂಘನ ಮಾಡಿದ್ದು ಆಹಾರ ಎಂಬ ವಿಭಾಗಕ್ಕೆ. ಇದಕ್ಕೆ ಕಾರಣವಿದೆ. ಶ್ರೀನಿಧಿ ಹಂದೆಯವರು ನನ್ನಂತೆ ಅಪ್ಪಟ ಸಸ್ಯಾಹಾರಿಗಳು. ಭಾರತೀಯರ ಪ್ರಕಾರ ಸಸ್ಯಾಹಾರವೆಂದರೆ ಮೊಟ್ಟೆ ಮೀನು ಎಲ್ಲ ಇಲ್ಲ. ಆದರೆ ಹಲವು ವಿದೇಶೀಯರ ಪ್ರಕಾರ ಮೊಟ್ಟೆ ಮೀನು ಎಲ್ಲ ಮಾಂಸಾಹಾರಗಳಲ್ಲ. ಆದುದರಿಂದ ವಿದೇಶ ಪ್ರಯಾಣ ಮಾಡುವಾಗ, ವಿಮಾನದಲ್ಲಿ, ರೆಸ್ಟಾರೆಂಟುಗಳಲ್ಲಿ ಅಪ್ಪಟ ಸಸ್ಯಾಹಾರ ಪಡೆಯಲು ಸರ್ಕಸ್ ಮಾಡಬೇಕಾಗುತ್ತದೆ. ನನಗೆ ಇದು ಅನುಭವವಾಗಿದೆ. ಆ ಬಗ್ಗೆ ಒಂದು ಲೇಖನವನ್ನೇ ಬರೆದಿದ್ದೆ. ಶ್ರೀನಿಧಿ ಹಂದೆ ಈ ಬಗ್ಗೆ ಏನನ್ನು ಬರೆದಿದ್ದಾರೆ ಎಂದು ಓದುವ ಕುತೂಹಲ. ನಿರಾಸೆಯೇನೂ ಆಗಲಿಲ್ಲ. ಭಾರತೀಯರಿಗೆ, ಅದರಲ್ಲೂ ಸಸ್ಯಾಹಾರಿಗಳಿಗೆ, ವಿದೇಶ ಪ್ರಯಾಣ ಮಾಡುವಾಗ ಆಹಾರದ ಬಗ್ಗೆ ಏನೇನು ಎಚ್ಚರಿಕೆ ತೆಗೆದುಕೊಳ್ಳಬೇಕು, ಸಸ್ಯಾಹಾರ ಹುಡುಕುವುದು, ಪಡೆಯುವುದು ಹೇಗೆ ಎಂದೆಲ್ಲ ವಿವರಿಸಿದ್ದಾರೆ. ಆದರೆ ನಮ್ಮೂರಿನ ಎಂಟಿಆರ್ ಅಥವಾ ಮಯ್ಯಾಸ್‌ನವರ ready to eat ಗಳನ್ನು ಇಲ್ಲಿಂದಲೇ ತೆಗೆದುಕೊಂಡು ಹೋಗುವ ಬಗ್ಗೆ ಈ ಪುಸ್ತಕದಲ್ಲಿ ಅವರು ಸೇರಿಸಿಲ್ಲ. ಅದಕ್ಕೆ ಪ್ರಮುಖ ಕಾರಣ ಬಹುಶಃ ಇದು ಅತಿ ಕಡಿಮೆ ಖರ್ಚಿನಲ್ಲಿ ಮಾಡುವ ಪ್ರಯಾಣಗಳ ಬಗೆಗೆ ವಿವರಿಸುವ ಪುಸ್ತಕ. ಅಂದರೆ ಸಾದ್ಯವಿದ್ದಷ್ಟು ಚೆಕ್-ಇನ್ ಲಗ್ಗೇಜು ಇಲ್ಲದೆ ಕೇವಲ ಹ್ಯಾಂಡ್‌ಬ್ಯಾಗ್ ಮಾತ್ರವನ್ನೇ ಹಿಡಿದುಕೊಂಡು ಹೋಗುವ ಪ್ರಯಾಣ. ಅಗ ತುಂಬ ಆಹಾರ ತೆಗೆದುಕೊಂಡು ಹೋಗಲು ಆಗುವುದಿಲ್ಲ.
ಶ್ರೀನಿಧಿ ಹಂದೆಯವರು ತಮ್ಮ ಎಲ್ಲಾ ಪ್ರವಾಸಗಳ ಬಗ್ಗೆ ಬ್ಲಾಗ್ ಬರೆಯುವಾಗ ತಪ್ಪದೆ ಒಂದು ವಿಷಯ ಸೇರಿಸಿರುತ್ತಾರೆ. ಅದೆಂದರೆ ತಾವು ಭೇಟಿ ನೀಡಿದ ದೇಶ, ನಗರದಲ್ಲಿ ಎಳನೀರು ದೊರೆಯುತ್ತದೆಯೇ, ದೊರೆಯುವುದಿದ್ದರೆ ಅದರ ಬೆಲೆ ಎಷ್ಟು, ಎಂದು. ನಾವಂತೂ ಫೇಸ್‌ಬುಕ್‌ನಲ್ಲಿ ಅವರನ್ನು ಎಳನೀರಿನ ಬ್ರ್ಯಾಂಡ್ ಅಂಬಾಸಿಡರ್ ಎಂದು ಗೇಲಿ ಮಾಡುತ್ತೇವೆ. ಈ ಬಗ್ಗೆ ಅವರ ಪುಸ್ತಕದಲ್ಲಿ ಕೇವಲ ಒಂದು ಪ್ಯಾರಾ ಮಾತ್ರ ಬರೆದಿದ್ದಾರೆ. ಹಾಗೆ ನೋಡಿದರೆ ತಮ್ಮ ಅನುಭವಗಳ ಬಗ್ಗೆ ಚಿಕ್ಕದಾಗಿ ಒಂದು ಅಧ್ಯಾಯ ಮಾತ್ರ ಇದೆ. ಬಹುಶಃ ಈ ಅನುಭವಗಳನ್ನೇ ವಿಸ್ತರಿಸಿ ಇನ್ನೊಂದು ಅಥವಾ ಹಲವು ಪುಸ್ತಕಗಳನ್ನು ಮುಂದಕ್ಕೆ ಬರೆಯಬಹುದೇನೋ? ಹಾಗೆ ಮಾಡಿದರೆ ಅದು ಕನ್ನಡಕ್ಕೆ ಉತ್ತಮ ಕೊಡುಗೆಯಾಗಬಹುದು. ಉತ್ತಮ ಬರೆವಣಿಗೆ ಇರುವ ಶ್ರೀನಿಧಿ ಹಂದೆಯವರಿಂದ ನಾವು ಇದನ್ನು ನಿರೀಕ್ಷಿಸಲೂ ಬಹುದು.
– ಡಾ. ಯು. ಬಿ. ಪವನಜ
ಅಮೆಝಾನ್ ಜಾಲಮಳಿಗೆಯಲ್ಲಿ ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.