- ಡಾ. ಯು. ಬಿ. ಪವನಜ
ಮೊಬೈಲ್ ಫೋನುಗಳಲ್ಲಿ ಮೇಲ್ದರ್ಜೆಯವುಗಳಲ್ಲಿ ಅಂತರಜಾಲ ಸಂಪರ್ಕ, ವಿ-ಅಂಚೆ ಇತ್ಯಾದಿ ಸೌಕರ್ಯಗಳಿರುತ್ತವೆ. ಇಂತಹ ಫೋನುಗಳಲ್ಲಿ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು ಹೊಂದಿರುವ ಫೋನುಗಳು ಇತ್ತೀಚೆಗಿನ ದಿನಗಳಲ್ಲಿ ಜನಪ್ರಿಯವಾಗುತ್ತಿವೆ. ಅಂತರಜಾಲದಲ್ಲಿ ಇಂತಹ ಫೋನುಗಳಿಗೆ ಹಲವಾರು ಉಚಿತ ತಂತ್ರಾಂಶಗಳು ಲಭ್ಯವಾಗಿರುವುದು ಮತ್ತು ತಂತ್ರಾಂಶ ಪರಿಣತರಾಗಿದ್ದಲ್ಲಿ ತಾವೇ ಈ ಫೋನುಗಳಿಗೆ ತಂತ್ರಾಂಶ ತಯಾರಿಸುವ ಸವಲತ್ತುಗಳಿರುವುದೂ ಈ ಫೋನುಗಳು ಜನಪ್ರಿಯವಾಗುತ್ತಿರುವುದಕ್ಕೆ ಕಾರಣಗಳು. ಇಂತಹ ಫೋನುಗಳು ಹಲವು ಕಂಪೆನಿಗಳ ಹೆಸರಿನಲ್ಲಿ ಲಭ್ಯವಿವೆ. ಅವುಗಳೆಂದರೆ O2, iMate, HTC ಇತ್ಯಾದಿ. ಈ ಎಲ್ಲ ಹೆಸರುಗಳಲ್ಲಿ ಅವು ಲಭ್ಯವಿದ್ದರೂ ಈ ಎಲ್ಲ ಫೋನುಗಳನ್ನು ತಯಾರಿಸುವ ಕಂಪೆನಿ ಒಂದೇ -ಅದುವೇ ಎಚ್‌ಟಿಸಿ. ಮೊದಲು ಎಚ್‌ಟಿಸಿ ಕಂಪೆನಿ ಇತರರಿಗೆ ಮಾತ್ರ ಈ ಫೋನುಗಳನ್ನು ತಯಾರಿಸುತ್ತಿತ್ತು. ಇತ್ತೀಚೆಗಷ್ಟೆ ಅದು ತನ್ನ ಹೆಸರಿನಲ್ಲೆ ಇವುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದೆ. ಅವುಗಳಲ್ಲಿ ನಮ್ಮ ದೇಶದಲ್ಲಿ ಲಭ್ಯವಿರುವ ಮತ್ತು ತುಂಬ ಸುದ್ದಿ ಮಾಡುತ್ತಿರುವ ಫೋನು ಎಚ್‌ಟಿಸಿ ಟಚ್. ಏನಿದೆ ಇದರಲ್ಲಿ?