ಗ್ಯಾಜೆಟ್ ಲೋಕ ೩೫೫ (ನವಂಬರ್ ೨೦, ೨೦೧೮) ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1
ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1
ದೊಡ್ಡ ಬ್ಯಾಟರಿ, ಚಿಕ್ಕ ಗಾತ್ರ ಹಾಗೂ ಕಡಿಮೆ ತೂಕ
ತೈವಾನ್ ದೇಶದ ಏಸುಸ್ ಕಂಪೆನಿ ಭಾರತದ ಗಣಕ, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು ಗಮನಾರ್ಹ ಹೆಸರು. ಈ ಕಂಪೆನಿಯ ಹಲವು ಉತ್ಪನ್ನಗಳನ್ನು ಇದೇ ಅಂಕಣದಲ್ಲಿ ವಿಮರ್ಶಿಸಲಾಗಿತ್ತು. ಏಸುಸ್ ಇತ್ತೀಚೆಗೆ ಕೆಲವು ಆಯ್ದ ಕ್ಷೇತ್ರಗಳಲ್ಲಿ ಈಗಾಗಲೇ ಸ್ಥಾಪಿತರಾದವರನ್ನು ಗುರಿಯಾಗಿಟ್ಟುಕೊಂಡು ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಲು ಪ್ರಾರಂಭಿಸಿದೆ. ಮೇಲ್ದರ್ಜೆಯ ಫೋನ್‌ಗಳಲ್ಲಿ ವನ್‌ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಿ ಙೆನ್‌ಫೋನ್ ೫ ಝಡ್ ಅನ್ನು ತಯಾರಿಸಿದೆ. ಕಡಿಮೆ ಬೆಲೆಯ ಫೋನ್‌ಗಳಲ್ಲಿ ಶಿಯೋಮಿಗೆ ಪ್ರತಿಸ್ಪರ್ಧಿಯಾಗಲು ಹೊರಟಿದೆ. ಕಡಿಮೆ ಬೆಲೆಯ ಫೋನ್‌ಗಳಲ್ಲಿ ಬಹುಮಂದಿ ನೋಡುವುದು ಬ್ಯಾಟರಿ ಎಷ್ಟು ಸಮಯ ಬರುತ್ತದೆ ಎಂದು. ಅಂತಹವರಿಗಾಗಿಯೇ ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1 ಎಂಬ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈಗ ಸ್ವಲ್ಪ ಕಡಿಮೆ ಬೆಲೆಯ ಏಸುಸ್ ಝೆನ್‌ಫೋನ್ ಮ್ಯಾಕ್ಸ್ ಎಂ1 (Asus Zenfone Max M1) ಫೋನನ್ನು ತಂದಿದೆ. ಇದರ ವಿಮರ್ಶೆಯನ್ನು ನೋಡೋಣ.
ಗುಣವೈಶಿಷ್ಟ್ಯಗಳು
ಪ್ರೋಸೆಸರ್ | 8 x 1.4 ಗಿಗಾಹರ್ಟ್ಸ್ ಪ್ರೋಸೆಸರ್ (Snapdragon 430) |
ಗ್ರಾಫಿಕ್ಸ್ ಪ್ರೋಸೆಸರ್ | Adreno 505 |
ಮೆಮೊರಿ | 3 + 32 ಗಿಗಾಬೈಟ್ |
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ | ಇದೆ (ಪ್ರತ್ಯೇಕ ಜಾಗ, ಹೈಬ್ರಿಡ್ ಅಲ್ಲ) |
ಪರದೆ | 5.5 ಇಂಚು ಗಾತ್ರದ 1440 x 720 ಪಿಕ್ಸೆಲ್ ಐಪಿಎಸ್ |
ಕ್ಯಾಮರ | 13 ಮೆಗಾಪಿಕ್ಸೆಲ್ ಪ್ರಾಥಮಿಕ + ಫ್ಲಾಶ್
8 ಮೆಗಾಪಿಕ್ಸೆಲ್ ಸ್ವಂತೀ |
ಸಿಮ್ | 2 ನ್ಯಾನೊ |
ಬ್ಯಾಟರಿ | 4000 mAh |
ಗಾತ್ರ | 147.3 x 70.9 x 8.7 ಮಿ.ಮೀ. |
ತೂಕ | 150 ಗ್ರಾಂ |
ಬೆರಳಚ್ಚು ಸ್ಕ್ಯಾನರ್ | ಇದೆ |
ಅವಕೆಂಪು ದೂರನಿಯಂತ್ರಕ (Infrared remote) | ಇಲ್ಲ |
ಎಫ್.ಎಂ. ರೇಡಿಯೋ | ಇದೆ |
ಎನ್‌ಎಫ್‌ಸಿ | ಇಲ್ಲ |
4 ಜಿ ವಿಓಎಲ್‌ಟಿಇ (4G VoLTE) | ಇದೆ |
ಇಯರ್‌ಫೋನ್ | ಇಲ್ಲ |
ಯುಎಸ್‌ಬಿ ಓಟಿಜಿ ಬೆಂಬಲ | ಇದೆ |
ಕಾರ್ಯಾಚರಣ ವ್ಯವಸ್ಥೆ | ಆಂಡ್ರೋಯಿಡ್ 8.0 |
ಬೆಲೆ | ₹7,499 |
ರಚನೆ ಮತ್ತು ವಿನ್ಯಾಸ
ಏಸುಸ್‌ನವರ ಫೋನ್‌ಗಳು ತುಂಬ ದೊಡ್ಡದಾಗಿರುತ್ತಿದ್ದವು. ಅಂದರೆ ಅವುಗಳ ಪರದೆ ಮತ್ತು ದೇಹದ ಗಾತ್ರಗಳ ಅನುಪಾತ 70-75% ಗಳಷ್ಟು ಮಾತ್ರ ಇರುತ್ತಿದ್ದವು. ಅದು ಸುಮಾರು ಎರಡು ವರ್ಷಗಳ ಹಿಂದಿನ ಮಾತು. ಆದರೆ ಏಸುಸ್‌ನವರು ತುಂಬ ಕಲಿತಿದ್ದಾರೆ. ಇತ್ತೀಚೆಗೆ ಬರುತ್ತಿರುವ ಏಸುಸ್ ಫೊನ್‌ಗಳು ಉತ್ತಮವಾದ ಪರದೆ-ದೇಹ ಅನುಪಾತವನ್ನು ಒಳಗೊಂಡಿವೆ. ಈ ಫೋನ್‌ನ ದೇಹ ಪ್ಲಾಸ್ಟಿಕ್ಕಿನದು. ಹಿಂಭಾಗ ಬಹಮಟ್ಟಿಗೆ ಚಿನ್ನದ ಬಣ್ಣದ್ದು. ಇದರಲ್ಲಿರುವುದು ತುಂಬ ಶಕ್ತಿಯ ಬ್ಯಾಟರಿ. ಆದರೂ ಈ ಫೋನಿನ ತೂಕ ಕೇವಲ 150 ಗ್ರಾಂ. ತುಂಬ ದೊಡ್ಡ ಬ್ಯಾಟರಿ ಇದ್ದೂ ಕಡಿಮೆ ತೂಕದ ಫೋನ್ ಎಂಬುದು ಈ ಫೋನಿನ ಪ್ರಧಾನ ಹೆಗ್ಗಳಿಕೆ ಎನ್ನಬಹುದು.
ಇದು ಅಂಚುರಹಿತ (bezelless) ಫೋನ್. ಆದರೆ ಪರದೆಯ ಕಚ್ಚು (notch) ಇಲ್ಲ. ಬೆರಳಚ್ಚು ಸ್ಕ್ಯಾನರ್ ಹಿಂದುಗಡೆ ಇದೆ. ಪ್ರಾಥಮಿಕ ಕ್ಯಾಮರ ಹಿಂದುಗಡೆ ಬಲಗಡೆ ಮೂಲೆಯಲ್ಲಿ ಇದೆ. ಅದರ ಕೆಳಗೆ ಫ್ಲಾಶ್ ಇದೆ. ಹಿಂಭಾಗದಲ್ಲಿ ಮಧ್ಯಭಾಗದಲ್ಲಿ ಸ್ವಲ್ಪ ಮೇಲುಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಫೋನ್ ಹಿಡಿದಾಗ ತೋರುಬೆರಳು ಸಹಜವಾಗಿ ಈ ಸ್ಕ್ಯಾನರ್ ಮೇಲೆ ಹೋಗುತ್ತದೆ. ಹಿಂಬದಿಯ ಕವಚ ಸ್ವಲ್ಪ ದೊರಗು ಎನ್ನಬಹುದು. ನಯವಾಗಿಯಂತೂ ಇಲ್ಲ. ಯುಎಸ್‌ಬಿ ಕಿಂಡಿ ಕೆಳಗಡೆ ಇದೆ. ಇದು ಯುಎಸ್‌ಬಿ-ಸಿ ಅಲ್ಲ. 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮೇಲುಗಡೆ ಇದೆ. ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳು ಬಲಗಡೆ, ಸಿಮ್ ಮತ್ತು ಮೆಮೊರಿ ಹಾಕುವ ಟ್ರೇ ಎಡಗಡೆ ಇವೆ. ಕಪ್ಪು ಮತ್ತು ಚಿನ್ನ ಎರಡು ಬಣ್ಣಗಳಲ್ಲಿ ಲಭ್ಯ.
ಕೆಲಸದ ವೇಗ
ಏಸುಸ್‌ನವರ ಫೋನ್‌ಗಳ ಬಗ್ಗೆ ಇದ್ದ ಇನ್ನೊಂದು ಆರೋಪವೆಂದರೆ ಹಲವು ಅನವಶ್ಯಕ ಕಿರುತಂತ್ರಾಂಶಗಳನ್ನು (ಆಪ್) ಮೊದಲೇ ಸೇರಿಸಿ ನೀಡುತ್ತಿದ್ದುದು. ಆದರೆ ಇತ್ತೀಚೆಗಿನ ಫೋನ್‌ಗಳಲ್ಲಿ ಈ ತೊಂದರೆ ಇಲ್ಲ. ಈ ಫೋನ್‌ನಲ್ಲೂ ಅಷ್ಟೆ. ಝೆನ್‌ಫೋನ್ ಮ್ಯಾಕ್ಸ್ ಪ್ರೊ ಎಂ1 ಫೋನಿನಲ್ಲಿದ್ದುದು ಶುದ್ಧ ಆಂಡ್ರೋಯಿಡ್. ಆದರೆ ಇದರಲ್ಲಿರುವುದು ಶುದ್ಧ ಆಂಡ್ರೋಯಿಡ್ ಅಲ್ಲ. ಇದು ಇನ್ನೂ ಆಂಡ್ರೋಯಿಡ್ 8.0ಯಲ್ಲೇ ಇದೆ. ಆಂಡ್ರೋಯಿಡ್ 9.0 ಕ್ಕೆ ಯಾವಾಗ ನವೀಕರಣ ನೀಡುತ್ತಾರೆ ಎಂಬುದು ಗೊತ್ತಿಲ್ಲ.
ಇದರಲ್ಲಿರುವುದು ಕಡಿಮೆ ದರ್ಜೆಯ ಪ್ರೋಸೆಸರ್. ಇದರ ಅಂಟುಟು ಬೆಂಚ್‌ಮಾರ್ಕ್ 54010 ಇದೆ. ಅಂದರೆ ಇದು ಕಡಿಮೆ ವೇಗದ ಫೋನ್ ಎನ್ನಬಹುದು. ಕಡಿಮೆ ಶಕ್ತಿಯನ್ನು ಬೇಡುವ ಆಟಗಳನ್ನು ಒಂದು ಮಟ್ಟಿಗೆ ತೃಪ್ತಿದಾಯಕವಗಿ ಆಡಬಹುದು. ಆದರೆ ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಆಡಲು ಈ ಫೋನ್ ಹೇಳಿದ್ದಲ್ಲ. ಫೋನ್ ಪ್ರಾರಂಭಿಸಿದಾಗ ಸ್ವಲ್ಪ ನಿಧಾನವಾಗಿ ತೆರೆದುಕೊಳ್ಳುತ್ತದೆ. ಕೆಲವು ಕಿರುತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವಾಗ ಕೆಲವು ಸಲ ಸ್ವಲ್ಪ ನಿಧಾನವಾಗಿ ಕೆಲಸ ಮಾಡುತ್ತದೆ.
ಪರದೆ ಹಾಗೂ ಆಡಿಯೋ
ವಿಡಿಯೋ ವೀಕ್ಷಣೆಯ ಅನುಭವ ತೃಪ್ತಿದಾಯಕವಾಗಿದೆ. ಇದು ಹೈಡೆಫಿನಿಶನ್ ವಿಡಿಯೋ ಪ್ಲೇ ಮಾಡುತ್ತದೆ. ಆದರೆ 4k ವಿಡಿಯೋ ಪ್ಲೇ ಸರಿಯಾಗಿ ಆಗುವುದಿಲ್ಲ. ತಡೆತಡೆದು ಪ್ಲೇ ಮಾಡುತ್ತದೆ. ಈ ಫೋನಿನ ಆಡಿಯೋ ಒಂದು ಮಟ್ಟಿಗೆ ತೃಪ್ತಿದಾಯಕವಾಗಿದೆ. ಅತಿ ಕಡಿಮೆ ಕಂಪನಾಂಕದ (bass) ಮತ್ತು ಅತಿ ಹೆಚ್ಚು ಕಂಪನಾಂಕದ (treble) ಧ್ವನಿಯ ಪುನರುತ್ಪತ್ತಿ ಸ್ವಲ್ಪ ಕಡಿಮೆ ಗುಣಮಟ್ಟದಲ್ಲಿದೆ. ಮಾನವ ಧ್ವನಿಯ ಪುನರುತ್ಪತ್ತಿ ಚೆನ್ನಾಗಿದೆ. ಫೋನಿನ ಜೊತೆ ಇಯರ್‌ಫೋನ್ ನೀಡಿಲ್ಲ. ಇದರಲ್ಲಿರುವ ಎಫ್‌ಎಂ ರೇಡಿಯೋದ ಗ್ರಾಹಕ ಶಕ್ತಿ ಚೆನ್ನಾಗಿದೆ. ಮನೆಯೊಳಗೆ ಎಲ್ಲ ಕೇಂದ್ರಗಳು ಸರಿಯಾಗಿ ಕೇಳಿಬರುತ್ತವೆ. ಸ್ಪೀಕರಿನ ಧ್ವನಿಯೂ ಪರವಾಗಿಲ್ಲ.
ಕ್ಯಾಮರ
ಇದರಲ್ಲಿರುವುದು 13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮರ. ಕ್ಯಾಮರದ ಗುಣಮಟ್ಟ ಅಂತಹ ಹೇಳಿಕೊಳ್ಳುವಂತೇನೂ ಇಲ್ಲ. ಜೊತೆಗೆ ಕ್ಯಾಮರದ ಕಿರುತಂತ್ರಾಂಶ (ಆಪ್) ಕೂಡ ಅಷ್ಟಕ್ಕಷ್ಟೆ. ಮ್ಯಾನ್ಯುವಲ್ ಆಯ್ಕೆ ಇಲ್ಲ. ಓಪನ್ ಕ್ಯಾಮರ ಕಿರುತಂತ್ರಾಂಶ ಹಾಕಿಕೊಂಡರೂ ಕ್ಯಾಮರದ ಯಂತ್ರಾಂಶದ ಬೆಂಬಲವಿಲ್ಲದ ಕಾರಣ ಮ್ಯಾನ್ಯುವಲ್ ಆಯ್ಕೆ ಬರುವುದಿಲ್ಲ. ಚೆನ್ನಾಗಿ ಬೆಳಕಿದ್ದಾಗ, ಹತ್ತಿರದ ವಸ್ತುಗಳನ್ನು ಉದಾಹರಣೆಗೆ ಹೂವುಗಳ ಫೋಟೋ, ಚೆನ್ನಾಗಿ ತೆಗೆಯುತ್ತದೆ. ಪ್ರಕೃತಿ ದೃಶ್ಯಗಳ ಫೋಟೋ ಚೆನ್ನಾಗಿ ಮೂಡಿಬರುತ್ತದೆ. ಅತಿ ಕಡಿಮೆ ಬೆಳಕಿನಲ್ಲಿ ಫೋಟೋ ಚೆನ್ನಾಗಿ ಮೂಡಿಬರುವುದಿಲ್ಲ. ವಿಡಿಯೋ ಚಿತ್ರೀಕರಣ ಅಷ್ಟಕ್ಕಷ್ಟೆ. ಯಾಕೆಂದರೆ ಇದರಲ್ಲಿ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಈ ಫೋನಿನ ಬೆಲೆಗೆ ಹೋಲಿಸಿದರೆ ಕ್ಯಾಮರ ತೃಪ್ತಿದಾಯಕ ಎಂದೇ ಹೇಳಬಹುದು.
ಬ್ಯಾಟರಿ
ಈ ಫೋನಿನ ಪ್ರಮುಖ ಹೆಚ್ಚುಗಾರಿಕೆಯಿರುವುದು ಇದರ ಬ್ಯಾಟರಿಯಲ್ಲಿ. 4000 mAh ಎಂದರೆ ಶಕ್ತಿಶಾಲಿ ಎನ್ನಬಹುದು. ಅವರದೇ ಚಾರ್ಜರ್ ಮತ್ತು ಕೇಬಲ್ ಬಳಸಿದರೆ ಸುಮಾರು ಎರಡೂವರೆ ಗಂಟಗಳಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಈ ಫೋನಿನಿಂದ ಇನ್ನೊಂದು ಸಾಧನಕ್ಕೆ ಯುಎಸ್‌ಬಿ ಓಟಿಜಿ ಕೇಬಲ್ ಬಳಸಿ ಚಾರ್ಜ್ ಮಾಡುವ ಸವಲತ್ತನ್ನೂ ನೀಡಿದ್ದಾರೆ.
ಅಂತಿಮ ತೀರ್ಮಾನ
ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿದಾಯಕ ಫೋನ್ ಎನ್ನಬಹುದು.
-ಡಾ| ಯು.ಬಿ. ಪವನಜ
gadgetloka @ gmail . com