ಗ್ಯಾಜೆಟ್ ಲೋಕ ೩೫೩ (ನವಂಬರ್ ೦೩, ೨೦೧೮) – ಹುವಾವೇ ನೋವಾ 3
ಹುವಾವೇ ನೋವಾ 3
ಉತ್ತಮ ವಿನ್ಯಾಸ ಮತ್ತು ಕ್ಯಾಮರ ಇರುವ ಫೋನ್
ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರು ಹುವಾವೇ (Huawei). ಹುವಾವೇಯವರದೇ ಇನ್ನೊಂದು ಬ್ರ್ಯಾಂಡ್ ಹೋನರ್ (ಆನರ್?). ಈ ಕಂಪೆನಿಯ ಕೆಲವು ಸ್ಮಾರ್ಟ್‌ಫೋನ್‌ಗಳ ವಿಮರ್ಶೆಯನ್ನು ಗ್ಯಾಜೆಟ್‌ಲೋಕ ಅಂಕಣದಲ್ಲಿ ನೀಡಲಾಗಿತ್ತು. ಹುವಾವೇ ಕಂಪೆನಿಯು ಸ್ವಲ್ಪ ಮೇಲ್ದರ್ಜೆಯ ಫೋನ್‌ಗಳನ್ನು ತಯಾರಿಸುತ್ತಿದೆ. ಇತ್ತೀಚೆಗಷ್ಟೆ ಅವರು ಭಾರತದಲ್ಲೂ ತಮ್ಮ ಫೋನ್‌ಗಳನ್ನು ಮಾರಾಟ ಮಾಡಲು ಪ್ರಾರಂಬಿಸಿದ್ದಾರೆ. ಈ ಸಲ ನಾವು ವಿಮರ್ಶಿಸುತ್ತಿರುವ ಗ್ಯಾಜೆಟ್ ಹುವಾವೇ ನೋವಾ 3 (Huawei Nova 3)
ಗುಣವೈಶಿಷ್ಟ್ಯಗಳು
ಪ್ರೋಸೆಸರ್ | 4 x 2.36 ಗಿಗಾಹರ್ಟ್ಸ್ + 4 x 1.8 ಗಿಗಾಹರ್ಟ್ಸ್ ಪ್ರೋಸೆಸರ್ (Kirin 970) |
ಗ್ರಾಫಿಕ್ಸ್ ಪ್ರೋಸೆಸರ್ | Mali-G72 MP12 |
ಮೆಮೊರಿ | 6 + 128 ಗಿಗಾಬೈಟ್ |
ಮೈಕ್ರೊಎಸ್‌ಡಿ ಮೆಮೊರಿ ಸೌಲಭ್ಯ | ಇದೆ (ಹೈಬ್ರಿಡ್) |
ಪರದೆ | 6.3 ಇಂಚು ಗಾತ್ರದ 1080 x 2340 ಪಿಕ್ಸೆಲ್, 409 PPI |
ಕ್ಯಾಮರ | 16 + 24 ಮೆಗಾಪಿಕ್ಸೆಲ್ ಎರಡು ಪ್ರಾಥಮಿಕ + ಫ್ಲಾಶ್
24 ಮೆಗಾಪಿಕ್ಸೆಲ್ ಸ್ವಂತೀ |
ಸಿಮ್ | 2 ನ್ಯಾನೊ ಅಥವಾ 1 ನ್ಯಾನೊ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ |
ಬ್ಯಾಟರಿ | 3750 mAh |
ಗಾತ್ರ | 157.00 x 73.70 x 7.30 ಮಿ.ಮೀ. |
ತೂಕ | 166 ಗ್ರಾಂ |
ಬೆರಳಚ್ಚು ಸ್ಕ್ಯಾನರ್ | ಇದೆ |
ಅವಕೆಂಪು ದೂರನಿಯಂತ್ರಕ (Infrared remote) | ಇಲ್ಲ |
ಎಫ್.ಎಂ. ರೇಡಿಯೋ | ಇಲ್ಲ |
ಎನ್‌ಎಫ್‌ಸಿ | ಇಲ್ಲ |
4 ಜಿ ವಿಓಎಲ್‌ಟಿಇ (4G VoLTE) | ಇದೆ |
ಇಯರ್‌ಫೋನ್ | ಇದೆ |
ಯುಎಸ್‌ಬಿ ಓಟಿಜಿ ಬೆಂಬಲ | ಇದೆ |
ಕಾರ್ಯಾಚರಣ ವ್ಯವಸ್ಥೆ | ಆಂಡ್ರೋಯಿಡ್ 8.1.0 + EMUI 8.2 |
ಬೆಲೆ | ₹34,999 (ನಿಗದಿತ), ₹29,999 (ಅಮೆಝಾನ್) 5 ಬಣ್ಣಗಳಲ್ಲಿ ಲಭ್ಯ |
ರಚನೆ ಮತ್ತು ವಿನ್ಯಾಸ
ಇದರ ರಚನೆ ಮತ್ತು ವಿನ್ಯಾಸ ನಿಜಕ್ಕೂ ಸುಂದರವಾಗಿದೆ. ಇದರ ಹಿಂಭಾಗ ಮತ್ತು ಇತ್ತೀಚೆಗೆ ಮಾರುಕಟ್ಟೆಗೆ ಬಂದ ಹೋನರ್ 8ಎಕ್ಸ್ ಫೋನ್‌ನ ಹಿಂಭಾಗ ಬಹುತೇಕ ಒಂದೇ ರೀತಿ ಇವೆ. ಈ ಫೋನಿನಲ್ಲಿ ಹುವಾವೇ ಎಂದು ಬರೆದ ಜಾಗದಲ್ಲಿ ಆ ಫೋನಿನಲ್ಲಿ ಹೋನರ್ ಎಂದು ಬರೆದಿದ್ದಾರೆ. ಇದು 6.3 ಇಂಚು ಗಾತ್ರದ ಪರದೆಯನ್ನು ಒಳಗೊಂಡಿದೆ. ದಪ್ಪವೂ ಕಡಿಮೆ ಇದೆ. 5.0 – 5.5 ಇಂಚು ಗಾತ್ರದ ಪರದೆ ಸಾಲದು ಎನ್ನುವವರಿಗೆ ಇದು ಉತ್ತಮ ಆಯ್ಕೆ. ಇತ್ತೀಚೆಗೆ ಬರುತ್ತಿರುವ ಬಹುತೇಕ ಮೇಲ್ದರ್ಜೆ ಫೋನ್‌ಗಳಂತೆ ಇದು ಕೂಡ ಅಂಚುರಹಿತ (bezelless) ಫೋನ್. ಅಂದರೆ ಇದರ ಪರದೆ ಮತ್ತು ದೇಹದ ಗಾತ್ರಗಳ ಅನುಪಾತ ಉತ್ತಮವಾಗಿದೆ ಎಂದು ಅರ್ಥ. ಜೊತೆಗೆ ಪರದೆಯ ಕಚ್ಚು (notch) ಕೂಡ ಇದೆ. ಇದನ್ನು ಕೈಯಲ್ಲಿ ಹಿಡಿದಾಗ ಒಂದು ಉತ್ತಮ ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ. ಇದರ ಹಿಂಭಾಗ ತುಂಬ ನುಣುಪಾಗಿದೆ. ಬದಿಗಳಲ್ಲಿ ವಕ್ರವಾಗಿದ್ದು ತಲೆದಿಂಬಿನಂತಿದೆ. ಗಾತ್ರ ದೊಡ್ಡದಾಗಿರುವುದರಿಂದ ಮತ್ತು ದೇಹ ಸ್ವಲ್ಪ ನುಣುಪಾಗಿರುವುದುರಿಂದ ಕೈಯಿಂದ ಜಾರಿ ಬೀಳುವ ಭಯವಿದೆ. ಹಾಗೆ ಬೀಳಬಾರದು ಎಂದು ಅವರೇ ಒಂದು ಅಧಿಕ ಪ್ಲಾಸ್ಟಿಕ್ ಕವಚ ನೀಡಿದ್ದಾರೆ. ಆದರೆ ಈ ಕವಚದ ತಯಾರಿಯಲ್ಲಿ ಸ್ವಲ್ಪ ದೋಷವಿದೆ. ಅದನ್ನು ಹಾಕಿದಾಗ ಕಾಲುಭಾಗ ಫ್ಲಾಶ್ ಮುಚ್ಚಿಹೋಗುತ್ತದೆ.
ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಯುಎಸ್‌ಬಿ-ಸಿ ನಮೂನೆಯ ಕಿಂಡಿಗಳಿವೆ. ಎಡಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಒಂದು ನ್ಯಾನೋಸಿಮ್ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಅಥವಾ ಎರಡು ನ್ಯಾನೋ ಸಿಮ್ ಹಾಕಲು ಬಳಸಲಾಗುತ್ತದೆ. ಯುಎಸ್‌ಬಿ ಓಟಿಜಿ ಸವಲತ್ತು ಇದೆ. ಇದನ್ನು ಬಳಸಲು ನೀವು ಯುಎಸ್‌ಬಿ-ಸಿ ನಮೂನೆಯ ಓಟಿಜಿ ಕೇಬಲ್ ಅಥವಾ ಅಡಾಪ್ಟರ್ ಕೊಳ್ಳಬೇಕು. ಫ್ರೇಂನ ಕೆಳಭಾಗದಲ್ಲಿ ಒಂದು ಗ್ರಿಲ್ ಇದ್ದು ಸ್ಪೀಕರ್ ಅದರೊಳಗಿದೆ. ಹಿಂಭಾಗದ ಮೂಲೆಯಲ್ಲಿ ಕ್ಯಾಮೆರ ಇದೆ. ಹಿಂಭಾಗದ ಮಧ್ಯದಲ್ಲಿ ಸ್ವಲ್ಪ ಮೇಲುಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ನನ್ನ ಪ್ರಕಾರ ಇದು ಬೆರಳಚ್ಚು ಸ್ಕ್ಯಾನರ್‌ಗೆ ಉತ್ತಮ ಜಾಗ. ಕೈಯಲ್ಲಿ ಫೋನ್ ಹಿಡಿದಾಗ ಸಹಜವಾಗಿ ತೋರುಬೆರಳು ಈ ಸ್ಕ್ಯಾನರ್ ಮೇಲೆ ಬರುತ್ತದೆ. ಒಟ್ಟಿನಲ್ಲಿ ರಚನೆ ಮತ್ತು ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು. ಈ ಫೋನ್ ಐದು ಬಣ್ಣಗಳಲ್ಲಿ ಲಭ್ಯ. ಒಂದು ಸುಂದರ ಫೋನ್ ಬೇಕು ಎಂದು ನೀವು ಹುಡುಕಾಡುತ್ತಿದ್ದರೆ ಈ ಫೋನನ್ನು ನೀವು ಕೊಳ್ಳಬಹುದು.
ಕೆಲಸದ ವೇಗ
ಕೆಲಸದ ವೇಗ ಚೆನ್ನಾಗಿದೆ. ಇದರಲ್ಲಿ ಬಳಸಿರುವುದು ಹುವಾವೇಯವರದೇ ಕಿರಿನ್ ಪ್ರೋಸೆಸರ್. ಈ ಪ್ರೋಸೆಸರ್ ಅನ್ನು ಹುವಾವೇ ಮತ್ತು ಹೋನರ್ ಫೋನ್‌ಗಳು ಮಾತ್ರ ಬಳಸುತ್ತಿವೆ. ಇದರ ಅಂಟುಟು ಬೆಂಚ್‌ಮಾರ್ಕ್ 2,06,904 ಇದೆ. ಅಂದರೆ ಇದು ಉತ್ತಮ ವೇಗದ ಫೋನ್. ಎಲ್ಲ ನಮೂನೆಯ ಆಟಗಳನ್ನು ಆಡುವ ಅನುಭವ ತೃಪ್ತಿದಾಯಕವಾಗಿದೆ. ಮೂರು ಆಯಾಮಗಳ ಆಟಗಳನ್ನು ಆಡುವ ಅನುಭವವೂ ಚೆನ್ನಾಗಿದೆ. ಸಾಮಾನ್ಯ ಮತ್ತು ಹೈಡೆಫಿನಿಶನ್ ವಿಡಿಯೋಗಳು ಚೆನ್ನಾಗಿ ಪ್ಲೇ ಆಗುತ್ತವೆ. 4k ವೀಡಿಯೋ ಕೂಡ ಸರಿಯಾಗಿ ಪ್ಲೇ ಆಗುತ್ತದೆ. ಇದರ ಆಡಿಯೋ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ ನೀಡಿದ್ದಾರೆ. ಈ ಇಯರ್‌ಫೋನಿನ ವಿನ್ಯಾಸ ಸ್ವಲ್ಪ ವಿಚಿತ್ರವಾಗಿದೆ. ಅದಕ್ಕೆ ಕುಶನ್ ಹಾಕಲು ಸಾಧ್ಯವಿಲ್ಲ. ಕಿವಿ ಕಾಲುವೆಯೊಳಗೆ ಹೋಗುವುದಿಲ್ಲ. ಅದರ ಗುಣಮ್ಟ ಮಾತ್ರ ತೃಪತಿದಾಯಕವಾಗಿಲ್ಲ. ಅತಿ ಕಡಿಮೆ (bass) ಮತ್ತು ಅತಿ ಹೆಚ್ಚಿನ (treble) ಕಂಪನಾಂಕದ ಧ್ವನಿಯ ಪುನರುತ್ಪತ್ತಿ ತೃಪ್ತಿದಾಯಕವಗಿಲ್ಲ. ನಿಮ್ಮಲ್ಲಿ ಉತ್ತಮ ಇಯರ್‌ಫೋನ್ ಇದ್ದರೆ ಅದನ್ನು ಜೋಡಿಸಿ ಒಂದು ಮಟ್ಟಿಗೆ ತೃಪ್ತಿದಾಯಕವಾಗಿ ಸಂಗೀತವನ್ನು ಆಲಿಸಬಹುದು. ಆದರೂ ನೀಡುವ ಬೆಲೆಗ ಹೋಲಿಸಿದರೆ ಇನ್ನೂ ಉತ್ತಮ ಆಡಿಯೋ ಇಂಜಿನ್ ನೀಡಬಹುದಿತ್ತು ಎಂಬುದು ನನ್ನ ಅಭಿಪ್ರಾಯ.
ಕ್ಯಾಮರ
ಇದರಲ್ಲಿ 16 ಮತ್ತು 24 ಮೆಗಾಪಿಕ್ಸೆಲ್‌ಗಳ ಎರಡು ಪ್ರಾಥಮಿಕ ಕ್ಯಾಮರಗಳಿವೆ. ಈ ಕ್ಯಾಮರದ ಕಿರುತಂತ್ರಾಂಶದಲ್ಲಿ (ಆಪ್) ಕೃತಕ ಬುದ್ಧಿಮತ್ತೆ (Artificial Intelligence) ಅಳವಡಿಸಿದ್ದಾರೆ. ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಫೋನ್‌ಗಳು ಈ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈ ಫೋನ್ ಕೂಡ ಅವುಗಳ ಸಾಲಿಗೆ ಸೇರುತ್ತದೆ. ಕ್ಯಾಮರದ ಕಿರುತಂತ್ರಾಶದಲ್ಲಿ ಮ್ಯಾನ್ಯುವಲ್ ಮೋಡ್ ಆಯ್ಕೆ ಕೂಡ ಇದೆ. ಫೋಟೋಗಳು ನಿಜಕ್ಕೂ ಚೆನ್ನಾಗಿಯೇ ಮೂಡಿಬರುತ್ತವೆ. ಹೋನರ್ ಮತ್ತು ಹುವಾವೇಯವರ ಫೋನ್‌ಗಳು ಕ್ಯಾಮರದ ವಿಷಯದಲ್ಲಿ ಬಹುತೇಕ ಒಂದೇ ರೀತಿ ಇವೆ. ಹೋನರ್ ಫೋನ್‌ಗಳ ಕ್ಯಾಮರದಂತೆ ಇದರ ಕ್ಯಾಮರ ಕೂಡ ಬಣ್ಣಗಳನ್ನು ಸ್ವಲ್ಪ ಜಾಸ್ತಿಯೇ ಗಾಢವಾಗಿ ಮೂಡಿಸುವುದು. ಸ್ವಂತೀಯಲ್ಲಿ ನಿಮ್ಮನ್ನು ಸ್ವಲ್ಪ ಜಾಸ್ತಿಯೇ ಸುಂದರವಾಗಿ ಮಾಡುತ್ತದೆ!
ಬೆರಳಚ್ಚು ಸ್ಕ್ಯಾನರ್ ಚೆನ್ನಾಗಿಯೇ ಕೆಲಸ ಮಾಡುತ್ತದೆ. ಮುಖವನ್ನು ಗುರುತುಹಿಡಿಯುವ ಸವಲತ್ತು ಕೂಡ ತೃಪ್ತಿದಾಯಕವಾಗಿ ಹಾಗೂ ವೇಗವಾಗಿ ಕೆಲಸ ಮಾಡುತ್ತದೆ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ವೇಗವಾಗಿ ಚಾರ್ಜ್ ಆಗುತ್ತದೆ.
ಅಂತಿಮ ತೀರ್ಮಾನ
ಉತ್ತಮ ರಚನೆ, ಮತ್ತು ವಿನ್ಯಾಸವಿರುವ, ನೋಡಲು ಸುಂದರವಾದ ಫೋನ್. ಶಕ್ತಿಶಾಲಿಯಾದ ಪ್ರೋಸೆಸರ್ , 6+128 ಗಿಗಾಬೈಟ್ ಮೆಮೊರಿ ಇದೆ. ಉತ್ತಮ ಕ್ಯಾಮರ ಇದೆ. ಒಟ್ಟಿನಲ್ಲಿ ನೀಡುವ ಬೆಲೆಗೆ ತಕ್ಕ ಫೋನ್ ಎನ್ನಬಹುದು.