Press "Enter" to skip to content

ಪವನಜ – ಈ ಹೆಸರಿನಲ್ಲೇನಿದೆ?

ಅಲ್ಲ ಮಾರಾಯ್ರೆ, ತಮ್ಮ ಹೆಸರಿನ ಬಗ್ಗೆ ತುಂಬ ಜನ ಏನೇನೋ ಲೇಖನ ಬರೆದಿದ್ದಾರಂತೆ. ಈ ಲೇಖನ ಬರೆಯುವುದು, ಪತ್ರಿಕೆಗೆ ಕಳುಹಿಸುವುದು, ಸಂಪಾದಕರು ಇಷ್ಟ ಪಟ್ಟರೆ ಪ್ರಕಟಿಸುವುದು ಎಲ್ಲ ಈಗ ಓಲ್ಡ್ ಫ್ಯಾಶನ್ ಆಗೋಯ್ತು. ಈಗ ಏನಿದ್ದರೂ ಬ್ಲಾಗುಗಳ ಕಾಲ. ಇಲ್ಲಿ ಯಾವ ಸಂಪಾದಕರ ಮರ್ಜಿಗೂ ಕಾಯಬೇಕಾಗಿಲ್ಲ. ಅಂತೆಯೇ ಹಲವು ಮಂದಿ ತಮ್ಮ ಹೆಸರಿನ ಬಗ್ಗೆ ಬ್ಲಾಗ್ ಬರೆದಿದ್ದೇ ಬರೆದಿದ್ದು. ಈ ಸಂತೇ ಮಂದಿ ಒಳಗ ನಾನೂ ಯಾಕ ನುಗ್ಬಾರ್ದು ಅಂತೀನಿ. ಅಂದ ಮ್ಯಾಲ ಹಂಗೆ ಬರೀಲೇ ಬೇಕಲ್ವಾ? ಇಗೋ ತಗೊಳ್ಳಿ. ನನ್ನ ಹೆಸರಿನ ಬಗ್ಗೆನೂ ಒಂದು ಬ್ಲಾಗ್. ಓದಿ ನಿಮ್ಮ ಸಮಯ ಹಾಳು ಮಾಡ್ಕೊಳ್ಳಿ.

ಮೊದಲನೆಯದಾಗಿ ನನ್ನ ಹೆಸರಿನ ಅರ್ಥ ಮತ್ತು ಅದು ಯಾಕೆ ನನಗೆ ಬಂತು ಎಂಬುದರ ಬಗ್ಗೆ ಸರಿಯಾದ ವಿವರಣೆ ನೀಡುತ್ತೇನೆ. ನಮ್ಮಲ್ಲಿ ಒಂದು ಪದ್ಧತಿ ಇದೆ. ಅದೇನೆಂದರೆ ಅಪ್ಪನ ಹೆಸರನ್ನು ಮಗನಿಗೆ ಇಡುವುದು. ಅಂದರೆ ನನಗೆ ನನ್ನ ಅಜ್ಜನ ಹೆಸರು ಬರಬೇಕು. ಈ ಅಪ್ಪನ ಹೆಸರನ್ನು ಮಗನಿಗೆ ಇಡುವ ಪದ್ಧತಿಯ ಬಗ್ಗೆ ಮಾಸ್ಟರ್ ಹಿರಣ್ಣಯ್ಯ ಒಂದು ವಿವರಣೆ ನೀಡಿದ್ದಾರೆ. ಅದು ಹೀಗಿದೆ – ಅಪ್ಪನಿಗೆ ಬೈಯಲಿಕ್ಕೆ ಆಗುವುದಿಲ್ಲ ನೋಡಿ. ಅದಕ್ಕೆ ಅವರ ಹೆಸರನ್ನು ಮಗನಿಗೆ ಇಟ್ಟು ಹೆಸರು ಹೇಳಿ ಯದ್ವಾತದ್ವಾ ಬೈಯುವುದು. ಈ ವಿವರಣೆ ಒತ್ತಟ್ಟಿಗಿರಲಿ. ನನ್ನ ಅಜ್ಜನ ಹೆಸರು ಭೀಮಯ್ಯ ಎಂದು. ನನ್ನ ತಂದೆ ಯಕ್ಷಗಾನ ಅರ್ಥಧಾರಿಯಾಗಿದ್ದರು. ಭಗವದ್ಗೀತೆಯನ್ನು ಕನ್ನಡದಲ್ಲಿ ವಾರ್ಧಕ ಷಟ್ಪದಿಯಲ್ಲಿ ಅನುವಾದಿಸಿದ್ದರು. ಭೀಮ ಎಂಬ ಅರ್ಥ ಬರುವ ಪವನಜ ಎಂಬ ಹೆಸರನ್ನು ನನಗೆ ಇಟ್ಟರು. ಭೀಮ ಮತ್ತು ಹನಮಂತ ಇಬ್ಬರೂ ವಾಯುಪುತ್ರರು. ಪವನ ಎಂದರೆ ವಾಯು. ಜ ಎಂದರೆ ಜನಿಸಿದ್ದು. ಪವನಜ ಎಂದರೆ ವಾಯುಪುತ್ರ ಅರ್ಥಾತ್ ಭೀಮ (ಅಥವಾ ಹನುಮಂತ). ಇದಿಷ್ಟು ನನ್ನ ಹೆಸರಿನ ವ್ಯುತ್ಪತ್ತಿಯ ವಿವರಣೆ. ಯಕ್ಷಗಾನದಲ್ಲಿ “ಏನಯ್ಯಾ ಪವನಜನೆ” ಎಂದು ಪ್ರಾರಂಭವಾಗುವ ಒಂದು ಪದ್ಯ ತುಂಬ ಪ್ರಖ್ಯಾತ.

ಕನ್ನಡದಲ್ಲಿ ವನಜ, ಜಲಜ, ಪಂಕಜ ಇತ್ಯಾದಿ ಹೆಸರುಗಳಿವೆ. ಈ ಎಲ್ಲ ಹೆಸರುಗಳೂ ಇರುವುದು ಸ್ತ್ರೀಯರಿಗೆ. ಜಲಜ ಎಂದರೆ ನೀರಿನಲ್ಲಿ ಜನಿಸಿದ್ದು ಎಂದರೆ ತಾವರೆ. ಪಂಕಜ ಎಂದರೆ ಕೆಸರಲ್ಲಿ ಜನಿಸಿದ್ದು ಎಂದರೆ ತಾವರೆಯೇ. ಕೆಸರಲ್ಲಿ ಜನಿಸಿದ್ದು ಎಂದರೆ ಸೊಳ್ಳೆಯೂ ಆಗಬಹುದು ಎಂದು ತರ್ಲೆ ತೆಗೆಯಬೇಡಿ ಮತ್ತೆ. ಹಾಗೆ ಹೇಳಿದರೆ ಪಂಕಜ ಎಂಬ ಹೆಸರಿನವರು ನಮಗೆ ಎರಡು ಏಟು ಕೊಟ್ಟಾರು ನೋಡಿ. ವನಜ, ಜಲಜ, ಪಂಕಜ ಇದ್ದಂತೆ ಪವನಜ ಎಂದರೂ ಹುಡುಗಿ ಇರಬಹುದು ಎಂದು ಹಲವರು ಅಂದುಕೊಂಡಿದ್ದರು. ಈಗಲೂ ಕೆಲವರು ಅಂದುಕೊಂಡಿರಬಹುದು. ನಾನು ಮೈಸೂರಿನಲ್ಲಿ ಎಂಎಸ್‌ಸಿ ಕಲಿಯುತ್ತಿದ್ದಾಗ ಊರಿನಿಂದ ನನ್ನ ಅತ್ತೆ ಮಗಳು ಹುಡುಗಿಯರಿಗೆ ಸಹಜವಾದ ಮುದ್ದಾದ ಕೈಬರಹದಲ್ಲಿ ನನಗೆ ಕಾಗದ ಬರೆದು ಸ್ನಾತಕೋತ್ತರ ವಿದ್ಯಾರ್ಥಿ ನಿಲಯ ಮಾನಸಗಂಗೋತ್ರಿ ಎಂದು ವಿಳಾಸ ಬರೆದು ಪತ್ರ ಕಳುಹಿಸಿದ್ದಳು. ವಿದ್ಯಾರ್ಥಿ ನಿಲಯ ಎಂದು ಬರೆದಿತ್ತು. ಹುಡುಗರ ಹಾಸ್ಟೆಲ್ ಎಂದು ಬರೆದಿರಲಿಲ್ಲ. ಹುಡುಗಿಯರ ಹಾಸ್ಟೆಲಿಗೆ ವಿದ್ಯಾರ್ಥಿನಿ ನಿಲಯ ಎಂದು ಹೇಳುತ್ತಾರೆ ಎಂಬಷ್ಟು ಭಾಷಾಜ್ಞಾನ ಅಂಚೆಯವನಿಗಿರಲಿಲ್ಲ. ಆತ ಆ ಕಾಗದವನ್ನು ಹುಡುಗಿಯರ ಹಾಸ್ಟೆಲಿಗೆ ರವಾನಿಸಿದ್ದ. ಹುಡುಗಿಯರ ಹಾಸ್ಟೆಲಿನಲ್ಲಿದ್ದ ನನ್ನ ಕ್ಲಾಸಿನ ಹುಡುಗಿಯರು ಆ ಕಾಗದವನ್ನು ತಂದು ಅದನ್ನು ಕೊಡಬೇಕಾದರೆ ಕ್ಯಾಂಟೀನಿನಲ್ಲಿ ಮಸಾಲೆ ದೋಸೆ ಕೊಡಬೇಕು ಎಂದು ಪೀಡಿಸಿದ್ದರು.

ಸುಮಾರು ಹನ್ನೆರಡು ವರ್ಷಗಳ ಹಿಂದೆ (೨೦೦೩) ವಿಜಯಕರ್ನಾಟಕ ಪತ್ರಿಕೆಯಲ್ಲಿ ಇಳೆ ಎಂಬ ಹೆಸರಿನಲ್ಲಿ ನನ್ನ ಅಂಕಣ ಲೇಖನ ಪ್ರತಿ ವಾರ ಬರುತ್ತಿತ್ತು. ಅದರಲ್ಲಿ ಗಣಕ ಮತ್ತು ಅಂತರಜಾಲ ಬಗ್ಗೆ ಬರೆಯುತ್ತಿದ್ದೆ. ಓದುಗರ ಪತ್ರಗಳಿಗೆ ಉತ್ತರವನ್ನೂ ನೀಡುತ್ತಿದ್ದೆ. ಅರ್ಧದಷ್ಟು ಇಮೈಲ್‌ಗಳು dear madam ಎಂದೇ ಪ್ರಾರಂಭವಾಗುತ್ತಿದ್ದವು. ಆಗ ಗೂಗ್ಲ್ ಇಮೇಜ್ ಇರಲಿಲ್ಲ ನೋಡಿ. ಆದುದರಿಂದ ನನ್ನ ಫೋಟೋ ಎಲ್ಲೂ ಕಂಡಿರಲಿಕ್ಕಿಲ್ಲ. ಒಮ್ಮೆ ನಾನು ಆಗ ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ಟರ ಕಚೇರಿಯಲ್ಲಿ ಕುಳಿತುಕೊಂಡು ಹೀಗೆ ಉಭಯಕುಶಲೋಪರಿ ಮಾತನಾಡುತ್ತಿದ್ದಾಗ ಜಯಂತ ಕಾಯ್ಕಿಣಿಯವರು ಅಲ್ಲಿಗೆ ಬಂದಿದ್ರು. ಏನೇನೋ ಮಾತನಾಡುತ್ತ, ನನಗೆ ಡಿಯರ್ ಮೇಡಂ ಎಂದು ಇಮೈಲ್ ಬರುತ್ತಿರುವುದನ್ನು ಹೇಳಿ, ನನ್ನ ಫೋಟೋವನ್ನೂ ಪ್ರಕಟಿಸಿ ಎಂದೆ. ಆಗ ಜಯಂತ ಕಾಯ್ಕಿಣಿಯವರು ಕೂಡಲೆ ಹೇಳಿದರು -ಬೇಡ, ಆಗ ನಿಮ್ಮ ಓದುಗರ ಸಂಖ್ಯೆ ಕಡಿಮೆಯಾಗಿಬಿಡುತ್ತದೆ! ನಾನು ಸ್ತ್ರೀ ಎಂದುಕೊಂಡು ಆ ಕಾರಣಕ್ಕಾಗಿ ಎಷ್ಟು ಜನ ಓದಿದ್ದರೋ ಗೊತ್ತಿಲ್ಲ.

ಈಗ ಪ್ರಜಾವಾಣಿಯಲ್ಲಿ ಗ್ಯಾಜೆಟ್‌ಲೋಕ ಅಂಕಣದಲ್ಲಿ ಈ ಸಮಸ್ಯೆ ಇಲ್ಲ. ಯಾಕೆಂದರೆ ಅದರಲ್ಲಿ ನನ್ನ ಫೋಟೋ ಕೂಡ ಇದೆ. ಅಷ್ಟು ಮಾತ್ರವಲ್ಲ, ಈಗ ಗೂಗ್ಲ್ ಇಮೇಜ್ ಇದೆ, ವಿಕಿಪೀಡಿಯ ಇದೆ, ಪತ್ರಿಕೆಗಳಲ್ಲಿ ಹಲವು ಸಲ ನನ್ನ ಫೋಟೋ ಬಂದಿದೆ. ಆದುದರಿಂದ ಈಗ ಪವನಜ ಎಂದರೆ ಸ್ತ್ರೀ ಎಂದುಕೊಳ್ಳುವವರ ಸಂಖ್ಯೆ ನಗಣ್ಯ. ನಗಣ್ಯ ಎಂದು ಯಾಕೆ ಹೇಳಿದೆನೆಂದರೆ ಹಾಗೆ ಅಂದುಕೊಳ್ಳುವವರು ಈಗಲೂ ಇದ್ದಾರೆ ಎಂದು ತಿಳಿಸಲು. ಯಾವಾಗಲೋ ಒಮ್ಮೆ “ಮೇಡಂ ಪವನಜ ಅವರಲ್ಲಿ ಮಾತನಾಡಬೇಕಿತ್ತು” ಎಂದು ಮನೆಗೆ ಫೋನ್ ಬರುವುದಿದೆ.

೨೦೧೧ರಲ್ಲಿ ವಿಕಿಪೀಡಿಯದ ದಶಮಾನೋತ್ಸವ ಕಾರ್ಯಕ್ರಮ ಮೈಸೂರಿನಲ್ಲಿ ಜರುಗಿತು. ಅದರಲ್ಲಿ ನಾನೂ ಮಾತನಾಡಿದ್ದೆ. ಕನ್ನಡ ವಿಕಿಪೀಡಿಯದ ಪ್ರಾತ್ಯಕ್ಷಿಕೆಯನ್ನೂ ನೀಡಿದ್ದೆ. ಆ ಕಾರ್ಯಕ್ರಮಕ್ಕೆ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ವರದಿಗಾರ ಬಂದಿರಲಿಲ್ಲ. ಅವರದೇ ಸೋದರ ಪತ್ರಿಕೆಯಾಗಿದ್ದ ಕನ್ನಡಪ್ರಭದ ವರದಿಗಾರ ತಯಾರಿಸಿದ ವರದಿಯನ್ನು ಓದಿ ಅದನ್ನು ಇಂಗ್ಲೀಷಿಗೆ ಅನುವಾದಿಸಿರಬೇಕು. ಅದರಲ್ಲಿ ನನ್ನ ಬಗೆಗೆ “ಅವರು ಹೇಳಿದರು” ಎಂಬದುನ್ನು ಇಂಗ್ಲೀಷಿಗೆ ಅನುವಾದಿಸುವಾಗ she told ಎಂದು ಅನುವಾದಿಸಿದ್ದರು! ಅದೇನೋ ಹಳೆಯ ಕಥೆಯಾಯಿತು. ತೀರ ಇತ್ತೀಚೆಗೆ ಇದೇ ರೀತಿಯ ತಪ್ಪನ್ನು ಜಾಲತಾಣವೊಂದು ಮಾಡಿದೆ.

ಪವನಜ ಎಂದರೆ ಹನುಮಂತ ಎಂಬ ಅರ್ಥವೂ ಬರುತ್ತದೆ ಎಂದೆನಲ್ಲ. ಮುಂಬಯಿಯ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ನಾನು ವಿಜ್ಞಾನಿಯಾಗಿದ್ದಾಗ ಉಡುಪಿಯವರೇ ಒಬ್ಬರು ನಾರಾಯಣ ಎಂಬವರು ತುಂಬ ಆತ್ಮೀಯರಾಗಿದ್ದರು. ಅವರ ಕಂಪ್ಯೂಟರಿನಲ್ಲಿ ಏನೇ ಸಮಸ್ಯೆಯಿದ್ದರೂ ಅದನ್ನು ಪರಿಹರಿಸಲು ನಾನು ಸಹಾಯ ಮಾಡುತ್ತಿದ್ದೆ. ಒಂದು ಶನಿವಾರ, ರಜಾದಿನ, ಅವರು ಆಫೀಸಿಗೆ ಹೋಗಿದ್ದರು. ಅವರ ಕಂಪ್ಯೂಟರಿನಲ್ಲಿ ಏನೋ ಸಮಸ್ಯೆ ಬಂದಿತ್ತು. ನನ್ನ ಮನೆಗೆ ಫೋನಾಯಿಸಿದರು. ನಮ್ಮ ಮಾತುಕತೆ ಈ ರೀತಿ ನಡೆಯಿತು-
ನಾನು: ಹಲೋ
ಅವರು: ನಮಸ್ಕಾರ, ಹನುಮಂತ ಇದ್ದಾರಾ?
“ಇಲ್ಲ, ಶ್ರೀರಾಮನ ಹತ್ತಿರ ಇದ್ದಾನೆ”
“ನಾನು ನಾರಾಯಣ ಎಂದರೆ ಶ್ರೀರಾಮ. ಆತ ಇಲ್ಲಿಲ್ಲ”
“ಹಾಗಿದ್ದರೆ ಆತ ನಿಮ್ಮ ಹೆಂಡತಿಯನ್ನು ಹುಡುಕಿಕೊಂಡು ಲಂಕೆಗೆ ಹೋಗಿದ್ದಾನೆ”
ಮುಂದಕ್ಕೆ ಏನು ಹೇಳಬೇಕು ಎಂದು ಅವರಿಗೆ ತಿಳಿಯಲಿಲ್ಲ. ಅವರ ಜಾಗದಲ್ಲಿ ನಾನಿದ್ದರೆ ಕೇಳಿಯೇ ಬಿಡುತ್ತಿದ್ದೆ “ಅಲ್ಲಿಂದ ಬಾಲ ಸುಟ್ಟುಕೊಂಡು ವಾಪಾಸು ಬರಲಿಲ್ಲವೇ?” ಎಂದು.

ನಾನು ಮುಂಬಯಿಯಲ್ಲಿದ್ದಾಗ ಬಹುತೇಕ ಮಂದಿಗೆ ನನ್ನ ಹೆಸರನ್ನು ಸರಿಯಾಗಿ ಉಚ್ಚರಿಸಲು ಬರುತ್ತಿರಲಿಲ್ಲ. ಕೆಲವು ಉತ್ತರ ಭಾರತೀಯರು ನನ್ನನ್ನು ತರ್ನೇಜ, ರಹೇಜ ಎಲ್ಲ ಇದ್ದಂತೆ ಪವನಜ ಎಂದರೆ ಒಬ್ಬ ಸಿಂಧಿ ಎಂದುಕೊಂಡಿದ್ದರು. ಇನ್ನು ಕೆಲವರು ನನ್ನನ್ನು ಪವನ್ ಝಾ ಎಂದುಕೊಂಡಿದ್ದರು. ಪಂಜಾಬಿಗಳಂತೂ ಪವನೇಜ ಎಂದೇ ಉಚ್ಚರಿಸುತ್ತಿದ್ದರು. ಉತ್ತರ ಕರ್ನಾಟಕದಲ್ಲಿ ಮನುಷ್ಯರು ಅವರ ಹೆಸರಿನ ಬದಲಿಗೆ ಊರಿನ ಹೆಸರಿನ ಮೂಲಕ ತಿಳಿಯಲ್ಪಡುತ್ತಾರೆ. ಮುಂಬಯಿಯಲ್ಲಿದ್ದ ಅಂತಹ ಕೆಲವು ಮಂದಿ ನನ್ನನ್ನು ಉಡುಪಿಯ ಪಕ್ಕದ ಪಾವಂಜದವನು ಅಂದುಕೊಂಡಿದ್ದರು.

 

ಅದೆಲ್ಲ ಸರಿ, ಈ ಯು.ಬಿ. ಎಂದರೇನು? ವಿಜಯ ಮಲ್ಯ ಅವರ ಯು.ಬಿ.ಗೂ ನಿಮಗೂ ಏನು ಸಂಬಂಧ ಎಂದೂ ಕೆಲವರು ಪ್ರಶ್ನಿಸಿದ್ದಿದೆ. ಅದಕ್ಕೂ ನನ್ನಲ್ಲಿ ತರ್ಲೆ ಉತ್ತರಗಳಿವೆ. U.B. ಅಂದರೆ unbelievable ಎಂದು! ನಾನು ಕೆಲವೊಮ್ಮೆ ನಕ್ಷತ್ರಿಕನಂತೆ ಪೀಡಿಸುವುದಿದೆ. ಅಂತಹ ಸಂದರ್ಭಗಳಲ್ಲಿ unbearable! ನಿಜವಾದ ಪೂರ್ಣ ರೂಪ – ಉಬರಡ್ಕ ಬೆಳ್ಳಿಪ್ಪಾಡಿ. ಉಬರಡ್ಕ ನಮ್ಮ ಕುಟುಂಬದ ಮೂಲ ಊರು. ಬೆಳ್ಳಿಪ್ಪಾಡಿ ನಾನು ಜನಿಸಿ ಬೆಳೆದ ಊರು.

 

ನಾನು ತೈವಾನಿನಲ್ಲಿದ್ದಾಗ ಅಲ್ಲಿ ನನ್ನ ಸಹೋದ್ಯೋಗಿಗಳಿಗೆ ಯಾರಿಗೂ ನನ್ನ ಹೆಸರನ್ನು ಉಚ್ಚರಿಸಲು ಬರುತ್ತಿರಲಿಲ್ಲ. Pavanaja U B ಎಂಬುದರ ಹ್ರಸ್ವ ರೂಪ PUB ಆಗುತ್ತದೆ. ಆದುದರಿಂದ ನನ್ನನ್ನು ಅಲ್ಲಿ ಪಬ್ ಎಂದೇ ಕರೆಯುತ್ತಿದ್ದರು!

7 Comments

  1. Nagaraja bhat Nagaraja bhat December 8, 2017

    ಸಖ್ಖತ್! ಹೆಸರಿಗೂ ಒಂದು ಆರ್ಟಿಕಲ್ ಆಯ್ತು.

  2. ಜಯಪ್ರಕಾಶ್ ಇ ಜಯಪ್ರಕಾಶ್ ಇ December 9, 2017

    BUP ರೇ, ಗುರುಗಳೇ…ಹಹಹ

  3. Syed Zakir Hussain Syed Zakir Hussain December 26, 2017

    ಸಖತ್ ಇಂಟ್ರೆಸ್ಟಿಂಗ್ ಇದೆ ತಮ್ಮ ಹೆಸರು!

  4. ಗಿರಿಧರ್ ಶೆಟ್ಟಿ ಗಿರಿಧರ್ ಶೆಟ್ಟಿ May 21, 2019

    ನಾನು ನಿಮ್ಮ ಆರ್ಟಿಕಲ್ಲನ್ನು ಮೊದಲು ಓದುತ್ತಿದ್ದಾಗ ಹುಡುಗಿಯೇ ಅಂದ್ಕೊಂಡಿದ್ದೆ. ಯಾರೋ ವೈದೇಹಿಯ ಹಾಗೆ ಉಡುಪಿಯವರು ಇರಬೇಕು ಅನ್ಕೊಂಡಿದ್ದೆ. ಅಂತರ್ಜಾಲ, ಗಣಕದ ಬಗ್ಗೆ ಪತ್ರಿಕೆಗಳಲ್ಲಿ ಈ ಪರಿ ಬರೀತಿದ್ದಾಗ ಇವರು ಹುಡುಗಿ ಅಲ್ಲ ಅನ್ನುವ ಭಾವನೆ ಬಂದಿತ್ತು. ಯಾರೋ ಕಾವ್ಯನಾಮ ಇಟ್ಕೊಂಡಿದ್ದಾರೆ ಎನಿಸಿತ್ತು. ಈಗ ಗೊತ್ತಾಯ್ತು ನಾಮದ ಕರಾಮತ್ತು. ಜೊತೆಗೆ ನೀವೂ ಕಾಸರಗೋಡಿನ ಮಂದಿ ಎಂದು ತಿಳಿದು ಅಚ್ಚರಿಯೂ ಆಯ್ತು.
    ಗಿರಿಧರ್ ಶೆಟ್ಟಿ

  5. VISHWANATH VISHWANATH May 22, 2019

    Nice sir

Leave a Reply

Your email address will not be published. Required fields are marked *