ಗಾಜಿಗೆ ಒಂದು ಅತ್ಯುತ್ತಮ ಗುಣ ಇದೆ. ಅದು ಪಾರದರ್ಶಕತ್ವ. ಇದರಿಂದಾಗಿ ಅದರ ಬಳಕೆ ಹಲವು ಕ್ಷೇತ್ರಗಳಲ್ಲಿ ಆಗುತ್ತಿದೆ. ಕಿಟಿಕಿ, ಸೌರ ಪ್ಯಾನೆಲ್, ಟಿವಿ ಪರದೆ, ಇನ್ನೂ ಏನೇನೋ. ಆದರೆ ಈ ಗಾಜಿನ ಒಂದು ದೌರ್ಬಲ್ಯ ಎಂದರೆ ಅದು ಸುಲಭವಾಗಿ ಒಡೆಯುತ್ತದೆ ಎಂಬುದು. ಪಾರದರ್ಶಕತ್ವ ಬೇಕು, ಆದರೆ ಒಡೆಯಬಾರದು, ಎಂಬ ಸಂದರ್ಭಗಳಲ್ಲಿ ಪ್ಲಾಸ್ಟಿಕ್ಕಿನ ಬಳಕೆ ಆಗುತ್ತದೆ. ಆದರೆ ಇಲ್ಲಿ ಇನ್ನೊಂದು ಸಮಸ್ಯೆ ಇದೆ. ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರಕ. ಶತಮಾನಗಳ ಕಾಲ ಅದು ಕೊಳೆಯುವುದಿಲ್ಲ. ಪ್ಲಾಸ್ಟಿಕ್ಕಿನಿಂದಾಗುವ ತೊಂದರೆಗಳ ಬಗ್ಗೆಯೇ ಒಂದು ಪೂರ್ತಿ ಲೇಖನ ಬರೆಯಬಹುದು. ಅದೂ ಬೇಡ, ಇದೂ ಬೇಡ, ಎಂದರೆ ಹೇಗೆ? ಯಾವುದಾದರೊಂದು ಸೂಕ್ತ ಪರಿಹಾರ ಬೇಕು ತಾನೆ? ಹೌದು. ಅದು ಬರುತ್ತಿದೆ. ಅದುವೇ ಪಾರದರ್ಶಕ ಕಟ್ಟಿಗೆ (ಮರ). ಇಲ್ಲಿ ಮರ ಎಂದರೆ ಜೀವಂತ ಮರ ಅಲ್ಲ. ಬದಲಿಗೆ ಕತ್ತರಿಸಿದ ಮರ ಅಥವಾ ಕಟ್ಟಿಗೆ (wood). ಅದು ಏನು? ಈ ಸಂಚಿಕೆಯಲ್ಲಿ ಅದನ್ನು ತಿಳಿದುಕೊಳ್ಳೋಣ.
ಮರದಿಂದ ಪೀಠೋಪಕರಣಗಳನ್ನು ತಯಾರಿಸುವುದು ಗೊತ್ತು. ಕಿಟಿಕಿಗೆ ಮರದ ಹಲಗೆ ಹಾಕುವುದೂ ಗೊತ್ತು. ಆದರೆ ಮರ ಪಾರದರ್ಶಕವಲ್ಲ. ಮರವು ಪಾರದರ್ಶಕವಾದರೆ ಎಷ್ಟು ಚೆನ್ನ ಅಲ್ಲವೇ? ಈಗ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಒಂದು ಮಟ್ಟಿಗೆ ಪಾರದರ್ಶಕ ಗುಣವನ್ನು ತೋರಿಸುವ ಮರವನ್ನು ತಯಾರಿಸಿದ್ದಾರೆ. ಮರದಲ್ಲಿರುವ ಜೀವಕೋಶಗಳ ನಡುವೆ ಒಂದು ನಮೂನೆಯ ಪಾಲಿಮರ್ ಅಣುಗಳನ್ನು ಸೂಕ್ತವಾಗಿ ಅಳವಡಿಸಿ ಈ ಗುಣವನ್ನು ಅವರು ಪಡೆದಿದ್ದಾರೆ. ಈ ಪಾಲಿಮರ್ ನಮಗೆಲ್ಲ ಬಹುಮಟ್ಟಿಗೆ ಪರಿಚಿತವಾಗಿರುವ ಅಕ್ರೈಲಿಕ್ ಕುಟುಂಬಕ್ಕೆ ಸೇರಿದ್ದು. ಅಕ್ರೈಲಿಕ್ ಪಾರದರ್ಶಕ ಗುಣವನ್ನು ಹೊದಿದೆ. ಅಕ್ರೈಲಿಕ್ ಹಾಳೆಗಳನ್ನು ಕಿಟಿಕಿಗೆ ಬಳಸುವುದೂ ಗೊತ್ತು.
ಮರದ ತುಂಡುಗಳು, ಹಲಗೆಗಳು, ಪಾರದರ್ಶಕವಲ್ಲ. ಅವು ಬೆಳಕನ್ನು ಹೀರಿಕೊಳ್ಳುತ್ತವೆ. ಮರದಲ್ಲಿ ಸೆಲ್ಯುಲೋಸ್, ಹೆಮಿಸೆಲ್ಯುಲೋಸ್ ಮತ್ತು ಲಿಗ್ನಿನ್ ಎಂಬ ಪದಾರ್ಥಗಳು ಇವೆ. ಸೆಲ್ಯುಲೋಸ್ ನಿಮಗೆಲ್ಲ ಗೊತ್ತಿರಬಹುದು. ಕಾಗದ ಮತ್ತು ಹತ್ತಿಯ ಬಟ್ಟೆಯ ಬಹುಭಾಗ ಸೆಲ್ಯುಲೋಸ್ ಆಗಿದೆ. ಮರದ ಬಣ್ಣಕ್ಕೆ ಬಹುಮಟ್ಟಿಗೆ ಕಾರಣ ಲಿಗ್ನಿನ್. ಮರದಲ್ಲಿರುವ ಲಿಗ್ನಿನ್‌ನ ಪ್ರಮಾಣವು ಅದರ ಪಾರದರ್ಶಕತ್ವವನ್ನು ನಿರ್ಧರಿಸುತ್ತದೆ. ಲಿಗ್ನಿನ್ ಜಾಸ್ತಿ ಇದ್ದರೆ ಅದು ಕಡಿಮೆ ಪಾರದರ್ಶಕ ಆಗುತ್ತದೆ. ಮರವನ್ನು ಪಾರದರ್ಶಕ ಮಾಡಬೇಕಾದರೆ ಅದರಲ್ಲಿರುವ ಲಿಗ್ನಿನನ್ನು ತೆಗೆಯಬೇಕು.
ಮರವನ್ನು ಬಿಸಿಯಾದ ಕೆಲವು ರಾಸಾಯನಿಕಗಳಲ್ಲಿ ಮುಳುಗಿಸಿ ಅದರಲ್ಲಿರುವ ಲಿಗ್ನಿನನ್ನು ತೆಗೆಯಲಾಗುತ್ತದೆ. ಇದಕ್ಕೆ ಸುಮಾರು 3 ರಿಂದ 12 ಗಂಟೆಗಳ ಕಾಲ ತಗುಲುತ್ತದೆ. ಮರದಲ್ಲಿರುವ ಸೆಲ್ಯುಲೋಸ್ ಮತ್ತು ಹೆಮಿಸೆಲ್ಯುಲೋಸ್‌ನಿಂದ ಲಿಗ್ನಿನನ್ನು ತೆಗೆದಾಗ ಬಿಳಿ ಬಣ್ಣದ ಮರ ದೊರೆಯುತ್ತದೆ. ನಂತರ ಈ ಮರವನ್ನು ಅಕ್ರೈಲಿಕ್‌ನ ದ್ರಾವಣದಲ್ಲಿಟ್ಟು ಬಿಸಿ ಮಾಡಲಾಗುತ್ತದೆ. ಜೊತೆಗೆ ನಿರ್ವಾತದ ಪ್ರಯೋಗವೂ ಅಗುತ್ತದೆ. ಅಂತಿಮವಾಗಿ ಮರದಲ್ಲಿ ಲಿಗ್ನಿನ್ ಇದ್ದ ಸ್ಥಳದಲ್ಲಿ ಅಕ್ರೈಲಿಕ್ ತುಂಬಿಕೊಳ್ಳುತ್ತದೆ. ಈ ಪ್ರಕ್ರಿಯೆಗೆ ಸುಮಾರು 12 ಗಂಟೆ ತಗುಲುತ್ತದೆ. ಹೀಗೆ ತಯಾರಾದ ಮರವು ಬಹುಮಟ್ಟಿಗೆ ಪಾರದರ್ಶಕವಾಗಿರುತ್ತದೆ. ಪ್ರಯೋಗಶಾಲೆಯಲ್ಲಿ ಇದು ತನಕ ಹೀಗೆ ಸುಮಾರು 70 ರಿಂದ 85% ರಷ್ಟು ಪಾರದರ್ಶಕ ಮರವನ್ನು ತಯಾರಿಸಿದ್ದಾರೆ. ಸದ್ಯಕ್ಕೆ ಈ ಮರದಿಂದ ಉಪಯುಕ್ತ ವಸ್ತುಗಳನ್ನು ಅಂದರೆ ಕಿಟಿಕಿ, ಸೌರಶಕ್ತಿಯ ಪ್ಯಾನೆಲ್, ಇತ್ಯಾದಿಗಳನ್ನು ಮಾಡುವಂತಿಲ್ಲ.
ಮರಕ್ಕೆ ತನ್ನದೇ ಆದ ವಿಶಿಷ್ಟ ಗುಣಗಳಿವೆ. ಮರದಲ್ಲಿ ಮೃದು ಮತ್ತು ಗಡಸು ಎಂಬ ನಮೂನೆಗಳಿವೆ. ಮರಕ್ಕೆ ನೀರನ್ನು ಹೀರಿಕೊಳ್ಳುವ ಶಕ್ತಿಯಿದೆ. ಮರ ಗಾಜಿನಂತಲ್ಲ. ಅದು ಒಡೆಯುವುದಿಲ್ಲ. ಈ ಎಲ್ಲ ಗುಣಗಳೂ ಪಾರದರ್ಶಕ ಮರದಲ್ಲಿ ಬಹುಮಟ್ಟಿಗೆ ಅಡಕವಾಗಿರುತ್ತವೆ. ಅಂದರೆ ಪಾರದರ್ಶಕ ಮರವು ಪಾರದರ್ಶಕ ಪ್ಲಾಸ್ಟಿಕ್ ಮತ್ತು ಪಾರದರ್ಶಕ ಗಾಜುಗಳಿಗಿಂತ ಭಿನ್ನವಾದ ಅದರೆ ಅತ್ಯಂತ ಉಪಯುಕ್ತವಾದ ಗುಣಗಳನ್ನು ಹೊಂದಿದೆ ಎನ್ನಬಹುದು. ಆದರೂ ಸದ್ಯಕ್ಕೆ 100% ಪಾರದರ್ಶಕ ಮರವನ್ನು ತಯಾರಿಸಲು ಆಗಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.
ಪಾರದರ್ಶಕ ಮರವನ್ನು ತಯಾರಿಸಲು ಅದರಲ್ಲಿರುವ ಲಿಗ್ನಿನ್ ಅನ್ನು ತೆಗೆಯಲಾಗುತ್ತದೆ ಎಂದೆನಲ್ಲ. ಆಗ ಬಹುಮಟ್ಟಿಗೆ ಉಳಿಯುವುದು ಸೆಲ್ಯುಲೋಸ್. ಪಾರದರ್ಶಕ ಮರದ ಬಹುತೇಕ ಗುಣಗಳು ಈ ಸೆಲ್ಯುಲೋಸ್‌ನಿಂದ ಬಂದಿರುತ್ತವೆ. ಗಾಜು ಮತ್ತು ಪ್ಲಾಸ್ಟಿಕ್ಕಿಗೆ ಹೋಲಿಸಿದರೆ ಮರ ತುಂಬ ಗಟ್ಟಿಯಾಗಿರುತ್ತದೆ. ಈ ಸೆಲ್ಯುಲೋಸ್‌ನ ಕೋಶಗಳ ಮಧ್ಯೆ ಲಿಗ್ನಿನ್ ಅನ್ನು ತೆಗೆದು ಖಾಲಿ ಜಾಗ ಆಗಿರುತ್ತದೆ ಹಾಗೂ ಅದರಲ್ಲಿ ಪಾಲಿಮರ್ ಅಣುಗಳನ್ನು ಸೇರಿಸಲಾಗುತ್ತದೆ ಎಂದೆನಲ್ಲ. ಈ ಕೋಶಗಳ ಗಾತ್ರ, ಉದ್ದ, ಅಗಲಗಳನ್ನು ಬದಲಿಸಿ ಕೆಲವು ಗುಣಗಳನ್ನು ಹಾಗೂ ಪಾರದರ್ಶಕತ್ವವನ್ನು ಬದಲಿಸಬಹುದು. ಬೆಳಕಿನಲ್ಲಿ ಹಲವು ಬಣ್ಣಗಳಿವೆ. ವಿಜ್ಞಾನದ ಭಾಷೆಯಲ್ಲಿ ಹೆಲುವುದಾದರೆ ಅವು ವಿದ್ಯುತ್ಕಾಂತೀಯ ಅಲೆಗಳ ಬೇರೆ ಬೇರೆ ಕಂಪನಾಂಕಗಳು. ಬೇರೆ ಬೇರೆ ರೀತಿಯಲ್ಲಿ ಪಾಲಿಮರ್ ಅನ್ನು ಸೇರಿಸುವ ಮೂಲಕ ಬೇರೆ ಬೇರೆ ಬಣ್ಣಗಳನ್ನು ಹೀರುವ, ಪ್ರತಿಫಲಿಸುವ ಅಥವಾ ಚೆದುರಿಸುವ ಗುಣವನ್ನು ಮರಕ್ಕೆ ಬರುವಂತೆ ಮಾಡಬಹುದು. ಈ ರಿತಿಯಾಗಿ ಮಾಡಿ ಅಂತಹ ಮರದಿಂದ ಮಾಡಿದ ಹಲಗೆಗಳಿಂದ ಕಿಟಿಕಿ ಮಾಡಬಹುದು. ಇಂತಹ ಕಿಟಿಕಿಯನ್ನು ಅಳವಡಿಸಿದ ಮನೆಗಳು ಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿ ಇಂಧನವನ್ನು ಉಳಿತಾಯ ಮಾಡುತ್ತವೆ.
ಮರದಲ್ಲಿರುವ ಸೆಲ್ಯುಲೋಸ್ ಕೋಶಗಳನ್ನು ಉದ್ದಕ್ಕೆ ಅಥವಾ ಅಡ್ಡಕ್ಕೆ ಹೊಂದಿಸಬಹುದು. ಮರದ ಉಷ್ಣವನ್ನು ಹೀರಿಕೊಳ್ಳುವ ಗುಣ ಹಾಗೂ ವಾಹಕತ್ವವು ಈ ಸೆಲ್ಯುಲೋಸ್‌ಕೋಶಗಳ ಹೊಂದಾಣಿಕೆಯನ್ನು ಹೊಂದಿಕೊಂಡಿವೆ. ಅಂತಹ ಮರದಿಂದ ತಯಾರಿಸಿದ ಪಾರದರ್ಶಕ ಮರದ ಗುಣವೂ ಅಂತೆಯೇ ಇರುತ್ತದೆ. ಹಗಲಿನಲ್ಲಿ ಸೂರ್ಯನ ಬೆಳಕನ್ನು ಹೀರಿಕೊಂಡು ರಾತ್ರಿ ಹೊತ್ತಿನಲ್ಲಿ ಅದನ್ನು ಬಿಡುಗಡೆ ಮಾಡುವ ಗುಣವುಳ್ಳ ಮರವನ್ನೂ ವಿಜ್ಞಾನಿಗಳು ತಯಾರಿಸಿದ್ದಾರೆ. ಇಂತಹ ಮರದಿಂದ ತಯಾರಿಸಿದ ಕಿಟಿಕಿಗಳು ಇರುವ ಮನೆ ಹಗಲಿನಲ್ಲಿ ತಂಪಾಗಿದ್ದು ರಾತ್ರಿಯಲ್ಲಿ ಬಿಸಿಯಾಗಿರುತ್ತದೆ.
ಆದರೆ ಇವೆಲ್ಲವೂ ಇನ್ನೂ ಪ್ರಯೋಗಾಲಯದಲ್ಲಿ ಸಂಶೋಧನಾಮಟ್ಟದಲ್ಲಿವೆ. ಇವು ಮಾರುಕಟ್ಟೆಗೆ ಬರಲು ಹಲವು ವರ್ಷಗಳೇ ಬೇಕಾಗಬಹುದು.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment