Press "Enter" to skip to content

ವಾಟ್ ಎಂದರೆ ಏನು?

ಸ್ಟೀರಿಯೋ ಸಿಸ್ಟಮ್ ಕೊಳ್ಳಲು ಅಂಗಡಿಗೆ ಹೋಗಿದ್ದೀರಾ? ಅಂಗಡಿಯಾತ ಕೇಳುವ ಪ್ರಶ್ನೆ “ನಿಮಗೆ ಎಷ್ಟು ವಾಟ್‌ನ ಸಿಸ್ಟಮ್ ಬೇಕು?”. ಅಥವಾ ಆತನೇ ಒಂದೊಂದಾಗಿ ತನ್ನಲ್ಲಿರುವ ಸ್ಟೀರಿಯೋಗಳನ್ನು ತೋರಿಸುತ್ತಾ ಹೋಗುತ್ತಾನೆ. ಪ್ರತಿ ಸ್ಟೀರಿಯೋವನ್ನು ತೋರಿಸುವಾಗಲೂ ಮರೆಯದೆ ಹೇಳುವ ಮಾತು ಅದು ಎಷ್ಟು ವಾಟ್‌ನದು ಎಂದು. “ಸಾರ್, ಇದು 1000 ವಾಟ್, ಇದು 2000 ವಾಟ್,…” ಹೀಗೆ ಗುಣಗಾನ ಸಾಗುತ್ತಿರುತ್ತದೆ. ಹೆಚ್ಚಿನ ಗ್ರಾಹಕರೂ ಸ್ಟೀರಿಯೋ ಕೊಳ್ಳುವಾಗ ಮುಖ್ಯವಾಗಿ ಗಮನಿಸುವುದು ಅದು ಎಷ್ಟು ವಾಟ್‌ನದು ಎಂದು. ಈ ವಾಟ್ ಎಂದರೆ ಏನು?

ವಾಟ್ ಎನ್ನುವುದು ಸಾಮರ್ಥ್ಯವನ್ನು ಅಳೆಯುವ ಮಾಪನ. ಅಶ್ವಸಾಮರ್ಥ್ಯವನ್ನು (ಹಾರ್ಸ್ ಪವರ್ ಅಥವಾ ಎಚ್‌ಪಿ)  ಹೆಚ್ಚಿನವರು ಕೇಳಿರಬಹುದು. ನೀರೆತ್ತುವ ಪಂಪ್, ಕಾರು, ಸ್ಕೂಟರ್ ಇತ್ಯಾದಿಗಳ ಇಂಜಿನ್‌ಗಳ ಸಾಮರ್ಥ್ಯವನ್ನು ಎಚ್‌ಪಿಗಳಲ್ಲಿ ನಮೂದಿಸಿರುವುದನ್ನು ನೀವು ಗಮನಿಸಿಯೇ ಇರುತ್ತೀರಾ. ಒಂದು ಅಶ್ವಸಾಮರ್ಥ್ಯವು ಸುಮಾರು 746 ವಾಟ್‌ಗಳಿಗೆ ಸಮ. ಹಾಗಿದ್ದರೆ 1500 ವಾಟ್‌ನ ಸ್ಟೀರಿಯೋದ ಸಾಮರ್ಥ್ಯವು ಎರಡು ಕುದುರೆಗಳ ಸಾಮರ್ಥ್ಯಕ್ಕೆ ಸಮವೇ? ಅದನ್ನು ಈ ರೀತಿ ತರ್ಕಿಸೋಣ. 1500 ವಾಟ್‌ನ ಸ್ಟೀರಿಯೋವನ್ನು ಪೂರ್ತಿ ವಾಲ್ಯೂಮ್‌ನಲ್ಲಿ ನುಡಿಸಿದರೆ ಅದರಿಂದ ಹೊರಡುವ ಧ್ವನಿಯು ಯಾವದಾದರೊಂದು ವಸ್ತುವನ್ನು ಎರಡು ಕುದರೆಗಳು ಸೇರಿ ಎಳೆದಷ್ಟು ಬಲದಿಂದ ದೂಡಬಲ್ಲುದೇ? ಖಂಡಿತಾ ಇಲ್ಲ. ಹಾಗಿದ್ದರೆ 1500 ವಾಟ್ ಎಂಬುದರ ಅರ್ಥ ಏನು?

ವಾಟ್ ಮೀಟರ್ (ಚಿತ್ರ:Hannes Grobe)

ಸ್ಟೀರಿಯೋಗಳ ಸಾಮರ್ಥ್ಯವನ್ನು ತಿಳಿಸಲು ಅದನ್ನು ತಯಾರಿಸಿದ ಕಂಪೆನಿಯವರು ಮತ್ತು ಮಾರುವ ಅಂಗಡಿಯವರು ಹೇಳುವ ಈ ವಾಟ್ ಅದರ ಸರಾಸರಿ ಸಾಮರ್ಥ್ಯ ಅಲ್ಲ. ಅದು ಪೀಕ್ ಮ್ಯೂಸಿಕ್ ಪವರ್ ಔಟ್‌ಪುಟ್ (ಪಿ.ಎಂ.ಪಿ.ಓ.). ಅಂದರೆ ಅದು ಹೊರನೀಡಬಲ್ಲ ಧ್ವನಿಯ ಗರಿಷ್ಠ ಸಾಮರ್ಥ್ಯ. ಇದನ್ನು ಬೇರೆ ಬೇರೆ ಕಂಪೆನಿಗಳವರು ಬೇರೆ ಬೇರೆ ವಿಧಾನದಲ್ಲಿ ಅಳೆಯುತ್ತಾರೆ. ಇದಕ್ಕೆ ಇಂತಹುದೇ ಎಂಬ ಶಿಷ್ಟ ವಿಧಾನ ಇಲ್ಲ. ಒಂದು ಕಾರು 300 ಕಿಲೋಮೀಟರ್ ದೂರವನ್ನು 6 ಗಂಟೆಗಳಲ್ಲಿ ಕ್ರಮಿಸಿದರೆ ಅದರ ಸರಾಸರಿ ವೇಗ 50 ಕಿ.ಮೀ. ಆಗಿರುತ್ತದೆ. ಅದು ಹೋಗುವಾಗ ಕೆಲವೊಮ್ಮೆ 140 ಕಿ.ಮೀ. ವೇಗದಲ್ಲೂ ಹೋಗಿರಬಹುದು. ಇಲ್ಲಿ 140 ಮತ್ತು 50ರ ಮಧ್ಯೆ ಯಾವುದೇ ಸೂತ್ರ ಇಲ್ಲ. ಸ್ಟೀರಿಯೋಗಳ ಸಾಮರ್ಥ್ಯವನ್ನು ಅಳೆಯುವಾಗ ಇನ್ನೊಂದು ಮಾಪನ ಇದೆ. ಅದು ಸರಾಸರಿ ಸಾಮರ್ಥ್ಯ. ಇದನ್ನು ರೂಟ್ ಮೀನ್ ಸ್ಕ್ವೇರ್ (ಆರ್.ಎಂ.ಎಸ್.) ಪವರ್ ಎಂದು ಕರೆಯುತ್ತಾರೆ. ಸರಾಸರಿ ಮತ್ತು ಗರಿಷ್ಠ ಸಾಮರ್ಥ್ಯಗಳ ನಡುವೆ ಎಲ್ಲರೂ ಒಮ್ಮತಕ್ಕೆ ಬಂದಿರುವಂತಹ ಒಂದು ವೈಜ್ಞಾನಿಕವಾದ ಸೂತ್ರ ಇಲ್ಲ. ಕೆಲವು ಕಂಪೆನಿಗಳು ತಮ್ಮ ಸ್ಟೀರಿಯೋದ ಮಾಹಿತಿ ಪತ್ರದಲ್ಲಿ ನಮೂದಿಸಿರುವ ಸರಾಸರಿ ಮತ್ತು ಗರಿಷ್ಠ ಸಾಮರ್ಥ್ಯಗಳನ್ನು ಗಮನಿಸಿದಾಗ ಗರಿಷ್ಠ ಸಾಮರ್ಥ್ಯವು ಸರಾಸರಿ ಸಾಮರ್ಥ್ಯಕ್ಕಿಂತ ಸುಮಾರು ಹಲವು ಪಟ್ಟು ಹೆಚ್ಚಿರುವುದನ್ನು ಕಾಣಬಹುದು. ಕಂಪೆನಿಯನ್ನು ಹೊಂದಿಕೊಂಡು ಇದು 4 ರಿಂದ 8 ರ ತನಕ ಇರುತ್ತದೆ. ಇದಕ್ಕೆ ಕಾರಣ ಅವರು ಸ್ಟೀರಿಯೋದ ಎಲ್ಲ ಚಾನೆಲ್‌ಗಳ ಗರಿಷ್ಠ ಸಾಮರ್ಥ್ಯವನ್ನು ಒಟ್ಟು ಮಾಡಿರುವುದು. ಸರಾಸರಿ ಸಾಮರ್ಥ್ಯ ಯಾವಾಗಲೂ ಪ್ರತಿ ಚಾನೆಲ್ ಅನ್ನು ಪ್ರತಿಬಿಂಬಿಸುತ್ತದೆ.

ಸಾಮಾನ್ಯ ಸ್ಟೀರಿಯೋವನ್ನು ಪೂರ್ತಿ ವಾಲ್ಯೂಮ್‌ನಲ್ಲಿ ನುಡಿಸಿ ಕೇಳಿ. ಸಂಗೀತದ ಜೊತೆ ಕಿರಿಕಿರಿ ಧ್ವನಿಗಳೂ ಕೇಳಿ ಬರುತ್ತಿರುತ್ತವೆ. ಇದಕ್ಕೆ ಕಾರಣ ಅಂಪ್ಲಿಫೈಯರ್‌ನ ಟೋಟಲ್ ಹಾರ್ಮೋನಿಕ್ ಡಿಸ್ಟೋರ್ಶನ್ (ಟಿ.ಎಚ್.ಡಿ.). ಸ್ಟೀರಿಯೋದಿಂದ ಸಂಗೀತದ ಜೊತೆಗೆ ಸ್ವಲ್ಪ ಇತರ ಅನವಶ್ಯಕ ಶಬ್ದಗಳೂ ಹೊರಡುತ್ತವೆ. ಇದು ಸಂಗೀತದ ವ್ಯತ್ಯಯ. ಈ ವ್ಯತ್ಯಯದ ಸರಾಸರಿಯನ್ನು ಟಿಎಚ್‌ಡಿ ಸೂಚಿಸುತ್ತದೆ. 1000 ವಾಟ್‌ನ ಮಾಮೂಲಿ ಸ್ಟೀರಿಯೋನ ಟಿಎಚ್‌ಡಿ 10% ಇದ್ದಲ್ಲಿ, ಆ ಸ್ಟೀರಿಯೋವನ್ನು ಪೂರ್ತಿ ವಾಲ್ಯೂಮ್‌ನಲ್ಲಿ ನುಡಿಸುವಾಗ 100 ವಾಟ್‌ಗಳಷ್ಟು ವ್ಯತ್ಯಯವೇ ಇರುತ್ತದೆ. ಇದೇ ಕಿವಿಗೆ ಕಿರಿಕಿರಿಯುಂಟುಮಾಡುವ ಧ್ವನಿ. ಹೈಫೈ ಎಂದು ಕರೆಸಿಕೊಳ್ಳುವ ಅಂಪ್ಲಿಫೈಯರ್‌ಗಳ ಟಿಎಚ್‌ಡಿ 0.5%ಗಿಂತ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಎಲ್ಲರೂ ಬಳಸುವ ಸ್ಟೀರಿಯೋಗಳು, ಅದರಲ್ಲೂ ಮುಖ್ಯವಾಗಿ ಟೂ-ಇನ್-ವನ್ ಅಥವಾ ತ್ರೀ-ಇನ್-ವನ್ ಅಂದರೆ ಕ್ಯಾಸೆಟ್ ಪ್ಲೇಯರ್, ಸಿ.ಡಿ. ಪ್ಲೇಯರ್ ಮತ್ತು ರೇಡಿಯೋ ಇವೆಲ್ಲವುಗಳನ್ನು ಒಳಗೊಂಡಿರುವ ಸಿಸ್ಟಮ್‌ಗಳ ಟಿಎಚ್‌ಡಿ ಶೇಕಡಾ 10 ರಿಂದ 20 ಇರುತ್ತದೆ. ಆದುದರಿಂದಲೇ ಇವುಗಳನ್ನು ಹೈಫೈ ಎಂದು ಪರಿಗಣಿಸುತ್ತಿಲ್ಲ. ಹೈಫೈ ಎನ್ನುವುದು ಹೈ ಫಿಡೆಲಿಟಿಯ (ಉನ್ನತ ಗುಣಪಟ್ಟ) ಸಂಕ್ಷಿಪ್ತ ರೂಪ.

ಸ್ಟೀರಿಯೋ ಮತ್ತು ಆಂಪ್ಲಿಫೈಯರ್‌ಗಳ ಗುಣಮಟ್ಟವನ್ನು ಅಳೆಯಲು ಇನ್ನೂ ಒಂದು ಮಾಪನವಿದೆ. ಅದು ಸಂಗೀತ ಮತ್ತು ಶಬ್ದಗಳ ನಿಷ್ಪತ್ತಿ (ಸಿಗ್ನಲ್ ಟು ನೋಯ್ಸ್ ರೇಶಿಯೋ). ಒಂದು ಆಂಪ್ಲಿಫೈಯರ್‌ಗೆ ಯಾವುದೇ ಸಂಗೀತದ ಸಿಗ್ನಲ್ ನೀಡಿಲ್ಲ ಎಂದಿಟ್ಟುಕೊಳ್ಳಿ. ಆಗ ಅದರಿಂದ ಹೊರಬರುವ ಧ್ವನಿಯ ಮಟ್ಟವು ಶಬ್ದವನ್ನು ಸೂಚಿಸುತ್ತದೆ. ಈ ಶಬ್ದ ಕಡಿಮೆಯಿದ್ದಷ್ಟು ಒಳ್ಳೆಯದು. ಸರಾಸರಿ ಸಾಮರ್ಥ್ಯವನ್ನು ಶಬ್ದದ ಮೊತ್ತದಿಂದ ಭಾಗಿಸಿದರೆ ಸಂಗೀತ ಮತ್ತು ಶಬ್ದಗಳ ನಿಷ್ಪತ್ತಿ ದೊರೆಯುತ್ತದೆ. ಈ ನಿಷ್ಪತ್ತಿ ಹೆಚ್ಚಿದ್ದಷ್ಟು ಒಳ್ಳೆಯದು. ಈ ನಿಷ್ಪತ್ತಿಯನ್ನು ಡೆಸಿಬೆಲ್ ಮೂಲಕ ಅಳೆಯುತ್ತಾರೆ. ಉತ್ತಮ ಆಂಪ್ಲಿಫೈಯರ್‌ಗಳಲ್ಲಿ ಈ ನಿಷ್ಪತ್ತಿ 70 ಡೆಸಿಬೆಲ್ ಅಥವಾ ಅದಕ್ಕಿಂತ ಹೆಚ್ಚಿರುತ್ತದೆ.

ಬದುಕಿನ ಹಲವಾರು ಕ್ಷೇತ್ರಗಳಲ್ಲಿ ಗುಣಮಟ್ಟವು ಸಂಖ್ಯಾಬಾಹುಳ್ಯಕ್ಕಿಂತ ಮುಖ್ಯವಾಗುತ್ತದೆ. ಇಲ್ಲೂ ಈ ಸೂತ್ರ ಅನ್ವಯವಾಗುತ್ತದೆ. ಇನ್ನೊಮ್ಮೆ ಸ್ಟೀರಿಯೋ ಅಥವಾ ಆಂಪ್ಲಿಫೈಯರ್ ಕೊಳ್ಳಲು ಅಂಗಡಿಗೆ ಹೋದಾಗ ದೊಡ್ಡ ಮೊತ್ತದ ವಾಟ್ ಕೇಳಿ ಮರುಳಾಗದಿರಿ. ಟಿಎಚ್‌ಡಿ ಮತ್ತು ಡೆಸಿಬೆಲ್ ಎಷ್ಟು ಎಂದು ಕೇಳಲು ಮರೆಯದಿರಿ.

ಡಾ| ಯು.ಬಿ. ಪವನಜ

gadgetloka @ gmail . com

Be First to Comment

Leave a Reply

Your email address will not be published. Required fields are marked *