Press "Enter" to skip to content

ಇದು ಮಾಹಿತಿ ಯುಗ

ಮಾಹಿತಿ ಕಳ್ಳರಿದ್ದಾರೆ, ಎಚ್ಚರಿಕೆ

ನೀವು ಯಾವುದಾದರೂ ಸೂಪರ್ ಮಾರ್ಕೆಟ್ಟಿಗೆ ಹೋದಾಗ ಅಲ್ಲಿ ಒಂದು ಪೆಟ್ಟಿಗೆ ಇಟ್ಟು ಇದರಲ್ಲಿ ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ ನೀಡಿ, ಅದರಲ್ಲಿ ಕೆಲವನ್ನು ಹೆಕ್ಕಿ ಗೆದ್ದವರಿಗೆ ವಿಶೇಷ ಬಹುಮಾನ ನೀಡುತ್ತೇವೆ ಎಂದು ಜಾಹೀರಾತು ನೀಡಿದ್ದನ್ನು ನಂಬಿ ನಿಮ್ಮ ಮಾಹಿತಿ ನೀಡಿದ್ದೀರಾ? ನಿಮಗೆ ಬಹುಮಾನ ಅಂತೂ ಬಂದಿರುವುದಿಲ್ಲ. ಆದರೆ ಅನಾವಶ್ಯಕ ಕಿರಿಕಿರಿ ಫೋನ್ ಕರೆಗಳು ಬರಲು ಪ್ರಾರಂಭವಾಗಿರುತ್ತದೆ. ಇವೆಲ್ಲ ಜನರ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಹಳೆಯ ವಿಧಾನಗಳಾದವು. ಈಗ ಎಲ್ಲವೂ ಆನ್‌ಲೈನ್. ನಿಮ್ಮ ಮೊಬೈಲ್‌ನಲ್ಲಿ ಗೂಗ್ಲ್‌ನಲ್ಲಿ ಏನಾದರೂ ಒಂದು ಮಾಹಿತಿ ಹುಡುಕಿ. ನಂತರ ಫೇಸ್‌ಬುಕ್ ತೆರೆಯಿರಿ. ನೀವು ಏನನ್ನು ಹುಡುಕಿದ್ದೀರಾ ಅದಕ್ಕೆ ಸಂಬಂಧಿಸಿದ ಜಾಹೀರಾತುಗಳು ನಿಮಗೆ ಫೇಸ್‌ಬುಕ್‌ನಲ್ಲಿ ಬರುತ್ತವೆ. ಇನ್‌ಸ್ಟಾಗ್ರಾಂ ತೆರೆದರೆ ಅಲ್ಲೂ ಅವೇ ಜಾಹೀರಾತುಗಳು ಬರುತ್ತವೆ. ಅಲ್ಲಿಗೆ ಮುಗಿಯುವುದಿಲ್ಲ. ಯಾರು ಯಾರೋ ಕರೆ ಮಾಡುತ್ತಾರೆ. ಅರ್ಥಾತ್ ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಅಲ್ಲಲ್ಲ, ಕಳವಾಗಿದೆ.

21ನೆಯ ಶತಮಾನವನ್ನು ಮಾಹಿತಿ ಯುಗ ಎಂದು ಕರೆಯುತ್ತಾರೆ. Information is the new oil ಎಂಬ ಒಂದು ಹೇಳಿಕೆಯಿದೆ. ಅಂದರೆ ಈಗಿನ ಕಾಲದಲ್ಲಿ ಮಾಹಿತಿಯು ಚಿನ್ನ, ಎಣ್ಣೆಗಳಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ ಎಂದು ಅರ್ಥ. ಯಾವ ಮಾಹಿತಿಯ ಬಗ್ಗೆ ಇವರು ಹೇಳುತ್ತಿದ್ದಾರೆ? ಪ್ರಮುಖವಾಗಿ ನಿಮ್ಮ ವೈಯಕ್ತಿಕ ಮಾಹಿತಿ. ಇದರಲ್ಲಿ ನಿಮ್ಮ, ಹೆಸರು, ವಿಳಾಸ, ಇಮೈಲ್, ಫೋನ್ ಸಂಖ್ಯೆ ಇವೆಲ್ಲ ಸಾಮಾನ್ಯ ಮಾಹಿತಿಗಳಾದವು. ಮುಂದುವರೆದು, ನಿಮ್ಮ ಸಂಬಳ, ನಿಮ್ಮಲ್ಲಿ ಎಷ್ಟು ಹಣವಿದೆ, ನೀವು ಏನನ್ನು ಇಷ್ಟ ಪಡುತ್ತೀರಿ, ನಿಮ್ಮ ವೈಯಕ್ತಿಕ ಇಷ್ಟಗಳೇನು, ಇತ್ಯಾದಿಗಳೆಲ್ಲ ಈಗಿನ ಕಾಲದಲ್ಲಿ ತುಂಬ ಬೆಲೆಬಾಳುವ ಮಾಹಿತಿಗಳು. ಇವುಗಳನ್ನು ತೆಗೆದುಕೊಂಡು ಅವರೇನು ಮಾಡುತ್ತಾರೆ? ನಿಮಗೆ ಯಾವುದು ಇಷ್ಟ ಎಂದು ತಿಳಿದು ಅದರ ಬಗ್ಗೆಯೇ ನಿಮಗೆ ಜಾಹೀರಾತು ಕಳುಹಿಸಿದರೆ ನೀವು ಅದನ್ನು ಕೊಳ್ಳುವ ಸಾಧ್ಯತೆ ಹೆಚ್ಚು. ನೀವು ಅದನ್ನು ಕೊಂಡುಕೊಂಡರೆ ಅವರಿಗೆ ವ್ಯಾಪಾರ ಆಗುತ್ತದೆ. ಅದಕ್ಕೇ ಅವರು ನಿಮ್ಮ ಮಾಹಿತಿಯನ್ನು ಕದಿಯುವುದು ಮಾತ್ರವಲ್ಲ, ಇತರೆ ಕಂಪೆನಿಗಳ ಜೊತೆ ಹಂಚಿಕೊಂಡಿರುತ್ತಾರೆ. ಇನ್ನೂ ನಿಖರವಾಗಿ ಹೇಳಬೇಕಾದರೆ ನಿಮ್ಮ ಮಾಹಿತಿಯನ್ನು ಕದ್ದು ಮಾರಾಟ ಮಾಡಿರುತ್ತಾರೆ.

ಈ ರೀತಿ ವೈಯಕ್ತಿಕ ಮಾಹಿತಿಯನ್ನು ದುರ್ಬಳಕೆ ಮಾಡುವವರಲ್ಲಿ ಸಾಮಾಜಿಕ ಮಾಧ್ಯಮಗಳು ಎತ್ತಿದ ಕೈ. ಅದರಲ್ಲೂ ಬಹುತೇಕ ಎಲ್ಲರೂ ಬಳಸುವ ಫೇಸ್‌ಬುಕ್ ಇದಕ್ಕೆ ಕುಪ್ರಸಿದ್ಧ. ಅವರನ್ನು ಹೀಗೇಕೆ ಮಾಡುತ್ತಿದ್ದೀರಾ ಎಂದು ಕೇಳಿದರೆ ನೀವೇ ಒಪ್ಪಿಗೆ ಕೊಟ್ಟಿದ್ದೀರಾ ನೋಡಿ ಎಂದು ಯಾವುದೋ ಪುಟವನ್ನು ತೋರಿಸುತ್ತಾರೆ. ನಿಜವಾಗಿ ನಡೆದಿರುವುದು ಏನೆಂದರೆ ನೀವು ಫೇಸ್‌ಬುಕ್ ಅಥವಾ ಯಾವುದೇ ಸಾಮಾಜಿಕ ಮಾಧ್ಯಮದ ಜಾಲತಾಣದಲ್ಲಿ ಅಥವಾ ಆಪ್‌ನಲ್ಲಿ ಖಾತೆ ತೆರೆಯುವಾಗ  ಹಲವು ಕಡೆ I agree ಎಂದು ಟಿಕ್ ಮಾಡಿರುತ್ತೀರಿ. ಬಹುತೇಕ ಮಂದಿ ಅಷ್ಟು ಉದ್ದದ ಒಪ್ಪಂದದ ಪುಟದಲ್ಲಿ ಏನಿದೆ ಎಂದು ಪೂರ್ತಿ ವಿವರವಾಗಿ ಓದಲು ಹೋಗಿರುವುದಿಲ್ಲ. ಅದರಲ್ಲಿ ನಿಮ್ಮ ವಿವರಗಳನ್ನು, ನಿಮ್ಮ ವಿಳಾಸ ಪುಸ್ತಕದಲ್ಲಿರುವ ನಿಮ್ಮ ಸ್ನೇಹಿತರ ಹೆಸರು ವಿಳಾಸಗಳನ್ನು ಇತರೆ ಮೂರನೆ ವ್ಯಕ್ತಿ ಅಥವಾ ಜಾಲತಾಣಗಳ ಜೊತೆ ಹಂಚಿಕೊಳ್ಳುತ್ತೇವೆ ಎಂದಿರುತ್ತದೆ. ಇದು ನಿಮ್ಮ ಅಪ್ಪಣೆ ಪಡೆದು ಮಾಡುವ ದುರ್ವ್ಯವಹಾರ. ಇನ್ನೂ ಕೆಲವು ನಿಮ್ಮ ನೇರ ಅಪ್ಪಣೆ ಇಲ್ಲದೆ ಮಾಡುವ ದುರ್ಬುದ್ಧಿಗಳಿವೆ.

ನಿಮ್ಮ ಮೊಬೈಲ್‌ನಲ್ಲಿ ನೀವು ಫೇಸ್‌ಬುಕ್ ಆಪ್ ಬಳಸಿ ನಂತರ ಅದರಿಂದ ಹೊರ ಬಂದು ಬೇರೆ ಏನೇನೋ ಮಾಡಿರುತ್ತೀರಿ. ಮನೆ ಹುಡುಕಾಟದ ಅಥವಾ ಬಸ್ ಟಿಕೆಟ್ ಬುಕಿಂಗ್‌ನ ಆಪ್ ಬಳಸಿದ್ದೀರಿ ಎಂದಿಟ್ಟುಕೊಳ್ಳಿ. ಮುಂದಿನ ಸಲ ಫೇಸ್‌ಬುಕ್ ತೆರೆದಾಗ ನಿಮಗೆ ಫೇಸ್‌ಬುಕ್ ತುಂಬೆಲ್ಲ ಮನೆಗಳ ಮತ್ತು ಬಸ್ ಬುಕಿಂಗ್‌ಗಳ ಜಾಹೀರಾತುಗಳೇ ಕಾಣಿಸುತ್ತವೆ. ಇಲ್ಲಿ ಏನಾಗಿದೆಯೆಂದರೆ ನೀವು ಫೇಸ್‌ಬುಕ್‌ನಿಂದ ಹೊರ ಬಂದರೂ ಫೇಸ್‌ಬುಕ್ ನೀವು ನಿಮ್ಮ ಮೊಬೈಲ್‌ನಲ್ಲಿ ಏನು ಮಾಡುತ್ತಿದ್ದೀರಿ ಎಂದು ಗಮನಿಸುತ್ತಿರುತ್ತದೆ. ಇದೂ ತಪ್ಪಲ್ಲವೇ ಎಂದು ನೀವು ಕೇಳಬಹುದು. ಹೌದು. ಇದು ಖಂಡಿತಾ ತಪ್ಪು. ಆದರೆ ಇದಕ್ಕೆ ನೀವೇ ಒಪ್ಪಿಗೆ ಕೊಟ್ಟಿರುತ್ತೀರಿ. ಫೇಸ್‌ಬುಕ್‌ನ ಗೌಪ್ಯ ಮತ್ತು ಸುರಕ್ಷತೆಯ ನೀತಿ ನಿಯಮಗಳು ಎಂಬ ಪುಟಕ್ಕೆ ಹೋಗಿ ಅಲ್ಲಿರುವ ಹಲವಾರು ಕೊಂಡಿಗಳಲ್ಲಿ ಎಲ್ಲೋ ಒಂದು ಕಡೆ ಫೇಸ್‌ಬುಕ್ ಮುಚ್ಚಿದ ನಂತರವೂ ನಿಮ್ಮ ಚಟುವಟಿಕೆಗಳನ್ನು ನಾವು ಗಮನಿಸುತ್ತಿರುತ್ತೇವೆ ಎಂಬುದಕ್ಕೆ ನೀವು ಒಪ್ಪಿಗೆ ಕೊಟ್ಟಿರುತ್ತೀರಿ. ನಾನು ಅಂತಹ ಯಾವುದೇ ಒಪ್ಪಂದಕ್ಕೆ ಒಪ್ಪಿಗೆ ಕೊಟ್ಟಿದ್ದು ನನಗೆ ನೆನಪಿಲ್ಲ ಎನ್ನುತ್ತೀರಾ? ಫೇಸ್‌ಬುಕ್‌ ಏನು ಮಾಡುತ್ತಿದೆಯೆಂದರೆ ಅದರಲ್ಲಿ ಹಲವಾರು ಆಯ್ಕೆಗಳು ನೀವು “ನಾನು ಒಪ್ಪುವುದಿಲ್ಲ” ಎಂದು ಹೇಳುವ ತನಕ ಅದುವೇ ಆಯ್ಕೆ ಆಗಿರುತ್ತದೆ. ಇದಕ್ಕೆ ಇಂಗ್ಲಿಷಿನಲ್ಲಿ default settings ಎನ್ನುತ್ತಾರೆ. ನೀವು ಪ್ರತಿ ಆಯ್ಕೆಯಲ್ಲೂ ಹುಡುಕಿ ಇವುಗಳನ್ನೆಲ್ಲ ಬದಲಿಸಬೇಕಾಗುತ್ತದೆ. ನಾನು ಇನ್ನೂ ಒಂದು ದುರ್ಬುದ್ಧಿಯನ್ನು ಗಮನಿಸಿದ್ದೇನೆ. ಅದೆಂದರೆ ಎಲ್ಲ ಕಡೆ ಹುಡುಕಿ ಈ ಆಯ್ಕೆಗಳನ್ನು ಬದಲಿಸಿಟ್ಟಿರುತ್ತೇನೆ. ಆಗಾಗ ಫೇಸ್‌ಬುಕ್ ಹೊಸ ಆವೃತ್ತಿ ಬಂದಿದೆ, ನವೀಕರಿಸಿಕೊಳ್ಳಿ ಎಂದು ಎಚ್ಚರಿಸುತ್ತಿರುತ್ತದೆ. ಹಾಗೆ ಎಚ್ಚರಿಸಿದಾಗ ನಾವು ಸಹಜವಾಗಿ ನಮ್ಮ ಆಪ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುತ್ತೇವೆ. ತಕೊಳ್ಳಿ. ಇಲ್ಲೊಂದು ಪೀಕಲಾಟ ಆಗಿರುತ್ತದೆ. ಅದೆಂದರೆ ನಿಮ್ಮ ಆಪ್ ಅಪ್‌ಡೇಟ್ ಆದಾಗ ಮತ್ತೆ ಫೇಸ್‌ಬುಕ್ ತನ್ನ ಕಂಪೆನಿ ಸಿದ್ಧಪಡಿಸಿದ default settingsಗೆ ಬದಲಾಯಿಸಿರುತ್ತದೆ. ಮತ್ತೊಮ್ಮೆ ಎಲ್ಲ ಆಯ್ಕೆಗಳನ್ನು ಹುಡುಕಿ ಬದಲಾಯಿಸಬೇಕು. ಕೆಲವೊಮ್ಮೆ ಇದು ನಿಜಕ್ಕೂ ಸಿಕ್ಕಾಪಟ್ಟೆ ಸಿಟ್ಟು ತರಿಸುತ್ತದೆ. 

ಈ ರೀತಿ ನಿಮ್ಮ ವೈಯಕ್ತಿಕ ವ್ಯವಹಾರಗಳಲ್ಲಿ ಮೂಗು ತೂರಿಸುವುದರಲ್ಲಿ ಗೂಗ್ಲ್ ಇನ್ನೂ ಹಲವು ಹೆಜ್ಜೆ ಮುಂದೆ ಇದೆ. ಅದು ನಿಮ್ಮ ಇಮೈಲ್, ಎಸ್‌ಎಂಎಸ್, ಎಲ್ಲ ಓದಿ ನಿಮಗೆ ನೀವು ಕೇಳದೆಯೇ ಸಲಹೆ ನೀಡಲು ಪ್ರಾರಂಭಿಸುತ್ತದೆ. ನೀವು ಬೈಕಿನಲ್ಲಿ ಹೋಗುವಾಗ ಯಾರದೋ ಫೋನ್ ಬಂತು ಎಂದು ರಸ್ತೆ ಬದಿ ಗಾಡಿ ನಿಲ್ಲಿಸಿ ಸುಮಾರು ಹೊತ್ತು ಮಾತನಾಡಿ ನಂತರ ಗಾಡಿ ಹೊರಡಿಸಿರುತ್ತೀರಿ. ನೀವು ಗಾಡಿ ನಿಲ್ಲಿಸಿದ್ದು ಯಾವುದೋ ಬಾರ್ ಆಂಡ್ ರೆಸ್ಟೋರೆಂಟ್ ಮುಂದೆ ಆಗಿರುತ್ತದೆ. ತಗೊಳ್ಳಿ. ಗೂಗ್ಲ್ ನಿಮಗೆ ಆ ಬಾರ್ ಆಂಡ್ ರೆಸ್ಟೋರೆಂಟ್ ಹೇಗಿತ್ತು? ಅಲ್ಲಿ ಗಾಲಿ ಕುರ್ಚಿಯಲ್ಲಿ ಹೋಗಬಹುದೇ, ಅಲ್ಲಿಯ ಆಹಾರ ಚೆನ್ನಾಗಿತ್ತೇ, ಇತ್ಯಾದಿ ಪ್ರಶ್ನೆ ಕೇಳುತ್ತದೆ.

ಈ ಎಲ್ಲ ಪೀಕಲಾಟಗಳಿಂದ ಮುಕ್ತಿ ಹೇಗೆ? ಪೂರ್ತಿಯಾಗಿ ಇಂತಹವುಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಆದರೂ ಕೆಲವು ಎಚ್ಚರಿಕೆಗಳನ್ನು ವಹಿಸಿಕೊಳ್ಳಬಹುದು.

ಡಾ| ಯು.ಬಿ. ಪವನಜ

gadgetloka @ gmail . com

Be First to Comment

Leave a Reply

Your email address will not be published. Required fields are marked *