Press "Enter" to skip to content

ಆರು ಜನರಷ್ಟು ದೂರ ಸಿದ್ಧಾಂತ

ನಿಮಗೆ ಯಾರಿಂದಲೋ ಏನೋ ಸಹಾಯ ಆಗಬೇಕಾಗಿದೆ. ಆ ವ್ಯಕ್ತಿಯ ಪರಿಚಯ ನಿಮಗಿಲ್ಲ. ಆಗ ಏನು ಮಾಡುತ್ತೀರಿ? ಆ ವ್ಯಕ್ತಿಯ ಪರಿಚಯ ಯಾರಿಗೆ ಇರಬಹುದೋ ಅವರನ್ನು ಹುಡುಕುತ್ತೀರಿ. ನಿಮಗೆ ಪರಿಚಯವಿರುವ ಯಾವುದೋ ಒಬ್ಬ ವ್ಯಕ್ತಿಗೆ ನಿಮಗೆ ಬೇಕಾದ ವ್ಯಕ್ತಿಯ ಪರಿಚಯ ಇರುವ ಇನ್ನೊಬ್ಬ ವ್ಯಕ್ತಿಯ ಪರಿಚಯ ಇರುತ್ತದೆ. ಇದನ್ನು ಹೀಗೆ ಬರೆಯೋಣ. ನಿಮಗೆ ಬೇಕಾದ ವ್ಯಕ್ತಿ “ಕ”. ನಿಮಗೆ ಪರಿಚಯ ಇರುವ ವ್ಯಕ್ತಿ “ಬ”. ಈ ಇಬ್ಬರಿಗೂ ಪರಿಚಯ ಇರುವ ವ್ಯಕ್ತಿಯೊಬ್ಬ ಇದ್ದಾನೆ. ಆತ “ಚ”. ಈಗ ನೀವು ಏನು ಮಾಡುತ್ತೀರಿ? “ಬ” ವ್ಯಕ್ತಿಯ ಜೊತೆ ಮಾತನಾಡಿ ನಿಮ್ಮನ್ನು “ಚ” ವ್ಯಕ್ತಿಗೆ ಪರಿಚಯ ಮಾಡಿಸಿಕೊಳ್ಳುತ್ತೀರಿ. ನಂತರ “ಚ” ವ್ಯಕ್ತಿಯ ಮೂಲಕ ನಿಮಗೆ ಬೇಕಾದ “ಕ” ವ್ಯಕ್ತಿಯನ್ನು ಪರಿಚಯ ಮಾಡಿಸಿಕೊಳ್ಳುತ್ತೀರಿ, ಹೌದು ತಾನೆ? ಈಗ ಈ ಸರಪಳಿ ನೋಡೋಣ. ಅದನ್ನು ಹೀಗೆ ಬರೆಯಬಹುದು – ನೀವು -> ಬ -> ಚ -> ಕ. ನೀವು ನಿಮಗೆ ಬೇಕಾದ ವ್ಯಕ್ತಿಯನ್ನು ಮೂರನೆ ಹಂತದಲ್ಲಿ ಸಂಪರ್ಕಗೊಳ್ಳುತ್ತೀರಿ. ಅಥವಾ ನಿಮಗೆ ಬೇಕಾದ ವ್ಯಕ್ತಿ ನಿಮ್ಮಿಂದ ಮೂರು ಜನರಷ್ಟು ದೂರದಲ್ಲಿದ್ದಾರೆ.

ಈ ತರ್ಕವನ್ನೇ ಮುಂದುವರಿಸೋಣ. ಆರು ಜನರಷ್ಟು ದೂರ ಎಂಬ (Six degrees of separation) ಹೆಸರಿನ ಒಂದು ಸಿದ್ಧಾಂತವಿದೆ. ಅದರ ಪ್ರಕಾರ ಪ್ರಪಂಚದಲ್ಲಿರುವ ಯಾವುದೇ ವ್ಯಕ್ತಿ ಇನ್ಯಾವುದೋ ವ್ಯಕ್ತಿಯಿಂದ ಸರಾಸರಿ ಆರು ಜನರಷ್ಟು ದೂರದಲ್ಲಿರುತ್ತಾನೆ. ಇದರ ಪ್ರಕಾರ ನೀವು ಅಮೆರಿಕದ ಅಧ್ಯಕ್ಷರಿಂದ ಆರು ಜನರಷ್ಟು ದೂರದಲ್ಲಿದ್ದೀರಿ. ನೀವು ಸುಧಾ ಮೂರ್ತಿಯವರಿಂದ ಬಹುಶಃ 3 ಅಥವಾ 4 ಜನರಷ್ಟು ದೂರ ಇರಬಹುದು. ಸುಧಾ ಮೂರ್ತಿಯವರು ಇಂಗ್ಲೆಂಡಿನ ಪ್ರಧಾನಿಯವರಿಂದ ಕೇವಲ ಒಂದು ವ್ಯಕ್ತಿಯಷ್ಟು ದೂರದಲ್ಲಿದ್ದಾರೆ. ಅಂದರೆ ನೀವು ಇಂಗ್ಲೆಂಡಿನ ಪ್ರಧಾನಿಯವರಿಂದ ಸುಮಾರು 4 ಅಥವಾ 5 ಜನರಷ್ಟು ದೂರದಲ್ಲಿದ್ದೀರಿ.

ಈ ಸಿದ್ಧಾಂತ ಸುಮ್ಮನೇ ಯಾರೋ ಒಬ್ಬ ವ್ಯಕ್ತಿ ಕುಳಿತುಕೊಂಡು ಕಲ್ಪಿಸಿಕೊಂಡದ್ದಲ್ಲ. ಇದನ್ನು ವೈಜ್ಞಾನಿಕವಾಗಿ ಸಾಧಿಸಿ ತೋರಿಸಲಾಗಿದೆ. ಒಂದು ಪ್ರಯೋಗ ಮಾಡಲಾಗಿತ್ತು. ಅದರಲ್ಲಿ ಒಂದಿಷ್ಟು ಜನರುಗಳಿಗೆ ಒಂದೊಂದು ಲಕೋಟೆ ನೀಡಲಾಗಿತ್ತು. ಆ ಲಕೋಟೆ ಒಳಗೆ ಯಾವದೋ ಒಬ್ಬ ವ್ಯಕ್ತಿಯ ಹೆಸರು ಇತ್ತು. ಲಕೋಟೆ ದೊರೆತ ವ್ಯಕ್ತಿ ಯಾರದೋ ಮುಖಾಂತರ ಲಕೋಟೆಯನ್ನು ಅದರಲ್ಲಿರುವ ಹೆಸರಿನ ವ್ಯಕ್ತಿಗೆ ತಲುಪಿಸಬೇಕಿತ್ತು. ಹಾಗೆ ತಲುಪಿಸುವಾಗ ಅದು ಯಾರ ಯಾರ ಕೈ ಮೂಲಕ ಹೋಗುತ್ತದೆ ಎಂಬುದನ್ನು ದಾಖಲಿಸಿದರು. ಅವರು ಪ್ರಯೋಗದಲ್ಲಿ ಆಯ್ದುಕೊಂಡ ಜನರಲ್ಲಿ ಸುಮಾರು 30% ದಷ್ಟು ಜನರು ತಮ್ಮ ತಮ್ಮ ಗುರಿಯನ್ನು ತಲುಪಿಸಿದರು. ಹಾಗೆ ತಲುಪಿಸುವಾಗ ಅದು ಎಷ್ಟು ಜನರ ಮೂಲಕ ಹಾದು ಹೋಯಿತು ಎಂದು ದಾಖಲಿಸಿದ್ದರು. ಕೊನೆಗೆ ಕಂಡುಬಂದುದೇನೆಂದರೆ ಅದು ಸರಾಸರಿ ಆರು ಜನರ ಮೂಲಕ ಹಾದು ಹೋಗಿತ್ತು ಎಂದು. ಹೀಗೆ ಈ “ಆರು ಜನರಷ್ಟು ದೂರ” ಎಂಬ ಸಿದ್ಧಾಂತ ರೂಪುಗೊಂಡಿತು.

ಈ ಸಿದ್ಧಾಂತ ಈಗಿನ ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗಿದೆ. ನೀವು ಲಿಂಕ್‌ಡ್‌ಇನ್ ಬಳಸುವವರಾದರೆ ಯಾವುದೋ ಒಬ್ಬ ವ್ಯಕ್ತಿಯ ಪ್ರೊಫೈಲ್ ಅನ್ನು ಗಮನಿಸಿ. ಆ ವ್ಯಕ್ತಿ ನಿಮ್ಮಿಂದ ಎಷ್ಟು ಸಂಪರ್ಕಗಳ ದೂರದಲ್ಲಿದ್ದಾರೆ ಎಂದು ಅದು ತೋರಿಸುತ್ತದೆ. ಉದಾಹರಣೆಗೆ ರಮೇಶ್ ಅನ್ನುವವರು ಲಿಂಕ್‌ಡ್‌ಇನ್‌ನಲ್ಲಿ ನಿಮ್ಮ ಸ್ನೇಹಿತ. ಆತ ನನ್ನ ಸ್ನೇಹಿತ. ನೀವು ನನ್ನ ಸ್ನೇಹಿತರಲ್ಲ. ಆಗ ನೀವು ನನ್ನ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದಾಗ ಅದು 2ನೇ ಸಂಪರ್ಕ ಎಂದು ತೋರಿಸುತ್ತದೆ. ಫೇಸ್‌ಬುಕ್ ಕೂಡ ಬಹುಮಟ್ಟಿಗೆ  ಇದೇ ಮಾದರಿಯನ್ನು ಬಳಸುತ್ತದೆ. ಯಾವುದೋ ಒಬ್ಬ ವ್ಯಕ್ತಿ ನಿಮಗೆ ಸ್ನೇಹಿತ ಆಹ್ವಾನ ಕಳುಹಿಸಿದರೆ ನಿಮ್ಮಿಬ್ಬರಿಗೆ ಸಮಾನ ಸ್ನೇಹಿತರು ಯಾರು ಯಾರು ಎಂಬ ಪಟ್ಟಿಯನ್ನು ಅದು ತೋರಿಸುತ್ತದೆ. ಫೇಸ್‌ಬುಕ್ ಪ್ರತಿದಿನ ನಿಮಗೆ ನೀವು ಇಂತಹವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು ಎಂಬ ಪಟ್ಟಿ ತೋರಿಸುತ್ತದೆ ತಾನೆ? ಆ ಪಟ್ಟಿಯಲ್ಲಿ ಯಾರಾದರೊಬ್ಬರ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ ನೋಡಿ. ಆಗ ಖಂಡಿತ ನಿಮ್ಮಿಬ್ಬರಿಗೆ ಸಮಾನ ಸ್ನೇಹಿತರು ಇದ್ದೇ ಇರುತ್ತಾರೆ. ಫೇಸ್‌ಬುಕ್ ಅಂತಹವರನ್ನೇ ಸೂಚಿಸುವುದು. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿ ಎಷ್ಟು ದೂರ ಎಂಬುದು ಸಾಮಾಜಿಕ ಜಾಲತಾಣಗಳು ಕೆಲಸ ಮಾಡುವ ಮೂಲಸಿದ್ಧಾಂತ ಆಗಿದೆ.

2005 ರಲ್ಲಿ ಸಾಮಿ ಕಮ್ಕರ್ ಎಂಬವರು ಒಂದು ಪ್ರಯೋಗ ಮಾಡಿದರು. ಆಗ ಮೈಸ್ಪೇಸ್ ಎಂಬ ಜಾಲತಾಣ ತುಂಬ ಜನಪ್ರಿಯವಾಗಿತ್ತು (ಅದು ಫೇಸ್‌ಬುಕ್‌ಗಿಂತ ಹಿಂದಿನ ಕಾಲ). ಅವರು ಒಂದು ಚಿಕ್ಕ ಪ್ರೋಗ್ರಾಮ್ ಬರೆದು ತಮ್ಮ ಪ್ರೊಫೈಲ್‌ಗೆ ಅಂಟಿಸಿದ್ದರು. ಯಾರೇ ಆದರೂ ಸಾಮಿಯವರ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದರೆ ಆ ವ್ಯಕ್ತಿಯ ಪ್ರೊಫೈಲ್‌ನಲ್ಲಿ ಅದು “ಸಾಮಿ ನನ್ನ ನಾಯಕ” ಎಂದು ಬರೆಯುತ್ತಿತ್ತು. ನಂತರ ಆ ಚಿಕ್ಕ ಪ್ರೋಗ್ರಾಮ್ ಅನ್ನು ಅವರ ಪ್ರೊಫೈಲ್‌ಗೆ ಅಂಟಿಸುತ್ತಿತ್ತು. 20 ಗಂಟೆಯ ಒಳಗೆ ಈ ಪ್ರೋಗ್ರಾಮ್ ಸುಮಾರು ಹತ್ತು ಲಕ್ಷದಷ್ಟು ಮೈಸ್ಪೇಸ್ ಬಳಕೆದಾರರ ಪ್ರೊಫೈಲ್‌ನಲ್ಲಿತ್ತು. ಅದು ಒಂದು ರೀತಿಯಲ್ಲಿ ಅಂತರಜಾಲ ಮೂಲಕ ಹರಡುವ ವೈರಸ್ ಎಂದೆಸಿಕೊಂಡಿತ್ತು. ಅಷ್ಟು ಮಾತ್ರವಲ್ಲ. ಆ ಕಾಲದ ಇತಿಹಾಸದಲ್ಲಿ ಅದು ಅತ್ಯಂತ ವೇಗವಾಗಿ ಹಬ್ಬಿದ ವೈರಸ್ ಆಗಿತ್ತು. ಅದು ನಿರುಪದ್ರವಿ ವೈರಸ್ ಆಗಿದ್ದರೂ ಅದು ಕಾನೂನುಬಾಹಿರ ಕೆಲಸವಾದುದರಿಂದ ಅಮೆರಿಕ ಸರಕಾರವು ಸಾಮಿಯವರಿಗೆ ಮೂರು ವರ್ಷಗಳ ಕಾಲ ಅಂತರಜಾಲವನ್ನು ಬಳಸಬಾರದು ಎಂಬ ಶಿಕ್ಷೆ ವಿಧಿಸಿತ್ತು.

ಈ Six degrees ಹೆಸರಿನಲ್ಲಿ ಸಾಮಾಜಿಕ ಜಾಲತಾಣ, ಆನ್‌ಲೈನ್ ಆಟ, ಸಿನಿಮಾ, ಟಿ.ವಿ. ಧಾರಾವಾಹಿ, ಪುಸ್ತಕಗಳು, ಮ್ಯಾಗಝೀನ್‌ಗಳು ಎಲ್ಲ ಇವೆ.

ಡಾಯು.ಬಿಪವನಜ

gadgetloka @ gmail . com

Be First to Comment

Leave a Reply

Your email address will not be published. Required fields are marked *