ನಿಮ್ಮಲ್ಲಿ ಐಫೋನ್ ಇದೆಯೆಂದಿಟ್ಟುಕೊಳ್ಳಿ. ಅದರ ಬ್ಯಾಟರಿಯ ಆಯುಸ್ಸು ಮುಗಿದಾಗ ಏನು ಮಾಡುತ್ತೀರಿ? ಐಫೋನ್ ಮಾತ್ರವಲ್ಲ ಈಗಿನ ಯಾವುದೇ ಫೋನಿನ ಬ್ಯಾಟರಿಯನ್ನು ನಾವೇ ಬದಲಿಸುವಂತಿಲ್ಲ ಎಂಬುದನ್ನು ಗಮನಿಸಿದ್ದೀರಾ? ಒಂದು ಕಾಲದಲ್ಲಿ ಫೋನ್ ಬಿಚ್ಚಿ ನಾವೇ ಬ್ಯಾಟರಿ ಬದಲಿಸಬಹುದಿತ್ತು. ಐಫೋನ್ ಹೊರತಾಗಿ ಬೇರೆ ಯಾವುದಾದರೂ ಫೋನ್ ಆದಲ್ಲಿ ಅದರ ಗ್ಯಾರಂಟಿ ಸಮಯ ಕಳೆದ ನಂತರ ಯಾವುದಾದರೂ ಅಂಗಡಿಗೆ ಹೋಗಿ ಅವರ ಮೂಲಕ ಬ್ಯಾಟರಿ ಬದಲಿಸಬಹುದು. ಆದರೆ ಐಫೋನ್‌ಗೆ ಹಾಗಲ್ಲ. ಅವರ ಸರ್ವಿಸ್ ಸೆಂಟರಿಗೇ ಹೋಗಿ ಅವರ ಮೂಲಕವೇ ಮಾಡಿಸಬೇಕು. ನೀವು ಬೇರೆಯವರಿಂದ ಬ್ಯಾಟರಿ ಬದಲಿಸಿದರೆ ಆ ಫೋನಿಗೆ ಮುಂದಕ್ಕೆ ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಬರುವುದಿಲ್ಲ ಎಂದು ಕೆಲವರು ದೂರಿದ್ದಾರೆ. ಅಷ್ಟಕ್ಕೂ ಐಫೋನಿನ ಬ್ಯಾಟರಿಯನ್ನು ಯಾರಾದರೂ ಬದಲಿಸಲು ಪ್ರಯತ್ನಿಸಿದ್ದೀರಾ? ಅದು ಎಷ್ಟು ಕ್ಲಿಷ್ಟ ಎಂದು ಗಮನಿಸಿದ್ದೀರಾ? ಅದು ಹಲವು ಸರ್ಕ್ಯೂಟ್‌ಗಳ ಅಡಿಯಲ್ಲಿ ಮರೆಯಾಗಿರುತ್ತದೆ. ಮೊತ್ತ ಮೊದಲನೆಯದಾಗಿ ಐಫೋನ್ ಬಿಚ್ಚುವುದು ಸುಲಭದ ಕೆಲಸವಲ್ಲ. ಅವರದೇ ಆದ ವಿಚಿತ್ರ ವಿನ್ಯಾಸದ ಸ್ಕ್ರೂಗಳನ್ನು ಅವರು ಬಳಸುತ್ತಾರೆ. ಅವನ್ನು ಬಿಚ್ಚಲು ವಿಶೇಷ ಉಪಕರಣಗಳು ಬೇಕು. ಹೇಗಾದರೂ ಮಾಡಿ ಬಿಚ್ಚಿದರೂ ಅದರ ಬ್ಯಾಟರಿ ನೇರವಾಗಿ ಕೈಗೆ ಸಿಗುವುದಿಲ್ಲ. ಅಂತೂ ಇಂತೂ ಬ್ಯಾಟರಿ ಬದಲಿಸಿದರೂ ಅದು ಕೆಲಸ ಮಾಡುತ್ತದೆ ಎಂಬ ಗ್ಯಾರಂಟಿ ಇಲ್ಲ. ಐಫೋನ್ ಅನ್ನು ಅಧಿಕೃತವಾಗಿ ಆಪಲ್ ಕಂಪೆನಿಯಿಂದ ತರಬೇತಾದವರು ಮಾತ್ರ ಬಿಚ್ಚಿ ದುರಸ್ತಿ ಮಾಡಬಹುದು ಎಂಬುದು ಕಂಪೆನಿಯವರ ಹೇಳಿಕೆ. ಸಮಸ್ಯೆ ಏನೆಂದರೆ ಇಂತಹ ತಂತ್ರಾಂಶಾಧಾರಿತ ಯಂತ್ರಗಳನ್ನು ಕಂಪೆನಿಯವರು ಅಂತರಜಾಲದ ಮೂಲಕ ನಿಯಂತ್ರಿಸಬಹುದು. ನೀವು ಅನಧಿಕೃತವಾಗಿ ಅದನ್ನು ಬಿಚ್ಚಿದ್ದೀರಿ ಎಂದು ಅವರಿಗೆ ಗೊತ್ತಾದಾಗ ನಿಮ್ಮ ಫೋನನ್ನು ಅವರು ಇಟ್ಟಿಗೆಯನ್ನಾಗಿಸುತ್ತಾರೆ. ಅಂದರೆ ನಿಮ್ಮ ಫೋನ್ ಕೆಲಸ ಮಾಡುವುದಿಲ್ಲ.
ಈಗ ತುಂಬ ಕುಖ್ಯಾತವಾದ Error-53 ಕಥೆ ಕೇಳಿ. ಇದು ನಡೆದುದು 2016ರಲ್ಲಿ. ಕೆಲವು ಐಫೋನ್ ಬಳಕೆದಾರರು ತಮ್ಮ ಫೋನಿನ ಕೆಟ್ಟು ಹೋದ ಬೆರಳಚ್ಚು ಪರಿಶೀಲಕವನ್ನು (fingerprint scanner) ಐಫೋನ್‌ನವರ ಅಧಿಕೃತ ಸರ್ವಿಸ್ ಸೆಂಟರ್ ಬದಲಿಗೆ ಬೇರೆಯವರಿಂದ ದುರಸ್ತಿ ಮಾಡಿಸಿದರು. ಹಾಗೆ ಮಾಡಿಸಿಕೊಂಡವರೆಲ್ಲರ ಫೋನ್‌ಗಳು ಕೆಲಸ ಮಾಡುವುದು ನಿಲ್ಲಿಸಿ Error-53 ಎಂದು ತೋರಿಸತೊಡಗಿದವು. ಐಫೋನ್‌ನ ಗ್ರಾಹಕ ಸೇವೆಗೆ ಫೋನ್ ಮಾಡಿ ವಿಚಾರಿಸಿದರೆ ಅವರದು ಒಂದೇ ಉತ್ತರ – ನೀವು ಐಫೋನ್‌ನ ಅಧಿಕೃತ ಸರ್ವಿಸ್ ಸೆಂಟರಿನಲ್ಲಿ ದುರಸ್ತಿ ಮಾಡಿಸಿಲ್ಲ; ಅವರು ಕಳಪೆ ಭಾಗ ಅಳವಡಿಸಿದ್ದಾರೆ; ಆದುದರಿಂದ ನಾವು ಏನೂ ಮಾಡುವಂತಿಲ್ಲ. ವಿಷಯ ಏನೆಂದರೆ ಐಫೋನ್‌ನವರ ಅಧಿಕೃತ ಸರ್ವಿಸ್ ಸೆಂಟರಿನಲ್ಲಿ ದುರಸ್ತಿ ಮಾಡಿಸಿದರೆ ಅದು ಅತಿ ದುಬಾರಿ, ಬೇರೆಯವರಿಂದ ಮಾಡಿಸಿದರೆ ಅತಿ ಕಡಿಮೆಯಲ್ಲಿ ಆಗುತ್ತದೆ. ಆದರೆ ಅದರಿಂದ ಆಪಲ್ ಕಂಪೆನಿಗೆ ಹಣ ಬರುವುದಿಲ್ಲ. ಅದಕ್ಕಾಗಿ ಕಂಪೆನಿಯವರು ಅಂತಹ ಫೋನ್‌ಗಳನ್ನು ತಂತ್ರಾಂಶದ ನವೀಕರಣದ ಮೂಲಕ ಕೆಲಸ ಮಾಡದಂತೆ ಮಾಡಿದ್ದರು. ಈ ವಿಷಯ ಆಸ್ಟ್ರೇಲಿಯಲ್ಲಿ ನ್ಯಾಯಾಲಯಕ್ಕೆ ಹೋಯಿತು. ಕೆಲವು ಗ್ರಾಹಕ ಸಂಘಗಳು ಆಪಲ್ ಕಂಪೆನಿಯ ಮೇಲೆ ದಾವೆ ಹೂಡಿದರು. ಅಂತಿಮವಾಗಿ ಗ್ರಾಹಕರು ಗೆದ್ದರು. 9 ಮಿಲಿಯ ಡಾಲರ್ ದಂಡವನ್ನು ನ್ಯಾಯಾಲಯ ಆಪಲ್ ಕಂಪೆನಿಗೆ ವಿಧಿಸಿತು. ಎಲ್ಲರಿಗೂ ಬೇರೆ ಫೋನ್ ಕೊಡಿಸಿತು. ಇದು ಗ್ರಾಹಕರ ವಿಜಯ.
ಇಲ್ಲಿ ಒಂದು ವಿಷಯ ಗಮನಿಸಿರಬಹುದು. ಅದೆಂದರೆ ಒಮ್ಮೆ ಒಂದು ಸಾಧನವನ್ನು ನಾವು ಕೊಂಡ ನಂತರ ನಾವು ಅದರ ಯಜಮಾನರು. ಅದರ ಗ್ಯಾರಂಟಿ ಸಮಯ ಮುಗಿದ ನಂತರ ಅದನ್ನು ಎಲ್ಲಿ ಯಾರಿಂದ ದುರಸ್ತಿ ಮಾಡಿಸಬೇಕು ಎಂಬುದು ನಮ್ಮ ಅಧಿಕಾರವಾಗಿರಬೇಕು. ಅದನ್ನು ನಮ್ಮ ಮೇಲೆ ಹೇರುವ ಅಧಿಕಾರ ಆ ಸಾಧನವನ್ನು ತಯಾರಿಸಿದ ಕಂಪೆನಿಗೆ ಇರುವಂತಿಲ್ಲ. ಅಷ್ಟೇಕೆ, ನಾವು ತಾಂತ್ರಿಕವಾಗಿ ಪರಿಣತರಾಗಿದ್ದಲ್ಲಿ ಅದನ್ನು ನಾವೇ ಮನೆಯಲ್ಲೇ ದುರಸ್ತಿ ಮಾಡುವಂತಿರಬೇಕು. ಅದು ತಪ್ಪು ಎಂದು ಕಂಪೆನಿಯವರು ಹೇಳುವಂತಿಲ್ಲ. ನಾವೇ ದುರಸ್ತಿ ಮಾಡಿಕೊಂಡರೆ ಸಾಧನವನ್ನು ಕೆಲಸ ಮಾಡದಂತೆ ಅವರು ತಂತ್ರಾಂಶದ ಮೂಲಕ ನಿಯಂತ್ರಿಸುವಂತಿಲ್ಲ. ಈ ದುರಸ್ತಿಯ ವ್ಯಾಪ್ತಿಯಲ್ಲಿ ಸರಳವಾದ ಬ್ಯಾಟರಿ ಬದಲಾವಣೆಯೂ ಬರುತ್ತದೆ. ಈ ಹಕ್ಕನ್ನು ಸರಳವಾಗಿ ದುರಸ್ತಿಯ ಹಕ್ಕು ಎಂದು ಹೇಳಬಹುದು. ಇಂಗ್ಲಿಷಿನಲ್ಲಿ ಇದನ್ನು right to repair ಎನ್ನುತ್ತಾರೆ. ಅಮೆರಿಕ ಮತ್ತು ಯುರೋಪಿನಲ್ಲಿ ಇದೊಂದು ದೊಡ್ದ ಚಳವಳಿಯಾಗಿ ರೂಪುಗೊಳ್ಳುತ್ತಿದೆ.
ಇಲೆಕ್ಟ್ರಾನಿಕ್ ಸಾಧನಗಳು ಬಹುಬೇಗನೆ ಅಪ್ರಸ್ತುತವಾಗುತ್ತವೆ. ಅದನ್ನು ಕೊಳ್ಳುವವರೂ ಈ ಸಾಧನವನ್ನು ನಾವು ಹೆಚ್ಚೆಂದರೆ 5 ವರ್ಷ ಮಾತ್ರ ಬಳಸಬಹುದು ಎಂಬ ಆಲೋಚನೆಯಲ್ಲೇ ಕೊಳ್ಳುತ್ತಾರೆ. ಆದರೆ ಅದರ ಗ್ಯಾರಂಟಿ 6 ರಿಂದ 12 ತಿಂಗಳುಗಳಲ್ಲಿ ಮುಗಿದುಹೋಗುತ್ತದೆ. ನಂತರ ಚಿಕ್ಕ ದುರಸ್ತಿ ಮಾಡಿಸಬೇಕಿದ್ದರೂ ನೀವು ಅದರ ಅಧಿಕೃತ ಸರ್ವಿಸ್ ಸೆಂಟರಿಗೆ ತೆಗೆದುಕೊಂಡು ಹೋದರೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಐಫೋನ್, ಮ್ಯಾಕ್, ಐಪ್ಯಾಡ್ ಇತ್ಯಾದಿ ತಯಾರಿಸುವ ಆಪಲ್ ಕಂಪೆನಿಯಂತೂ ತನ್ನ ಉತ್ಪನ್ನಗಳಲ್ಲಿ ತನ್ನದೇ ವಿನ್ಯಾಸದ ಸ್ಕ್ರೂಗಳನ್ನು ಬಳಸುತ್ತದೆ. ಇತರೆ ಕೆಲವು ಕಂಪೆನಿಗಳೂ ಇದೇ ರೀತಿ ಮಾಡುತ್ತಿವೆ. ಇದೆಲ್ಲವೂ ಒಂದು ರೀತಿಯಲ್ಲಿ ಅನೈತಿಕವೇ. ಇವುಗಳ ವಿರುದ್ಧ ನಡೆಯುತ್ತಿರುವ ಅಭಿಯಾನವೇ ದುರಸ್ತಿಯ ಹಕ್ಕು ಅಭಿಯಾನ. ಅಮೆರಿಕದಲ್ಲಿ ದುರಸ್ತಿಯ ಹಕ್ಕು ಕಾನೂನಾಗಿ ಬರುತ್ತಿದೆ. ಅದರಲ್ಲಿ ಅಡಕವಾಗಿರುವ ಕೆಲವು ಪ್ರಮುಖ ಅಂಶಗಳು – ಕಂಪೆನಿಗಳು ತಮ್ಮ ಉತ್ಪನ್ನಗಳ ದುರಸ್ತಿಯನ್ನು ಮಾಡಲು ಬೇಕಾಗಿರುವ ತಾಂತ್ರಿಕ ಕೈಪಿಡಿಯನ್ನು ಅಂತರಜಾಲದ ಮೂಲಕ ಬಿಡುಗಡೆ ಮಾಡಬೇಕು; ಉತ್ಪನ್ನದ ವಿನ್ಯಾಸವು ಯಾರು ಬೇಕಾದರೂ ದುರಸ್ತಿ ಮಾಡುವಂತಿರಬೇಕು, ದುರಸ್ತಿಗೆ ಬೇಕಾದ ಭಾಗಗಳನ್ನು ಲಭ್ಯ ಮಾಡಬೇಕು, ನಾವೇ ಅಥವಾ ಬೇರೆಯವರು ದುರಸ್ತಿ ಮಾಡಿದರೆ ಆ ಉತ್ಪನ್ನವನ್ನು ತಂತ್ರಾಂಶದ ಮೂಲಕ ಕೆಲಸ ಮಾಡದಂತೆ ಮಾಡಬಾರದು, ಇತ್ಯಾದಿ. ಇಂತಹ ಒಂದು ಅಭಿಯಾನ ಭಾರತದಲ್ಲೂ ಆಗಬೇಕಾಗಿದೆ.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment