Press "Enter" to skip to content

ವೈಯಕ್ತಿಕ ದತ್ತಾಂಶ ರಕ್ಷಣಾ ಮಸೂದೆ

ಮಾಹಿತಿ ಕಳ್ಳರಿಗೆ ಕಡಿವಾಣ

ನೀವು ನನಗೆ ಹಂಪಿಗೆ ಯಾತ್ರೆ ಹೋಗಬೇಕೆನಿಸುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ನೋಡಿ. ನಿಮಗೆ ಪ್ರಯಾಣ ಸಂಬಂಧಿ ಜಾಹೀರಾತುಗಳು ಕಾಣಿಸಲು ಪ್ರಾರಂಭವಾಗುತ್ತದೆ. ನನಗೆ ಹೊಟ್ಟೆನೋವು ಆಗುತ್ತಿದೆ ಎಂದು ಪೋಸ್ಟ್ ಹಾಕಿ ನೋಡಿ. ಔಷಧಿ ನೀಡುವ ಆಪ್‌ಗಳ ಜಾಹೀರಾತುಗಳು ಬರಲು ಪ್ರಾರಂಭವಾಗುತ್ತದೆ. ಏನಾಗುತ್ತಿದೆ ಎಂದರೆ ಫೇಸ್‌ಬುಕ್ ನಿಮ್ಮ ಮಾಹಿತಿಯನ್ನು ಇತರೆ ಕಂಪೆನಿ, ಉದ್ಯಮಗಳ ಜೊತೆ ಹಂಚಿಕೊಂಡಿದೆ. ಇದಕ್ಕೆ ನಿಮಗೆ ತಿಳಿಯದೆ ನೀವೇ ಅನುಮತಿಸಿರುತ್ತೀರಿ. ಅದನ್ನು ಸರಿಪಡಿಸಬಹುದು. ಇನ್ನೊಂದು ನಮೂನೆಯ ಪರಿಸ್ಥಿತಿಯನ್ನು ನೋಡೋಣ. ನೀವು ಫೇಸ್‌ಬುಕ್‌ನಿಂದಲೇ ನಿರ್ಗಮಿಸಿರುತ್ತೀರಿ. ನಿಮ್ಮ ಖಾತೆಯನ್ನೇ ಅಳಿಸಿರುತ್ತೀರಿ. ಆದರೂ ಈ ಜಾಹೀರಾತುಗಳು ನಮಗೆ ಹಲವು ರೀತಿಯಲ್ಲಿ ಬರುತ್ತಿರುತ್ತವೆ. ಅದು ಎಸ್‌ಎಂಎಸ್ ಅಥವಾ ಇಮೈಲ್ ಮೂಲಕ ಆಗಿರಬಹುದು. ಅದು ಹೇಗೆ ಎಂದು ಚಿಂತಿಸುತ್ತೀದ್ದೀರಾ? ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆದುಕೊಂಡ ಫೇಸ್‌ಬುಕ್ ಮತ್ತು ಇತರೆ ಜಾಲತಾಣ ಅಥವಾ ಆಪ್‌ಗಳು ಅದನ್ನು ತಮ್ಮಲ್ಲಿಯೇ ಇಟ್ಟುಕೊಂಡಿವೆ. ನೀವು ನಿರ್ಗಮಿಸಿದರೂ ನಿಮ್ಮ ಮಾಹಿತಿಯನ್ನು ಅವು ಅಳಿಸಿಲ್ಲ. ಅಷ್ಟೇ ಅಲ್ಲ. ಅದನ್ನು ಬಳಸಿಕೊಳ್ಳುತ್ತಿವೆ.

ನೀವು ಯಾವುದೋ ಕಾಯಿಲೆ ಇದೆಯೇ ಎಂದು ತಿಳಿಯಲು ಯಾವುದೋ ಲ್ಯಾಬ್‌ಗೆ ಹೋಗಿ ಹಲವು ಪರೀಕ್ಷೆಗಳನ್ನು ಮಾಡಿಸಿರುತ್ತೀರಿ. ಯಾವುದೋ ಕಾಯಿಲೆ ಇರುವ ಅಥವಾ ಪ್ರಾರಂಭದ ಲಕ್ಷಣಗಳಿವೆ ಎಂತಿಟ್ಟುಕೊಳ್ಳಿ. ನಂತರ ನಿಮಗೆ ಆ ಕಾಯಿಲೆಯ ಔಷಧಿ ಸಂಬಂಧಿ ಜಾಹೀರಾತುಗಳು, ಫೋನ್ ಕರೆಗಳು ಬಂದರೆ ಹೇಗಿರುತ್ತದೆ? ನಿಮಗೆ ಕಿರಿಕಿರಿಯಾಗುವುದು ಒಂದು ವಿಷಯ. ನಿಮ್ಮ ವೈಯಕ್ತಿಕ ಮಾಹಿತಿ ಇನ್ಯಾರಿಗೋ ದೊರಕಿರುವುದು ಇನ್ನೊಂದು.

ನಿಮಗೆ ಯಾರಿಂದಲೋ ಫೋನ್ ಬರುತ್ತದೆ. ಅವರೊಡನೆ ನಿಮ್ಮ ಫೋನ್ ಸಂಖ್ಯೆ ಎಲ್ಲಿಂದ ದೊರೆಯಿತು ಎಂದು ಕೇಳಿದರೆ ಯಾವುದೋ ಡಾಟಾಬೇಸ್‌ನಲ್ಲಿ ದೊರೆಯಿತು ಎನ್ನುತ್ತಾರೆ. ಅದು ಯಾವ ಡಾಟಾಬೇಸ್? ಅದರಲ್ಲಿ ನಿಮ್ಮ ಮಾಹಿತಿ ಯಾಕಿದೆ? (ಡಾಟಾಗೆ ಕನ್ನಡದಲ್ಲಿ ದತ್ತಾಂಶ ಮತ್ತು ಡಾಟಾಬೇಸ್‌ಗೆ ದತ್ತಸಂಗ್ರಹ ಎನ್ನಲಾಗುತ್ತಿದೆ).

ಇವೆಲ್ಲ ತಪ್ಪಲ್ಲವೇ ಎಂದು ಆಲೋಚಿಸುತ್ತಿದ್ದೀರಾ? ಹೌದು ಇದು ಅನ್ಯಾಯವೇ. ಆದರೆ ಸದ್ಯಕ್ಕೆ ಇದು ಕಾನೂನುಬಾಹಿರ ಅಲ್ಲ. ಅಂದರೆ ಭಾರತದಲ್ಲಿ ವೈಯಕ್ತಿಕ ಮಾಹಿತಿಗೆ ಯಾವುದೇ ರಕ್ಷಣೆ ಇಲ್ಲ. ಈ ತಪ್ಪನ್ನು ಸರಿಪಡಿಸಲು ಭಾರತೀಯ ವೈಯಕ್ತಿಕ ಮಾಹಿತಿ ದತ್ತಾಂಶ ರಕ್ಷಣಾ ಮಸೂದೆ ಬರುತ್ತಿದೆ. ಅದರ ಬಗ್ಗೆ ಸ್ವಲ್ಪ ತಿಳಿಯೋಣ.

ಇದನ್ನು ಇಂಗ್ಲಿಷಿನಲ್ಲಿ Personal Data Protection Bill ಎನ್ನುತ್ತಾರೆ. ಇದರ ಮೊದಲ ಆವೃತ್ತಿ 2018ರಲ್ಲಿ ತಯಾರಾಯಿತು. 2019ರಲ್ಲಿ ಇದರ ಸುಧಾರಿತ ಆವೃತ್ತಿಯನ್ನು ತಯಾರಿಸಿ ಲೋಕಸಭೆಯಲ್ಲಿ ಮಂಡಿಸಲಾಯಿತು. ಅದು ಕಾನೂನಾಗುವ ಮೊದಲೇ ಲೋಕಸಭೆಯ ಅವಧಿ ಮುಗಿಯಿತು. ಹೊಸ ಸರಕಾರ ಬಂದ ನಂತರ ಆ ಮಸೂದೆಯನ್ನು ಪುನಃ ಪ್ರಸ್ತುತಪಡಿಸಿ ಕಾನೂನನ್ನಾಗಿಸಿಲ್ಲ. 

2017ರಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯವು ವ್ಯಾಜ್ಯವೊಂದರ ತೀರ್ಪಿನಲ್ಲಿ ವೈಯಕ್ತಿಕ ಮಾಹಿತಿಯ ದತ್ತಾಂಶವನ್ನು ರಕ್ಷಿಸಲು ಕಾನೂನು ಮಾಡತಕ್ಕದ್ದು ಎಂದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿತು. ಸರಕಾರವು ನಿವೃತ್ತ ನ್ಯಾಯಾಧೀಶ ಬಿ. ಎನ್. ಶ್ರೀಕೃಷ್ಣ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿತು. ಈ ಸಮಿತಿಯ ವರದಿಯನ್ನು ಆಧರಿಸಿ ಕರಡು ಮಸೂದೆಯನ್ನು 2018ರಲ್ಲಿ ಮಾಡಲಾಯಿತು. ನಂತರ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಆ ಮಸೂದೆಯಲ್ಲಿ ಬದಲಾವಣೆ ಮಾಡಿ 2019ರಲ್ಲಿ ಅಂತಿಮಗೊಳಿಸಲಾಯಿತು.

ಈ ಮಸೂದೆಯಲ್ಲಿ ಏನೇನು ಇವೆ ಎಂದು ನೋಡೋಣ. ಈ ಮಸೂದೆಯ ಮುನ್ನುಡಿಯಲ್ಲಿ ಇದು ಯಾವ ತತ್ತ್ವಗಳನ್ನು ಆಧರಿಸಿದೆ ಎಂದು ಸೂಚಿಸಲಾಗಿದೆ. ವೈಯಕ್ತಿಕ ಮಾಹಿತಿಯ ಸುರಕ್ಷತೆ ಮತ್ತು ಗೌಪ್ಯವು ಪ್ರತಿಯೊಬ್ಬನ ಮೂಲಭೂತ ಹಕ್ಕಾಗಿದೆ. ಡಿಜಿಟಲ್ ಆರ್ಥಿಕತೆಯು ವೈಯಕ್ತಿಕ ಮಾಹಿತಿಯನ್ನು ಒಂದು ಪ್ರಮುಖ ಅಂಗವನ್ನಾಗಿಸಿದೆ. ವೈಯಕ್ತಿಕ ಮಾಹಿತಿಯನ್ನು ನೀಡುವ ಮತ್ತು ಪಡೆಯುವ ವ್ಯಕ್ತಿ ಹಾಗೂ ಸಂಸ್ಥೆಗಳ ನಡುವೆ ನಂಬಿಕೆ ಇರಬೇಕಾಗಿದೆ. ಇವು ಅಲ್ಲಿ ಹೇಳಿರುವ ಪ್ರಮುಖ ಅಂಶಗಳು.

ಭಾರತದ ಎಲ್ಲ ಕಂಪೆನಿಗಳು, ಡಿಜಿಟಲ್ ವ್ಯವಹಾರ ನಡೆಸುವ ಎಲ್ಲರೂ ಇದರ ವ್ಯಾಪ್ತಿಗೆ ಒಳಪಡುತ್ತಾರೆ. ಇದನ್ನು ಪಾಲಿಸದವರಿಗೆ ಶಿಕ್ಷೆ ಮತ್ತು ಜುಲ್ಮಾನೆಗಳನ್ನು ಈ ಮಸೂದೆಯಲ್ಲಿ ಸೂಚಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳು ಮಾತ್ರವಲ್ಲ, ಔಷಧಿ ಕಂಪೆನಿಗಳು, ಆಸ್ಪತ್ರೆ, ಲ್ಯಾಬ್‌ಗಳು, ಕಟ್ಟಡ ನಿರ್ಮಾಪಕರು, ಹೀಗೆ ಎಲ್ಲ ನಮೂನೆಯ ಕಂಪೆನಿಗಳು ಇದರ ವ್ಯಾಪ್ತಿಗೆ ಬರುತ್ತವೆ. ಪುಸ್ತಕದಲ್ಲಿ ಮಾತ್ರ ಬರೆದುಕೊಳ್ಳುವ ಹಳೆಯ ವಿಧಾನದ ಕಂಪೆನಿಗಳಿಗೆ ಮಾತ್ರ ಈ ಮಸೂದೆಯಿಂದ ವಿನಾಯಿತಿ ಇದೆ.

ಈ ಮಸೂದೆ ಕಾನೂನಾದ ನಂತರ ಪ್ರತಿ ಕಂಪೆನಿ, ಜಾಲತಾಣವೂ, ತನ್ನ ಗ್ರಾಹಕರಿಗೆ ತಾನು ಯಾವೆಲ್ಲ ದತ್ತಾಂಶವನ್ನು ಸಂಗ್ರಹಿಸುತ್ತಿದ್ದೇನೆ, ಅದನ್ನು ಯಾವ ರೀತಿಯಲ್ಲಿ ಬಳಸುತ್ತೇನೆ, ಎಂದೆಲ್ಲ ಮಾಹಿತಿಯನ್ನು ನೀಡಿ ಅದಕ್ಕೆ ಗ್ರಾಹಕರಿಂದ ಒಪ್ಪಿಗೆ ಪಡೆಯತಕ್ಕದ್ದು. ಈ ರೀತಿ ಸೂಚನೆ ನೀಡಿದ್ದು, ಅದಕ್ಕೆ ಒಪ್ಪಿಗೆ ಪಡೆದದ್ದು, ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಸಂಗ್ರಹಿಸಿಡಬೇಕು. ಮುಂದಕ್ಕೆ ಗ್ರಾಹಕ ತನ್ನ ಒಪ್ಪಿಗೆಯನ್ನು ಹಿಂದಕ್ಕೆ ಪಡೆದರೆ ಆತನ ಎಲ್ಲ ವೈಯಕ್ತಿಕ ಮಾಹಿತಿಗಳನ್ನು ನಾಶಪಡಿಸಬೇಕು ಹಾಗೂ ಹಾಗೆ ಮಾಡಿದುದಕ್ಕೆ ದಾಖಲೆ ನೀಡಬೇಕು. ಈ ಮಸೂದೆಯ ಇನ್ನೊಂದು ಅತಿ ಮಹತ್ವದ ಅಂಶವೆಂದರೆ ಭಾರತೀಯರ ಪ್ರಮುಖ ಸೂಕ್ಷ್ಮ ಮಾಹಿತಿಗಳ ದತ್ತಾಂಶವನ್ನು ಭಾರತದಲ್ಲೇ ಸಂಗ್ರಹಿಸಿಡಬೇಕು ಹಾಗೂ ಅವನ್ನು ಭಾರತದಿಂದ ಹೊರಗೆ ಸಾಗಿಸಬಾರದು. ಇದು ಗೂಗ್ಲ್, ಫೇಸ್‌ಬುಕ್ ಹಾಗೂ ಹಲವು ಚೈನಾ ದೇಶದ ಫೋನ್ ತಯಾರಕರನ್ನು ಚಿಂತೆಗೆ ಈಡು ಮಾಡಿದೆ. ಈ ಮಸೂದೆಯಲ್ಲಿ 2019ರಲ್ಲಿ ಸೇರಿಸಿದ ಒಂದು ಅಂಶವೆಂದರೆ ವೈಯಕ್ತಿಕವಲ್ಲದ ಮಾಹಿತಿಯನ್ನು ಸರಕಾರವು ಪಡೆಯಬಹುದು ಹಾಗೂ ಅಳಿಸದೆ ಇಟ್ಟುಕೊಳ್ಳಬಹುದು ಎಂಬುದು. ಇದರಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಮಾಹಿತಿ ಇರುವುದಿಲ್ಲ. ಬದಲಿಗೆ ಸಾಮೂಹಿಕ ಮಾಹಿತಿಗಳಿರುತ್ತವೆ. ಉದಾಹರಣೆಗೆ ಟ್ಯಾಕ್ಸಿ ಸೇವೆ ನೀಡುವ ಉಬರ್ ತನ್ನಲ್ಲಿರುವ ಒಟ್ಟು ಮಾಹಿತಿಯ ಸಾರಾಂಶ – ಎಷ್ಟು ಜನ ಬೆಳಿಗ್ಗೆ ಹೊತ್ತಿಗೆ ಬುಕ್ ಮಾಡುತ್ತಾರೆ, ಯಾವ ಬಡಾವಣೆಯಲ್ಲಿ ಬೆಳಿಗ್ಗೆ ಹೊತ್ತಿಗೆ ಟ್ಯಾಕ್ಸಿ ಬುಕಿಂಗ್ ಜಾಸ್ತಿ ಇರುತ್ತದೆ, ಇತ್ಯಾದಿ ಮಾಹಿತಿಗಳು.  

ಈ ಮಸೂದೆ ಆದಷ್ಟು ಬೇಗನೆ ಕಾನೂನಾಗಿ ಬರಲಿ ಎಂದು ಆಶಿಸೋಣ.

Be First to Comment

Leave a Reply

Your email address will not be published. Required fields are marked *