Press "Enter" to skip to content

ಅವಕೆಂಪು ತಾಪಮಾಪಕ

ಇದು ಪಿಸ್ತೂಲಲ್ಲ, ಉಷ್ಣತೆ ಅಳೆಯುವ ಸಾಧನ

ಈ ಕೋವಿಡ್-19ರಿಂದಾಗಿ ಜನಜೀವನದ ರೀತಿನೀತಿಗಳೇ ಬದಲಾಗಿವೆ. ಮುಖಗವಸು ಹಾಕದೆ ಮನೆಯಿಂದ ಹೊರಬರುವ ಹಾಗೆಯೇ ಇಲ್ಲ. ಯಾವುದೇ ಅಂಗಡಿ, ಮಾಲ್, ಕಚೇರಿ ಅಥವಾ ಇನ್ಯಾವುದೇ ಸಾರ್ವಜನಿಕ ಸ್ಥಳಕ್ಕೆ  ಹೋದರೆ ಅಲ್ಲಿ ಬಾಗಿಲಿನಲ್ಲಿಯೇ ಒಬ್ಬ ನಿಮ್ಮ ಹಣೆ ಅಥವಾ ಮುಂಗೈಗೆ ಒಂದು ಚಿಕ್ಕ ಪಿಸ್ತೂಲಿನಾಕಾರದ ಸಾಧನವನ್ನು ಹಿಡಿಯುತ್ತಾನೆ. ಅದರಲ್ಲಿ ಮೂಡಿಬರುವ ಸಂಖ್ಯೆಯನ್ನು ನೋಡಿ ನೀವು ಒಳಗೆ ಹೋಗಬಹುದೇ ಬಾರದೇ ಎಂದು ನಿರ್ಧರಿಸುತ್ತಾನೆ. ಏನಿದು ಈ ಸಾಧನ? ಇದು ಚಿಕ್ಕ ಪಿಸ್ತೂಲ್ ಅಥವಾ ಚಿಕ್ಕ ಕೋವಿಯಲ್ಲ. ಇದು ನಿಮ್ಮನ್ನು ಸ್ಪರ್ಶಿಸದೆ ನಿಮ್ಮ ದೇಹದ ತಾಪಮಾನವನ್ನು ಅಳೆಯುವ ಅವಕೆಂಪು ತಾಪಮಾಪಕ (infrared thermometer). ಈ ಸಾಧನದ ಬಗ್ಗೆ ಸ್ವಲ್ಪ ತಿಳಿಯೋಣ.

ಮೊತ್ತಮೊದಲನೆಯದಾಗಿ ವಿದ್ಯತ್ಕಾಂತೀಯ ತರಂಗಗಳ ಬಗೆಗೆ ತಿಳಿದುಕೊಳ್ಳಬೇಕು. ನಮಗೆ ತಿಳಿದಿರುವ, ಕಣ್ಣಿಗೆ ಕಾಣುವ ಬೆಳಕು, ಎಕ್ಸ್-ಕಿರಣ, ರೇಡಿಯೋ ತರಂಗ ಎಲ್ಲವೂ ಒಂದೇ ಕುಟುಂಬಕ್ಕೆ ಸೇರಿದವು. ಅದುವೇ ವಿದ್ಯುತ್ಕಾಂತೀಯ ವಿಕಿರಣ (electromagnetic radiation). ಇವುಗಳನ್ನು ಅವುಗಳ ಕಂಪನಾಂಕಕ್ಕೆ (frequency) ಅಥವಾ ಅಲೆಯುದ್ದಕ್ಕೆ (wavelength) ಅನುಗುಣವಾಗಿ ವಿಂಗಡಿಸಲಾಗಿದೆ. ಈ ಶ್ರೇಣಿಗೆ ರೋಹಿತ (spectrum) ಎಂಬ ಹೆಸರಿದೆ. ಈ ರೋಹಿತದ ಒಂದು ತುದಿಯಲ್ಲಿ ಅತಿ ಕಡಿಮೆ ಕಂಪನಾಂಕದ ರೇಡಿಯೋ ತರಂಗಗಳಿವೆ. ಇನ್ನೊಂದು ತುದಿಯಲ್ಲಿ ಅತಿ ಹೆಚ್ಚು ಕಂಪನಾಂಕದ ಗಾಮಾ ಕಿರಣಗಳಿವೆ (ಚಿತ್ರ ನೋಡಿ). ಕಂಪನಾಂಕಕ್ಕೂ ವಿಕಿರಣದ ಶಕ್ತಿಗೂ ನೇರ ಸಂಬಂಧವಿದೆ. ಗಾಮಾ ಕಿರಣ ಅತಿ ಹೆಚ್ಚು ಶಕ್ತಿಯದು. ರೇಡಿಯೋ ತರಂಗ ಅತಿ ಕಡಿಮೆ ಶಕ್ತಿಯದು. ಈ ರೋಹಿತದ ಮಧ್ಯದಲ್ಲಿ ನಮ್ಮ ಕಣ್ಣಿಗೆ ಕಾಣಿಸುವ ಬೆಳಕಿದೆ. ಈ ಬೆಳಕಿನ ರೋಹಿತದ ಒಂದು ತುದಿಯಲ್ಲಿ ಕಡಿಮೆ ಶಕ್ತಿಯ ಕೆಂಫು ಬೆಳಕಿದೆ ಹಾಗೂ ಇನ್ನೊಂದು ತುದಿಯಲ್ಲಿ ಹೆಚ್ಚು ಶಕ್ತಿಯ ನೇರಳೆ ಬಣ್ಣವಿದೆ. ಕೆಂಪು ಬೆಳಕಿಗಿಂತ ಕಡಿಮೆ ಕಂಪನಾಂಕದ ಕಿರಣಗಳನ್ನು ಅವಕೆಂಪು ಕಿರಣಗಳು ಎನ್ನಲಾಗುತ್ತದೆ. ಇವುಗಳಿಗೆ ಉಷ್ಣದ ವಿಕಿರಣ ಎಂದೂ ಕರೆಯಬಹುದು. ಯಾಕೆಂದರೆ ಯಾವುದೇ ವಸ್ತು ತನ್ನಲ್ಲಿರುವ ತಾಪಮಾನವನ್ನು ಅವಕೆಂಪು ಕಿರಣಗಳನ್ನು ಸೂಸುವ ಮೂಲಕ ತಿಳಿಸುತ್ತದೆ. ಅಂದರೆ ಒಂದು ವಸ್ತುವಿನ ಮೇಲ್ಮೈಯಿಂದ ಹೊರಸೂಸುವ ಅವಕೆಂಪು ಕಿರಣಗಳನ್ನು ಅಳೆಯುವ ಮೂಲಕ ಆ ವಸ್ತುವಿನ ತಾಪಮಾನವನ್ನು ಅಳೆಯಬಹುದು. ಅವಕೆಂಪು ತಾಪಮಾಪಕ ಈ ತತ್ತ್ವವನ್ನು ಬಳಸಿ ಕೆಲಸ ಮಾಡುತ್ತದೆ. ಈ ಅವಕೆಂಪು ಕಿರಣಗಳು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ.

ಪ್ರತಿಯೊಂದು ವಸ್ತುವಿಗೂ ತಾಪಮಾನ (ಉಷ್ಣತೆ) ಇರುತ್ತದೆ. ಅದಕ್ಕೆ ಅನುಗುಣವಾಗಿ ಅದು ಅವಕೆಂಪು ಕಿರಣಗಳನ್ನು ಹೊರಸೂಸುತ್ತಿರುತ್ತದೆ. ಈ ಕಿರಣಗಳ ಮೊತ್ತ ಮತ್ತು ಕಂಪನಾಂಕವು ಆ ವಸ್ತುವಿನ ಹೊರಸೂಸುವಿಕೆಯ ಸಾಮರ್ಥ್ಯ ಮತ್ತು ಅದರ ತಾಪಮಾನವನ್ನು ಹೊಂದಿಕೊಂಡಿರುತ್ತದೆ. ಬೇರೆ ಬೇರೆ ವಸ್ತುಗಳಿಗೆ ಬೇರೆ ಬೇರೆ ಹೊರಸೂಸುವಿಕೆಯ ಸಾಮರ್ಥ್ಯವಿರುತ್ತದೆ. ಹೋಲಿಕೆಗೆ ಮಾನವನ ಚರ್ಮದ ಹೊರಸೂಸುವಿಕೆಯ ಸಾಮರ್ಥ್ಯ 0.98 ಎಂದಿದ್ದರೆ ಬಿಳಿ ಪ್ಲಾಸ್ಟಿಕ್ಕಿನದು 0.84 ಆಗಿರುತ್ತದೆ. ಅವಕೆಂಪು ತಾಪಮಾಪಕವು ವ್ಯಕ್ತಿಯ ದೇಹದಿಂದ ಹೊರಸೂಸುವ ಅವಕೆಂಪು ಕಿರಣದ ಕಂಪನಾಂಕ ಮತ್ತು ಮೊತ್ತವನ್ನು ಅಳೆದು ದೇಹದ ಉಷ್ಣತೆ ಎಷ್ಟು ಎಂದು ಲೆಕ್ಕಹಾಕಿ ತಿಳಿಸುತ್ತದೆ.

ಅವಕೆಂಪು ತಾಪಮಾಪಕಗಳನ್ನು ಬಳಸುವಾಗ ಗಮನಿಸಬೇಕಾದ ಒಂದು ಬಹಳ ಮುಖ್ಯ ವಿಷಯ ಎಂದರೆ ತಾಪಮಾನವನ್ನು ಅಳೆಯುವ ವಸ್ತು ಮತ್ತು ತಾಪಮಾಪಕದ ಮಧ್ಯೆ ಇರುವ ಅಥವಾ ಇರಬೇಕಾದ ದೂರ. ಇದು ತುಂಬ ಜಾಸ್ತಿ ಇದ್ದರೆ ಅಳತೆ ಸರಿಯಾಗಿರುವುದಿಲ್ಲ. ಆದುದರಿಂದಲೇ ಅದನ್ನು ಬಳಸುವ ವ್ಯಕ್ತಿ ನಿಮ್ಮ ಹಣೆ ಅಥವಾ ಮುಂಗೈಗೆ ಹತ್ತಿರ ಅಂದರೆ ಸುಮಾರು 5 ರಿಂದ 10 ಸೆ.ಮೀ. ಒಳಗೆ ಹಿಡಿಯುತ್ತಾನೆ. ಈ ದೂರಕ್ಕೂ ಒಂದು ನಿಯಮ ಇದೆ. ಇದು ಮುಖ್ಯವಾಗಿ ಉಷ್ಣತೆಯನ್ನು ಅಳೆಯಬೇಕಾದ ವಸ್ತುವಿನ ಮೃಲ್ಮೈಯ ವ್ಯಾಸವನ್ನು (ಗಾತ್ರವನ್ನು) ಹೊಂದಿಕೊಂಡಿದೆ. ಈ ದೂರ ಮತ್ತು ವ್ಯಾಸದ ಅನುಪಾತ ಬೇರೆ ಬೇರೆ ಸಂಖ್ಯೆಗಳಲ್ಲಿ ದೊರೆಯುತ್ತದೆ. ಉದಾಹರಣೆಗೆ ಈ ಅನುಪಾತ 10:1 ಇದೆ ಎಂದಾದಲ್ಲಿ 1 ಸೆ.ಮೀ. ವ್ಯಾಸದ ಮೇಲ್ಮೈಯ ತಾಪಮಾನವನ್ನು ನಿಖರವಾಗಿ ಅಳೆಯಲು 10 ಸೆ.ಮೀ. ಒಳಗಡೆ ಇರತಕ್ಕದ್ದು. ಈ ವ್ಯಾಸ ಸುಮಾರು ಅರ್ಧ ಸೆ.ಮೀ.ನಷ್ಟು (5 ಮಿ.ಮೀ.) ಎಂದು ಇಟ್ಟುಕೊಳ್ಳೋಣ. ಅದರಂತೆ ಸುಮಾರು 5 ಸೆ.ಮೀ. ಒಳಗಿನ ದೂರದಲ್ಲಿ ತಾಪಮಾಪಕವನ್ನು ಹಿಡಿಯಬೇಕು. ಅದು ಯಾಕೆಂದರೆ ಇಂತಹ ತಾಪಮಾಪಕಗಳನ್ನು ಈ ಅನುಪಾತದಲ್ಲಿ ತಯಾರಿಸಿರುತ್ತಾರೆ.

ಈ ತಾಪಮಾಪಕಗಳಲ್ಲಿ  ಅದರ ಹಿಡಿಯ ಭಾಗದಲ್ಲಿ ಒಂದು ದೊಡ್ಡ ಬಟನ್ ಇರುತ್ತದೆ. ತಾಪಮಾಪಕವನ್ನು ಹಣೆಗೆ ಅಥವಾ ಮುಂಗೈಗೆ ತೋರಿಸಿ ಆ ಬಟನ್ ಒತ್ತಿದಾಗ ಕೆಂಪು ಬೆಳಕು ಹೊರಬರುತ್ತದೆ. ಇದು ತಾಪಮಾಪಕವು ಯಾವ ಸ್ಥಳದ ಉಷ್ಣತೆಯನ್ನು ಅಳತೆ ಮಾಡುತ್ತಿದೆ ಎಂದು ನಮಗೆ ತಿಳಿಸಲು ಸಹಾಯಕಾರಿ ಅಷ್ಟೆ. ಆ ಬೆಳಕಿನ ಪ್ರತಿಫಲನದಿಂದಾಗಿ ಉಷ್ಣತೆಯನ್ನು ಅದು ಅಳೆಯುತ್ತಿಲ್ಲ. ಯಾಕೆಂದರೆ ಅದು ಅಳತೆ ಮಾಡುವುದು ಕಣ್ಣಿಗೆ ಕಾಣದ ಅವಕೆಂಪು ಬೆಳಕನ್ನೇ ವಿನಾ ಕಣ್ಣಿಗೆ ಕಾಣುವ ಕೆಂಪು ಬೆಳಕನ್ನಲ್ಲ.

ಅವಕೆಂಪು ತಾಪಮಾಪಕ ಹೇಗೆ ಕೆಲಸ ಮಾಡುತ್ತದೆ ಎಂದು ಸ್ಥೂಲವಾಗಿ ವಿವರಿಸಿದ್ದೇನೆ. ತಾಪಮಾಪಕವು ತನ್ನ ಸಂವೇದಕವನ್ನು ತಲುಪುವ ಅವಕೆಂಪು ಬೆಳಕಿನ ಪ್ರಮಾಣವನ್ನು ಅಳೆಯುತ್ತದೆ. ಈ ಬೆಳಕು ಮೂರು ನಮೂನೆಗಳಲ್ಲಿರುತ್ತವೆ. ಮೇಲ್ಮೈಗೆ ಹೊರಗಿನ ಆಕರದಿಂದ ಅಂದರೆ ಸೂರ್ಯನ ಬೆಳಕು, ವಿದ್ಯುದ್ದೀಪದ ಬೆಳಕು, ಇತ್ಯಾದಿಗಳಿಂದ ಬಿದ್ದು ಪ್ರತಿಫಲಿತಗೊಂಡುದು ಮೊದಲನೆಯದು. ಪ್ರಸಾರಗೊಂಡುದು ಎರಡನೆಯದು. ಮೂರನೆಯದು ಮುಖ್ಯವಾದುದು. ಅದು ತನ್ನದೇ ದೇಹದ ಉಷ್ಣತೆಯಿಂದಾಗಿ ಹೊರಸೂಸುವ ಅವಕೆಂಪು ಬೆಳಕು. ತಾಪಮಾಪಕವು ಈ ಮೂರನ್ನೂ ಸ್ವೀಕರಿಸಿ ಅವುಗಳನ್ನು ವಿಶ್ಲೇಷಿಸಿ ದೇಹದ ಉಷ್ಣತೆ ಎಷ್ಟು ಎಂದು ತಿಳಿಸುತ್ತದೆ.

ಈ ತಾಪಮಾಕಗಳು ಎಷ್ಟು ನಿಖರ ಎಂಬ ಪ್ರಶ್ನೆ ಮೂಡಬಹುದು. ಇವುಗಳ ಮುಖ್ಯ ಕೆಲಸ ದೇಹವನ್ನು ಸ್ಪರ್ಶಿಸದೆ ಉಷ್ಣತೆಯನ್ನು ಅಳೆಯುವುದು. ಬಾಯಿಯೊಳಗೆ ಇಟ್ಟು ಉಷ್ಣತೆ ಅಳೆಯುವ ಥರ್ಮೋಮೀಟರಿನಷ್ಟು ಇವು ನಿಖರವಲ್ಲ. ನಿಮಗೆ ಜ್ವರವಿದೆಯೇ ಎಂದು ತಿಳಿಯಲು ಮನೆಯಲ್ಲಿ ಬಳಸಲು ಬಾಯಿಯೊಳಗಿಟ್ಟು ಬಳಸುವ ತಾಪಮಾಕಗಳೇ ಉತ್ತಮ.     

ಡಾಯು.ಬಿಪವನಜ

gadgetloka @ gmail . com

  

Be First to Comment

Leave a Reply

Your email address will not be published. Required fields are marked *