ಬೆವರಿಳಿಸಿ ಕೆಲಸ ಮಾಡಿದರೆ ದೊರೆಯುವುದು ವಿದ್ಯುತ್!
ಬೆವರಿಳಿಸಿ ಕೆಲಸ ಮಾಡಿದರೆ ಶ್ರಮಕ್ಕೆ ತಕ್ಕ ಫ್ರತಿಫಲ ದೊರೆಯುವುದು ಎಂಬುದು ನಮ್ಮ ನಂಬಿಕೆ ಮಾತ್ರವಲ್ಲ ವಾಸ್ತವ ಕೂಡ. ಬೆವರಿಳಿಯಬೇಕಾದರೆ ಅತಿಯಾದ ಸೆಕೆಯಿರಬೇಕು ಅಥವಾ ಶಕ್ತಿ ವ್ಯಯಿಸಿ ಕೆಲಸ ಮಾಡಬೇಕು. ಶಕ್ತಿಯಲ್ಲಿ ಹಲವು ನಮೂನೆಗಳಿವೆ. ಉಷ್ಣ, ಬೆಳಕು, ವಿದ್ಯುತ್, ಇವು ನಮಗೆ ಸಾಮಾನ್ಯವಾಗಿ ಪರಿಚಿತವಿರುವ ಶಕ್ತಿಯ ನಮೂನೆಗಳು. ಶಕ್ತಿ ಹಾಕಿ ಕೆಲಸ ಮಾಡಿದರೆ ಬೆವರಿಳಿಯುತ್ತದೆ. ಈಗ ಈ ಬೆವರಿನಿಂದಲೇ ಶಕ್ತಿಯನ್ನು ಪಡೆಯುವ ವಿಧಾನವನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಅವರು ಹಾಗೆ ಆವಿಷ್ಕರಿಸಿರುವುದು ಶಕ್ತಿಯ ಒಂದು ನಮೂನೆಯಾದ ವಿದ್ಯುತ್ ಅನ್ನು. ಸರಳವಾಗಿ ಹೇಳುವುದಾದರೆ ಬೆವರಿನಿಂದ ವಿದ್ಯುತ್ ಅನ್ನು ಪಡೆಯುವ ವಿಧಾನವನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ.
ವಿದ್ಯುತ್ ಅನ್ನು ಪಡೆಯುವ ಹಲವು ವಿಧಾನಗಳಲ್ಲಿ ಬ್ಯಾಟರಿ ಕೂಡ ಒಂದು. ನಮಗೆ ನಿಮಗೆ ಪರಿಚಿತವಾಗಿರುವ ಬ್ಯಾಟರಿಗಳಲ್ಲೂ ಹಲವು ನಮೂನೆಗಳಿವೆ. ಟಾರ್ಚ್, ರೇಡಿಯೋಗಳಲ್ಲಿ ಬಳಸುವ ಒಣ ಬ್ಯಾಟರಿ (dry cell), ಮನೆಗಳಲ್ಲಿ ನಿರಂತರ ವಿದ್ಯುತ್ ಪಡೆಯಲು (UPS) ಬಳಸುವ ಆಸಿಡ್ ಬ್ಯಾಟರಿ, ವಾಚ್‌ಗಳಲ್ಲಿ ಬಳಸುವ ಬಟನ್ ಸೆಲ್, ಹಲವಾರು ಸಾಧನಗಳಲ್ಲಿ ಬಳಸುವ ರಿಚಾರ್ಜೇಬಲ್ ಬ್ಯಾಟರಿ, ಹೀಗೆ ಹಲವಾರು ನಮೂನೆಗಳ ಪರಿಚಯ ನಮಗಿದೆ. ನಿಖರವಾಗಿ ಹೇಳುವುದಾದರೆ (ಬ್ಯಾಟರಿ) ಸೆಲ್ ಎಂದು ಹೇಳಬೇಕು. ಸೆಲ್‌ಗಳ ಜೋಡಣೆಯೇ ಬ್ಯಾಟರಿ. ಬ್ಯಾಟರಿ ಸೆಲ್‌ಗಳ ಮೂಲವಿನ್ಯಾಸ ಸರಳ. ಅದರಲ್ಲಿ ಎರಡು ಇಲೆಕ್ಟ್ರೋಡ್‌ಗಳಿರುತ್ತವೆ. ಮಧ್ಯೆ ಇಲೆಕ್ಟ್ರೋಲೈಟ್ ಇರುತ್ತದೆ. ಇದು ಘನವಾಗಿದ್ದಲ್ಲಿ ಡ್ರೈ ಸೆಲ್ ಎಂದೆನ್ನಿಸುತ್ತದೆ. ಮನೆಗಳಲ್ಲಿ ಯುಪಿಎಸ್‌ಗೆ ಬಳಸುವ ಬ್ಯಾಟರಿಗಳಲ್ಲಿರುವ ಇಲೆಕ್ಟ್ರೋಲೈಟ್ ದ್ರವ ರೂಪದ ಸಲ್ಫ್ಯೂರಿಕ್ ಆಮ್ಲವಾಗಿರುತ್ತದೆ.
ಈಗ ಇನ್ನೊಂದು ವಿಷಯದ ಕಡೆಗೆ ಗಮನ ಹರಿಸೋಣ. ಧರಿಸಬಲ್ಲ ಇಲೆಕ್ಟ್ರಾನಿಕ್ ಸಾಧನಗಳ ಬಗ್ಗೆ ಕೇಳಿರಬಹುದು. ಎಲ್ಲರಿಗೂ ತಿಳಿದಿರುವಂತಹದ್ದು ಕೈಗಡಿಯಾರಗಳು. ಅವುಗಳ ಹೊಸ ಅವತಾರ ಸ್ಮಾರ್ಟ್‌ವಾಚ್‌ಗಳು. ಇನ್ನೊಂದು ನಮೂನೆಯ ಸಾಧನಗಳು ಅಂದರೆ ಆರೋಗ್ಯಪಟ್ಟಿಗಳು. ಇವುಗಳು ದೇಹದ ಆರೋಗ್ಯದ ಕಡೆ ನಿಗಾವಹಿಸುತ್ತಿರುತ್ತವೆ. ಎಷ್ಟು ಹೆಜ್ಜೆ ನಡೆದಿದ್ದೀರಿ, ಎಷ್ಟು ಗಂಟೆ ನಿದ್ರೆ ಮಾಡಿದಿರಿ, ಹೃದಯ ಬಡಿತ ಎಷ್ಟು, ರಕ್ತದಲ್ಲಿಯ ಆಮ್ಲಜನದ ಪರಿಮಾಣ ಎಷ್ಟು, ಇತ್ಯಾದಿ ಮಾಹಿತಿಗಳನ್ನು ಅದು ಸಂಗ್ರಹಿಸುತ್ತಿರುತ್ತದೆ. ಬಹುತೇಕ ಸ್ಮಾರ್ಟ್‌ವಾಚ್‌ಗಳಲ್ಲಿ ಈ ಎಲ್ಲ ಸಂವೇದಕಗಳು ಈಗ ಅಡಕವಾಗಿ ದೊರೆಯುತ್ತಿರುತ್ತವೆ. ಅಂದರೆ ಸ್ಮಾರ್ಟ್‌ವಾಚ್‌ಗಳು ಆರೋಗ್ಯಪಟ್ಟಿಯ ಕೆಲಸವನ್ನೂ ಮಾಡುತ್ತಿರುತ್ತವೆ. ಇವುಗಳಲ್ಲಿ ಸಾಮಾನ್ಯವಾಗಿ ಬ್ಯಾಟರಿ ಇರುತ್ತದೆ ಹಾಗೂ ಬಹುತೇಕ ಸಂದರ್ಭಗಳಲ್ಲಿ ಅದು ರಿಚಾರ್ಜೇಬಲ್ ಬ್ಯಾಟರಿ ಆಗಿರುತ್ತದೆ. ಈ ಸಾಧನಗಳು ಹೆಚ್ಚು ಸಮಯ ಕೆಲಸ ಮಾಡಬೇಕಿದ್ದರೆ ಅದರಲ್ಲಿರುವ ಬ್ಯಾಟರಿಯ ಸಂಗ್ರಹ ಶಕ್ತಿ ಜಾಸ್ತಿ ಇರಬೇಕು. ಸಂಗ್ರಹ ಶಕ್ತಿ ಜಾಸ್ತಿ ಇದ್ದರೆ ಅದರ ಗಾತ್ರವೂ ಜಾಸ್ತಿಯಾಗುತ್ತದೆ. ಚಿಕ್ಕ ಗಾತ್ರದ ಬ್ಯಾಟರಿಯಾಗಿದ್ದು ಹೆಚ್ಚು ಕಾಲ ವಿದ್ಯುತ್ ನೀಡಬೇಕಾಗಿರುವ ಅಗತ್ಯ ಈ ಬ್ಯಾಟರಿಗಳಿವೆ. ಇದಕ್ಕೆ ಒಂದು ಪರಿಹಾರವೆಂದರೆ ಈ ಬ್ಯಾಟರಿ ದೇಹದಲ್ಲಿ ಧರಿಸಿರುವಂತೆಯೇ ಅಲ್ಲಿಯೇ ವಿದ್ಯುತ್ ಅನ್ನು ಉತ್ಪಾದಿಸುವುದು. ಅದು ಹೇಗೆ? ಅದನ್ನು ಈಗ ನೋಡೋಣ.
ಈಗ ಈ ಲೇಖನದ ಶೀರ್ಷಿಕೆಯಲ್ಲಿ ಹೇಳಿರುವ ವಿಷಯಕ್ಕೆ ಬರೋಣ. ವಿಜ್ಞಾನಿಗಳು ಮನುಷ್ಯರ ಬೆವರನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಪ್ರಯತ್ನದಲ್ಲಿ ಜಯಶಾಲಿಯಾಗಿದ್ದಾರೆ. ಇದರ ವಿನ್ಯಾಸ ಮತ್ತು ಕೆಲಸ ಮಾಡುವ ವಿಧಾನವನ್ನು ತಿಳಿಯೋಣ. ತೆಳ್ಳನೆಯ ಪೇಪರ್ ಮಾದರಿಯ ವಸ್ತುವಿನ ಮೇಲೆ ಇಲೆಕ್ಟ್ರೋಡ್‌ಗಳನ್ನು ಮುದ್ರಿಸಿರುತ್ತಾರೆ. ಈ ಇಲೆಕ್ಟ್ರೋಡ್‌ಗಳು ಬೇರೆ ಬೇರೆ ಲೋಹಗಳಿಂದ ಆಗಿರುತ್ತವೆ. ಒಂದು ಉದಾಹರಣೆಯಲ್ಲಿ ಅದು ಬೆಳ್ಳಿ ಮತ್ತು ಮೆಗ್ನೀಸಿಯಂ ಆಗಿದೆ. ಈ ಇಲೆಕ್ಟ್ರೋಡ್‌ಗಳ ಮಧ್ಯೆ ಬೆವರಿನ ದ್ರವ ಹರಿದಾಗ ಇಲೆಕ್ಟ್ರೋಡ್‌ಗಳ ಮೂಲಕ ವಿದ್ಯುತ್ ಉತ್ಪಾದನೆ ಆಗುತ್ತದೆ. ಮನುಷ್ಯರ ಬೆವರಿನಲ್ಲಿ ಹಲವು ಲವಣಗಳು ಮತ್ತು ಗ್ಲೂಕೋಸ್ ಇರುತ್ತದೆ. ಇವುಗಳು ಇಲೆಕ್ಟ್ರೋಡ್‌ಗಳ ಜೊತೆ ಸಂಪರ್ಕಕ್ಕೆ ಬಂದಾಗ ರಾಸಾಯನಿಕ ಕ್ರಿಯೆ ನಡೆದು ಆ ಕ್ರಿಯೆಯಿಂದ ವಿದ್ಯುತ್ ಉತ್ಪಾದನೆ ಆಗುತ್ತದೆ. ಹೆಚ್ಚು ಕೆಲಸ ಮಾಡಿ ಹೆಚ್ಚು ಬೆವರಿಳಿಸಿದರೆ ಹೆಚ್ಚು ವಿದ್ಯುತ್ ಉತ್ಪಾದನೆ ಆಗುತ್ತದೆ. ಇಂತಹ ಬ್ಯಾಟರಿಗಳನ್ನು ಕೈಗೆ ಅಥವಾ ದೇಹದ ಇತರೆ ಯಾವುದಾದರೂ ಭಾಗಕ್ಕೆ ಅಂಟಿಸಿ ಬಳಸಬಹುದು. ಆದರೆ ಈ ಬ್ಯಾಟರಿಗಳು ಕೆಲಸ ಮಾಡಬೇಕಾದರೆ ನೀವು ಕೆಲಸ ಮಾಡುತ್ತಿರಬೇಕು. ಮಲಗಿದಾಗ ಹೆಚ್ಚು ಬೆವರಿಳಿಯುವುದಿಲ್ಲ. ಆಗ ಈ ಬ್ಯಾಟರಿ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವುದಿಲ್ಲ.
ವಿಜ್ಞಾನಿಗಳು ಇನ್ನೂ ಒಂದು ಮಾದರಿಯನ್ನು ತಯಾರಿಸಿದ್ದಾರೆ. ಅದರಲ್ಲಿ ತೆಳ್ಳನೆಯ ಬ್ಯಾಟರಿಯನ್ನು ಬೆರಳಿನ ತುದಿಗೆ ಬ್ಯಾಂಡೇಜ್ ಮಾದರಿಯಲ್ಲಿ ಅಂಟಿಸಲಾಗುತ್ತದೆ. ಇದರಲ್ಲೂ ಇಲೆಕ್ಟ್ರೋಡ್‌ಗಳಿವೆ. ಈ ಇಲೆಕ್ಟ್ರೋಡ್‌ಗಳ ಮಧ್ಯೆ ಬೆವರಿನ ಅಣುಗಳು ಹರಿದಾಗ ವಿದ್ಯುತ್ ಉತ್ಪಾದನೆ ಆಗುತ್ತದೆ. ಈ ಬ್ಯಾಟರಿಯ ವೈಶಿಷ್ಟ್ಯವೇನೆಂದರೆ ಇವುಗಳು ಕೆಲಸ ಮಾಡಲು ತುಂಬ ಬೆವರು ಬೇಡ. ಕಡಿಮೆ ಪ್ರಮಾಣದಲ್ಲಿ ಸಾಕು. ಮನುಷ್ಯರ ದೇಹದಲ್ಲಿ ಹೆಚ್ಚು ಪ್ರಮಾಣದಲ್ಲಿ ಬೆವರಿನ ಅಣುಗಳು ಒಸರುವ ಪ್ರದೇಶ ಅಂದರೆ ಬೆರಳಿನ ತುದಿ. ಮಲಗಿದ್ದಾಗಲೂ ಈ ಪ್ರದೇಶದಲ್ಲಿ ಬೆವರಿನ ಅಣುಗಳು ಸ್ರವಿಸುತ್ತಲೇ ಇರುತ್ತವೆ. ಅಂದರೆ ಒಬ್ಬ ವ್ಯಕ್ತಿ ನಿದ್ರೆ ಮಾಡುತ್ತಿದ್ದಾಗಲೂ ವಿದ್ಯುತ್ ಉತ್ಪಾದನೆ ಆಗುತ್ತದೆ. ಈ ಬ್ಯಾಟರಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲು ನೀವು ಗರಡಿಮನೆಗೆ ಹೋಗಿ ಕಸರತ್ತು ಮಾಡಿ ಬೆವರಿಳಿಸಬೇಕಾಗಿಲ್ಲ. ಈ ಬ್ಯಾಂಡೇಜ್ ಮಾದರಿಯಲ್ಲಿ ಬೆರಳಿನ ತುದಿಗೆ ಅಂಟಿಸಿದ ಬ್ಯಾಟರಿಯನ್ನು ಒತ್ತಿದರೆ ವಿದ್ಯುತ್ ಉತ್ಪಾದನೆ ಜಾಸ್ತಿ ಆಗುತ್ತದೆ. ಅಂದರೆ ಇದನ್ನು ಧರಿಸಿ ಗಣಕದಲ್ಲಿ ಕೆಲಸ ಮಾಡಿದರೆ, ಕೀಲಿಮಣೆಯನ್ನು ಕುಟ್ಟಿದರೆ, ಆಗ ವಿದ್ಯುತ್ ಉತ್ಪಾದನೆ ಹೆಚ್ಚಾಗುತ್ತದೆ.
ಈ ನಮೂನೆಯ ಬ್ಯಾಟರಿಗಳಿಂದ ಉತ್ಪಾದನೆ ಆಗುವ ವಿದ್ಯುತ್‌ನ ಪ್ರಮಾಣ ತುಂಬ ಕಡಿಮೆ. ಇದು ಈಗಿನ ಪರಿಸ್ಥಿತಿ. ಇವು ಇನ್ನೂ ಪ್ರಯೋಗಶಾಲೆಯಲ್ಲೇ ಇವೆ. ಎಲ್ಲ ಆವಿಷ್ಕಾರಗಳಂತೆ ಇದೂ ಮಾರುಕಟ್ಟೆಗೆ ಬರಲು ಕೆಲವು ವರ್ಷಗಳು ಬೇಕಾಗಬಹುದು. ಆ ಸಮಯದಲ್ಲಿ ಇನ್ನೂ ಹಲವು ಹೊಸ ಆವಿಷ್ಕಾರಗಳು, ವಿನ್ಯಾಸಗಳು, ವಿಧಾನಗಳು ಮೂಡಿಬರುವ ಸಾದ್ಯತೆಗಳಿವೆ.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment