ಯೋಜಿತ ಹಾಳಾಗುವಿಕೆ
ಸುಮಾರು ದಶಕಗಳ ಕಾಲ ಹಿಂದೆ ಹೋಗೋಣ. ಒಂದಾನೊಂದು ಕಾಲದಲ್ಲಿ ಬಜಾಜ್ ಚೇತಕ್ ಎಂಬ ಸ್ಕೂಟರ್ ಇತ್ತು. ಅದಕ್ಕೆ ಅತ್ಯಂತ ಹೆಚ್ಚು ಬೇಡಿಕೆ ಇತ್ತು. ಅದನ್ನು ಕೊಳ್ಳಲು ವರ್ಷಗಳ ಕಾಲ ಕಾಯಬೇಕಿತ್ತು. ಅದನ್ನು ಕೊಂಡವರು ಹತ್ತು ಹದಿನೈದು ವರ್ಷ ಬಳಸಿ ನಂತರ ಬಹುತೇಕ ಕೊಂಡ ಬೆಲೆಗೇ ಮಾರುತ್ತಿದ್ದರು. ಆ ಸ್ಕೂಟರ್ ನಂತರವೂ ಹತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿತ್ತು. ಆಗಾಗ ಸರ್ವಿಸ್ ಮಾಡಿಸಿಕೊಂಡಿದ್ದರೆ ಸಾಕಿತ್ತು. ನನ್ನಲ್ಲಿದ್ದ ಬಜಾಜ್ ಸ್ಕೂಟರನ್ನು ನಾನೇ ತಕ್ಕ ಮಟ್ಟಿಗೆ ರಿಪೇರಿ ಮಾಡುತ್ತಿದ್ದೆ. ನಮ್ಮ ಮನೆಯಲ್ಲಿದ್ದ ಹಳೆಯ ಫಿಲಿಪ್ಸ್ ರೇಡಿಯೋ ಸುಮಾರು ಮೂರು ದಶಕಗಳ ಕಾಲ ಕೆಲಸ ಮಾಡಿತ್ತು. ಆಗಾಗ ಬ್ಯಾಟರಿ ಬದಲಿಸಿಕೊಂಡಿದ್ದರೆ ಸಾಕಿತ್ತು.
ಈಗಿನ ಕಾಲಕ್ಕೆ ಬರೋಣ. ನಮ್ಮ ಮನೆಯಲ್ಲಿದ್ದ ಮೈಕ್ರೋವೇವ್ ಅವನ್ ಹಾಳಾಯಿತು. ಕಂಪೆನಿಯ ಗ್ರಾಹಕ ಸೇವೆಗೆ ಫೋನಾಯಿಸಿದೆ. ಅವರ ಕಂಪೆನಿಯ ಪ್ರತಿನಿಧಿ ಬಂದು ಪರಿಶೀಲಿಸಿದ. ಮ್ಯಾಗ್ನೆಟ್ರಾನ್ ಸರಿಯಿದೆ. ಆದರೆ ಅದರ ಪ್ಯಾನಲ್ ಹೋಗಿದೆ ಎಂದ. ಅದನ್ನು ತೆಗೆದುಕೊಂಡು ಹೋಗಿ ನಂತರ ಹೊಸದನ್ನು ತಂದು ಹಾಕುತ್ತೇನೆ ಎಂದ. 2-3 ದಿವಸಗಳ ನಂತರ ಕಂಪೆನಿಯಿಂದ ಫೋನ್ ಬಂತು. ನಮ್ಮ ಉಪಕರಣ ಹಳೆಯದಾಗಿದೆ. ಆದುದರಿಂದ ಈಗ ಅದರ ಪ್ಯಾನೆಲ್ ಲಭ್ಯವಿಲ್ಲ. ಹೊಸ ಮೈಕ್ರೋವೇವ್ ಅವನ್ ಕೊಳ್ಳುವುದಿದ್ದಲ್ಲಿ 10% ರಿಯಾಯಿತಿ ಕೊಡಿಸುತ್ತೇವೆ ಎಂದರು. ನಮ್ಮ ಸಾಧನವನ್ನು ಕೊಂಡುಕೊಂಡು 6 ವರ್ಷ ಆಗಿತ್ತಷ್ಟೆ. ಅಷ್ಟು ಬೇಗ ಅದು ಹಳತಾಗಿ ಅದಕ್ಕೆ ಬೇಕಾದ ಬಿಡಿಭಾಗಗಳು ಲಭ್ಯವಿಲ್ಲ ಎಂದಾಗಿತ್ತು. ಅದೇ ರೀತಿ ನಮ್ಮ ಮನೆಯ ವಾಟರ್ ಫಿಲ್ಟರ್‌ಗೂ ಆಗಿತ್ತು. ಮೂರೇ ವರ್ಷದಲ್ಲಿ ಅದಕ್ಕೆ ಬೇಕಾದ ಕೆಲವು ಬಿಡಿಭಾಗಗಳು ದೊರೆಯದೆ ಹೊಸ ಫಿಲ್ಟರ್ ಖರೀದಿಸಬೇಕಾಗಿ ಬಂದಿತ್ತು.
ನನ್ನಲ್ಲಿ ಒಂದು ಬೋಸ್ ನೋಯಿಸ್ ಕ್ಯಾನ್ಸಲಿಂಗ್ ಹೆಡ್‌ಫೋನ್ ಇದೆ. ಸುಮಾರು ವರ್ಷಗಳ ನಂತರ ಅದರ ಬ್ಯಾಟರಿಯ ಆಯುಸ್ಸು ಮುಗಿಯಿತು. ನೀವು ಗಮನಿಸಿರಬಹುದು. ಇತ್ತೀಚೆಗೆ ದೊರೆಯುವ ಬಹುತೇಕ ಇಂತಹ ಸಾಧನಗಳಲ್ಲಿ ಬ್ಯಾಟರಿ ಸೀಲ್ ಆಗಿರುತ್ತದೆ. ಅದನ್ನು ನಾವು ಬದಲಿಸುವಂತಿಲ್ಲ. ಕಂಪೆನಿಗೆ ಫೋನ್ ಮಾಡಿದರೆ ಆ ಮಾದರಿ ಹಳೆಯದಾಯಿತು. ಅದರ ಬ್ಯಾಟರಿ ಈಗ ಲಭ್ಯವಿಲ್ಲ. ಹೊಸ ಹೆಡ್‌ಫೋನ್ ಕೊಳ್ಳಲು 25% ರಿಯಾಯಿತಿ ಕೊಡುತ್ತೇವೆ ಎಂಬ ಉತ್ತರ ಬಂತು.
ಇದೇಕೆ ಹೀಗೆ?
ಇಂತಹ ಉದಾಹರಣೆಗಳು ನಿಮ್ಮಲ್ಲೂ ಇರಬಹುದು. ಈಗ ಹಿಂದಿನ ಕಾಲದಂತಲ್ಲ. ಕೊಂಡುಕೊಂಡ ವಿದ್ಯುತ್ ಅಥವಾ ಇಲೆಕ್ಟ್ರಾನಿಕ್ ಸಾಧನವು 5 ಅಥವಾ 6 ವರ್ಷ ಮಾತ್ರ ಬಾಳಿಕೆ ಬರುತ್ತದೆ. ನಂತರ ಅದಕ್ಕೆ ಬೇಕಾದ ಬಿಡಿಭಾಗಗಳು ಅಥವಾ ಬ್ಯಾಟರಿ ದೊರೆಯುವುದಿಲ್ಲ. ಒಂದು ನಿರ್ದಿಷ್ಟ ಸಮಯದ ನಂತರ ಉಪಕರಣಗಳು ಕೆಲಸ ಮಾಡದಂತೆ ಆ ಸಾಧನವನ್ನು ಕಂಪೆನಿಯವರೇ ವಿನ್ಯಾಸ ಮಾಡಿರುತ್ತಾರೆ. ಇದಕ್ಕೆ ಕೆಡಲೆಂದೇ ವಿನ್ಯಾಸ ಮಾಡುವುದು ಅಥವಾ ಯೋಜಿತ ಹಾಳಾಗುವಿಕೆ ಎನ್ನಬಹುದು. ಇದನ್ನು ಇಂಗ್ಲಿಷಿನಲ್ಲಿ designed to fail ಅಥವಾ planned obsolescence ಎನ್ನುತ್ತಾರೆ. ಹಲವಾರು ಕಂಪೆನಿಗಳು ಇದನ್ನು ಪಾಲಿಸಿಕೊಂಡು ಬರುತ್ತಿವೆ.
ಯಾಕೆ ಕಂಪೆನಿಗಳು ಈ ರೀತಿ ಮಾಡುತ್ತಿವೆ? ಸ್ವಲ್ಪ ಆಲೋಚಿಸಿ. ನೀವು ಒಂದು ಉಪಕರಣ ತೆಗೆದುಕೊಂಡು ಹದಿನೈದು ಇಪ್ಪತ್ತು ವರ್ಷಗಳ ಕಾಲ ಬಳಸಿದರೆ ಅವರಿಗೆ ಪ್ರತಿ ವರ್ಷ ತಯಾರಿಸುವ ಉಪಕರಣಗಳ ವ್ಯಾಪಾರ ಆಗುವುದು ಹೇಗೆ? ಕೊಂಡುಕೊಂಡ ಸಾಧನವನ್ನೂ ನೀವು ಮತ್ತೆ ಮತ್ತೆ ರಿಪೇರಿ ಮಾಡಿ ಬಳಸಿದರೆ ಹೊಸ ವಸ್ತುಗಳನ್ನು ಕೊಳ್ಳುವವರು ಯಾರು? ಅದಕ್ಕೋಸ್ಕರ ಈ ರೀತಿ ಮಾಡುತ್ತಾರೆ ಎಂದುಕೊಳ್ಳಬಹುದು. ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಇನ್ನೂ ಒಂದು ವಿಷಯವಿದೆ. ಪ್ರತಿ ವರ್ಷ ಹೊಸ ತಂತ್ರಜ್ಞಾನ, ವಿಧಾನಗಳು ಬರುತ್ತಿವೆ. ಹಲವು ಸುಧಾರಣೆಗಳು ಆಗುತ್ತಿವೆ. ನೀವು ನೀಡುವ ಹಣಕ್ಕೂ ನಿಮಗೆ ದೊರೆಯುವ ಸವಲತ್ತುಗಳಿಗೂ ತಾಳೆ ಹಾಕಿದಾಗ ಪ್ರತಿ ವರ್ಷ ಮಾರುಕಟ್ಟೆಯಲ್ಲಿ ದೊರೆಯುವ ಉಪಕರಣದಲ್ಲಿ ಹೆಚ್ಚು ಸವಲತ್ತುಗಳು ದೊರೆಯುತ್ತವೆ ಎನ್ನಬಹುದು. ಇದರಿಂದಾಗಿ ಹಲವು ಜನರು ತಾವಾಗಿಯೇ ಹೊಸದನ್ನು ಕೊಳ್ಳುತ್ತಾರೆ. ಕೆಲವೊಮ್ಮೆ ಹಳೆಯದನ್ನು ಬದಲಾಯಿಸಿ ಹೊಸದನ್ನು ಕೊಳ್ಳುತ್ತಾರೆ. ಕಂಪೆನಿಗಳು ಇದಕ್ಕಾಗಿಯೇ ಏನೇನೋ ಸ್ಕೀಮುಗಳನ್ನು ಘೋಷಿಸಿರುತ್ತಾರೆ. ಒಟ್ಟಾರೆಯಾಗಿ ನೀವು ಹೊಸ ಹೊಸ ಉತ್ಪನ್ನಗಳನ್ನು ಕೊಳ್ಳುತ್ತಿರಬೇಕು. ಹಾಗಿದ್ದರೆ ಮಾತ್ರ ಕಂಪೆನಿಗಳಿಗೆ ಹೆಚ್ಚಿನ ಲಾಭ.
ಈಗೀಗ ದೊರೆಯುತ್ತಿರುವ ಉಪಕರಣಗಳಲ್ಲಿ ರಿಪೇರಿ ಮಾಡುವಂತಹ ಅಂಗಗಳು ಬಹಳ ಕಡಿಮೆ ಇರುತ್ತವೆ. ವಾಶಿಂಗ್ ಮೆಶಿನ್‌ನಲ್ಲಿರುವ ಪ್ಯಾನೆಲ್‌ನಲ್ಲಿ ಒಂದು ಚಿಕ್ಕ ಭಾಗ ಹಾಳಾಗಿದ್ದರೂ ಇಡಿಯ ಪ್ಯಾನೆಲ್ ಬದಲಿಸಬೇಕು. ಇದೇ ನಿಯಮ ಫ್ರಿಜ್, ಮೈಕ್ರೋವೇವ್ ಅವನ್, ವಾಟರ್ ಫಿಲ್ಟರ್ ಇತ್ಯಾದಿಗಳಿಗೆ ಅನ್ವಯಿಸುತ್ತದೆ. ಇಲೆಕ್ಟ್ರಾನಿಕ್ ಸರ್ಕ್ಯುಟ್ ಬೋರ್ಡ್‌ಗಳನ್ನು ಇಡಿಯದಾಗಿ ಬದಲಿಸುತ್ತಾರೆ. ಹಿಂದಿನ ಕಾಲದಲ್ಲಿಯಂತೆ ಅದರಲ್ಲಿರುವ ಚಿಪ್, ಕೆಪಾಸಿಟರ್, ರೆಸಿಸ್ಟರ್, ಇತ್ಯಾದಿ ಬಿಡಿಭಾಗಗಳನ್ನು ಒಂದೊಂದಾಗಿ ಪರೀಕ್ಷಿಸಿ ಹಾಳಾದುದನ್ನು ಬದಲಿಸುವ ಪದ್ಧತಿ ಈಗಿಲ್ಲ. ಆ ಪ್ಯಾನೆಲ್ ದೊರೆಯದಿದ್ದರೆ ಇಡಿಯ ಉಪಕರಣವನ್ನೇ ಬದಲಿಸಬೇಕು.
ಉಪಕರಣಗಳನ್ನು ತಯಾರಿಸುವಾಗ ಇದಕ್ಕೆ ಇಷ್ಟೇ ವರ್ಷ ಆಯುಸ್ಸು. ಇಷ್ಟು ವರ್ಷಗಳಲ್ಲಿ ಇದು ಹಾಳಾಗತಕ್ಕದ್ದು ಎಂಬ ನಿಯಮ ಪ್ರಕಾರವೇ ವಿನ್ಯಾಸ ಮಾಡಿರುತ್ತಾರೆ. ಉದಾಹರಣೆಗೆ ಯಂತ್ರಗಳಲ್ಲಿ ಹೆಚ್ಚು ಕಾಲ ಬಾಳಿಕೆ ಬರುವ ಉಕ್ಕಿನ ಭಾಗಗಳ ಬದಲಿಗೆ ಪಾಲಿಮರ್ ಬಳಸುತ್ತಾರೆ. ತೆಗೆದು ಬದಲಿಸಬಹುದಾದ ಬ್ಯಾಟರಿ ಬದಲಿಗೆ ಸೀಲ್ ಆದ ಬ್ಯಾಟರಿ ಇರುತ್ತದೆ. ಇದನ್ನು ಈಗ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಗಮನಿಸಿರಬಹುದು.
ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳಿಗೆ ಆಗಾಗ ತಂತ್ರಾಂಶದ ಸುಧಾರಿತ ಹೊಸ ಆವೃತ್ತಿ ಬಿಡುಗಡೆ ಮಾಡುತ್ತಿರುತ್ತಾರೆ. ಇದು ಹೊಸ ಸವಲತ್ತುಗಳನ್ನು ನೀಡಲು, ಸುರಕ್ಷೆಯನ್ನು ಸುಧಾರಿಸಲು, ಹೊಸ ವೈರಸ್ ಬಂದರೆ ಅದನ್ನು ತಡೆಯಲು ಇತ್ಯಾದಿ ಕೆಲಸಗಳಿಗಾಗಿ ಆಗಿರುತ್ತದೆ. ಆದರೆ ಕೆಲವು ವರ್ಷಗಳ ನಂತರ ಹಳೆಯ ಫೋನ್‌ಅಥವಾ ಲ್ಯಾಪ್‌ಟಾಪ್‌ಗಳಿಗೆ ಈ ರೀತಿ ತಂತ್ರಾಂಶ ನವೀಕರಣ ನೀಡುವುದನ್ನು ನಿಲ್ಲಿಸುತ್ತಾರೆ. ಕಂಪೆನಿಗೆ ಇದಕ್ಕೆ ವಿವರಣೆ ಕೇಳಿದರೆ ಆ ಉಪಕರಣದ ಆಯುಸ್ಸು ಅಷ್ಟೇ ಎಂಬ ಉತ್ತರ ಬರುತ್ತದೆ.
ಆಪಲ್ ಕಂಪೆನಿಯರು ತಮ್ಮ ಹಳೆಯ ಐಫೋನ್‌ಗಳಿಗೆ ತಂತ್ರಾಂಶದ ನವೀಕರಣದ ಹೆಸರಿನಲ್ಲಿ ಬಳಕೆದಾರರಿಗೆ ಮೋಸ ಮಾಡಿದ ವಿಷಯ ಹೊರಬಂದಿದೆ. ಅವರು ಏನು ಮಾಡುತ್ತಿದ್ದರೆಂದರೆ ಹಳೆಯ ಫೋನ್‌ಗಳಿಗೆ ತಂತ್ರಾಂಶ ನವೀಕರಿಸಿದ ನಂತರ ಅವುಗಳು ನಿಧಾನವಾಗಿ ಕೆಲಸ ಮಾಡುವಂತೆ ಮಾಡಿದ್ದರು. ಇದರಿಂದಾಗಿ ಜನರು ಹೊಸ ಐಫೋನ್ ಕೊಳ್ಳುವಂತೆ ಒತ್ತಡ ಹಾಕುವುದು ಅವರ ಉದ್ದೇಶವಾಗಿತ್ತು.
ಕಂಪೆನಿಗಳ ಇಂತಹ ಕೆಟ್ಟ ವ್ಯಾಪಾರಿ ಬುದ್ಧಿಯ ವಿರುದ್ಧ ವ್ಯವಸ್ಥಿತ ಹೋರಾಟದ ಅಗತ್ಯವಿದೆ. ಸರಕಾರವು ಕೆಲವು ನಿಯಮಗಳನ್ನು ಮಾಡುವ ಅಗತ್ಯವೂ ಇದೆ.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment