ನೀವು ಬಳಸುವ ಅಂತರಜಾಲದಲ್ಲಿ ನಿಮ್ಮ ಕಣ್ಣಿಗೆ ಬೀಳದ ಒಂದು ಭೂಗತ ಜಗತ್ತಿದೆ. ಅದರಲ್ಲಿ ಬಹುತೇಕ ಕ್ರಿಮಿನಲ್ ಚಟುವಟಿಕೆಗಳೇ ನಡೆಯುತ್ತಿವೆ. ಅದು ನಿಮ್ಮ ಮಾಮೂಲಿ ಶೋಧಕ ತಂತ್ರಾಂಶಗಳ ಕಣ್ಣಿಗೆ ಬೀಳುವುದಿಲ್ಲ. ಬನ್ನಿ. ಅಂತರಜಾಲದಲ್ಲಿರುವ ಕತ್ತಲ ಲೋಕವನ್ನು ತಿಳಿಯೋಣ.
ಅಂತರಜಾಲದಲ್ಲಿ ನೀವು ಏನು ಮಾಡಿದರೂ ಗೂಗ್ಲ್‌ಗೆ ಗೊತ್ತಾಗುತ್ತದೆ. ಅಂದರೆ ಬಹುತೇಕ ಎಲ್ಲ ಕೆಲಸಗಳೂ ಅದಕ್ಕೆ ಗೊತ್ತಾಗುತ್ತದೆ. ಅದಕ್ಕೆ ಮಾತ್ರವಲ್ಲ. ಫೇಸ್‌ಬುಕ್ ಕೂಡ ನಿಮ್ಮನ್ನು ಅಂತರಜಾಲದಲ್ಲಿ ಹಿಂಬಾಲಿಸುತ್ತದೆ. ನೀವು ಸಿಗ್ನಲ್‌ಗೆ ಕಾಯುತ್ತಿರುವಾಗ ನಿಮ್ಮ ವಾಹನವನ್ನು ಯಾವುದೋ ಬಾರ್ ಮುಂದೆ ಎರಡು ನಿಮಿಷ ನಿಲ್ಲಿಸಿರುತ್ತೀರಾ. ನಾಳೆ ನಿಮಗೆ ಗೂಗ್ಲ್ ಕೇಳುತ್ತದೆ –“ಆ ಬಾರ್ ಆಂಡ್ ರೆಸ್ಟಾರೆಂಟ್ ಹೇಗಿತ್ತು?” ಎಂದು. ಇದೆಲ್ಲಕ್ಕೂ ಕಾರಣ ಅಂತರಜಾಲದಲ್ಲಿ ನಮ್ಮ ಹೆಜ್ಜೆ ಗುರುತುಗಳು. ಈಗ ಇನ್ನೊಂದು ವಿಚಾರ. ಯಾರಿಗೋ ಯಾರೋ ಬ್ಲಾಕ್‌ಮೈಲ್ ಮಾಡಿರುತ್ತಾರೆ. ಅವರು ಅಂತರಜಾಲದ ಮೂಲಕವೇ ವ್ಯವಹರಿಸಿರುತ್ತಾರೆ. ಅಂತರಜಾಲದ ಮೂಲಕವೇ, ಬಹುತೇಕ ಸಂದರ್ಭಗಳಲ್ಲಿ ಬಿಟ್‌ಕಾಯಿನ್ ಮೂಲಕ, ಹಣ ಕೇಳಿರುತ್ತಾರೆ. ಈಗ ನಿಮಗೆ ಅನುಮಾನ ಬರುವುದಿಲ್ಲವೇ? ಯಾಕೆ ಈ ಕಿಲಾಡಿಗಳ ಹೆಜ್ಜೆಗುರುತುಗಳು ಅಂತರಜಾಲದಲ್ಲಿ ಲಭ್ಯವಿಲ್ಲ? ಅವರೇಕೆ ಪೋಲೀಸರಿಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ? ಯಾಕೆಂದರೆ ಅವರುಗಳು ಬಳಸಿದ್ದು ನಾವು ನೀವು ಬಳಸುವ ಮಾಮೂಲಿ ಅಂತರಜಾಲವಲ್ಲ. ಬದಲಿಗೆ ಅಂತರಜಾಲದಲ್ಲಿರುವ ಒಂದು ಕತ್ತಲ ಲೋಕ. ಏನದು? ಬನ್ನಿ ತಿಳಿಯೋಣ.
ಅಂತರಜಾಲದ ಒಂದು ಪ್ರಮುಖ ಅಂಗ ವಿಶ್ವವ್ಯಾಪಿಜಾಲ (world-wide web, www). ಇದನ್ನೇ ಬಹುತೇಕ ಜನರು ಅಂತರಜಾಲ ಎಂದುಕೊಂಡಿದ್ದಾರೆ. ಇದನ್ನು ಹುಡುಕಲು ಬಳಸುವ ತಂತ್ರಾಂಶ ಶೋಧಕ ತಂತ್ರಾಂಶ. ಇದಕ್ಕೆ ಉತ್ತಮ ಉದಾಹರಣೆ ಗೂಗ್ಲ್. ಅದು ಅಂತರಜಾಲದಲ್ಲಿ ತನ್ನ ಹುಡುಕಾಟಕ್ಕೆ ಕಂಡುಬರುವ ಎಲ್ಲವನ್ನೂ ಹುಡುಕಿ ಮಾಹಿತಿ ನೀಡುತ್ತದೆ. ಇದನ್ನು ನೀವೆಲ್ಲ ಗಮನಿಸಿರುತ್ತೀರಿ. ಆದರೆ ಈ ಶೋಧಕಗಳಿಗೆ ಹುಡುಕಾಟಕ್ಕೆ ಕಂಡುಬರದ ಅಂತರಜಾಲವೊಂದಿದೆ ಅಥವಾ ಅಂತರಜಾಲದ ಭಾಗವೊಂದಿದೆ. ಅದನ್ನು ಬಳಸಲು ಅದಕ್ಕೆಂದೇ ರೂಪಿತವಾದ ತಂತ್ರಾಂಶಗಳು ಬೇಕು. ಈ ಜಾಲವನ್ನು ಇಂಗ್ಲಿಷಿನಲ್ಲಿ dark web ಎನ್ನುತ್ತಾರೆ. ಇದನ್ನೇ ನಾನು ಅಂತರಜಾಲದ ಕತ್ತಲಲೋಕ ಎಂದು ಹೆಸರಿಸಿದ್ದು.
ಡಾರ್ಕ್ ವೆಬ್‌ನಲ್ಲಿ ಹಲವು ಚಿಕ್ಕ ಚಿಕ್ಕ ಖಾಸಾ ಜಾಲಗಳೂ ದೊಡ್ಡ ದೊಡ್ಡ ಜಾಲಗಳೂ ಇರುತ್ತವೆ. ಇದರಲ್ಲಿ ಅಡಕವಾಗಿರುವ ವ್ಯಕ್ತಿಯಿಂದ ವ್ಯಕ್ತಿಗೆ ಸಂಪರ್ಕಗೊಳ್ಳುವ ಜಾಲಕ್ಕೆ ಇಂಗ್ಲಿಷಿನಲ್ಲಿ peer-to-peer network ಎನ್ನುತ್ತಾರೆ. ಇವು ಚಿಕ್ಕ ಜಾಲಗಳು. ದೊಡ್ಡ ಜಾಲಗಳಲ್ಲಿ ಪ್ರಮುಖವಾದ ಒಂದು ಉದಾಹರಣೆ ಟೋರ್. TOR ಎನ್ನುವುದು The Onion Router ಎನ್ನುವುದರ ಹ್ರಸ್ವ ರೂಪ. ಇದು ಮುಕ್ತ ತಂತ್ರಾಂಶಗಳ ಮೂಲಕ ಬಳಕೆದಾರ ಯಾರು ಎನ್ನುವುದನ್ನು ಮರೆಮಾಚಿ ಅನಾಮಿಕವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಜಗತ್ತಿನಾದ್ಯಂತ ಇರುವ, ಬಹುತೇಕ ಶೋಧಕಗಳಿಗೆ ಕಾಣಿಸದ, ಒಂದು ಪ್ರತ್ಯೇಕ ಜಾಲದ ಮೂಲಕ ಇದು ಕೆಲಸ ಮಾಡುತ್ತದೆ. ವ್ಯಕ್ತಿಯ ಗೌಪ್ಯತೆಯನ್ನು ಕಾಪಾಡಲು ಈ ಜಾಲ ಅಸ್ತಿತ್ವಕ್ಕೆ ಬಂತು. ಈ ಜಾಲದ ಮೂಲಕ ಒಂದು ಇಮೈಲ್ ಕಳುಹಿಸಿದರೆ ಆ ಇಮೈಲ್ ಯಾವ ಸ್ಥಳದಿಂದ ಬಂದಿದೆ ಎಂದು ತಿಳಿಯಲು ಸಾಧ್ಯವಿಲ್ಲ. ಇತರೆ ಮಾಮೂಲಿ ಇಮೈಲಾದರೆ ಅದರ ಐ.ಪಿ. ವಿಳಾಸದ ಮೂಲಕ ಅದು ಯಾವ ಸ್ಥಳದಿಂದ ಬಂದಿದೆ ಎಂದು ತಿಳಿಯಬಹುದು. ಡಾರ್ಕ್ ವೆಬ್ ಟೋರ್ ಜಾಲದ ಮೂಲಕ ಮಾತ್ರವಲ್ಲ, ಅದೇ ಮಾದರಿಯ ಇನ್ನೂ ಹಲವು ಜಾಲಗಳನ್ನು ಬಳಸಿಕೊಳ್ಳುತ್ತದೆ.
ಡಾರ್ಕ್ ವೆಬ್ ಪ್ರಾರಂಭವಾದ ಉದ್ದೇಶ ಒಳ್ಳೆಯದಾಗಿದ್ದರೂ ಅದು ಬಹುತೇಕ ಅಪರಾಧ ಚಟುವಟಿಕೆಗಳಿಗೇ ಬಳಕೆಯಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಕಾನೂನು ಪ್ರಕಾರ ಅಪರಾಧವಾಗಿರುವುದು ನಿಜವಾಗಿಯೂ ಅನ್ಯಾಯವಾಗಿರಬೇಕಾಗಿಲ್ಲ. ಹಲವು ದೇಶಗಳಲ್ಲಿ ಬಹಳ ಕಟ್ಟುನಿಟ್ಟಾದ ಸೆನ್ಸಾರ್ ನಿಯಮಗಳಿವೆ. ಅಲ್ಲಿ ಆನ್‌ಲೈನ್ ಸ್ವಾತಂತ್ರ್ಯ ಇಲ್ಲ. ಅಂತಹ ದೇಶಗಳಲ್ಲಿ ಮಾನವ ಹಕ್ಕುಗಳ ಹೋರಾಟಗಾರರು ಈ ಡಾರ್ಕ್ ವೆಬ್ ಅನ್ನು ಬಳಸುತ್ತಾರೆ. ಸಂಶೋಧಕರು 2015ರಲ್ಲಿ ಒಂದು ಸಮೀಕ್ಷೆ ಮಾಡಿದ್ದರು. ಅದರಲ್ಲಿ ಅವರಿಗೆ ಕಂಡು ಬಂದುದೇನೆಂದರೆ ಡಾರ್ಕ್ ವೆಬ್‌ನಲ್ಲಿರುವ ಸುಮಾರು 60% ರಷ್ಟು ಜಾಲತಾಣಗಳು ಕ್ರಿಮಿನಲ್ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ ಎಂದು. 2019ರಲ್ಲಿ ನಡೆಸಿದ ಇನ್ನೊಂದು ಸಂಶೋಧನಾ ಸಮೀಕ್ಷೆಯಲ್ಲಿ ಕಂಡುಬಂದುದೇನೆಂದರೆ ಈ ನಮೂನೆಯ ಚಟುವಟಿಕೆಗಳು 20% ರಷ್ಟು ಹೆಚ್ಚಾಗಿದೆ ಎಂದು. 2023ರಲ್ಲಿ ಅದು ಇನ್ನೂ ಹೆಚ್ಚಾಗಿರುತ್ತದೆ.
ಡಾರ್ಕ್ ವೆಬ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳೇ ಅಧಿಕ. ಕೆಲವು ಉದಾಹರಣೆಗಳು – ಕದ್ದ ಕ್ರೆಡಿಟ್ ಕಾರ್ಡ್ ಮಾಹಿತಿ, ತಂತ್ರಾಂಶಗಳ ಸೀರಿಯಲ್ ನಂಬರ್, ನೆಟ್‌ಫ್ಲಿಕ್ಸ್‌ನಂತಹ ಸೇವೆಗಳ ಲಾಗಿನ್ ಮತ್ತು ಪಾಸ್‌ವರ್ಡ್, ಬ್ಯಾಂಕ್‌ಖಾತೆಗಳ ಲಾಗಿನ್ ಮತ್ತು ಪಾಸ್‌ವರ್ಡ್, ಇತ್ಯಾದಿ. ಬೇರೆಯವರ ಗಣಕ ಮತ್ತು ಗಣಕ ಜಾಲಗಳಿಗೆ ಕನ್ನ ಹಾಕುವ ಪರಿಣತರನ್ನು ಹ್ಯಾಕರುಗಳು ಎನ್ನುತ್ತಾರೆ. ಅಂತಹ ಹ್ಯಾಕರುಗಳ ನೇಮಕಾತಿ ನಡೆಯುವುದು ಡಾರ್ಕ್ ವೆಬ್ ಮೂಲಕ.
ಡಾರ್ಕ್ ವೆಬ್‌ನಲ್ಲಿ ಎಲ್ಲವೂ ಕಾನೂನುಬಾಹಿರವಾಗಿಯೇ ಇರಬೇಕಾಗಿಲ್ಲ. ಆನ್‌ಲೈನ್ ಮೂಲಕ ಚದುರಂಗ ಆಡುವ ಒಂದು ಜಾಲವು ಡಾರ್ಕ್ ವೆಬ್‌ನಲ್ಲೂ ಇದೆ. ಅದು ಕೆಟ್ಟ ಕೆಲಸವೇನಲ್ಲ. ಸಂಪೂರ್ಣ ಅನಾಮಧೇಯ ವ್ಯಕ್ತಿಯ ಜೊತೆ ಅನ್‌ಲೈನ್ ಮೂಲಕ ಚದುರಂಗದ ಆಟವನ್ನು ಈ ಜಾಲದ ಮೂಲಕ ಆಡಬಹುದು.
ಜನಸಾಮಾನ್ಯರು ಡಾರ್ಕ್ ವೆಬ್ ಬಳಸುವ ಸಾಧ್ಯತೆ ತುಂಬ ಕಡಿಮೆ. ಅಗತ್ಯವೂ ಇಲ್ಲ. ಡಾರ್ಕ್ ವೆಬ್‌ನಲ್ಲಿ ಕ್ರಿಮಿನಲ್ ಚಟುವಟಿಕೆಗಳೇ ಅಧಿಕ ಎಂದೆನಲ್ಲ. ಆದುದರಿಂದ ಅದನ್ನು ಬಳಸುವವರಲ್ಲಿ ಕ್ರಿಮಿನಲ್‌ಗಳೇ ಅಧಿಕ. ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಲುಗೊಳ್ಳುವವರು ತಮ್ಮೊಳಗೆ ಮಾಹಿತಿ ವಿನಿಮಯಕ್ಕೆ ಡಾರ್ಕ್ ವೆಬ್ ಬಳಸುತ್ತಾರೆ. ಶಸ್ತ್ರಾಸ್ತ್ರ ಖರೀದಿಗೂ ಇದೇ ಡಾರ್ಕ್ ವೆಬ್‌ನ ಬಳಕೆ ಆಗುತ್ತದೆ. ಬಹುತೇಕ ದೇಶಗಳ ರಕ್ಷಣಾಧಿಕಾರಿಗಳಿಗೆ, ಮಿಲಿಟರಿಯವರಿಗೆ, ತನಿಖಾ ಸಂಸ್ಥೆಗಳಿಗೆ ಇಲ್ಲಿಯ ವ್ಯವಹಾರ ಕಂಡುಬರುವುದಿಲ್ಲ. ಆದುದರಿಂದ ಅಂತಹ ಭೂಗತ ಚಟುವಟಿಕೆಗಳು ಈ ಡಾರ್ಕ್ ವೆಬ್ ಮೂಲಕ ನಡೆಯುತ್ತವೆ.
ಡಾರ್ಕ್ ವೆಬ್ ಬ್ಲಾಕ್‌ಮೈಲ್‌ಗೂ ಬಳಕೆಯಾಗುತ್ತದೆ. ಅದರ ಮೂಲಕ ಭಯೋತ್ಪಾದಕರು ಹಣ ಕೇಳುತ್ತಾರೆ. ಅವರುಗಳು ಸಾಮಾನ್ಯವಾಗಿ ಬಿಟ್‌ಕಾಯಿನ್ ಅಥವಾ ಅದೇ ಮಾದರಿಯ ಗೂಢನಾಣ್ಯಗಳ ಮೂಲಕ ಹಣ ಕೇಳುತ್ತಾರೆ. ಡಾರ್ಕ್ ವೆಬ್‌ನ ಮತ್ತೊಂದು ಪ್ರಮುಖ ಬಳಕೆ ಅಂದರೆ ಅಶ್ಲೀಲ ಸಿನಿಮಾ ಅರ್ಥಾತ್ ಪೋರ್ನ್.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment