ಮಾಹಿತಿ ಹೆದ್ದಾರಿಯ ಕಿಡಿಗೇಡಿಗಳು
ಕಳೆದು ಎರಡು ಸಂಚಿಕೆಗಳಲ್ಲಿ ಅಂತರಜಾಲದ ಮೂಲಕ ಮಾಡುವ ಎರಡು ಅಪರಾಧಗಳ ಬಗ್ಗೆ ತಿಳಿದುಕೊಂಡೆವು. ಅಂತರಜಾಲ, ಗಣಕ ಮತ್ತು ಇತರೆ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿ ಮಾಡುವ ಅಪರಾಧಗಳ ಪಟ್ಟಿ ಬಲು ದೊಡ್ಡದಿದೆ. ಇಂತಹ ಅಪರಾಧಗಳಿಗೆ ಇಂಗ್ಲಿಷಿನಲ್ಲಿ cyber crime ಎಂಬ ಹೆಸರಿದೆ. ನಾವು ಇದಕ್ಕೆ ಕನ್ನಡದಲ್ಲಿ ಸೈಬರ್ ಅಪರಾಧ, ಜಾಲ ಅಪರಾಧ ಅಥವಾ ಜಾಲಾಪರಾಧ ಎನ್ನಬಹುದು. ಇದು ತುಂಬ ದೊಡ್ಡ ವಿಷಯ. ಇದರಲ್ಲಿ ಹಲವು ವಿಭಾಗಗಳಿವೆ. ಕೆಲವು ಜಾಲಾಪರಾಧಗಳ ಬಗ್ಗೆ ಚುಟುಕಾಗಿ ತಿಳಿದುಕೊಳ್ಳೋಣ.
ಜಾಲಾಪರಾಧಗಳಲ್ಲಿ ಪ್ರಮುಖವಾದುದು ಹಣಕಾಸಿಗೆ ಸಂಬಂಧಿಸಿದ್ದು. ಫಿಶಿಂಗ್ ಮೂಲಕ ಹೇಗೆ ಮೋಸ ಮಾಡಿ ಹಣ ದೋಚುತ್ತಾರೆ ಎಂಬುದನ್ನು ಹಿಂದಿನ ಸಂಚಿಕೆಯಲ್ಲಿ ವಿವರಿಸಲಾಗಿತ್ತು. ನೈಜೀರಿಯನ್ ಸ್ಕ್ಯಾಮ್ ಎಂಬುದು ಸ್ವಲ್ಪ ವರ್ಷಗಳ ಹಿಂದೆ ಕುಖ್ಯಾತವಾಗಿತ್ತು. ಇದನ್ನು ಇಮೈಲ್ ಮೂಲಕ ಮಾಡುತ್ತಾರೆ. “ನಾನು ನೈಜೀರಿಯದ ಪದಚ್ಯುತ ಸರ್ವಾಧಿಕಾರಿಯ ಮೊಮ್ಮಗಳು. ನನಗೆ ಹದಿನಾರು ವರ್ಷ ಪ್ರಾಯ. ನನ್ನ ಹೆಸರಿನಲ್ಲಿ ಮಿಲಿಯಗಟ್ಟಳೆ ಹಣ ಇದೆ. ಅದನ್ನು ದೇಶದ ಹೊರಗೆ ಸ್ಥಳಾಂತರಿಸಬೇಕಾಗಿದೆ. ಅಂತರಜಾಲದಲ್ಲಿ ಹುಡುಕಾಡಿದಾಗ ನೀವು ತುಂಬ ಪ್ರಾಮಾಣಿಕ ವ್ಯಕ್ತಿ ಎಂದು ತಿಳಿದುಬಂತು. ಆದುದರಿಂದ ನಿಮ್ಮ ಸಹಾಯ ಕೇಳುತ್ತಿದ್ದೇನೆ. ಹಣವನ್ನು ವರ್ಗಾಯಯಿಸಲು ನಿಮ್ಮ ಬ್ಯಾಂಕ್ ಖಾತೆ ವಿವರ ನೀಡಿ. ಮೊದಲಿಗೆ ವರ್ಗಾವಣೆಯ ಪ್ರಕ್ರಿಯೆಗೆ ಸ್ವಲ್ಪ ಫೀಸ್ ನೀಡಬೇಕು. ನಂತರ ಆ ಹಣ ವಾಪಾಸು ಬರುತ್ತದೆ.” ಎಂಬ ಒಕ್ಕಣೆಯ ಇಮೈಲ್ ಬರುತ್ತದೆ. ಇದನ್ನು ನಂಬಿ ಕೆಲವರು ಹಣ ಕಳೆದುಕೊಂಡಿದ್ದಾರೆ.
ಕೆಲವರಿಗೆ “ನಾನು ನಿಮ್ಮ ಬ್ಯಾಂಕಿನಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಆನ್‌ಲೈನ್ ಬ್ಯಾಂಕಿಂಗ್ ಖಾತೆಯನ್ನು ರಿಸೆಟ್ ಮಾಡುತ್ತಿದ್ದೇವೆ. ನಿಮ್ಮ ಫೋನಿಗೆ ಒಂದು ಓಟಿಪಿ ಬರುತ್ತದೆ. ಅದನ್ನು ನನಗೆ ಹೇಳಿ” ಎಂದು ಫೋನ್ ಬರುತ್ತದೆ. ಅವರ ಮಾತನ್ನು ನಂಬಿ ನಿಮ್ಮ ಫೋನಿಗೆ ಬಂದ ಓಟಿಪಿಯನ್ನು ಅವರಿಗೆ ಹೇಳಿದರೆ ನಿಮ್ಮ ಖಾತೆಯಿಂದ ಹಣ ಹೋಗಿರುತ್ತದೆ. ಇದೇ ರೀತಿ, “ನಾನು ಇನ್‌ಕಂಟ್ಯಾಕ್ಸ್ ವಿಭಾಗದಿಂದ ಫೊನ್ ಮಾಡುತ್ತಿದ್ದೇನೆ. ನಿಮ್ಮ ಫೋನಿಗೆ ಬಂದ ಓಟಿಪಿ ಹೇಳಿ” ಎಂದೂ ಕರೆಗಳು ಬರುತ್ತವೆ. ನೀವು ತೆಗೆದುಕೊಳ್ಳಬೇಕಾದ ಎಚ್ಚರಿಕೆಯೇನೆಂದರೆ ಯಾರೇ ಯಾವ ರೀತಿ ಕೇಳಿದರೂ ಫೋನಿಗೆ ಬಂದ ಓಟಿಪಿ ಸಂಖ್ಯೆಯನ್ನು ಯಾರಿಗೂ ಯಾವುದೇ ಕಾರಣಕ್ಕೂ ಹೇಳಬಾರದು. ಜೊತೆಗೆ ನಿಮ್ಮ ಖಾತೆಗೆ ಕಳ್ಳರು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಕೊಂಡು ಕೂಡಲೇ ನಿಮ್ಮ ಪಾಸ್‌ವರ್ಡ್ ಅನ್ನು ಬದಲಿಸಬೇಕು.
ಅಂತರಜಾಲದ ಮೂಲಕ ಸುಲಿಗೆ ಮಾಡುವುದನ್ನು cyber extortion ಎನ್ನುತ್ತಾರೆ. ಇದನ್ನು ಸೈಬರ್ ಸುಲಿಗೆ ಅಥವಾ ಜಾಲಸುಲಿಗೆ ಎನ್ನಬಹುದು. ಇದರಲ್ಲೂ ಹಲವು ವಿಧಾನಗಳಿವೆ. ನೀವು ಒಂದು ಕಂಪೆನಿ ನಡೆಸುವವರಾಗಿದ್ದು ನಿಮ್ಮ ಕಂಪೆನಿಯ ಸರ್ವರ್‌ನಲ್ಲಿ ಅತಿ ಮುಖ್ಯ ಮಾಹಿತಿಗಳಿದ್ದಲ್ಲಿ ಅಂತರಜಾಲದ ಮೂಲಕ ಸರ್ವರ್‌ಗೆ ದಾಳಿ ಇಡುತ್ತಾರೆ. ಸರ್ವರ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ನಂತರ ಇಂತಿಷ್ಟು ಹಣ ನೀಡಿದರೆ ಮಾತ್ರ ಸರ್ವರ್‌ನಿಯಂತ್ರಣವನ್ನು ಅನ್ನು ವಾಪಾಸು ನೀಡುತ್ತೇವೆ ಎಂದು ಬ್ಲಾಕ್‌ಮೈಲ್ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಸುಲಿಗೆ ಮಾಡುವವರು ಬಿಟ್‌ಕಾಯಿನ್ ಮೂಲಕ ಹಣ ಕೇಳುತ್ತಾರೆ.
ಸರ್ವರ್ ಮತ್ತು ಗಣಕಜಾಲಗಳಿಗೆ ದಾಳಿ ಇಡುವುದು ಜಾಲಾಪರಾಧಗಳಲ್ಲೊಂದು ನಮೂನೆ. ಜಾಲತಾಣಗಳು ಇರುವುದು ಅಂತರಜಾಲಕ್ಕೆ ಜೋಡಿಸಲ್ಪಟ್ಟ ಯಾವುದೋ ಒಂದು ಸರ್ವರ್‌ನಲ್ಲಿ. ಈ ಸರ್ವರ್‌ಗೆ ಕಿಡಿಗೇಡಿಗಳು ದಾಳಿ ಇಡುತ್ತಾರೆ. ಇದರಲ್ಲೂ ಹಲವು ನಮೂನೆಗಳಿವೆ. ಸರ್ವರ್‌ಅನ್ನು ಸುಪರ್ದಿಗೆ ತೆಗೆದುಕೊಂಡು ಜಾಲತಾಣವನ್ನು ಕೆಡಿಸಿ ಅದರಲ್ಲಿ ತಮ್ಮದೇ ಪ್ರಚಾರವನ್ನು ಹಾಕುವುದು ಒಂದು ವಿಧ. ಇದನ್ನು ಸಾಮಾನ್ಯವಾಗಿ ಸರಕಾರಗಳ ಜಾಲತಾಣಗಳಿಗೆ ಮಾಡುತ್ತಾರೆ. ಉದಾಹರಣೆಗೆ ಭಾರತ ಸರಕಾರದ ಯಾವುದೋ ಒಂದು ಇಲಾಖೆಯ ಜಾಲತಾಣಕ್ಕೆ ಪಾಕಿಸ್ತಾನಿಗಳು ನುಗ್ಗಿ ಕೆಡಿಸುವುದು. ಇಂತಹವರಿಗೆ ಹ್ಯಾಕರ್‌ಗಳು ಎನ್ನುತ್ತಾರೆ. ಒಂದು ಸರ್ವರ್‌ಗೆ ಏಕಕಾಲದಲ್ಲಿ ಲಕ್ಷಗಟ್ಟಲೆಯಲ್ಲಿ ಭೇಟಿ ನೀಡಿದರೆ ಕೆಲವು ಸರ್ವರ್‌ಗಳು ಸುಸ್ತಾಗಿ ಪ್ರತಿಕ್ರಿಯೆ ನೀಡದೆ ಸ್ಥಬ್ಧವಾಗುತ್ತವೆ. ಇಂತಹ ದಾಳಿಯನ್ನು ಒಂದೇ ಗಣಕದಿಂದ ಮಾಡಲು ಆಗುವುದಿಲ್ಲ. ಅಥವಾ ಹಾಗೆ ಮಾಡಿದರೆ ಸರ್ವರ್‌ಗೆ ಗೊತ್ತಾಗಿ ಅದನ್ನು ಸ್ವೀಕರಿಸುವುದೂ ಇಲ್ಲ. ಅದಕ್ಕಾಗಿ ಪ್ರಪಂಚದ ಹಲವು ಗಣಕಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಎಲ್ಲ ಗಣಕಗಳಿಂದ ಸರ್ವರ್‌ಗೆ ಏಕಕಾಲದಲ್ಲಿ ದಾಳಿ ಇಡುತ್ತಾರೆ. ಈ ರೀತಿ ದಾಳಿ ಇಡುವುದಕ್ಕೆ distributed denial of service ಎನ್ನುತ್ತಾರೆ. ನಿಮ್ಮ ಗಣಕವನ್ನೂ ನಿಮಗೆ ಗೊತ್ತಿಲ್ಲದೆ ಹ್ಯಾಕರ್‌ಗಳು ಇಂತಹ ದಾಳಿಗೆ ಬಳಸಿಕೊಂಡಿರಬಹುದು!
ಕೆಲವರಿಗೆ ವಾಟ್ಸ್‌ಆಪ್‌ನಲ್ಲಿ ಪರಿಚಯವೇ ಇಲ್ಲದವರಿಂದ ವಿಡಿಯೋ ಕರೆ ಬರುತ್ತದೆ. ಮುಗ್ಧರಾದ ಕೆಲವರು ಇಂತಹ ಕರೆಯನ್ನು ಸ್ವೀಕರಿಸುತ್ತಾರೆ. ವಿಡಿಯೋ ಕರೆಯಲ್ಲಿ ಮಾತನಾಡುವಾಗ ಸಾಮಾನ್ಯವಾಗಿ ಪರದೆ ಎರಡು ಭಾಗವಾಗಿ ಮೇಲಿನ ಭಾಗದಲ್ಲಿ ಕರೆ ಮಾಡಿದ ವ್ಯಕ್ತಿ ಮತ್ತು ಕೆಳಗಿನ ಭಾಗದಲ್ಲಿ ನಿಮ್ಮ ಮುಖ ಕಾಣಿಸುತ್ತದೆ. ಕರೆ ಮಾಡಿದ ವ್ಯಕ್ತಿ ಏನೇನೋ ಮಾತನಾಡಿ ನಂತರ ಕ್ಷಮಿಸಿ ನಾನು ಮಾತನಾಡಬೇಕಾದ ವ್ಯಕ್ತಿ ನೀವಲ್ಲ ಎಂದು ಕರೆ ಕತ್ತರಿಸಬಹುದು. ಇನ್ನೂ ಕೆಲವು ಸಂದರ್ಭಗಳಲ್ಲಿ ಗಂಡಸರಿಗೆ ಯಾವುದೋ ಹೆಣ್ಣು ಕರೆ ಮಾಡಿ ರಮ್ಯವಾಗಿ ಮಾತನಾಡಿ ಗಾಳ ಹಾಕುವುದೂ ಇದೆ. ಇವರೂ ರಮ್ಯವಾಗಿ ಮಾತನಾಡಿದರೆ ಮುಗಿಯಿತು. ಅವರು ಕರೆಯ ವಿಡಿಯೋ ರೆಕಾರ್ಡ್ ಮಾಡಿಟ್ಟುಕೊಂಡಿರುತ್ತಾರೆ. ನಂತರ ಆ ವಿಡಿಯೋವನ್ನು ಎಡಿಟ್ ಮಾಡಿ ನಿಮ್ಮ ಮುಖಕ್ಕೆ ಬೇರೆ ಯಾವುದೂ ನಗ್ನ ದೇಹವನ್ನು ಜೋಡಿಸಿ ವಿಡಿಯೋ ತಯಾರಿಸಿ ಅದನ್ನು ನಿಮಗೆ ಕಳುಹಿಸಿ ಬ್ಲಾಕ್‌ಮೈಲ್ ಮಾಡಿ ಹಣ ಕೇಳುತ್ತಾರೆ. ಮರ್ಯಾದೆಗೆ ಅಂಜಿ ಹಣ ನೀಡಿ ಮೋಸಹೋದವರು ತುಂಬ ಮಂದಿ ಇದ್ದಾರೆ. ಇಂತಹವುಗಳಿಂದ ಮೋಸಹೋಗದಿರಲು ಸುಲಭ ಮಾರ್ಗವೆಂದರೆ ಪರಿಚಯವಿಲ್ಲದವರಿಂದ ವಿಡಿಯೋ ಕರೆ ಬಂದರೆ ಸ್ವೀಕರಿಸಬಾರದು.
ಜಾಲಾಪರಾಧಗಳಲ್ಲಿ ಇನ್ನೂ ಹಲವು ನಮೂನೆಗಳಿವೆ.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment