ಬಹ್ರೈನ್: "ಗುರು ಸೇವಾ ಸಮಿತಿ"ಯ ಎರಡನೆಯ ವಾರ್ಷಿಕೋತ್ಸವು "ರಮದ ಪ್ಯಾಲೆಸ್" ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು. ಬಹ್ರೈನಲ್ಲಿ ಭಾರತದ ರಾಯಭಾರಿಯಾಗಿರುವ ಶ್ರೀ ಬಾಲಕೃಷ್ಣ ಶೆಟ್ಟಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಸಮಾರಂಭವನ್ನು ಉಧ್ಘಾಟಿಸಿ, ಸಮಿತಿಯು ಹೊರ ತಂದ ಪ್ರಥಮ ಸ್ಮರಣ ಸಂಚಿಕೆ "ತುಡಾರ್ ೨೦೦೫" ಇದರ ಬಿಡುಗಡೆಗೊಳಿಸಿದರು. ಅವರು ತಮ್ಮ ಭಾಷಣದಲ್ಲಿ ಸಮಿತಿಯು ಕಳೆದೆರಡು ವರುಷಗಳಲ್ಲಿ ನಡೆಸಿದ ಸಾಧನೆ ಮತ್ತು ಚಟುವಟಿಕೆಗಳನ್ನು ಕೊಂಡಾಡಿದರು. ವಿಶೇಷ ಅತಿಥಿಗಳಾಗಿ ಆಹ್ವಾನಿತರಾದ ಖ್ಯಾತ ನಾಟಕಕಾರ, ನಿರ್ದೇಶಕ, ಶ್ರೀ ಸದಾನಂದ ಸುವರ್ಣ ಆವರು "ಶ್ರೀ ನಾರಾಯಣ ಗುರು" ಸಾಕ್ಷ್ಯ ಚಿತ್ರದ ವಿಡಿಯೊ ಕ್ಯಾಸೆಟ್ ಬಿಡುಗಡೆ ಮಾಡಿದರು. ಶ್ರೀ ಸದಾನಂದ ಸುವರ್ಣ ಅವರನ್ನು ಭಾರತದ ರಾಯಭಾರಿ ಶ್ರೀ ಶೆಟ್ಟಿಯವರು ಹಾಗು ಇನ್ನೋರ್ವ ಅತಿಥಿ ಕರ್ನಾಟಕದ ಖ್ಯಾತ ಸಾಂಸ್ಕೃತಿಕ ಮತ್ತು ಸಂಗೀತ ಕಲಾವಿದ ಶ್ರೀ ತೋನ್ಸೆ ಫುಶ್ಕಲ್ ಕುಮಾರ್ ಅವರನ್ನು ಬೆಹರಿನ ಶ್ರೀ ನಾರಾಯಣ ಕಲ್ಚರಲ್ ಸೊಸೈಟಿಯ ಮುಖ್ಯಸ್ಥರಾದ ಶ್ರೀ ಎನ್. ಓ. ರಾಜನ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅತಿಥಿಗಳು ಸಮಿತಿಯು ನಡೆಸುತ್ತಿರುವ ಕಾರ್ಯವನ್ನು ಪ್ರಶಂಶಿಸಿದರು. ಶ್ರೀ ಸುವರ್ಣ ಹಾಗು ಶ್ರೀ ಪುಶ್ಕಲ್ ಅವರನ್ನು ಶ್ರೀಮತಿ ಸುನೀತಾ ಜಯಕುಮಾರ್ ಮತ್ತು ಶ್ರೀಮತಿ ಯಶೋದ ಎಸ್. ಪೂಜಾರಿ ಅನುಕ್ರಮವಾಗಿ ಸಭೆಗೆ ಪರಿಚಯಸಿದರು. ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ವಿಶ್ವನಾಥ ಅಮಿನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ಸ್ವಾಗತ ಭಾಷಣ ಮಾಡಿ, ಸಮಿತಿಯ ಏಳಿಗೆಗಾಗಿ ದುಡಿದ ಪ್ರತಿಯೊಬ್ಬ ಸದಸ್ಯರಿಗೂ ಆಡಳಿತ ಮಂಡಳಿಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು. ಸಮಾರಂಭದ ಯಶಸ್ಸಿಗೆ ಪ್ರಾಯೋಜಕರಾಗಿ, ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದವರೆಲ್ಲರಿಗೂ ಸಮಿತಿಯ ಪರವಾಗಿ ವಂದನೆಗಳನ್ನು ಸಲ್ಲಿಸಿದರು. ವೇದಿಕೆಯಲ್ಲಿ ಸಮಿತಿಯ ಉಪಾಧ್ಯಕ್ಷ ಶ್ರೀ ಕೃಷ್ಣ ಸಿ. ಸುವರ್ಣ ಮುಂಬಯಿ, ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ಎಸ್. ಎಸ್. ಸಾಲ್ಯನ್ ಕಲ್ಲಡ್ಕ ಉಪಸ್ಥಿತರಿದ್ದರು.