ಗ್ಯಾಜೆಟ್ ಲೋಕ – ೦೨೮ (ಜುಲೈ ೧೨, ೨೦೧೨)

ಎಲ್ಲ ಮಾಡಬಲ್ಲ ಅಗ್ಗದ ಫೋನ್ ನೋಕಿಯ ಸಿ೨-೦೦

 

ಅತ್ಯಂತ ಕಡಿಮೆ ಬೆಲೆಯಲ್ಲಿ ನೀವು ನಾವು ಆಶಿಸುವ ಬಹುತೇಕ ಎಲ್ಲ ಗುಣವೈಶಿಷ್ಟ್ಯಗಳನ್ನು ಒಳಗೊಂಡ ಫೋನ್ ನೋಕಿಯ ಸಿ೨-೦೦. ಈ ಸಲ ಅದರ ಗುಣಾವಗುಣಗಳನ್ನು ಪರಿಶೀಲಿಸೋಣ.

 

ಫೋನ್ ಇಲ್ಲದವರ‍್ಯಾರು? ಫೋನ್ ಯಾರಿಗೆ ಬೇಡ ಹೇಳಿ? ಎಲ್ಲರಿಗೂ ಬೇಕು ಫೋನ್. ಫೋನ್ ಅಂದರೆ ಮಾಮೂಲಿ ಸ್ಥಿರವಾಣಿ ಅಲ್ಲ, ನಾನು ಇಲ್ಲಿ ಹೇಳಹೊರಟಿರುವುದು ಚರವಾಣಿ ಅರ್ಥಾತ್ ಮೊಬೈಲ್ ಫೋನ್ ಬಗ್ಗೆ. ಫೋನಂತೂ ಎಲ್ಲರಿಗೂ ಬೇಕು. ಅದಕ್ಕೆ ಸರಿಯಾಗಿ ಹಲವಾರು ಟೆಲಿಫೋನ್ ಕಂಪೆನಿಗಳವರು ಏನೇನೋ ಸ್ಕೀಂಗಳನ್ನು ಘೋಷಿಸುತ್ತಲೇ ಇರುತ್ತವೆ. ಒಂದು ರಾತ್ರಿ ಮಾತನಾಡಲು, ಹಗಲು ಮಾತನಾಡಲು ಮತ್ತೊಂದು, ಕರ್ನಾಟಕದ ಒಳಗೆ ಮಾತನಾಡಲೊಂದು, ಕುಟುಂಬದವರೊಂದಿಗೆ ಮಾತನಾಡಲು ಇನ್ನೊಂದು -ಹೀಗೆ ನಿಮ್ಮ ಕೈಯಲ್ಲಿ ಅಥವಾ ಕಿಸೆಯಲ್ಲಿ ಇರುವ ಸಿಮ್ ಕಾರ್ಡ್‌ಗಳ ಸಂಖ್ಯೆಯೂ ಒಂದಕ್ಕಿಂತ ಹೆಚ್ಚು. ಅಂದರೆ ನಿಮಗೆ ಒಂದಕ್ಕಿಂತ ಹೆಚ್ಚು ಫೋನ್‌ಗಳು ಬೇಕು ಎಂದಾಯಿತು. ಸಾಮಾನ್ಯವಾಗಿ ಎರಡು ಸಿಮ್ ಕಾರ್ಡ್ ಬಳಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕೈಯಲ್ಲಿಎರಡೆರಡು ಫೋನ್ ಇಟ್ಟುಕೊಳ್ಳುವುದು ದೊಡ್ಡ ರಗಳೆ. ಲಲನಾಮಣಿಯರಿಗಂತೂ ದೊಡ್ಡ ತಲೆನೋವಿನ ಸಂಗತಿ. ಅಂತಹವರಿಗಾಗಿಯೇ ಬಂದಿವೆ -ಎರಡು ಸಿಮ್ ಅರ್ಥಾತ್ ಡ್ಯುಯಲ್ ಸಿಮ್ ಫೋನ್‌ಗಳು. ಅಂತಹ ಒಂದು ಫೋನನ್ನು ಈ ಸಲ ಗಮನಿಸೋಣ.

 

ನೋಕಿಯ C2-00 ಒಂದು ಅಗ್ಗದ ಫೋನ್. ಸದ್ಯದ ಬೆಲೆ ಕೇವಲ 2400ರೂ (flipkart.com). ಮೊದಲು ಇದರ ಗುಣವೈಶಿಷ್ಟ್ಯಗಳ ಕಡೆ ಕಣ್ಣು ಹಾಯಿಸೋಣ. ಎರಡು ಸಿಮ್ ಕಾರ್ಡ್ ಬಳಸುವ ಸೌಲಭ್ಯ, ಸಿಂಬಿಯನ್ S-40 ಕಾರ್ಯಾಚರಣ ವ್ಯವಸ್ಥೆ, 16 ಮೆಗಾಬೈಟ್ ಪ್ರಾಥಮಿಕ ಮೆಮೊರಿ, 32 ಗಿಗಾಬೈಟ್ ತನಕ ಎಸ್‌ಡಿ ಕಾರ್ಡ್ ಹೆಚ್ಚುವರಿ ಮೆಮೊರಿ ಸೌಲಭ್ಯ, ಯುಎಸ್‌ಬಿ ಸಂಪರ್ಕ ಕಿಂಡಿ, ಬ್ಲೂಟೂತ್, ಜಿಪಿಆರ್‌ಎಸ್ ಅಂತರಜಾಲ ಸಂಪರ್ಕ, 1020mAh ಬ್ಯಾಟರಿ, ಇಮೈಲ್ ಸೌಲಭ್ಯ, ಎಫ್‌ಎಂ ರೇಡಿಯೋ, ಎಂಪಿ3 ಸಂಗೀತ, 640×480 ಪಿಕ್ಸೆಲ್ ರೆಸೊಲೂಶನ್‌ನ ಕ್ಯಾಮರ, ಬಣ್ಣದ ಪರದೆ, ಕ್ಯಾಮರದಲ್ಲಿ 4x ಡಿಜಿಟಲ್ ಝೂಮ್, 108x48x15 ಮಿಮಿ ಗಾತ್ರ, 74 ಗ್ರಾಂ ತೂಕ. ಒಟ್ಟಿನಲ್ಲಿ ಒಂದು ಚಿಕ್ಕ ಫೋನ್. ಆದರೆ ಸೌಲಭ್ಯಗಳ ಸಂಖ್ಯೆ ಅಪಾರ.

ಇದರ ಬಹಳ ಮುಖ್ಯ ಆಕರ್ಷಣೆ -ಎರಡು ಸಿಮ್ ಕಾರ್ಡ್‌ಗಳ ಸೌಲಭ್ಯ. ಒಂದು ಸಿಮ್‌ನಲ್ಲಿ ಮಾತನಾಡುತ್ತ ಇರುವಾಗ ಇನ್ನೊಂದಕ್ಕೆ ಕರೆ ಬಂದರೆ ಅದು ತೋರಿಸುತ್ತದೆ. ಸಿಮ್ ಕಾರ್ಡ್‌ಗಳ ಜಾಗ (ಸ್ಲಾಟ್) ಬದಲಾಯಿಸಬಹುದು. ಎಫ್‌ಎಂ ರೇಡಿಯೋ ಇದೆ. ಎಂಪಿ3 ಸಂಗೀತವನ್ನೂ ಆಲಿಸಬಹುದು. ನಿಮಗಿಷ್ಟವಾದ ಸಂಗೀತವನ್ನು ಕರೆ ಬಂದಾಗ ಉಲಿಯುವ ಧ್ವನಿಯನ್ನಾಗಿಸಿಕೊಳ್ಳಬಹುದು (ರಿಂಗ್ ಟೋನ್). ಧ್ವನಿ ಮುದ್ರಣ ಮಾಡಿಕೊಳ್ಳುವ ಸವಲತ್ತೂ ಇದೆ. ಇದು ರೇಡಿಯೋದಿಂದಲೂ ಆಗುತ್ತದೆ ಅಥವಾ ಹೊರಗಿನಿಂದ ಕೇಳಿಬಂದ ಧ್ವನಿಯೂ ಆಗುತ್ತದೆ. ಆದರೆ ಸಂಗೀತದ ಗುಣಮಟ್ಟ ಅಷ್ಟಕ್ಕಷ್ಟೆ. ಫೋನ್‌ನ ಬೆಲೆ ತುಂಬ ಕಡಿಮೆ ಎಂಬುದನ್ನು ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು. ಬಹಳ ಕಡಿಮೆ ಗುಣಮಟ್ಟದ ಕ್ಯಾಮರ ಇದೆ. ಕ್ಯಾಮರ ಇದ್ದೂ ಇಲ್ಲದಂತೆಯೇ. ಅದರಿಂದ ಮೂಡುವ ಚಿತ್ರಗಳ ಗುಣಮಟ್ಟ ಚೆನ್ನಾಗಿಲ್ಲ. 640×480 ಪಿಕ್ಸೆಲ್ ರೆಸೊಲೂಶನ್‌ನ ಕ್ಯಾಮರದಲ್ಲಿ ಇನ್ನೇನು ತಾನೆ ಮೂಡಿಬರಲು ಸಾಧ್ಯ? ವೀಡಿಯೋ ಮುದ್ರಣ ಸವಲತ್ತೂ ಇದೆ. ಆದರೆ ಅದರ ಗುಣಮಟ್ಟವೂ ಚೆನ್ನಾಗಿಲ್ಲ.

 

ಫೋನ್‌ನಲ್ಲಿ ಬ್ಲೂಟೂತ್ ಸೌಲಭ್ಯ ಇದೆ. ಇದನ್ನು ಬಳಸಿ ಬ್ಲೂಟೂತ್ ಹೆಡ್‌ಸೆಟ್ ಬಳಸಬಹುದು. ಇದರಿಂದ ಮಾತನಾಡುವಾಗ ಕೈ ಫ್ರೀ ಆಗುತ್ತದೆ. ಇದರಲ್ಲಿ ಜಿಪಿಆರ್‌ಎಸ್ (GPRS) ಅಥವಾ ಇಜಿಡಿಇ (EGDE) ಮೂಲಕ ಅಂತರಜಾಲ ಸಂಪರ್ಕ ಪಡೆಯಬಹುದು. ಈ ವೇಗ ಕೇವಲ ಇಮೈಲ್‌ಗಳಿಗೆ ಮಾತ್ರ ಸಾಕು. ಅಂತರಜಾಲತಾಣಗಳನ್ನು ನೋಡುತ್ತೇನೆಂದರೆ ಈ ವೇಗ ಏನೇನೂ ಸಾಲದು. 3ಜಿ ಮತ್ತು ವೈಫೈ ಸೌಲಭ್ಯಗಳಿಲ್ಲ. ಕೊಡುವ ಹಣಕ್ಕೆ ಇನ್ನೇನೂ ತಾನೆ ದೊರೆಯಲು ಸಾಧ್ಯ?

 

ಇದಕ್ಕೆ ಯುಎಸ್‌ಬಿ ಕಿಂಡಿ ಇದೆ. ಅಂದರೆ ಗಣಕಕ್ಕೆ ಸಂಪರ್ಕ ಮಾಡಬಹುದು. ಹೀಗೆ ಸಂಪರ್ಕ ಮಾಡಿ ಗಣಕ ಮತ್ತು ಫೋನ್ ಮಧ್ಯೆ ಸಂಗೀತ, ಚಿತ್ರಗಳ ಫೈಲುಗಳನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಆದರೆ ಈ ಯುಎಸ್‌ಬಿ ಕಿಂಡಿ ಮೂಲಕ ಫೋನ್ ಚಾರ್ಜ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಫೋನ್ ಮಾಡುವಾಗ ಕೆಲವೊಮ್ಮೆ ಪ್ರಮುಖ ಸಂಖ್ಯೆಗಳಿಗೆ ಆಗಾಗ ಕರೆ ಮಾಡಲು ಹಲವು ಫೋನ್‌ಗಳು ಸ್ಮಾರ್ಟ್ ಡಯಲಿಂಗ್ ಎಂಬ ವ್ಯವಸ್ಥೆ ನೀಡುತ್ತಾರೆ. ಈ ಫೋನಿನಲ್ಲಿ ಅಂತಹ ಸವಲತ್ತು ಇಲ್ಲ. ಇದರ ಪರದೆಯೂ ಅಷ್ಟಕ್ಕಷ್ಟೆ. ನೋಡುವಾಗ ನೇರವಾಗಿ ನೋಡತಕ್ಕದ್ದು. ಪಕ್ಕದಿಂದ ನೋಡಿದರೆ ಸರಿಯಾಗಿ ಕಾಣುವುದಿಲ್ಲ.

 

ಈ ಫೋನ್‌ಗೆ ನೆಟ್‌ವರ್ಕ್ ಸಮಸ್ಯೆ ಇದೆ. ಕೆಲವೊಮ್ಮೆ ಸಿಗ್ನಲ್ ಸರಿಯಾಗಿ ಬರುವುದಿಲ್ಲ. ಎಲ್ಲ ಐದು ಕಡ್ಡಿಗಳನ್ನು ತೋರಿಸಿದರೂ ಕರೆ ಮಾತ್ರ ಹೋಗುವುದಿಲ್ಲ. ಆಗ ಫೋನನ್ನು ಒಮ್ಮೆ ಸ್ವಿಚ್ ಆಫ್ ಮಾಡಿ ಪುನಃ ಆನ್ ಮಾಡಿದರೆ ಸರಿಯಾಗುತ್ತದೆ. ಫೋನಿನಲ್ಲಿ ಅತಿ ವೇಗವಾಗಿ ಕೆಲಸ ಮಾಡಲು ಹೋದರೆ (ಉದಾ – ವೇಗವಾಗಿ ಎಸ್‌ಎಂಎಸ್ ಟೈಪ್ ಮಾಡುವುದು) ಫೋನ್ ತಟಸ್ಥವಾಗುತ್ತದೆ. ಆಗಲೂ ಫೋನನ್ನು ಒಮ್ಮೆ ಸ್ವಿಚ್ ಆಫ್ ಮಾಡಿ ಪುನಃ ಆನ್ ಮಾಡಿದರೆ ಸರಿಯಾಗುತ್ತದೆ.

 

ಒಟ್ಟಿನಲ್ಲಿ ಹೇಳುವುದಾದರೆ ಒಂದು ಅದ್ಭುತ ಫೋನಲ್ಲ. ಅತಿ ಕಡಿಮೆ ಬೆಲೆಯಲ್ಲಿ ಅತಿ ಹೆಚ್ಚು ಗುಣವೈಶಿಷ್ಟ್ಯಗಳನ್ನು ನೀಡುವ ಫೋನ್ ಎನ್ನಬಹುದು. ಕೊಟ್ಟ ಹಣಕ್ಕೆ ಮೋಸವಿಲ್ಲ (value for money).

 

ಗ್ಯಾಜೆಟ್ ಸಲಹೆ

 

ಗಂಗಾವತಿಯ ರಾಚಪ್ಪ ಅವರ ಪ್ರಶ್ನೆ: ಉಪಕರಣಗಳ (ಉದಾ – ಫೋನ್) ಚಾರ್ಜರುಗಳನ್ನು ವಿದ್ಯುತ್ ಸಂಪರ್ಕದಲ್ಲೇ ಇಡುವುದು, ಅಂದರೆ ಚಾರ್ಜ್ ಮಾಡದಿದ್ದಾಗಲೂ ಅದನ್ನು ಆನ್ ಇಡುವುದರಿಂದ ಅವುಗಳು ಬೇಗ ಹಾಳಾಗುತ್ತವೆ ಎನ್ನುತ್ತಾರೆ. ಇದು ಸತ್ಯವೇ?

ಉ: ಕೆಲವು ಸಂದರ್ಭಗಳಲ್ಲಿ ಇದು ಸತ್ಯ. ಅದರಲ್ಲೂ ಮುಖ್ಯವಾಗಿ ನಿಮ್ಮ ಮನೆಯ ವಿದ್ಯುತ್ ಸಂಪರ್ಕ ಚೆನ್ನಾಗಿಲ್ಲದಿದ್ದಂತಹ ಸಂದರ್ಭಗಳಲ್ಲಿ ಇದು ಖಂಡಿತ ಸತ್ಯ. ಯಾಕೆ ರಿಸ್ಕ್? ಅಗತ್ಯ ಇಲ್ಲದಿದ್ದಾಗ ಚಾರ್ಜರನ್ನು ಡಿಸ್‌ಕನೆಕ್ಟ್ ಮಾಡಿ ಇಡುವುದೇ ಒಳ್ಳೆಯದು.

 

ಗ್ಯಾಜೆಟ್ ತರ್ಲೆ

 

ಸಿಮ್ ಕಾರ್ಡ್‌ಗೆ ಕನ್ನಡದಲ್ಲಿ ಏನೆಂದು ಕರೆಯಬಹುದು? ಸಿಮ್ ಕಾರ್ಡ್ ಎಂದರೆ ಮೊಬೈಲ್ ಚಂದಾದಾರರ ವಿವರಗಳನ್ನು ಒಳಗೊಂಡ ಒಂದು ಚಿಕ್ಕ ಬಿಲ್ಲೆ. ಇದನ್ನು ಇಂಗ್ಲಿಶ್‌ನಲ್ಲಿ Subscriber Identity Module ಎನ್ನುತ್ತಾರೆ. ಅದನ್ನೆ ಕನ್ನಡಕ್ಕೆ ಶಬ್ದಶಃ ಅನುವಾದ ಮಾಡಿದರೆ ಚಂದಾದಾರ ಗುರುತು ಲಾಂಛನ ಬಿಲ್ಲೆ (ಚಂಗುಲಾಬಿ) ಎಂದಾಗುತ್ತದೆ!

 

-ಡಾ| ಯು. ಬಿ. ಪವನಜ

4 Responses to ಗ್ಯಾಜೆಟ್ ಲೋಕ – ೦೨೮ (ಜುಲೈ ೧೨, ೨೦೧೨)

 1. ಬಸವರಾಜ್ ಬಿ

  ನೀವು ಹೇಳಿದಹಾಗೆ ಒಂದು ಸಿಮ್‌ನಲ್ಲಿ ಮಾತನಾಡುತ್ತ ಇರುವಾಗ ಇನ್ನೊಂದಕ್ಕೆ ಕರೆ ಬಂದರೆ ಅದು ತೋರಿಸುವುದಿಲ್ಲ..

 2. virendra

  tv Yalli bharathiya brand yavuvu…….

 3. hemanth

  my name is hemanth kumar . sir i want to buy a android mobile with 3g, bluetooth, wifi ,dual sim and other good featured smart phone having operating system 4.1 jelly ben or higher with screen size 4-5 inch with good battery capacity and maintainence free and my budget is 5-10 thousand only .i am student please guide me to buy because now a days there are many companies are there to buy mobiles with all the above features but which one is good choice is difficult to think. please replay to my email id kitty.hemanth@gmail.com or issue in prajavani paper.

  ನನ್ನ ಹೆಸರು ಹೇಮಂತ್ ಕುಮಾರ್. ಸರ್ ನಾನು 3G, Bluetooth, ವೈಫೈ, ಡ್ಯುಯಲ್ ಸಿಮ್ ಮತ್ತು ಇತರ ಉತ್ತಮ ವೈಶಿಷ್ಟ್ಯಗೊಳಿಸಿದ ಸ್ಮಾರ್ಟ್ ಫೋನ್ ಒಂದು ಆಂಡ್ರಾಯ್ಡ್ ಮೊಬೈಲ್ ಖರೀದಿಸಲು ಬಯಸುವ ಉತ್ತಮ ಬ್ಯಾಟರಿ ಸಾಮರ್ಥ್ಯ ಮತ್ತು maintainence ಉಚಿತ ಮತ್ತು ನನ್ನ ಬಜೆಟ್ ತೆರೆಯ ಗಾತ್ರ 4-5 ಇಂಚು ಆಪರೇಟಿಂಗ್ ಸಿಸ್ಟಂ 4.1 ಜೆಲ್ಲಿ ಬೆನ್ ಅಥವಾ ಹೆಚ್ಚಿನ ಹೊಂದಿರುವ 5 -10 ಸಾವಿರ ಮಾತ್ರ. ನಾನು ಈಗ ದಿನಗಳ ಅನೇಕ ಕಂಪನಿಗಳು ಎಲ್ಲಾ ಮೇಲೆ ವೈಶಿಷ್ಟ್ಯಗಳೊಂದಿಗೆ ಮೊಬೈಲ್ ಖರೀದಿಸಲು ಇವೆ ಆದರೆ ಉತ್ತಮ ಆಯ್ಕೆ ಇದು ಏಕೆಂದರೆ ಖರೀದಿಸಲು ನನಗೆ ಮಾರ್ಗದರ್ಶನ ದಯವಿಟ್ಟು ವಿಧ್ಯಾರ್ಥಿ ಯೋಚಿಸುವುದು ಕಷ್ಟ. ನನ್ನ ಇಮೇಲ್ ಐಡಿ kitty.hemanth @ gmail.com ಅಥವಾ ಪ್ರಜಾವಾಣಿಯ ಕಾಗದದ ಸಮಸ್ಯೆಯನ್ನು ರಿಪ್ಲೇ ಮಾಡಿ.

 4. VENKATESHA T H

  DEAR SIR

  Iam a science teacher iam working in govt higher primary school
  THIPPANAHALLI, SEEBI AGRAHARA POST , SIRA TALUK , TUMKUR DISTRICT

  I WANT TO MAKE SCHOOL WEBSITE
  HOW TO MAKE BLOG
  PLEASE GIVE ME INFORMATION

  venthippanahalli@gmail.com
  mob: 8722339182

Leave a Reply