eಳೆ – ೧೪ (ನವಂಬರ ೩, ೨೦೦೨)

eಳೆ – ೧೪ (ನವಂಬರ ೩, ೨೦೦೨)

ಅಂತರಜಾಲಾಡಿ

ಮತ್ತೊಮ್ಮೆ ಬೆಳಕಿನ ಹಬ್ಬ ದೀಪಾವಳಿ ಬಂದಿದೆ. ನಮ್ಮ ದೇಶದ ಪ್ರಮುಖ ಹಬ್ಬ ಎಂದು ದೀಪಾವಳಿಯನ್ನು ಕರೆದರೆ ತಪ್ಪೇನಿಲ್ಲ. ದೀಪಾವಳಿ ಹಬ್ಬದ ಬಗ್ಗೆ ವಿವರ, ಶುಭಾಶಯ ಪತ್ರ, ಉಡುಗೊರೆ, ಇತ್ಯಾದಿಗಳು ದೊರೆಯುವ ತಾಣದ ವಿಳಾಸ: www.diwalimela.com. ಇಲ್ಲಿಗೆ ಭೇಟಿ ನೀಡಿ ದಿವಾಳಿಯಾದರೆ ನಾನು ಹೊಣೆಯಲ್ಲ!

ಡೌನ್‌ಲೋಡ್

ಕೆಲವು ಅಂತರಜಾಲ ತಾಣಗಳಿಗೆ ಭೇಟಿ ನೀಡಿದಾಗ ಈ ತಾಣದಲ್ಲಿರುವ ಎಲ್ಲ ಪುಟಗಳು ಚೆನ್ನಾಗಿವೆ. ಎಲ್ಲವನ್ನೂ ಓದಬೇಕು ಮಾತ್ರವಲ್ಲ, ಮತ್ತೆ ಮತ್ತೆ ಓದಬೇಕು ಎಂದೆನಿಸಿರಬಹುದು. ಅಂತರಜಾಲ ತಾಣಗಳನ್ನು ಸಂಪೂರ್ಣವಾಗಿ ನಮ್ಮ ಗಣಕಕ್ಕೆ ಪ್ರತಿ ಮಾಡಿಕೊಳ್ಳಲು ಕೆಲವು ತಂತ್ರಾಂಶಗಳು ಲಭ್ಯವಿವೆ. ಇಂತಹ ಒಂದು ತಂತ್ರಾಂಶದ ಹೆಸರು winHTTrack. ಇದು ಉಚಿತವಾಗಿ ದೊರೆಯುವ ತಾಣದ ವಿಳಾಸ: www.httrack.com.

ಶಾರ್ಟ್‌ಕಟ್

ವಿ-ಅಂಚೆಯಲ್ಲಿ ಬಹಳಷ್ಟು junk mail ಬರುತ್ತಿದೆಯೇ? ಇದಕ್ಕೆ ಹಲವು ಕಾರಣಗಳಿರಬಹುದು. ಉಚಿತ ವಿ-ಅಂಚೆಯ ತಾಣವನ್ನು (ಉದಾ. hotmail, yahoo) ಉಪಯೋಗಿಸುವವರಲ್ಲಿ ಇದು ಅಧಿಕ. ಅಲ್ಲಿ ನಿಮ್ಮ ಹೆಸರನ್ನು ನೋಂದಾಯಿಸುವಾಗ ನಿಮ್ಮ ಕೆಲವು ವೈಯಕ್ತಿಕ ಮಾಹಿತಿಯನ್ನು ದಾಖಲಿಸಬೇಕಾಗುತ್ತದೆ. ಕೊನೆಯಲ್ಲಿ “ಈ ಮಾಹಿತಿಯನ್ನು ಇತರ ಆಸಕ್ತರ ಜೊತೆ ಹಂಚಲು ನನ್ನ ಅಭ್ಯಂತರವಿಲ್ಲ” ಎಂದು ನೀವು ಒಪ್ಪಿಗೆ ಕೊಟ್ಟರೆ ಈ ರೀತಿ ಅನವಶ್ಯಕ ವಿ-ಪತ್ರಗಳು ಬರುತ್ತವೆ. ಇನ್ನೊಂದು ಕಾರಣವೆಂದರೆ ಹಲವು ಅಂತರಜಾಲ ತಾಣಗಳನ್ನು ಉಪಯೋಗಿಸಲು ಅಥವಾ ಉಪಯುಕ್ತ ತಂತ್ರಾಂಶವನ್ನು ಡೌನ್‌ಲೋಡ್ ಮಾಡಲು ನಿಮ್ಮ ವಿ-ಅಂಚೆ ವಿಳಾಸವನ್ನು ನೀಡಬೇಕಾಗಿರುತ್ತದೆ. ಹೀಗೆ ಕೊಡಲು ಬೇರೆಯೇ ವಿಳಾಸವನ್ನು ಮಾಡಿಟ್ಟುಕೊಳ್ಳಿ.

e-ಸುದ್ದಿ

ಕುರುಡರಿಗೆ ಉಪಯುಕ್ತವಾದ ಒಂದು ಅಂಗೈ ಗಣಕವನ್ನು ಮೈಕ್ರೋಸಾಫ್ಟ್ ಕಂಪೆನಿಯು ಸಿದ್ದಪಡಿಸಿದೆ. ಪಾಕ್‌ಮೇಟ್ ಹೆಸರಿನ ಈ ಸಾಧನವನ್ನು ಅದು ಅಂಧರಿಗೆ ಉಪಯುಕ್ತವಾಗುವ ತಂತ್ರಾಂಶ ಮತ್ತು ಸಾಧನಗಳ ತಯಾರಿಯಲ್ಲಿ ಸಿದ್ಧಹಸ್ತವಾದ ಫ್ರೀಡಮ್ ಸಯಂಟಿಫಿಕ್ ಕಂಪೆನಿಯ ಜೊತೆಗೂಡಿ ವಿನ್ಯಾಸಗೊಳಿಸಿದೆ. ಈ ವರ್ಷದ ಅಂತ್ಯದ ಹೊತ್ತಿಗೆ ಇದು ಮಾರುಕಟ್ಟೆಗೆ ಬರಲಿದೆ. ಗಣಕದ ಪರದೆಯ ಮೇಲೆ ಮೂಡುವ ಅಕ್ಷರ, ಚಿತ್ರಗಳನ್ನು ಈ ಸಾಧನ ಓದಿ ಹೇಳುತ್ತದೆ. ಅಮೇರಿಕ ಸರಕಾರದ ಸಂಶೋಧನಾಲಯವೊಂದು ಚಿತ್ರಗಳ ಅನುಭವವನ್ನು ಕುರುಡರಿಗೆ ನೀಡಲು ಸಾವಿರಾರು ಚಿಕ್ಕ ಚಿಕ್ಕ ಪಿನ್ನುಗಳನ್ನು ಹೊಂದಿದ ಸಾಧನವನ್ನು ವಿನ್ಯಾಸ ಮಾಡುತ್ತಿದೆ.

e-ಪದ

ಸಿ.ಡಿ. (CD – Compact Disk): ಅಡಕ ಮುದ್ರಿಕೆ ಅಥವಾ ತಟ್ಟೆ. ಹಾಡು, ಸಿನಿಮಾ ಮಾತ್ರವಲ್ಲದೆ ಗಣಕಕ್ಕೆ ಊಡಿಸಬಹುದಾದ ಮಾಹಿತಿಯನ್ನು ಶೇಖರಿಸಿಡಬಹುದಾದ ಪರಿಕರ. ಇದು ಡಿಜಿಟಲ್ ವಿಧಾನದಲ್ಲಿ ಅಂದರೆ ೦ ಮತ್ತು ೧ ಅಂಕೆಗಳನ್ನು ಉಪಯೋಗಿಸಿ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಅಡಕ ಮುದ್ರಿಕೆ ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ. ಅದರಲ್ಲಿ ಲೇಸರ್ ಕಿರಣವನ್ನು ಉಪಯೋಗಿಸಿ ಹಳ್ಳ ದಿಣ್ಣೆಗಳನ್ನು ಮೂಡಿಸುತ್ತಾರೆ. ಇವು ೦ ಮತ್ತು ೧ ಅಂಕೆಗಳನ್ನು ಪ್ರತಿನಿಧಿಸುತ್ತವೆ.

ಕಂಪ್ಯೂತರ್ಲೆ

ಕೆಲವು ಗಣಕ ಕಂಪೆನಿಗಳ ಸಹಾಯವಾಣಿಗೆ ಅವರ ಗ್ರಾಹಕರಿಂದ ಬಂದ ದೂರವಾಣಿ ಕರೆಗಳ ಸಾಂಪಲ್‌ಗಳು:
“hit any key to continue ಎಂದು ಇಲ್ಲಿ ಹೇಳುತ್ತಿದೆ. ಆದರೆ ಈ ಕೀಲಿಮಣೆಯಲ್ಲಿ any key ಹೆಸರಿನ ಯಾವ ಕೀಲಿಯೂ ಕಾಣಿಸುತ್ತಿಲ್ಲ. ಈಗ ಏನು ಮಾಡಲಿ?”
“ನಾನು ತಂತ್ರಾಶವೊಂದನ್ನು ಇನ್‌ಸ್ಟಾಲ್ ಮಾಡುತ್ತಿದ್ದೇನೆ. ಮೊದಲನೆಯ ಸಿ.ಡಿ. ಹಾಕಿದೆ. ಸ್ವಲ್ಪ ಹೊತ್ತಿನ ನಂತರ insert second disk ಎಂದು ಬರುತ್ತಿದೆ. ಆದರೆ ಎರಡು ಸಿ.ಡಿ. ಹಾಕಲು ಇದರಲ್ಲಿ ಜಾಗವಿಲ್ಲವಲ್ಲ. ಏನು ಮಾಡಲಿ?”
“click here to continue ಎಂಬಲ್ಲಿ ನಾನು ಮೌಸ್‌ನಿಂದ ಹಲವು ಸಲ ಕುಟ್ಟಿದೆ. ಆದರೆ ಏನೂ ಆಗುತ್ತಿಲ್ಲ. ಯಾಕೆ?” (ಅವರು ಮೌಸ್‌ನ್ನು ಗಣಕದ ಮೋನಿಟರ್ ಮೇಲೆ ಇಟ್ಟು ಕುಟ್ಟುತ್ತಿದ್ದರು!)
ಡಾ. ಯು. ಬಿ. ಪವನಜ

Leave a Reply