ಮೈಕ್ರೋಸಾಫ್ಟ್ ಝೂನ್
Thursday, September 6th, 2007– ಡಾ. ಯು. ಬಿ. ಪವನಜ
ಮೈಕ್ರೋಸಾಫ್ಟ್ ಕಂಪೆನಿ ತಂತ್ರಾಂಶ (ಸಾಫ್ಟ್‌ವೇರ್) ತಯಾರಿಕೆಗೆ ಜಗತ್ಪ್ರಸಿದ್ಧ. ಅವರು ಕೆಲವು ಯಂತ್ರಾಂಶಗಳನ್ನೂ (ಹಾರ್ಡ್‌ವೇರ್) ತಯಾರಿಸುತ್ತಾರೆ ಎನ್ನುವ ವಿಷಯ ಅಷ್ಟು ಪ್ರಚಾರ ಪಡೆದಿಲ್ಲ. ಮೈಕ್ರೋಸಾಫ್ಟ್ ಕಂಪೆನಿ ಮೌಸ್ ಮತ್ತು ಕೀಬೋರ್ಡ್‌ಗಳನ್ನು ಹಲವು ವರ್ಷಗಳಿಂದ ತಯಾರಿಸುತ್ತಿದೆ. ಅವುಗಳ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾಗಿರುವುದು ಝೂನ್ (Zune). ಇದನ್ನು ಆಪಲ್ ಕಂಪೆನಿಯ ತುಂಬ ಖ್ಯಾತವಾಗಿರುವ ಐಪಾಡ್‌ಗೆ ಪ್ರತಿಸ್ಪರ್ಧಿಯಾಗಿ ತಯಾರಿಸಲಾಗಿದೆ. ಆಪಲ್ ಐಪಾಡ್ ಮತ್ತು ಮೈಕ್ರೋಸಾಫ್ಟ್ ಝೂನ್ ಎರಡೂ ಸಂಗೀತ ಮತ್ತು ಚಲನಚಿತ್ರಗಳನ್ನು ಸಂಗ್ರಹಿಸಿಟ್ಟು ಬೇಕಾದಾಗ ಪ್ಲೇ ಮಾಡುವ ಕಿಸೆಯಲ್ಲಿ ಹಿಡಿಸಬಹುದಾದ ಪುಟ್ಟ ಸಲಕರಣೆಗಳಾಗಿವೆ.