ಪದ್ಯಕ್ಕೂ ಸೈ. ಗದ್ಯಕ್ಕೂ ಸೈ
ಡಾ. ಯು. ಬಿ. ಪವನಜ
ಕವಿತೆ ನೀನೇಕೆ ಪದಗಳಲ್ಲಿ ಅವಿತೆ ಎಂದು ವೈಎನ್‌ಕೆ ತಮ್ಮ ಚುಟುಕವೊಂದರಲ್ಲಿ ಬರೆದಿದ್ದರು. ಕನ್ನಡದಲ್ಲಿ ಚುಟುಕಗಳಿಗೆ ತಮ್ಮದೇ ಆದ ಇತಿಹಾಸ ಪರಂಪರೆ ಇದೆ. ಈ ಸಾಲಿನಲ್ಲಿ ಈಗಿನ ದೊಡ್ಡ ಹೆಸರು ಡುಂಡಿರಾಜ್. ಚಿಕ್ಕ ಕವನಗಳಿಗೆ ದೊಡ್ಡ ಹೆಸರು ಅವರದು. ಡುಂಡಿರಾಜರ ಬೀಸಣಿಗೆಗಳಲ್ಲಿ ನಾನೂ ಒಬ್ಬ. ಡುಂಡಿರಾಜರ ಚುಟುಕಗಳನ್ನು ಪ್ರಕಟಿಸದ ಕನ್ನಡ ಪತ್ರಿಕೆ, ಓದದ ಕನ್ನಡ ಓದುಗ ಇರಲಾರರು. ವಾರಪತ್ರಿಕೆ, ಮಾಸಪತ್ರಿಕೆ, ದೀಪಾವಳಿ, ಯುಗಾದಿ ವಿಶೇಷಾಂಕಗಳಲ್ಲಿ ಚುಟುಕಗಳನ್ನು ಫಿಲ್ಲರ್ ರೀತಿಯಲ್ಲಿ ಬಳಸುವ ಪದ್ಧತಿ ಇದೆಯಾದರೂ ಬಹಳಷ್ಟು ಮಂದಿ ಓದುಗರು ಈ ಚುಟುಕಗಳನ್ನು ಮತ್ತು ನಗೆಹನಿಗಳನ್ನು ಮೊದಲು ಓದಿ ನಂತರ ಇತರೆ ಲೇಖನಗಳನ್ನು ಓದುತ್ತಾರೆ ಎಂಬುದೂ ಸತ್ಯ. ಇಷ್ಟೆಲ್ಲ ಡುಂಡಿರಾಜ್ ಮತ್ತು ಅವರ ಚುಟುಕಗಳ ಬಗ್ಗೆ ಹೇಳಿರುವುದು ನೋಡಿದರೆ ನಾನಿಲ್ಲಿ ಬರೆಯಹೊರಟಿರುವುದು ಅವರ ಇನ್ನೊಂದು ಚುಟುಕಗಳ ಸಂಗ್ರಹದ ಬಗ್ಗೆ ಎಂದುಕೊಳ್ಳುತ್ತೀರೇನೋ. ಆದರೆ ವಸ್ತು ಸ್ಥಿತಿ ಅದಲ್ಲ. ಡುಂಡಿರಾಜ್ ಅವರು ದಿನಪತ್ರಿಕೆಯೊಂದರಲ್ಲಿ “ಮಾತು ಕ(ವಿ)ತೆ” ಎಂಬ ಹೆಸರಿನಲ್ಲಿ ಅಂಕಣ ಬರೆಯುತ್ತಾರೆ. ಇದರಲ್ಲಿ ಗದ್ಯ ಮತ್ತು ಪದ್ಯಗಳ ಸಮ್ಮಿಶ್ರಣವಿದೆ. ಈ ಅಂಕಣದ ೪೫ ಲೇಖನಗಳನ್ನು ಅಂಕಿತ ಪುಸ್ತಕ ಪ್ರಕಾಶನದವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಪುಸ್ತಕದ ಹೆಸರೂ “ಮಾತು ಕ(ವಿ)ತೆ”.
ಸುಮಾರು ೨೫-೩೦ ವರ್ಷಗಳಿಂದ ಬರೆಯುತ್ತಿರುವ ಡುಂಡಿರಾಜರ ಲೇಖನಿಯ ಮೊನಚು ಇನ್ನೂ ಹಾಗೆಯೇ ಇದೆ. ನಮ್ಮಲ್ಲಿ ಬಹುಪಾಲು ಲೇಖಕರು ಇಪ್ಪತ್ತು ವರ್ಷಗಳ ಬರೆವಣಿಗೆಯ ನಂತರ ಮೊನಚು ಕಳೆದುಕೊಂಡಿರುತ್ತಾರೆ. ಹಾಸ್ಯ ಲೇಖಕರ ಮಟ್ಟಿಗಂತೂ ಇದು ಬಹುಮಟ್ಟಿಗೆ ಅನ್ವಯವಾಗುತ್ತದೆ. ಆದರೆ ಡುಂಡಿರಾಜ್ ಇದಕ್ಕೆ ಅಪವಾದ. ಅವರ ಇತ್ತೀಚೆಗಿನ ಚುಟುಕದಲ್ಲೂ ಹೊಸತನ, ಸೃಜನಶೀಲತೆ ಇಪ್ಪತ್ತು ವರ್ಷಗಳ ಹಿಂದೆ ಇದ್ದಂತೆಯೇ ಇದೆ. ಅವರ ಗದ್ಯಕ್ಕೂ ಇದು ಅನ್ವಯಿಸುತ್ತದೆ. “ಪರ್ಯಾಯ ಸಮ್ಮೇಳನ ಮುಂದಿನ ವರ್ಷ ನಡೆಯದಿದ್ದುದರಿಂದ ಸಾಹಿತಿಗಳಿಗೆ ಕ.ಸಾ.ಪ. ಸಮ್ಮೇಳನದಲ್ಲಿ ಭಾಗವಹಿಸುವುದಲ್ಲದೆ ಪರ್ಯಾಯ ಮಾರ್ಗವೇ ಇರಲಿಲ್ಲ” ಎಂಬ ವಾಕ್ಯವನ್ನೇ ನೋಡಿ. ಚುಟುಕದಲ್ಲಿ ಡುಂಡಿರಾಜ್ ಮಾಡುವ ಮೋಡಿಯೇ ಇಲ್ಲಿಯೂ ಕಾಣಸಿಗುತ್ತದೆ.
ಲೇಖನದ ಹೆಸರೇ ಹೇಳುವಂತೆ ಇದರಲ್ಲಿ ಗದ್ಯ ಮತ್ತು ಪದ್ಯಗಳ ನವಿರಾದ ಮಿಶ್ರಣವಿದೆ. ಡುಂಡಿರಾಜರು ತಮ್ಮದೇ ಚುಟುಕಗಳನ್ನು ಅಲ್ಲಲ್ಲಿ ಸೂಕ್ತವಾಗಿ ಬಳಸಿರುವುದಲ್ಲದೆ ಇತರೆ ಖ್ಯಾತ ಕವಿಗಳ ಚುಟುಕಗಳನ್ನೂ ಸೇರಿಸಿಕೊಂಡಿದ್ದಾರೆ. ಉದಾಹರಣೆಗೆ ವೈಎನ್‌ಕೆಯವರ “ಸುಲೋಚನೆ ಸುಲೋಚನೆ ಏನು ನಿನ್ನ ಆಲೋಚನೆ”. ಕೆಲವು ಲೇಖನಗಳ ಶೀರ್ಷಿಕೆಗಳೇ ಕಾವ್ಯಮಯವಾಗಿ ಆಕರ್ಷಕವಾಗಿವೆ. ಉದಾ -“ಯಾವ ಮೋಹನ ಆಳ್ವ ಕರೆದರು ಮೂಡುಬಿದಿರೆಗೆ ಇವರನು”, “ಮರಳಿ ಮಂಗಳೂರಿನ ಮರಳಿಗೆ”. ಪುಸ್ತಕದ ಇನ್ನೊಂದು ಆಕರ್ಷಣೆ ಹರಿಣಿಯವರ ವ್ಯಂಗ್ಯಚಿತ್ರಗಳು.
ಅಂಕಣ ಬರೆಹಗಾರರು ಆಯಾ ಕಾಲದ ಪ್ರಸ್ತುತ ವಿಷಯಗಳಿಗೆ ಸ್ಪಂದಿಸಿ ತಮ್ಮ ಅಂಕಣದಲ್ಲಿ ಬರೆಯುವ ಪದ್ಧತಿ ಇದೆ. ಡುಂಡಿರಾಜರೂ ಅದನ್ನು “ನಗಿಸುವವರ ಡೆಮಾಕ್ರಟಿಕ್ ಅಲೆಯನ್ಸ್ (NDA)” ಲೇಖನದಲ್ಲಿ ಮಾಡಿದ್ದಾರೆ. ಇದನ್ನು ಓದುವಾಗ ನಾವು ಮಾನಸಿಕವಾಗಿ ಆ ಕಾಲಕ್ಕೆ ಹಿಂದಕ್ಕೆ ತೆರಳಿದರೆ ಹೆಚ್ಚು ಸ್ವಾರಸ್ಯವನ್ನು ಅನುಭವಿಸಬಹುದು. ಅಂಕಣ ಬರೆಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವವರಿಗೆ ನನ್ನದೊಂದು ಚಿಕ್ಕ ವಿನಂತಿ. ದಯವಿಟ್ಟು ಲೇಖನದ ಆರಂಭದಲ್ಲಿ ಅಥವಾ ಕೊನೆಯಲ್ಲಿ ಲೇಖನ ಪ್ರಕಟವಾದ ದಿನಾಂಕವನ್ನೂ ನಮೂದಿಸಿ. ಆಯಾ ಕಾಲದ ಪ್ರಸ್ತುತ ವಿಷಯಗಳಿಗೆ ಸ್ಪಂದಿಸಿ ಡುಂಡಿರಾಜರು ಬ್ಯಾಂಕ್ ಚಳವಳಿಯ ಬಗ್ಗೆಯೂ ತಮ್ಮ ಅಂಕಣದಲ್ಲಿ ಬರೆದಿದ್ದರು ಮಾತ್ರವಲ್ಲ ತಾವು ಬ್ಯಾಂಕ್ ಉದ್ಯೋಗಿಯಾಗಿ ಬ್ಯಾಂಕ್ ನೌಕರರ ಚಳವಳಿಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಆ ಲೇಖನವನ್ನು ಈ ಪುಸ್ತಕದಲ್ಲಿ ಸೇರಿಸಿಲ್ಲ.
ಜಯಂತ ಕಾಯ್ಕಿಣಿಯವರು ಮುನ್ನುಡಿಯಲ್ಲಿ ಹೇಳಿರುವಂತೆ ಇವರು ಎಂದೆಂದಿಗೂ ಬಾರಿಸುತ್ತಿರಲಿ ಕನ್ನಡ ಡುಂಡಿಮವ. ಉತ್ತಮ ಪುಸ್ತಕ ನೀಡಿದ ಡುಂಡಿರಾಜರಿಗೆ ನಮ್ಮ oneದನೆ.
(ಕೃಪೆ: ಉದಯವಾಣಿ, ೧೮-೧೨-೨೦೦೫)
ಪುಸ್ತಕದ ಹೆಸರು: ಮಾತು ಕ(ವಿ)ತೆ
ಲೇಖಕ: ಎಚ್. ಡುಂಡಿರಾಜ್
ಪ್ರಕಾಶಕರು: ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು
ಪುಟಗಳು: ೨೦೪ + ೧೦
ಬೆಲೆ: ರೂ.೯೫/-
ಪ್ರಕಟಣೆಯ ವರ್ಷ: ೨೦೦೫ (ಮೊದಲನೆಯ ಮುದ್ರಣ)
February 13th, 2012 at 1:47 pm
Dear Sir,
Nice article. While searching for Mr. Dundiraj’s puns, I happened to go through this article.
Thank you,
mahesh g hegde,
mumbai
13.2.2012