ನನ್ನ ಲೈಬ್ರರಿ
-ಅಮಿತ್ ಎಂ. ಎಸ್.
ಮಾಹಿತಿ ತಂತ್ರಜ್ಞಾನದ ಅಲೆ ಭಾರತದಲ್ಲಿ ತೀವ್ರವಾಗಿದ್ದರೂ ಸಾಹಿತ್ಯ ಸಂಬಂಧಿ ವಿಷಯಗಳಲ್ಲಿ ಅದರ ಬೆಳವಣಿಗೆ ತುಸು ನಿಧಾನ. ಅದರಲ್ಲೂ ಬಲು ಜನಪ್ರಿಯವಾಗಿರುವ ಆನ್‌ಲೈನ್ ಲೈಬ್ರರಿಗೆ ನಾವು ವಿದೇಶಿಗರನ್ನೇ ಅವಲಂಬಿಸಿದ್ದೇವೆ. ಗ್ಲೋಬ್ ಎಥಿಕ್ಸ್, ವೈಡರ್‌ನೆಟ್‌ನಂತಹ ಡಿಜಿಟಲ್ ಲೈಬ್ರರಿಗೆ ಚಂದಾದಾರರಾಗಿರುವ ಪುಸ್ತಕ ಪ್ರಿಯರ ಸಂಖ್ಯೆ ನೋಡಿದಾಗಲೇ ಈ ಲೈಬ್ರರಿಯ ಮಹತ್ವ ಅರಿವಾಗುತ್ತದೆ. ಪುಸ್ತಕವನ್ನು ಕೊಳ್ಳುವ ಮತ್ತು ಅದನ್ನು ನಿರ್ವಹಿಸಬೇಕಾಗದ ತೊಂದರೆಗಳಿಲ್ಲದೆ, ಕಾಗದದ ಬಳಕೆಯಿಲ್ಲದೆ, ಬೇಕಾದಾಗ ಕೊಂಡು ಓದುವ ಅತಿ ಸುಲಭದ `ಇ-ಮಾರ್ಗ` ಆನ್‌ಲೈನ್ ಡಿಜಿಟಲ್ ಲೈಬ್ರರಿ. ಭಾರತದಲ್ಲಿಯೂ ಇವುಗಳು ಲಭ್ಯವಿದೆ. ಆದರೆ ಭಾರತದ ಸಾಹಿತ್ಯದ ಆನ್‌ಲೈನ್ ಓದಿಗಾಗಿ ಸಾಹಿತ್ಯ ರಸಿಕರು ವಿದೇಶಿ ಮೂಲದ ಡಿಜಿಟಲ್ ಲೈಬ್ರರಿಗಳನ್ನೇ ಅವಲಂಬಿಸಬೇಕಾಗಿತ್ತು.
ಭಾರತೀಯರದ್ದೇ ಆದ, ಭಾರತೀಯ ಭಾಷೆಗಳಿಗೇ ಮಿಗಿಲಾದ ಮೊಟ್ಟ ಮೊದಲ ಆನ್‌ಲೈನ್ ಡಿಜಿಟಲ್ ಲೈಬ್ರರಿ ಅಸ್ತಿತ್ವಕ್ಕೆ ಬರುತ್ತಿದೆ. ಈ ಜಾಲತಾಣದ ಗ್ರಂಥಾಲಯದ ರೂವಾರಿಗಳು ಕನ್ನಡಿಗರು. ಕನ್ನಡ ಮಾತ್ರವಲ್ಲ, ಭಾರತದ ವಿವಿಧ ಭಾಷೆಗಳಲ್ಲಿ ಈ ಲೈಬ್ರರಿ ತೆರೆದುಕೊಳ್ಳುತ್ತಿದೆ. ಇವೆಲ್ಲವೂ www.meralibrary.comಸೂರಿನಡಿ ಸಿಗಲಿವೆ. ಮೊದಲು ಕನ್ನಡ ಮತ್ತು ಮಲಯಾಳಂನಲ್ಲಿ ಓದುಗರಿಗೆ ಈ ಗ್ರಂಥಾಲಯ ಮುಕ್ತವಾಗಲಿದೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಫ್ಟ್‌ವೇರ್ ಅಪ್ಲಿಕೇಷನ್‌ಗಳನ್ನು ತಯಾರಿಸುವ ಅಮೆರಿಕ ಮೂಲದ ಇಂಪಲ್ಸರಿ ಕಂಪೆನಿಯ ಉದ್ಯೋಗಿ ಶಬೀರ್ ಮುಸ್ತಾಫಾ ಈ ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ. ಕನ್ನಡದ ಪ್ರಥಮ ಅಂತರ್ಜಾಲ ಪತ್ರಿಕೆ `ವಿಶ್ವಕನ್ನಡ`ದ ಸಂಪಾದಕ ಯು.ಬಿ. ಪವನಜ ಮುಖ್ಯ ಸಂಗ್ರಹಣಾ ಅಧಿಕಾರಿಯಾಗಿದ್ದಾರೆ. ಇವರೊಟ್ಟಿಗೆ ಸುಮಾರು ಹತ್ತು ಜನ ಉತ್ಸಾಹಿಗಳ ತಂಡ ಈ ಮಹತ್ವಾಕಾಂಕ್ಷಿ ಆನ್‌ಲೈನ್ ಡಿಜಿಟಲ್ ಲೈಬ್ರರಿಗೆ ಸುಂದರ ರೂಪ ನೀಡುವ ಕಾರ್ಯದಲ್ಲಿ ನಿರತವಾಗಿದೆ.
ಕನ್ನಡಿಗರಿಗೆ `ನನ್ನಲೈಬ್ರರಿ` (www.nannalibrary.com), ಹಿಂದಿಯಲ್ಲಿ `ಮೇರಾ ಲೈಬ್ರರಿ, ತೆಲುಗಿನಲ್ಲಿ `ನಾಲೈಬ್ರರಿ`, ಮಲಯಾಳಂನಲ್ಲಿ `ಎನ್ಡೆಲೈಬ್ರರಿ` ಹೀಗೆ ಒರಿಯಾ, ತಮಿಳು, ಮರಾಠಿ, ಬೆಂಗಾಲಿ, ಗುಜರಾತಿ, ಹಾಗೂ ಸಂಸ್ಕೃತ ಭಾಷೆಗಳ ಇ-ಪುಸ್ತಕಗಳಿಗೆ ಪ್ರತ್ಯೇಕ ಲೈಬ್ರರಿ ಹಂತಹಂತವಾಗಿ ಆರಂಭಗೊಳ್ಳಲಿದೆ. ಹೀಗಾಗಿ ತಮ್ಮ ನೆಚ್ಚಿನ ಭಾಷೆಯ, ನೆಚ್ಚಿನ ಸಾಹಿತಿಯ ಪುಸ್ತಕವನ್ನು ಕುಳಿತಲ್ಲಿಗೇ ತರಿಸಿಕೊಂಡು ಓದುವ ಅವಕಾಶ ಸಿಗಲಿದೆ. ಸದ್ಯ ಈ ಲೈಬ್ರರಿ ಸೀಮಿತ ಸಂಖ್ಯೆಯ ಪುಸ್ತಕಗಳನ್ನು ಒಳಗೊಂಡಿದೆ. ಕನ್ನಡದ `ನನ್ನ ಲೈಬ್ರರಿ`ಯಲ್ಲಿ ಈಗ ಸುಮಾರು ಹತ್ತು ಸಾವಿರ ಪುಸ್ತಕಗಳಿವೆ. ನವಕರ್ನಾಟಕ, ಅಕ್ಷರ ಪಬ್ಲಿಕೇಷನ್, ರಾಷ್ಟ್ರೋತ್ಥಾನ ಸಾಹಿತ್ಯದ ಕೃತಿಗಳು, ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಯಂಡಮೂರಿ ವೀರೇಂದ್ರನಾಥ್, ಯಶವಂತ ಚಿತ್ತಾಲ ಮುಂತಾದ ಸಾಹಿತಿಗಳ ಪುಸ್ತಕಗಳು ಇಲ್ಲಿವೆ. ಎಸ್.ಎಲ್.ಬೈರಪ್ಪ, ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ ಮುಂತಾದ ಸಾಹಿತಿಗಳ ಪುಸ್ತಕಗಳಿಗೆ ಕೆಲಕಾಲ ಕಾಯಬೇಕಾಗುತ್ತದೆ ಎನ್ನುತ್ತಾರೆ ಯು.ಬಿ. ಪವನಜ.
ಪಿಡಿಎಫ್ ಮತ್ತು ಇ-ಪಬ್ ರೂಪದಲ್ಲಿ ಪುಸ್ತಕಗಳು ಲಭ್ಯವಾಗಲಿದೆ. ಇಂಟರ್‌ನೆಟ್ ಬ್ರೌಸರ್‌ವುಳ್ಳವರು, ಸ್ಮಾರ್ಟ್‌ಫೋನ್ ಬಳಕೆದಾರರು, ಟ್ಯಾಬ್ಲೆಟ್ ಹೊಂದಿರುವವರು ಅಂತರ್ಜಾಲ ಪುಸ್ತಕದಂಗಡಿಯ ಗ್ರಾಹಕರಾಗಬಹುದು. ಈ ಡಿಜಿಟಲ್ ಲೈಬ್ರರಿಗಾಗಿ ವಿನೂತನ ಅಪ್ಲಿಕೇಷನ್ ಒಂದನ್ನು ತಯಾರಿಸಲಾಗಿದ್ದು, ಸ್ಮಾರ್ಟ್‌ಫೋನ್ ಬಳಕೆದಾರರು, ಟ್ಯಾಬ್ಲೆಟ್ ಪರದೆಯಲ್ಲಿ ಪುಸ್ತಕವನ್ನು ಓದುವ ಬಯಕೆಯುಳ್ಳವರು ಅಪ್ಲಿಕೇಷನ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಓದುಗರಿಗೆ ಡಿಜಿಟಲ್ ಲೈಬ್ರರಿ ಹೆಚ್ಚು ಅನುಕೂಲಕಾರಿ. ಯಾವುದೇ ದೇಶದ ಮೂಲೆಯಲ್ಲಿರುವವರು ಯಾವ ವೇಳೆಯಲ್ಲಿ ಬೇಕಾದರೂ ಸುಲಭವಾಗಿ ಲಾಗಿನ್ ಆಗಿ ಪುಸ್ತಕ ಓದಬಹುದು.
ಹೊಸ ಪೀಳಿಗೆಯನ್ನು ಸಾಹಿತ್ಯದೆಡೆಗೆ ಸೆಳೆಯಲು ಡಿಜಿಟಲ್ ಲೈಬ್ರರಿ ಯಶಸ್ವಿಯಾಗುತ್ತದೆ. ಪುಸ್ತಕಗಳನ್ನು ಹಿಡಿದು ಓದಲು ಇಚ್ಛಿಸದ ಇಂದಿನ ಪೀಳಿಗೆಯ ಜನರು ಟ್ಯಾಬ್ಲೆಟ್‌ಗಳ ಮೂಲಕ ಹೆಚ್ಚು ಪುಸ್ತಕಗಳನ್ನು ಓದುತ್ತಾರೆ ಎಂದು ಅವರು ಹೇಳುತ್ತಾರೆ.
ಈ ತಾಣಕ್ಕೆ ಭೇಟಿ ನೀಡುವ ಗ್ರಾಹಕರು ತಮಗೆ ಬೇಕಾದ ಪುಸ್ತಕವನ್ನು ಆಯ್ದುಕೊಳ್ಳಬಹುದು. ಹೀಗೆ ಆಯ್ಕೆ ಮಾಡಿಕೊಂಡ ಪುಸ್ತಕಕ್ಕೆ ಚಂದಾದಾರರಾಗುವ ಅಥವಾ ಅದನ್ನು ಕೊಳ್ಳುವ ಎರಡು ಆಯ್ಕೆಗಳು ಲಭ್ಯವಾಗುತ್ತದೆ. ತಮ್ಮ ವಿವರಗಳನ್ನು ನೀಡಿ ಯೂಸರ್ ಅಕೌಂಟ್ ಸೃಷ್ಟಿಸಿಕೊಳ್ಳಬೇಕು. ಅಕೌಂಟ್ ಸೃಷ್ಟಿ ಯಶಸ್ವಿಯಾದ ನಂತರ ಲಾಗಿನ್ ಆಗಬೇಕು. ಆಯ್ಕೆ ಮಾಡಿಕೊಂಡ ಪುಸ್ತಕವನ್ನು ಎರವಲು ಪಡೆಯುವ/ಕಾದಿರಿಸುವ/ಕೊಳ್ಳುವ ಅವಕಾಶಗಳ ಕಿಟಿಕಿ ತೆರೆದುಕೊಳ್ಳುತ್ತದೆ. ಎರವಲು ಪಡೆಯುವುದಾದರೆ ಬ್ರೌಸರ್‌ನ ಕಸ್ಟಮ್ ರೀಡರ್‌ಗಳನ್ನು ಬಳಸಿ ಓದಬಹುದು. ಪುಸ್ತಕ ಕೊಂಡುಕೊಂಡರೆ ಅಡೋಬ್ ಕಂಟೆಂಟ್ ಸರ್ವರ್ 4 ಡಿಆರ್‌ಎಂ ಫೈಲ್‌ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಓದುಗರಿಗೆ ಮಾತ್ರವಲ್ಲ ಇದು ಲೇಖಕರಿಗೂ ನೆರವಾಗಲಿದೆ. ಚಂದಾದಾರಿಕೆಯ ಅರ್ಧದಷ್ಟು ಮೊತ್ತ ಲೇಖಕರಿಗೆ ಸಂದಾಯವಾಗುತ್ತದೆ. ಆರಂಭಿಕ ಕೊಡುಗೆಯಾಗಿ ಐದು ಪುಸ್ತಕಗಳು ತಿಂಗಳಿಗೆ 200 ರೂಪಾಯಿ, ಆರು ತಿಂಗಳಿಗೆ 1,000 ರೂ ಹಾಗೂ 1 ವರ್ಷಕ್ಕೆ 2 ಸಾವಿರ ರೂ.ಯಿಂದ ಚಂದಾದಾರಿಕೆ ಲಭ್ಯವಿದೆ. ಚಂದಾದಾರಿಕೆಯ ಮೊತ್ತ ಗ್ರಾಹಕ ವಾಸಿಸುವ ಸ್ಥಳದ ಮೇಲೆ ಅವಲಂಬಿತ. ಭಾರತದಲ್ಲಿನ ಹಾಗೂ ವಿದೇಶದಲ್ಲಿನ ಚಂದಾದಾರಿಕೆಯಲ್ಲಿ ವ್ಯತ್ಯಾಸವಿರುತ್ತದೆ. ಚಂದಾದಾರಿಕೆ ಗ್ರಾಹಕರು ಕೊಳ್ಳುವ ಪುಸ್ತಕಗಳ ಸಂಖ್ಯೆ ಮತ್ತು ತಿಂಗಳ ಅವಧಿಗೆ ಅನುಗುಣವಾಗಿರುತ್ತದೆ. ಎರವಲು ಪಡೆಯುವ ಜೊತೆಯಲ್ಲಿ ಡಿಜಿಟಲ್ ಕಾಪಿಯನ್ನು ಸಹ ಕೊಳ್ಳಲು ಅವಕಾಶವಿದೆ. ಸಾಮಾನ್ಯವಾಗಿ ಡಿಜಿಟಲ್ ಲೈಬ್ರರಿಯಲ್ಲಿ ಪುಸ್ತಕದ ಪ್ರತಿಗಳಿಗೆ ಮಿತಿಯಿಲ್ಲ. ಆದರೆ ನನ್ನ ಲೈಬ್ರರಿಯಲ್ಲಿ ಪುಸ್ತಕದ ಪ್ರತಿಯ ಲಭ್ಯತೆಯನ್ನು ಮಿತಿಗೊಳಿಸುವ ಸ್ವಾತಂತ್ರ್ಯ ಲೇಖಕರಿಗೆ ಸಿಗಲಿದೆ. ಹೀಗಾಗಿ ಒಂದು ವೇಳೆ ಪುಸ್ತಕದ ಎಲ್ಲಾ ಪ್ರತಿಗಳೂ ಎರವಲು ಪಡೆದುಕೊಂಡ ಕಾರಣಕ್ಕೆ ಲಭ್ಯವಿಲ್ಲದಿದ್ದರೆ, ಆ ಪುಸ್ತಕವನ್ನು ಪಡೆಯಲು ಬಯಸುವವರು, ಅದನ್ನು ಕಾಯ್ದಿರಿಸಿ ನಂತರ ತೆಗೆದುಕೊಳ್ಳಬಹುದು. ಹಾಗೆಯೇ ಮೊದಲು ಪಡೆದ ಪುಸ್ತಕವನ್ನು ಹಿಂದಕ್ಕೆ ಮರಳಿಸಿದ ನಂತರವೇ ಬೇರೆ ಪುಸ್ತಕ ಎರವಲು ಪಡೆಯಲು ಸಾಧ್ಯ.
ಪುಸ್ತಕ ಅಪ್ಲಿಕೇಷನ್‌ನೊಳಗೆ ಮಾತ್ರ ಸಿಗುವುದರಿಂದ ಪುಟಗಳನ್ನು ನಕಲು ಮಾಡಲು ಅಥವಾ ಮುದ್ರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕಿಡಿಗೇಡಿಗಳು ಹ್ಯಾಕ್ ಮಾಡಿ ಲೈಬ್ರರಿಯನ್ನು ಹಾಳು ಮಾಡಲು ಸಹ ಸಾಧ್ಯವಾಗದಷ್ಟು ಇದು ಸುರಕ್ಷಿತ ಎನ್ನುತ್ತಾರೆ ಪವನಜ. ಅಕ್ಟೋಬರ್ ವೇಳೆಗೆ `ನನ್ನ ಲೈಬ್ರರಿ`ಯನ್ನು ಜನರಿಗೆ ಮುಕ್ತಗೊಳಿಸುವುದು ಅವರ ಗುರಿ.
(ಕೃಪೆ: ಪ್ರಜಾವಾಣಿ, ಆಗಸ್ಟ್ 19, 2012)
November 25th, 2013 at 3:46 pm
I would like to join your mylibrary. I required 4 books per month. Can you explain how join this programme
prabhakar S.
December 23rd, 2013 at 9:00 pm
Sir,Nima nannalibray website bage odi thelide…nanu mathu nanna snetharu kuda irthiya website madabeku endu andukondidevu…Nima e kelsadalli navy Koda obragabalde?
November 10th, 2014 at 7:12 pm
What is the application name to download the kannada books. I did not get it on the playstore in the name of nannalibrary.
November 10th, 2014 at 7:12 pm
What is the application name to download the kannada books.
December 27th, 2015 at 11:20 am
Sir,
Nanu kavithe, lekhana baritidene adna post madoke website yavdadru idya?
July 31st, 2016 at 11:48 pm
July 30th, 2016 at 11:54 pm
What is the application name to download the kannads books.