ಬ್ಲಾಗಿಂಗ್ – ಪರ್ಯಾಯ ಪತ್ರಿಕೋದ್ಯಮ

– ಡಾ. ಯು. ಬಿ. ಪವನಜ

ಇತ್ತೀಚೆಗಿನ ದಿನಗಳಲ್ಲಿ ತುಂಬ ಕೇಳಿಬರುತ್ತಿರುವ ಪದ “ಬ್ಲಾಗ್”. ಅದರ ಹಲವು ಪ್ರತ್ಯಯಗಳೇ ಬ್ಲಾಗಿಂಗ್, ಬ್ಲಾಗರ್, ಇತ್ಯಾದಿ. ಈ ಬ್ಲಾಗ್ ಎಂದರೆ ಏನು? ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್‌ನೆಟ್‌ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿ ಎಂದೂ ಕರೆಯಬಹುದು. ಬ್ಲಾಗ್‌ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ ಕ್ರಿಯೆ. ಬ್ಲಾಗರ್ ಎಂದರೆ ಬ್ಲಾಗ್ ಬರೆಯುವ ವ್ಯಕ್ತಿ.

ಬ್ಲಾಗ್ ಎನ್ನುವುದು ವೆಬ್‌ಲಾಗ್ (weblog) ಎನ್ನುವ ಪದದಿಂದ ವ್ಯುತ್ಪತ್ತಿಯಾಗಿದೆ. ಇದನ್ನು ಮೊತ್ತಮೊದಲು ಜಾನ್ ಬಾರ್ಗರ್ ಎಂದವರು ೧೯೯೭ರಲ್ಲಿ ಬಳಸಿದರು. ಪೀಟರ್ ಮರ್‌ಹೋಲ್‌ಝ್ ಅವರು ೧೯೯೯ರಲ್ಲಿ ಇದನ್ನು ವಿ ಬ್ಲಾಗ್ (we blog) ಎಂಬುದಾಗಿ ವಿಭಜಿಸಿದರು. ಎಂದರೆ ನಾವು ಬ್ಲಾಗ್ ಮಾಡುತ್ತಿದ್ದೇವೆ ಎಂಬ ಅರ್ಥ. ತದನಂತರ ಬ್ಲಾಗ್ ಎನ್ನುವುದು ನಾಮಪದ ಮತ್ತು ಕ್ರಿಯಾಪದವಾಗಿ ಬಳಕೆಯಾಗತೊಡಗಿತು. ೨೦೦೧ರ ನಂತರ ಬ್ಲಾಗ್ ಜನಪ್ರಿಯವಾಗತೊಡಗಿತಾದರೂ ೨೦೦೩ರಲ್ಲಿ ಹಲವು ಉಚಿತ ಬ್ಲಾಗಿಂಗ್ ತಾಣಗಳು ಅವತರಿಸಿ ಬ್ಲಾಗಿಂಗ್ ಮನೆಮಾತಾಗುವಂತಾಯಿತು. ಇದಿಷ್ಟು ಬ್ಲಾಗಿಂಗ್‌ನ ಇತಿಹಾಸದ ಬಗ್ಗೆ ಚುಟುಕಾದ ಮಾಹಿತಿ.

ಬ್ಲಾಗ್ ಬಗ್ಗೆ ಈಗ ಇನ್ನಷ್ಟು ವಿವರಗಳನ್ನು ನೋಡೋಣ. ಅಂತರಜಾಲದಲ್ಲಿ ಕೋಟಿಗಟ್ಟಲೆ ತಾಣಗಳಿವೆ (ವೆಬ್‌ಸೈಟ್). ಈ ತಾಣಗಳಿಗೂ ಬ್ಲಾಗ್‌ಗಳಿಗೂ ಇರುವ ವ್ಯತ್ಯಾಸವೇನು? ನಿಜವಾಗಿ ನೋಡಿದರೆ ಬ್ಲಾಗ್ ಕೂಡ ಒಂದು ಅಂತರಜಾಲ ತಾಣವೇ. ಆದರೆ ಒಂದು ವಿಧದ ತಾಣಗಳನ್ನು ಮಾತ್ರ ಬ್ಲಾಗ್ ಎಂದು ಕರೆಯಲಾಗುತ್ತದೆ. ಬ್ಲಾಗ್‌ನ ಲಕ್ಷಣಗಳು -ನಿಯಮಿತವಾಗಿ ಹೊಸ ಬರೆವಣಿಗೆಗಳನ್ನು ಸೇರಿಸುತ್ತಿರಬೇಕು, ಅವುಗಳನ್ನು ಸೇರಿಸಿದ ದಿನಾಂಕ ಪ್ರಕಾರ ಅಳವಡಿಸಿರಬೇಕು, ಕೊನೆಯ ಬರೆವಣಿಗೆ ಮೊದಲು ಲಭ್ಯವಾಗಿರುವಂತಿರುತ್ತದೆ, ಇತ್ಯಾದಿ. ಬ್ಲಾಗ್‌ನಲ್ಲಿ ಸೇರಿಸಲ್ಪಡುವ ಲೇಖನಕ್ಕೆ ಪೋಸ್ಟ್ ಅಥವಾ ಪೋಸ್ಟಿಂಗ್ ಎನ್ನುತ್ತಾರೆ. ಈ ಪೋಸ್ಟಿಂಗ್‌ಗೆ ಒಂದು ಶೀರ್ಷಿಕೆ, ಸೇರಿಸಿದ ದಿನಾಂಕ, ಮುಖ್ಯ ಬರಹ ಅಥವಾ ಲೇಖನ, ವಿಷಯ, ಇತ್ಯಾದಿ ಲಕ್ಷಣಗಳಿರುತ್ತವೆ. ಈ ಪೋಸ್ಟಿಂಗ್‌ನ ಕೆಳಗೆ ಓದುಗರು ತಮ್ಮ ಟೀಕೆ ಟಿಪ್ಪಣಿ ಸೇರಿಸುವ ಸೌಲಭ್ಯವಿದೆ. ಇಷ್ಟಲ್ಲದೆ ಈ ಬ್ಲಾಗ್‌ಗಳಿಗೆ ಆರ್‌ಎಸ್‌ಎಸ್ ಸೌಲಭ್ಯವಿದೆ. ಆರ್‌ಎಸ್‌ಎಸ್ ಎಂದರೆ ರಿಯಲಿ ಸಿಂಪಲ್ ಸಿಂಡಿಕೇಶನ್ ಎನ್ನುವುದರ ಸಂಕ್ಷಿಪ್ತ ರೂಪ. ಆರ್‌ಎಸ್‌ಎಸ್ ರೀಡರ್ ಎಂಬ ಹೆಸರಿನ ತಂತ್ರಾಂಶವನ್ನು (ಸಾಫ್ಟ್‌ವೇರ್) ಗಣಕಗಳಲ್ಲಿ (ಕಂಪ್ಯೂಟರ್) ಅಳವಡಿಸಿಕೊಂಡರೆ ಈ ಬ್ಲಾಗ್‌ಗಳನ್ನು ಗಣಕಕ್ಕೆ ಇ-ಮೈಲ್‌ಗಳನ್ನು ಇಳಿಸಿಕೊಂಡಂತೆ ಇಳಿಸಿಕೊಂಡು ಅಂತರಜಾಲ ಸಂಪರ್ಕ ಕಡಿದ ಮೇಲೂ ಓದಬಹುದು. ಬ್ಲಾಗ್ ಸುಲಭವಾಗಿ ಹೊಸ ಪುಟವನ್ನು ಸೇರಿಸುವ ಸೌಲಭ್ಯ ಹೊಂದಿದೆ. ಮಾಮೂಲಿ ಅಂತರಜಾಲ ತಾಣಗಳಿಗೆ ಈ ಸೌಲಭ್ಯವಿರುವುದಿಲ್ಲ. ಹೊಸ ಪೋಸ್ಟಿಂಗ್ ಸಾಮಾನ್ಯವಾಗಿ ಪುಟದ ಮೇಲೆ ತೋರುತ್ತದೆ. ಇನ್ನೊಂದು ಹೊಸ ಪೋಸ್ಟಿಂಗ್ ಬಂದಾಗ ಹಳೆಯ ಪೋಸ್ಟಿಂಗ್ ತಂತಾನೆ ಕೆಳಗೆ ತಳ್ಳಲ್ಪಡುತ್ತದೆ. ಟೀಕೆಯ ಕೆಳಗೆ ಇತರೆ ಓದುಗರು ಟೀಕೆಗೆ ಟೀಕೆ ಸೇರಿಸಬಹುದು. ಕೆಲವೊಮ್ಮೆ ಈ ಸರಪಣಿ ದೊಡ್ಡ ಚರ್ಚೆ ಅಥವಾ ವಾಗ್ವಾದವಾಗುವುದೂ ಇದೆ. ಎಲ್ಲ ಅಂತರಜಾಲ ತಾಣಗಳಿಗಿರುವಂತೆ ಬ್ಲಾಗ್‌ಗಳಿಗೂ ಇತರೆ ತಾಣ ಯಾ ಬ್ಲಾಗ್‌ಗಳಿಗೆ ಕೊಂಡಿ ನೀಡುವ ಸೌಲಭ್ಯವಿದೆ. ಸರಳವಾಗಿ ಹೇಳುಬೇಕೆಂದರೆ ಬ್ಲಾಗ್ ಒಬ್ಬ ವ್ಯಕ್ತಿಯ ವೈಯಕ್ತಿಕ ಅನಿಸಿಕೆಗಳನ್ನು ಜಗತ್ತಿಗೆಲ್ಲ ತಿಳಿಯುವಂತೆ ಸಾರ್ವಜನಿಕವಾಗಿ ಬರೆಯುವ ವ್ಯವಸ್ಥೆ.

ಯಾವ ಯಾವ ರೀತಿಯ ಬ್ಲಾಗ್‌ಗಳಿವೆ ಎಂಬುದನ್ನು ವೀಕ್ಷಿಸಿ ನೋಡಿದರೆ ನಮಗೆ ಅಂತರಜಾಲದಲ್ಲಿ ಎಷ್ಟು ವೈವಿಧ್ಯದ ತಾಣಗಳಿವೆಯೋ ಅಷ್ಟೂ ವೈವಿಧ್ಯ ಬ್ಲಾಗ್‌ಗಳಲ್ಲೂ ಇರುವುದು ಗೋಚರವಾಗುತ್ತದೆ. ಬ್ಲಾಗಿಗರಲ್ಲಿ ಬಹುಪಾಲು ಮಂದಿ ತಮ್ಮ ಹೊತ್ತು ಕಳೆಯಲು ಅಥವಾ ಏನಾದರೂ ಹೇಳಬೇಕು ಎನ್ನುವ ತುಡಿತ ತೀರಿಸಿಕೊಳ್ಳಲು ಬ್ಲಾಗಿಂಗ್ ಮಾಡುತ್ತಿದ್ದಾರೆ. ಹಾಗಿದ್ದರೂ ಇವರ ಬ್ಲಾಗ್‌ಗಳಲ್ಲಿ ಹಲವು ಉಪಯುಕ್ತ ಮಾಹಿತಿಗಳು ದೊರೆಯುವ ಸಾಧ್ಯತೆಗಳಿವೆ. ಬ್ಲಾಗ್ ಮಾಡುತ್ತಿರುವವರು ಕಥೆಗಾರ ಅಥವಾ ಸಾಹಿತಿಯಾಗಿದ್ದರಂತೂ ಓದುಗರಿಗೆ ಬೋನಸ್ ಎನ್ನಬಹುದು. ಪರಿಣತರಾದ ತಂತ್ರಜ್ಞರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಆಗುತ್ತಿರುವ ಹೊಸ ಸಂಶೋಧನೆಗಳ ಬಗ್ಗೆ ಪೂರ್ವಭಾವಿಯಾಗಿ ಬ್ಲಾಗ್ ಬರೆಯುವ ಮೂಲಕ ಈ ವಿಷಯಗಳಲ್ಲಿ ಆಸಕ್ತಿ ಇರುವವರಿಗೆ ಬೇಗನೆ ಮಾಹಿತಿ ಸಿಗುವಂತಾಗುತ್ತದೆ. ಉದಾಹರಣೆಗೆ ಮೈಕ್ರೋಸಾಫ್ಟ್ ಕಂಪೆನಿಯ ಹಲವು ಉದ್ಯೋಗಿಗಳು ಮುಂಬರುವ ತಂತ್ರಾಂಶಗಳ ಬಗ್ಗೆ ಬ್ಲಾಗಿಂಗ್ ಮಾಡುತ್ತಾರೆ. ಅಷ್ಟು ಮಾತ್ರವಲ್ಲ, ಈಗಿರುವ ತಂತ್ರಾಂಶಗಳ ಬಗ್ಗೆ ಸಲಹೆ ನೀಡುತ್ತಾರೆ. ಕೆಲವೊಮ್ಮೆ ಯಾವುದೇ ಗ್ರಾಹಕ ಕೈಪಿಡಿಯಲ್ಲೂ ಸಿಗದ ಮಾಹಿತಿ ಇಂತಹ ಬ್ಲಾಗ್‌ಗಳಲ್ಲಿ ದೊರೆಯುತ್ತವೆ. ಕೆಲವು ತಂತ್ರಜ್ಞರು ತಮ್ಮ ಕ್ಷೇತ್ರದಲ್ಲಿಯ ಕೆಲವು ಉಪಯುಕ್ತ ಸಲಹೆ ಕಿವಿಮಾತುಗಳನ್ನೂ ತಮ್ಮ ಬ್ಲಾಗ್‌ಗಳಲ್ಲಿ ನೀಡುತ್ತಿರುತ್ತಾರೆ. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಕನ್ನಡ ಮತ್ತು ಗಣಕ ಸಂಬಂಧಿ ಸಲಹೆ ಸೂಚನೆಗಳನ್ನು ನಾನು ಆಗಾಗ ನನ್ನ ಬ್ಲಾಗ್‌ನಲ್ಲಿ ನೀಡುತ್ತಿರುತ್ತೇನೆ. ಆದುದರಿಂದ ಎಲ್ಲ ಬ್ಲಾಗ್‌ಗಳನ್ನು ಕೆಲಸವಿಲ್ಲದವರ ಗಳಹುವಿಕೆ ಎಂದು ತುಚ್ಛೀಕರಿಸುವಂತಿಲ್ಲ.

ಬ್ಲಾಗ್‌ಗಳು ಸಾಮಾಜಿಕ ಆಲೋಚನೆ ಮತ್ತು ಒತ್ತಡ ರೂಪಿಸುವ ಸಾಧನವಾಗಿಯೂ ರೂಪುಗೊಳ್ಳತೊಡಗಿದ್ದು ಸುಮಾರು ಎರಡು ಮೂರು ವರ್ಷಗಳ ಹಿಂದೆ. ಜನರು ಬ್ಲಾಗಿಂಗ್ ಮೂಲಕವೇ ಅಮೇರಿಕದ ಚುನಾವಣೆಯಲ್ಲಿ ಜನಾಭಿಪ್ರಾಯ ರೂಪಿಸಿ ಕಣದಲ್ಲಿದ್ದ ಉಮೇದುವಾರರೊಬ್ಬರು ಹಿಂದೆ ಸರಿಯುವಂತೆ ಮಾಡಿದಲ್ಲಿಂದ ಬ್ಲಾಗ್ ಒಂದು ಪ್ರಮುಖ ಅಸ್ತ್ರವಾಗತೊಡಗಿತು. ಇದು ಸಾಧ್ಯವಾಗಿದ್ದು ಬ್ಲಾಗಿಗರು ಹೆಚ್ಚು ಹೆಚ್ಚು ಸುದ್ದಿಗಳನ್ನು ಯಾವುದೇ ಸಂಪಾದಕರ ಕತ್ತರಿಗೆ ಸಿಗದಂತೆ ತಮ್ಮ ಬ್ಲಾಗ್‌ಗಳಲ್ಲಿ ದಾಖಲಿಸತೊಡಗಿದುದರಿಂದ. ಆಗ ಈ ಬ್ಲಾಗ್ ಎನ್ನುವುದು ಒಂದು ಪರ್ಯಾಯ ಪತ್ರಿಕಾ ಮಾಧ್ಯಮವೇ ಆಗಿ ಹೊರಹೊಮ್ಮುವ ಸಾಧ್ಯತೆ ಜನರಿಗೆ ವೇದ್ಯವಾಯಿತು.

ಬ್ಲಾಗಿಂಗ್ ಒಂದು ಪರ್ಯಾಯ ಪತ್ರಿಕೋದ್ಯಮವೇ? ಅಥವಾ ಬ್ಲಾಗಿಂಗ್‌ನ್ನು ಪರ್ಯಾಯ ಪತ್ರಿಕೋದ್ಯಮವಾಗಿ ನಡೆಸಿಕೊಂಡು ಬರಬಹುದೇ? ಹೌದು ಎಂದು ಹೇಳಬಹುದು. ಇದು ಹೇಗೆ ಸಾಧ್ಯ? ಈ ಪ್ರಶ್ನೆಗೆ ಉತ್ತರ ನೀಡುವ ಮೊದಲು ಪತ್ರಿಕೋದ್ಯಮ ಎಂದರೇನು ಎಂದು ತಿಳಿಯೋಣ. ಪತ್ರಿಕೋದ್ಯಮ ಎನ್ನುವುದು ಜರ್ನಲಿಸಂ ಎನ್ನುವ ಇಂಗ್ಲಿಶ್ ಪದಕ್ಕೆ ಪಾರಿಭಾಷಿಕ ಪದವಾಗಿ ಬಳಕೆಯಲ್ಲಿದೆ. ಜರ್ನಲಿಸಂ ಪದವು ಜರ್ನಲ್ ಎಂಬ ಪದದಿಂದ ವ್ಯುತ್ಪತ್ತಿಯಾಗಿದೆ. ದಿನಚರಿ ಎಂಬುದು ಜರ್ನಲ್ ಪದದ ಅರ್ಥ. ದಿನಚರಿ ಇಟ್ಟುಕೊಳ್ಳುವುದು ಎಂಬುದೇ ಜರ್ನಲಿಸಂ ಪದದ ಮೂಲ ಅರ್ಥ. ಬ್ಲಾಗಿಂಗ್ ಕೂಡ ಒಂದು ರೀತಿಯಲ್ಲಿ ದಿನಚರಿಯೇ. ಹೀಗೆ ಸೈದ್ಧಾಂತಿಕವಾಗಿ ವಾದಿಸಿದರೂ ಬ್ಲಾಗಿಂಗ್ ಅನ್ನು ಪತ್ರಿಕೋದ್ಯಮ ಎನ್ನಬಹುದು.

ಬ್ಲಾಗಿಂಗ್ ಪತ್ರಿಕೋದ್ಯಮ ಯಾಕೆ ಎಂದು ವಿಚಾರಿಸುವ ಮೊದಲು ಮುಖ್ಯವಾಹಿನಿಯ ಪತ್ರಿಕೆಗಳ ತೊಂದರೆಗಳನ್ನು ವಿಶ್ಲೇಷಿಸೋಣ. ಒಳಿತುಗಳ ಬಗ್ಗೆ ಹಲವು ಕಡೆ ಹಲವು ಬಾರಿ ಪುನರುಚ್ಚರಿಸಿರುವುದರಿಂದ ಅವುಗಳನ್ನು ಇಲ್ಲಿ ಇನ್ನೊಮ್ಮೆ ದಾಖಲಿಸುವ ಅಗತ್ಯವಿಲ್ಲ. ಪತ್ರಿಕೆಗಳು ಬದುಕುವುದೇ ಜಾಹೀರಾತುಗಳಿಂದ. ಜಾಹೀರಾತು ನೀಡುವವರ ವಿರುದ್ಧ ಯಾವುದೇ ಲೇಖನ ಬರೆಯಬೇಕಾದರೆ ಪತ್ರಿಕೆಗಳು ಹಿಂಜರಿಯುತ್ತವೆ. ಅದೇ ರೀತಿ ಸರಕಾರದ ವಿರುದ್ಧವೂ ಪತ್ರಿಕೆಗಳು ಬರೆಯುವಾಗ ತಮ್ಮ ಲೇಖನಿಯ ತೀಕ್ಷ್ಣತೆಯನ್ನು ಕಡಿಮೆ ಮಾಡಿಕೊಳ್ಳುತ್ತವೆ. ಯಾವ ರಾಜಿಗೂ ಒಪ್ಪದ, ಯಾವ ಒತ್ತಡಕ್ಕೂ ಮಣಿಯದ ಪತ್ರಿಕೆಗಳು ಇಲ್ಲವೇ ಇಲ್ಲವೆಂದಲ್ಲ. ಪತ್ರಿಕೆಗಳಲ್ಲಿ ಜಾಗದ ಮಿತಿಯಿರುತ್ತದೆ. ಇದರಿಂದಾಗಿ ಹಲವು ಬಾರಿ ಪ್ರಾಮುಖ್ಯವಾದ ವಿಷಯಗಳೇ ಬಿಟ್ಟುಹೋಗುವುದು ಲೇಖನಗಳಲ್ಲಿ ಸರ್ವೇಸಾಮಾನ್ಯ. ದಿನಪತ್ರಿಕೆಯೇ ಆದರೂ ಲೇಖನ ತಯಾರಿಸಿ ಅದನ್ನು ಕಳುಹಿಸಿ ಸಂಪಾದಕರು ಅದನ್ನು ಅಂಗೀಕರಿಸಿ ಅದು ಮುದ್ರಣವಾಗಿ ಹೊರಬರುವಾಗ ಕೆಲವೊಮ್ಮೆ ತಿಂಗಳುಗಳೇ ಕಳೆದಿರುತ್ತವೆ. ಏತನ್ಮಧ್ಯೆ ಅದೇ ವಿಷಯದ ಬಗ್ಗೆ ಇನ್ನೊಂದು ಪತ್ರಿಕೆಯಲ್ಲಿ ಬೇರೊಬ್ಬ ಲೇಖಕರ ಲೇಖನ ಪ್ರಕಟವಾದರಂತೂ ಮುಗಿದೇ ಹೋಯಿತು. ಲೇಖನ ನೇರವಾಗಿ ಕಸದಬುಟ್ಟಿಗೇ ಸೇರಿದಂತೆ. ಬರೆದ ಲೇಖನದ ಪ್ರತಿಯೊಂದು ವಾಕ್ಯವೂ ಸಂಪಾದಕರ ಕತ್ತರಿಯಿಂದ ಪಾರಾಗಿ ಬರುತ್ತದೆ ಎಂಬ ಧೈರ್ಯವೂ ಇಲ್ಲ.

ಇತ್ತೀಚೆಗಂತೂ ಪತ್ರಿಕೆಗಳ ಮೇಲೆ ಜನರಿಗೆ ನಂಬಿಕೆ ಕಡಿಮೆಯಾಗುತ್ತಿದೆ. ಮಾಲಿಕರಿಗೆ ಬೇಕಾದವರಿಗೆ ಹೆಚ್ಚು ಪ್ರಚಾರ, ಮಾಲಿಕರ ಸಹ ಒಡೆತನದಲ್ಲಿರುವ ಇತರೆ ಕಂಪೆನಿಗಳ ತಯಾರಿಕೆಗಳಿಗೆ ಒತ್ತು ನೀಡುವುದು, ಸಂಪಾದಕರಿಗೆ ಇಷ್ಟವಾದವರಿಗೆ ಅಥವಾ ಅವರ ಸಾಧನೆಗಳಿಗೆ ಹೆಚ್ಚು ಒತ್ತು ನೀಡುವುದು -ಇವೆಲ್ಲ ಇತ್ತೀಚೆಗೆ ಸರ್ವೇಸಾಮಾನ್ಯವಾಗುತ್ತಿವೆ. ಪತ್ರಿಕೋದ್ಯೋಗಿಗಳ ಜ್ಞಾನದ ಮಟ್ಟ ಕುಸಿಯುತ್ತಿದೆ. ಅಧ್ಯಯನಾ ಪ್ರವೃತ್ತಿಯ ಕೊರತೆಯೂ ಇಂದಿನ ಪತ್ರಿಕೋದ್ಯೋಗಿಗಳಲ್ಲಿ ಹೆಚ್ಚುತ್ತಿದೆ.

ಪತ್ರಿಕಾ ಸಂಪಾದಕರ ಜ್ಞಾನದ ಮಟ್ಟ ಕುಸಿಯುತ್ತಿರುವುದಕ್ಕೆ ಸಾಕ್ಷಿಯಾಗಿ ಒಂದು ಉದಾಹರಣೆಯನ್ನು ಇಲ್ಲಿ ನೀಡಿದರೆ ಅಪ್ರಸ್ತುತವಾಗಲಾರದು. ಸುನಾಮಿ ಭಾರತಕ್ಕೆ ಅಪ್ಪಳಿಸಿ ಸಾವಿರಾರು ಜನರ ಪ್ರಾಣಹಾನಿ ಮಾಡಿದುದು ಎಲ್ಲರಿಗೂ ತಿಳಿದೇ ಇದೆ. ಸುನಾಮಿ ಸಂಭವಿಸಿ ಒಂದೆರಡು ವಾರಗಳಲ್ಲಿ ಯಾರೊ ಒಬ್ಬ ಕಿಡಿಗೇಡಿ ಒಂದು ಕುಚೋದ್ಯ ನಡೆಸಿದ. ಆತ ಅಮೇರಿಕಾದ ನಾಸಾ ಸಂಸ್ಥೆಯ ಜಾಲತಾಣದಿಂದ ಒಂದು ಚಂಡಮಾರುತದ ಉಪಗ್ರಹಚಿತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಅದನ್ನೇ ಸುನಾಮಿಯ ಉಪಗ್ರಹಚಿತ್ರ ಎಂದು ಕೆಲವರಿಗೆ ಇಮೈಲ್ ಮೂಲಕ ಕಳುಹಿಸಿದ. ಇದು ಇಮೈಲ್ ಮೂಲಕ ಜನರಿಂದ ಜನರಿಗೆ ದಾಟಿ ಕೊನೆಗೆ ಕೆಲವು ಪತ್ರಿಕೆಗಳ ಸಂಪಾದಕರುಗಳಿಗೂ ತಲುಪಿತು. ಕನ್ನಡದ ಪತ್ರಿಕೆಯೊಂದು ಅದನ್ನು ತನ್ನ ಮುಖಪುಟದಲ್ಲೇ ಪ್ರಕಟಿಸಿತು. ಸುನಾಮಿ ಸಮುದ್ರದ ತಳದಲ್ಲಿ ನಡೆಯುವ ಪ್ರಕ್ರಿಯೆ. ಅದನ್ನು ಉಪಗ್ರಹದ ಮೂಲಕ ಚಿತ್ರಿಸಲು ಅಸಾಧ್ಯ. ಈ ಪ್ರಾಥಮಿಕ ಜ್ಞಾನ ಪತ್ರಿಕೆಯ ಸಂಪಾದಕರಿಗೆ ಇರಲಿಲ್ಲ ಎಂದರೆ ಎಷ್ಟು ಶೋಚನೀಯ ಅಲ್ಲವೇ? ಪತ್ರಿಕೆಗಳಿಗೆ ಈ ಬಗ್ಗೆ ತಿಳಿವಳಿಕೆ ನೀಡಿ ಪತ್ರ ಬರೆದರೆ ಸಂಪಾದಕರು ಅದನ್ನು ಪ್ರಕಟಿಸುವುದೇ ಇಲ್ಲ!

ಬ್ಲಾಗಿಂಗ್‌ಗೆ ಈ ಯಾವ ಸಮಸ್ಯೆಗಳೂ ಇಲ್ಲ. ಬ್ಲಾಗಿಂಗ್ ನಡೆಸುವುದು ಈಗಾಗಲೇ ತಿಳಿಸಿರುವಂತೆ ಅಂತರಜಾಲದಲ್ಲಿ. ಹೆಚ್ಚಿನ ಮಂದಿಯ ಬ್ಲಾಗ್‌ಗಳು ಇರುವುದು ಉಚಿತ ತಾಣಗಳಲ್ಲಿ. ಅಲ್ಲಿ ಜಾಗದ ಕೊರತೆ ಇಲ್ಲ. ಲೇಖನವೊಂದಕ್ಕೆ ಇಂತಿಷ್ಟೇ ಪದಗಳಿರಬೇಕೆಂಬ ಮಿತಿಯೂ ಇಲ್ಲ. ಸಂಪಾದಕರ ಅಂಕುಶ ಕತ್ತರಿಗಳಿಲ್ಲ. ಬರೆಯಬೇಕೆನಿಸಿದ್ದನ್ನು ನೇರವಾಗಿ ಜಾಲತಾಣದಲ್ಲೇ ದಾಖಲಿಸುವುದರಿಂದ ಬರೆದು ಅದು ಪ್ರಕಟವಾಗುವ ಮಧ್ಯದ ಸಮಯ ಉಳಿತಾಯವಾಗುತ್ತದೆ. ಇಲ್ಲಿ ಎಲ್ಲವೂ ಫಾಸ್ಟ್‌ಫುಡ್‌ಗಳಂತೆ. ಕ್ಷಣಕ್ಷಣದ ವ್ಯವಹಾರ. ಲೇಖನಕ್ಕೆ ಸಂಬಂಧಿಸಿದಂತೆ ಛಾಯಾಚಿತ್ರಗಳಿದ್ದರೆ ಅವುಗಳನ್ನೂ ಜಾಲತಾಣಕ್ಕೆ ಸೇರಿಸಬಹುದು. ನೇರವಾಗಿ ಘಟನೆ ನಡೆಯುತ್ತಿರುವ ಸ್ಥಳದಿಂದಲೇ ಲೇಖನವನ್ನು ಅಂತರಜಾಲಕ್ಕೆ ಸೇರಿಸಬಹುದು. ಲ್ಯಾಪ್‌ಟಾಪ್ ಮತ್ತು ಅಂತರಜಾಲ ಸಂಪರ್ಕ ಇದ್ದರೆ ಸಾಕು. ಈಗೀಗ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ಕೆಲವು ಅತ್ಯಾಧುನಿಕ ಮೊಬೈಲ್ ಫೋನುಗಳಿಂದ ಕೂಡ ನೇರವಾಗಿ ಈ ಎಲ್ಲ ಕೆಲಸ ನಡೆಸಬಹುದು.

ಬ್ಲಾಗಿಂಗ್‌ಗೆ ಮುಖ್ಯವಾಹಿನಿಯ ಪತ್ರಿಕೆಗಳಿಗಿರುವ ಯಾವ ತೊಡಕುಗಳೂ ಇಲ್ಲ ಎಂದು ಹೇಳಿಯಾಗಿದೆಯಷ್ಟೆ? ಬ್ಲಾಗಿಂಗ್‌ಗಿರುವ ಇನ್ನೊಂದು ಅತಿ ಮುಖ್ಯವಾದ ಸವಲತ್ತೆಂದರೆ ಓದುಗರು ತಮ್ಮ ಟೀಕೆ ಟಿಪ್ಪಣಿ ಸೇರಿಸುವ ಸೌಲಭ್ಯ. ಇದು ಪ್ರತಿಸ್ಪಂದನಾತ್ಮಕ ಅಂತರಜಾಲದಲ್ಲಿ ಮಾತ್ರ ಸಾಧ್ಯ. ಮುದ್ರಿತ ಪತ್ರಿಕೆಗಳಲ್ಲಿ ಇದು ಅಸಾಧ್ಯ. ಒಬ್ಬ ತನಗಿಷ್ಟ ಬಂದಂತೆ ಬ್ಲಾಗ್ ಬರೆಯುತ್ತಾನೆಂದಿಟ್ಟುಕೊಳ್ಳಿ. ಈಗಾಗಲೇ ಹೇಳಿರುವಂತೆ ಬ್ಲಾಗ್‌ಗೆ ಯಾವ ಸಂಪಾದಕರಿಲ್ಲ. ಹಾಗಾಗಿ ಯಾರು ಏನು ಬೇಕಾದರೂ ಬರೆಯಬಹುದು ತಾನೆ? ಸುಳ್ಳು ಸುಳ್ಳೇ ಬರೆದರೆ? ಆಗ ಓದುಗರು ಸುಮ್ಮನೆ ಬಿಡುವುದಿಲ್ಲ. ಬ್ಲಾಗಿನ ಕೆಳಗೆಯೇ ತಮ್ಮ ಟಿಪ್ಪಣಿ ಸೇರಿಸುತ್ತಾರೆ. ನೀನು ಬರೆದುದು ಸುಳ್ಳೆಂದು ಎಲ್ಲರೂ ಝಾಡಿಸುತ್ತಾರೆ. ಓದುಗರ ಪ್ರತಿಕ್ರಿಯೆಯನ್ನು ದಾಖಲಿಸದಂತೆ ಮಾಡುವ ಸೌಲಭ್ಯವೂ ಬ್ಲಾಗ್‌ನಲ್ಲಿದೆ. ಹಾಗೆ ಯಾರಾದರು ಬ್ಲಾಗಿಗರು ಆಯ್ಕೆ ಮಾಡಿಟ್ಟರೆ ಅಂತಹ ಬ್ಲಾಗಿಗೆ ಯಾರೂ ಮೂರು ಕಾಸಿನ ಬೆಲೆಯನ್ನೂ ನೀಡುವುದಿಲ್ಲ. ಅದನ್ನು ಓದುವುದೂ ಇಲ್ಲ. ಆದುದರಿಂದ ಅಂತಹ ಬ್ಲಾಗ್‌ಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಪತ್ರಿಕೋದ್ಯೋಗಿಗಳು ಮತ್ತು ಓದುಗರು ಎರಡು ಧ್ರುವಗಳಲ್ಲಿರುತ್ತಾರೆ. ಪತ್ರಿಕೆಯವರು ನೀಡಿದ್ದನ್ನು ಓದುಗರು ಆಯ್ಕೆಯಿಲ್ಲದೆ ಓದಬೇಕಾಗುತ್ತದೆ. ಓದುಗರು ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳನ್ನು ನೀಡುವುದು, ಅದನ್ನು ಪತ್ರಿಕೆಯವರು ಪ್ರಕಟಿಸುವುದು ಬಹು ವಿರಳ. ಬ್ಲಾಗ್‌ಗಳಲ್ಲಿ ಹಾಗಲ್ಲ. ಓದುಗರೂ ಭಾಗವಹಿಸುತ್ತಾರೆ. ಸುನಾಮಿಯಲ್ಲಿ ಸಂತ್ರಸ್ತರಾದವರಿಗೆ ಸಹಾಯ ಮಾಡಲೆಂದು ಒಬ್ಬರು ಬ್ಲಾಗ್ ತಾಣವನ್ನು ಪ್ರಾರಂಭಿಸಿದ್ದರು. ಕಳೆದುಹೋದವರ ಫೋಟೋಗಳನ್ನು ಅಲ್ಲಿ ಹಾಕಿ ಎಲ್ಲ ಓದುಗರಿಗೆ ಕಾಣುವಂತೆ ಮಾಡಿ ಹಲವು ಮಂದಿ ತಮ್ಮ ಕಳೆದುಹೋದ ಬಾಂಧವರನ್ನು ವಾಪಾಸು ಪಡೆಯುವಂತೆ ಮಾಡಿದ್ದರು. ಅವರ ಬ್ಲಾಗ್ ತಾಣಕ್ಕೆ ಹಲವು ಮಂದಿ ಮಾಹಿತಿ ಸೇರಿಸುವ ಮೂಲಕ ಸಹಾಯಹಸ್ತ ನೀಡಿದ್ದರು.

ಹಾಗಾದರೆ ಎಲ್ಲ ಬ್ಲಾಗ್‌ಗಳೂ ಪತ್ರಿಕೋದ್ಯಮವೇ? ಖಂಡಿತ ಅಲ್ಲ. ಕೆಲವು ಬ್ಲಾಗ್‌ಗಳನ್ನು ಮಾತ್ರ ಹೊಸ ರೀತಿಯ ಪತ್ರಿಕೋದ್ಯಮ ಎಂದುಕೊಳ್ಳಬಹುದು. ಅವು ಯಾವುವು? ವೃತ್ತಿನಿರತ ಪತ್ರಿಕೋದ್ಯೋಗಿಗಳು ಬರೆದವು, ಪರಿಣತ ವೃತ್ತಿನಿರತರು ತಮ್ಮ ತಮ್ಮ ವೃತ್ತಿ ಬಗ್ಗೆ ಬರೆದವು, ಯಾವುದಾದರೊಂದು ಪ್ರಮುಖ ಘಟನೆ ಬಗ್ಗೆ ಆ ಘಟನೆ ಜರುಗಿದ ಸ್ಥಳದಿಂದ ಯಾರದರೊಬ್ಬರು ನೇರವಾಗಿ ವರದಿ ರೂಪದಲ್ಲಿ ಬರೆದವು, ಅಂತರಜಾಲದಲ್ಲಿರುವ ಇತರೆ ಸುದ್ದಿಗಳಿಗೆ ಕೊಂಡಿ ನೀಡುವಂತವು -ಇವನ್ನೆಲ್ಲ ಬ್ಲಾಗ್ ಪತ್ರಿಕೋದ್ಯಮ ಎನ್ನಬಹುದು.

ಬ್ಲಾಗ್ ಬಗ್ಗೆ ಇನ್ನೊಂದು ಪ್ರಚಲಿತ ಪದ ಎಂದರೆ ಪಾರ್ಟಿಸಿಪೇಟರಿ ಜರ್ನಲಿಸಂ ಅರ್ಥಾತ್ ಭಾಗೇದಾರಿ ಪತ್ರಿಕೋದ್ಯಮ ಎಂದು ಕರೆಯಬಹುದು. ಏನು ಹಾಗೆಂದರೆ? ವಿಕಿಪೀಡಿಯಾ ನೀಡುವ ವಿವರಣೆ ಪ್ರಕಾರ ಭಾಗೇದಾರಿ ಪತ್ರಿಕೋದ್ಯಮ ಎಂದರೆ “ಸುದ್ದಿ ಮತ್ತು ಸಂಬಂಧಿತ ಮಾಹಿತಿಯ ಸಂಗ್ರಹಣೆ, ವರದಿ, ವಿಶ್ಲೇಷಣೆ ಮತ್ತು ಹಂಚುವಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು”. ಇವನ್ನೆಲ್ಲ ಮಾಡುವ ವೃತ್ತಿನಿರತ ಪತ್ರಿಕೋದ್ಯೋಗಿಯಲ್ಲದವರನ್ನು ಭಾಗೇದಾರಿ ಪತ್ರಿಕಾಕರ್ತ ಎನ್ನಬಹುದು. ಬ್ಲಾಗಿಂಗ್ ಬಾಗೇದಾರಿ ಪತ್ರಿಕೋದ್ಯೋಮದ ಪ್ರಮುಖ ಅಂಗ. ಸಾರ್ವಜನಿಕರೇ ವರದಿಗಾರರಾಗಿರುವ ತುಂಬ ಪ್ರಖ್ಯಾತವಾಗಿರುವ ಅಂತರಜಾಲ ತಾಣ ದಕ್ಷಿಣ ಕೊರಿಯಾದ ಓಹ್ ಮೈ ನ್ಯೂಸ್. ಸಿಟಿಝನ್ ಜರ್ನಲಿಸಂ ಎನ್ನುವ ಪದ ಈ ತಾಣದಿಂದ ಖ್ಯಾತಿಯನ್ನು ಪಡೆಯಿತು. ಭಾಗೇದಾರಿ ಪತ್ರಿಕಾಕರ್ತರಿಂದಲೇ ನಡೆಸಲ್ಪಡುವ ಸುದ್ದಿ ಮತ್ತು ವಿಶ್ಲೇಷಣೆಗಳ ಅಂತರಜಾಲ ತಾಣ ಇದಾಗಿದೆ.

ಭಾರತದಲ್ಲೂ ಬಾಗೇದಾರಿ ಪತ್ರಿಕಾಕರ್ತರಿದ್ದಾರೆ. ಇವರಲ್ಲಿ ಒಂದು ಪ್ರಮುಖ ವಿಭಾಗ ಎಂದರೆ ಮುಖ್ಯವಾಹಿನಿಯ ಪತ್ರಿಕೆಗಳ ಮೇಲೆ ಕಾವಲುನಾಯಿಯಂತೆ ಕೆಲಸ ಮಾಡುವವರು. ಕನ್ನಡ ಭಾಷೆಯ “ನೂರೆಂಟುಸುಳ್ಳು” ಇದಕ್ಕೆ ಒಂದು ಉದಾಹರಣೆ. ಈ ಬ್ಲಾಗ್‌ನಲ್ಲಿ ಮುಖ್ಯವಾಗಿ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗುವ ತಪ್ಪುಗಳನ್ನು ಆಗಾಗ ಎತ್ತಿ ತೋರಿಸಲಾಗುತ್ತಿದೆ. ಕನ್ನಡ ಪತ್ರಿಕೆಗಳಲ್ಲಿ ಎಂದು ಹೇಳಿದರೂ, ಈ ಬ್ಲಾಗ್ ನಡೆಸುವವರೇ ಹೇಳಿಕೊಂಡಂತೆ, ಕನ್ನಡದ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾಗುವ “ನೂರೆಂಟುಮಾತು” ಅಂಕಣವನ್ನು ವಿಶ್ಲೇಷಿಸಲೆಂದೇ ಈ ಬ್ಲಾಗ್ ಹುಟ್ಟಿಕೊಂಡದ್ದು. “ನೂರೆಂಟುಮಾತು” ಅಂಕಣಕಾರರೇನೋ ಈ ಬ್ಲಾಗನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡದ್ದು ಮಾತ್ರವಲ್ಲ ತಮ್ಮ ಪತ್ರಿಕೆಯಲ್ಲಿ ಒಂದು ಹುದ್ದೆಯನ್ನೇ ಈ ಬ್ಲಾಗಿಗರಿಗಾಗಿ ಹುಟ್ಟು ಹಾಕಿ ಅವರನ್ನು ಆ ಹುದ್ದೆಯನ್ನು ಸ್ವೀಕರಿಸಲು ಆಹ್ವಾನಿಸಿದ್ದರು. ಅವರು ಅದನ್ನು ಸ್ವೀಕರಿಸಲಿಲ್ಲ ಎಂಬುದು ಬೇರೆ ವಿಷಯ.

ಆದರೆ ಭಾರತದ ಇಂಗ್ಲಿಶ್ ಪತ್ರಿಕೋದ್ಯಮದ ದೈತ್ಯ ಟೈಂಸ್ ಆಫ್ ಇಂಡಿಯಾ ಮಾತ್ರ ತಾನು ಯಾರನ್ನು ಬೇಕಾದರೂ ಟೀಕಿಸಬಹುದು ಅದರೆ ತನ್ನನ್ನು ಯಾರೂ ಟೀಕಿಸಬಾರದು ಎಂಬ ನಿಲುವನ್ನು ತಾಳಿದೆ. ಮೀಡಿಯಾಹ್ ಎಂಬ ಹೆಸರಿನಲ್ಲಿ ಪ್ರದ್ಯುಮ್ನ ಮಹೇಶ್ವರಿ ಎಂಬವರು ಒಂದು ಬ್ಲಾಗ್ ನಡೆಸುತ್ತಿದ್ದರು. ಅದರಲ್ಲಿ ಅವರು ತಮ್ಮನ್ನು ಟೀಕಿಸಿದ್ದಕ್ಕೆ ಟೈಂಸ್ ಆಫ್ ಇಂಡಿಯಾದವರು ವಕೀಲರ ಮೂಲಕ ನೋಟೀಸು ಜಾರಿ ಮಾಡಿದ್ದರು. ಟೈಂಸ್ ಆಫ್ ಇಂಡಿಯಾದಂತಹ ದೈತ್ಯನ ವಿರುದ್ಧ ಏಕಾಕಿಯಾಗಿ ಹೋರಾಡಲು ನನ್ನಿಂದ ಅಸಾಧ್ಯ ಎಂದು ಘೋಷಿಸಿದ ಪ್ರದ್ಯುಮ್ನರು ತಮ್ಮ ಬ್ಲಾಗನ್ನೇ ತೆಗೆದುಬಿಟ್ಟರು. ಆದರೆ ಭಾರತದ ಬ್ಲಾಗ್ ಮಂಡಲವನ್ನೇ ಈಸುದ್ದಿ ಅಲ್ಲಾಡಿಸಿಬಿಟ್ಟಿತು. ಪ್ರದ್ಯುಮ್ನರ ಪರವಾಗಿ ಎಲ್ಲ ಬ್ಲಾಗಿಗರು ಒಂದಾದರು. ಒಬ್ಬರು ಪ್ರದ್ಯುಮ್ನರ ಬ್ಲಾಗನ್ನು ನಕಲು ಮಾಡಿ ತಮ್ಮ ಬ್ಲಾಗಿನಲ್ಲಿ ಹಾಕಿದರು. ಮತ್ತೊಬ್ಬರು ಅಂತರಜಾಲದಲ್ಲೇ ಟೈಂಸ್‌ನವರಿಗೆ ತಮ್ಮ ನೋಟೀಸು ವಾಪಾಸು ತೆಗೆದುಕೊಳ್ಳುವಂತೆ ಒಂದು ಮನವಿ ನಿರ್ಮಿಸಿದರು. ಈ ಮನವಿಗೆ ೫೦೦ಕ್ಕೂ ಹೆಚ್ಚು ಬ್ಲಾಗಿಗರು ಸಹಿ ಹಾಕಿದರು. ಭಾರತೀಯ ಬ್ಲಾಗ್ ಮಂಡಲದಲ್ಲೇ ಇದೊಂದು ತುಂಬ ಪ್ರಚಾರವನ್ನು ಪಡೆದ ಘಟನೆ.

ಒಟ್ಟಿನಲ್ಲಿ ಹೇಳುವುದಾದರೆ ಮುಖ್ಯವಾಹಿನಿಯ ಪತ್ರಿಕೋದ್ಯಮಕ್ಕೆ ಒಂದು ರೀತಿಯಲ್ಲಿ ಪರ್ಯಾಯವಾಗಿ ಬ್ಲಾಗಿಂಗ್ ಬೆಳೆಯುತ್ತಿದೆ. ಮುಖ್ಯವಾಹಿನಿಯ ಮಾಧ್ಯಮಗಳು ಇದನ್ನು ಗಂಭೀರವಾಗಿ ಪರಿಗಣಿಸತೊಡಗಿವೆ.

(೨೦೦೬ನೆ ಇಸವಿಯ ನವಂಬರ್ ೧೯ ರಂದು ಬರೆದದ್ದು)
(ಬೆಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ “ವಿದ್ಯುನ್ಮಾನ ಮಾಧ್ಯಮದಲ್ಲಿ ಹೊಸ ಆಯಾಮಗಳು” ಪುಸ್ತಕದಲ್ಲಿ ಪ್ರಕಟವಾದ ಲೇಖನ)

9 Responses to ಬ್ಲಾಗಿಂಗ್ – ಪರ್ಯಾಯ ಪತ್ರಿಕೋದ್ಯಮ

  1. jagadish k bellary

    I got a clear idea about blogs. thanks. i will be reading your articles in kannada prabha. very informative. keep it up.

  2. GURUBASAVARAJ.R.B

    sir, i listen your talk in 27th science writters workshop-kuduremukha. after i see your website. and read articles related to blogs. those are very helpfull. but i con’t learn about how we upload our articles to our blogs. please give information.

  3. Harini Gnt

    I love to write Kannada Blogs. Trying from past 10 days. 80% of my efforts, solved by Vishwa Kannada. Still, I want full information …

  4. tuljappa budhera

    i got all about blog

  5. nataraja d

    sir,how to open new blog ? Any requirement/condition is there sir . please send to my mail address . Thanking you sir- NATARAJA lecturer.

  6. amit

    i like to read your online news paper, so always publish such good articles. Thanks

  7. Naveenkumar S H

    Good article

  8. Bapuji kataraki

    Nice article on blog.. Pls add up recent trend in blog system

  9. Bapuji kataraki

    Nice article on blog..

Leave a Reply