ತಂತ್ರಜ್ಞಾನದ ಕಿಟಕಿ ತೆರೆಯಲಿ ಕನ್ನಡಕೆ

ಕನ್ನಡ ಭಾಷೆಯನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಜೊತೆ ಮುಂದೆ ಕೊಂಡುಹೋಗಬೇಕಾಗಿದೆ. ಕನ್ನಡ ಭಾಷೆಯೆಂದರೆ ಕೇವಲ ಪಂಪ, ರನ್ನ, ಜನ್ನ, ಕುಮಾರವ್ಯಾಸರಲ್ಲ. ಹೊಸ ತಂತ್ರಜ್ಞಾನದ ಜೊತೆ ಕನ್ನಡ ಭಾಷೆಯೂ ಸೇರಿಕೊಳ್ಳಬೇಕಾಗಿದೆ. ಈಗಿನ ಕಾಲದಲ್ಲಿ ಎಲ್ಲವೂ ಮಾಹಿತಿ ತಂತ್ರಜ್ಞಾನವನ್ನೇ ಅವಲಂಬಿಸಿರುವುದುರಿಂದ ಅಲ್ಲಿಂದಲೇ ಕನ್ನಡ ಭಾಷೆಯ ಹೊಸಯುಗದ ಪ್ರಾರಂಭ ಆಗಬೇಕಾಗಿದೆ.

ಫೆಬ್ರವರಿ ೨೧ ಅಂತಾರಾಷ್ಟ್ರೀಯ ಮಾತೃಭಾಷಾ ದಿನ. ದೈನಂದಿನ ಜೀವನದಲ್ಲಿ ಕನ್ನಡ ಬಳಕೆಯ ಜೊತೆ ತಂತ್ರಜ್ಞಾನದಲ್ಲೂ ಕನ್ನಡ ಹಾಸುಹೊಕ್ಕಾಗಿ ಬೆರೆಯತಕ್ಕದ್ದು. ಈ ತಂತ್ರಜ್ಞಾನದಲ್ಲಿ ಕನ್ನಡವೆಲ್ಲಿದೆ ಸ್ವಲ್ಪ ಗಮನಿಸೋಣ.

 

ಮೊದಲನೆಯದಾಗಿ ಶೇಕಡ ೯೫ ಮಂದಿ ಬಳಸುವ ಮೈಕ್ರೋಸಾಫ್ಟ್‌ನಲ್ಲಿ ಕನ್ನಡದ ಅಳವಡಿಕೆ ಮತ್ತು ಬಳಕೆ ಬಗ್ಗೆ ಗಮನಿಸೋಣ. ಪ್ರಪಂಚಾದ್ಯಂತ ಬಹುಪಾಲು ಜನರು ಬಳಸುವುದು ಮೈಕ್ರೋಸಾಫ್ಟ್ ಕಂಪೆನಿಯವರ ವಿಂಡೋಸ್ ಕಾರ್ಯಾಚರಣ ವ್ಯವಸ್ಥೆಯನ್ನು (ಆಪರೇಟಿಂಗ್ ಸಿಸ್ಟಮ್). ಇನ್ನು ದೈನಂದಿನ ಕಾರ್ಯಚಟುವಟಿಕೆಗಳಿಗೆ ಬಳಸುವುದು ಮೈಕ್ರೋಸಾಫ್ಟ್‌ನವರದೇ ಆದ ಆಫೀಸ್ ತಂತ್ರಾಂಶಗುಚ್ಛವನ್ನು. ಜನಸಾಮಾನ್ಯರಿಗೆ ಗಣಕಗಳಲ್ಲಿ ಮುಖ್ಯವಾಗಿ ಮಾಡಬೇಕಾದ ಎಲ್ಲ ಕೆಲಸಗಳನ್ನು ವಿಂಡೋಸ್ ಮತ್ತು ಆಫೀಸ್‌ಗಳನ್ನು ಬಳಸಿ ಮಾಡಬಹುದು. ಈ ಕೆಲಸಗಳು ಯಾವುವು? ಅವುಗಳಿಗೆ ಜನರು ಬಳಸುವ ತಂತ್ರಾಂಶಗಳು (ಸಾಫ್ಟ್‌ವೇರ್) ಯಾವುವು? ಒಂದು ಗಣಕವನ್ನು ನಡೆಸುವ ಮೇಲುಸ್ತುವಾರಿಗೆ ವಿಂಡೋಸ್. ಪತ್ರ, ಪುಸ್ತಕ, ಲೇಖನ, ಇತ್ಯಾದಿಗಳ ಬೆರಳಚ್ಚು ಮತ್ತು ಪುಟವಿನ್ಯಾಸಕ್ಕೆ ವರ್ಡ್. ಹಣಕಾಸು ಮತ್ತು ಇತರೆ ಲೆಕ್ಕ ವ್ಯವಹಾರಗಳಿಗೆ ಎಕ್ಸೆಲ್. ದತ್ತಾಂಶಗಳ (ಡಾಟಾಬೇಸ್) ಸಂಗ್ರಹಣೆ ಮತ್ತು ನಿರ್ವಹಣೆಗೆ ಆಕ್ಸೆಸ್. ವಿ-ಅಂಚೆ (ಇಮೈಲ್) ಕಳುಹಿಸಲು ಮತ್ತು ಸ್ವೀಕರಿಸಲು ಔಟ್‌ಲುಕ್. ಭಾಷಣ ಕೊಡಲು ಮತ್ತು ಜೊತೆಗೆ ಸ್ಲೈಡ್‌ಶೋ ಮಾಡಲು ಪವರ್‌ಪೋಯಿಂಟ್. ಈ ವರ್ಡ್, ಎಕ್ಸೆಲ್, ಆಕ್ಸೆಸ್, ಔಟ್‌ಲುಕ್ ಮತ್ತು ಪವರ್‌ಪೋಯಿಂಟ್ ಒಟ್ಟು ಸೇರಿ ಆಫೀಸ್ ತಂತ್ರಾಂಶಗುಚ್ಛ ಆಗಿದೆ.

 

ಮೈಕ್ರೋಸಾಫ್ಟ್‌ನವರು ೨೦೦೧ರಲ್ಲಿ ಬಿಡುಗಡೆ ಮಾಡಿದ ವಿಂಡೋಸ್ ಎಕ್ಸ್‌ಪಿ ಮತ್ತು ಆಫೀಸ್ ಎಕ್ಸ್‌ಪಿ ತಂತ್ರಾಂಶಗಳಲ್ಲಿ ಕನ್ನಡವನ್ನು ಹಾಸುಹೊಕ್ಕಾಗಿ ಅಳವಡಿಸಲಾಗಿತ್ತು. ನಂತರ ಬಂದ ವಿಸ್ತ ಮತ್ತು ಈಗ ಬಳಕೆಯಲ್ಲಿರುವ ವಿಂಡೋಸ್ ೭ ಕಾರ್ಯಾಚರಣೆಯ ವ್ಯವಸ್ಥೆಗಳಲ್ಲಿ ಕನ್ನಡವನ್ನು ಅಳವಡಿಸಲಾಗಿದೆ ಮಾತ್ರವಲ್ಲ ವಿಂಡೋಸ್ ಎಕ್ಸ್‌ಪಿಯಲ್ಲಿ ನುಸುಳಿದ್ದ ಕನ್ನಡದ ದೋಷಗಳನ್ನು ಸರಿಪಡಿಸಲಾಗಿದೆ. ಹಾಗೆಯೇ ಆಫೀಸ್‌ನ ನಂತರದ ಆವೃತ್ತಿಗಳಾದ ೨೦೦೩, ೨೦೦೭ ಮತ್ತು ೨೦೧೦ಗಳಲ್ಲಿ ಕನ್ನಡವನ್ನು ಯಾವುದೇ ದೋಷವಿಲ್ಲದೆ ಬಳಸಬಹುದು. ಕನ್ನಡದ ಸ್ಪೆಲ್ಲಿಂಗ್ ಚೆಕ್ ಕೂಡ ಮಾಡಬಹುದು. ಮಾತ್ರವಲ್ಲ ವಿಂಡೋಸ್ ಮತ್ತು ಆಫೀಸ್‌ಗಳಿಗೆ ಕನ್ನಡದ ಹೊದಿಕೆ ಅಂದರೆ Language Interface Pack ಕೂಡ ಲಭ್ಯವಿದೆ. ಇದನ್ನು ಹಾಕಿಕೊಂಡರೆ ಮೆನುಗಳು ಕೂಡ ಕನ್ನಡದಲ್ಲಿ ಮೂಡಿಬರುತ್ತವೆ. ಈ ತಂತ್ರಾಂಶಗಳನ್ನು ಉಪಯೋಗಿಸಿ ಇನ್ನಿತರೆ ಯಾವುದೇ ಬಾಹ್ಯ ಲಿಪಿ ತಂತ್ರಾಂಶಗಳ ನೆರವಿಲ್ಲದೆ ಕನ್ನಡವನ್ನು ಸಮಗ್ರವಾಗಿ ಬಳಸಬಹುದು. ಕನ್ನಡದ ಬಳಕೆಗೆ ಬೇಕಾದ ಸವಲತ್ತುಗಳಾದ ಕೀಲಿಮಣೆ ತಂತ್ರಾಂಶ, ಅಕ್ಷರವಿನ್ಯಾಸ (ಫಾಂಟ್), ಶಿಷ್ಟತೆಗೊಳಪಟ್ಟ ಮಾಹಿತಿ ಸಂಗ್ರಹ, ಕನ್ನಡ ಭಾಷೆಯ ಪ್ರಕಾರ ಅಕಾರಾದಿ ವಿಂಗಡಣೆ, ಪದಪರೀಕ್ಷೆ -ಇವುಗಳನ್ನೆಲ್ಲ ವಿಂಡೋಸ್ ಮತ್ತು ಆಫೀಸ್ ತಂತ್ರಾಂಶಗಳು ಒಳಗೊಂಡಿವೆ.

 

ಆನ್ವಯಿಕ ತಂತ್ರಾಂಶ ತಯಾರಿಗೆ ವಿಶುವಲ್ ಸ್ಟುಡಿಯೋ ಮತ್ತು ದತ್ತ ಸಂಗ್ರಹಣೆಗೆ ಎಸ್‌ಕ್ಯೂಎಲ್ ಸರ್ವರ್ ಇವೆ. ಇವುಗಳನ್ನು ಬಳಸಿ ಕನ್ನಡ ಮಾತ್ರವಲ್ಲ ಪ್ರಪಂಚದ ಇತರೆ ಯಾವ ಭಾಷೆಯನ್ನು ಕೂಡ ಜೊತೆಜೊತೆಗೇ ಬಳಸಿಕೊಂಡು ಆನ್ವಯಿಕ ತಂತ್ರಾಂಶ ತಯಾರಿಸಬಹುದು. ಉದಾಹರಣೆಗೆ ಕರ್ನಾಟಕ ಸರಕಾರದ ಪಡಿತರ ಚೀಟಿ ತಂತ್ರಾಂಶ. ಇದು ಕನ್ನಡದಲ್ಲಿದೆ.

 

ಮೇಲೆ ನೀಡಿದ ಎಲ್ಲ ಉದಾಹರಣೆಗಳೂ ಕನ್ನಡವನ್ನು ಯುನಿಕೋಡ್ ಶಿಷ್ಟತೆಯಲ್ಲಿ ಬಳಸುತ್ತಿವೆ. ಯುನಿಕೋಡ್ ಎಂಬುದು ಒಂದು ಶಿಷ್ಟತೆ. ಅದು ಯಾವುದೇ ಒಂದು ಕಂಪೆನಿಯ ತಂತ್ರಾಂಶವಲ್ಲ. ಇದರಲ್ಲಿ ಪ್ರಪಂಚದ ಎಲ್ಲ ಭಾಷೆಯ ಎಲ್ಲ ಅಕ್ಷರಗಳಿಗೂ ಪ್ರತ್ಯೇಕ ಜಾಗ ನೀಡಲಾಗಿದೆ. ಅಂದರೆ ಕನ್ನಡ ಭಾಷೆಯ “ಕ”, ಹಿಂದಿ ಭಾಷೆಯ “ಕ” ಹೀಗೆ ಎಲ್ಲ ಅಕ್ಷರಗಳಿಗೂ ತನ್ನದೇ ಆದ ಪ್ರತ್ಯೇಕ ಸಂಕೇತ ಇದೆ. ಯುನಿಕೋಡ್ ಬಳಸುವುದರಿಂದ ಮಾಹಿತಿಯ ಹುಡುಕುವಿಕೆ ಸಾಧ್ಯ. ರಾಜಪ್ಪನ ಮಗ ಕೃಷ್ಣಪ್ಪನ ಪಡಿತರ ಚೀಟಿಯನ್ನು ಸುಲಭವಾಗಿ ಹುಡುಕಿ ತೆಗೆಯಬಹುದು.

 

ಮುಕ್ತ ತಂತ್ರಾಂಶಗಳಲ್ಲೂ (ಲೈನಕ್ಸ್ ಮತ್ತು ಇತರೆ) ಕನ್ನಡವನ್ನು ಜಾಗತಿಕ ಶಿಷ್ಟತೆಯಾದ ಯುನಿಕೋಡ್ ಮೂಲಕ ಅಳವಡಿಸಲಾಗಿದೆ. ಕನ್ನಡವನ್ನು ಬೆರಳಚ್ಚು ಮಾಡುವುರಿಂದ ಹಿಡಿದು, ಮಾಹಿತಿಯ ಸಂಗ್ರಹಣೆ ಮತ್ತು ವಿಂಗಡಣೆ, ಕನ್ನಡದಲ್ಲಿ ಮೆನು, ಇತ್ಯಾದಿ ಎಲ್ಲ ಸಾಧ್ಯವಾಗಿವೆ.

 

ಕರ್ನಾಟಕ ಸರಕಾರದ ಕನ್ನಡ ತಂತ್ರಾಂಶ ಸಮಿತಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಏನೇನು ಆಗಬೇಕು ಎಂದು ಸಲಹೆ ನೀಡಿದೆ. ಸರಕಾರವು ಅದರ ಸಲಹೆಗಳನ್ನು ಸ್ವೀಕರಿಸಿದೆ. ಕನ್ನಡಕ್ಕೆ ಇಂದು ಬಹಳ ಅಗತ್ಯವಾಗಿ ಆಗಬೇಕಾಗಿರುವ ಕೆಲಸಗಳನ್ನು ಅದು ಪಟ್ಟಿ ಮಾಡಿದೆ. ಅದರ ಪ್ರಕಾರ ಕೆಲವು ಅತೀ ಅಗತ್ಯ ತಂತ್ರಾಂಶಗಳ ತಯಾರಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ ಸಮಿತಿಯ ಇನ್ನೊಂದು ಪ್ರಮುಖ ಸಲಹೆಯಾದ ಕನ್ನಡಕ್ಕೆ ಯುನಿಕೋಡೇ ಏಕೈಕ ಶಿಷ್ಟತೆ ಎಂದು ಘೋಷಣೆ ಹೊರಡಿಸಬೇಕಾಗಿದೆ. ಸರಕಾರ ಈ ವಿಷಯದಲ್ಲಿ ಇನ್ನೂ ಮೀನಮೇಷ ಎಣಿಸುತ್ತಿದೆ.

 

ಕನ್ನಡ ಭಾಷೆಯ ಬೆಳವಣಿಗೆ ಮತ್ತು ಉಳಿವಿಗೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳಲ್ಲಿ ಕನ್ನಡ ಭಾಷೆಯ ಅಳವಡಿಕೆ ಮತ್ತು ಬಳಕೆ ಬಹು ಮುಖ್ಯ. ಮೊಬೈಲ್ ಕ್ಷೇತ್ರಕ್ಕೆ ಬಂದರೆ ಇನ್ನೂ ಕನ್ನಡ ಸರಿಯಾಗಿ ಬಳಕೆಗೆ ಬಂದಿಲ್ಲ. ಅಂತರಜಾಲಕ್ಕೆ ಬಂದರೆ ಅಂತಾರಾಷ್ಟ್ರೀಯ ಡೊಮೈನ್ ಹೆಸರುಗಳಲ್ಲಿ ಕನ್ನಡ ಇನ್ನೂ ಬಳಕೆಗೆ ಬಂದಿಲ್ಲ. ಇದು ಬಳಕೆಗೆ ಬಂದರೆ ಕನ್ನಡದಲ್ಲೇ ಜಾಲತಾಣಗಳ ಹೆಸರುಗಳನ್ನು ನಮೂದಿಸಬಹುದು. ಜಾಲತಾಣ ನಿರ್ಮಾಣಕ್ಕೆ ಬಳಸುವ ಭಾಷಯೆ ಶಿಷ್ಟತೆಯಲ್ಲೂ ಕನ್ನಡ ಬಳಕೆಯ ಶಿಷ್ಟತೆಗೆ ಅಗತ್ಯ ಸೂತ್ರಗಳನ್ನು ಇನ್ನೂ ತಯಾರಿಸಿಲ್ಲ. ಕೇಂದ್ರ ಸರಕಾರದವರು ಈ ಬಗ್ಗೆ ಚರ್ಚಿಸಲು ಆಗಾಗ ಕರೆಯುವ ಸಭೆಗಳಿಗೆ ಕನ್ನಡವನ್ನು ಪ್ರತಿನಿಧಿಸಲು ಯಾರೂ ಹೋಗುತ್ತಿಲ್ಲ.

 

ಈಗ ತುರ್ತಾಗಿ ಆಗಬೇಕಾದ ಕೆಲಸಗಳು: (೧)ಕನ್ನಡಕ್ಕೆ ಯುನಿಕೋಡೇ ಏಕೈಕ ಶಿಷ್ಟತೆ ಎಂಬ ಘೋಷಣೆ. (೨)ಶಿಷ್ಟತೆ ಬಗ್ಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗುವ ಸಭೆಗಳಲ್ಲಿ ಭಾಗವಹಿಸಲು ಮತ್ತು ಈ ಸಂಸ್ಥೆಗಳಿಗೆ ಕನ್ನಡದ ಬಗ್ಗೆ ಸಲಹೆ ಸೂಚನೆ ಕಳುಹಿಸಲು ಒಂದು ಶಾಶ್ವತ ಸಮಿತಿಯ ರಚನೆ.

– ಡಾ| ಯು. ಬಿ. ಪವನಜ

3 Responses to ತಂತ್ರಜ್ಞಾನದ ಕಿಟಕಿ ತೆರೆಯಲಿ ಕನ್ನಡಕೆ

  1. Srikanta

    Domains in Kannada was an interesting thought. Certainly gov has to be proactive in this regard atleast by having the local gov websites in Kannada. Hoping the new IEEE standard being developed for Indic languages would help in future

  2. Adesh

    Sir i’m happy to say tat domain names in kannada r now available.. But we r not using it… 🙁 and as u said unicode must be ly standard ..

  3. sinisangama

    sinisangama

Leave a Reply