ಜಂಗಮವಾಣಿಯ ವಿಹಂಗಮ ನೋಟ

– ಡಾ. ಯು. ಬಿ. ಪವನಜ

ಮೋನಪ್ಪ ಬಂಗೇರ ಕರಾವಳಿಯಲ್ಲಿರುವಾತ. ಮೀನು ಹಿಡಿದು ಮಾರಿ ಜೀವನ ನಡೆಸುವವ. ಹಲವು ವರ್ಷಗಳ ಹಿಂದಿನ ಕತೆ. ಮೋನಪ್ಪನಿಗೆ ಕೆಲವೊಮ್ಮೆ ತುಂಬ ಮೀನುಗಳು ಸಿಗುವವು. ತುಂಬ ಸಂತಸದಿಂದ ಆತ ಮೀನುಗಳನ್ನು ಮಾರುಕಟ್ಟೆಗೆ ಒಯ್ದರೆ ಆ ದಿನ ಎಲ್ಲ ಬೆಸ್ತರೂ ತುಂಬ ಮೀನು ತಂದಿರುವುದರಿಂದ ಮೀನುಗಳಿಗೆ ಬೇಡಿಕೆ ಇಲ್ಲ. ಹಿಡಿದ ಮೀನುಗಳನ್ನು ದಾಸ್ತಾನು ಮಾಡಲು ಆತನಲ್ಲಿ ಶ್ಶೆತ್ಯಾಗಾರವಿಲ್ಲ. ಕೊನೆಗೆ ಸಿಕ್ಕಿದ ಬೆಲೆಗೆ ಮೀನುಗಳನ್ನು ಮಾರಬೇಕಾದ ಪರಿಸ್ಥಿತಿ. ಆತನಿರುವ ಊರಿನಿಂದ ಸುಮಾರು ಹತ್ತು ಕಿಲೋಮೀಟರು ದೂರದ ಇನ್ನೊಂದು ಊರಿನಲ್ಲಿ ಮೀನಿಗೆ ಬೇಡಿಕೆ ಇತ್ತು. ಆದರೆ ಅದು ಮೋನಪ್ಪನಿಗೆ ತಿಳಿದಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಯಿಸಿದೆ. ಮೋನಪ್ಪನ ಕೈಗೆ ಮೊಬೈಲ್ ಫೋನು ಬಂದಿದೆ. ಸಮುದ್ರದಲ್ಲಿ ಇರುವಾಗಲೆ ಆತ ಹತ್ತಿರದ ಎರಡು ಮೂರು ಊರುಗಳಿಗೆ ಫೋನಾಯಿಸುತ್ತಾನೆ. ಯಾವ ಮಾರುಕಟ್ಟೆಯಲ್ಲಿ ಮೀನಿಗೆ ಬೇಡಿಕೆ ಇದೆ ಎಂದು ತಿಳಿದುಕೊಳ್ಳುತ್ತಾನೆ. ಎಷ್ಟು ಮೀನಿಗೆ ಬೇಡಿಕೆ ಇದೆ ಎಂಬುದನ್ನೂ ತಿಳಿದುಕೊಳ್ಳುತ್ತಾನೆ. ಮೊಬೈಲ್ ಫೋನಿನಿಂದ ಆತನಿಗೆ ತುಂಬ ಪ್ರಯೋಜನವಾಗಿದೆ. ಎಷ್ಟು ಬೇಕೋ ಅಷ್ಟೇ ಮೀನು ಹಿಡಿದು ಎಲ್ಲಿಗೆ ಬೇಕೋ ಅಲ್ಲಿಗೆ ತೆಗೆದುಕೊಂಡು ಹೋಗಿ ಮಾರುತ್ತಾನೆ. ಹೆಚ್ಚಿಗೆಯಾದ ಮೀನುಗಳನ್ನು ಎಸೆಯುವ ಅಥವಾ ಅತಿ ಕಡಿಮೆ ಬೆಲೆಗೆ ಮಾರುವ ಅಗತ್ಯವಿಲ್ಲ. ಸಮಯವೂ ಉಳಿತಾಯವಾಗುತ್ತದೆ.

ರಾಜಪ್ಪ ಮದ್ಯದ ಗುತ್ತಿಗೆದಾರ. ಕರ್ನಾಟಕ ಸರಕಾರದ ಪಾನೀಯ ನಿಗಮದಲ್ಲಿ ನೋಂದಾಯಿತ. ಮದ್ಯದ ಬಾಟಲಿಗಳನ್ನು ವಿತರಕರಿಂದ ಪಡೆಯಬೇಕಾದರೆ ಪಾನೀಯ ನಿಗಮದಿಂದ ಅನುಮತಿ ಪಡೆಯಬೇಕು. ಅದಕ್ಕಾಗಿ ಆತ ಅಗತ್ಯವಿದ್ದಷ್ಟು ಹಣವನ್ನು ಜಮಾಯಿಸಬೇಕು. ಆತ ತನ್ನ ಮೊಬೈಲ್ ಫೋನಿನಿಂದ ತನ್ನ ಬ್ಯಾಂಕಿಗೆ ಸಂದೇಶ (ಎಸ್‌ಎಂಎಸ್) ಕಳುಹಿಸುತ್ತಾನೆ. ಸಂದೇಶ ಕಳುಹಿಸಿದಾತ ರಾಜಪ್ಪನೇ ಎಂಬುದನ್ನು ಬ್ಯಾಂಕ್ ಗುಪ್ತ ಪದದ ಮೂಲಕ ಖಾತ್ರಿ ಮಾಡಿಕೊಳ್ಳುತ್ತದೆ. ನಂತರ ಆತನ ಖಾತೆಯಿಂದ ಹಣವನ್ನು ಪಾನೀಯ ನಿಗಮದ ಖಾತೆಗೆ ವರ್ಗಾಯಿಸುತ್ತದೆ. ಪಾನೀಯ ನಿಗಮವು ಮದ್ಯದ ವಿತರಕನಿಗೆ ಸಂದೇಶ (ಎಸ್‌ಎಂಎಸ್) ಕಳುಹಿಸುತ್ತದೆ. ವಿರತಕನಿಂದ ರಾಜಪ್ಪನಿಗೆ ಸೂಕ್ತ ಸಂದೇಶ ಬರುತ್ತದೆ. ಈಗ ರಾಜಪ್ಪ ವಿತರಕನಿಂದ ಮದ್ಯದ ಸರಬರಾಜನ್ನು ಪಡೆಯಬಹುದು. ರಾಜಪ್ಪ ಲಾರಿ ಸಮೇತ ಮದ್ಯ ವಿತರಕನಲ್ಲಿಗೆ ತೆರಳಿ ಅಲ್ಲೇ ಈ ಎಲ್ಲ ಕೆಲಸ ಮುಗಿಸಬಹುದು. ಈ ವ್ಯವಹಾರದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಸಂದೇಶ ರವಾನೆಯಾದುದು ಮೊಬೈಲ್ ಫೋನುಗಳ ಮೂಲಕ. ಎಲ್ಲ ವ್ಯವಹಾರವೂ ಗಣಕಗಳ (ಕಂಪ್ಯೂಟರ್) ಮೂಲಕವೇ ನಡೆಯುವುದು. ಇದರಲ್ಲಿ ಎಲ್ಲೂ ಮಾನವ ಹಸ್ತ ಕೆಲಸ ಮಾಡುವುದಿಲ್ಲ. ದಪ್ಪ ದಪ್ಪ ಪುಸ್ತಕಗಳಲ್ಲಿ ಒಣಗಿದ ಮಸಿಯಿಂದ ಬರೆಯುವುದಿಲ್ಲ. ಈ ಎಲ್ಲ ವ್ಯವಹಾರವೂ ಹೆಚ್ಚೆಂದರೆ ಐದು ನಿಮಿಷಗಳೊಳಗೆ ಪೂರ್ತಿಯಾಗುವುದು.

ಬನ್ನಿ. ಜಂಗಮವಾಣಿ ಅರ್ಥಾತ್ ಮೊಬೈಲ್ ಫೋನುಗಳ ಸ್ವಾರಸ್ಯಮಯ ಮತ್ತು ಕುತೂಹಲಕಾರಿ ಜಗತ್ತಿನ ಕಡೆ ವಿಹಂಗಮದೃಷ್ಟಿ ಬೀರೋಣ.

ಮೊಬೈಲ್ ಫೋನುಗಳು ಸಿರಿವಂತಿಕೆಯ ಸಂಕೇತವಾಗಿದ್ದ ಕಾಲವೊಂದಿತ್ತು. ಸುಮಾರು ಹದಿನೈದು ವರ್ಷಗಳ ಹಿಂದೆ ಭಾರತದಲ್ಲಿ ಮೊಬೈಲ್ ಫೋನುಗಳು ಪಾದಾರ್ಪಣೆ ಮಾಡಿದವು. ಆಗಿನ ಕಾಲದ ಫೋನುಗಳು ಒಂದು ಕಿರು ಇಟ್ಟಿಗೆಯಷ್ಟು ದೊಡ್ಡದಿದ್ದವು. ರಾತ್ರಿ ಹೊತ್ತಿನಲ್ಲಿ ಕಳ್ಳರು ಆಕ್ರಮಿಸಿದರೆ ಅವರನ್ನು ಹೊಡೆಯಲೂ ಬಳಸಬಹುದಿತ್ತು. ಆಗೆಲ್ಲ ಮೊಬೈಲ್ ಫೋನುಗಳನ್ನು ಬಳಸುವವರು ಅತಿ ಶ್ರೀಮಂತರಾಗಿದ್ದರು. ಒಂದು ನಿಮಿಷಕ್ಕೆ ಪ್ರತಿ ಕರೆಗೆ ಸುಮಾರು ಹದಿನಾರು ರೂಪಾಯಿಯಷ್ಟಿತ್ತು. ಒಳಬರುವ ಕರೆಗಳಿಗೂ ಪ್ರತಿ ನಿಮಿಷಕ್ಕೆ ಎಂಟು ರೂಪಾಯಿ ಇತ್ತು. ಈಗ ಕಾಲ ಬದಲಾಗಿದೆ. ಈಗ ೪೦ ಪೈಸೆಗೂ ಕರೆ ಮಾಡಬಹುದಾಗಿದೆ. ಕೈಗಡಿಯಾರದಲ್ಲೂ ಅಡಕವಾಗುವಷ್ಟು ಮೊಬೈಲ್ ಫೋನುಗಳು ಚಿಕ್ಕದಾಗಿವೆ. ಜಗತ್ತಿನಲ್ಲಿ ಒಟ್ಟು ಜನಸಂಖ್ಯೆಯ ಸುಮಾರು ಅರ್ಧದಷ್ಟು ಮೊಬೈಲು ಫೋನುಗಳಿವೆ. ಭಾರತದ ಮಟ್ಟಿಗಾದರೆ ಈ ವರ್ಷದ ಜೂನ್ ತಿಂಗಳೊಂದರಲ್ಲೇ ಸುಮಾರು ೭೩ ಲಕ್ಷ ಜನರು ಹೊಸದಾಗಿ ಮೊಬೈಲು ಫೋನು ಪಡೆದರು. ಇದರಿಂದಾಗಿ ಭಾರತದಲ್ಲಿನ ಒಟ್ಟು ಮೊಬೈಲ್ ಬಳಕೆದಾರರ ಸಂಖ್ಯೆ ಸುಮಾರು ೧೮.೫ ಕೋಟಿಗೇರಿತು. ಇನ್ನೊಂದೇ ವರ್ಷದಲ್ಲಿ ಭಾರತ ದೇಶದಲ್ಲಿನ ಮೊಬೈಲ್ ಬಳಕೆದಾರರ ಸಂಖ್ಯೆ ಸ್ಥಿರ ದೂರವಾಣಿ ಹೊಂದಿರುವವರ ಸಂಖ್ಯೆಯನ್ನು (೨೨ ಕೋಟಿ) ದಾಟುವ ಅಂದಾಜಿದೆ. ಮೊಬೈಲ್ ಫೋನುಗಳು ಸಿರಿವಂತಿಕೆಯ ಸಂಕೇತವಾಗಿ ಉಳಿದಿಲ್ಲ. ಅಗಸನಿಂದ ಹಿಡಿದು ಹಾಲು ಕರೆಯುವವನ ತನಕ ಪ್ರತಿಯೊಬ್ಬನಿಗೂ ಅದು ಜೀವನಾವಶ್ಯಕವಾದ ವಸ್ತುವಾಗಿದೆ. ಸರ್ವಸಂಗ ಪರಿತ್ಯಾಗಿ ಜಂಗಮರ ಕೈಯಲ್ಲೂ ಮೊಬೈಲ್ ಫೋನ್ ಕಂಗೊಳಿಸುತ್ತಿದೆ. ಅದು ನಿಜವಾಗಿಯೂ ಜಂಗಮವಾಣಿಯೇ ಸರಿ.

ಮೊಬೈಲ್ ಫೋನುಗಳು ಸುಮಾರು ೫೦ರ ದಶಕದಲ್ಲಿ ಆವಿಷ್ಕರಿಸಲ್ಪಟ್ಟವು. ಇಂದು ನಾವು ಬಳಸುವ ಬಹುತೇಕ ತಂತ್ರಜ್ಞಾನಗಳಂತೆ ಮೊಬೈಲ್ ಫೋನ್ ಕೂಡ ಅಮೇರಿಕದ ಬೆಲ್ ಲ್ಯಾಬ್‌ನಲ್ಲಿ ಆವಿಷ್ಕರಿಸಲ್ಪಟ್ಟಿತು. ಪ್ರಾರಂಭದ ದಿನಗಳಲ್ಲಿ ಇವು ವಾಹನಗಳಲ್ಲಿ ಮಾತ್ರ ಬಳಕೆಯಾಗುತ್ತಿದ್ದವು. ಇದಕ್ಕೆ ಅವುಗಳ ಗಾತ್ರ ಮತ್ತು ತೂಕವೂ ಕಾರಣವಾಗಿತ್ತು. ಪ್ರಥಮ ವಾಣಿಜ್ಯಕ ಮೊಬೈಲ್ ಫೋನ್ ೧೯೫೬ರಲ್ಲಿ ಎರಿಕ್‌ಸನ್ ಕಂಪೆನಿಯವರಿಂದ ತಯಾರಿಸಲ್ಪಟ್ಟಿತು. ಅದರ ತೂಕ ಕೇವಲ ೪೦ ಕಿಲೋಗ್ರಾಂ ಇತ್ತು! ಆರಂಭದ ದಿನಗಳಲ್ಲಿ ಒಂದು ಕಂಪೆನಿಯ ಫೋನಿನಿಂದ ಇನ್ನೊಂದು ಕಂಪೆನಿಯ ಫೋನಿಗೆ ಕರೆ ಮಾಡಲು ಸಾಧ್ಯವಿರಲಿಲ್ಲ. ೮೦ರ ದಶಕದ ನಂತರವೇ ಮೊಬೈಲ್ ಫೋನುಗಳು ತುಂಬ ಜನಪ್ರಿಯವಾಗತೊಡಗಿದ್ದು. ಭಾರತದಲ್ಲಂತೂ ೫ ವರ್ಷಗಳ ಹಿಂದೆಯಷ್ಟೇ ಇವು ಜನಪ್ರಿಯವಾಗತೊಡಗಿದ್ದು.

ಫೋನು ಎಂಬ ಪದವನ್ನು ನಿಜಮಾಡುವಂತೆ ಆರಂಭದ ದಿನಗಳಲ್ಲಿ ಇವುಗಳನ್ನು ಮಾತನಾಡುವುದಕ್ಕೆ ಮಾತ್ರ ಬಳಸಬಹುದಾಗಿತ್ತು. ನಂತರ ಎಸ್‌ಎಂಎಸ್ (Short Messaging Service) ಅರ್ಥಾತ್ ಸರಳ ಮೊಬೈಲ್ ಸಂದೇಶ (ಸಮೋಸ?!) ಸೇವೆ ಪ್ರಾರಂಭವಾಯಿತು. ಇದು ಘಟಿಸಿದ್ದು ೧೯೯೨ರಲ್ಲಿ. ಈಗಂತೂ ಮೊಬೈಲ್ ಫೋನಿನಲ್ಲಿ ಕ್ಯಾಮೆರಾ, ಚಿತ್ರೀಕರಣ, ಸಂಗೀತ ಕೇಳುವುದು, ರೇಡಿಯೋ ಕೇಳುವುದು, ಟಿವಿ ನೋಡುವುದು, ಅಂತರಜಾಲ ವೀಕ್ಷಣೆ, ಇನ್ನೂ ಏನೇನೋ ಮಾಡಬಹುದು. ಕೇವಲ ಮಾತನಾಡಲು ಮತ್ತು ಸಂದೇಶ ಕಳುಹಿಸಲು ಹಾಗೂ ಸ್ವೀಕರಿಸಲು ಮಾತ್ರ ಬಳಸಬಲ್ಲಂತ ಮೊಬೈಲ್ ಫೋನು ಮಾರುಕಟ್ಟೆಯಲ್ಲಿ ಇಲ್ಲವೇ ಇಲ್ಲ. ಇವುಗಳ ಬಳಕೆಯ ಎರಡು ಉದಾಹರಣೆಗಳನ್ನು ಈ ಲೇಖನದ ಪ್ರಾರಂಭದಲ್ಲೇ ನೀಡಲಾಗಿದೆ. ಈ ಜಂಗಮವಾಣಿಯ ಬಳಕೆಯ ಇನ್ನೂ ಹಲವು ಸ್ವಾರಸ್ಯಮಯ ಉದಾಹರಣೆಗಳನ್ನು ನೋಡೋಣ.

ಬೆಂಗಳೂರಿನಿಂದ ೧೦೦ ಕಿ.ಮೀ. ದೂರದ ಬುದಿಕೋಟೆ ಎಂಬ ಹಳ್ಳಿಯಲ್ಲಿ ಜನರು ಮೊಬೈಲ್ ಫೋನುಗಳನ್ನು ಬಳಸಿ ಒಂದು ಕಥಾಬ್ಯಾಂಕ್ ತಯಾರಿಸುತ್ತಿದ್ದಾರೆ. ಬಹುತೇಕ ಮೊಬೈಲ್ ಫೋನುಗಳಲ್ಲಿ ಕ್ಯಾಮೆರಾ ಇರುವುದು ತಿಳಿದೇ ಇದೆ. ಬುದಿಕೋಟೆಯ ಜನರು ಈ ಕ್ಯಾಮೆರಾ ಮತ್ತು ಫೋನಿನಲ್ಲೇ ಅಡಕವಾಗಿರುವ ಧ್ವನಿಮುದ್ರಣ ಸೌಕರ್ಯಗಳನ್ನು ಬಳಸಿ ಚಿಕ್ಕ ಚಿಕ್ಕ ಕಥೆಗಳನ್ನು ಚಿತ್ರೀಕರಿಸುತ್ತಾರೆ. ನಂತರ ಫೋನಿನಲ್ಲೇ ಇರುವ ನಿಸ್ತಂತು (ವೈರ್‌ಲೆಸ್) ತಂತ್ರಜ್ಞಾನವನ್ನು ಬಳಸಿ ಈ ಚಲನಚಿತ್ರಗಳನ್ನು ಸ್ಟೋರಿಬ್ಯಾಂಕ್‌ಗೆ ಕಳುಹಿಸುತ್ತಾರೆ. ಆಸಕ್ತರು ಈ ಬ್ಯಾಂಕಿನಿಂದ ಕಥೆಗಳನ್ನು ತಮ್ಮ ಮೊಬೈಲ್ ಫೋನುಗಳಿಗೆ ಪ್ರತಿ ಮಾಡಿಕೊಂಡು ನೋಡಬಹುದು. ಇದು ಒಂದು ರೀತಿಯಲ್ಲಿ ಸಹಯೋಗಿ ವಿಧಾನದಲ್ಲಿ ಕೆಲಸ ಮಾಡುತ್ತದೆ. ಜನರು ತಮ್ಮ ಕಥೆಗಳನ್ನು ನೀಡುತ್ತಾರೆ ಮತ್ತು ಇತರರು ತಯಾರಿಸಿದ ಕಥೆಗಳನ್ನು ನೋಡುತ್ತಾರೆ. ಒಟ್ಟು ಬಳಕೆಯಾಗುವ ತಂತ್ರಜ್ಞಾನಗಳು -ಮೊಬೈಲ್ ಫೋನಿನಲ್ಲಿ ಅಡಕವಾಗಿರುವ ಕ್ಯಾಮೆರಾ, ಧ್ವನಿಮುದ್ರಣ ಸವಲತ್ತು, ನಿಸ್ತಂತು ಸೇವೆ, ಇತ್ಯಾದಿ.

ಮೊಬೈಲ್ ಫೋನಿನಲ್ಲಿರುವ ಕ್ಯಾಮೆರದ ಬಳಕೆಯ ಮತ್ತೊಂದು ಉದಾಹರಣೆ. ಸುಳ್ಯದ ಸಮೀಪದ ದೊಡ್ಡತೋಟ ಎಂಬ ಊರಿನ ಕೃಷಿಕ ರಾಧಾಕೃಷ್ಣ. ಆತನ ತೋಟದಲ್ಲಿ ಬೆಳೆಸಿದ ಬೆಂಡೆಕಾಯಿ ಗಿಡಕ್ಕೆ ಏನೋ ಒಂದು ವಿಚಿತ್ರ ರೋಗ. ಎಲೆಗಳ ಬಣ್ಣ ಬದಲುವುದು. ರಾಧಾಕೃಷ್ಣ ತನ್ನ ಮೊಬೈಲ್ ಫೋನಿನಲ್ಲಿರುವ ಕ್ಯಾಮೆರಾದಲ್ಲಿ ಆ ಗಿಡದ ಛಾಯಾಚಿತ್ರ ತೆಗೆದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಪ್ರೊಫೆಸರರಿಗೆ ಕಳುಹಿಸುತ್ತಾನೆ. ಇದೇ ರೀತಿಯ ಇನ್ನೊಂದು ಬಳಕೆಯೆಂದರೆ ಮನುಷ್ಯರ ಕಾಯಿಲೆ, ಮುಖ್ಯವಾಗಿ ಚರ್ಮದ ಕಾಯಿಲೆಯ ಚಿತ್ರ ತೆಗೆದು ಅದನ್ನು ಪರಿಣತ ವೈದ್ಯರಿಗೆ ಕಳುಹಿಸಿ ಅವರಿಂದ ಸಲಹೆ ಪಡೆಯುವುದು. ಅವರು ಅದನ್ನು ನೋಡಿ ಸೂಕ್ತ ಪರಿಹಾರ ತಿಳಿಸುತ್ತಾರೆ. ಮೊಬೈಲ್ ಫೋನಿನ ಕ್ಯಾಮೆರಾ ಮೂಲಕ ಹುಡುಗ ಯಾ ಹುಡುಗಿಯ ಛಾಯಾಚಿತ್ರ ತೆಗದು ವಧುವರಾನ್ವೇಷಣೆಯಲ್ಲಿ ಬಳಸುವುದು ತಿಳಿದೇ ಇರಬಹುದು.

ದೆಹಲಿ ಪಬ್ಲಿಕ್ ಸ್ಕೂಲಿನ ಹದಿಹರೆಯದ ಹುಡುಗ ಹುಡುಗಿಯರ ಕಾಮ ಕೇಳಿಯ ಎಂಎಂಎಸ್ (Multimedia Messaging Service) ಕತೆ ನೀವು ಪತ್ರಿಕೆಗಳಲ್ಲಿ ಓದಿರಬಹುದು. ಇದು ಮೊಬೈಲ್ ಫೋನಿನ ಕ್ಯಾಮೆರಾದ ದುರುಪಯೋಗದ ಕತೆ. ಕೆಲವು ಮೊಬೈಲ್ ಫೋನುಗಳಲ್ಲಿರುವ ಕ್ಯಾಮೆರಾಗಳು ನಿಜಕ್ಕೂ ಶಕ್ತಿಶಾಲಿಯಾಗಿವೆ. ಹೆಚ್ಚಿಗೆ ಮೆಮೊರಿ ಕಾರ್ಡನ್ನು ಈ ಫೋನುಗಳಿಗೆ ಅಳವಡಿಸಿದರೆ ಸಿನಿಮಾ ಥಿಯೇಟರಿನಲ್ಲಿ ಕುಳಿತುಕೊಂಡು ಇಡಿಯ ಚಲನಚಿತ್ರವನ್ನೇ ರೆಕಾರ್ಡ್ ಮಾಡಿಕೊಳ್ಳಬಹುದು. ಈ ರೀತಿ ಚೌರ್ಯ ಮಾಡಿದ ಹಲವು ಚಲನಚಿತ್ರಗಳು ಅಂತರಜಾಲದಲ್ಲಿ ಲಭ್ಯವಿವೆ. ಕೆಲವು ಪೋಕರಿ ಹುಡುಗರು ಕಾಲೇಜುಗಳಲ್ಲಿ, ಬಸ್ ನಿಲ್ದಾಣದಲ್ಲಿ, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಹುಡುಗಿಯರ ಭಾವಚಿತ್ರಗಳನ್ನು ಫೋನು ಬಳಸಿ ತೆಗೆದು ಅವನ್ನು ಅಂತರಜಾಲದಲ್ಲಿ ಸೇರಿಸಿ ದುರುಪಯೋಗ ಮಾಡಿದ ಉದಾಹರಣೆಗಳೂ ಇವೆ.

ಮೊಬೈಲ್ ಫೋನುಗಳಲ್ಲಿ ಅಂತರಜಾಲ (ಇಂಟರ್‌ನೆಟ್) ಸಂಪರ್ಕ ಸವಲತ್ತು ಇರುವುದು ಹೆಚ್ಚಿನವರಿಗೆ ತಿಳಿದೇ ಇದೆ. ಈ ಸೇವೆಯನ್ನು ಬಳಸಲು ಹೆಚ್ಚಿಗೆ ಹಣ ನೀಡಬೇಕು. ಎಲ್ಲ ಮೊಬೈಲ್ ಫೋನುಗಳಲ್ಲಿ ಈ ಸವಲತ್ತನ್ನು ಬಳಸಲಾಗುವುದಿಲ್ಲ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಬಹುಪಾಲು ಫೋನುಗಳಲ್ಲಿ ಈ ಸವಲತ್ತು ಇದೆಯೆಂದೇ ಹೇಳಬಹುದು. ಅಂತರಜಾಲವನ್ನು ಸಂಪರ್ಕಿಸಲು ಬಳಸುವ ತಂತ್ರಜ್ಞಾನಕ್ಕೆ ಜಿ.ಪಿ.ಆರ್.ಎಸ್ (General Packet Radio Service) ಎನ್ನುತ್ತಾರೆ. ಈ ವ್ಯವಸ್ಥೆ ಇರುವುದು ಬಹುಮಂದಿ ಬಳಸುವ ಜಿ.ಎಸ್.ಎಂ. (Global System for Mobile communications) ಸಂಪರ್ಕಜಾಲಗಳಲ್ಲಿ. ಕರ್ನಾಟಕದಲ್ಲಿ ಈ ವ್ಯವಸ್ಥೆಗೆ ಸೇರಿದ ಕಂಪೆನಿಗಳೆಂದರೆ ಏರ್‌ಟೆಲ್, ಸ್ಪೈಸ್, ಬಿ.ಎಸ್.ಎನ್.ಎಲ್ ಮತ್ತು ಹಚ್. ರಿಲಯನ್ಸ್ ಮತ್ತು ಟಾಟಾ ಇಂಡಿಕಾಂ ಕಂಪೆನಿಗಳು ಜಿ.ಎಸ್.ಎಂ. ಬದಲಿಗೆ ಸಿ.ಡಿ.ಎಂ.ಎ. (Code Division Multiple Access) ತಂತ್ರಜ್ಞಾನವನ್ನು ಬಳಸುತ್ತಿವೆ. ಇವುಗಳಲ್ಲಿ ಅಂತರಜಾಲ ಸಂಪರ್ಕ ಮೂಲ ತಂತ್ರಜ್ಞಾನದಲ್ಲೇ ಅಡಕವಾಗಿವೆ. ಯಾವುದೇ ಕಂಪೆನಿಯ ಫೋನು ಇರಲಿ ಅಂತರಜಾಲವನ್ನು ಸಂಪರ್ಕಿಸಬಹುದು. ಅಂತರಜಾಲದ ಮೂಲಕ ಮಾಡುವ ಎಲ್ಲ ಕೆಲಸಗಳನ್ನು, ಅಂದರೆ ತಾಣ ವೀಕ್ಷಣೆ, ಇಮೈಲ್ ಓದುವುದು ಮತ್ತು ಕಳುಹಿಸುವುದು, ಬ್ಯಾಂಕಿಂಗ್ -ಹೀಗೆ ಅಂತರಜಾಲದ ಮೂಲಕ ಮಾಡುವ ಎಲ್ಲ ಕೆಲಸಗಳನ್ನು ಮೊಬೈಲ್ ಫೋನು ಬಳಸಿಯೇ ಮಾಡಬಹುದು. ಇಲ್ಲಿ ಒಂದು ಸಣ್ಣ ತೊಂದರೆ ಎಂದರೆ ಮೊಬೈಲ್ ಫೋನಿನ ಚಿಕ್ಕ ಪರದೆ ಮತ್ತು ಚಿಕ್ಕ ಕೀಲಿಮಣೆ. ಈ ಕಾರಣಗಳಿಂದಾಗಿ ಪ್ರಯಾಣದಲ್ಲಿದ್ದಾಗ ಕೆಲವು ನಿಮಿಷಗಳ ಮಟ್ಟಿಗೆ ಅವಸರದಲ್ಲಿ ತಾಣವೀಕ್ಷಣೆ ಮಾಡುವುದು ಅಥವಾ ಇಮೈಲ್ ಓದುವುದು ಇತ್ಯಾದಿ ಕೆಲಸಗಳಿಗೆ ಮಾತ್ರ ಜನರು ಮೊಬೈಲ್ ಫೋನುಗಳನ್ನು ಬಳಸುತ್ತಿದ್ದಾರೆ.

ಮೊಬೈಲ್ ಪೇಮೆಂಟ್ಸ್ ಎಂಬುದು ಇತ್ತೀಚೆಗೆ ವಿದೇಶಗಳಲ್ಲಿ ಜನಪ್ರಿಯವಾಗುತ್ತಿದೆ. ಭಾರತಕ್ಕೂ ಸದ್ಯದಲ್ಲೇ ಕಾಲಿಡಲಿದೆ. ಕ್ರೆಡಿಟ್ ಕಾರ್ಡನ್ನು ಬಳಸಿ ವ್ಯವಹಾರ ಮಾಡುವುದು ಗೊತ್ತಿದೆ ತಾನೆ. ಈ ಮೊಬೈಲ್ ಪೇಮೆಂಟ್ಸ್ (ಜಂಗಮ ವಿತ್ತ?!) ವಿಧಾನದಲ್ಲಿ ಮೊಬೈಲ್ ಫೋನುಗಳೇ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳಂತೆ ಕೆಲಸ ಮಾಡುತ್ತವೆ. ಗ್ರಾಹಕರ ಫೋನು ಸಂಖ್ಯೆಯನ್ನು ಬ್ಯಾಂಕಿನಲ್ಲಿ ನೋಂದಾಯಿಸಿ ಅವರಿಗೆ ಗುಪ್ತ ಸಂಕೇತ ನೀಡಲಾಗುತ್ತದೆ. ಬೇಕಾದಂತೆಲ್ಲ ಬ್ಯಾಂಕಿನ ಖಾತೆಯಿಂದ ಮೊಬೈಲ್ ಫೋನಿಗೆ ಹಣ (ಅಂದರೆ ಹಣದ ವಿವರ) ವರ್ಗಾಯಿಸಲಾಗುತ್ತದೆ. ಅಂಗಡಿಗೆ ಹೋಗಿ ಸಾಮಾನು ಕೊಂಡ ನಂತರ ಮೊಬೈಲ್ ಫೋನಿನ ಮೂಲಕವೇ ಬಿಲ್ಲು ಚುಕ್ತಾ ಮಾಡಬಹುದು!

ಕೆನಡಾದಲ್ಲಿ ಇದರದೇ ಮುಂದುವರಿದ ಕಥೆ ವರದಿಯಾಗಿದೆ. ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ ಪಕ್ಕದಲ್ಲೇ ಇರುವ ಯಂತ್ರದೊಳಕ್ಕೆ ಬೇಕಾದಷ್ಟು ಹಣ ಹಾಕಿ ಹೋಗುವುದು ಅಲ್ಲಿ ಇದುತನಕ ಪ್ರಚಲಿತವಿದ್ದ ವಿಧಾನ. ಈಗ ಆ ಯಂತ್ರಕ್ಕೆ ಒಂದು ಹೊಸ ಸವಲತ್ತನ್ನು ಅಳವಡಿಸಲಾಗಿದೆ. ನಿಮ್ಮ ಮೊಬೈಲ್ ಫೋನಿನ ಸಂಖ್ಯೆಯನ್ನು ಅದಕ್ಕೆ ಊಡಿಸಿದರೆ ಹಣ ಮುಗಿಯುತ್ತ ಬಂದಂತೆ ಆ ಯಂತ್ರವೇ ನಿಮ್ಮ ಮೊಬೈಲ್ ಫೋನಿಗೆ ಆ ಬಗ್ಗೆ ಸಂದೇಶ ಕಳುಹಿಸುತ್ತದೆ. ಕೆಲಸ ಮುಗಿದಿದ್ದರೆ ಬೇಗನೆ ವಾಪಾಸಾಗಿ ನಿಮ್ಮ ಕಾರನ್ನು ಹೊರಡಿಸಿಕೊಂಡು ಹೋಗಬಹುದು. ಸಮಯವನ್ನು ವಿಸ್ತರಿಸಬೇಕಾದರೆ ಮೊಬೈಲ್ ಪೇಮೆಂಟನ್ನು ಬಳಸಿದರಾಯಿತು. ಮೊಬೈಲ್ ಫೋನಿನಿಂದಲೇ ಇನ್ನು ಎಷ್ಟು ಅವಧಿಗೆ ವಾಯಿದೆಯನ್ನು ವಿಸ್ತರಿಸಬೇಕು ಎಂಬುದನ್ನು ತಿಳಿಸಿ ಅದಕ್ಕೆ ಅಗತ್ಯವಿದ್ದ ಹಣವನ್ನು ಯಂತ್ರಕ್ಕೆ ವರ್ಗಾಯಿಸಬಹುದು. ಕೆಲಸ ಮುಗಿಸಿ ವಾಪಾಸು ಬಂದಾಗ ಪೋಲೀಸರು ನಿಮ್ಮ ಕಾರನ್ನು ಎತ್ತಿಕೊಂಡು ಹೋಗಿರಬಹುದಾದ ಭಯವಿಲ್ಲದೆ ನೀವು ನಿಶ್ಚಿಂತರಾಗಿರಬಹುದು. ಆದರೆ ಈ ವಿಧಾನದಲ್ಲಿ ಪೋಲೀಸರ ಜೊತೆ “ಒಪ್ಪಂದ” ಮಾಡಿಕೊಳ್ಳಲಾಗುವುದಿಲ್ಲ! ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಪಾರ್ಕಿಂಗ್ ಯಂತ್ರಗಳಿಗೂ ಈ ಸೌಲಭ್ಯ ಬರುವ ದಿನ ತುಂಬ ದೂರವಿಲ್ಲ.

ನೀವು ಬೆಂಗಳೂರಿನ ಎಫ್‌ಎಂ ರೇಡಿಯೋ ಕೇಂದ್ರಗಳನ್ನು ಆಲಿಸುತ್ತಿರುವಿರಾದರೆ ಆಗಾಗ ರಸ್ತೆ ಸಂಚಾರ ಎಲ್ಲಿ ದುಸ್ತರವಾಗುತ್ತಿದೆ, ಎಲ್ಲೆಲ್ಲಿ ಟ್ರಾಫಿಕ್ ಜಾಮ್‌ಗಳಿವೆ ಎಂಬುದರ ವಿವರ ನೀಡುವುದನ್ನು ಗಮನಿಸಿರುತ್ತೀರಿ. ಕೆಲವೊಮ್ಮೆ ಇದರ ಪ್ರಯೋಜನವನ್ನೂ ಪಡೆದಿರುತ್ತೀರಿ. ಈ ರೇಡಿಯೋ ಕೇಂದ್ರಗಳಿಗೆ ಟ್ರಾಫಿಕ್ ಜಾಮ್‌ನ ವಿವರವನ್ನು ಜನರೇ ತಮ್ಮ ಮೊಬೈಲ್ ಫೋನುಗಳನ್ನು ಬಳಸಿ ಎಸ್‌ಎಂಎಸ್ ಮಾಡಿ ಅಥವಾ ಕರೆ ಮಾಡಿ ತಿಳಿಸುತ್ತಾರೆ. ಆದರೆ ಇದನ್ನು ಸಂಪೂರ್ಣ ಸ್ವಯಂಚಾಲಿತ ಮಾಡುವಂತಿದ್ದರೆ? ಹೌದು. ಅದನ್ನೂ ಮಾಡಿ ಆಗಿದೆ, ದೂರದ ಫಿನ್‌ಲ್ಯಾಂಡ್ ದೇಶದಲ್ಲಿ. ಈ ದೇಶದಲ್ಲಿ ಶೇಕಡ ೮೦ರಷ್ಟು ಜನ ಮೊಬೈಲ್ ಫೋನು ಬಳಸುತ್ತಾರೆ. ನಿಮ್ಮ ಫೋನು ಯಾವ ಕ್ಷೇತ್ರದ ಪ್ರೇಷಕ ಗೋಪುರದೊಂದಿಗೆ ಸಂಪರ್ಕದಲ್ಲಿದೆ ಎಂಬುದನ್ನು ಫೋನು ಆಗಾಗ ತೋರಿಸುವುದನ್ನು ನೀವು ಗಮನಿಸಿರಬಹುದು. ಫಿನ್‌ಲ್ಯಾಂಡಿನಲ್ಲಿ ಈ ಮಾಹಿತಿಯನ್ನೇ ಟ್ರಾಫಿಕ್ ಜಾಮ್ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚಲು ಬಳಸುತ್ತಿದ್ದಾರೆ. ಒಂದು ಗೋಪುರದ ವ್ಯಾಪ್ತಿಯಿಂದ ಇನ್ನೊಂದು ಗೋಪುರದ ವ್ಯಾಪ್ತಿಯನ್ನು ತಲುಪಲು ಒಂದು ಫೋನಿಗೆ ಎಷ್ಟು ಸಮಯ ತಗಲುತ್ತದೆ ಎಂಬ ಮಾಹಿತಿಯಿಂದ ಎಲ್ಲಿ ಟ್ರಾಫಿಕ್ ಜಾಮ್ ಇದೆ ಎಂಬುದನ್ನು ಪತ್ತೆ ಹಚ್ಚುತ್ತಾರೆ.

ಅದೇನೋ ದೂರದ ಫಿನ್‌ಲ್ಯಾಂಡಿನ ಕತೆಯಾಯಿತು. ನಮ್ಮೂರಿನಲ್ಲಿ ಏನಿದೆ ಎಂದು ಕೇಳುತ್ತಿದ್ದೀರಾ? ಬನ್ನಿ ನಮ್ಮೂರಾದ ಬೆಂಗಳೂರಿಗೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಎಲ್ಲಲ್ಲಿ ಇವೆ ಎಂಬ ವಿವರವನ್ನು ತಿಳಿಸಲು ಒಂದು ಎಸ್‌ಎಂಎಸ್ ಸೇವೆ ಇತ್ತೀಚೆಗೆ ಕಾರ್ಯಗತವಾಗಿದೆ. ಬೆಂಗಳೂರಿನ ಉದ್ದೇಶಿತ ಸ್ಥಳದ ಸಂಕೇತವನ್ನು ಒಂದು ಸಂಖ್ಯೆಗೆ ಎಸ್‌ಎಂಎಸ್ ಮಾಡಿದರೆ ಅದು ಕೂಡಲೆ ಆ ಸ್ಥಳದ ಸುತ್ತ ಮುತ್ತ ಟ್ರಾಫಿಕ್ ಜಾಮ್ ಇದೆಯೇ ಇಲ್ಲವೇ ಎಂಬುದನ್ನು ಎಸ್‌ಎಂಎಸ್ ಮೂಲಕ ತಿಳಿಸುತ್ತದೆ. ಯಾವ ಸ್ಥಳಕ್ಕೆ ಯಾವ ಸಂಕೇತ ಮತ್ತು ಎಸ್‌ಎಂಎಸ್ ಮಾಡಬೇಕಾದ ಸಂಖ್ಯೆಗಳ ಮಾಹಿತಿಗೆ http://btis.in ತಾಣವನ್ನು ಭೇಟಿ ಮಾಡಬಹುದು.

ಮೊಬೈಲ್ ಫೋನು ತನ್ನ ಸನಿಹದಲ್ಲಿರುವ ಪ್ರೇಷಕ ಗೋಪುರದೊಂದಿಗೆ ಸದಾ ಸಂಪರ್ಕದಲ್ಲಿರುತ್ತದೆ ಮತ್ತು ಯಾವ ಗೋಪುರದ ವ್ಯಾಪ್ತಿಯಲ್ಲಿ ಈ ಫೋನು ಇದೆ ಎಂಬುದು ಅದಕ್ಕೆ ತಿಳಿದಿರುತ್ತದೆ. ಈ ಮಾಹಿತಿಯನ್ನೇ ಬಳಸಿ ಟ್ರಾಫಿಕ್ ಜಾಮ್ ಎಲ್ಲಿದೆ ಎಂಬುದನ್ನು ಪತ್ತೆ ಹಚ್ಚುವ ಬಗ್ಗೆ ತಿಳಿದಿದ್ದೇವೆ. ಇದೇ ಮಾಹಿತಿಯನ್ನು ವಾಹನ ಕಳವಾದರೆ ಅದನ್ನು ಪತ್ತೆಹಚ್ಚಲೂ ಬಳಸಬಹುದು. ಇಂತಹ ಸಾಧನಗಳು ಈಗಾಗಲೆ ನಮ್ಮ ದೇಶದಲ್ಲಿ ಲಭ್ಯವಿವೆ. ಈ ಸಾಧನದಲ್ಲಿ ಮೊಬೈಲ್ ಫೋನಿನಲ್ಲಿ ಬಳಸುವ ಸಿಮ್ ಕಾರ್ಡ್ ಇರುತ್ತದೆ. ವಾಹನ ಕಳುವಾದುದನ್ನು ಗಮನಿಸಿದ ಯಜಮಾನು ಇನ್ನೊಂದು ಫೋನಿನಿಂದ ವಾಹನದಲ್ಲಿರುವ ಸಿಮ್ ಕಾರ್ಡಿನ ಸಂಖ್ಯೆಗೆ ಒಂದು ಪೂರ್ವನಿಗದಿತ ಗುಪ್ತ ಸಂಕೇತ ಕಳುಹಿಸಿದರೆ ಅದು ಚಾಲೂ ಆಗುತ್ತದೆ. ತದನಂತರ ಪ್ರತಿ ಮೂರು ನಿಮಿಷಕ್ಕೆ ಒಮ್ಮೆಯಂತೆ ತಾನು ಇರುವ ಸ್ಥಳವನ್ನು ಅದು ಎಸ್‌ಎಂಎಸ್ ಮೂಲಕ ಕಳುಹಿಸುತ್ತಿರುತ್ತದೆ. ಇದರಿಂದ ವಾಹನವನ್ನು ಕಳ್ಳರ ಸಮೇತ ಕೂಡಲೆ ಪತ್ತೆ ಹಚ್ಚಬಹದು. ಈ ರೀತಿ ಒಬ್ಬರು ತಮ್ಮ ಕಾರನ್ನು ಅದು ಕಳವಾದ ಹನ್ನೆರಡು ಘಂಟೆಗಳ ಒಳಗೆ ವಾಪಾಸು ಪಡೆದುದು ಅಮೃತಸರದಿಂದ ವರದಿಯಾಗಿದೆ.

ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್ ಅರ್ಥಾತ್ ಜಿಪಿಎಸ್ ಎಂಬುದೊಂದು ಅದ್ಭುತ ತಂತ್ರಜ್ಞಾನ. ಮೂರು ಉಪಗ್ರಹಗಳ ನೆರವಿನಿಂದ ತಾನು ಇರುವ ಸ್ಥಳವನ್ನು ಕರಾರುವಾಕ್ಕಾಗಿ ಜಿಪಿಎಸ್ ಗ್ರಾಹಕ ಸೂಚಿಸುತ್ತದೆ. ಕೆಲವು ಪೊಬೈಲ್ ಫೋನುಗಳಲ್ಲೂ ಈ ಜಿಪಿಎಸ್ ಗ್ರಾಹಕ ಲಭ್ಯವಿದೆ. ಜಿಪಿಎಸ್ ಸೇವೆಗೆ ಹಣ ನೀಡಿ ಅದರ ಚಂದಾದಾರನಾದರೆ ಈ ಮೊಬೈಲ್ ಫೋನು ಬಳಸಿ ಎಲ್ಲಿಗೆ ಬೇಕಾದರೂ ಯಾರನ್ನು ಕೇಳದೆ ದಾರಿ ಪತ್ತೆ ಹಚ್ಚಿಕೊಂಡು ಹೋಗಬಹುದು. ಚಾರಣ ಮಾಡುವವರಿಗೂ ಇದು ತುಂಬ ಉಪಯುಕ್ತ. ಸಂದರ್ಶನಕ್ಕೆ ಹೋಗುತ್ತಿದ್ದೀರೆಂದಿಟ್ಟುಕೊಳ್ಳಿ. ರಸ್ತೆ ಸರಿಯಾಗಿ ಗೊತ್ತಿಲ್ಲ. ಸಮಯವೂ ಹೆಚ್ಚಿಲ್ಲ. ಆಗ ಏನು ಮಾಡುತ್ತೀರಿ? ಯಾರಲ್ಲಿಗೆ ಹೋಗುತ್ತಿದ್ದೀರೋ ಅವರಿಗೆ ಫೋನು ಮಾಡಿ ದಾರಿ ಕೇಳುವುದು ಸಹಜ. ಆದರೆ ನೀವು ಎಲ್ಲಿದ್ದೀರಿ ಎಂಬುದೇ ಗೊತ್ತಿಲ್ಲದಿದ್ದರೆ ರಸ್ತೆ ಪತ್ತೆ ಹಚ್ಚುವುದು ಹೇಗೆ? ಇಂತಹ ಸಂದರ್ಭದಲ್ಲಿ ಜಿಪಿಎಸ್ ಸಹಾಯಕ್ಕೆ ಬರುತ್ತದೆ. ಅದರ ಮೂಲಕ ನೀವು ಇರುವ ಸ್ಥಳವನ್ನು ಗೊತ್ತುಪಡಿಸಿಕೊಂಡು ಹೋಗಬೇಕಾದ ಸ್ಥಳಕ್ಕೆ ದಾರಿ ಕಂಡುಕೊಳ್ಳಬಹುದು. ಈಗಂತೂ ಇದಕ್ಕೆ ತಂತ್ರಾಂಶಗಳೂ (ಸಾಫ್ಟ್‌ವೇರ್) ಲಭ್ಯವಿವೆ. ಈ ತಂತ್ರಾಂಶವು ಜಿಪಿಎಸ್ ಅಳವಿಡಿಸಿರುವ ಫೋನಿಗೂ (ಅದನ್ನು ಒಂದು ಕಿಸೆ ಗಣಕ ಎಂದೂ ಕರೆಯಬಹುದು) ಲಭ್ಯವಿದೆ. ಅದಕ್ಕೆ ಹೋಗಬೇಕಾಗಿರುವ ಸ್ಥಳದ ವಿಳಾಸ ನೀಡಿದರೆ ಸಾಕು. ತಾನಿರುವ ಜಾಗವನ್ನು ತಾನೇ ಉಪಗ್ರಹದ ನೆರವಿನಿಂದ ತಿಳಿದುಕೊಂಡು ಹೋಗಬೇಕಾಗಿರುವ ಜಾಗಕ್ಕೆ ಮಾರ್ಗನಿರ್ದೇಶನ ನೀಡುತ್ತದೆ. ಈ ಫೋನುಗಳನ್ನು ಕುರುಡರ ಸಹಾಯಕ್ಕೂ ಬಳಸಬಹುದು. ಅದು ಪಠ್ಯದಿಂದ ಧ್ವನಿಗೆ ಪರಿವರ್ತಿಸುವ ತಂತ್ರಜ್ಞಾನದ ಮೂಲಕ ತನ್ನ ಯಜಮಾನನಿಗೆ ದಾರಿ ನಿರ್ದೇಶನ ಮಾಡಬಲ್ಲುದು.

ಅಂತರಜಾಲದಲ್ಲಿ ವಿಹರಿಸುತ್ತಿದ್ದಾಗ ಒಂದು ಸ್ವಾರಸ್ಯಕರ ಸುದ್ದಿ ಕಣ್ಣಿಗೆ ಬಿತ್ತು. ಅದರ ಪ್ರಕಾರ ನಾಯಿಗಳಿಗೆಂದೇ ವಿಶೇಷ ಮೊಬೈಲ್ ಫೋನ್ ತಯಾರಿಸುತ್ತಿದ್ದಾರೆ. ಅದರ ಯಜಮಾನ ತನ್ನ ಫೋನಿನಿಂದ ಗುಪ್ತ ಸಂಕೇತ ಕಳುಹಿಸಿದಾಗ ಅದು ಚಾಲೂ ಆಗಿ ದ್ವಿಮುಖ ಸಂಭಾಷಣೆ ಪ್ರಾರಂಭಿಸುತ್ತದೆ. ಯಜಮಾನನ ಮಾತು ನಾಯಿಗೆ ಕೇಳುತ್ತದೆ. ನಾಯಿಯ ಮಾತು(?!) ಯಜಮಾನನಿಗೆ ತಲುಪುತ್ತದೆ. ನಾಯಿ ಕಳೆದುಹೋದಾಗ ಪತ್ತೆಹಚ್ಚಲು ಈ ಸಾಧನ ಸಹಾಯಕಾರಿ. ಫೋನು ತಯಾರಕರು ಇನ್ನೂ ಮುಂದುವರೆದು ಈ ಫೋನಿಗೆ ಕ್ಯಾಮರಾ ಮತ್ತು ಜಿಪಿಎಸ್ ಅಳವಡಿಸುತ್ತಿದ್ದಾರೆ. ಅಂದರೆ ಉಪಗ್ರಹ ಮತ್ತು ಅಂತರಜಾಲ ಮೂಲಕ ನಾಯಿ ಎಲ್ಲಿದೆ ಎಂದು ಪತ್ತೆ ಹಚ್ಚಬಹುದು. ಬಾಂಬು ಹಡುಕುವ ನಾಯಿಗಳ ಕುತ್ತಿಗೆಗೆ ಇದನ್ನು ಜೋತು ಹಾಕಿ ನಾಯಿಯನ್ನು ಕಳುಹಿಸಿ ದೂರದಿಂದಲೇ ನಿಯಂತ್ರಿಸಬಹುದು. ಇದನ್ನು ನಾಯಿಗಳಿಗೆ ಮಾತ್ರ ಬಳಸಬೇಕಾಗಿಲ್ಲ. ಪುಟ್ಟ ಮಕ್ಕಳ ಕುತ್ತಿಗೆಗೂ ಜೋತು ಹಾಕಿ ಅವರು ಕಳೆದುಹೋಗದಂತೆ ನೋಡಿಕೊಳ್ಳಬಹುದು. ನಮ್ಮ ಹೆಂಗಸರು ಏನು ಆಲೋಚಿಸುತ್ತಿದ್ದಾರೆ ಎಂದು ನನಗೆ ಗೊತ್ತಾಗುತ್ತಿದೆ. ರಾತ್ರಿ ಕ್ಲಬ್ಬಿಗೆ ಹೋಗುವ ಗಂಡಂದಿರ ಕುತ್ತಿಗೆಗೆ ಕಟ್ಟಲು ಆಲೋಚಿಸುತ್ತಿದ್ದಾರೆ ತಾನೆ?

ಮೊಬೈಲ್ ತಂತ್ರಜ್ಞಾನವು ಆಪತ್ಕಾಲೀನ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಸುನಾಮಿ ಬಂದಾಗ ಇವುಗಳನ್ನು ಬಳಸಿಯೇ ಜನ ಸಹಾಯ ಮಾಡಿದ್ದು. ಎಲ್ಲೆಲ್ಲಿ ಸಹಾಯ ಎಷ್ಟು ಅಗತ್ಯ ಎಂಬುದನ್ನು ಮೊಬೈಲ್‌ಗಳ ಮೂಲಕ ಪರಿಹಾರ ತಂಡಗಳಿಗೆ ಸರಿಯಾದ ಸಮಯಕ್ಕೆ ಆಗಾಗ ಒದಗಿಸಲಾಗುತ್ತಿತ್ತು. ಈಗಷ್ಟೇ ಬಂದ ಸುದ್ದಿಯ ಪ್ರಕಾರ ಬಿಹಾರದ ಸಾವಿರಾರು ಹಳ್ಳಿಗಳು ಪ್ರವಾಹದಲ್ಲಿ ಮುಳುಗಿದಾಗಲೂ ಈ ತಂತ್ರಜ್ಞಾನವೇ ನೆರವಿಗೆ ಬಂದದ್ದು. ದೂರವಾಣಿ ಕಂಬಗಳೆಲ್ಲ ಬುಡಮೇಲಾಗಿ ಬಿದ್ದು ಸ್ಥಿರ ದೂರವಾಣಿಗಳೆಲ್ಲ ಮೌನವಾದಾಗ ಉಪಗ್ರಹ ಮೂಲಕ ನಿಸ್ತಂತು ವಿಧಾನದಲ್ಲಿ ಕೆಲಸ ಮಾಡುವ ಬಿಎಸ್‌ಎನ್‌ಎಲ್‌ನವರ ಡಬ್ಲ್ಯೂಎಲ್‌ಎಲ್ (wireless in local loop) ತಂತ್ರಜ್ಞಾನಾಧಾರಿತ ಫೋನುಗಳು ಸಹಾಯಕ್ಕೆ ಬಂದವು.

ಸಮಾಜ ಸುಧಾರಣೆಗಾಗಿ ಮೊಬೈಲ್ ಎಂಬ ಒಂದು ಸರಕಾರೇತರ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಸುಧಾರಣೆ ಹೊಂದುತ್ತಿರುವ ದೇಶಗಳಲ್ಲಿ ಜನರ ಜೀವನ ಮಟ್ಟವನ್ನು ಸುಧಾರಿಸಲು ಮೊಬೈಲ್ ಫೋನುಗಳ ಬಳಕೆ ಇದರ ಉದ್ದೇಶ. ಆಫ್ರಿಕ ಖಂಡದ ಕೀನ್ಯ ದೇಶದಲ್ಲಿ ಈಗಾಗಲೇ ಇದು ಕಾರ್ಯಗತವಾಗಿದೆ. ಕೆಲವು ಉದಾಹರಣೆಗಳು: ಕೆಲಸ ಹುಡುಕುವುದು. ನಿರುದ್ಯೋಗಿಗಳು ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ ಸೂಕ್ತ ಕೆಲಸ ಖಾಲಿ ಇದ್ದಾಗ ಎಸ್‌ಎಂಎಸ್ ಮೂಲಕ ತಿಳಿಸಲಾಗುವುದು. ಆರೋಗ್ಯ ಸಲಹೆಗಳನ್ನು ಮತ್ತು ಪ್ರಶ್ನೆಗಳಿಗೆ ಉತ್ತರಗಳನ್ನು ಪರಿಣತರಿಂದ ಪಡೆದು ಎಸ್‌ಎಂಎಸ್ ಮೂಲಕ ತಿಳಿಸುವುದು. ತಮ್ಮ ಸಮುದಾಯದ ಸುದ್ದಿಗಳನ್ನು ಚಂದಾದಾರರಿಗೆ ಎಸ್‌ಎಂಎಸ್ ಮೂಲಕ ತಿಳಿಸುವುದು. ಭಾರತದಲ್ಲೂ ಇಂತಹ ಸೇವೆಗಳನ್ನು ಪ್ರಾರಂಭಿಸಬಹುದು.

ಮೊಬೈಲ್ ಫೋನುಗಳಲ್ಲಿ ಆಟಗಳಿರುವುದು ಗೊತ್ತೇ ಇದೆ ತಾನೆ? ಇಂತಹ ಆಟಗಳನ್ನು ಪ್ರತಿ ಮಾಡಿಕೊಳ್ಳಲೆಂದೆ ಹಲವು ಅಂತರಜಾಲ ತಾಣಗಳಿವೆ. ಈ ತಾಣಗಳಿಂದ ಆಟಗಳನ್ನು ಡೌನ್‌ಲೋಡ್ ಮಾಡಿಕೊಂಡು ಅವನ್ನು ನಿಮ್ಮ ಮೊಬೈಲ್ ಫೋನುಗಳಿಗೆ ಪ್ರತಿ ಮಾಡಿಕೊಳ್ಳಬಹುದು. ಇದಕ್ಕಾಗಿ ನಿಮ್ಮಲ್ಲಿ ಗಣಕ (ಕಂಪ್ಯೂಟರ್) ಇರುವುದೂ ಅಗತ್ಯ. ಹಲವು ಮನೆಗಳಲ್ಲಿ ಅಪ್ಪ ಮನೆಗೆ ಬಂದೊಡನೆ ಮಕ್ಕಳು ಅಪ್ಪನ ಕೈಯಿಂದ ಮೊಬೈಲ್ ಫೋನು ಕಿತ್ತುಕೊಂಡು ಆಟವಾಡುವುದನ್ನು ಗಮನಿಸಿದ್ದೇನೆ. ಮೊಬೈಲ್ ಫೋನುಗಳಿಗೆ ಆಟಗಳನ್ನು ತಯಾರಿಸಿ ಮಾರುವುದನ್ನೇ ಉದ್ಯೋಗವಾಗಿರುವ ಕಂಪೆನಗಳೂ ಹಲವಾರಿವೆ. ಕೇವಲ ಆಟಗಳಲ್ಲ. ಇತರೆ ಹಲವಾರು ಉಪಯುಕ್ತ ತಂತ್ರಾಂಶಗಳನ್ನೂ ತಯಾರಿಸಿ ಮಾರುವ ಕಂಪೆನಿಗಳಿವೆ. ಇಂತಹ ಒಂದು ಉದಾಹರಣೆಯೆಂದರೆ ಶಾಲಾಮಕ್ಕಳಿಗೆ ಗಣಿತ ಕಲಿಯಲು ಸಹಾಯಕಾರಿಯಾದ ತಂತ್ರಾಂಶ ಮತ್ತು ಅದರ ಅಂತರಜಾಲ ತಾಣ – www.math4mobile.com. ಭಾರತದಲ್ಲೂ ಮೊಬೈಲ್ ಸೇವೆ ನೀಡುವ ಕಂಪೆನಿಗಳಿಗೆ ಸೂಕ್ತ ಬಹುಮಾಧ್ಯಮ (ಸುದ್ದಿ, ಪಠ್ಯ, ಧ್ವನಿ, ಸಂಗೀತ, ಚಲನಚಿತ್ರ, ವೀಡಿಯೋ, ಅನಿಮೇಶನ್, ಇತ್ಯಾದಿ) ಸರಬರಾಜು ಮಾಡುವ ಕಂಪೆನಿಗಳಿವೆ. ಮೊಬೈಲ್ ಹೂರಣ ತಯಾರಿ ಮತ್ತು ಸರಬರಾಜು ಎಂಬುದು ಒಂದು ಪೂರ್ಣಪ್ರಮಾಣದ ಉದ್ಯಮವಾಗಿ ಬೆಳೆದು ನಿಂತಿದೆ.

ಫೋನಿಗೆ ದೂರವಾಣಿ ಎನ್ನುತ್ತಾರೆ. ಈ ಪಾರಿಭಾಷಿಕ ಪದ ಸೃಷ್ಟಿ ಮಾಡಿದಾಗ ಮೊಬೈಲ್ ಫೋನುಗಳಿರಲಿಲ್ಲ. ಈ ದೂರವಾಣಿ ಎಂಬ ಪದದ ಅರ್ಥವ್ಯಾಪ್ತಿಯನ್ನು ನಾವು ಸ್ವಲ್ಪ ಚಿಕ್ಕದಾಗಿಸಿ ಲ್ಯಾಂಡ್‌ಲೈನ್ ಫೋನಿಗೆ ಮಾತ್ರ ಅನ್ವಯಿಸುತ್ತಿದ್ದೇವೆ. ಅಂದರೆ ಸ್ಥಿರ ದೂರವಾಣಿ. ಇದನ್ನೇ ಮುಂದುವರೆಸಿ ಮೊಬೈಲ್ ಫೋನುಗಳನ್ನು ಕನ್ನಡದಲ್ಲಿ ಜಂಗಮವಾಣಿ ಎಂದು ಹೇಳಬಹುದು. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹಾಗೂ ಇನ್ನೂ ಹಲವರು ಹಾಗೆಂದು ಹೇಳುವುದನ್ನು ನಾನು ಗಮನಿಸಿದ್ದೇನೆ. ಈ ಜಂಗಮವಾಣಿಗಳಲ್ಲಿ ಏನೇನು ಮಾಡಬಹುದು ಎಂಬ ವಿಷಯಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ. ಅವುಗಳಲ್ಲಿ ಕೆಲವನ್ನು ಮಾತ್ರ ಈ ಲೇಖನದಲ್ಲಿ ತಿಳಿಸಲಾಗಿದೆ. ಅಂದ ಹಾಗೆ ಈ ಮೊಬೈಲ್ ಫೋನುಗಳನ್ನು ಕರೆ ಮಾಡಿ ಮಾತನಾಡಲೂ ಬಳಸಬಹುದು!

— *** —

ಒಂದು ದೇವಸ್ಥಾನದಲ್ಲಿ ಕಂಡ ಜಾಹೀರಾತು ಫಲಕ

ದೇವರು ನಿಮ್ಮ ಪ್ರಾರ್ಥನೆಗೆ ಮೆಚ್ಚಿ ನಿಮ್ಮನ್ನು ಸಂಪರ್ಕಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕಾಗಿ ಆತ ಮೊಬೈಲ್ ಫೋನ್ ಬಳಸುವ ಸಾಧ್ಯತೆಗಳಿಲ್ಲ. ನಿಮ್ಮ ಮೊಬೈಲ್ ಫೋನನ್ನು ಬಂದ್ ಮಾಡಿ.

ನಾಯಿ ನುಂಗಿದ ಫೋನು

ಒಮ್ಮೆ ಒಬ್ಬಾತನ ಮೊಬೈಲ್ ಫೋನ್ ಮನೆಯಲ್ಲಿ ಕಾಣೆಯಾಯಿತು. ಇಡೀ ಮನೆ ಹುಡುಕಿಯೂ ಅದು ಸಿಗಲಿಲ್ಲ. ಕೊನೆಗೊಮ್ಮೆ ಆತ ತನ್ನ ಮನೆಯ ಫೋನಿನಿಂದ ಮೊಬೈಲ್ ಫೋನಿಗೆ ರಿಂಗ್ ಮಾಡಿದ. ಆಶ್ಚರ್ಯ. ಆತನ ಮನೆಯ ನಾಯಿಯ ಹೊಟ್ಟೆಯೊಳಗಿನಿಂದ ಮೊಬೈಲ್ ಫೋನ್ ಕಿಣಿಕಿಣಿಸಿತು. ಆದದ್ದೇನೆಂದರೆ ಆತನ ಮನೆಯ ನಾಯಿ ಮೊಬೈಲ್ ಫೋನನ್ನು ನುಂಗಿತ್ತು.

ಕಳ್ಳ ಸಿಕ್ಕಿ ಬಿದ್ದ

ಒಮ್ಮೆ ಒಬ್ಬಾತ ಬೆಂಗಳೂರಿನ ನಗರ ಸಾರಿಗೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಆತನ ಮೊಬೈಲ್ ಕಳುವಾಯಿತು. ಅದು ಕಳುವಾಗಿ ನಿಮಿಷದಲ್ಲೇ ಆತನಿಗೆ ಕಳವಿನ ಅರಿವೂ ಆಯಿತು. ಆತ ಒಂದು ಉಪಾಯ ಮಾಡಿದ. ಪಕ್ಕದಲ್ಲಿದ್ದ ಸಹಪ್ರಯಾಣಿಕನಿಗೆ ವಿನಂತಿಸಿ ಆತನ ಮೊಬೈಲ್ ಫೋನಿನಿಂದ ತನ್ನ ಫೋನಿಗೆ ಫೋನಾಯಿಸಿದ. ಕಳ್ಳ ಇನ್ನೂ ಬಸ್ಸಿನಿಂದ ಇಳಿದಿರಲಿಲ್ಲ. ಆತನ ಕಿಸೆಯಿಂದ ಫೋನು ಸದ್ದು ಮಾಡಿತು. ಕಳ್ಳನಿಗೆ ಎಲ್ಲರೂ ಸೇರಿ ಚೆನ್ನಾಗಿ ತದಕಿದರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ?

ವಿವಾಹ ವಿಚ್ಛೇದನಕ್ಕೆ ಮೊಬೈಲ್ ಕಾರಣ

ಕೀನ್ಯಾದಲ್ಲಿ ವಿವಾಹ ವಿಚ್ಛೇದನಕ್ಕೆ ಮೊಬೈಲ್ ಫೋನುಗಳೂ ಕಾರಣೀಭೂತವಾಗುತ್ತಿವೆ. ಹೆಂಡತಿ ಯಾ ಗಂಡನ ಫೋನಿನಲ್ಲಿರುವ ಎಸ್‌ಎಂಎಸ್ ಸಂದೇಶಗಳನ್ನು ಪ್ರತಿ ದಿನ ಓದಿ ಇದು ಯಾರದು, ಆತನಿಗೂ/ಆಕೆಗೂ ನಿನಗೂ ಏನು ಸಂಬಂಧ ಎಂದಿತ್ಯಾಗಿ ಪೀಡಿಸುವುದುರಿಂದ ರೋಸಿ ಹೋಗಿ ಗಂಡ/ಹೆಂಡತಿ ವಿಚ್ಛೇದನಕ್ಕೆ ಅರ್ಜಿ ಗುಜರಾಯಿಸುತ್ತಿದ್ದಾರೆ.

ಶೌಚಾಲಯ ಪತ್ತೆಗೂ ಪೊಬೈಲ್ ಫೋನ್

ನಿಮಗೂ ಇಂತಹ ಅನುಭವವಾಗಿರಬಹುದು. ನಗರದ ಯಾವುದೋ ರಸ್ತೆಯಲ್ಲಿ ಅಲೆದಾಡುತ್ತಿದ್ದೀರಿ. ಒತ್ತಡ ಹೆಚ್ಚಾಗುತ್ತಿದೆ. ಹತ್ತಿರದಲ್ಲಿ ಎಲ್ಲಿ ಶೌಚಾಲಯ ಇದೆ ಎಂದು ಗೊತ್ತಿಲ್ಲ. ಹುಡುಕುವುದು ಹೇಗೆ? ಇಂತಹ ಸಂದರ್ಭಗಳಿಗೆಂದೇ ಅಮೇರಿಕದಲ್ಲಿ ಒಂದು ಸೇವೆ ಪ್ರಾರಂಭವಾಗಿದೆ. ನೀವು ಎಲ್ಲಿದ್ದೀರಿ ಎಂಬ ಮಾಹಿತಿಯನ್ನು ಒಂದು ಸಂಖ್ಯೆಗೆ ಎಸ್‌ಎಂಎಸ್ ಮಾಡಿದರೆ ನಿಮಗೆ ಹತ್ತಿರದ ಶುಚಿಯಾದ ಶೌಚಾಲಯದ ವಿಳಾಸ ಮತ್ತು ಅಲ್ಲಿಗೆ ಹೋಗಲು ದಾರಿಯನ್ನು ಎಸ್‌ಎಂಎಸ್ ಮೂಲಕ ತಿಳಿಸುತ್ತದೆ.

ಕೆಲವು ಉಪಯುಕ್ತ ಜಾಲತಾಣಗಳು

www.funformobile.com
www.india-cellular.com
www.shareideas.org/index.php/Main_Page
www.mobileactive.org
uk.oneworld.net/section/mobile
www.math4mobile.com
gallery.mobile9.com
www.mobango.com
www.sms.ac
www.motvik.com
www.mundu.com
http://btis.in

(ಕೃಪೆ: ಪ್ರಜಾವಾಣಿ ದೀಪಾವಳಿ ವಿಶೇಷಾಂಕ, ೨೦೦೭)

Leave a Reply