ಕಾಸರಗೋಡಿನ ಸಾಂಸ್ಕೃತಿಕ ಇತಿಹಾಸ – ಒಂದು ನೋಟ

ಕಾಸರಗೋಡು ಕನ್ನಡ ನಾಡು

– ಡಾ. ವಸಂತಕುಮಾರ ಪೆರ್ಲ

ಕಾಸರಗೋಡು ಅಚ್ಚಕನ್ನಡ ನಾಡು. ೧೯೫೬ ರಲ್ಲಿ ಭಾಷಾವಾರು ಪ್ರಾಂತ ರಚನೆಯ ಸಂದರ್ಭದಲ್ಲಿ ಅನ್ಯಾಯವಾಗಿ ಕೇರಳಕ್ಕೆ ಸೇರಿ ಪಡಬಾರದ ಪಾಡು ಪಡುತ್ತಿದೆ.
ಇಂದು ಮಲಯಾಳಿಗರ ಆಕ್ರಮಣ ನೀತಿಯಿಂದಾಗಿ ಕಾಸರಗೋಡಿನ ಕನ್ನಡಿಗರು ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ತುಳಿತಕ್ಕೆ ಒಳಗಾಗಿದ್ದಾರೆ.

ಕಾಸರಗೋಡಿನ ಸಮಸ್ಯೆಗಳನ್ನು ದೊಡ್ಡದಾಗಿ ಹೇಳಿಕೊಳ್ಳುವ ಅವಕಾಶಗಳು ಇತ್ತಿತ್ತಲಾಗಿ ಕಡಿಮೆಯಾಗುತ್ತಿದೆ. ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳು ತಮ್ಮದೇ
ವ್ಯವಹಾರ ಮತ್ತು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಕಾಸರಗೋಡಿನ ಕಡೆಗೆ ಮುಖ ಮಾಡಲು ಅವಕ್ಕೆ ಸಮಯವೂ ಇಲ್ಲ; ವ್ಯವಧಾನವೂ ಇಲ್ಲ ಎಂಬಂತಾಗಿದೆ. ಹಾಗಾಗಿ
ಕಾಸರಗೋಡಿನ ಸಮಸ್ಯೆಗಳನ್ನು ಕಾಸರಗೋಡಿನವರೇ ನಿರ್ವಹಿಸಿಕೊಳ್ಳುವ ದಿನಗಳು ಬಂದಿವೆ.

ರಾಜ್ಯಗಳ ಒಕ್ಕೂಟ ವ್ಯವಸ್ಥೆಯಲ್ಲಿ ತಮ್ಮ ಪ್ರದೇಶದ ಸಮಸ್ಯೆಗಳನ್ನು ನಿವಾರಿಸುವ ಜವಾಬ್ದಾರಿ ರಾಜ್ಯ ಸರಕಾರಗಳಿಗೆ ಇದೆ. ಆ ಕರ್ತವ್ಯ ಮತ್ತು ಜವಾಬ್ದಾರಿಯಿಂದ ಅವು
ಹಿಂದೆ ಸರಿಯುವಂತಿಲ್ಲ. ಈ ನಿಟ್ಟಿನಿಂದ ನೋಡಿದಾಗ, ಸ್ವಾತಂತ್ರ್ಯಾನಂತರ, ಅದರಲ್ಲೂ ಭಾಷಾವಾರು ರಾಜ್ಯ ರಚನೆಯಾದ ಬಳಿಕ, ಅಂದರೆ ೧೯೫೬ ರ ಬಳಿಕ ಕಾಸರಗೋಡು ಅಕ್ಕಪಕ್ಕದ ಇತರ ಪ್ರದೇಶಗಳಿಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ತುಂಬ ಹಿಂದೆ ಉಳಿದಿದೆ.

ಕಾಸರಗೋಡು ಯಾವಾಗ ಕರ್ನಾಟಕಕ್ಕೆ ಸೇರಿ ಹೋಗುತ್ತದೋ ಎಂಬ ಆತಂಕದಿಂದ ಕೇರಳ ಸರಕಾರ ಕಾಸರಗೋಡು ಪ್ರದೇಶವನ್ನು ಅನಾದರದಿಂದ ನಡೆಸಿಕೊಳ್ಳುತ್ತಿದೆ.
ಕೇರಳದಲ್ಲಿ ಇರುವುದರಿಂದ ಆಡಳಿತಾತ್ಮಕವಾಗಿ ಕರ್ನಾಟಕಕ್ಕೆ ಏನೂ ಮಾಡಲಾಗುತ್ತಿಲ್ಲ. ಹೀಗಾಗಿ ಕಾಸರಗೋಡು ಮೂಲಭೂತ ಸೌಕರ್ಯ ಪಡೆಯುವಲ್ಲಿ ಹಿಂದೆ ಬಿದ್ದಿದೆ.
ಈ ಸಮಸ್ಯೆ ಇದೇ ರೀತಿ ಮುಂದುವರಿದರೆ ಮುಂದೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.

ಕಾಸರಗೋಡಿನಿಂದ ತುಸು ದಕ್ಷಿಣಕ್ಕಿರುವ ಚಂದ್ರಗಿರಿ ನದಿಯು ಕರ್ನಾಟಕ ಮತ್ತು ಕೇರಳದ ನಡುವೆ ಇರುವ ಸ್ವಾಭಾವಿಕವಾದ ಸಹಜ ಗಡಿ. ದಕ್ಷಿಣ ಕನ್ನಡ ಜಿಲ್ಲೆಯ ಕಡೆಯಿಂದ ಚಂದ್ರಗಿರಿ ನದಿ ತೀರದ ವರೆಗೂ ಕನ್ನಡ ಭಾಷೆ – ಸಂಸ್ಕೃತಿ ಇದೆ. ಚಂದ್ರಗಿರಿಯಿಂದ ದಕ್ಷಿಣಕ್ಕೆ ನಿಧಾನವಾಗಿ ಮಲಯಾಳ ಸಂಸ್ಕೃತಿ ಆರಂಭವಾಗುವುದನ್ನು ಇವತ್ತಿಗೂ ಕಾಣಬಹುದು.

ಹಿಂದಿನ ಕಾಲದಲ್ಲಿ ಕೇರಳದ ಜನರು ಚಂದ್ರಗಿರಿ ನದಿಯಿಂದ ಉತ್ತರ ಭಾಗದತ್ತ – ಅಂದರೆ ಕಾಸರಗೋಡಿನ ಕಡೆಗೆ – ಪ್ರಯಾಣಿಸುತ್ತಿರಲಿಲ್ಲ. ಚಂದ್ರಗಿರಿ ನದಿ ದಾಟಿ
ಉತ್ತರದತ್ತ ಬಂದವರನ್ನು ಜಾತಿಭ್ರಷ್ಟರೆಂದು ಪರಿಗಣಿಸುತ್ತಿದ್ದರು. ಜನಪದರಲ್ಲಿದ್ದ ಈ ನಂಬಿಕೆ ಅಥವಾ ರೂಢಿ ಚಂದ್ರಗಿರಿ ನದಿಯು ಕೇರಳ – ಕರ್ನಾಟಕದ ನಡುವಣ
ಸಹಜ ಗಡಿ ಎಂಬುದನ್ನು ಪುಷ್ಟೀಕರಿಸುತ್ತದೆ.

ಸ್ವಾತಂತ್ರ್ಯ ಸಿಗುವ ವರೆಗೆ, ಕಾಸರಗೋಡಿನಿಂದ ದಕ್ಷಿಣಕ್ಕೆ ಸುಮಾರು ೩೦ ಕಿ. ಮೀ. ದೂರದಲ್ಲಿರುವ ನೀಲೇಶ್ವರದ ವರೆಗೂ ಕನ್ನಡ ನಾಡು ಹಬ್ಬಿತ್ತು. ನೀಲೇಶ್ವರದಲ್ಲಿ
ಕನ್ನಡ ಶಾಲೆಗಳಿದ್ದವು. ಇವತ್ತಿಗೂ ಒಂದು ಶಾಲೆ ಕನ್ನಡದ್ದಿದೆ. ಸಾಹಿತಿ ನಿರಂಜನ ಅವರು ಓದಿದ್ದು ನೀಲೇಶ್ವರದ ಕನ್ನಡ ಶಾಲೆಯಲ್ಲಿ. ಸ್ವಾತಂತ್ರ್ಯ ಚಳವಳಿಯ
ಸಮಯದಲ್ಲಿ ಈ ಪರಿಸರದಲ್ಲಿ ಜರಗಿದ ರೈತ ಹೋರಾಟವನ್ನು ಕುರಿತು ಅವರು ‘ಚಿರಸ್ಮರಣೆ’ ಎಂಬ ಕಾದಂಬರಿ ಬರೆದಿದ್ದು ಅದು ತುಂಬ ಪ್ರಸಿದ್ಧವಾಗಿದೆ.

ಇವತ್ತಿಗೂ ನೀಲೇಶ್ವರದಿಂದ ಉತ್ತರ ಭಾಗದ (ಅಂದರೆ ಕಾಸರಗೋಡಿಗೆ ತಾಗಿಕೊಂಡಿರುವ) ಪ್ರದೇಶದ ಮಲಯಾಳವನ್ನು ದಕ್ಷಿಣ ಕೇರಳದ ಮಲಯಾಳಿಗರು ಶುದ್ಧ ಮಲಯಾಳವೆಂದು ಒಪ್ಪುವುದಿಲ್ಲ. ಅದನ್ನು ತುಳು ಮತ್ತು ಕನ್ನಡ ಮಿಶ್ರಿತ ಮಲಯಾಳವೆಂದು ಹೀಗಳೆಯುವುದನ್ನು ಕಾಣಬಹುದು.

ಹದಿನಾರನೇ ಶತಮಾನದ ಮಧ್ಯಭಾಗದಲ್ಲೇ ಕನ್ನಡವು ನೀಲೇಶ್ವರದ ವರೆಗೆ ಹಬ್ಬಿತ್ತು. ಕ್ರಿ. ಶ. ೧೫೬೫ ರಲ್ಲಿ ಕೆಳದಿಯ ಶಿವಪ್ಪ ನಾಯಕನು ದಕ್ಷಿಣದತ್ತ ದಂಡೆತ್ತಿ
ಬಂದು ಕುಂಬಳೆಯ ಅರಸರನ್ನು ಯುದ್ಧದಲ್ಲಿ ಸೋಲಿಸಿ, ನೀಲೇಶ್ವರದಿಂದಲೂ ತುಸು ದಕ್ಷಿಣದ ವರೆಗೆ ತನ್ನ ಗಡಿಯನ್ನು ವಿಸ್ತರಿಸಿದ. ಅಲ್ಲಿ ‘ತೊಲಗದ ಕಂಬ’
ವನ್ನು ಸ್ಥಾಪಿಸಿದ. ಆತನ ಅವಧಿಯಲ್ಲಿ ಪಶ್ಚಿಮ ಕರಾವಳಿಯಲ್ಲಿ ಹಲವಾರು ಕೋಟೆಗಳನ್ನು ಕಟ್ಟಲಾಯಿತು. ಮಂಗಳೂರು, ಕುಂಬಳೆ, ಕಾಸರಗೋಡು, ಬೇಕಲ,
ಹೊಸದುರ್ಗ ಮುಂತಾದ ಕಡೆಗಳಲ್ಲಿ ಕೆಳದಿಯ ನಾಯಕರು ಕಟ್ಟಿಸಿದ ಕೋಟೆಗಳನ್ನು ಇಂದಿಗೂ ಕಾಣಬಹುದು. ‘ಹೊಸದುರ್ಗ’ ಎಂಬ ಹೆಸರೇ ಹೊಸದಾಗಿ ಕಟ್ಟಿದ ದುರ್ಗ (ಕೋಟೆ) ಎಂಬುದನ್ನು ಸೂಚಿಸುತ್ತದೆ. ಇದೊಂದು ಅಚ್ಚಗನ್ನಡ ಶಬ್ದ. ಇಂದೀಗ ಬೇಕಲ ಕೋಟೆ ಹೊರತುಪಡಿಸಿದರೆ ಬೇರಾವ ಕೋಟೆಗಳೂ ಸುಸ್ಥಿತಿಯಲ್ಲಿ ಇಲ್ಲ.

ಕೆಳದಿಯ ಅರಸರ ಬಳಿಕ, ೧೭೫೦ ರ ಸುಮಾರಿಗೆ ಮೈಸೂರಿನ ಅರಸರು ಈ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಅದರಲ್ಲೂ ಹೈದರಾಲಿ ಮತ್ತು ಟಿಪ್ಪೂ ಸುಲ್ತಾನ್ ಕಾಲದಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಪ್ರದೇಶವು ಮೈಸೂರು ಆಡಳಿತಕ್ಕೆ ಒಳಪಟ್ಟಿತು. ಕ್ರಿ. ಶ. ೧೭೯೯ ರಲ್ಲಿ ಬ್ರಿಟಿಷರ ವಿರುದ್ಧದ ಮೈಸೂರು ಯುದ್ಧದಲ್ಲಿ ಟಿಪ್ಪೂ ಹತನಾದ ಬಳಿಕ ಈ ಪ್ರದೇಶವು ಬ್ರಿಟಿಷರ ಅಧೀನಕ್ಕೆ ಬಂತು.

ಉಡುಪಿ, ಮಂಗಳೂರು, ಕಾಸರಗೋಡು ಪ್ರದೇಶವನ್ನು ಮದರಾಸು ಸಂಸ್ಥಾನದ ಆಡಳಿತ ವ್ಯಾಪ್ತಿಯಲ್ಲಿ ತಂದ ಬ್ರಿಟಿಷರು ಇದನ್ನು ದಕ್ಷಿಣ ಕನ್ನಡ ಜಿಲ್ಲೆ ಎಂದು ಕರೆದರು. ಗಂಗೊಳ್ಳಿಯಿಂದ ಉತ್ತರಭಾಗದಲ್ಲಿದ್ದ, ಕನ್ನಡ ಜನರಿದ್ದ ಪ್ರದೇಶವನ್ನು ಉತ್ತರ ಕನ್ನಡ ಜಿಲ್ಲೆ ಎಂದು ಕರೆದು ಮುಂಬೈ ಆಡಳಿತಕ್ಕೆ ಒಳಪಡಿಸಿದರು. ಹಾಗಾಗಿ ಕರಾವಳಿಯಲ್ಲಿ ಒಂದು ದಕ್ಷಿಣ ಕನ್ನಡ ಜಿಲ್ಲೆ ಎಂದೂ ಇನ್ನೊಂದು ಉತ್ತರ ಕನ್ನಡ ಜಿಲ್ಲೆ ಎಂದೂ ಪ್ರಸಿದ್ಧವಾಗಿದೆ.

ಕಾಸರಗೋಡನ್ನು ಒಳಗೊಂಡ ದ. ಕ. ಜಿಲ್ಲೆಯನ್ನು ೧೭೯೯ ರಿಂದ ೧೯೪೭ ರ ವರೆಗೆ ಸುಮಾರು ಒಂದೂವರೆ ಶತಮಾನ ಕಾಲ ಬ್ರಿಟಿಷರು ಆಳಿದರು. ಅವರ ಕಾಲದಲ್ಲಿ
ಹಲವು ಸುಧಾರಣೆಗಳೂ ಆದವು.

ಸ್ವಾತಂತ್ರ್ಯ ಸಿಕ್ಕ ಬಳಿಕ, ಅಂದರೆ ೧೯೪೭ ರಿಂದ ೧೯೫೬ ರ ವರೆಗೆ ಒಂಬತ್ತು ವರ್ಷ ಕಾಲ ಕಾಸರಗೋಡು ದ. ಕ. ಜಿಲ್ಲೆಯಲ್ಲೇ ಇತ್ತು. ೧೯೫೬ ರಲ್ಲಿ ಭಾಷಾವಾರು ಪ್ರಾಂತ
ರಚನೆಯಾಗುವ ಸಂದರ್ಭದಲ್ಲಿ, ಕಾಸರಗೋಡು ಕೇರಳಕ್ಕೆ ಸೇರಿ ಹೋಯಿತು.

ಭಾಷಾವಾರು ಪ್ರಾಂತ ರಚನಾ ಸಮಿತಿಯಲ್ಲಿ ಓರ್ವ ಸದಸ್ಯನಾಗಿದ್ದ, ಕೇರಳದ ಪಣಿಕ್ಕರ್ ಎಂಬಾತನಿಂದ ಈ ಅನ್ಯಾಯ ಆಯಿತು ಎನ್ನಲಾಗಿದೆ. ಕೇರಳವು ಚಿಕ್ಕ ರಾಜ್ಯವಾಗಿರುವುದರಿಂದ ಅದರ ಭೂಪ್ರದೇಶವನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಇಂತಹ ಅನ್ಯಾಯ ಮಾಡಿದರು ಎಂಬ ಆರೋಪವಿದೆ. ಅಂತೂ, ಅಚ್ಚ ಕನ್ನಡ ಪ್ರದೇಶವಾಗಿದ್ದ ಕಾಸರಗೋಡು ತಾಲೂಕು ಅನ್ಯಾಯವಾಗಿ ಕೇರಳಕ್ಕೆ ಸೇರಿ ಹೋಯಿತು.

೧೯೫೬ ರ ಹೊತ್ತಿಗೆ ಶೇ. ೯೦ ಕ್ಕಿಂತ ಹೆಚ್ಚು ಕನ್ನಡಿಗರಿದ್ದ ಈ ಪ್ರದೇಶದಲ್ಲಿ ಇಂದು ಕನ್ನಡಿಗರ ಸಂಖ್ಯೆ ಶೇ. ೪೫ ಕ್ಕೆ ಕುಸಿದಿದೆ. ಕಡ್ಡಾಯವಾದ ಮಲಯಾಳೀಕರಣ
ಮತ್ತು ಮಲಯಾಳಿ ನೌಕರರನ್ನು ಕಾಸರಗೋಡಿನಲ್ಲಿ ತುಂಬುತ್ತ ಬಂದದ್ದರಿಂದ ಹೀಗಾಗಿದೆ.

ನಿಧಾನವಾಗಿ ಕನ್ನಡ ಶಾಲೆಗಳು ಮುಚ್ಚಲ್ಪಟ್ಟವು. ಕನ್ನಡ ಶಾಲೆಗಳಿಗೆ ಸಮಾನಾಂತರವಾಗಿ ಮಲಯಾಳಿ ತರಗತಿಗಳನ್ನು ಆರಂಭಿಸಲಾಯಿತು ಮತ್ತು ಅದೇ ಸ್ಥಳಗಳಲ್ಲಿ ಮಲಯಾಳಿ ಶಾಲೆಗಳನ್ನು ತೆರೆಯಲಾಯಿತು. ಕನ್ನಡಿಗರಿಗೆ ಬಲವಂತವಾಗಿ ಮಲಯಾಳವನ್ನು ಕಲಿಸಲಾಯಿತು. ಮಲಯಾಳ ಕಲಿಯದಿದ್ದರೆ ಉದ್ಯೋಗ ನಿರಾಕರಣೆಯೂ ಆಯಿತು. ಬಲವಂತವನ್ನು ಒಲ್ಲದ ಕಾಸರಗೋಡಿನ ಕನ್ನಡಿಗರು ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕರ್ನಾಟಕವನ್ನು ಅವಲಂಬಿಸಬೇಕಾಗಿ ಬಂತು. ಜೊತೆಗೆ ಕನ್ನಡಿಗರು ವ್ಯಾಪಕವಾಗಿ ಕರ್ನಾಟಕದತ್ತ ವಲಸೆ ಬರತೊಡಗಿದರು.

ಇಷ್ಟಾಗಿಯೂ ಕಾಸರಗೋಡಿನ ಕನ್ನಡದ ಮೂಲಸೆಲೆ ಬತ್ತಿಲ್ಲ. ಇವತ್ತಿಗೂ ಇಲ್ಲಿ ಹರಿಯುತ್ತಿರುವುದು ಕನ್ನಡದ ಒರತೆಯೇ. ಮೇಲ್ನೋಟಕ್ಕೆ, ವ್ಯವಹಾರದಲ್ಲಿ ಮಲಯಾಳಂ ಭಾಷೆ ಹೇರಲಾದಂತೆ ಕಂಡುಬರುತ್ತದೆ. ಆದರೆ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಕನ್ನಡದ ಬದುಕು ಮುಂದುವರಿಯುತ್ತಿದೆ. ಇಲ್ಲಿನ ಆಚರಣೆ ಆರಾಧನೆಗಳು, ನಂಬಿಕೆ ನಡಾವಳಿಗಳು, ಪರಂಪರೆ ಶ್ರದ್ಧೆ ರೂಢಿ ರಿವಾಜುಗಳು, ಕೃಷಿ ನೈಮಿತ್ತಿಕಗಳು ಕನ್ನಡನಾಡಿನಲ್ಲಿ ಇರುವಂತೆಯೇ ಇದೆ. ಅದೇನೂ ಬದಲಾಗಿಲ್ಲ.

ಅಡಿಕೆ ತೆಂಗು ಕೊಕ್ಕೋ ರಬ್ಬರ್ ಗೋಡಂಬಿ ಹೊಗೆಸೊಪ್ಪು ಇತ್ಯಾದಿಗಳು ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ. ಬತ್ತ ಬೆಳೆಯುವವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಕಾಸರಗೋಡಿನ ಅಡಿಕೆಯಂತೂ ಹೆಸರುವಾಸಿಯಾದದ್ದು. ದೊಡ್ಡ ಗಾತ್ರದ, ತೂಕದ ಈ ಅಡಿಕೆಗೆ ಮಾರುಕಟ್ಟೆಯಲ್ಲಿ ದರ ಕೂಡ ತುಸು ಹೆಚ್ಚು.

ಕಾಸರಗೋಡು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ವಾಣಿಜ್ಯ ಬೆಳೆಯಾದ ಅಡಿಕೆಯನ್ನು ಪರಿಚಯಿಸಿದವರು ಹವ್ಯಕ ಜನರು ಎಂಬುದು ಕುತೂಹಲಕರವಾದ  ಒಂದು ವಿಷಯ. ಹದಿನಾರನೇ ಶತಮಾನದಲ್ಲಿ ಕೆಳದಿಯ ನಾಯಕರು ಕಾಸರಗೋಡಿನತ್ತ ದಂಡೆತ್ತಿ ಹೋದಾಗ ಸೈನ್ಯದ ಜೊತೆಗೆ ಹವ್ಯಕರು, ಕೋಟೆ ಕ್ಷತ್ರಿಯರು, ಬೈರರು ಮುಂತಾದ ಸಮುದಾಯದವರು ಆಗಮಿಸಿದ್ದರು. ಹವ್ಯಕರು ತಮ್ಮೊಂದಿಗೆ ಅಡಿಕೆಯನ್ನು ತಂದು ಕಾಸರಗೋಡು ಸುತ್ತಮುತ್ತ ಬೆಳೆಯತೊಡಗಿದರು. ಇವತ್ತಿಗೂ ಅಡಿಕೆ ಕೃಷಿಯಲ್ಲಿ ಹವ್ಯಕರದು ಎತ್ತಿದ ಕೈಯೇ ಸರಿ!

ಅಡಿಕೆ ಬೆಳೆಯ ಮಾರುಕಟ್ಟೆ ವಿಸ್ತರಣೆಗಾಗಿ ಹುಟ್ಟಿಕೊಂಡ ‘ಕ್ಯಾಂಪ್ಕೋ’ ಸಂಸ್ಥೆಯ ಬೆನ್ನೆಲುಬು ಕಾಸರಗೋಡಿನ ಅಡಿಕೆ ಕೃಷಿಕರಾಗಿದ್ದಾರೆ. ಅಡಿಕೆ ಕೃಷಿಕರೆಲ್ಲ ಕನ್ನಡಿಗರು
ಎಂಬುದು ಉಲ್ಲೇಖನೀಯ.

ಸಾಹಿತ್ಯಿಕವಾಗಿ ಇಡೀ ಕರ್ನಾಟಕದ ಜನರು ಹುಬ್ಬೇರಿಸುವಂತೆ ಮಾಡುವ ಒಂದು ಪ್ರದೇಶ ಕಾಸರಗೋಡು. ೧೯೭೬ ರಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಲೇಖಕರ ಕೈಪಿಡಿಯೊಂದನ್ನು ಪ್ರಕಟಿಸಿತು. ಅದರಲ್ಲಿ ಉಲ್ಲೇಖಗೊಂಡ ಲೇಖಕರ ಸಂಖ್ಯೆ ಸುಮಾರು ೭೫೦ ರಷ್ಟು ಎಂಬುದು ಯಾರಾದರೂ ದಿಗ್ಭ್ರಮೆ ಪಡಬಹುದಾದ ಸಂಖ್ಯೆ. ತಾಲೂಕು ಪ್ರದೇಶವೊಂದರಲ್ಲಿ ಇಷ್ಟೊಂದು ಸಂಖ್ಯೆಯ ಲೇಖಕರಿರುವುದು ಬಹುಶಃ ಒಂದು ದಾಖಲೆಯೇ ಸರಿ.

ಕಾಸರಗೋಡು ಕೇರಳಕ್ಕೆ ಸೇರಿಸಲ್ಪಟ್ಟಾಗ ಅತ್ಯಂತ ಹೆಚ್ಚು ದುಃಖ ಪಟ್ಟವರೆಂದರೆ ಮಂಜೇಶ್ವರ ಗೋವಿಂದ ಪೈಗಳು. ಅವರು ವಾಸಿಸುತ್ತಿದ್ದ ಮಂಜೇಶ್ವರ ಕೂಡ
ಕೇರಳಕ್ಕೆ ಸೇರಿತೆಂದ ಮೇಲೆ ಅದಕ್ಕಿಂತ ದೊಡ್ಡ ದುಃಖ ಬೇರೆ ಇದೆಯೇ? ‘ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೇ! ಹರಸು ತಾಯೆ, ಸುತರ ಕಾಯೆ,
ನಮ್ಮ ಜನ್ಮದಾತೆಯೇ!’ ಎಂದು ಅವರು ಅತ್ತರು. ಕೋಪದಿಂದ ಅವರು ತಮ್ಮ ವಿಳಾಸದಲ್ಲಿ ‘ಕೇರಳ’ ಎಂದು ಎಂದೂ ಬರೆಯಲಿಲ್ಲ. ‘ಗೋವಿಂದ ಪೈ, ಮಂಜೇಶ್ವರ,
ದಕ್ಷಿಣ ಭಾರತ’ ಎಂದೇ ಅವರು ತನ್ನ ಉಸಿರುರುವ ವರೆಗೂ ಬರೆದರು!

೧೯೪೮ ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹೆಚ್ಚಿನ ಯಾವ ಸೌಕರ್ಯವೂ ಇರದಿದ್ದ, ಒಂದು ತಾಲೂಕು ಪ್ರದೇಶವಾಗಿದ್ದ ಕಾಸರಗೋಡಿನಲ್ಲಿ
ತಿ. ತಾ. ಶರ್ಮರ ಅಧ್ಯಕ್ಷತೆಯಲ್ಲಿ ಜರಗಿತು. ಕಾಸರಗೋಡು ಒಂದು ಗಂಡುಮೆಟ್ಟಿನ ಕನ್ನಡ ಪ್ರದೇಶ ಎಂಬುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ!

ಕಯ್ಯಾರ ಕಿಞ್ಞಣ್ಣ ರೈಗಳಂತೂ ಜೀವನ ಪೂರ್ತಿ ಕಾಸರಗೋಡಿಗಾಗಿ ಸವೆದರು. ಹೋದಲ್ಲಿ ಬಂದಲ್ಲಿ ಅವರು ‘ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಿ’ ಎಂದೇ ಹೇಳುತ್ತ ಬಂದರು. ಅದೇ ನೋವಿನಲ್ಲಿ ಅವರು ಕಣ್ಣು ಮುಚ್ಚಿದರು. ಕೆ. ವಿ. ತಿರುಮಲೇಶ್, ವೇಣುಗೋಪಾಲ ಕಾಸರಗೋಡು, ಎಂ. ಗಂಗಾಧರ ಭಟ್, ಅನುವಾದಕರಾದ ಎ. ನರಸಿಂಹ ಭಟ್, ಕಾದಂಬರಿಕಾರ ಕೆ. ಟಿ. ಗಟ್ಟಿ, ಗೋಪಾಲಕೃಷ್ಣ ಪೈ, ರಮಾನಂದ ಬನಾರಿ ಮೊದಲಾದ ಶಕ್ತ ಕವಿ – ಲೇಖಕರು ಕಾಸರಗೋಡಿನ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದಾರೆ. ಇಂದಿಗೂ ನೂರಾರು ಮಂದಿ ಕವಿ ಲೇಖಕರು ಕಾಸರಗೋಡಿನಲ್ಲಿ ಕನ್ನಡದಲ್ಲಿಯೇ ತಮ್ಮ ಅಭಿವ್ಯಕ್ತಿ ಕಂಡುಕೊಳ್ಳುತ್ತಿದ್ದಾರೆಂದರೆ ಅಲ್ಲಿನ ಕನ್ನಡದ ಸತ್ತ್ವ ಎಂಥದು ಎಂಬುದು ಮನವರಿಕೆಯಾಗದಿರದು.

ಮಾಧ್ಯಮ ಕ್ಷೇತ್ರಕ್ಕೆ ಕಾಸರಗೋಡಿನ ಕನ್ನಡಿಗರು ಗುರುತರವಾದ ಕೊಡುಗೆ ನೀಡಿದ್ದಾರೆ. ಸುಮಾರು ಹನ್ನೆರಡರಷ್ಟು ಕನ್ನಡ ಪತ್ರಿಕೆಗಳು ಕಾಸರಗೋಡಿನಲ್ಲಿ ಪ್ರಕಾಶನ
ಕಂಡಿವೆ. ಶ್ರವ್ಯ ಮತ್ತು ದೃಶ್ಯ ಮಾಧ್ಯಮ ಕ್ಷೇತ್ರದಲ್ಲೂ ಕಾಸರಗೋಡಿನವರ ಕೊಡುಗೆ ಉಲ್ಲೇಖಕ್ಕೆ ಅರ್ಹವಾಗಿದೆ.

ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಕಾಸರಗೋಡಿನ ಶೈಕ್ಷಣಿಕ ರಂಗದಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಒಂದು ಶಿಕ್ಷಣ ಸಂಸ್ಥೆ. ೧೯೦೮ ರಷ್ಟು ಹಿಂದೆಯೇ ಅದರ
ಉಗಮವಾಯಿತು. ಸಂಸ್ಕೃತ ಕಾಲೇಜು ಆಗಿದ್ದುದು ಸ್ವಾತಂತ್ರ್ಯಾನಂತರ, ಬದಲಾದ ಪರಿಸ್ಥಿತಿಯಲ್ಲಿ ಹೈಸ್ಕೂಲ್ ಆಗಿ ಪರಿವರ್ತನೆಗೊಂಡು ಮುಂದುವರಿಯಿತು. ಮೊಳೆಯಾರ ಶಂಕರನಾರಾಯಣ ಭಟ್ಟ, ರಾ. ಮೊ. ವಿಶ್ವಾಮಿತ್ರ, ನೀ. ನಾ. ಮಧ್ಯಸ್ಥ, ಅಮ್ಮೆಂಬಳ ಶಂಕರನಾರಾಯಣ ನಾವಡ, ಕಯ್ಯಾರ ಕಿಞ್ಞಣ್ಣ ರೈ, ಕಾವೇರಿಕಾನ ಕೃಷ್ಣ ಭಟ್ಟ, ಕುಳಮರ್ವ ವೆಂಕಪ್ಪ ಭಟ್ಟ, ಪೆರ್ಲ ಕೃಷ್ಣ ಭಟ್ಟ ಮುಂತಾದ ಸಾಹಿತಿಗಳು ವಿದ್ವಾಂಸರನ್ನು ನಾಡಿಗೆ ನೀಡಿದ ಶಿಕ್ಷಣ ಸಂಸ್ಥೆ ಇದು. ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ಮತ್ತು ಸ್ವಾತಂತ್ರ್ಯ ಸಿಕ್ಕಿದ ಹೊಸದರಲ್ಲಿ ಪೆರಡಾಲ, ಪೆರ್ಲ, ಕುಂಬಳೆ, ಮುಳ್ಳೇರಿಯ, ಕಾಸರಗೋಡು, ಅಗಲ್ಪಾಡಿ ಮೊದಲಾದ ಕಡೆಗಳಲ್ಲಿ ಕನ್ನಡ ಪ್ರೌಢಶಾಲೆಗಳು ತಲೆ ಎತ್ತಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಬೀಜವನ್ನು ಬಿತ್ತಿದವು.

ಕಳೆದ ಶತಮಾನದ ಆರಂಭದಲ್ಲಿಯೇ ನೀರ್ಚಾಲು, ಉಕ್ಕಿನಡ್ಕ, ನಾರಾಯಣಮಂಗಲ, ಅಗಲ್ಪಾಡಿ ಮೊದಲಾದ ಕಡೆ ಸಂಸ್ಕೃತ ಶಾಲೆಗಳಿದ್ದವು. ಕಾಸರಗೋಡು ಪರಿಸರದಲ್ಲಿ ಕವಿಗಳ ಕಲಾವಿದರ ವಿದ್ವಾಂಸರ ಒಂದು ದೊಡ್ಡ ದಂಡು ಇದೆ. ಮನೆಮನೆಯಲ್ಲಿಯೂ ವಿದ್ವಾಂಸರಿದ್ದಾರೆ. ಅದಕ್ಕೆ ಕಾಸರಗೋಡಿನ ಸಂಸ್ಕೃತ ಶಾಲೆಗಳ ಕೊಡುಗೆ ದೊಡ್ಡದಾಗಿದೆ. ಹಳ್ಳಿಹಳ್ಳಿಗಳಲ್ಲಿ ವೇದವಿದರು, ಜೋತಿಷಿಗಳು ಪಂಚಾಂಗಕರ್ತರು ಆಯುರ್ವೇದ ವೈದ್ಯರು ವಾಸ್ತುತಜ್ಞರು ತಂತ್ರವಿದರು ಇದ್ದಾರೆ. ಇದಕ್ಕೆಲ್ಲ ಕಾರಣ ಕಾಸರಗೋಡು ಪರಿಸರದಲ್ಲಿ ಕಳೆದ ಶತಮಾನದ ಆರಂಭದಲ್ಲೇ ಇದ್ದ ಸಂಸ್ಕೃತ ಶಾಲೆಗಳು.

ಕಾಸರಗೋಡಿನ ಧಾರ್ಮಿಕ ಪರಿಸರವು ಅನನ್ಯವಾದುದಾಗಿದೆ. ಎಡನೀರು ಮಠ ಒಂದು ಮಾನಸ್ತಂಭದಂತೆ ನಿಂತಿದೆ. ಇದಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಶಂಕರಾಚಾರ್ಯರ ನೇರ ಶಿಷ್ಯರಾದ ತೋಟಕಾಚಾರ್ಯರಿಂದ ಎಡನೀರು ಮಠವು ಸ್ಥಾಪಿಸಲ್ಪಟ್ಟಿತು. ಅದ್ವೈತ ತತ್ತ್ವದ ಈ ಮಠದಲ್ಲಿ ಭಾಗವತ ಸಂಪ್ರದಾಯವಿದ್ದು ದಕ್ಷಿಣಾ ಮೂರ್ತಿ ಗೋಪಾಲಕೃಷ್ಣ ಇಲ್ಲಿನ ದೇವರು. ಅಧ್ಯಾತ್ಮದ ಶಾಂತಿ ಸುಪ್ರಸನ್ನತೆ ಮತ್ತು ಬೆಳಕನ್ನು ಪಸರಿಸುತ್ತಿರುವ ಎಡನೀರು ಶ್ರೀಮಠವು ವೇದವಿದ್ಯೆಯ ಪ್ರಸಾರದೊಂದಿಗೆ ಭಾರತೀಯ ಕಲೆ ಸಾಹಿತ್ಯ ಶಿಕ್ಷಣವನ್ನು ಪಸರಿಸುತ್ತಿದೆ.

ಹವ್ಯಕರಿಂದ ಸ್ಥಾಪಿಸಲ್ಪಟ್ಟ ನಾಲ್ಕು ಮಠಗಳಿಗೆ ಸುಮಾರು ೪೫೦ ವರ್ಷಗಳ ಇತಿಹಾಸವಿದೆ. ಕುಂಟಿಕಾನ, ಕಾನ, ಇಕ್ಕೇರಿ ಮತ್ತು ಲಷ್ಕಿರಿ ಎಂಬಲ್ಲಿ – ಅಂದರೆ ಕುಂಬಳೆಯ ಪರಿಸರದಲ್ಲಿ – ಇರುವ ಈ ಮಠಗಳು ಧಾರ್ಮಿಕ ಚಟುವಟಿಕೆಗಳನ್ನು ನೈಮಿತ್ತಿಕದಂತೆ ನಡೆಸಿಕೊಂಡು ಬರುತ್ತಿವೆ.

ಕುಂಬಳೆಯನ್ನು ರಾಜಧಾನಿ ಮಾಡಿಕೊಂಡು ಕುಂಬಳೆಯ ಅರಸರು ಸುಮಾರು ೮ – ೯ ನೇ ಶತಮಾನದಿಂದ ೧೬ ನೇ ಶತಮಾನದ ವರೆಗೂ ಆಳ್ವಿಕೆ ನಡೆಸಿದರು. ೧೬ ನೇ ಶತಮಾನದಲ್ಲಿ ಇಕ್ಕೇರಿಯ ಅರಸರು ದಾಳಿ ನಡೆಸಿದಾಗ ತಮ್ಮ ರಾಜಧಾನಿಯನ್ನು ಮಾಯಿಪ್ಪಾಡಿಗೆ ವರ್ಗಾಯಿಸಿಕೊಂಡರು. ಮಾಯಿಪ್ಪಾಡಿ ಎಂಬ ಸ್ಥಳ ಕುಂಬಳೆಯಿಂದ ಸುಮಾರು ಹತ್ತು ಕಿ. ಮೀ. ಪಶ್ಚಿಮಕ್ಕಿದೆ. ಕುಂಬಳೆಯ ಅರಸರು ಕಲೆ ಸಾಹಿತ್ಯಕ್ಕೆ ವಿಶೇಷವಾದ ಪ್ರೋತ್ಸಾಹ ಕೊಟ್ಟುದು ಕಂಡು ಬರುತ್ತದೆ. ತುಳುವಿನ ಪ್ರಾಚೀನ ಗ್ರಂಥಗಳೆಲ್ಲ ಕುಂಬಳೆ ರಾಜ್ಯದಲ್ಲಿ ಉಪಲಬ್ಧವಾದವು ಎಂಬುದು ಉಲ್ಲೇಖಿಸಬೇಕಾದ ಸಂಗತಿ. ಯಕ್ಷಗಾನದ ಪ್ರವರ್ತಕ ಪಾರ್ತಿಸುಬ್ಬ ಕುಂಬಳೆಯವನಾಗಿದ್ದು ಕುಂಬಳೆ ರಾಜ್ಯವು ಶಾಂತಿ ಸುಭಿಕ್ಷೆ ನೆಲಸಿದ ರಾಜ್ಯವಾಗಿತ್ತು ಎಂದು ತಿಳಿದು ಬರುತ್ತದೆ.

ಹಲವು ಪ್ರಮುಖ ದೇವಾಲಯಗಳು ಕಾಸರಗೋಡು ಜಿಲ್ಲೆಯಲ್ಲಿವೆ. ಹಿಂದೆ ರಾಜರ ಆಳ್ವಿಕೆ ಇದ್ದಾಗ ಕಾವು (ಮುಜುಂಗಾವು), ಕಣಿಯೂರು (ಕುಂಬಳೆ), ಅಡೂರು, ಮದೂರು ಎಂಬಿವು ಸೀಮೆ ದೇವಸ್ಥಾನಗಳಾಗಿ ಪ್ರಸಿದ್ಧವಾಗಿದ್ದು, ಇಂದಿಗೂ ಅವು ತಮ್ಮ ಕಾರಣಿಕವನ್ನು ಉಳಿಸಿಕೊಂಡಿವೆ. ಅಲ್ಲದೆ ಕಾಸರಗೋಡಿನ ಮಲ್ಲಿಕಾರ್ಜುನ, ಮಲ್ಲದ ದುರ್ಗಾಂಬಿಕೆ, ಅಗಲ್ಪಾಡಿಯ ಅನ್ನಪೂರ್ಣೇಶ್ವರಿ, ಪೆರಡಾಲದ ಉದನೇಶ್ವರ, ನಾರಂಪಾಡಿಯ ಮಹಾಲಿಂಗೇಶ್ವರ, ಬಜಕೂಡ್ಲುವಿನ ಮಹಾಲಿಂಗೇಶ್ವರ ಇತರ ಪ್ರಸಿದ್ಧ ದೇವಸ್ಥಾನಗಳಾಗಿದ್ದು ಪ್ರತಿನಿತ್ಯವೂ ಸಾವಿರಾರು ಭಕ್ತರು ನಡೆದುಕೊಳ್ಳುತ್ತಿದ್ದಾರೆ.

ದೇವತಾರಾಧನೆಯಂತೆ ದೈವಾರಾಧನೆಗೂ ಕಾಸರಗೋಡು ಹೆಸರುವಾಸಿಯಾಗಿದೆ. ಕಾನ, ಮಡ್ವ, ಕೊರಕ್ಕೋಡು ಮುಂತಾದ ಸ್ಥಳಗಳಲ್ಲಿರುವ ಧೂಮಾವತಿ, ಪೈಕದ ಚಾಮುಂಡಿ, ಉದ್ಯಾವರ ಮಾಡದ ಅರಸು ದೈವಗಳು ಅತ್ಯಂತ ಪ್ರಸಿದ್ಧವಾದ ದೈವಗಳಾಗಿವೆ. ಸ್ಥಳನಾಮಗಳು ದೈವಾರಾಧನೆಯನ್ನು ನಿರ್ದೇಶಿಸುತ್ತಿರುವುದು ಕುತೂಹಲಕರ ಅಂಶವಾಗಿದೆ.  ಬದಿಯಡ್ಕ ಎಂಬ ಹೆಸರಲ್ಲಿರುವ ‘ಬದಿ’, ಮಾಡ ಎಂಬುದರಲ್ಲಿರುವ ‘ಮಾಡ’, ಕನ್ನೆಪ್ಪಾಡಿ ಎಂಬುದರಲ್ಲಿರುವ ‘ಕನ್ನೆ’, ಧರ್ಮತ್ತಡ್ಕ ಎಂಬುದರಲ್ಲಿರುವ ‘ಧರ್ಮ’, ಮುಂಡಿತ್ತಡ್ಕ ಎಂಬುದರಲ್ಲಿರುವ ‘ಮುಂಡಿ’ (ಅಥವಾ ಚಾಮುಂಡಿ), ಬಂಡಿತ್ತಡ್ಕ ಎಂಬುದರಲ್ಲಿರುವ ‘ಬಂಡಿ’ – ಮುಂತಾದವು ದೈವಾರಾಧನೆಯನ್ನು ನಿರ್ದೇಶಿಸುವ ಶಬ್ದಗಳಾಗಿವೆ.

ಮಂಜೇಶ್ವರ ಎಂಬ ಹೆಸರಲ್ಲಿರುವ ‘ಮಂಜಿ’ ಹಾಯಿಹಡಗನ್ನು ಸೂಚಿಸುತ್ತದೆ. ‘ಎಡನೀರು’ ಎಂಬುದು ಎಂತಹ ಅಚ್ಚಗನ್ನಡ ಶಬ್ದ ಎಂಬುದನ್ನು ಪರಿಭಾವಿಸಬಹುದು. ಕಾಸರಗೋಡು ಪೇಟೆಯ ಹೃದಯಭಾಗದಲ್ಲಿರುವ ‘ಪಿಲಿಕುಂಜೆ’ ಎಂಬ ಸ್ಥಳದಲ್ಲಿ ಹಿಂದೆ ಹುಲಿಗಳಿರುತ್ತಿದ್ದವಂತೆ. ಕಾಸರಗೋಡು ಸಮೀಪ ‘ಮಾಸ್ತಿಗುಂಡಿ’ ಎಂಬ ಸ್ಥಳವಿದ್ದು ಸತಿ ಹೋದವಳೊಬ್ಬಳ ಕತೆಯನ್ನು ಅದು ಅರುಹುತ್ತದೆ.

ಕಾಸರಗೋಡಿನಲ್ಲಿ ಹಲವು ಕಡೆ ಕಂಬಳ ನಡೆಯುತ್ತಿತ್ತು. ಬತ್ತದ ಕೃಷಿ ಇರುವಲ್ಲಿ ಕಂಬಳದ ಆಚರಣೆಯು ಒಂದು ಅವಿಭಾಜ್ಯ ಅಂಗ. ಇವತ್ತು ಬತ್ತದ ಕೃಷಿ ಕಡಿಮೆಯಾಗಿರುವುದರಿಂದ ಮತ್ತು ಸರಕಾರದ ಕೆಲವು ಕಾನೂನುಗಳಿಂದಾಗಿ ಕಂಬಳ ನಡೆಸುವುದಕ್ಕೆ ತೊಂದರೆಯಾಗಿದೆ.

ಕಾಸರಗೋಡು ವೀರಪುರುಷರ ನಾಡೂ ಹೌದು. ಕೆಳದಿಯ ಶಿವಪ್ಪ ನಾಯಕನೊಂದಿಗೆ ಆಗಮಿಸಿ ಕಾಸರಗೋಡಿನಲ್ಲಿ ನೆಲೆನಿಂತ ಕೋಟೆ ಕ್ಷತ್ರಿಯರು ಒಂದು ವೀರ ಜನಾಂಗ. ಬೈರ ಜನಾಂಗದವರು ಕಾಲಾಳು ಯೋಧ ಪಡೆಯವರಾಗಿದ್ದಾರೆ.

‘ಪುಳ್ಕೂರು ಬಾಚ’ ಎಂಬ ಸ್ಥಾನಿಕ ಬ್ರಾಹ್ಮಣ ಹೊಂತಗಾರಿಯೊಬ್ಬ ಜಗಜಟ್ಟಿಯಾಗಿ ಪ್ರಸಿದ್ಧನಾದವನು. ೧೮ ನೇ ಶತಮಾನದ ಆರಂಭ ಕಾಲದಲ್ಲಿದ್ದ ಈತ ಮದೂರು ದೇವಸ್ಥಾನದ ಬಳಿ ಇರುವ ಪುಳ್ಕೂರು ಎಂಬ ಊರಿನವನು. ಈತ ಮಹಾ ಸಾಹಸಿ ಮತ್ತು ದೇಹದಾರ್ಢ್ಯತೆಯಿಂದಾಗಿ ಜಟ್ಟಿಯಾಗಿ ಹೆಸರುವಾಸಿಯಾದವನು. ಈತ ಕಲ್ಲಾಟದಲ್ಲಿ ಮತ್ತು ಕೆಲವು ಕಲಾ ಪ್ರಕಾರಗಳಲ್ಲಿ ನಿಪುಣನಾದವನು ಎಂದು ಐತಿಹ್ಯ ತಿಳಿಸುತ್ತದೆ. ಈತನ ಕಲ್ಲಾಟದಲ್ಲಿ ಕ್ವಿಂಟಾಲ್ ಭಾರದ ಕಲ್ಲುಗಳು ಇದ್ದುವಂತೆ. ಕೆಲವು ಕಲ್ಲುಗಳು ಪುಳ್ಕೂರಿನ ಮಹಾದೇವ ದೇವಸ್ಥಾನದ ಪರಿಸರದಲ್ಲಿ ಇಂದಿಗೂ ಕಂಡು ಬರುತ್ತವೆ.

ಕಾಸರಗೋಡಿನ ಜೀವನದಿಗಳೆಂದರೆ ಚಂದ್ರಗಿರಿ, ಪಯಸ್ವಿನಿ, ಮಧುವಾಹಿನಿ, ಯೇತಡ್ಕ, ಅಡ್ಕಸ್ಥಳ, ಸೀರೆ ಮುಂತಾದವು. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ನದಿಗಳು ಬೇಸಿಗೆಯಲ್ಲಿ ಬತ್ತುವವಾದರೂ ಪರಿಸರದ ಕೃಷಿಗೆ ಒಳ್ಳೆಯ ಜೀವಸೆಲೆಯನ್ನು ಒದಗಿಸುತ್ತವೆ. ಸೀರೆ ನದಿಗೆ ಮಣಿಯಂಪಾರೆಯ ಸಿರಿಯ ಎಂಬಲ್ಲಿ ೧೯೬೦ ರ ಸುಮಾರಿಗೆ ಕಟ್ಟಿದ ಅಣೆಕಟ್ಟೆಯು ಕಾಸರಗೋಡು ಜಿಲ್ಲೆಯ ಮೊದಲ ಅಣೆಕಟ್ಟು ಎಂಬ ಕೀರ್ತಿಗೆ ಪಾತ್ರವಾಗಿದೆ.

ಕರಕುಶಲ ಕಲೆಯಲ್ಲಿ ಕಾಸರಗೋಡು ಗಮನಾರ್ಹ ಸ್ಥಾನ ಪಡೆದಿದೆ. ವಿವಿಧ ರೀತಿಯ ಬುಟ್ಟಿ ಹೆಣೆಯುವ ಒಂದು ಸಮುದಾಯ ಕಾಸರಗೋಡಿನಲ್ಲಿದೆ. ಗ್ರಾಮೀಣ ಕುಲಕಸುಬಾದ ಚಾಪೆ ಹೆಣೆಯುವ ಒಂದು ಸಮುದಾಯವಿದೆ. ಕಾಸರಗೋಡಿನ ಕೈಮಗ್ಗ ಉದ್ಯಮ ಕರಾವಳಿ ಪ್ರದೇಶದಲ್ಲಿ ಪ್ರಖ್ಯಾತವಾಗಿದೆ. ಪೈಕದ ಮಡಕೆ ಉದ್ಯಮ ಒಂದು ಅತಿಪ್ರಸಿದ್ಧ ಗುಡಿಕೈಗಾರಿಕೆ. ಕಾಸರಗೋಡಿನಲ್ಲಿ ಹಂಚಿನ ಕಾರ್ಖಾನೆ ಕಳೆದ ದಶಕದ ವರೆಗೂ ಉತ್ತಮ ರೀತಿಯಲ್ಲಿ ಕಾರ್ಯಾಚರಿಸಿ ಈಗ ಕಣ್ಣು ಮುಚ್ಚಿದೆ. ಆಧುನಿಕ ಆಲಂಕಾರಿಕ ಹಂಚಿನ ಕಡೆಗೆ ಉತ್ಪನ್ನವನ್ನು ಬದಲಾಯಿಸಿದರೆ ‘ಆತ್ಮನಿರ್ಭರ ಭಾರತ’ ಘೋಷಣೆಗೆ ಅತ್ಯುತ್ತಮ ಮಾದರಿಯಾಗಬಲ್ಲದು.

ಕಾಸರಗೋಡು ತೆಂಕುತಿಟ್ಟು ಯಕ್ಷಗಾನದ ಕರ್ಮಭೂಮಿ. ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರು ಕಾಸರಗೋಡಿನವರು ಎಂಬುದು ವಿಶೇಷವಾದ ಮಾತೇನೂ ಅಲ್ಲ. ಪ್ರಸಂಗಕರ್ತರು, ಹಿಮ್ಮೇಳದವರು ಅಷ್ಟೇಕೆ, ಯಕ್ಷಗಾನದ ವೇಷಭೂಷಣ, ಭುಜಕೀರ್ತಿ, ಕಿರೀಟ, ಉಡುಗೆ ತೊಡುಗೆ ತಯಾರಿಸುವವರು ಕೂಡ ಕಾಸರಗೋಡಿನವರೇ ಆಗಿದ್ದಾರೆ.

ಯಕ್ಷಗಾನದ ಗೊಂಬೆಯಾಟ ತಂಡ ಇಡೀ ಕರಾವಳಿ ಪ್ರದೇಶದಲ್ಲಿ ಇರುವುದು ಎರಡೇ ಎರಡು. ಒಂದು ಉಡುಪಿ ಜಿಲ್ಲೆಯ ಹಟ್ಟಿಯಂಗಡಿಯಲ್ಲಿ ಮತ್ತು ಇನ್ನೊಂದು ಕಾಸರಗೋಡಿನಲ್ಲಿ ಇದೆ.

ಕುಂಬಳೆ ಸಮೀಪ ಅನಂತಪುರದಲ್ಲಿ ದಕ್ಶಿಣ ಭಾರತದ ಏಕೈಕ ಸರೋವರ ದೇವಸ್ಥಾನ ಇದೆ. ಇಲ್ಲಿನ ಸರೋವರದಲ್ಲಿರುವ ‘ಬಬಿಯಾ’ ಹೆಸರಿನ ಮೊಸಳೆ ವಿಶೇಷ ಆಕರ್ಷಣೆ. ೧೦ ನೇ ಶತಮಾನದ ಸುಮಾರಿಗೆ ಇಲ್ಲಿನ ಅನಂತಶಯನ ದೇವರು ಸುರಂಗ ಮಾರ್ಗವಾಗಿ ಕೇರಳದ ತಿರುವನಂತಪುರಕ್ಕೆ ತೆರಳಿದನೆಂದು ಪ್ರತೀತಿ. ಐತಿಹಾಸಿಕವಾಗಿ, ಕುಂಬಳೆ ಸೀಮೆಯ ತುಳು ಬ್ರಾಹ್ಮಣ ಅರ್ಚಕರು ಈ ಅನಂತಪುರದ ಅನಂತಶಯನನನ್ನು ತಿರುವಾಂಕೂರಿಗೆ ಒಯ್ದು, ಅಲ್ಲಿನ ದೇವಾಲಯದಲ್ಲಿ ಪ್ರತಿಷ್ಠಾಪಿಸಿದರೆಂದು ಭಾವಿಸಬೇಕು. ಕೇರಳದ ಎಲ್ಲ ದೇವಸ್ಥಾನಗಳಲ್ಲಿರುವ ಅರ್ಚಕರು ಕುಂಬಳೆ ಸೀಮೆಯಿಂದ ತೆರಳಿದ ಬ್ರಾಹ್ಮಣರಾಗಿದ್ದಾರೆ. ಈಗ ಕುಂಬಳೆ ಸಮೀಪ ಅನಂತಪುರ ಎಂಬಲ್ಲಿ ಸರೋವರ ಮಧ್ಯೆ ಸ್ಥಿತನಾಗಿರುವ ಅನಂತಶಯನನು ಭಕ್ತಾದಿಗಳನ್ನು ಹರಸುತ್ತಿದ್ದಾನೆ.

ಸ್ಥಳನಾಮಗಳು ಸಾಮಾನ್ಯವಾಗಿ ಭೂಭೌತಿಕ ವಿಶೇಷತೆಗಳಿಂದಾಗಿ ಬರುತ್ತವೆ. ‘ಕಾಸರಗೋಡು’ ಎಂಬ ಹೆಸರೇ ಅಚ್ಚಗನ್ನಡದ ಶಬ್ದ. ಕಾಸರಕ ಎಂಬ ಕಹಿರುಚಿಯ ಒಂದು ವಿಶಿಷ್ಟ ಜಾತಿಯ ಮರ ಈ ಪ್ರದೇಶದಲ್ಲಿ ಅತ್ಯಧಿಕ ಬೆಳೆಯುತ್ತದೆ. ಕಾಸರ ಮರಗಳು ತುಂಬ ಬೆಳೆಯುವುದರಿಂದಾಗಿ ಮತ್ತು ಎಲ್ಲೆಡೆಯೂ ಅದರ ಕೋಡುಗಳು ಬಿದ್ದು ಹರಡಿಕೊಳ್ಳುವುದರಿಂದಾಗಿ ಕ್ರಮೇಣ ‘ಕಾಸರಗೋಡು’ ಎಂಬ ಹೆಸರು ಸ್ಥಿರವಾಗಿದೆ. ಕಾಸರಗೋಡಿನಿಂದ ತುಸು ದಕ್ಷಿಣಕ್ಕಿರುವ ‘ಕಾಞಂಗಾಡು’ ಎಂಬ ಮಲಯಾಳದ ಹೆಸರು ಕೂಡ ಕಾಸರಕನ ಮರವನ್ನು ನಿರ್ದೇಶಿಸುತ್ತದೆ. ಕಾಞರ ಮರಗಳಿಂದಾಗಿ ‘ಕಾಞಂಗಾಡು’ ಎಂಬ ಹೆಸರು ಬಂದಿದೆ.

ಇತಿಹಾಸ ಕಾಲದಿಂದಲೂ ಕನ್ನಡ ನಾಡಿನ ಭಾಗವಾಗಿದ್ದ ಕಾಸರಗೋಡು ೧೯೫೬ ರಲ್ಲಿ ಅನ್ಯಾಯವಾಗಿ ಕೇರಳಕ್ಕೆ ಸೇರಿ ಇಂದು ‘ಗಡಿನಾಡು’ ಎಂಬ ವಿಭಾಗದಲ್ಲಿ ಸೇರಿಕೊಂಡು ನರಳುತ್ತಿದೆ. ಇಂದಿನ ಕೇರಳ-ಕರ್ನಾಟಕದ ಅಸ್ವಾಭಾವಿಕ ಗಡಿಯು ಕಾಸರಗೋಡಿನ ಕನ್ನಡಿಗರನ್ನು ಶೂಲದಂತೆ ಇರಿಯುತ್ತಿದೆ. ಶಿಕ್ಷಣ, ವ್ಯಾಪಾರ ವಹಿವಾಟು, ಮಾರುಕಟ್ಟೆ, ಉದ್ಯೋಗ, ಆರೋಗ್ಯ ಅನುಪಾನ, ನೆಂಟರಿಷ್ಟರ ಭೇಟಿ ಎಲ್ಲದಕ್ಕೂ ಸಮೀಪದಲ್ಲೇ ಇರುವ ಮಂಗಳೂರು ಅಥವಾ ದಕ್ಷಿಣ ಕನ್ನಡವನ್ನು ಅವಲಂಬಿಸಬೇಕಾಗಿರುವ ಕಾಸರಗೋಡಿನ ಕನ್ನಡಿಗರು ಇಂದು ಅತಂತ್ರವಾಗಿ ನರಳುತ್ತಿದ್ದಾರೆ. ಕೆಲವರಂತೂ ಕಾಸರಗೋಡು ಕೇಂದ್ರಾಡಳಿತ ಪ್ರದೇಶವಾಗಲಿ ಎಂಬ ಕೂಗನ್ನು ಇತ್ತೀಚೆಗೆ ಹೊರಡಿಸತೊಡಗಿದ್ದಾರೆ.

(ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಡಾ. ವಸಂತಕುಮಾರ ಪೆರ್ಲ ಅವರು ಮಾಡಿದ ಭಾಷಣದ ಲಿಖಿತ ರೂಪ)

===

VasanthakumarPerla

 ಲೇಖಕರ ಕಿರುಪರಿಚಯ

ಕಾವ್ಯ ಕತೆ ಕಾದಂಬರಿ ವಿಮರ್ಶೆ ಸಂಶೋಧನೆ ಸಂಪಾದನೆ ವ್ಯಕ್ತಿಚಿತ್ರ ಚಾರಣಸಾಹಿತ್ಯ ಅನುವಾದ ಮುಂತಾದ ಪ್ರಕಾರಗಳಲ್ಲಿ ಸುಮಾರು 50 ರಷ್ಟು ಕೃತಿರಚನೆ ಮಾಡಿರುವ ಡಾ. ವಸಂತಕುಮಾರ ಪೆರ್ಲ ಅವರು ‘ಸ್ವಾತಂತ್ರ್ಯೋತ್ತರ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಜಾನಪದ ಒಳನೋಟಗಳು’ ಎಂಬ ವಿಷಯದ ಬಗ್ಗೆ ಅಧ್ಯಯನ ನಡೆಸಿ ಮೈಸೂರು ವಿ. ವಿ. ಯಿಂದ ಡಾಕ್ಟೋರೇಟ್ ಪಡೆದುಕೊಂಡರು. ಕವಿ ಸಾಹಿತಿ ಮಾಧ್ಯಮತಜ್ಞ ವಿದ್ವಾಂಸ ಸಂಘಟಕ ಎಂದು ಖ್ಯಾತರಾಗಿರುವ ಇವರು ಸುಮಾರು 30 ವರ್ಷಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ, ನಿರ್ದೇಶಕರಾಗಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಇವರ ಕವನಗಳು ಹಲವು ಭಾಷೆಗಳಿಗೆ ಅನುವಾದವಾಗಿವೆ.  ಉತ್ತಮ ವಾಗ್ಮಿಯಾಗಿಯೂ ಹೆಸರಾಗಿದ್ದಾರೆ. ಡಾ. ಪೆರ್ಲ ಅವರಿಗೆ ಸುಮಾರು ಇಪ್ಪತ್ತರಷ್ಟು ಪ್ರಶಸ್ತಿಗಳು ಬಂದಿದ್ದು ಹಲವು ಕಡೆ ಸನ್ಮಾನ ಏರ್ಪಟ್ಟಿದೆ. ಕಾಸರಗೋಡಿನವರೇ ಆದ ಇವರಿಗೆ ಕಾಸರಗೋಡು ಸಮಸ್ಯೆಯ ಬಗ್ಗೆ ತಲಸ್ಪರ್ಶಿಯಾದ ಜ್ಞಾನವಿದ್ದು, ಸ್ವತಃ ಕನ್ನಡ ಹೋರಾಟಗಳಲ್ಲಿ ಭಾಗವಹಿಸಿದವರು.

 

 

Leave a Reply