ಕರ್ನಾಟಕ ಜನಪದ ಕಲೆಗಳು – ಭಾಗ ೪

ಸಂ: ಗೊ. ರು. ಚನ್ನಬಸಪ್ಪ

ಲಂಬಾಣಿ ಕುಣಿತ:


ಕರ್ನಾಟಕದಲ್ಲಿ `ಲಂಬಾಣಿ’ ಒಂದು ವಿಶಿಷ್ಟ ಜನಾಂಗ. ರಾಜಾಸ್ಥಾನದ ಪರಂಪರೆಯವರೆಂದು ಹೇಳಲಾಗುವ ಈ ಜನ ಕರ್ನಾಟಕದ ನಾನಾ ಭಾಗಗಳಲ್ಲಿ ಹರಡಿಕೊಂಡಿದ್ದಾರೆ. ಇವರಿಗೆ `ಬಂಜಾರ’, `ಬಜಾಲಿಂಗ’,’ಸುಕಾಲಿಗ’,`ಲಮಾಣಿ’ ಎಂಬ ಹೆಸರುಗಳೂ ಇವೆ.
ಲಂಬಾಣಿಗಳು ಕಷ್ಟ ಜೀವಿಗಳು. ಇವರು ಸಾಮಾನ್ಯವಾಗಿ ತಮ್ಮದೇ ಆದ ವಸತಿ ತಾಣ ಮಾಡಿಕೊಂಡು ಇರುವುದೇ ಹೆಚ್ಚು. ಇಂತಹ ವಸತಿ ತಾಣಗಳೇ `ಲಂಬಾಣಿ ತಾಂಡ್ಯ’ಗಳು. `ಸೇವಾಬಾಯಿ’ ಇವರ ತಾಂಡ್ಯಕ್ಕೆ ರಕ್ಷಾದೇವತೆ. ಲಂಬಾಣಿಗಳು ಸ್ವಾಭಿಮಾನಿಗಳು; ಭಿಕ್ಷೆ ಬೇಡುವುದು ಇವರ ಧರ್ಮಕ್ಕೆ ವಿರುದ್ಧ! ತಮ್ಮ ಸಮಾಜದ ಕಟ್ಟು ಕಟ್ಟಳೆಗಳನ್ನು ಇವರು ಬಿಟ್ಟವರಲ್ಲ. ಪರಸ್ಪರ ವಿರಸ ತಲೆದೋರಿದಾಗ ತಮ್ಮಲ್ಲಿಯೇ ಪರಿಹರಿಸಿಕೊಳ್ಳುವ ವಿವೇಕಶಾಲಿಗಳು. ತಾಂಡ್ಯದ ನಾಯಕನೇ ಇವರ ನ್ಯಾಯಾಧೀಶ!
ಲಂಬಾಣಿಗಳು ಎಷ್ಟು ಕಷ್ಟ ಜೀವಿಗಳೋ ಅಷ್ಟೇ ಸರಸಿಗಳು. ಇವರ ತಾಂಡ್ಯಕ್ಕೆ ಹೋದರೆ ಆ ಸರಸದ ಸಂಭ್ರಮ ನೋಡಬಹುದು. ಲಂಬಾಣಿ ಮಹಿಳೆಯರ ಕುಣಿತ ಈ ಜನಾಂಗದ ಸಾಂಸ್ಕೃತಿಕ ಪರಂಪರೆ. ತಾಯಿ `ಸೇವಾಬಾಯಿ’ಯನ್ನು ಕೊಂಡಾಡುತ್ತಾ ನೂರೆಂಟು ಹಾಡು ಹೇಳಿಕೊಂಡು ಇವರು ಕುಣಿಯುವ ಬೆಡಗು ಕಣ್ಣಿಗೆ ಹಬ್ಬ!

ವೇಷಭೂಷಣಗಳಲ್ಲಿ ಲಂಬಾಣಿ ಮಹಿಳೆಯರು ಇತರರಿಗಿಂತ ಪ್ರತ್ಯೇಕವಾಗಿಯೇ ನಿಲ್ಲುತ್ತಾರೆ. ಕೆಂಪು ಬಣ್ಣದ ಲಂಗ (ಪೇಟಿಯಾ), ಅದರ ಮೇಲೆ ಮತ್ತು ಅಂಚಿನಲ್ಲಿ ಸೊಗಸಾದ ಕಸೂತಿ ಕೆಲಸ. ಲಂಗದ ಒಡಲಿನಲ್ಲಿ ಸೇರಿಸಿ ಹೊಲಿದಿರುವ ಗಾಜಿನ ಬಿಲ್ಲೆಗಳು, ಬಟ್ಟೆಯ ತುಂಡುಗಳನ್ನು ಕಲಾತ್ಮಕವಾಗಿ ಹೊಂದಿಸಿ ಕಸೂತಿ ಹಾಕಿದ ಕುಪ್ಪಸ (ಕಾಂಚೋಳಿ), ತಲೆಯ ಮೇಲಿಂದ ಮೇಲು ಸೆರಗಿನಂತೆ ಇಳಿಬಿಟ್ಟ (ರುಂಡ ಮತ್ತು ಮುಂಡದ ಹಿಂಭಾಗವನ್ನು ಆವರಿಸುವ) ರಂಗು ರಂಗಿನ ಮೇಲುವಸ್ತ್ರ (ಚಾಂಟ್ಯ). ಈ ಮೇಲು ವಸ್ತ್ರಕ್ಕೂ ಗಾಜಿನ ಬಿಲ್ಲೆಗಳು ಹಾಗೂ ಕುಸುರಿ ಕೆಲಸದ ಅಲಂಕಾರದ ಜೊತೆಗೆ ಅದರ ಅಂಚಿನಲ್ಲಿ ಚಿಕ್ಕ ಬೆಳ್ಳಿ ಗೆಜ್ಜೆಗಳ ಸರ ಜೋಡಿಸಿಲ್ಪಟ್ಟಿರುತ್ತದೆ. ಸಾಮಾನ್ಯವಾಗಿ ಕೆಂಪು ಅಥವಾ ನೀಲಿ ಇವರ ಬಟ್ಟೆಯ ಬಣ್ಣ.
ಇನ್ನು ಇವರ ಭೂಷಣಗಳೆಂದರೆ ಕೈಗಳಿಗೆ ಅಗಲ ಪಟ್ಟೆಯ ದಂತದ ಬಳೆಗಳು. ಇವಕ್ಕೆ ಧಾರವಾಡದ ಕಡೆ `ಭಲ್ಯ’ ಎಂದು ಕರೆದರೆ ಗುಲ್ಬರ್ಗದವರು `ಚೂಡಿ’ ಎನ್ನುತ್ತಾರೆ. ಕೆಲವು ಕಡೆ `ಮಾಡ್ಯ’ ಎನ್ನುವ ಕಂಚಿನ ಬಳೆ ಧರಿಸಿರುತ್ತಾರೆ. ಕೈಕಾಲು ಬೆರಳುಗಳಿಗೆ ಬೆಳ್ಳಿ ನಾಣ್ಯ ಬೆಸೆದು ಮಾಡಿದ ಉಂಗುರ. ಇವಕ್ಕೆ `ವೀಂಟೇ’, `ಚಾಲಾ ವೀಂಟೇ’,`ಪೂಲಾ’ ಎಂಬ ಹೆಸರುಗಳೂ ಇವೆ. ಕೊರಳಲ್ಲಿ ಧರಿಸುವ ಲೋಹದ ಹಾರಗಳಲ್ಲಿ `ರಫಿಯಾಹಾರ್’ ಎಂಬ ಸರ ಬಹಳ ಮುಖ್ಯವಾದುದು. ಇನ್ನೊಂದು ಎದೆಹಾರಕ್ಕೆ `ಬಳಿ ಚಂದ್ರ’ ಅಥವಾ `ವಾಂಕ್ಯ’ ಎನ್ನುತ್ತಾರೆ. ಬೇಸರಿ ಅಥವಾ `ಪುರಿ’ ಎಂದು ಕರೆಯಲಾಗುವ ಮೂಗುತಿ ಲಂಬಾಣಿ ಮಹಿಳೆಯರ ಮುಖದ ಸೊಗಸಿಗೆ ಮತ್ತಷ್ಟು ಬೆಡಗುಂಟುಮಾಡುತ್ತದೆ. ಸಾಮಾನ್ಯವಾ;ಗಿ ಈ ಮೂಗುತಿ ಹಿತ್ತಾಳೆ ಅಥವಾ ಬೆಳ್ಳಿಯದು. ಇದರ ಅಂಚಿಗೆ ಮುತ್ತು ಬಿಗಿದಿರಬಹುದು; ಇಲ್ಲವೇ ಅದೇ ಲೋಹವನ್ನು ಮುತ್ತಿನಾಕೃತಿಯಲ್ಲಿ ಬಿಡಿಸಿರಬಹುದು.

ಎರಡು ಬದಿಯ ಕೆನ್ನೆಯ ಮೇಲೆ ಇಳಿಬಿಟ್ಟ ಕೂದಲಿನ ಕುಚ್ಚಿಗೆ ಹೆಣೆದು ಜೋಡಿಸಿರುವ ಕೆನ್ನೆಗೆಜ್ಜೆ (ಚೋಟ್ಲೆ), ಹಣೆಯ ಮೇಲೆ `ಟೀಕಿ’, ತಲೆಗೆ `ಗುಗ್ಗರಿ’, `ಚಾಟಿಯಾ’ ಸಿಂಗಾರ. ಕಾಲಿಗೆ ದೊಡ್ಡ ಆಕಾರದ ಬೆಳ್ಳಿಯ ಕಾಲುಗಡಗ -ಈ ಕಾಲುಗಡಗಕ್ಕೆ ಧಾರವಾಡದ ಕಡೆ `ಕೋಲ್ಟ’ ಎಂದೂ ಬಳ್ಳಾರಿ ಕಡೆ `ಗ್ಯಾಂಜೆ’ ಎಂದೂ, ಗುಲ್ಬರ್ಗದ ಕಡೆ `ಕಲ್ಡ’ ಎಂದೂ ಕರೆಯುತ್ತಾರೆ. ಕಾಲುಗಡಗದ ಜೊತೆಗೆ ದಂತದ ಬಳೆಗಳೂ ಇರುತ್ತವೆ. ಕಾಲುಬೆರಳಿಗೆ, ಬೆಳ್ಳಿಯುಂಗುರ, ಸೊಂಟಕ್ಕೆ ಕಸೂತಿಯ ಕಡಿವಸ್ತ್ರ (ವಾಡಾರ್) ರಟ್ಟೆಗೆ `ಕಸೋಲಿಯೇ’ ಎನ್ನುವ ರೀತಿಯ ಬಳೆ, ಕಾಲಿಗೆ ಸಣ್ಣ ಗೆಜ್ಜೆ ಸರ, ಸೊಂಟದಲ್ಲಿ ಎಲೆ ಅಡಿಕೆ ಇಟ್ಟುಕೊಳ್ಳುವ ಚೀಲ (ಪೂತಡಿಯಾ). ಇಷ್ಟೆಲ್ಲಾ ವೇಷಭೂಷಣಗಳ ಜೊತೆಗೆ ಲಂಬಾಣಿ ಮಹಿಳೆಯರು ತೋಳು, ಹಣೆ ಮತ್ತು ಕೆನ್ನೆಗಳಲ್ಲಿ ಕಲಾತ್ಮಕ `ಅಚ್ಚೆ’ಯನ್ನು ಹುಯಿಸಿಕೊಂಡಿರುತ್ತಾರೆ.

ವೇಷಭೂಷಣಗಳೇ ಕಣ್ಣಿಗೆ ಇಷ್ಟೊಂದು ಹಬ್ಬವುಂಟು ಮಾಡಿದರೆ ಇನ್ನು ಅವರ ಕುಣಿತವೆಂದರೆ ಕೇಳಬೇಕೆ? ಸಂಜೆಯಾದರೆ ತಮ್ಮ `ಹಟ್ಟಿ’ಯಲ್ಲಿ ಸುತ್ತುಕಟ್ಟಿಕೊಂಡು ಹಾಡಿ ಕುಣಿಯುತ್ತಾರೆ. ಕುಣಿತಕ್ಕೆ ಇಷ್ಟೇ ಜನರಿರಬೇಕೆಂಬ ನಿಯಮವೇನೂ ಇಲ್ಲ. ಮೂರು ನಾಲ್ಕರಿಂದ ಮುವ್ವತ್ತು ನಲವತ್ತು ಜನರವರೆಗೂ ಇರಬಹುದು. ಸಾಮಾನ್ಯವಾಗಿ ಸರಿ ಸಂಖ್ಯೆಯಲ್ಲೇ ಕೂಡಿಕೊಳ್ಳುವುದು ರೂಢಿ. ಕುಣಿತಕ್ಕೆ ಇವರು ನಿಲ್ಲುವುದು ವೃತ್ತಾಕಾರದಲ್ಲಿ. ಹಾಡಿಲ್ಲದೆ ಲಂಬಾಣಿ ಕುಣಿತವೇ ಇಲ್ಲ. ತಂಡದ ಒಬ್ಬಿಬ್ಬರು ಮೊದಲು ಹಾಡುತ್ತಾರೆ. ಉಳಿದವರು ಪ್ರತಿ ಸೊಲ್ಲಿನ ನಂತರ ಪಲ್ಲವಿಯನ್ನು ಪುನರುಚ್ಚರಿಸುತ್ತಾರೆ. ಸಮಾಜ ದೇವತೆ ಸೇವಾಬಾಯಿಯ ಪ್ರಾರ್ಥನೆಯಿಂದ ಆರಂಭವಾಗುವ ಅವರ ಕುಣಿತ ಮುಂದೆ ವಿವಿಧ ಹಾಡುಗಳೊಂದಿಗೆ ಬದಲಾಯಿಸುತ್ತಾ ಹೋಗುತ್ತದೆ.

ಕುಣಿತಕ್ಕೆ ಸುತ್ತುಕಟ್ಟಿ ನಿಂತರೆ ಭದ್ರ ಕೋಟೆಯಂತಿರುತ್ತದೆ. ಈ ಸುತ್ತು ಕುಣಿತ ಈ ಜನರ ಒಗ್ಗಟ್ಟಿನ ಸಂಕೇತ! ಸುತ್ತ ಸಾಲು ಇವರ ಸಂಸ್ಕೃತಿ -ಸಂಪ್ರದಾಯಗಳ ರಕ್ಷಣೆಗೆ ಹಾಕಿದ ಸುತ್ತು ಬೇಲಿ; ಆ ಬೇಲಿ ದಾಟುವುದು ಅಷ್ಟು ಸುಲಭದ ಮಾತಲ್ಲ. ಲಂಬಾಣಿ ಮಹಿಳೆಯರ ಕುಣಿತದ ರೀತಿ ಬಹು ಆಕರ್ಷಣೀಯ. ಕುಣಿತದಲ್ಲಿ ಕೈ ಕಾಲು ಮತ್ತು ಸೊಂಟಗಳಿಗೆ ಹೆಚ್ಚು ಕೆಲಸ. ಎರಡೂ ಕೈಗಳನ್ನು ಮೇಲಕ್ಕೆತ್ತಿ, ಹಾಗೆಯೇ ಬಲಕ್ಕೂ ಮುಖ ತಿರುಗಿಸುತ್ತಾ, ಒಂದೊಂದೇ ಕೈಯನ್ನು ನೇರವಾಗಿ ನೆಲದವರೆಗೆ ಇಳಿಸಿ ಮತ್ತೆ ಮೇಲಕ್ಕೆತ್ತುತ್ತಾರೆ. ಈ ಚಲನೆಗೆ ತಕ್ಕಂತೆ ಸೊಂಟವೂ ಬಳುಕುತ್ತಿರುತ್ತದೆ. ಕೈ ಚಲನೆಯೊಂದಿಗೆ ಹೆಜ್ಜೆಗಳನ್ನು ಹಿಂದಕ್ಕೆ ಮುಂದಕ್ಕೆ ಹಾಕುತ್ತಾ ಚಪ್ಪಾಳೆ ತಟ್ಟುತ್ತಾರೆ. ಈ ಚಲನವಲನಗಳು ಒಂದು ದಿಕ್ಕಿನಲ್ಲಿ ನಡೆಯುತ್ತಿದ್ದಂತೆ, ಕುಣಿತದ ತಂಡ ಅದೇ ವೃತ್ತಾಕಾರದಲ್ಲೇ ಇನ್ನೊಂದು ದಿಕ್ಕಿನಲ್ಲಿ ಸುತ್ತುತ್ತದೆ. ವಿವಿಧ ಭಂಗಿಗಳಲ್ಲಿ ಕೈಯಾಡಿಸಿ ನಡುವಾಡಿಸಿ ಹಿಂದೆ ಮುಂದೆ ಚಲಿಸಿ ಸುತ್ತಿನಲ್ಲಿ ಕುಣಿಯುವುದಕ್ಕೆ ತಕ್ಕಂತೆ ಕಲಾವಿದರ ಕಂಠದಿಂದ ವೈವಿಧ್ಯಪೂರ್ಣ ಹಾಡುಗಳೂ ಹರಿದು ಬರುತ್ತವೆ.

ಕೆಲವು ಕಡೆ ಕುಣಿತಕ್ಕೆ ಹಿಮ್ಮೇಳವಾಗಿ ಹಲಗೆ (ತಮ್ಮಟೆ) ಬಾರಿಸುವುದೂ ಉಂಟು. ಕೈಯಲ್ಲಿ ತಪ್ಪಡ (ಫಗರಿ) ಹಿಡಿದು ಬಡಿಯುತ್ತ ಕುಣಿಯುವುದೂ ಕೆಲವು ಕಡೆ ಬಳಕೆಯಲ್ಲಿದೆ. ಲಂಬಾಣಿ ಮಹಿಳೆಯರು ಮನ ತುಂಬಿ ಕುಣಿಯುವಾಗ ಕೇಳಿಬರುವ ಕಾಲುಗೆಜ್ಜೆಯ ಸದ್ದು, ಕೈಯಾಡಿಸುವಾಗ ಬರುವ ದಂತದ ಬಳೆಗಳ ಸಪ್ಪಳ, ಗುಂಪು ಹಾಡಿಕೆಯ ಇಂಪು ದನಿ, ಬಾಗಿ ಕುಣಿಯುವಾಗ ಇಳಿ ಬೀಳುವ ಮುಂಗೂದಲಿನ ಕುಚ್ಚುಗಳ ಸೊಗಸು. ಕೈ ಬೀಸಿ ಆಡುವಾಗ ಉಂಟಾಗುವ ಮೇಲು ಹೊದಿಕೆ ಹಾಗೂ ಕವಡೆ ಸರಗಳ ಚೆಲ್ಲಾಟ, ಹಾಡಿನ ಸೊಲ್ಲು ತಪ್ಪಿದಾಗ ನಾಯಕಿಯ ಮುಖದಲ್ಲಿ ಕಾಣುವ ನಸುಗೋಪ, ಸೊಲ್ಲು ಸರಿಯಾದಾಗ ಎಲ್ಲರ ಮುಖದಲ್ಲೂ ಮಿಂಚುವ ನಗೆ -ಇವನ್ನೆಲ್ಲ ಪ್ರತ್ಯಕ್ಷ ಕೇಳಿ, ನೋಡಿಯೇ ಆನಂದಿಸಬೇಕು! ಲಂಬಾಣಿ ಕುಣಿತದ ನೋಟದ ಸೊಬಗನ್ನು ಚಂದ್ರನ ಬೆಳಕಿನಲ್ಲಿ ಅನುಭವಿಸಬೇಕು. ಒಟ್ಟಿಗೆ ಜೋಡಿಸುವ ಗಾಜಿನ ಬಿಲ್ಲೆಗಳ ಹೊಳಪು, ಅವುಗಳಲ್ಲಿ ಕಾಣುವ ಚಂದ್ರನ ಪ್ರತಿಬಿಂಬ ಕುಣಿತದ ಸೊಬಗಿಗೆ ಮೆರಗು ತಂದುಕೊಡುತ್ತವೆ.

ಲಂಬಾಣಿ ಕುಣಿತದಲ್ಲಿ ಕೋಲಾಟವೂ ಉಂಟು. ಆದರೆ, ಸಾಮಾನ್ಯವಾಗಿ ಲಂಬಾಣಿ ಪುರುಷರು ಕೋಲಾಟದಲ್ಲಿ ಪರಿಣಿತರು. ಮಹಿಳೆಯರು ಕೋಲು ಹಿಡಿಯದೇ ಕುಣಿಯುವುದೇ ಹೆಚ್ಚು. ಇವರ ಕೋಲಾಟದಲ್ಲಿ ಒಳಾಟ, ಹೊರಾಟ, ಚಕ್ಕಿ ಕೋಲಾಟ, ಬಾಗು ಕೋಲಾಟ ಮೊದಲಾದ ವಿಧಗಳಿರುತ್ತವೆ. ಲಂಬಾಣಿ ಮಹಿಳೆಯರು ತಮ್ಮ ಹಟ್ಟಿಗಳಲ್ಲಿ ಸ್ವಾನಂದಕ್ಕಾಗಿ ಪ್ರತಿ ಸಂಜೆ ಅಥವಾ ಆಗಾಗ ಕುಣಿದರೂ, ಹಬ್ಬ ಉತ್ಸವಗಳಲ್ಲಿ, ತೇರು ಜಾತ್ರೆಗಳಲ್ಲಿ ಹೊಸ ವೇಷಭೂಷಣ ಧರಿಸಿ, ಹರ್ಷೋತ್ಸಾಹಗಳಿಂದ ಕುಣಿಯುವ ಚಂದವೇ ಚಂದ. ಕಾಮನ (ಹೋಳಿ) ಹಬ್ಬದಲ್ಲಂತೂ ಇವರ ಕುಣಿತ ಒಂದು ಮೋಜು! ಪ್ರತಿಷ್ಠಿತ ವ್ಯಕ್ತಿಗಳನ್ನು ಸುತ್ತುಕಟ್ಟಿ ತಮ್ಮ ಕಲಾಕುಶಲತೆ ತೋರಿ, ಅವರ ಹೆಸರು ಹಿಡಿದು ಹೊಗಳಿ, ಅವರನ್ನು ಮೆಚ್ಚಿಸಿ ಬಹುಮಾನ ಗಿಟ್ಟಿಸುವ ಅವರ ಜಾಣ್ಮೆಯೇ ಜಾಣ್ಮೆ; ಸರಸವೇ ಸರಸ! “ಆಡಿ ಆಡಿ ಬಾಪುರೇ, ಗ್ವಾಡಿ ಹತ್ತಿ ನೋಡಿರೇ” ಎಂಬ ಪಲ್ಲವಿ ಬಹುಜನರಿಗೆ ಪರಿಚಿತವಾಗಿದೆ!

ಲಂಬಾಣಿ ಜನರ ಭಾಷೆಗೆ ಲಿಪಿಯಿಲ್ಲ. ಈ ಭಾಷೆ ಮರಾಠಿ, ರಾಜಾಸ್ಥಾನಿ ಮೊದಲಾದ ನಾನಾ ಭಾಷೆಗಳ ಪ್ರಭಾವದಿಂದ ಸಂವೃದ್ಧಿಗೊಂಡಂತೆ ಕಾಣುತ್ತದೆ. ಲಂಬಾಣಿ ಮಹಿಳೆಯರು ತಮ್ಮ ಭಾಷೆಯ ಗೀತೆಗಳೊಂದಿಗೆ ಕನ್ನಡ ಹಾಡುಗಳನ್ನೂ ಹಾಡುತ್ತಾರೆ. ಇವರ ಗೀತೆಗಳೆಲ್ಲ ಸಾಮಾನ್ಯವಾಗಿ `ಬಾಯಿಯೇ…’ ಎಂಬ ನುಡಿಯೊಂದಿಗೇ ಆರಂಭವಾಗುತ್ತವೆ. ರಾಮಾಯಣ ಮಹಾಭಾರತದಂತಹ ಪುರಾಣ ಪ್ರಸಂಗಗಳೂ ಇವರ ಹಾಡುಗಳಲ್ಲಿ ಬರುತ್ತವೆ. ಸಮಕಾಲೀನ ಸಂಗತಿಗಳನ್ನು ಸೇರಿಸಿಕೊಂಡು ಹಾಡುವುದರಲ್ಲಿ ಇವರು ನಿಪುಣರು.

ಸೋಮನ ಕುಣಿತ:

ತುಮಕೂರು, ಮಂಡ್ಯ, ಚಿತ್ರದುರ್ಗ ಜಿಲ್ಲೆಗಳಲ್ಲಿ ವಿಶೇಷವಾಗಿ ಪ್ರಚಲಿತವಿರುವ ಸೋಮನ ಕುಣಿತ ಹೊರನೋಟಕ್ಕೆ ಒಂದು ಜನಪ್ರಿಯ ಜನಪದ ಕಲೆಯಾಗಿ ಕಂಡರೂ ಮೂಲತಃ ಅದು ದೈವೀ ಶಕ್ತಿಯ ಆರಾಧನೆಯ ಹಿನ್ನಲೆಯಲ್ಲಿ ಬಂದಿದೆ. ಸೋಮನ ಕುಣಿತದ ಸಂಪ್ರದಾಯ ಗ್ರಾಮದೇವತೆಯೊಂದಿಗೆ ಅವಿಭಾಜ್ಯವಾಗಿ ಹೊಂದಿಕೊಂಡಿದೆ. ಸೋಮನನ್ನು ಗ್ರಾಮದೇವತೆಯ ಅಂಗರಕ್ಷಕನೆಂದರೂ ಒಪ್ಪುತ್ತದೆ. ಈ ದೇವತೆಗಳ ಜಾತ್ರೆ ಉತ್ಸವ ಸಂದರ್ಭಗಳಲ್ಲಿ ಸೋಮನ ಕುಣಿತ ಪ್ರಧಾನವಾದ ದೃಶ್ಯ.

ಸೋಮನ ಉಗಮವನ್ನು ಕುರಿತಂತೆ ನಿರ್ದಿಷ್ಟವಾದ ಮಾಹಿತಿ ದೊರೆಯುವುದಿಲ್ಲವಾದರೂ ಒಂದು ದಂತ ಕಥೆ ಹೇಳುವಂತೆ, “ಪೂರ್ವದಲ್ಲಿ ಚೇಳೂರಿನಿಂದ ನಾಗಸಂದ್ರಕ್ಕೆ ಕೆಂಪಜ್ಜಮ್ಮ ಎಂಬ ಹೆಣ್ಣುಮಗಳನ್ನು ತಂದು ಮನೆ ತುಂಬಿಸಿಕೊಂಡಿದ್ದರಂತೆ. ಒಮ್ಮೆ ಹಬ್ಬಕ್ಕೆಂದು ತೌರು ಮನೆಗೆ ಹೋಗಿದ್ದ ಆಕೆಯನ್ನು ಕರೆಯಲು ಅವಳ ಮಾವ ಚೇಳೂರಿಗೆ ಬಂದನಂತೆ. ಕೆಂಪಜ್ಜಮ್ಮನನ್ನು ತೌರು ಮನೆಯಿಂದ ಶುಭಮಹೂರ್ತದಲ್ಲಿ ಕಳುಹಿಸಿಕೊಟ್ಟರು. ಮಾವನ ಜೊತೆ ಹೊರಟ ಆಕೆ ನಾಗಸಂದ್ರದ ಹತ್ತಿರ ಬರುತ್ತಿರುವಾಗ ಜಲಭಾದೆಯಾಗಿ ಮಾವನಿಗೆ ತಿಳಿಸಿ ಹತ್ತಿರದಲ್ಲೇ ಇದ್ದ ಹುತ್ತದ ಮರೆಗೆ ಹೊರಟಳು. ಹೋಗುವ ಮುನ್ನ ಮಾವನಿಗೆ ಹಿಂತಿರುಗಿ ನೋಡಬಾರದೆಂದು ತಿಳಿಸಿದ್ದಳು. ಬಹಳ ಹೊತ್ತಾದರೂ ಸೊಸೆ ಬಾರದಿದ್ದುದನು ಗಮನಿಸಿದ ಆತ ಹಿಂತಿರುಗಿ ನೋಡುತ್ತಾನೆ. ಇದರಿಂದ ನಾಚಿಕೆಗೊಂಡ ಸೊಸೆ ಹುತ್ತದ ಕೋವೆಯೊಳಕ್ಕೆ ಪ್ರವೇಶಿಸಿ ಅಲ್ಲಿಂದ ಸುಂದರ ದೇವತೆಯಾಗಿ ಹೊರಬಂದಳು. ಆಕೆಯೇ ಗ್ರಾಮದೇವತೆಯಾಗಿ ಆರಾಧಿಸಲ್ಪಡುತ್ತಿರುವ ಶಕ್ತಿ! ಹಾಗೆ ಬರುವಾಗ ಆಕೆಯ ಅಕ್ಕಪಕ್ಕದಲ್ಲಿ ಇಬ್ಬರು ಅಂಗರಕ್ಷಕರೂ ಬಂದರು”. ಅವರನ್ನೇ `ಸೋಮ’ ಎಂದು ಕರೆಯುವುದು. ರಾಕ್ಷಸ ವರ್ಗಕ್ಕೆ ಸೇರಿದ ಇವರು ಗ್ರಾಮದೇವತೆಯನ್ನು ರಕ್ಷಿಸುವ ಭಟರು. ಈ ಕಥೆಯ ಸತ್ಯಾಂಶ ಏನೇ ಇರಲಿ. ಗ್ರಾಮದೇವತೆಯ ಅಂಗರಕ್ಷಕ `ಸೋಮ’ ಎಂಬ ನಂಬಿಕೆಯಂತೂ ಪ್ರಚಲಿತವಿದೆ.

ಸಾಮಾನ್ಯವಾಗಿ ಒಂದು ದೇವತೆಗೆ ಎರಡು ಸೋಮಗಳಿರುತ್ತವೆ. ಒಂದನ್ನು `ಹಳದಿ ಸೋಮ’ ಎಂದೂ ಇನ್ನೊಂದನ್ನು `ಕೆಂಪು ಸೋಮ’ ಎಂದೂ ಕರೆಯುತ್ತಾರೆ. ಹಳದಿ ಸೋಮನಿಗೆ `ಕೆಂಚರಾಯ’, ಕೆಂಪು ಸೋಮನಿಗೆ `ಕೆಂಪರಾಯ’ ನೆಂಬ ಹೆಸರುಗಳೂ ಉಂಟು. ಕೆಲವು ಕಡೆ ಹಳದಿ ಸೋಮ ಹೆಣ್ಣೆಂದು ಭಾವಿಸಿ, `ಕೆಂಪಮ್ಮ’ ಎಂಬ ಹೆಸರಿನಿಂದಲೂ, ಕೆಂಪು ಸೋಮನನ್ನು `ಈರಣ್ಣ’ ನೆಂಬ ಅನ್ವರ್ಥನಾಮದಿಂದಲೂ ಕರೆಯುವುದುಂಟು. ಮತ್ತೆ ಕೆಲವು ಕಡೆ ಸೋಮಗಳನ್ನು `ಈರಣ್ಣ-ಪಾಪಣ್ಣ’ ಎಂಬ ಹೆಸರುಗಳಿಂದಲೂ ಗುರುತಿಸುತ್ತಾರೆ. ಅಲ್ಲದೆ ಈರಣ್ಣ ಸಾತ್ವಿಕ ವ್ಯಕ್ತಿ; ಪಾಪಣ್ಣ ರೌದ್ರಾವತಾರಿ ಎಂಬ ನಂಬಿಕೆ ಇದೆ. ಈ ನಂಬಿಕೆಯಂತೆ ಪಾಪಣ್ಣ ಶಕ್ತಿ-ಪರಾಕ್ರಮಗಳಿಗೆ ಹೆಸರಾದ ವ್ಯಕ್ತಿ. ಪಾಪಣ್ಣನಿಗಿರುವ ಇನ್ನೊಂದು ಹೆಸರು `ದೂತರಾಯ’, ಸೋಮಗಳನ್ನು ಗುರುತಿಸುವ ಮತ್ತೊಂದು ಸಂಪ್ರದಾಯವಿದೆ. ಅದರಂತೆ `ಕೆಂಪು ಸೋಮ’, `ಕರಿ ಸೋಮ’ ಎಂಬ ಇಬ್ಬರು. ಕೆಂಪು ಸೋಮ ಸಾತ್ವಿಕ ಗುಣದ ಪ್ರತೀಕ; ಕರಿ ಸೋಮ ತಾಮಸಗುಣದ ಪ್ರತೀಕ.

ಮುಖವಾಡವನ್ನು ಧರಿಸುವ ಕಲೆಗಳಲ್ಲಿ ಸೋಮನ ಕುಣಿತ ಮುಖ್ಯವಾದುದು. ಈ ಮುಖವಾಡವೇ ಕುಣಿತದ ಪ್ರಮುಖ ಆಕರ್ಷಣೆ. ಮುಖವಾಡ `ರಕ್ತಭೂತಾಳೆ’ ಎಂಬ ದೇವ ಸಂಬಂಧಿ ಮರದಿಂದ ಮಾಡಿದುದು. ಶಾಸ್ತ್ರರೀತಿಯಲ್ಲಿ ನಿರ್ದಿಷ್ಟವಾದ ಮನೆತನದ ವ್ಯಕ್ತಿ ಉಪವಾಸವಿದ್ದು ಸಿದ್ಧಪಡಿಸಬೇಕು. ಭೂತಾಳೆ ಮರದಲ್ಲಿರುವ ವಿಶೇಷ ಶಕ್ತಿ ತುಂಬ ಪ್ರಭಾವಶಾಲಿಯಾದುದೆಂಬ ನಂಬಿಕೆಯಿರುವುದರಿಂದ ಮುಖವಾಡವನ್ನು ರಚಿಸುವ ಕಾರ್ಯದಲ್ಲಿ ಎಚ್ಚರಿಕೆ ವಹಿಸಲಾಗುತ್ತದೆ. ಅಗಲವಾದ ಹಣೆ, ವಿಶಾಲವಾದ ಕಿವಿ-ಕಣ್ಣುಗಳು, ದೊಡ್ಡ ಮೂಗು, ಬಾಚಿ ಕೋರೆಹಲ್ಲುಗಳ ಮುಖವಾಡವನ್ನು ಮರದಿಂದ ಕೆತ್ತಿದ ಮೇಲೆ ಅದನ್ನು ನಯ ಮಾಡುತ್ತಾರೆ. ಆಮೇಲೆ ಬಣ್ಣ ಹಾಕುವುದೂ ಒಂದು ವಿಶೇಷವಾದ ಕಲೆ. ಮುಖವಾಡದ ರೂಪ ಭಯ-ಭಕ್ತಿಗಳ ಪ್ರತೀಕವಾಗುವಂತೆ ಕೆಂಪು, ಹಳದಿ, ಕಪ್ಪು ಬಣ್ಣಗಳನ್ನು ಹಾಕಿದ ಮೇಲೆ ಸೋಮನ ಬುರುಡೆಯ ನಾಲ್ಕೈದರಷ್ಟು ದೊಡ್ಡದಾದ ಮುಖವಾಡದ ಹಿಂಬದಿಗೆ ಪ್ರಭಾವಳಿಯಂತೆ ಕಾಣಲು ಬಣ್ಣ ಬಣ್ಣದ ಬಟ್ಟೆಯಿಂದ ಸಿಂಗರಿಸಲು ಅನುವಾಗುವಂತೆ ಬಿದಿರಿನ ಕಡ್ಡಿಗಳ ಕಮಾನಿರುತ್ತದೆ. ಗ್ರಾಮದೇವತೆಯ ವಿವಿಧ ಬಣ್ಣಗಳ ಸೀರೆಗಳನ್ನು ಪ್ರಭಾವಳಿಯಿಂದ ಕೆಳಕ್ಕೆ ಇಳಿಯಬಿಟ್ಟಿರುತ್ತಾರೆ. ಸುಮಾರು ೧೦-೧೨ ವಿವಿಧ ಬಣ್ಣಗಳ ಸೀರೆಗಳು ಸೋಮನನ್ನು ಹೊರುವವನ ಕಾಲುಗಳವರೆಗೆ ಎರಡೂ ಭುಜಗಳ ಪಕ್ಕಗಳಲ್ಲಿ ಇಳಿಬೀಳುತ್ತವೆ. ಸೋಮನ ಮುಖವಾಡದಲ್ಲಿ ತಲೆಯನ್ನು ತೂರಿಸಿ ಅದನ್ನು ಹೊತ್ತು ಕುಣಿಯಲು ನಿಂತ ವ್ಯಕ್ತಿಗೆ ಹೊರಗಿನ ಪರಿಸರ ಕಾಣುವಂತೆ ಮುಖವಾಡದ ಮೂಗಿನ ಸೊಳ್ಳೆಗಳಿಗೂ ಹೊರುವವನ ಕಣ್ಣಿಗೂ ಹೊಂದಿಕೆಯಾಗುವಂತೆ ವ್ಯವಸ್ಥೆ ಇರುತ್ತದೆ.

ಸೋಮನ ಹೊತ್ತು ಕುಣಿಯುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಅದಕ್ಕೆ ಸಾಂಪ್ರದಾಯಿಕ ರೀತಿಯಲ್ಲಿ ಬಂದ ಮನೆತನಗಳಿರುತ್ತವೆ. ಆ ಮನೆತನದ ಮಕ್ಕಳಿಗೆ ದೀಕ್ಷಾಪಟ್ಟ ಆಗಿರುತ್ತದೆ. ಸಾಮಾನ್ಯವಾಗಿ ಗ್ರಾಮದೇವತೆಯ ಪೂಜಾರಿ ಮನೆತನದವರು ಸೋಮನನ್ನು ಹೊರುವವರು. ಸೋಮನ ಕುಣಿತಕ್ಕೆ ಹಿನ್ನಲೆಯ ವಾದ್ಯ ಹಾಗೂ ಪದಗಳು ಮುಖ್ಯ. ಅರೆ, ದೋಣು, ತಮಟೆ, ಮಾರಿವಾದ್ಯಗಳ ಒಂದು ತಂಡ ಸೋಮನ ಕುಣಿತಕ್ಕೆ ಹಿನ್ನಲೆಯಾಗಿರುತ್ತವೆ. ಜೊತೆಗೆ ಸೋಮನನ್ನು ಕುಣಿಸುವ `ಪದಗಾರ’ ನಿರುತ್ತಾನೆ.

ಸೋಮನನ್ನು ಹೊರುವ ವ್ಯಕ್ತಿ ಆ ದಿನಗಳಲ್ಲಿ ಮುಟ್ಟು ತಟ್ಟಿಲ್ಲದೆ ಕಟ್ಟುನಿಟ್ಟಾದ ಪೂಜೆ ವೃತ ಮಾಡಿ, ಬಣ್ಣದ ಪಂಚೆ ಅಥವಾ ಗ್ರಾಮದೇವತೆಯ ಸೀರೆಯನ್ನು ಸೆರಗಿಲ್ಲದೆ ನಡುವಿಗೆ ಬಿಗಿದುಟ್ಟು, ಮೇಲೊಂದು ವಸ್ತ್ರವನ್ನು ಸೊಂಟದ ಸುತ್ತ ಕಟ್ಟಿರುತ್ತಾನೆ. ದೇವತೆಯ ಸೇವೆಗೆ ನಿಂತಾಗ ಆಕೆಯಲ್ಲಿ ತನ್ನನ್ನೇ ನಿವೇದಿಸಿಕೊಂಡು ಒಂದಾಗುವಂತಹ ಗೌರವ ಭಾವನೆಯಿಂದ ಸೀರೆಯುಡುವ ಪದ್ಧತಿಯ ಹಿನ್ನಲೆ ಇರಬೇಕು. ಕಾಲಿಗೆ ಗೆಜ್ಜೆ, ಕೈಗಳಿಗೆ ಬೆಳ್ಳಿ ಕಡಗ, ಎದೆಯ ಮೇಲೆ ದೇವರ ಮುದ್ರೆಯ ತಾಳಿ ಧರಿಸಿ, ಭಯ ಭಕ್ತಿಗಳಿಂದ ಸೋಮನನ್ನು ಧರಿಸುತ್ತಾನೆ. ಹೊಂಬಾಳೆ, ಕೆಂಪು ಕಣಿಗಲು, ದಾಸವಾಳಗಳಿಂದ ಅಲಂಕೃತವಾದ ಮುಖವಾಡ, ಹಿಂಭಾಗದ ಪೂರ್ತ ಶರೀರ ಮುಚ್ಚುವಂತೆ ಪ್ರಭಾವಳಿಯಿಂದ ಹಿಡಿದು ಎರಡು ಭುಜಗಳ ಪಕ್ಕಗಳಿಂದ ಇಳಿದು ಕಾಲುಗಳವರೆಗೆ ಕಾಣಿಸುವ ವಿವಿಧ ಬಣ್ಣಗಳ ಸೀರೆಗಳ-ಈ ದೃಶ್ಯವನ್ನು ನೋಡಿಯೇ ಅನುಭವಿಸಬೇಕು. ಇಷ್ಟಾದರೆ ಕೈಯಲ್ಲಿ ಬೆಳ್ಳಿ ಕಟ್ಟಿನ ನೀಳವಾದ ಬೆತ್ತವನ್ನು ಹಿಡಿದ ಸೋಮ ಕುಣಿತಕ್ಕೆ ಸಿದ್ಧ. ಗುಡಿಯಿಂದ ದೇವಿಯ ಉತ್ಸವಮೂರ್ತಿ ಅಗ್ನಿಕೊಂಡ ಹಾಯುವುದಕ್ಕೆಂದು ಮುಂಚೆ ಗುಡಿಯ ಅಂಗಳದಲ್ಲಿ ಜನರ ಗುಂಪಿನ ಮಧ್ಯೆ ಸೋಮನನ್ನು ಕುಣಿಸುವವನು-
ಅಮ್ಮನ ನುಡಿಸುತ್ತ ಘಮ್ಮನ ದೇವಮ್ಮ
ಗಂಡುಭೂತಾಳೆ ಗಜನಿಂಬೆ
ಮರದಡಿ ದಂಡು ಬಿಟ್ಟವಳೆ ಕೆಂಪವ್ವ…
ಓಹೊಹೊಹೋಹೋ-
ಎನ್ನುತ್ತಿದ್ದಂತೆಯೇ ಅರೆಯವರು `ಡ್ರವ್ವೂ ಡ್ರವ್ವೂ ಡ್ರೂ ಡ್ರೂವ್, ಡ್ರೂವ್’ ಎಂದು ವಾದ್ಯದ ಧ್ವನಿಗೂಡಿಸುತ್ತಾರೆ. ಈ ಎರಡರ ಹಿನ್ನಲೆಯಲ್ಲಿ ಜೋಡಿಸೋಮಗಳು ನಿಯತಗತಿಯಲ್ಲಿ ಕಾಲು ಹಾಕುತ್ತಾ ಪದಗಾರ ಹೇಳಿದ ಪದಗಳ ಗತಿಗತ್ತುಗಳಿಗನುಗುಣವಾಗಿ ತೂಗಿಬಾಗಿ, ಸುತ್ತಿ ಕುಣಿಯುತ್ತವೆ.
ದೂತರಾಯ ರಸಿಕನೆಂಬ ಕಲ್ಪನೆ ಇರುವ ಕಡೆಗಳಲ್ಲಿ ಅದಕ್ಕನುಗುಣವಾದ ಪದಗಳನ್ನೇ ಹಾಡುತ್ತಾರೆ.
ಏರಿ ಮೇಲೋಗೋರು ಏಳು ಜನ ಸೂಳೇರು
ಯಾರಿಗೆ ಕಣ್ಣ ಇಟ್ಟಾರು | ನಮ್ಮ ತೇರಿಗೆ
ಮಾಲೆ ಬಿಡುವ ದೂತಯ್ಯಗೆ ಕಣ್ಣ ಇಟ್ಟಾರು |
ಸೂಳೆಯ ಕೇರ್‍ಯಾಗೆ ಸೂರೆಲ್ಲ ಮಲ್ಲಿಗೆ
ರಾಜದೂತಣ್ಣ ಮಲಗೋ | ಮಂಚದ ಮ್ಯಾಗೆ
ತಾಳೆಹೂವಿನ ತಲೆದಿಂಬು |

ಇಂತಹ ದೂತಣ್ಣನ ರಸಿಕತೆಯನ್ನು ಹೇಳುವ ನೂರಾರು ನುಡಿಗಳು ಸೋಮನ ಪದಗಳಲ್ಲಿ ಸಿಗುತ್ತವೆ. ಗ್ರಾಮದೇವತೆಗಳಲ್ಲಿ ಕೆಲವಕ್ಕೆ ರಕ್ತಬಲಿ ಹಿಡಿಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಬಲಿ ಸ್ವೀಕಾರಕ್ಕೆ ಸೋಮನೇ ಬರಬೇಕು. ಕುಣಿಯುತ್ತಿರುವಾಗಲೇ ಬಲಿ ಒಪ್ಪಿಸಿದಾಗ, ಕುಣಿಯುವವನ ಮೈಮೇಲೆ ಆವಾಹನೆಯಾಗಿ ಎಷ್ಟು ಜನ ಹಿಡಿದರೂ ನಿಲ್ಲದ ರೀತಿಯಲ್ಲಿ ಸೋಮನ ಕುಣಿತ ಪರಾಕಾಷ್ಠೆಯನ್ನು ಮುಟ್ಟುತ್ತದೆ. ನಂತರ ದೇವರ ಜೊತೆ ಸೋಮನು ಗುಡಿದುಂಬುತ್ತಾನೆ.
ಮೂರು ನಾಲ್ಕು ಜಿಲ್ಲೆಗಳಲ್ಲಿ ಪ್ರಚಲಿತವಿದ್ದರೂ ಈ ಕಲೆಗೆ ಸಂಬಂಧಿಸಿದಂತೆ ಇರುವ ಧಾರ್ಮಿಕ ಕಲ್ಪನೆ ಮತ್ತು ಅಚಲವಾದ ಶ್ರದ್ಧೆ ಮೆಚ್ಚುವಂತಹದು. ಬೇರೆ ಊರಿನ ಆಹ್ವಾನದ ಮೇಲೆ ಜಾತ್ರೆ ಉತ್ಸವಗಳಿಗೆ ಸೋಮನ ಕುಣಿತಕ್ಕೆ ಹೋಗಬೇಕಾದರೂ ದೇವಿಯ ಅಪ್ಪಣೆ ಕೇಳಿ ಒಪ್ಪಿಗೆ ನೀಡಿದ ನಂತರವೇ ಹೋಗುವುದು. ಒಟ್ಟಿನಲ್ಲಿ ಸಾಂಪ್ರದಾಯಕ ಹಿನ್ನಲೆಯಲ್ಲಿ, ಧಾರ್ಮಿಕ ಪರಿವೇಶದಲ್ಲ ಬೆಳೆದು ಬಂದಿರುವ ಸೋಮನ ಕುಣಿತ ಜನಪದ ಕಲೆಗಳಲ್ಲಿ ಒಂದು ಗಂಡುಕಲೆ ಎಂದು ಹೇಳಬಹುದು.

2 Responses to ಕರ್ನಾಟಕ ಜನಪದ ಕಲೆಗಳು – ಭಾಗ ೪

  1. prashanth

    Thanks

  2. kavya

    good information thx

Leave a Reply